ಮಗ್ದಲದ ಮರಿಯಳು
ಸಮಾಧಿಯ ಬಳಿಗೆ ಓಡೋಡಿ ಬಂದಳು
ಸಮಾಧಿಯ ಹಿಂದು ಮುಂದು
ಒಳಗೂ ಹೊರಗೂ
ದಿಕ್ಕು ದೆಸೆ ಇಲ್ಲದೆ ಸುತ್ತಾಡಿದಳು
ಅವಳು ಬಂದಾಗ ಕತ್ತಲು
ಬೆಳಕು ನಿಧಾನವಾಗಿ ಜಗದ ಬಾಗಿಲು ತಟ್ಟುತ್ತಿತ್ತು
ಒಳಗೂ ಹೊರಗೂ ಕತ್ತಲು.
ಆದರೂ ಕತ್ತಲೆಯಲ್ಲೇ ಸಮಾಧಿಯ ಬಳಿಗೆ
ಬಂದಿದ್ದಳು.
ಸಮಾಧಿ ಸಾವಿನ ಮನೆಯಾದರೆ
ಕತ್ತಲು ಅವಿಶ್ವಾಸದ ರೂಪಕ
ಹೌದು, ಅವಿಶ್ವಾಸ ಕತ್ತಲೆ ಅವಳನ್ನು ಆವರಿಸಿಕೊಂಡರೂ
ಪ್ರೀತಿ ಸಮಾಧಿಯಲ್ಲಿ ಚಿಗುರಲಾರಂಭಿಸಿದೆ ಎಂಬುವುದು
ಅವಳಿಗೆ ಕಾಣಲಿಲ್ಲ.
ಸಮಾಧಿಯನ್ನು ಮುಚ್ಚಿದ ಕಲ್ಲು
ನಮ್ಮ ಅವಿಶ್ವಾಸದ ಪ್ರತೀಕ;
ತೆರೆದಿದ್ದರೂ ಸಮಾಧಿ ಬಾಗಿಲಿಗೆ ಮುಚ್ಚಲಾಗಿದ್ದ ಕಲ್ಲು
ಅವಳಿಗೆ ಕಾಣಲಿಲ್ಲ ಏಕೆ?
ಅವಳ ಎದೆಯ ಬಾಗಿಲಿಗೆ ಮುಚ್ಚಿದ ಕಲ್ಲು
ಇನ್ನೂ ತೆರೆದುಕೊಂಡಿರಲಿಲ್ಲ!
‘ವಿಶ್ವಾಸ’ ಎಂದೂ ಸುಲಭದ ಮಾತಲ್ಲ
ಕತ್ತಲೆ, ಸಮಾಧಿ ಎಲ್ಲವೂ
ವಿಶ್ವಾಸದ ವಿರುದ್ಧ ಎದೆಯುಬ್ಬಿಸಿ ಸಾಕ್ಷಿಗೆ ನಿಂತಿರುವಾಗ
ಆತನ ಪ್ರೀತಿಯ ಶಕ್ತಿಯನ್ನು
ನಂಬುವುದು ಸುಲ್ಲಭವೇ?
ಹೌದು ಅವಳು ಸಮಾಧಿಬಿಟ್ಟು
ಓಡಿ ಹೋದಳು.
ನಾವು ಕೂಡ
ಸಾಕ್ಷಿಸಿಗದ ನೂರಾರು ಸತ್ಯಗಳನ್ನು ಅರಗಿಸಿಕೊಳ್ಳಲಾಗದೆ
ಆಗಾಗ ಅವುಗಳಿಂದ ಓಡಿ
ಹೋಗುವುದಿಲ್ಲವೇ?
ಅವೆಲ್ಲವನ್ನು ಒಟ್ಟುಮಾಡಿ ನೋಡಿದರೆ
ಅವೆಲ್ಲವೂ
ಅವಿಶ್ವಾಸದಿಂದ ನಾವು ಸಮಾಧಿ ಬಿಟ್ಟು
ದೂರ ದೂರ ಓಡಿದ ಓಟವೇ!!!
**********
No comments:
Post a Comment