Saturday, 4 April 2020

ರಾಖೇಲ

-------------------------
ದೀಪ್ತಿ ಫ್ರಾನ್ಸಿಸ್ಕಾ, ಯಡವನಹಳ್ಳಿ
---------------------
ಮನೆಯ ತುಂಬಾ ಮಕ್ಕಳನ್ನು ಹಡದÀ ತಾಯಿಯಾಗಿ, ಪ್ರೀತಿಯಿಲ್ಲದೆ ಇರುವುದಕ್ಕಿಂತ ಸಿಗುತ್ತಿರುವ ಪ್ರೀತಿಯಲ್ಲೇ ತೃಪ್ತಿ ಪಡುವುದು ಉತ್ತಮವಿತ್ತೇ? ಈ ಪ್ರಶ್ನೆ ರಾಖೇಲಳ ಮನದ ಬಾಗಿಲನ್ನು ಬಲವಾದ ಗಾಳಿಯಂತೆ ತಟ್ಟುತ್ತಿತ್ತು. ಲೇಯಳು ತನ್ನ ನಾಲ್ಕನೇ ಮಗನಾದ ಯೆಹೂದನಿಗೆ ಆಗಷ್ಟೇ ಜನ್ಮ ನೀಡಿದ್ದಳು. ಆ ಉತ್ಸಾಹದಲ್ಲಿ ‘ನಾನು ಈಗ ಸರ್ವೇಶ್ವರ ಸ್ವಾಮಿಯ ಸ್ತುತಿ ಮಾಡುತ್ತೇನೆ’ ಎಂದು ಹೇಳಿದಳು. ಅವಳ ಚೊಚ್ಚಲ ಮಗ ರೂಬೆನ್ ಎಂದರೆ ‘ನೋಡಿ, ಒಬ್ಬ ಮಗ’, ಸಿಮೆಯೋನ್ ಎಂದರೆ ‘ಆಲಿಸುವವನು’ ಮತ್ತು ಲೇವಿ ಎಂದರೆ ‘ಹೊಂದಿಕೊಂಡವನು’ ಎಂದು ಯಾಕೋಬನು ಇನ್ನು ಹೊಂದಿಕೊಂಡು ಜೊತೆಯಾಗಿರುವಂತೆ ನೆನಿಸಿ ತನ್ನ ಮಕ್ಕಳಿಗೆ ಹೆಸರಿಸಿದಳು. ರಾಖೇಲಳ ಬಂಜೆತನವನ್ನು ಒತ್ತಿ ಹೇಳುವ ರೀತಿಯಲ್ಲಿ ತನ್ನ ಸಹೋದರಿ ತನ್ನ ಮಕ್ಕಳನ್ನು ಹೆಸರಿಸುವ ಪರಿ ರಾಖೇಲಳನ್ನು ಹಿಂಡುತ್ತಿತ್ತು.
ಲೇಯಳು ತನ್ನ ತಂದೆಯ ಮೋಸದಿಂದ ಯಾಕೋಬನ ಹೆಂಡತಿಯಾಗಿದ್ದಳು. ಆದರೆ ರಾಖೇಲಳು ಹರಾನಿನ ಹೊರಗೆ ಯಾಕೋಬನೊಂದಿಗೆ ಮೊದಲ ಭೇಟಿಯಾದಾಗಿನಿಂದ ಆತನ ಪ್ರೀತಿಯನ್ನು ಸೆರೆ ಹಿಡಿದಿದ್ದಳು. ಪ್ರತಿ ಸ್ಪರ್ಶವು ಅವನ ಒಲವನ್ನು ತೋರುತ್ತಿತ್ತು. ಆ ಒಲವಿನಿಂದ ಸುಖವಿತ್ತು ಹೊರತು ಮಕ್ಕಳನ್ನು ಪಡೆಯಲಾಗಲಿಲ್ಲ. ಅವಳ ಅತ್ತೆ ರೆಬೆಕ್ಕಾಳು ಈಸಾಕನ ಏಕೈಕ ಅಚ್ಚುಮೆಚ್ಚಿನ ಹೆಂಡತಿಯಾಗಿದ್ದಂತೆ ರಾಖೇಲಳು ಸಹ ಯಾಕೋಬನ ಹೆಂಡತಿಯಾಗಿರಬಹುದಿತ್ತು.
ಲಾಬಾನನು ತನ್ನ ಸೋದರಳಿಯ ಯಾಕೋಬನಿಗೆ ತನ್ನಲ್ಲಿ ಏಳು ವರ್ಷ ಕೆಲಸ ಮಾಡಿದರೆ, ರಾಖೇಲಳನ್ನು ತನಗೆ ನೀಡುವುದಾಗಿ ಭರವಸೆ ಕೊಟ್ಟಿದ್ದನು. ಕಾಯಲು ಏಳು ವರ್ಷ ಬಹು ಸಮಯವಾಗಿತ್ತು ಆದರೂ ಯಾಕೋಬನು ಅದನ್ನು ಒಳ್ಳೆಯ ಚೌಕಾಶಿ ಎಂದು ಭಾವಿಸಿದನು. ಅದು ರಾಖೇಲಳು ಯಾಕೋಬನನ್ನು ಹೆಚ್ಚು ಪ್ರೀತಿಸುವಂತೆ ಮಾಡಿತು. ಆದರೆ ಮದುವೆಯ ದಿನ ಸಮೀಪಿಸುತ್ತಿದ್ದಂತೆ ಲಬಾನನು ಯಾಕೋಬನಿಂದ ಇನ್ನೂ ಏಳು ವರ್ಷ ಶ್ರಮವನ್ನು ಮೋಸಗೊಳಿಸುವ ಯೋಜನೆಯನ್ನು ರೂಪಿಸಿದನು. ಲಾಬಾನನು ಲೇಯಳಿಗೆ ರಾಖೇಲಳ ಮದುವೆಯ ಉಡುಪನ್ನು ಧರಿಸಲು ಆದೇಶಿಸಿದ ಕ್ಷಣವೇ ರಾಖೇಲಳ ಸಂತೋಷದ ದಿನ ವಿಲೀನವಾಯಿತು. ಏಳು ವರ್ಷ ಮುಗಿದ ಆ ದಿನ ರಾತ್ರಿ ಲೇಯಳನ್ನು ಮರೆಮಾಚಿ ಯಾಕೋಬನ ಗುಡಾರಕ್ಕೆ ಕರೆದೊಯ್ದನು. ಇಬ್ಬರೂ ಒಟ್ಟಿಗೆ ಗಂಡಹೆಂಡತಿಯಂತೆ ಕೂಡಿದರು. ಗುಡಾರದ ನೆಲದ ಮೇಲೆ ಮುಂಜಾವಿನ ಬೆಳಕು ಹರಿಯುತ್ತಿದ್ದಂತೆ ಯಾಕೋಬನು ರಾಖೇಲಳನ್ನು ಹುಡುಕಾಡುತ್ತಾನೆ, ಆದರೆ ಅಲ್ಲಿದ್ದವಳು ಲೇಯಳು. ಲಬಾನನ ವಿಶ್ವಾಸಘಾತುಕತನ ಅವನನ್ನು ಮರಗಟ್ಟಿಸಿತು. ಅದು ನಂಬಿಕೆಗೆ ಮೀರಿದ್ದು ಆದರೂ ಪುನರ್ವಿಮರ್ಶೆ ಮತ್ತು ಕಣ್ಣೀರಿನ ಹೊರತಾಗಿ ಆ ಮದುವೆಯನ್ನು ಒಪ್ಪಲೇಬೇಕಾಯಿತು.
ಆದರೆ ರಾಖೇಲಳು ವಂಚಿತಳಾಗಿ ಆಶೀರ್ವಾದವನ್ನು ಕಳೆದುಕೊಂಡಿದ್ದಳು. ಲಬಾನನ ಕುಯುಕ್ತಿ ಯೋಜನೆ ಇನ್ನೂ ಮುಗಿದಿರಲಿಲ್ಲ. ರಾಖೇಲಳನ್ನು ಮುಂದಿಟ್ಟುಕೊಂಡು, ಮದುವೆಯ ಒಂದು ವಾರ ಕಳೆಯುತ್ತಿದ್ದಂತೆ ಇನ್ನೂ ಏಳು ವರ್ಷ ಅವನಲ್ಲಿ ದುಡಿದರೆ ಆ ದುಡಿಮೆಗೆ ಪ್ರತಿಯಾಗಿ ರಾಖೇಲಳನ್ನು ತನಗೊಪ್ಪಿಸುತ್ತಾನೆಂದು ಮತ್ತೆ ಚೌಕಾಶಿ ಒಡ್ಡಿದನು. ಈಗ ಇಬ್ಬರು ಸೋದರಿಯರು ಅಸಮಾಧಾನದಿಂದ ಒಟ್ಟಿಗೆ ವಾಸಿಸುತ್ತಿದ್ದರು. ಯಾಕೋಬನ ಎರಡನೇ ಹೆಂಡತಿ ಇನ್ನೂ ಮೋಸಹೋಗುತ್ತಿದ್ದಾಳೆ ಎಂಬುದು ಲೇಯಳ ಮಕ್ಕಳ ವಿಜ್ಞಾಪನೆ. ಯಾಕೋಬನೇ ದೇವರ ಸ್ಥಾನದಲ್ಲಿ ನಿಂತು ರಾಖೇಲಳ ಮಡಿಲು ತುಂಬುತ್ತಾನೆಂಬಂತೆ, ರಾಖೇಲಳು ತನ್ನ ಅಕ್ಕನ ಮೇಲಿನ ಹೊಟ್ಟೆಕಿಚ್ಚಿನಿಂದ,  "ನನಗೆ ಮಕ್ಕಳನ್ನು ಕೊಡು; ಇಲ್ಲದಿದ್ದರೆ ಸಾಯುತ್ತೇನೆ" ಎಂದು ಚೀರಿದಳು. ಆ ಕಾರಣಕ್ಕೆ ತನ್ನ ಸೇವಕಿಯಾದ ಬಿಲ್ಹಾಳನ್ನು ಯಾಕೋಬನೊಂದಿಗೆ ಕೂಡಿಸಿ ಅವಳಿಂದ ಎರಡು ಗಂಡು ಮಕ್ಕಳನ್ನು ಪಡೆದಳು. ಎರಡನೆಯ ಮಗನಾದ ನಫ್ತಾಲಿ ಜನಿಸಿದಾಗ ಕೇಳಿಸಿಕೊಳ್ಳುವವರಿಗೆ "ನನ್ನ ಅಕ್ಕನ ಸಂಗಡ ಬಹಳವಾಗಿ ಹೋರಾಡಿ  ಗೆದ್ದಿದ್ದೇನೆ" ಎಂದು ಹಾರಾಡಿದಳು. ಆದರೆ ರಾಖೇಲಳ ಹಾಗೂ ಲೇಯಳ ನಡುವೆ ಕಿತ್ತಾಟ ಇನ್ನೂ ಮುಗಿದಿರಲಿಲ್ಲ. ಲೇಯಳು ಸಹ ತನ್ನ ದಾಸಿಯ ಮುಖೇನ ಇನ್ನೆರಡು ಮಕ್ಕಳನ್ನು ಪಡೆದಳು. ಲೇಯಳ ರಾಖೇಲಳೊಂದಿಗೆ ಹಣ್ಣುಗಳ ಚೌಕಾಶಿ ಎಸಗಿ ಯಾಕೋಬನನ್ನು ಕೊಂಡುಕೊಂಡಳು. ಲೇಯಳು ಅದರೊಂದಿಗೆ ಐದನೇ ಮಗುವಿಗೆ ಜನ್ಮವಿತ್ತಳು. ಮತ್ತೇ ಗರ್ಭಧರಿಸಿ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿಗೆ ಜನ್ಮವೀಯುತ್ತಾಳೆ.
ರಾಖೇಲಳು ತನ್ನದೇ ಆದ ಮಗುವಿಗೆ ಜನ್ಮವಿತ್ತಾಗ ಅವಳ ಜೀವನದ ಕಹಿ ಕಡಿಮೆಯಾಗಿ, ಆ ಮಗುವಿಗೆ ಜೋಸೆಫ್ ಎಂದು ಹೆಸರಿಟ್ಟಳು. ಇದರ ಅರ್ಥ "ಅವನು ಸೇರಿಸಲಿ", ಇದು ದೇವರು ತನ್ನ ಸಾಲಿಗೆ ಮತ್ತೊಂದು ಮಗುವನ್ನು ಸೇರಿಸಲಿ ಎಂಬ ಕಳಕಳಿಯ ಪ್ರಾರ್ಥನೆಯಾಗಿತ್ತು. ಒಂದು ದಿನ ದೇವರು ಯಾಕೋಬನೊಂದಿಗೆ ಮಾತನಾಡಿ, ಅವನ ತಂದೆಯಾದ ಈಸಾಕನ ನಾಡಿಗೆ ಹಿಂತಿರುಗುವಂತೆ ಹೇಳಿದರು. ಇಪ್ಪತ್ತು ವರ್ಷಗಳ ಹಿಂದೆ, ಯಾಕೋಬನು ಏಸಾವನಿಂದ ಆಶೀರ್ವಾದವನ್ನು ಕಸಿದುಕೊಂಡು ಅವನ ಕೊಲೆ ಕೋಪದಿಂದ ಪಾರಾಗಿದ್ದನು. ಈ ದೀರ್ಘ ವರ್ಷಗಳು ಅವನಿಗೆ ಎರಡು ಪಟ್ಟು ಹಿಂತಿರುಗಿಸಿದೆಯಾ? ಲಬಾನನ ವಿಶ್ವಾಸಘಾತುಕತನದಿಂದ ರಾಖೇಲ ಮತ್ತು ಲೇಯಳ ನಡುವಿನ ಕಿತ್ತಾಟ ಅವನಿಗೆ ಅವನ ಮತ್ತು ಅವನ ಸಹೋದರನ ನಡುವಿನ ಹೋರಾಟ ನೆನಪಿಸಿತು. ದೇವರಿಗೆ ಹಾಗೂ ಏಸಾವನಿಗೆ ಇದು ಸರಿ ಎನಿಸಿತೇ? ತನ್ನ ಸಹೋದರನೊಂದಿಗಿನ ಈ ವಿಷಯದಲ್ಲಿ ದೇವರು ಮಾತ್ರ ಯಾಕೋಬನನ್ನು ರಕ್ಷಿಸಬಲ್ಲರು.
ಅಲ್ಲಿಂದ ಹೊರಡಲು ಯಾಕೋಬನು ತನ್ನ ಹಿಂಡುಗಳನ್ನು, ಸೇವಕರನ್ನು, ಮಕ್ಕಳನ್ನು ಒಟ್ಟುಗೂಡಿಸುತ್ತಿರುವಾಗ ರಾಖೇಲಳು ತನ್ನ ತಂದೆಯ ಮನೆಯ ದೇವರುಗಳ ಸಣ್ಣ ವಿಗ್ರಹಗಳನ್ನು ಸಮೃದ್ಧಿ ಹೊಂದುವ ಸಲುವಾಗಿ ಕದ್ದೊಯ್ದಳು. ರಸ್ತೆಯಲ್ಲಿ ಹತ್ತು ದಿನಗಳ ನಂತರ ಲಬಾನನು ತನ್ನ ಅಳಿಯನ ಮೇಲೆ ಕಳ್ಳತನದ ಆರೋಪ ಹೊರಿಸಿ ಗಿಲ್ಯಾದಿನ ಗುಡ್ಡ ಪ್ರದೇಶದಲ್ಲಿ ಅಡ್ಡಹಾಕಿದನು. ರಾಖೇಲಳ ವಂಚನೆಯನ್ನು ಅರಿಯದ ಯಾಕೋಬನು ತನ್ನ ಸೈನ್ಯವನ್ನು ಪರಿಶೀಲಿಸಿಕೊಳ್ಳಲು ಹೇಳಿ, ಅವರಲ್ಲಿ ಯಾರಲ್ಲಾದರೂ ವಿಗ್ರಹಗಳು ಪತ್ತೆಯಾದಲ್ಲಿ ಅವರನ್ನು ಕೊಲ್ಲುವುದಾಗಿ ಭರವಸೆ ನೀಡಿದನು. ತನ್ನ ವಂಚಕ ತಂದೆಯಿಂದ ಒಂದೆರಡು ವಂಚನೆಗಳನ್ನು ಕಲಿತಿದ್ದ ರಾಖೇಲಳು ವಿಗ್ರಹಗಳನ್ನು ತನ್ನಡಿಗೆ ಹಾಕಿ ಅದರ ಮೇಲೆ ಕುಳಿತಳು. ಲಬಾನನು ಅವಳ ಗುಡಾರವನ್ನು ಪ್ರವೇಶಿಸಿದಾಗ ಮಹಿಳೆಯ ಅಸಭ್ಯ ರೀತಿಯಲ್ಲಿ ಅವನನ್ನು ಸ್ವಾಗತಿಸಿ, "ಒಡೆಯ ಕೋಪಗೊಳ್ಳಬೇಡಿ; ನೀವಿರುವಾಗ ನಾನು ಎದ್ದು ನಿಲ್ಲಲಾರೆ, ಏಕೆಂದರೆ ನಾನು ಮುಟ್ಟಿನಲ್ಲಿದ್ದೇನೆ" ಎಂದಳು. ಯಾಕೋಬನು ತನ್ನ ತಂದೆಯನ್ನು ಮೋಸಗೊಳಿಸಿದಂತೆ ರಾಖೇಲಳ ತಂತ್ರ ಕೆಲಸ ಮಾಡುತ್ತಿದ್ದಂತೆ ಲಾಬಾನನು ಹುಡುಕಾಟವನ್ನು ಕೈಬಿಟ್ಟನು. ನಂತರ, ಹಳೆಯ ವಿಗ್ರಹಗಳೆಲ್ಲವನ್ನೂ ತನ್ನ ಮನೆಯಿಂದ ಶುದ್ಧೀಕರಿಸುವಂತೆ ಯಾಕೋಬನು ಆದೇಶಿಸಿದನು.
ಅವರು ಮರುಭೂಮಿಯಲ್ಲಿ ಸಾಗುತ್ತಿದ್ದಂತೆ ಯಾಕೋಬನು ಏಸಾವನನ್ನು ಎದುರುಗೊಂಡು ಅವರಿಬ್ಬರು ರಾಜಿ ಮಾಡಿಕೊಳ್ಳುತ್ತಾರೆ. ರಾಖೇಲಳ ಅನೇಕ ಪ್ರಾರ್ಥನೆಗಳಿಗೆ ಅನುಗುಣವಾಗಿ ದೊರೆತ ಎರಡನೇ ಮಗುವಿಗೆ ಜನ್ಮ ನೀಡಲು ಅವಳು ಹೆಣಗಾಡಿದಾಗ ಅವರಿಗೆ ದುರಂತವೆನಿಸಿತು. ವಿಪರ್ಯಾಸವೆಂದರೆ, ಹಿಂದೊಮ್ಮೆ ತಾನು ಮಕ್ಕಳನ್ನು ಹೊಂದಿಲ್ಲದಿದ್ದರೆ ಸಾಯುತ್ತೇನೆಂದು ಹೇಳಿದ ಮಹಿಳೆ ಈಗ ಮಗುವಿನ ಕಾರಣದಿಂದಾಗಿ ಸಾಯುತ್ತಿದ್ದಾಳೆ. " ಅವನು ಬೆನ್-ಓನಿ, ನನ್ನ ಬಾದಕ ಮಗ" ಎಂಬ ರಾಖೇಲಳ ಕೊನೆಯ ಮಾತುಗಳು, ಆ ಮಗನ ಜನನದ ಸಮಯದಲ್ಲಿ ಅವಳ ದುಃಖವನ್ನು ಸೆರೆಹಿಡಿಯುತ್ತದೆ. ಆದರೆ ಯಾಕೋಬನು ಆ ಮಗುವನ್ನು ತನ್ನ ತೋಳುಗಳಲ್ಲಿ ತೆಗೆದುಕೊಂಡು ತಂದೆಯ ಮಮತೆಯೊಂದಿಗೆ ಅವನಿಗೆ " ಬೆಂಜಮಿನ್" ಎಂದರೆ "ನನ್ನ ಬಲಗೈ ಮಗ" ಎಂದು ಮರುನಾಮಕರಣ ಮಾಡಿದನು.
ತನ್ನ ಗಂಡನಂತೆ, ರೂಪವತಿ ರಾಖೇಲಳು ಸಹ ತಂತ್ರಗಳನ್ನು ಹೂಡುವವಳು ಮತ್ತು ತಂತ್ರಗಳಿಗೆ ಸಿಲುಕಿದವಳಾಗಿದ್ದಳು. ತನ್ನ ಸ್ವಂತ ತಂದೆಯಿಂದ ವಂಚನೆಗೊಳಗಾಗಿ, ತನ್ನ ಸೋದರಿಯೊಂದಿಗಿನ ಹೋರಾಟದಲ್ಲಿ ತನ್ನ ಮಕ್ಕಳನ್ನು ಆಯುಧಗಳಂತೆ ನೋಡಿದಳು. ಆಗಾಗ್ಗೆ ನಡೆದ ಈ ಘಟನೆಗಳು ವಿಶ್ವಾಸಘಾತುಕತನ ಮತ್ತು ಸ್ಪರ್ಧೆಯ ಪಾಠವನ್ನು ಪೀಳಿಗೆಯಿಂದ ಪೀಳಿಗೆಗೆ ರವಾನಿಸಿತು. ಇದರ ಪರಿಣಾಮವನ್ನು ರಾಖೇಲಳ ಸ್ವಂತ ಮಗ ಜೋಸೆಫನು ಅನುಭವಿಸಬೇಕಾಯಿತು. ಅವನ ಸಹೋದರರಾದ ಲೇಯಳ ಮಕ್ಕಳು ಅವನನ್ನು ಗುಲಾಮಗಿರಿಗೆ ಮಾರಿದರು.
ಇಷ್ಟೆಲ್ಲಾ ಆದರೂ ದೇವರು ನಂಬಿಗಸ್ತರಾಗಿರುತ್ತಾರೆ. ಗಮನಾರ್ಹ ತಿರುವುಗಳೇನೆಂದರೇ ರಾಖೇಲಳ ಚೊಚ್ಚಲ ಮಗ ಜೋಸೆಫನು ಮುಂದೊಂದು ದಿನ ಈಜಿಪ್ಟ್ ಪ್ರದೇಶವನ್ನು ಆಳುತ್ತಾನೆ, ತನ್ನ ತಂದೆ ಮತ್ತು ಸಹೋದರರಿಗೆ ಬರಗಾಲದಲ್ಲಿ ಆಶ್ರಯ ನೀಡುತ್ತಾನೆ. ಹಂತ ಹಂತವಾಗಿ ಊಹಿಸಲಾಗದ ರೀತಿಯಲ್ಲಿ ವಿಭಾಗಗಳನ್ನು ಗುಣಪಡಿಸುವ, ಶ್ರಮವನ್ನು ಕೊನೆಗೊಳಿಸುವ ಮತ್ತು ಭರವಸೆಯನ್ನು ಪುನಃಸ್ಥಾಪಿಸುವ   ಯೋಜನೆಯನ್ನು ದೇವರು ತೆರೆದುಕೊಂಡಿದ್ದರು. ಮಿಶ್ರ ಉದ್ದೇಶಗಳು ಮತ್ತು ಗೊಂದಲಮಯ ಆಸೆಗಳ ಹೊಂದಿದ್ದ ಜನರನ್ನು (ಅಲ್ಲಿರುವ ಒಂದು ತರದ ಜನರನ್ನು) ಬಳಸುತ್ತಾ, ದೇವರು ತಮ್ಮ ಅನುಗ್ರಹ ಮತ್ತು ಕರುಣೆಯನ್ನು ಭರವಸೆಗೆÉ ಪೆಟ್ಟುಕೊಡದೆ ಬಹಿರಂಗಪಡಿಸಿದ್ದರು.
**********

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...