Saturday, 4 April 2020

“ಒಳ್ಳೆಯತನದ ದೊಡ್ಡ ಕಲ್ಪನೆ’

ಪ್ರೀತಿಯ ಅನುಗೆ,
ಶುಭಹಾರೈಕೆಗಳು. ನಾನು ಎಂದೋ ಓದಿದ ಒಂದು ಆಸಕ್ತಿಯುತವಾದ ಲೇಖನವನ್ನು ನನ್ನ ಡೈರಿಯಲ್ಲಿ ಬರೆದುಕೊಂಡಿದೆ. ತುಂಬಾ ಇಷ್ಟವಾದ ಲೇಖನ. ಆದರೆ ಡೈರಿಯಲ್ಲಿ ಕಾಪಿ ಮಾಡಿಕೊಳ್ಳುವಾಗ ಲೇಖಕರ ಹೆಸರನ್ನು ಬರೆಯಲು ಮರೆತ ಕಾರಣ, ಲೇಖಕರ ಮಾಹಿತಿ ಇಲ್ಲ. ನನಗೆ ತಿಳಿಯದ ಲೇಖಕರ ಕ್ಷಮೆ ಕೇಳಿಕೊಳ್ಳುತ್ತಾ, ನಿನ್ನ ಓದಿಗೆ ಕಳುಹಿಸುತ್ತಿದ್ದೇನೆ. ಹ್ಯಾಪಿ ರೀಡಿಂಗ್. ನಿನ್ನ ಬಳಿ ಈ ರೀತಿಯ ಲೇಖನಗಳ collection, ಇದ್ದರೆ ದಯವಿಟ್ಟು ನನ್ನ ಓದುವಿಗೆ ಕಳುಹಿಸಿಕೊಡು. ಸೊ ಹ್ಯಾಪಿ ರೀಡಿಂಗ್.
“ಒಳ್ಳೆಯತನದ ದೊಡ್ಡ ಕಲ್ಪನೆ’
‘ಒಳ್ಳೆಯ ಕೆಲಸದ ಪುಸ್ತಕ’ . ಈ ಪುಸ್ತಕವನ್ನು ಬರೆದದ್ದು ಪ್ರಸಿದ್ಧ ಲೇಖಕನಲ್ಲ. ಹಾಗೆ ನೋಡಿದರೆ ಇಂಥದೊಂದು ಪುಸ್ತಕವನ್ನು ಬರೆಯಲು ಯಾವ ಪ್ರಸಿದ್ಧ ಲೇಖಕನೂ ಪ್ರಯತ್ನಿಸಿಲ್ಲ. ನಮ್ಮದೇ ಬದುಕಿನಲ್ಲಿ ಸ್ವಲ್ಪ ಹಿಂದಕ್ಕೆ ಚಲಿಸಿದರೆ ಇಂಥದೊಂದು ಪುಸ್ತಕ ಇದ್ದುದ್ದು, ಅದನ್ನು ನಾವೇ ಬರೆಯುತ್ತಿದ್ದನು ನೆನಪಾಗುತ್ತದೆ. ನಮ್ಮೆಲ್ಲರ ಶಾಲಾದಿನಗಳಲ್ಲಿ ಎಲ್ಲರ ಬಳಿಯೂ ಒಂದು ಒಳ್ಳೆಯ ಕೆಲಸದ ಪುಸ್ತಕ ಇರುತ್ತಿತ್ತು. ಈ ಪುಟ್ಟ ನೋಟ್ ಬುಕ್‍ನಲ್ಲಿ ವಿದ್ಯಾರ್ಥಿಗಳು ತಾವು  ಅಂದಂದು ಮಾಡಿದ ಒಳ್ಳೆಯ ಕೆಲಸಗಳನ್ನು ಬರೆದಿಡುತ್ತಿದ್ದರು. ಈಗಲೂ ಕೆಲವು ಶಾಲೆಗಳಲ್ಲಿ ಈ ಪುಸ್ತಕ ಉಳಿದುಕೊಂಡಿದೆ. ಅಮ್ಮನಿಗೆ ನೀರು ತಂದು ಕೊಟ್ಟೆ, ದಾರಿಯಲ್ಲಿ ಬರುತ್ತಿರುವಾಗ ರಸ್ತೆಯಲ್ಲಿ ಬಿದ್ದಿದ್ದ ಬಾಳೆ ಹಣ್ಣಿನ ಸಿಪ್ಪೆಯನ್ನು ತೆಗೆದು ಕಸದ ಬುಟ್ಟಿಗೆ ಹಾಕಿದೆ. ನೂರಾರು ಒಳ್ಳೆಯ ಕೆಲಸಗಳು ನಮ್ಮ ಬಳಿ ಇರುವ ಪುಸ್ತಕದಲ್ಲಿರುತ್ತವೆ.
ಆದರೆ ಈಗ ನಾವು ದೊಡ್ಡವರಾಗಿದ್ದೇವೆ. ನಮ್ಮ ಮಟ್ಟಿಗೆ ಒಳ್ಳೆಯ ಕೆಲಸ ದೊಡ್ಡದಾಗಿರಬೇಕು. ನಮ್ಮ ದೊಡ್ಡ ಒಳ್ಳೆಯ ಕೆಲಸಗಳಲ್ಲಿ ನಮ್ಮ ಎಲ್ಲ ಒಳ್ಳೆಯತನ ಹಾಳಾಗುತ್ತಿರುವುದು ದುಃಖದ ವಿಷಯ. ‘ಈ ದೊಡ್ಡ ಒಳ್ಳೆಯ ಕೆಲಸ’ಗಳಿಗಾಗಿ ನಿಜಕ್ಕೂ ಒಳ್ಳೆಯದಾದ ಅನೇಕ ಕೆಲಸಗಳನ್ನು ನಾವು ಮರೆಯುತ್ತಿರುತ್ತೇವೆ. ಮಕ್ಕಳಿಗೆ ಮಾಡಲು ಸಾಧ್ಯವಿಲ್ಲದ ಆದರೆ ದೊಡ್ಡವರಿಗೆ ಮಾಡಲು ಸಾಧ್ಯವಿರುವ ಅನೇಕ ಸಣ್ಣ ಒಳ್ಳೆಯ ಕೆಲಸಗಳಲ್ಲಿ ಒಂದನ್ನೂ ನಾವು ಮಾಡಿರುವುದಿಲ್ಲ. ಸದಾ ನಾವು ಗೊಣಗುತ್ತಿರುವ ಭ್ರಷ್ಟ ಆಡಳಿತದ ವಿರುದ್ಧ ಒಂದು ಪತ್ರ ಬರೆದು ಪ್ರತಿಭಟಿಸುವ ಕೆಲಸವನ್ನೂ ನಾವು ಮಾಡಿರುವುದಿಲ್ಲ. ಲಂಚ ಕೊಡದೆಯೂ ಆಗಬಹುದಾಗಿದ್ದ ಕೆಲಸಕ್ಕೂ ನೀವು ಲಂಚಕೊಡುವುದಿಲ್ಲ ಎಂದು ಹೇಳುವ ಧೈರ್ಯ ಮಾಡಿರುವುದಿಲ್ಲ. ಅದನ್ನು ಬಿಡಿ, ನಿಮ್ಮ ಒಳೆಯತನದ ದೊಡ್ಡ ಕಲ್ಪನೆಯ ಮಧ್ಯೆ ನಿಮ್ಮ ಎಲ್ಲಾ ಗೊಣಗಾಟಗಳನ್ನು ಸಹಿಸಿಕೊಂಡು ಒಳ್ಳೆಯ ಬ್ರೇಕ್‍ಪಾಸ್ಟ್ ಕೊಟ್ಟ ಹೆಂಡತಿಗೆ ಅದು ಚೆನ್ನಾಗಿದೆ ಎಂದು ನೀವು ಹೇಳುವುದಿಲ್ಲ.
ಹಾಗೆ ನೋಡಿದರೆ ಒಳ್ಳೆಯ ಕೆಲಸ ದೊಡ್ಡದಾಗಿರಬೇಕಿಲ್ಲ ಎಂಬುವುದಕ್ಕೆ ನಮ್ಮ ಸಂಸ್ಕೃತಿಯಲ್ಲೇ ಅನೇಕ ದೃಷ್ಟಾಂತಗಳಿವೆ. ರಾಮನಿಗೆ ಸೇತುವೆ ಕಟ್ಟಲು ಸಹಕರಿಸಿದ ಅಳಿಲನ್ನು ನೆನಪು ಮಾಡಿಕೊಳ್ಳಿ. ಇಂಥದ್ದೇ ಕತೆಯೊಂದನ್ನು ಬುದ್ದನೂ ಹೇಳಿದ್ದಾನೆ, ಖಾಂಡವ ದಹನ ನಡೆಯುತ್ತಿದ್ದಾಗ ಒಂದು ಸಣ್ಣ ಹಕ್ಕಿ ನೀರಿನಲ್ಲಿ ಮುಳುಗಿ ತನ್ನ ರೆಕ್ಕೆಗಳನ್ನು ಒದ್ದೆ ಮಾಡಿಕೊಂಡು ಬಂದು ಆ ನೀರನ್ನು ಬೆಂಕಿಗೆ ಸಿಂಪಡಿಸಿ ಖಾಂಡವವನವನ್ನು ಉಳಿಸಲು ಪ್ರಯತ್ನಿಸುತ್ತಿತ್ತಂತೆ. ಇದನ್ನು ಕಂಡ ಇಂದ್ರ ಏ ಮರಳು ಹಕ್ಕಿ ನಿನ್ನಿಂದ ಈ ಬೆಂಕಿ ನಂದಿಸಲು ಸಾಧ್ಯವೇ? ಎಂದು ಹಾಸ್ಯ ಮಾಡಿದ. ಹಕ್ಕಿ “ಓ ಮಳೆಯ ದೊರೆಯೇ ನೀನು ಮನಸ್ಸು ಮಾಡಿದ್ದರೆ ಈ ಬೆಂಕಿ ಈಗಲೇ ನಂದಿ ಹೋಗುತ್ತಿತ್ತು. ನಿನ್ನದು ಫಲ ನೀಡುವ ಪ್ರಯತ್ನವನ್ನು ಮಾಡದೇ ಇರುವ ನಿರ್ಧಾರ. ನನ್ನದು ಹಾಗಲ,್ಲ ಫಲ ನೀಡದಿದ್ದರೂ ಪ್ರಯತ್ನಿಸುವ ನಿರ್ಧಾರ” ಎಂದು ಉತ್ತರಿಸುತ್ತ ಬೆಂಕಿಗೆ ಬಲಿಯಾಯಿತು. ನಾವು ಪ್ರಯತ್ನ ಮಾಡುವ ನಿರ್ಧಾರವನ್ನು ಮೊದಲಿಗೆ ಮಾಡಬೇಕು.
ಧನ್ಯವಾದಗಳು,
ಇಂತಿ ನಿನ್ನ
ಆನಂದ್

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...