ಪಿಠೀಕೆ
ಕ್ರಿಸ್ತನೇ ಕಥೋಲಿಕ ಯಾಜಕತ್ವದ ಅಡಿಪಾಯ. ಕ್ರಿಸ್ತನ
ಮಹೋನ್ನತ ವ್ಯಕ್ತಿತ್ವ ಮತ್ತು ಅವನು ಕೈಗೊಂಡ ಸೇವಾಕಾರ್ಯಗಳ ಆಧಾರಗಳ ಮೇಲೆ ಈ ಕಥೋಲಿಕ ಯಾಜಕತ್ವವನ್ನು
ವ್ಯಾಖ್ಯಾನಿಸಲಾಗಿದೆ. ಹೌದು ಅನೇಕರಲ್ಲಿ ಕಥೋಲಿಕ ಯಾಜಕತ್ವವೆಂದರೆ ಕೇವಲ ವಿಧಿಸಂಸ್ಕಾರಗಳನ್ನು ನೆರೆವೇರಿಸುವ ಪುರೋಹಿತ ಎಂಬ
ಸೀಮಿತ ಅರ್ಥವಿದೆ. ಧರ್ಮದ ವಿಧಿಯಾಚರಣೆಗಳನ್ನು ನೆರೆವೇರಿಸುವುದು ಯಾಜಕನ
ಅನೇಕ ಕರ್ತವ್ಯಗಳಲೊಂದು. ಆದ್ದರಿಂದ ಕಥೋಲಿಕ ಯಾಜಕತ್ವವನ್ನು ನಾವು ಕ್ರಿಸ್ತನ ಸೇವಾವೃತ್ತಿಯ ಮೂಲ
ಉದ್ದೇಶವಾಗಿದ್ದ ‘ದೇವರ ರಾಜ್ಯ’ದ ದೃಷ್ಟಿಯಲ್ಲಿ ಅರ್ಥೈಸಿಕೊಂಡರೆ ಮಾತ್ರ
ನೈಜ ಯಾಜಕತ್ವದ ಮೂಲ ಸ್ವರೂಪದ ದರ್ಶನ ನಮಗಾಗುತ್ತದೆ.
ಕ್ರಿಸ್ತನ ಉದ್ದೇಶ ಮತ್ತು ಕೈಗೊಂಡ ಸೇವಾಕಾರ್ಯಗಳು
ಅವನನ್ನು ಒಬ್ಬ ಶ್ರೇಷ್ಠ ಯಾಜಕನಾಗಿಸಿತ್ತು. ಕ್ರಿಸ್ತನೊಬ್ಬನೇ ಹೂಸಒಡಂಬಡಿಕೆಯ ಏಕೈಕ ಯಾಜಕ. ತನ್ನೆನ್ನೇ
ಬಲಿಕೊಟ್ಟು ಮನುಕುಲವನ್ನು ರಕ್ಷಿಸಿದ ಮಹಾನ್ ಮತ್ತು ಪ್ರಧಾನ ಯಾಜಕ. ಕ್ರಿಸ್ತನ ಯಾಜಕತ್ವಕ್ಕೆ ಸರಿಸಮಾನವಾಗಿ
ನಿಲ್ಲುವ ಯಾವುದೊಂದು ಯಾಜಕತ್ವದ ಮಾದರಿ ನಮಗೆ ಕಾಣಸಿಗುವುದಿಲ್ಲ. ಯಾಜಕೀಯ ವ್ಯವಸ್ಥೆ ಕ್ರಿಸ್ತನು
ಭೂಲೋಕಕ್ಕೆ ಬರುವ ಮೊದಲೇ ಇತ್ತಾದರೂ ಕ್ರಿಸ್ತ ತನ್ನ ಮೂಲಕ ಯಾಜಕತ್ವಕ್ಕೆ ಒಂದು ಹೊಸ ವ್ಯಾಖ್ಯಾನ ನೀಡಿ
ಯಾಜಕತ್ವವನ್ನು ತನ್ನದಾಗಿಸಿಕೊಂಡ. ಈ ಒಂದು ಲೇಖನ ಕ್ರಿಸ್ತ ಮತ್ತು ಕಥೋಲಿಕ ಯಾಜಕತ್ವಕ್ಕೆ ಇರುವ ಸಂಬಂಧವನ್ನು
ಅವಲೋಕಿಸುತ್ತಾ, ಕಥೋಲಿಕ ಯಾಜಕತ್ವ ಬೇರೆ ಯಾಜಕತ್ವಗಳಿಂದ ಹೇಗೆ ಭಿನ್ನವಾಗಿದೆ ಎಂದು ತಿಳಿಸುತ್ತದೆ.
2.
ಯಾಜಕತ್ವದ ಅರ್ಥ
ಸಾರ್ವತ್ರಿಕವಾಗಿ ಯಾಜಕತ್ವವನ್ನು ಈ ರೀತಿ ವ್ಯಾಖ್ಯಾನಿಸಬಹುದು; ಯಾಜಕ, ದೇವರಿಗೆ ಸಮುದಾಯದ ಪರವಾಗಿ ಬಲಿಯರ್ಪಣೆಗಳನ್ನು ಸಮರ್ಪಿಸುವ ಹಾಗು ಧಾರ್ಮಿಕ ಆರಾಧನಾವಿಧಿಗಳನ್ನು
ಮತ್ತು ಸಂಸ್ಕಾರವಿಧಿಗಳನ್ನು ನಡೆಸಿಕೊಡುವ ಅರ್ಚಕ. ಅವನು ದೇವರನ್ನು ಪ್ರತಿನಿಧಿಸುತ್ತಾ ಜನರೊಂದಿಗೆ
ಮತ್ತು ಜನರನ್ನು ಪ್ರತಿನಿಧಿಸುತ್ತಾ ದೇವರೊಂದಿಗೆ ಮಾತಾನಾಡುವ ಮತ್ತು ಪ್ರಾರ್ಥಿಸುವ, ನಿಯಮಿತನಾದ ಗುರುವರ್ಗದವನು. ಒಬ್ಬ ಯಾಜಕನ ಕರ್ತವ್ಯಗಳನ್ನು ಈ ರೀತಿಯಾಗಿ ವಿಂಗಡಿಸಬಹುದು:
1. ದೇವರಿಗೆ ಸಮುದಾಯದ ಪರವಾಗಿ ಬಲಿಯರ್ಪಣೆಗಳನ್ನು
ಸಮರ್ಪಿಸುವುದು
2. ಧಾರ್ಮಿಕ ಆರಾಧನಾವಿಧಿಗಳನ್ನು
ಮತ್ತು ಸಂಸ್ಕಾರವಿಧಿಗಳನ್ನು ನಡೆಸಿಕೊಡುವುದು
3. ದೇವರನ್ನು ಪ್ರತಿನಿಧಿಸುತ್ತಾ
ಜನರೊಂದಿಗೆ ಮತ್ತು ಜನರನ್ನು ಪ್ರತಿನಿಧಿಸುತ್ತಾ ದೇವರೊಂದಿಗೆ ಮಾತಾಡುವುದು ಮತ್ತು ಪ್ರಾರ್ಥಿಸುವುದು
3.
ಹಳೆಯ ಒಡಂಬಡಿಕೆಯಲ್ಲಿ ಯಾಜಕತ್ವ
ಹಳೆಯ ಒಡಂಬಡಿಕೆಯಲ್ಲಿ ಎರಡು ರೀತಿಯ ಯಾಜಕತ್ವವನ್ನು
ಕಾಣಬಹುದು; ಯಾಜಕತ್ವವು ಇಡೀ ಇಸ್ರೇಲ್ ಜನಾಂಗಕ್ಕೆ ವಿಸ್ತರಿಸಿದ ವಿಶಿಷ್ಟ ಯಾಜಕತ್ವ ಒಂದಾದರೆ,
ಇನ್ನೊಂದು ಆರಾಧನಾವಿಧಿಗಳನ್ನು ಪೊರೈಸುವ ಯಾಜಕತ್ವ.
ಮೊದಲನೆಯ ರೀತಿಯಲ್ಲಿ ಒಡಂಬಡಿಕೆಯ ಮೂಲಕ ಇಡೀ ಇಸ್ರೇಲ್ ಜನಾಂಗವನ್ನೇ ದೇವರು ಯಾಜಕರಾಜವಂಶವಾಗಿ ಸ್ವೀಕರಿಸುತ್ತಾರೆ
(ವಿಮೋ 19, 5-6). ಇಡೀ ಜನಾಂಗಕ್ಕೆ ಯಾಜಕತ್ವವನ್ನು ವಿಸ್ತರಿಸಿದ ವಿಶಿಷ್ಟತೆಯನ್ನು
ಇಲ್ಲಿ ಕಾಣಬಹುದು. ಇದರಿಂದ ತಾವು ದೇವರ ಪವಿತ್ರ ಜನಾಂಗವೆಂಬ ಭಾವನೆ ಅವರಲ್ಲಿ ನೆಲೆಯೂರಿ ಯಾಜಕತ್ವದ
ಬದುಕನ್ನು ಜೀವಿಸಲು ಪ್ರಯತ್ನಿಸುತ್ತಾರೆ. ಎರಡನೆಯದು ವಿಧಿಬದ್ಧ ಅಚರಣೆಗಳನ್ನೊಳಗೊಂಡ ಆರಾಧನಾವಿಧಿಯ
ಯಾಜಕತ್ವ. ಈ ರೀತಿಯ ಯಾಜಕತ್ವದ ಬೆಳವಣಿಗೆಯಲ್ಲಿ ಎರಡು ಹಂತಗಳಿರುವುದನ್ನು ಇಸ್ರೇಲ್ ಇತಿಹಾಸದಲ್ಲಿ
ಗಮನಿಸಬಹುದು; ಸ್ವಾಭಾವಿಕ ಮತ್ತು ವೃತ್ತಿಪರ ಯಾಜಕತ್ವ. ಇಸ್ರಾಯೇಲರ
ಧಾರ್ಮಿಕ ಇತಿಹಾಸದಲ್ಲಿ ಮೊದಲಿಗೆ ಸ್ವಾಭಾವಿಕ ಯಾಜಕತ್ವದ ಹಂತವನ್ನು ಕಾಣಬಹುದು. ಕುಟುಂಬಗಳಲ್ಲಿ ಮನೆಯ
ಯಜಮಾನ, ಕುಲದ ಮುಖಂಡ, ರಾಜ್ಯದ ರಾಜರುಗಳು
ಯಾಜಕನ ಪಾತ್ರವಹಿಸಿ ಯಾಜಕತ್ವದ ಕರ್ತವ್ಯಗಳನ್ನು ನಡೆಸುತ್ತಿದ್ದರು. ಇನ್ನೊಂದು ಹಂತದಲ್ಲಿ ದೇವರಿಗೆ
ಬಲಿಯನ್ನು ಮತ್ತು ಪೂಜಾವಿಧಿಗಳನ್ನು ನಡೆಸಿಕೊಡಲು ನಿಯಮಿತರಾದ ಗುರುವರ್ಗದವರು ಹುಟ್ಟಿಕೊಂಡರು. ಯಾಜಕತ್ವವು
ಇವರಿಗೆ ಒಂದು ಕಸುಬಾಯ್ತು. ಇವರಲ್ಲಿ ಪ್ರಧಾನ ಯಾಜಕ, ಮುಖ್ಯಯಾಜಕ ಮತ್ತು
ಯಾಜಕ ಎಂಬ ಮೂರು ದರ್ಜೆಗಳಿದ್ದವು. ಇವರು ಆರೋನನ ಮತ್ತು ಲೇವಿಯ ವಂಶದವರಾಗಿದ್ದರು. ಇದೇ ರೀತಿಯ ಯಾಜಕತ್ವ
ಇಸ್ರೇಲ್ ಸುತ್ತಮುತ್ತಲಿನ ನಾಡಿನಲ್ಲಿ ಪ್ರಚಲಿತದಲ್ಲಿತ್ತು. ಬಾಬಿಲೋನ್ ಸೆರೆವಾಸದ ಸಮಯದಲ್ಲಿ (587 CE) ಮತ್ತು ನಂತರ ಸ್ವಾಭಾವಿಕ ಯಾಜಕತ್ವವು ಕಣ್ಮರೆಯಾಗಿ ಯಾಜಕ ಪಂಗಡಗಳು ವ್ಯವಸ್ಥಿತವಾಗಿ
ಹುಟ್ಟಿಕೊಂಡವು.
4.
ಹೊಸಒಡಂಬಡಿಕೆಯಲ್ಲಿ ಯೇಸುವಿನ ಯಾಜಕತ್ವ
ಯೇಸು ಯಾಜಕೀಯ ಕುಲದಲ್ಲಿ (ಆರೋನನ ಅಥವಾ ಲೇವಿ)
ಹುಟ್ಟಲಿಲ್ಲ. ಯೇಸು ಕೂಡ ಎಲ್ಲೂ ತನ್ನನ್ನೇ ಯಾಜಕನೆಂದು ಕರೆದುಕೊಳ್ಳಲಿಲ್ಲ. ಆದರೆ ಹೊಸಒಡಂಬಡಿಕೆಯು
ದೈವಶಾಸ್ತ್ರೀಯವಾಗಿ ಕ್ರಿಸ್ತನ ಯಾಜಕತ್ವವನ್ನು ಸ್ವಷ್ಟಪಡಿಸುತ್ತದೆ. ವಿಶೇಷವಾಗಿ ಹಿಬ್ರಿಯರಿಗೆ ಬರೆದ
ಪತ್ರವು ಯೇಸುವನ್ನು ಶೇಷ್ಠಯಾಜಕನೆಂದು ಕರೆಯುತ್ತದೆ. ಮಧ್ಯಸ್ಥರಾಗಿ ಯೇಸು “ದೇವರನ್ನು ಮಾನವರನ್ನು
ಒಂದುಗೂಡಿಸುವ ಮಧ್ಯಸ್ಥರೂ ಒಬ್ಬರೇ” (1ತಿಮೋ2:5) ಎಂದು ಪೌಲನು ಹೇಳುವುದನ್ನು ಕೇಳುತ್ತೇವೆ. ಹಳೆಯ
ಒಡಂಬಡಿಕೆಯಲ್ಲಿನ ಅಪೂರ್ಣ ಯಾಜಕತ್ವವು ಕ್ರಿಸ್ತನಲ್ಲಿ ಪೂರ್ಣಗೊಳ್ಳುವುದು (CCC..1544).
ಕ್ರಿಸ್ತನ ಯಾಜಕತ್ವವು ಕ್ರೈಸ್ತರಾದ ನಮ್ಮಲ್ಲಿ ಮುಂದುವರೆದಿದೆ, ಏಕೆಂದರೆ ಕ್ರಿಸ್ತನೊಬ್ಬನೇ ನಿಜವಾದ ಯಾಜಕ ಮತ್ತು ಇತರರು ಕೇವಲ ನಿರ್ವಾಹಕರು ಮಾತ್ರ
(CCC.1545) ಎಂದು ಕಥೋಲಿಕ ಧರ್ಮಸಭೆಯ ಧರ್ಮೋಪದೇಶವು ಸ್ವಷ್ಟಪಡಿಸುತ್ತದೆ.
ಕ್ರಿಸ್ತನ ಸಮಯದಲ್ಲಿ ಆಚರಣೆಯಲ್ಲಿದ್ದ ಯಹೂದ್ಯರ
ಯಾಜಕತ್ವ ತುಂಬಾ ವಿಧಿ ಬದ್ಧವಾಗಿತ್ತು,
ಮುದಿಗೋಡಾಗಿತ್ತು, ನಿರರ್ಥಕವಾಗಿತ್ತು. ಈ ಕಾರಣದಿಂದ
ಯಹೂದ್ಯರ ಯಾಜಕತ್ವದಿಂದ ಕ್ರಿಸ್ತ ದೂರ ಉಳಿದ. ಯಾಜಕರ ವಿರುದ್ಧ, ದೇವಾಲಯದ
ಅಧಿಕಾರಿಗಳ ಮತ್ತು ಅರ್ಥವಿಲ್ಲದ ಆಚರಣೆಗಳ ವಿರುದ್ಧ ಹೋರಾಡಿದ. ಅವನಿಗೆ ಕಾನೂನಿಗಿಂತ ಕರುಣೆ ಮುಖ್ಯವಾಗಿತ್ತು
(ಮತ್ತಾಯ 9,13); ದೇವಾಲಯವನ್ನು ವ್ಯಾಪಾರಕ್ಕೆ ಬಳಸಿಕೊಂಡವರ ವಿರುದ್ಧ ಕೋಪದಿಂದ ಪ್ರತಿಕ್ರಯಿಸಿದ; ವಿಧಿಬದ್ಧ ನಿಯಮಗಳನ್ನು ವಿರೋಧಿಸಿ ನಡೆದ (ಮಾರ್ಕ 7,1-23); ಅಶುದ್ಧಗೊಂಡವರ ಬಳಿ ಬೆರೆತು ಊಟ ಮಾಡಿದ (ಮಾರ್ಕ 2,13; ಲೂಕ 15,1-2). ಅವನ ಬೋಧನೆಗಳಲ್ಲಿದ್ದ ಸಾಮತಿಗಳು ಮತ್ತು
ಸಂಕೇತಗಳು ಧಾರ್ಮಿಕ ವಿಧಿ ಆಚರಣೆಗಳ ಪ್ರಪಂಚದಿಂದ ರೂಪುಗೊಳ್ಳದೆ ಪ್ರತಿದಿನದ ಬದುಕಿನಿಂದ ಮೂಡಿದವು.
ತಾನು ಹೇಳಿದ ಸದಯ ಸಮಾರಿತ ಸಾಮತಿಯಲ್ಲಿ ವಿಧಿಆಚರಣೆಗಳಿಗೆ ಶುದ್ಧ ಅಶುದ್ಧಗಳಿಗೆ ಬೆಲೆಕೊಡುವ ಅಮಾನವೀಯ
ಲೇವಿ ಮತ್ತು ಯಾಜಕರನ್ನು ಅವಮಾನಪಡಿಸುವ ದಯ ಸಮಾರಿತ ಪಾತ್ರವನ್ನು ಸೃಷ್ಟಿಸಿದ (ಲೂಕ 10,29-37).
ಅವನ ಶಿಷ್ಯರು ಕೂಡ ಯೇಸುವನ್ನು ಯಾಜಕನಂತೆ ಎಂದೂ ಕಾಣಲಿಲ್ಲ. ಅವನ ದೃಷ್ಟಿಕೋನ
ಪ್ರವಾದಿಯ ದೃಷ್ಟಿಕೋನವಾಗಿತ್ತು. ಇವೆಲ್ಲವನ್ನು ಗಮನಿಸಿದಾಗ ಕ್ರಿಸ್ತ ಒಬ್ಬ ಯಾಜಕವರ್ಗದ ವಿರೋಧಿ
ಎಂದು ನಮಗೆ ಗೋಚರಿಸುತ್ತದೆ ಆದರೂ ಕ್ರಿಸ್ತನನ್ನು ಒಬ್ಬ ಯಾಜಕನೆಂದು ಕ್ರೈಸ್ತ ಧರ್ಮಸಭೆ ತಿಳಿಸುತ್ತದೆ,
ಕ್ರೈಸ್ತ ಸಮುದಾಯಗಳು ವಿಶ್ವಾಸಿಸುತ್ತವೆ. ಹೌದು, ಕ್ರಿಸ್ತ ಯಾಜಕನಾಗಿದ್ದು ಹೇಗೆ?
ಕ್ರಿಸ್ತನ ಬದುಕಿನಲ್ಲಿ ಯಾಜಕತ್ವದ ಲಕ್ಷಣಗಳನ್ನು
ನಾವು ಕಾಣಬಹುದು ಏಕೆಂದರೆ ಅವನೊಬ್ಬ ಸ್ವಾಭಾವಿಕ/ನೈಜ ಯಾಜಕನಾಗಿದ್ದ. ದೇವಪುತ್ರ ಸ್ವಭಾವದಿಂದ ಅವನು
ಸ್ವಾಭಾವಿಕ ಯಾಜಕನಾದರೆ ಸಮರ್ಪಣೆ ಮತ್ತು ಪವಿತ್ರೀಕರಣಗಳ ಮೂಲಕ ಅವನು ಅಧಿಕೃತ ಯಾಜಕನಾದ. ಹೊಸ ಯಾಜಕತ್ವಕ್ಕೆ
ನಾಂದಿಯಾದ. ಕ್ರಿಸ್ತನ ಯಾಜಕತ್ವ ಕಾನೂನು ವಿಧಿಬದ್ಧತೆಯಿಂದ ರೂಪುಗೊಳ್ಳದೆ ಪ್ರೀತಿ ಮತ್ತು ಸೇವೆಗಳೆಂಬ
ಅಡಿಪಾಯಗಳ ಮೇಲೆ ಕಟ್ಟಿದ ಯಾಜಕತ್ವ ಆದಾಗಿತ್ತು. ಕ್ರಿಸ್ತನ ಸಂಪೂರ್ಣ ಬದುಕು ‘ಅಬಾ’್ಬ ದೇವರ ಅನುಭವದಿಂದ
ರೂಪುಗೊಂಡಿತ್ತು. ಈ ಒಂದು ದಿವ್ಯತ್ವದ ಅನುಭವವನ್ನು ತನ್ನ ಮಾತು ಕೃತಿಗಳ ಮೂಲಕ ಸದೃಶ್ಯಗೊಳಿಸಿದ.
ದೇವರ ಇರುವಿಕೆಯನ್ನುತನ್ನ ಮಾತು ಮತ್ತು ಕೃತಿಗಳಲ್ಲಿ ಬಿಂಬಿಸುತ್ತಾ ದೇವರ ಮತ್ತು ಜನರ ನಡುವೆ ಸಂಸ್ಕಾರವಾಗಿ
ಮತ್ತು ಮಧ್ಯಸ್ಥನಾಗಿ ತನ್ನ ಸಂಪೂರ್ಣ ಜೀವನವನ್ನು ಪ್ರಾರ್ಥನೆಯಾಗಿ, ಅರ್ಪಣೆಯಾಗಿ, ಬಲಿಯಾಗಿ ಅರ್ಪಿಸಿದ. ಈ ಒಂದು ದೃಷ್ಟಿಕೋನದಲ್ಲಿ ಯೇಸು ನಮಗೆ ನೈಜ ಮತ್ತು ಶ್ರೇಷ್ಠಯಾಜಕನಾಗುತ್ತಾನೆ.
ಕಾಲ ಕ್ರಮೇಣ ಕ್ರೈಸ್ತ ಸಮುದಾಯಗಳು ತಮ್ಮ ಪ್ರಾರ್ಥನೆ, ಚಿಂತನೆ ಮತ್ತು
ಕ್ರಿಸ್ತದರ್ಶನದಿಂದ ಕ್ರಿಸ್ತನೇ ನಿಜವಾದ ಪ್ರಧಾನ ಯಾಜಕನೆಂದು ಸಾರಿದರು. ಇದಕ್ಕೆ ಉತ್ತಮ ಉದಾಹರಣೆ
ಹಿಬ್ರಿಯರಿಗೆ ಬರೆದ ಪತ್ರ.
4.1
ಹಿಬ್ರಿಯರಿಗೆ ಬರೆದ ಪತ್ರದಲ್ಲಿ ಕ್ರಿಸ್ತನ ಯಾಜಕತ್ವ
ಹಿಬ್ರಿಯರಿಗೆ ಬರೆದ ಪತ್ರದ ಏಳನೇ ಅಧ್ಯಾಯ ಕ್ರಿಸ್ತನ
ಯಾಜಕತ್ವವನ್ನು ಸ್ಪಷ್ಟಪಡಿಸುವ ಒಂದು ಪ್ರಮುಖ ಅಧ್ಯಾಯ. ಹಳೆಯ ಒಡಂಬಡಿಕೆಯ ಆದಿಕಾಂಡ 14, 17 ಮತ್ತು ಕೀರ್ತನೆಗಳು
110 ಅಧ್ಯಾಯಗಳಲ್ಲಿ ಪ್ರವಾದಿಸಿರುವ ಮತ್ತು ಮೆಲ್ಕಿಸದೇಕ ಪರಂಪರೆಗೆ
ಸೇರಿದ ಕ್ರಿಸ್ತನೇ ಪ್ರಮುಖ ಮತ್ತು ಶ್ರೇಷ್ಠ ಯಾಜಕನೆಂದು ಈ ಪತ್ರ ನಮಗೆ ತಿಳಿಸುತ್ತದೆ. ಯಾಜಕತ್ವದ
ಅರ್ಥವನ್ನೇ ಬದಲಾಯಿಸಿ ಯಾಜಕತ್ವಕ್ಕೆ ಹೊಸ ಆಯಾಮವನ್ನು ತಂದುಕೊಟ್ಟ ಕ್ರಿಸ್ತನ ಯಾಜಕತ್ವವನ್ನು ಮತ್ತು
ಅವನ ಯಾಜಕತ್ವದ ಶ್ರೇಷ್ಠತೆಯನ್ನು ಸಾರುವ ಪತ್ರವಿದು. ಕೇವಲ ಆರಾಧನೆ ಮತು ವಿಧಿಬದ್ಧತೆಯ ದೃಷ್ಟಿಯಲ್ಲಿ
ಯಾಜಕತ್ವವನ್ನು ವ್ಯಾಖ್ಯಾನಿಸುತ್ತಿದ್ದ ಹಳೆಯಒಡಂಬಡಿಕೆಯ ಯಾಜಕತ್ವವನ್ನು ಅಳಿಸಿ ಯಾಜಕತ್ವವನ್ನು ಧರ್ಮನಿರಪೇಕ್ಷೀಕರಣಗೊಳಿಸಿದ
ಕೀರ್ತಿ ಈ ಪತ್ರಕ್ಕೆ ಸಲ್ಲುತ್ತದೆ. ಈ ಹೊಸ ಯಾಜಕತ್ವವು ಪರಿಶುದ್ಧರೂ, ನಿರ್ದೋಷಿ, ನಿಷ್ಕಳಂಕರು, ಪಾಪಿಗಳಿಂದ ಪ್ರತ್ಯೇಕಿಸಲಾದವರು, ಗಗನಮಂಡಲಗಳಿಗಿಂತಲೂ
ಉನ್ನತದಲ್ಲಿರುವವರು (7, 26) ಆದ ಕ್ರಿಸ್ತನ ಮೂಲಕ ಮಾತ್ರ ನಮಗೆ ಲಭಿಸುತ್ತದೆ. ಇವರು ಮನುಕುಲ ಮತ್ತು ದೇವರ
ನಡುವೆ ಸಂಧಾನವನ್ನು ಏರ್ಪಡಿಸುವ ಮಧ್ಯಸ್ಥರೆಂದು ಈ ಪತ್ರವು ನಮಗೆ ಮನವರಿಕೆ ಮಾಡುತ್ತದೆ. ಈ ನಿಟ್ಟಿನಲ್ಲಿ
ಹಿಬ್ರಿಯರಿಗೆ ಬರೆದ ಪತ್ರವು ಕ್ರಿಸ್ತನ ಪ್ರಧಾನ ಯಾಜಕತ್ವವನ್ನು ಸಾರುವ ಮಾಹಾಪ್ರಬಂಧವೆಂದರೆ ತಪ್ಪಾಗಲಾರದು.
4.1.1.
ಕ್ರಿಸ್ತ ಶಾಶ್ವತ ಯಾಜಕ: ಹಿಬ್ರಿಯರಿಗೆ ಬರೆದ ಪತ್ರದ ಲೇಖಕರು ಕ್ರಿಸ್ತನ ಯಾಜಕತ್ವವನ್ನು
ಮೋಶೆಯ ಯಾಜಕತ್ವದ ವ್ಯವಸ್ಥೆಗೆ ಹೋಲಿಸುತ್ತಾ ಇವುಗಳ ನಡುವೆ ಇರುವ ಪ್ರಮುಖ ವ್ಯತ್ಯಾಸವನ್ನು ದೃಢಪಡಿಸುತ್ತಾರೆ.
ಕ್ರಿಸ್ತನ ಯಾಜಕತ್ವವು ಹಳೆಯ ಒಡಂಬಡಿಕೆಯ ಯಾಜಕತ್ವದ ರೀತಿಯದಲ್ಲ. ಕ್ರಿಸ್ತನ ಯಾಜಕತ್ವವು ಪಿತಾಮಹ
ಅಬ್ರಹಾಮನಿಗಿಂತಲೂ ಶ್ರೇಷ್ಠನಾದ ಮೆಲ್ಕಿಸದೇಕನ ಪರಂಪರೆಯಿಂದ ಬಂದುದರಿಂದ ಶ್ರೇಷ್ಠವಾದುದು,
ಅಲೌಕಿಕ ಹಾಗು ಅನಂತವಾದುದು. ಆದರೆ ಹಳೆಯ ಒಡಂಬಡಿಕೆಯಲ್ಲಿರುವ ಯಾಜಕತ್ವ ಲೌಕಿಕವಾದುದು
ಮತ್ತು ಅದು ಅಲ್ಪಕಾಲಿಕ ಮತ್ತು ಹಳೆಯ ಯಾಜಕತ್ವದಲ್ಲಿ ಯಾಜಕರು ಕೂಡ ಮರಣಹೊಂದಿದರು ಎಂದು ಹೇಳುವ ಮೂಲಕ
ಪತ್ರದ ಲೇಖಕರು ಕ್ರಿಸ್ತನ ಶಾಶ್ವತ ಯಾಜಕತ್ವವನ್ನು ಪ್ರತಿಸ್ಥಾಪಿಸುತ್ತಾರೆ.
4.1.2.
ಮೆಲ್ಕಿಸದೇಕ - ರಾಜ ಮತ್ತು ಯಾಜಕ: ಮಲ್ಕಿಸದೇಕನ ಬಗ್ಗೆ ಹಳೆಯ ಒಡಂಬಡಿಕೆಯಲ್ಲಿ ಕೇವಲ
ಎರಡು ಉಲ್ಲೇಖಗಳಿರುವುದನ್ನು ನಾವು ಕಾಣಬಹುದು;
ಆದಿಕಾಂಡ 14, 17-24 ಮತ್ತುಕೀರ್ತನೆಗಳು 110.
ಕೀರ್ತನೆಗಳು 110 ಅಭಿಷಕ್ತ ರಕ್ಷಕನ ಕೀರ್ತನೆಯಾದ್ದರಿಂದ
ಕೀರ್ತನೆಗಾರ ಮುಂಬರುವ ರಕ್ಷಕ ಯಾಜಕನನ್ನು ಮೆಲ್ಕಿಸದೇಕನಿಗೆ ಹೋಲಿಸುತ್ತಾನೆ. ಮೆಲ್ಕಿಸದೇಕನ ವಂಶಾವಳಿಯ
ಪ್ರಸ್ತಾಪವಾಗಲಿ, ಮೆಲ್ಕಿಸದೇಕ ಯಾಜಕತ್ವದ ಮೂಲ ಅಥವಾ ಪ್ರಾರಂಭ ಮತ್ತು
ಅಂತ್ಯವಾಗಲಿ ಬೈಬಲ್‍ನಲ್ಲಿ ಕಂಡುಬರುವುದಿಲ್ಲ. ಮೆಲ್ಕಿಸದೇಕ ಎಂಬ ಹೆಸರಿನ ಮೂಲಾರ್ಥ ನ್ಯಾಯ ನೀತಿಯ
ಅರಸ. ಅಷ್ಟೇ ಅಲ್ಲದೆ ಆತನು ಸಾಲೇಮ್ ನಗರದ ರಾಜನೂ ಮಹೋನ್ನತ ದೇವರ ಯಾಜಕನೂ ಆಗಿದ್ದನು (ಹಿಬ್ರಿ 7,1).
ಈ ಎಲ್ಲಾ ಕಾರಣಗಳಿಂದ ಮೆಲ್ಕಿಸದೇಕನ ಯಾಜಕತ್ವವನ್ನು ಈ ರೀತಿಯಲ್ಲಿ ವಿವರಿಸಬಹುದು;
1.
ಮೆಲ್ಕಿಸದೇಕನ ಯಾಜಕತ್ವ ಶಾಂತಿಸಮಾಧಾನದ ಮತ್ತು ಧರ್ಮನಿಷ್ಠ ಯಾಜಕತ್ವವಾಗಿತ್ತು
2.
ಅವನು ರಾಜನಾದುದ್ದರಿಂದ ಅವನದು ರಾಜವಂಶ ಯಾಜಕತ್ವವಾಗಿತ್ತು
3.
ಮೆಲ್ಕಿಸದೇಕ ಯಾಜಕತ್ವದ ಮೂಲ ಅಥವಾ ಪ್ರಾರಂಭ ಮತ್ತು ಅಂತ್ಯದ ಬಗೆಗಿನ ಉಲ್ಲೇಖಗಳು
ಬೈಬಲಿನಲ್ಲಿ ಕಾಣಸಿಗದ್ದರಿಂದ ಅದು ಶಾಶ್ವತ ಯಾಜಕತ್ವವಾಗಿತ್ತು.
4.
ಅದು ವಂಶಪರಂಪರೆಯಿಂದ ಬಂದಿಲ್ಲವಾದ್ದರಿಂದ ಅದು ವೈಯಕ್ತಿಕ ಯಾಜಕತ್ವವಾಗಿತ್ತು.
ಈ ಎಲ್ಲಾ ಅಂಶಗಳಿಂದ ಹಳೆಯ ಒಡಂಬಡಿಕೆಯಲ್ಲಿರುವ
ಮೆಲ್ಕಿಸದೇಕನ ಯಾಜಕತ್ವವು ಶ್ರೇಷ್ಠ ಯಾಜಕತ್ವವಾಗಿತ್ತು. ಲೇವಿ ಮತ್ತು ಆರೋನನ ಯಾಜಕವರ್ಗಗಳಿಗಿಂತ
ಉತ್ತಮವಾದುದ್ದಾಗಿತ್ತು. ಮೆಲ್ಕಿಸದೇಕನು ದೇವಪುತ್ರನನ್ನು ಹೋಲುತ್ತಾ ಶಾಶ್ವತ ಯಾಜಕನಾಗಿ ಉಳಿಯುವುದರಿಂದ
ಕ್ರಿಸ್ತನ ಯಾಜಕತ್ವ ಆರೋನನ ಮತ್ತು ಲೇವಿಯ ಪರಂಪರೆಗೆ ಸೇರದೇ ಮೆಲ್ಕಿಸದೇಕನ ಪರಂಪರೆಗೆ ಸೇರಿದ್ದು
ಎಂದು ಹಿಬ್ರಿಯರಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.
4.1.3.
ಹೊಸ ಒಡಂಬಡಿಕೆಯ ಪ್ರಧಾನ ಯಾಜಕ: ಆರೋನನ ಯಾಜಕತ್ವವು ರೂಢಿಯಲ್ಲಿದ್ದರೂ ದೇವರು ಇನ್ನೊಂದು
ರೀತಿಯ ಯಾಜಕತ್ವದ ಬರುವಿಕೆಯನ್ನು ತಿಳಿಸಿದ್ದರು (ಶಾಶ್ವತವಾದ ಮತ್ತು ಮೆಲ್ಕಿಸದೇಕನ ಪರಂಪರೆಯ ಯಾಜಕತ್ವ).
ಇವರು ಹೊಸ ಒಡಂಬಡಿಕೆ ಎಂದು ಹೇಳಿ ಹಿಂದಿನದನ್ನು ಹಳೆಯದಾಗಿಸಿದ್ದಾರೆ (ಹಿಬ್ರಿ 8, 13). ಇದಲ್ಲದೆ ಲೇವಿಯರು
ಯಾಜಕರಾದಾಗ, ದೇವರು ಯಾವ ಶಪಥವನ್ನು ಮಾಡಲಿಲ್ಲ. ಕ್ರಿಸ್ತನಾದರೋ “ಎಂದಿಂದಿಗೂ
ನೀ ಯಾಜಕ” (ಕೀರ್ತನೆ 110, 4) ಎಂಬ ಸರ್ವೇಶ್ವರನ ಶಪಥವನ್ನು ಪಡೆದಿರುವ
ಯಾಜಕ. ಆದ್ದರಿಂದ ಕ್ರಿಸ್ತ ಹೊಸ ಒಡಂಬಡಿಕೆಯ ಆಧಾರ ಪುರುಷ.
4.1.4.
ದೇವರ ಪುತ್ರ ಕ್ರಿಸ್ತ: ಕ್ರಿಸ್ತ ದೇವ ಪುತ್ರರಾದರಿಂದ ಅವರ ಯಾಜಕತ್ವವು
ಕೂಡ ಶ್ರೇಷ್ಠವಾದದ್ದು. ಯೇಸು ದೇವರ ಪುತ್ರರಾಗಿದ್ದರೂ ಹಿಂಸೆ ಬಾಧೆಗಳನ್ನು ತಪ್ಪಿಸಿಕೊಳ್ಳದೆ ವಿಧೆಯತೆಯನ್ನು
ಅನುಭವದಿಂದ ಅರಿತುಕೊಂಡರು (5,
8). ಹೀಗೆ ತಮ್ಮ ವಿಧೆಯತೆಯಿಂದ ದೇವರ ಪುತ್ರರೆನಿಸಿಕೊಂಡರು. ಜೊತೆಗೆ ಅವರು ಸ್ವತ
ಪರಿಪೂರ್ಣರಾಗಿ ತಮಗೆ ವಿಧೇಯರಾಗುವ ಎಲ್ಲರಿಗೂ ಶಾಶ್ವತ ಜೀವೋದ್ಧಾರಕ್ಕೆ ಕಾರಣರಾದರು. ಅಲ್ಲದೇ ದೇವರಿಂದ
ಮೆಲ್ಕಿಸದೇಕನ ಪರಂಪರೆಗೆ ಸೇರಿದ ಪ್ರಧಾನ ಯಾಜಕನೆಂದೆನಿಸಿಕೊಂಡರು (5, 8).
4.1.5.
ಕರುಣೆ ಅಥವಾ ಅನುಕಂಪದ ಯಾಜಕ: ಪ್ರತಿಯೊಬ್ಬ ಪ್ರಧಾನ ಯಾಜಕ ಜನರ ಮಧ್ಯದಿಂದ ಆರಿಸಲಾದವನು; ಜನರ ಪರವಾಗಿ ದೇವರ ಸನ್ನಿಧಿಯಲ್ಲಿ
ಸೇವೆ ಸಲ್ಲಿಸಲು ಮತ್ತು ಪಾಪ ಪರಿಹಾರಕ್ಕಾಗಿ ಬಲಿಗಳನ್ನು ಕಾಣಿಕೆಗಳನ್ನು ಸಮರ್ಪಿಸಲು ನೇಮಕಗೊಂಡವನು.
ತಾನು ದುರ್ಬಲ ಮಾನವನಾದ ಕಾರಣ ಆತನು ಅಜ್ಞಾನಿಗಳನ್ನು, ದುರ್ಮಾಗಿಗಳನ್ನು
ಸಹಾನುಭೂತಿಯಿಂದ ಕಾಣಬಲ್ಲನು. ಆದ್ದರಿಂದ ಕ್ರಿಸ್ತ ಎಲ್ಲದರಲ್ಲೂ ತಮ್ಮ ಸಹೋದರರಿಗೆ ಸಮಾನರಾಗಬೇಕಿತ್ತು;
ಜನರ ಪಾಪ ನಿವಾರಣೆಗಾಗಿ ದೇವರ ಕಾರ್ಯಗಳನ್ನು ನಿರ್ವಹಿಸುವ ದಯಾಮಯನೂ ನಂಬಿಕಸ್ಥನೂ
ಆದ ಪ್ರಧಾನ ಯಾಜಕನಾಗಬೇಕಿತ್ತು. ಸ್ವತಃ ತಾನೇ ಶೋಧನೆಗೊಳಗಾಗಿ ಯಾತನೆಯನ್ನು ಅನುಭವಿಸಿದ್ದರಿಂದ ಶೋಧನೆಗೊಳಗಾಗುವವರಿಗೆ
ನೆರವಾಗಲು ಯೇಸು ಸಮರ್ಥರಾದರು. ಪ್ರಧಾನ ಯಾಜಕ ಯೇಸು ನಮ್ಮ ದೌರ್ಬಲ್ಯಗಳನ್ನು ಕಂಡು ಅನುಕಂಪ ತೋರದೆ
ಇರುವವರಲ್ಲ. ಅವರು ನಮ್ಮಂತೆಯೇ ಇದ್ದುಕೊಂಡು ಎಲ್ಲಾ ವಿಷಯಗಳಲ್ಲೂ ಶೋಧನೆ ಸಂಕಟಗಳನ್ನು ಅನುಭವಿಸಿದರು.
ಆದರೆ ಪಾಪವನ್ನು ಮಾತ್ರ ಮಾಡಲಿಲ್ಲ (4, 15). ಕ್ರಿಸ್ತ ಮಾನವನ ಮೇಲಿನ
ಅನುಕಂಪದಿಂದ ಮಾನವನಾಗಿ ಮಾನವನ ದೌರ್ಬಲ್ಯಗಳನ್ನು ಕಂಡು ಮಾನವರನ್ನು ಪಾಪದಿಂದ ಬಿಡುಗಡೆಗೊಳಿಸಲು ತನ್ನನ್ನೇ
ಬಲಿಯಾಗಿಸಿ ಅನುಕಂಪದ ಯಾಜಕನಾದನು.
ಧರ್ಮವು ನಮ್ಮನ್ನು ದೇವರ ಸನ್ನಿಧಿಗೆ ಕೊಂಡೊಯ್ಯಲು
ಎರಡು ದಾರಿಗಳನ್ನು ತೋರಿಸುತ್ತದೆ;
ಒಂದು ದೇವರ ಅಜ್ಞೆಗಳನ್ನು ಪಾಲಿಸುವುದು, ಇನ್ನೊಂದು
ಯಾಜಕತ್ವ ಮತ್ತು ಬಲಿಅರ್ಪಣೆಗಳ ವ್ಯವಸ್ಥೆ. ದುರ್ಬಲ ಮಾನವ ಆಜ್ಞೆಗಳನ್ನು ಪಾಲಿಸಲು ವಿಫಲನಾಗಿ ದೇವರ
ಸಂಬಂಧವನ್ನು ಕಳೆದುಕೊಂಡ. ಆ ಸಂಬಂಧವನ್ನು ಪುನ: ಪಡೆಯಲು ಬಲಿಅರ್ಪಣೆಗಳ ವ್ಯವಸ್ಥೆಗೆ ಮೊರೆಹೋದ. ಈ
ಕಾರಣದಿಂದ ಯಾಜಕ, ದೇವರು ಮತ್ತು ಮಾನವರ ಮಧ್ಯೆ ಬಲಿಅರ್ಪಣೆಗಳ ಮೂಲಕ
ಸಂಧಾನವನ್ನು ಏರ್ಪಡಿಸಿದ. ಆದರೆ ವಾಸ್ತವಿಕವಾಗಿ ಯಾಜಕನ ಎಲ್ಲಾ ಬಲಿಅರ್ಪಣೆಗಳು, ಆರಾಧನಾವಿಧಿಗಳು ಕಳೆದುಕೊಂಡಂತಹ ಸಂಬಂಧವನ್ನು ಪುನರ್ ಸ್ಥಾಪಿಸಲು ಸಫಲವಾಗಲಿಲ್ಲ. ಆದ್ದರಿಂದ
ನಿರರ್ಥಕವಾದ ಯಾಜಕತ್ವದ (ಹಳೆಯಒಡಂಬಡಿಯೆಯ ಯಾಜಕತ್ವ) ಬದಲು ಹೊಸ ರೀತಿಯ ಯಾಜಕತ್ವದ ಅವಶ್ಯಕತೆ ಹೆಚ್ಚಾಯಿತು
ಮತ್ತು ಫಲಕಾರಿಯಾಗುವ ಬಲಿಅರ್ಪಣೆಗಳು ಬೇಕಾಗಿತ್ತು. ಅದನ್ನು ಸಾಧ್ಯವಾಗಿಸಿದ್ದು ಪ್ರಧಾನ ಯಾಜಕ ಕ್ರಿಸ್ತ.
ದೇವರ ಸಾನ್ನಿಧ್ಯಕ್ಕೆ ದಾರಿಮಾಡಿಕೊಡುವ, ಸ್ವರ್ಗವನ್ನು ಪ್ರವೇಶಿಸಲು
ಅಣಿಮಾಡಿಕೊಡುವ ನಿಜವಾದ ಯಾಜಕ ಕ್ರಿಸ್ತ. ಈ ಹೊಸ ಯಾಜಕ ತನಗಾಗಿ ಬಲಿ ಅರ್ಪಿಸಲಿಲ್ಲ ಏಕೆಂದರೆ ಅವನು
ಪಾಪರಹಿತನಾಗಿದ್ದನು (7, 2). ಜನರ ಪಾಪಪರಿಹಾರಕ್ಕಾಗಿ ಒಮ್ಮೆಲೇ ಶಾಶ್ವತವಾಗಿ
ತಮ್ಮನ್ನು ತಾವೇ ಬಲಿಯಾಗಿ ಅರ್ಪಿಸಿಕೊಂಡರೆಂದು ಹಿಬ್ರಿಯರಿಗೆ ಬರೆದ ಪತ್ರದಲ್ಲಿ ಲೇಖಕರು ವಿವರಿಸುತ್ತಾರೆ.
5.
ಕ್ರೈಸ್ತ ವಿಶ್ವಾಸಿಗಳ ಸಾಮಾನ್ಯ ಯಾಜಕತ್ವ ಮತ್ತು ಸೇವಾ ಯಾಜಕತ್ವ
ಯೇಸುವಿನಿಂದ ಪಡೆದುಕೊಂಡ ಕ್ರೈಸ್ತ ಯಾಜಕತ್ವವು
ಎರಡು ರೀತಿಯದು; ಕ್ರೈಸ್ತ ವಿಶ್ವಾಸಿಗಳ ಶ್ರೀಸಾಮಾನ್ಯ ಯಾಜಕತ್ವ ಮತ್ತು ಸೇವಾ ಯಾಜಕತ್ವ. ಸಾಮುದಾಯಿಕವಾಗಿ
ಕ್ರಿಸ್ತನ ಸೇವಾವೃತ್ತಿಯನ್ನು ಕೈಗೊಳ್ಳುವುದನ್ನು ಶ್ರೀಸಾಮಾನ್ಯ ಯಾಜಕತ್ವವೆಂದು ಕರೆಯಬಹುದು. ಜ್ಞಾನಸ್ನಾನ
ಪಡೆದ ಪ್ರತಿಯೊಬ್ಬ ಕ್ರೈಸ್ತನು ಈ ಯಾಜಕತ್ವದಲ್ಲಿ ಭಾಗಿಯಾಗುತ್ತಾನೆ. ಇನ್ನೊಂದು ಕಡೆ ಕ್ರಿಸ್ತನ ಸೇವಾವೃತ್ತಿಯನ್ನು
ವೈಯಕ್ತಿಕವಾಗಿ ಕೈಗೊಳ್ಳುವುದಕ್ಕೆ ಕ್ರಿಸ್ತನ ಸೇವಾ ಯಾಜಕತ್ವವೆನ್ನಬಹುದು.
5.1.
ಶ್ರೀ ಸಾಮಾನ್ಯರ ಯಾಜಕತ್ವ
ಕ್ರಿಸ್ತನು ಯಾಜಕತ್ವದ ಎರಡು ಅಂಶಗಳಾದ ಪ್ರಬೋಧನೆ
ಮತ್ತು ಬಲಿಯರ್ಪಣೆಗಳನ್ನು ನಡೆಸಿಕೊಟ್ಟನು. ಆದುದರಿಂದ ಅವನಲ್ಲಿ ವಿಶ್ವಾಸವಿಡುವವರು ಕೂಡ ಪ್ರಬೋಧನೆ
ಮತ್ತು ಬಲಿಯರ್ಪಣೆಗಳನ್ನು ನಡೆಸಿ ಅವನ ಯಾಜಕತ್ವದಲ್ಲಿ ಭಾಗಿಯಾಗಲು ಕರೆನೀಡುತ್ತಾನೆ. ಪ್ರತಿಯೊಬ್ಬ
ಹಿಂಬಾಲಕ ದೇವರ ರಾಜ್ಯವನ್ನು ಬೋಧಿಸಬೇಕು ಮತ್ತು ಕ್ರಿಸ್ತನ ಬಲಿಯರ್ಪಣೆಯಲ್ಲಿ ಭಾಗಿಯಾಗಬೇಕು. ಆಗ
ಮಾತ್ರ ಅವನು ಕ್ರಿಸ್ತನ ಯಾಜಕತ್ವದಲ್ಲಿ ಭಾಗಿಯಾಗುತ್ತಾನೆ. ಇಲ್ಲಿ ದೇವರ ರಾಜ್ಯವನ್ನು ಬೋಧಿಸುವುದೆಂದರೆ
ಕ್ರಿಸ್ತ ಹೇಳಿದ ದೇವರ ರಾಜ್ಯಕ್ಕೆ ಸಾಕ್ಷಿಯಾಗುವುದು ಮತ್ತು ದೇವರ ರಾಜ್ಯದ ಬರುವಿಕೆಗೆ ಶ್ರಮಿಸುವುದೆಂದರ್ಥ.
ಈ ನಿಟ್ಟಿನಲ್ಲಿ ಕ್ರಿಸ್ತನನ್ನು ಹೋಲುವಂತಹ ಜೀವನ ಶೈಲಿ, ಘನತೆ, ಗೌರವ ಮತ್ತು
ಮೌಲ್ಯಗಳು ನಮ್ಮದಾಗಬೇಕು. ಆಗ ಮಾತ್ರ ನಾವು ನಿಜವಾದ ಯಾಜಕರಾಗಲು ಸಾಧ್ಯ.
ಅಪೊಸ್ತಲರು ಕೂಡ ಕ್ರೈಸ್ತ ಜೀವನವನ್ನು ಕ್ರಿಸ್ತನ ಯಾಜಕತ್ವದಲ್ಲಿ
ಭಾಗಿಯಾಗುವ ಜೀವನವೆಂದು ಬೋಧಿಸಿದ್ದಾರೆ. ಕ್ರೈಸ್ತ ಜೀವನದ ಅಸ್ಥಿತ್ವವೇ ಯಾಜಕೀಯ ಕಾರ್ಯ ಮತ್ತು ಜೀವನ;
ಸಜೀವ ಬಲಿಯರ್ಪಣೆ-ನಿಮ್ಮನ್ನೇ ದೇವರಿಗೆ ಮೀಸಲಾದ ಮೆಚ್ಚುಗೆಯಾದ ಸಜೀವವಾದ ಬಲಿಯಾಗಿ
ಸಮರ್ಪಿಸಿಕೊಳ್ಳಿರಿ (ರೋಮ12, 1) ಎಂದು ಸಂತ ಪೌಲರು ಹೇಳುತ್ತಾರೆ.
ಇದೇ ವಿಷಯವನ್ನು ಹಿಬ್ರಿಯರಿಗೆ ಬರೆದ ಪತ್ರದಲ್ಲಿ
ಅಧ್ಯಾಯ 13, 15-16 ರಲ್ಲಿ ಕೇಳುತ್ತೇವೆ. “ಪ್ರಭುವಾದ ಯೇಸುಕ್ರಿಸ್ತರನ್ನು ಮುಕ್ತಕಂಠದಿಂದ ಗುಣಗಾನ ಮಾಡುತ್ತಾ
ಅವರ ಮುಖಾಂತರ ಸ್ತುತಿಯೆಂಬ ಬಲಿಯನ್ನು ದೇವರಿಗೆ ಸತತವಾಗಿ ಸಮರ್ಪಿಸೋಣ. ಇದಲ್ಲದೇ ಪರರೊಡನೆ ಹಂಚಿಕೊಳ್ಳುವುದನ್ನು
ನಿಲ್ಲಿಸಬೇಡಿ, ಇವು ಕೂಡ ದೇವರಿಗೆ ಮೆಚ್ಚುಗೆಯಾದ ಬಲಿಯರ್ಪಣೆಗಳೆ”.
ಸಂತ ಪೇತ್ರನು ತನ್ನ ಪತ್ರದಲ್ಲಿ ಈ ರೀತಿ ಹೇಳುತ್ತಾನೆ. “ನೀವು ಸಹ ಸಜೀವ ಶಿಲೆಗಳಾಗಿದ್ದೀರಿ ಆಧ್ಯಾತ್ಮಿಕ
ದೇವಾಲಯವನ್ನು ನಿರ್ಮಿಸಲು ನಿಮ್ಮನ್ನೇ ಅರ್ಪಿಸಿಕೊಳ್ಳಿ. ಅದೇ ದೇವಾಲಯದಲ್ಲಿ ಯೇಸು ಕ್ರಿಸ್ತರ ಮುಖಾಂತರ
ದೇವರಿಗೆ ಮೆಚ್ಚುಗೆಯಾಗಿರುವ ಆಧ್ಯಾತ್ಮಿಕ ಬಲಿಗಳನ್ನು ಸಮರ್ಪಿಸುವ ಪವಿತ್ರ ಯಾಜಕ ವರ್ಗದವರು ನೀವಾಗಿರುವಿರಿ”
(ಪೇತ್ರ 2, 5). ನೀವು ದೇವರು ಆಯ್ದುಕೊಂಡ ಜನಾಂಗ ರಾಜ ಯಾಜಕರು ಪವಿತ್ರ
ಪ್ರಜೆ ದೇವರ ಸ್ವಕೀಯ ಜನ ಅವರ ಅದ್ಭುತ ಕಾರ್ಯಗಳನ್ನು ಪ್ರಚುರಪಡಿಸುವುದಕ್ಕಾಗಿಯೇ ಆಯ್ಕೆಯಾದವರು”
(ಪೇತ್ರ 2, 5).
ಮೇಲಿರುವ ಎಲ್ಲಾ ಉಲ್ಲೇಖಗಳು ಕ್ರೈಸ್ತರನ್ನು ಒಂದು
ಪಂಗಂಡವಾಗಿ ರೂಪಿಸಿ ಯಾಜಕ ವರ್ಗಕ್ಕೆ ಸೇರಿರುವರೆಂದು ತಿಳಿಸುತ್ತದೆ. ಇಲ್ಲಿ ಪ್ರತಿಯೊಬ್ಬ ಕ್ರೈಸ್ತ
ಇನ್ನೊಬ್ಬರಿಗಾಗಿ ಜೀವಿಸುವುದೇ ಶ್ರಿಸಾಮಾನ್ಯ ಯಾಜಕತ್ವದ ಮುಖ್ಯಗುರಿ ಮತ್ತು ನಿಜವಾದ ಬಲಿ. ಇದು ತನ್ನನ್ನೇ
ಇನ್ನೊಬ್ಬರಿಗಾಗಿ ಅರ್ಪಿಸುವ ಬದುಕು. ನಾವು ಯಾವಾಗ ನಮ್ಮನ್ನೇ ಇನ್ನೊಬ್ಬರಿಗೆ ಅರ್ಪಿಕೊಳ್ಳುತ್ತೇವೆಯೋ, ಇನ್ನೊಬ್ಬರಿಗೋಸ್ಕರ ಬಲಿಯಾಗುತ್ತೇವೆಯೋ
ಆಗ ನಾವು ಪವಿತ್ರ ಯಾಜಕವರ್ಗದ ಪಾಲುದಾರರಾಗುತ್ತೇವೆ.
5.2.
ಸೇವಾಯಾಜಕತ್ವ
ಸಾಮಾನ್ಯ ಯಾಜಕತ್ವ ಸೇವಾಯಾಜಕತ್ವದಲ್ಲಿ ಮಾತ್ರ
ವಾಸ್ತವಿಕವಾಗಿ ಕಾರ್ಯಗತಗೊಳ್ಳುತ್ತದೆ. ಯೇಸು ಹನ್ನೆರೆಡು ಮಂದಿ ಶಿಷ್ಯರನ್ನು ಆರಿಸಿಕೊಂಡು, ದೇವರ ರಾಜ್ಯದ ಬೋಧನೆಗೆ
ಅವರನ್ನು ಅನುಗೊಳಿಸಿದರು ಮತ್ತು ಅವರಿಗೆ ತನ್ನ ಶಕ್ತಿಯನ್ನು ಸಹ ಹರಿಸಿದರು (ಮತ್ತಾ10,
8.40; 18.18) ಜೊತೆಗೆ ರೊಟ್ಟಿಯನ್ನು ಮುರಿದು ಶಿಷ್ಯರಿಗೆ ಹಂಚಿ, ಇದನ್ನು ನೀವು ಸಹ ನನ್ನ ಸ್ಮರಣೆಗಾಗಿ ಮಾಡಿರಿ ಎಂದು ಹೇಳಿದರು (ಲೂಕ 22,
19).
ಇದನ್ನು ಅರಿತ, ಅಪೆÇಸ್ತಲರು ಕೂಡ ಯಾಜಕತ್ವದ ಸೇವಾವೃತ್ತಿಯನ್ನು ಮುಂದುವರೆಸಲು ಗುಂಪುಗಳನ್ನು ಕಟ್ಟಿ,
ಈ ಗುಂಪುಗಳಲ್ಲಿ ಕೆಲವರನ್ನು ಹಿರಿಯ/ಪ್ರಮುಖರೆಂದು ನೇಮಕಮಾಡಿದರು. ಪೌಲನು ಇವರನ್ನು
ದಾಸರೆಂದೂ ದೇವರ ಸತ್ಯಾರ್ಥಗಳ ನಂಬಿಗಸ್ಥ ನಿರ್ವಾಹಕರೆಂದೂ ಪರಿಗಣಿಸಿ (1ಕೊರಿಂಥ 4:1) ಮತ್ತು ಹೊಸ ಒಡಂಬಡಿಕೆಯ ಸೇವಕರೆಂದು ಕರೆದನು
(2 ಕೊರಿಂಥ 3:6). ಈ ರೀತಿಯಾಗಿ ಸೇವಾಯಾಜಕತ್ವದ
ಉಗಮವನ್ನು ಧರ್ಮಸಭೆಯಲ್ಲಿ ಕಾಣಬಹುದು. ಸೇವಾಯಾಜಕತ್ವದ ಪಂಗಡವು ವಿಶೇಷ ಹಕ್ಕು ಮತ್ತು ಸವಲತ್ತು ಪಡೆಯುವ
ಗುಂಪಾಗದೆ, ಕ್ರಿಸ್ತನ ಯಾಜಕತ್ವದಲ್ಲಿ ಭಾಗಿಯಾಗಲು ಮತ್ತು ಕ್ರಿಸ್ತನ
ವಿಶೇಷ ಯಾಜಕತ್ವದ ಕರ್ತವ್ಯವನ್ನು ಮುಂದುವರೆಸಲು ಆಯ್ದುಕೊಂಡಂತಹ ಜನಾಂಗವೆಂದು ಮನಗಾಣಬೇಕು. ಇವರ ಯಾಜಕತ್ವವು
ಶ್ರೀಸಾಮನ್ಯರ ಯಾಜಕತ್ವದ ಮೌಲ್ಯವನ್ನು ತಗ್ಗಿಸದೆ ವಿಶ್ವಾಸಿಗಳ ಸೇವೆಯಲ್ಲಿ ಯಾಜಕತ್ವವನ್ನು ಅರ್ಥಗರ್ಭಿತವಾಗಿಸಿ
ಅದಕ್ಕೆ ಜೀವ ತುಂಬಬೇಕಾಗಿದೆ.
ಸಮಾಪ್ತಿ
ಕ್ರಿಸ್ತನಿಂದ ಯಾಜಕತ್ವ ಹೊಸ ಅರ್ಥವನ್ನು ಪಡೆದಿದೆ, ಅಪೂರ್ಣದಿಂದ ಸಂಪೂರ್ಣತೆಯನ್ನು
ಮತ್ತು ಬಾಹ್ಯವಿಧಿವಿಧಾನಗಳ ಲಕ್ಷಣದಿಂದ ಆಂತರಿಕತೆಯನ್ನು ಪಡೆದುಕೊಂಡಿದೆ. ಇಂತಹ ಯಾಜಕತ್ವವನ್ನು ಪಡೆದ
ಕ್ರೈಸ್ತರಾದ ನಾವು ಭಾಗ್ಯವಂತರು. ಈ ಯಾಜಕತ್ವವನ್ನು ಅನುಸರಿಸಲು ವಿಶ್ವಾಸಭರಿತರಾಗಿ, ಭರವಸೆ ಮತ್ತು ಪರರ ಸೇವೆಗಳೆಂಬ ಮೌಲ್ಯಗಳಿಂದ ಮಾತ್ರ ಸಾಧ್ಯ.
- ಜೋವಿ
No comments:
Post a Comment