Saturday, 4 April 2020

ಭಾರತದ ವಿಭಜನೆ ಮತ್ತು ಗಾಂಧಿ

----------------------
ಡಾ. ದಿನೇಶ್ ನಾಯಕ್

1947, ಜೂನ್ ಗಾಂಧಿಯ ಇಚ್ಛೆಗೆ ವಿರುದ್ಧವಾಗಿ ಕಾಂಗ್ರೆಸ್ ನಾಯಕರು ಅದಾಗಲೇ ಭಾರತ ವಿಭಜನೆಯನ್ನು ಅವಸರದಲ್ಲಿ ಒಪ್ಪಿಕೊಂಡಿದ್ದರು. ಗಾಂಧೀಜಿಯದ್ದು ಹಿಂದೂ ಮುಸ್ಲಿಮ್ ಐಕ್ಯತೆಯಿಂದ ಕೂಡಿದ ರಾಷ್ಟ್ರದ ಕಲ್ಪನೆ. ಅವರು ಮುಸಲ್ಮಾನರೂ ಕೂಡಾ ಭಾರತ ದೇಶದ ಸಮಾನ ನಾಗರಿಕರು ಎಂಬ ಭಾವನೆಯನ್ನು ಹೊಂದಿದ್ದರು. ಹಾಗಾಗಿ ಈ ವಿಭಜನೆಯನ್ನು ತಡೆಯಲು ಗಾಂಧಿ ಸಾಕಷ್ಟು ಪ್ರಯತ್ನಿಸಿದ್ದರು. ಕೊನೆಯವರೆಗೂ ಏಕಾಂಗಿಯಾಗಿ ಹೋರಾಡಿದ್ದರು. ಆದರೆ ಸಾತಂತ್ರ್ಯೋತ್ತರ ದಿನಗಳಿಂದ ತೊಡಗಿ ಈ ಹೊತ್ತಿನವರೆಗೂ ಈ ವಿಭಜನೆಗೆ ಗಾಂಧಿ ಕಾರಣ ಎಂಬ ಒಂದು ಪ್ರಭಾವಶಾಲಿಯಾದ ಸಂಕಥನವನ್ನು ನಾವು ಕೇಳುತ್ತಿದ್ದೇವೆ.
1906ರಲ್ಲಿ ಮುಸ್ಲಿಮ್ ಲೀಗ್ ಆರಂಭವಾದದ್ದೇ ಕಾಂಗ್ರೆಸ್ಸಿನೊಂದಿಗಿನ ಭಿನ್ನಾಭಿಪ್ರಾಯದಿಂದ. ಭಾರತದಲ್ಲಿ ಬ್ರಿಟಿಷ್ ಆಡಳಿತವು ಕೊನೆಗೊಂಡರೆ ಹಿಂದುಗಳು ಮುಸ್ಲಿಮರ ಮೇಲೆ ಪ್ರಭುತ್ವ ನಡೆಸುತ್ತಾರೆ ಎಂಬ ಅನುಮಾನದಿಂದ. ಅವರಿಗೆ ಯಾಕೆ ಈ ಅನುಮಾನ ಬಂದಿತ್ತು ಅಂದರೆ ಮೊಘಲರ ಕಾಲದಲ್ಲಿ ಮತ್ತು ನವಾಬರ ಕಾಲದಲ್ಲಿ ಅಧಿಕಾರ, ಪದವಿಗಳಲ್ಲಿದ್ದ ಮುಸಲ್ಮಾನರು ಬ್ರಿಟಿಷ್ ಆಳ್ವಿಕೆಯಲ್ಲಿ ಕಡೆಗಣಿಸಲ್ಪಟ್ಟರು. ಎಲ್ಲವನ್ನೂ ಕಳಕೊಂಡ ಮುಸಲ್ಮಾನರು ಇಂಗ್ಲಿಷ್ ಶಿಕ್ಷಣ ಪಡಕೊಂಡ ಮೇಲ್ಜಾತಿಯ ಹಿಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಸರಕಾರಿ ನೌಕರಿ ಪಡೆದುಕೊಳ್ಳುತ್ತಾರೆ ಮತ್ತು ಇವರೇ ದೇಶದಲ್ಲಿ ಮತೀಯ ಪ್ರತ್ಯೇಕತೆಯ ಭಾವನೆಯನ್ನೂ ಬೆಳೆಸುತ್ತಾರೆ ಎಂದು ಭಾವಿಸಲಾರಂಭಿಸಿದರು. ಆಗ ನಡೆಯುತ್ತಿದ್ದ ಚುನಾವಣೆಗಳಲ್ಲಿ ಕೂಡಾ ಮತದಾನದ ಹಕ್ಕು ಮೇಲ್ಜಾತಿಯ ಶಿಕ್ಷಿತ ಹಿಂದುಗಳಿಗೆ ಮಾತ್ರ ಇತ್ತು. ಹಾಗಾಗಿ ಎಲ್ಲ ಕಡೆಯಲ್ಲಿ ಹಿಂದುಗಳೇ ಬಹುಮತದಲ್ಲಿರುವುದು ಮುಸಲ್ಮಾನರಿಗೆ ಕಾಣುತ್ತದೆ. ಬಹುಸಂಖ್ಯಾತರ ಸರ್ಕಾರ ಅಂದರೆ ಹಿಂದುಗಳ ಸರ್ಕಾರ ಅಂತ ಭಾವಿಸುತ್ತಿದ್ದರು. ಅದಕ್ಕೆ ಪೂರಕವಾಗಿ ಬ್ರಿಟಿಷರು ಭಾರತದ ಚರಿತ್ರೆಯನ್ನು ಬರೆದು, ಕೋಮುವಾದ ಬೆಳೆಯುವುದಕ್ಕೆ ಇನ್ನಷ್ಟು ಪ್ರಯತ್ನಿಸುತ್ತಾರೆ. ಜೇಮ್ಸ್ ಮಿಲ್ ಅನ್ನುವ ಚರಿತ್ರೆಕಾರ ಪ್ರಾಚೀನ ಭಾರತದ ಚರಿತ್ರೆಯನ್ನು ಬರೆಯುವಾಗ ಮಾಡಿದ ಹಿಂದೂ ನಾಗರೀಕತೆ(ಸ್ವರ್ಣ ಯುಗ), ಮಧ್ಯಕಾಲೀನ (ಅಂಧ ಯುಗ), ಬ್ರಿಟಿಷ್ ಆಳ್ವಿಕೆ (ಆಧುನಿಕ ಯುಗ) ಎಂಬ 3 ಬಗೆ ಚರಿತ್ರೆಯ ಅವಧೀಕರಣ ಬಹಳ ಪ್ರಭಾವಶಾಲಿಯಾಗಿತ್ತು. ಆ ಕಾಲzಲ್ಲಿÀ ಮಾತ್ರವಲ್ಲದೇ ಈ ಹೊತ್ತಿಗೂ ಕೂಡಾ ಹಿಂದೂ ಮನಸ್ಸುಗಳನ್ನು ಕೆಡಿಸುತ್ತಿರುವ ಅವಧೀಕರಣ ಇದು. ಹೀಗಾಗಿ ಭಾರತದಾದ್ಯಂತ ಹಿಂದು–ಮುಸ್ಲಿಮ್ ಕೋಮು ಗಲಭೆಗಳು ಅಲ್ಲಲ್ಲಿ ಮತ್ತೆ ಮತ್ತೆ ಕಾಣಿಸಿಕೊಂಡವು. ಇದರಿಂದಾಗಿ ಮುಸ್ಲಿಮ್ ಲೀಗ್ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ಮುಂದಿಟ್ಟಿತು (1930ರಲ್ಲಿ ಮೊಹಮ್ಮದ್ ಇಕ್ಬಾಲ್ ಅವರು ಸೂಚ್ಯವಾಗಿ ಅಮೇಲೆ 1940ರಲ್ಲಿ ಪ್ರಪ್ರಥಮ ಬಾರಿಗೆ ಸ್ಪಷ್ಟವಾಗಿ ಮುಂದಿಟ್ಟರು.).
ಆದರೆ ಗಾಂಧಿ ಆರಂಭದಿಂದ ಕೊನೆಯವರೆಗೂ ವಿಭಜನೆಯ ವಿರುದ್ಧ ಇದ್ದರು. ಮುಸ್ಲಿಂಲೀಗ್ ಜೊತೆ ಮಾತುಕತೆ ನಡೆಸಬೇಕು ಅಂತ ಕಾಂಗ್ರೆಸ್‍ನ ಮೇಲ್ಮಟ್ಟದ ನಾಯಕರಿಗೆ ಪದೇ ಪದೇ ಹೇಳುತ್ತಿದ್ದ ಗಾಂಧಿ 1924ರಲ್ಲಿ 21 ದಿವಸ ಹಿಂದು ಮುಸ್ಲಿಮ್ ಸಾಮರಸ್ಯಕ್ಕಾಗಿ ಉಪವಾಸ ಮಾಡಿದ್ದರು. ಗಾಂಧಿಗೆ ಒಂದು ದೇಶ ಅಂದ್ರೆ ಎಲ್ಲರೂ ಇರಬೇಕು ಎಂಬ ಭಾವನೆ ಇತ್ತು. ಗಾಂಧಿ ತಮ್ಮ ‘ಹಿಂದ್ ಸ್ವರಾಜ್’ ಕೃತಿಯಲ್ಲಿ ಓದುಗನ ಪ್ರಶ್ನೆಗೆ ಸಂಪಾದಕನಾಗಿ ಹೀಗೆ ಹೇಳ್ತಾರೆ:
“ಬೇರೆ ಬೇರೆ ದೇಶದ ವಿಭಿನ್ನ ಧರ್ಮದ ಜನರಿದ್ದರೆ ದೇಶಕ್ಕೇನೂ ತೊಂದ್ರೆ ಇಲ್ಲ. ಅವ್ರು ನಮ್ಮ ದೇಶದ ಜನರೊಂದಿಗೆ ಬೆರೆತು ಬದುಕುತ್ತಾರೆ.ಒಂದು ದೇಶದಲ್ಲಿ ಹೀಗೆ ಇದ್ರೇನೆ ಅದಕ್ಕೆ ದೇಶ ಅಂತ ಹೇಳೋದು.ಹಿಂದುಸ್ಥಾನದಲ್ಲಿ ಹಿಂದುಗಳೇ ಇರ್ಬೇಕು ಎಂದು ಯೋಚಿಸುವ ಹಿಂದುಗಳು ಕನಸು ಕಾಣ್ತಿದ್ದಾರೆ.ನಮ್ಮ ದೇಶದಲ್ಲಿರುವ ಹಿಂದು, ಮುಸ್ಲಿಮ್, ಕ್ರೈಸ್ತ ಎಲ್ಲರೂ ದೇಶದ ಭ್ರಾತೃಗಳು. ಒಂದು ಧರ್ಮವಿದ್ದರೆ ಮಾತ್ರ ಒಮ್ದು ದೇಶ ಅಂತ ಎಲ್ಲು ಇಲ್ಲ.”
ಅವರಿಗೆ ಮುಸ್ಲಿಮರದ್ದೇನೂ ಸಮಸ್ಯೆ ಇರಲಿಲ್ಲ. ‘ಹಿಂದ್ ಸ್ವರಾಜ್’ನಲ್ಲಿ ಹಿಂದು ಮತ್ತು ಮುಸಲ್ಮಾನರ ನಡುವೆ `ಜನ್ಮ ವೈರ’ ಇದೆ ಅಂತ ಓದುಗ ಹೇಳುವಾಗ ಗಾಂಧಿ ಹೇಳ್ತಾರೆ: ಹಾಗೇನೂ ಇಲ್ಲ. ಈ ನುಡಿಗಟ್ಟನ್ನು ಬಳಸಿದ್ದು ಬ್ರಿಟಿಷರು. ವಾಸ್ತವದಲ್ಲಿ ಮುಸಲ್ಮಾನರ ಆಳ್ವಿಕೆಯಲ್ಲಿ ಹಿಂದುಗಳು, ಹಿಂದುಗಳ ಆಳ್ವಿಕೆಯಲ್ಲಿ ಮುಸಲ್ಮಾನರು ಏಳಿಗೆ ಆಗ್ತಾರೆ ಎಂಬ ಉತ್ತರ ಕೊಡುತ್ತಾರೆ. ಅವರ ಪ್ರಕಾರ, `ಹಿಂದು ಮುಸಲ್ಮಾನರಿಗೆ ಒಬ್ಬನೇ ಮೂಲಪುರುಷ, ಇಬ್ಬರೂ ಒಂದೇ ವಂಶದವರು. ಇಬ್ಬರೊಳಗೂ ಒಂದೇ ರಕ್ತ ಹರಿಯುತ್ತದೆ. ಹಿಂದೂಗಳ ದೇವರು ಬೇರೆ ಅಲ್ಲ. ಮುಸಲ್ಮಾನರ ದೇವರು ಬೇರೆ ಅಲ್ಲ. ಎಲ್ಲ ಒಂದೇ. ಧರ್ಮಗಳು ಬೇರೆಯಾದರೂ, ದಾರಿಗಳೂ ಬೇರೆ ಆದರೂ ಹೋಗುವುದು ಒಂದೇ ಕಡೆಗೆ.’ ಮುಸ್ಲಿಮರು ಗೋಮಾಂಸ ಭಕ್ಷಣೆ ಮಾಡ್ತಾರೆ ಎಂಬ ಪ್ರಶ್ನೆ ಬಂದಾಗ ಗಾಂಧಿ ಹೇಳ್ತಾರೆ:
“ನಾನು ಸ್ವಯಂ ಗೋಪೂಜಕ. ಹಿಂದೂಸ್ತಾನ ಕೃಷಿ ಪ್ರಧಾನ ದೇಶ. ಹಿಂದೂಸ್ತಾನಕ್ಕೆ ಗೋವೇ ಆಧಾರ. ಗೋವು ನಮಗೆ ನೂರಾರು ಬಗೆಯಲ್ಲಿ ಉಪಕಾರಿ. ಮುಸಲ್ಮಾನ ಸೋದರರು ಇದನ್ನು ಒಪ್ಪಬೇಕು. ಆದ್ರೆ ನಾನು ಗೋಪೂಜೆ ಮಾಡುವಂತೆ ಮನುಷ್ಯರನ್ನು ಗೌರವಿಸುತ್ತೇನೆ. ಒಂದು ಗೋವನ್ನು ಕಾಪಾಡಲು ಒಬ್ಬ ಮುಸಲ್ಮಾನನನ್ನು ಕೊಲ್ಲಲಾರೆ. ಗೋರಕ್ಷಣೆಗೆ ಒಂದೇ ದಾರಿ; ದೇಶದ ಹಿತಕ್ಕಾಗಿ ಗೋವನ್ನು ರಕ್ಷಿಸುವ ಕೆಲಸದಲ್ಲಿ ನೀನೂ ನನಗೆ ಜೊತೆಯಾಗು ಎಂದು ಮುಸಲ್ಮಾನ ಸೋದರನಿಗೆ ತಿಳಿಸಿ ಹೇಳುವುದು. ಅವನು ನನ್ನ ಮಾತು ಕೇಳದಿದ್ದರೆ, ಈ ಕೆಲಸ ನನ್ನ ಶಕ್ತಿಗೆ ಮಿರಿದುದು ಎಂದು ಆ ಹಸುವನ್ನು ಕೈ ಬಿಡಬೇಕು. ಗೋವಿನ ಬಗ್ಗೆನನ್ನ ಅಂತ:ಕರಣ ಅತ್ಯಂತ ದಯಾಪೂರ್ಣವಾಗಿದ್ದರೆ, ಅದನ್ನು ರಕ್ಷಿಸಲು ನನ್ನ ಪ್ರಾಣವನ್ನೇ ತೆರಬೇಕೇ ಹೊರತು ಮುಸಲ್ಮಾನ ಸೋದರರ ಪ್ರಾಣವನ್ನು ತೆಗೆಯಬಾರದು. ಇದೇ ನಮ್ಮ ಧರ್ಮ ಎಂದು ನಾನು ತಿಳಿದಿದ್ದೇನೆ”
ಹಿಂದುಗಳು ಮುಸಲ್ಮಾನರು ಅಣ್ಣ-ತಮ್ಮಂದಿರ ರೀತಿಯಲ್ಲಿ ಪ್ರೀತಿಯಿಂದ ಇರಬೇಕು. ಹಾಗಂತ ಅವರು ಜಗಳ ಮಾಡಲಾರರು ಅಂತ ನಾನು ಹೇಳಲಾರೆ. ಅದನ್ನು ಪರಸ್ಪರ ಮಾತುಕತೆಯ ಮೂಲಕ ಅವರೇ ಸರಿಪಡಿಸಿಕೊಳ್ಳಬೇಕು. ಆದರೆ ಈ ಜಗಳವನ್ನು ಇಂಗ್ಲಿಷರ ಬಳಿಗೆ ಕೊಂಡೊಯ್ಯುವುದು ನಾಚಿಕೆಗೇಡು ಎಂದು ಹೇಳ್ತಾರೆ. ಇಲ್ಲಿ ಒಂದು ಮಾತನ್ನು ನಾನು ನೆನಪಿಸಬೇಕು. ಅದೇನೆಂದರೆ: ಗೋಡ್ಸೆ ತನ್ನ ಕೊನೆಯ ಭಾಷಣದಲ್ಲಿ ಗಾಂಧಿಯ ಒಪ್ಪಿಗೆಯ ಮೇರೆಗೆ ಕಾಂಗ್ರೆಸ್ಸಿನ ಮೇಲ್ಮಟ್ಟದ ನಾಯಕರು(ಅಖಿಲ ಭಾರತ ಕಾಂಗ್ರೆಸ್ ಕಾರ್ಯಕಾರಿ ಸಮಿತಿ- ರಾಜೇಂದ್ರ ಪ್ರಸಾದ್, ವಲ್ಲಭ ಬಾಯಿ ಪಟೇಲ್, ನೆಹರೂ, ಗೋವಿಂದ್ ಬಲ್ಲಭ್ ಪಂತ್- ಇವರೆಲ್ಲ ದೇಶ ವಿಭಜನೆಗೆ ಮತ ಹಾಕಿದ ಕಾಂಗ್ರೆಸ್ಸಿನ ನಾಯಕರು) ದೇಶ ವಿಭಜನೆ ಆಯ್ತು ಅಂತ ಹೇಳ್ತಾನೆ. ಆದ್ರೆ ಇದು ಸುಳ್ಳು. ನಿಜ ಹೇಳಬೇಕೆಂದ್ರೆ 1930ರ ನಂತರ ಗಾಂಧಿ ರಾಷ್ಟ್ರೀಯ ಹೋರಾಟದಲ್ಲಿದ್ದರೂ ದೇಶಕ್ಕೆ, ದೇಶದ ಸ್ವಾತಂತ್ರ್ಯಕ್ಕೆ   ಸಂಬಂಧಿüಸಿದಂತೆ ನಿರ್ಧಾರ ಕೈಗೊಳ್ಳುವಲ್ಲಿ ಅವರ ಪಾತ್ರ ಕಡಿಮೆಯಾಗ್ತಾ ಬಂದಿತ್ತು. ಅವರನ್ನು ಕಾಂಗ್ರೆಸ್ಸಿನ ನಾಯಕರು ಸೈಡ್‍ಲೈನ್ ಮಾಡ್ತಾ ಇದ್ರು. 1947ರ ವೇಳೆಗಾಗುವಾಗಂತೂ ಗಾಂಧಿ ಕಾಂಗ್ರೆಸ್‍ನಿಂದ ಹೊರಗೆ ಬಂದಾಗಿತ್ತು. ಹಾಗಾಗಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಗಾಂಧೀಜಿಯಲ್ಲಿ ಒಂದು ಮಾತು ಕೇಳದೇನೆ ವಿಭಜನೆಗೆ ಒಪ್ಪಿಬಿಟ್ಟಿದ್ರು. ಹಾಗಾಗಿ 1947 ಜೂನ್ 3ನೇ ತಾರೀಕಿನಂದು ದೇಶ ವಿಭಜನೆಯ ವಿಷಯ ಘೋಷಣೆಯಾದ ದಿನ ಗಾಂಧಿ ರಾಜೇಂದ್ರ ಪ್ರಸಾದ್‍ಗೆ ಹೇಳ್ತಾರೆ: `I can see only evil in the plan’. ಬಳಿಕ ಒಬ್ಬ ವರದಿಗಾರ ಪ್ರಶ್ನೆ ಮಾಡ್ತಾನೆ - ವಿಭಜನೆಯನ್ನು ತಪ್ಪಿಸುವುದಕ್ಕಾಗಿ ನೀವು ಉಪವಾಸ ಮಾಡ್ತೀರಾ? ಅಂತ. ಆಗ ಗಾಂಧಿ ನೊಂದು ಬೇಸರದಿಂದ ಉತ್ತರಿಸುತ್ತಾರೆ: ಕಾಂಗ್ರೆಸ್ ಹುಚ್ಚುತನದ ಒಂದು ಕೆಲಸ ಮಾಡಿದ್ರೆ ಅದರ ಅರ್ಥ ನಾನು ಸಾಯಬೇಕೆಂದೇ? ‘’If the congress commits an act of madness, does it mean I should die?’’ಆದ್ರೆ ಗಾಂಧೀಜಿ ತಮ್ಮ ಪಟ್ಟನ್ನು ಬಿಡದೆ ಒಂದು ಉಪಾಯವನ್ನು ಮಾಡ್ತಾರೆ. ಅವ್ರು ನೇರವಾಗಿ ಮೌಂಟ್ ಬ್ಯಾಟನ್ ಹತ್ತಿರ ಹೋಗ್ತಾರೆ. ಅವನ ಹತ್ತಿರ ಹೇಳ್ತಾರೆ: “ ನೀವು ಹೊರಟು ಹೋಗಿ, ದೇಶವನ್ನು ವಿಭಜನೆ ಮಾಡಬೇಡಿ. ಹಿಂದುಗಳು ಮುಸ್ಲಿಮರಿಗೆ ಒಳ್ಳೆಯದು ಮಾಡಲಾರರು ಎಂಬ ಜಿನ್ನಾರ ಸಂಶಯವನ್ನು ಹೋಗಲಾಡಿಸಲು ನಾವು ಜಿನ್ನಾನನ್ನೇ ಪ್ರಧಾನ ಮಂತ್ರಿ ಮಾಡಿ ಅವರಿಗೆ ದೇಶದ ಸ್ವಾತಂತ್ರ್ಯವನ್ನು ಒಪ್ಪಿಸುತ್ತೇವೆ. ನಾವು ಜಿನ್ನಾರ ಜೊತೆ ಮಾತುಕತೆ ನಡೆಸ್ತೇವೆ”. ಆಗ ಮೌಂಟ್ ಬ್ಯಾಟನ್ ದಿಗ್ಭ್ರಮೆಗೊಂಡು ನೆಹರೂ ಪಟೇಲರ ಬಳಿ ಗಾಂಧಿಯ ಮಾತನ್ನು ಹೇಳ್ತಾರೆ. ಅವರಿಬ್ಬರು ಗಾಂಧಿಯ ಬಳಿ ಹೋಗಿ “ ಈಗ ಅದೆಲ್ಲ ಮುಗಿದಹೋದ ಕತೆ. ಇನ್ನು ಏನೂ ಮಾಡುವ ಹಾಗಿಲ್ಲ. ನಿಮ್ಮ ಮಾತು ಭಾರತದಲ್ಲಿ ನಡೆಯುವುದಿಲ್ಲ. ರಕ್ತದ ಹೊಳೆ ಹರಿಯುತ್ತದೆ” ಎಂದು ಹೇಳಿ ಗಾಂಧೀಜಿಯವರನ್ನು ಹೆದರಿಸಿದ್ರು. ಪಾಪ, ಗಾಂಧೀಜಿ ಸುಮ್ಮನಾಗಿ ಸ್ವಾತಂತ್ರ್ಯದ ದಿನ ಬಂಗಾಳದಲ್ಲಿ ಮತೀಯ ಗಲಭೆಗಳು ನಡೆಯುತ್ತಿದ್ದ ಪ್ರದೇಶದಲ್ಲಿ ಹತ್ಯೆಯನ್ನು ತಪ್ಪಿಸಲು ಪ್ರಯತ್ನಿಸಿದ್ರು. ಅನೇಕ ಜೀವಗಳನ್ನು ಉಳಿಸಿದ್ರು. ಗಾಂಧಿ ಉಚ್ಚೆಯ ಮೇಲೆ, ಗಾಜಿನ ಚೂರುಗಳ ಮೇಲೆ ಬರಿಗಾಲಿನಲ್ಲಿ ಓಡಾಡಿ ಇದನ್ನು ಸಾಧಿಸಿದ್ದರು. ಇದಾದ ಬಳಿಕವು ದೇಶದಾದ್ಯಂತ ಹಿಂದು-ಮುಸ್ಲಿಂ ಗಲಭೆ, ದಂಗೆ ನಡೆಯುತ್ತಲೇ ಇತ್ತು. ಈ ವಾತಾವರಣಕ್ಕೆ ಪ್ರತಿರೋಧವಾಗಿ 1948ರ ಜನವರಿ 13ರಂದು ಗಾಂಧೀಜಿ ತಮ್ಮ ಬದುಕಿನ ಕೊನೆಯ ಅಮರಣಾಂತ ಸತ್ಯಾಗ್ರಹ ಮಾಡ್ತಾರೆ. ಆದ್ರೆ ವಿಭಜನೆ ಬಗ್ಗೆ ಪಟೇಲ್ ತಳೆದ ಸ್ಪಷ್ಟ ನಿರ್ಧಾರ ಹೀಗಿದೆ: ““If India is to remain united, it must be divided”. ವಿಭಜನೆ ನೆಹರೂಗೆ ಹೆಚ್ಚು ಅಗತ್ಯವಾಗಿತ್ತು ಯಾಕೆಂದ್ರೆ: 
“ Partition was a necessary evil in order to neutralise Jinnah’s nuisance value and to establish a strong and centralised Indian state which would not have been possible with Muslim League ministries in office in undivided Punjab and Bengal.”

ಇದನ್ನೆಲ್ಲ ಗಮನಿಸಿದಾಗ ಅಂದ್ರೆ ವಲ್ಲಭ ಬಾಯಿ ಪಟೇಲ್ ಮತ್ತು ಜವಾಹರ್ ಲಾಲ್ ನೆಹರೂ ಅವರ ಮಾತುಗಳನ್ನು ಗಮನಿಸಿದಾಗ ಭಾರತ ವಿಭಜನೆಯ ಈ ರಾಜಕಾರಣ ಅನೇಕ ವಿರೋಧಾಭಾಸಗಳನ್ನು ಹೊತ್ತಿರುವ ಒಂದು ಸಂಕೀರ್ಣ ವಿದ್ಯಮಾನ ಎಂಬುದಂತೂ ಸತ್ಯ.
ಇದೊಂದು ಅನಿವಾರ್ಯವಾದ ಚಾರಿತ್ರಿಕ ದುರ್ಘಟನೆ ಅಂತ ಹೇಳುವಾಗ ಅದಕ್ಕೆ ಕಾರಣವಾದುದು ಭಾರತದ ರಾಷ್ಟ್ರೀಯ ಹೋರಾಟದ ಸೈದ್ಧಾಂತಿಕತೆಯಲ್ಲಿ ಹುದುಗಿರುವ ಕೆಲವು ವಿಸಂಗತಿಗಳು. 20ನೆಯ ಶತಮಾನದ ಹಿಂದು - ಮುಸ್ಲಿಂ ಜನಾಂಗೀಯ ನೆಲೆಯ ರಾಷ್ಟ್ರವಾದಗಳು ಮತ್ತು ಈ ಹಂತದಲ್ಲಿ ಕಾಂಗ್ರೆಸ್ ಹೆಚ್ಚು ಹೆಚ್ಚು ಕೋಮುವಾದಿ ಶಕ್ತಿಗಳನ್ನು ತನ್ನೊಳಗೆ ಸೇರಿಸಿಕೊಂಡು ಬಲಪಂಥೀಯತೆಯ ಕಡೆಗೆ ವಾಲಿದ್ದು, ಗಾಂಧಿ ಈ ವೇಳೆಗಾಗಲೇ ಕಾಂಗ್ರೆಸ್ಸಿನ ಪ್ರಶ್ನಾತೀತ ನಾಯಕರಾಗಿ ಉಳಿಯದೇ ಇದ್ದದ್ದು – ಈ ಎಲ್ಲ ಕಾರಣಗಳಿಗಾಗಿ ದೇಶ ವಿಭಜನೆ ಆಯಿತು. ಪ್ರಬುದ್ಧ ನಾಯಕತ್ವದ ಕೊರತೆ, ಅಧಿಕಾರ ದಾಹ ಮತ್ತು ಮತೀಯ ಅಸ್ವಸ್ಥತೆ ಇವುಗಳಿಂದಾಗಿ ದೇಶ ವಿಭಜನೆ ಅನಿವಾರ್ಯವಾಯಿತು.
**********

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...