- ಎಫ್.ಎಂ.ನಂದಗಾವ್
ಅನಿರೀಕ್ಷಿತವಾಗಿ ಬರಸಿಡಿಲಿನಂತೆ ಬಂದೆರಗುವ ನೈಸರ್ಗಿಕ ವಿಕೋಪಗಳಾದ ಬರಗಾಲವಿರಲಿ, ನೆರೆ ಬರಲಿ, ಭೂ ಕುಸಿತಗಳಾಗಲಿ, ಆಡಳಿತಾತ್ಮಕ ನಿರ್ಧಾರಗಳಾದ ನೋಟು ರದ್ದತಿಯಂಥ ಆರ್ಥಿಕ ವ್ಯವಸ್ಥೆಯಲ್ಲಿನ ಏರಿಳಿತಗಳಾಗಲಿ, ಏನೇ ಆದರೂ ಅಂತಿಮವಾಗಿ ತೊಂದರೆಗೆ ಒಳಗಾಗುವವರು ಸಾಮಾನ್ಯ ಜನರು ಮತ್ತು ಬಡಜನರು ಮಾತ್ರ. ಇಂದು ವಿಶ್ವವ್ಯಾಪಿ ಹರಡುತ್ತಿರುವ ಕೊವಿಡ್-19 ಕಾಯಿಲೆಯ ಅಡ್ಡ ಪರಿಣಾಮಗಳನ್ನು ಎದುರಿಸಿ ಕಷ್ಟಕ್ಕೀಡಾಗುತ್ತಿರುವವರು ಮತ್ತೇ ಅದೇ ಜನ ಸಾಮಾನ್ಯರು, ಬಡಜನರು, ಕೂಲಿ ಕಾರ್ಮಿಕರು.
ನಮ್ಮ ನೆರೆಯ ರಾಷ್ಟ್ರ ಚೀನಾದಲ್ಲಿ 2019ರ ಸಾಲಿನಲ್ಲಿ ಕೊನೆಯಲ್ಲಿ ಕಾಣಿಸಿಕೊಂಡ (2019ರ ಸಾಲಿನ ಕೊರೋನಾ ವೈರಸ್ ಡಿಸಿಜ್) ಕೊವಿಡ್ 19 ರೋಗಕ್ಕೆ ಕಾರಣವಾಗಿರುವ ಕೊರೋನಾ ವೈರಾಣು 2020ರ ಸಾಲಿನ ಜನವರಿ ತಿಂಗಳಲ್ಲಿ ಅಲ್ಲಿನ ಆರ್ಥಿಕತೆಗೆ, ಸಾಮಾಜಿಕ ಬದುಕಿಗೆ ಕಿಚ್ಚು ಹಾಕಿತ್ತು. ಈಗ ಚೀನಾ ಅದನ್ನು ಮೆಟ್ಟಿ, ಕೊಡವಿಕೊಂಡು ಮತ್ತೆ ಸ್ಥಿರವಾಗಿ ನಿಲ್ಲತೊಡಗಿದ್ದು ನಮ್ಮ ಕಾಲದ ಐತಿಹಾಸಿಕ ಚೋದ್ಯ.
ಇಂಗ್ಲಿಷ್‍ನಲ್ಲಿ ಕೊರೋನ ಎಂದರೆ, ಸೂರ್ಯ ಅಥವಾ ಚಂದ್ರನ ಸುತ್ತಲೂ ಇರುವ ಕಿರಿದಾದ ಪ್ರಭಾವಲಯ. ಅದಕ್ಕೆ ವೃತ್ತಾಕಾರದ ಗೊಂಚಲು ದೀಪ, ಪುಷ್ಪದಳ ವೃತ್ತದೊಳಗಿನ ಉಪಾಂಗ - ಬೀಜ ಮುಕುಟ, ಪುಷ್ಪ ಮುಕುಟ ಎಂಬ ಅರ್ಥಗಳೂ ಉಂಟು. ಕೊರೋನೆಷನ- ನಾಮವಾಚಕ ಪದವಾಗಿ ಬಳಸಿದಾಗ (ರಾಜ/ ರಾಣಿಯ) ಕಿರೀಟಧಾರಣೋತ್ಸವ, ಪಟ್ಟಾಭಿಷೇಕ ಎಂದು ಅರ್ಥೈಸಲಾಗುತ್ತದೆ. ಕೊರೋನಾ ವೈರಾಣುವಿನ ಕಣಗಳು ದುಂಡಗಿದ್ದು, ಅವುಗಳ ಹೊರ ಮೈ ಮೇಲೆ ನಾಯಿಕೊಡೆಗಳಂಥ ಮುಳ್ಳುಗಳ ರಚನೆಯಿದ್ದು, ಅದು ಕಿರೀಟದಂತೆ ಭಾಸವಾಗುತ್ತಿರುವುದರಿಂದ ಈ ವೈರಾಣುವಿಗೆ ಈ ಕೊರೋನಾ ಎಂಬ ಹೆಸರು ಪ್ರಾಪ್ತವಾಗಿದೆ.
ಒಂದು ವಿಶೇಷ ಕಾಲದಲ್ಲಿ ಅಥವಾ ಸಮಯದಲ್ಲಿ ನಿಗದಿತ ಪ್ರದೇಶದಲ್ಲಿ ನೆಲೆಸಿರುವ ಜನ ಸಮುದಾಯಗಳಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುವ ಕಾಲರಾದಂಥ ರೋಗಗಳನ್ನು ಸಾಂಕ್ರಾಮಿಕ (ಎಪಿಡೆಮಿಕ) ರೋಗ ಎಂದು ಗುರುತಿಸಿದರೆ, ಈ ಕೊವಿಡ್-19 ರೋಗವನ್ನು ಪ್ರಪಂಚದಲ್ಲೆಲ್ಲಾ ಹರಡಿರುವ ವ್ಯಾಧಿ, ವಿಶ್ವವ್ಯಾಪಿ ರೋಗ (ಪ್ಯಾಂಡೆಮಿಕ್) ಎಂದು ಗುರುತಿಸಲಾಗುತ್ತಿದೆ.
ಏಕೆಂದರೆ, ಈಗ ಕೊವಿಡ್ 19 ಹೆಸರಿನ ಈ ರೋಗ, ತನ್ನ ಕಬಂಧ ಬಾಹುಗಳನ್ನು ಜಗತ್ತಿನ ಸಕಲ ದಿಕ್ಕುಗಳಿಗೂ ಹರಡುತ್ತಾ ಮನುಕುಲವನ್ನು ಹೈರಾಣ ಮಾಡುತ್ತಿದೆ. ಸಾಂಕ್ರಾಮಿಕ (ಎಪಿಡೆಮಿಕ್) ರೋಗ ಲಕ್ಷಣಗಳನ್ನು ಮೀರಿ ವಿಶ್ವವನ್ನೇ ಆಪೋಷನ ಮಾಡುತ್ತಿರುವ ಈ ರೋಗದ ಹರಡುವಿಕೆಯನ್ನು (ಈ ರೋಗಕ್ಕೆ ಕಾರಣವಾಗುವ ರೋಗಾಣು/ವೈರಾಣು ಹರಡುವುದನ್ನು) ತಡೆಗಟ್ಟಲು ವಿವಿಧ ದೇಶಗಳು ಚೀನಾದಂತೆಯೇ ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿವೆ. ಅಂಥದೇ ಕಠಿಣ ಕ್ರಮವಾಗಿ ಭಾರತವೂ ನಿಧಾನವಾಗಿ ಒಂದೊಂದಾಗಿ ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ.
ಸಂಪರ್ಕ ಸಾಧನಗಳ ಕ್ರಾಂತಿಯಿಂದಾಗಿ, ಕೊಡುಕೊಳ್ಳುವಿಕೆ ಹೆಚ್ಚಾಗಿ ಜಗತ್ತೇ ಒಂದು ಪುಟ್ಟ ಗ್ರಾಮದ ಮಟ್ಟಕ್ಕೆ ಇಳಿದ ಇಂದಿನ ಸಂದರ್ಭದಲ್ಲಿ, ಚೀನಾದಿಂದ ಮೊದಲುಗೊಂಡು ನಿಧಾನವಾಗಿ ಆಫ್ರಿಕಾ, ಯುರೋಪು ಖಂಡದಲ್ಲಿನ ವಿವಿಧ ದೇಶಗಳು, ಆಸ್ಟ್ರೇಲಿಯಾ ಮತ್ತು ಅಮೆರಿಕ ಸೇರಿದಂತೆ ಜಗತ್ತಿನ ನೂರಾಐವತ್ತಕ್ಕೂ ಅಧಿಕ ದೇಶಗಳಲ್ಲಿ ಈ ವೈರಾಣು ರುದ್ರ ನರ್ತನ ಆರಂಭಿಸಿದೆ. ವಿದೇಶಗಳಿಗೆ ಹೋಗಿ ರಾಜ್ಯಕ್ಕೆ ಹಿಂದಿರುಗಿದ ಕುಟುಂಬಗಳ ಸದಸ್ಯರಲ್ಲಿನ ಕೆಲವರಲ್ಲಿ ಕೋವಿಡ್ 19 ಪೀಡಿತರ ಲಕ್ಷಣಗಳು ಬೆಳಕಿಗೆ ಬಂದು, ರಾಜ್ಯದಲ್ಲಿ ಆ ರೋಗ ಪೀಡಿತರ ಅಸ್ತಿತ್ವಕ್ಕೆ ರುಜುವಾತು ಸಿಗುತ್ತಿದ್ದಂತೆಯೇ, ಸರ್ಕಾರವು ಮಾರ್ಚ್ 14 ಶನಿವಾರದಿಂದ ಒಂದು ವಾರ ಕಾಲ ಸಾರ್ವಜನಿಕ ಸಭೆ, ಸಮಾರಂಭ, ಜನ ನೆರೆಯುವ ಖಾಸಗಿ ಕಾರ್ಯಕ್ರಮಗಳನ್ನು ರದ್ದು ಪಡಿಸಿತು, ಶಾಲೆಕಾಲೇಜುಗಳಿಗೆ ರಜೆ ಘೋಷಿಸಿತು. ಒಂದು ಬಗೆಯಲ್ಲಿ ತುರ್ತು ಪರಿಸ್ಥಿತಿ ಹೇರಿದಂತಾಗಿತ್ತು. ದಿನಕಳೆದಂತೆ ನಿರ್ಬಂಧ ಅಷ್ಟಕ್ಕೇ ನಿಲ್ಲಲಿಲ್ಲ. ಅದರ ವ್ಯಾಪ್ತಿ ಮತ್ತಷ್ಟು ಹೆಚ್ಚಾಗುತ್ತಾ ಹೋಯಿತು.
ಆತಂಕದ ಸಂಗತಿ ಏನೆಂದರೆ, ಕೊವಿಡ್- 19 ರೋಗ ಪೀಡಿತರಲ್ಲಿ ರೋಗ ತಗುಲಿ 14 ದಿನಗಳು ಕಳೆದ ನಂತರವೇ ಅದರ ಲಕ್ಷಣಗಳು ಗೋಚರಿಸುತ್ತವೆ. ರೋಗ ತಗುಲಿಸಿಕೊಂಡ ವ್ಯಕ್ತಿಯು, ಈ 14 ದಿನಗಳ ವರೆಗೆ ತನ್ನ ಸಂಪರ್ಕಕ್ಕೆ ಬರುವವರಿಗೆಲ್ಲಾ ತನಗರಿವಿಲ್ಲದೇ ತನಗಂಟಿಕೊಂಡಿರುವ ವೈರಾಣುಗಳನ್ನು ಸಾಗಿಸುತ್ತಿರುತ್ತಾನೆ! ಅಂಥವರನ್ನು ಶಾಂತ ವಾಹಕರು (ಸೈಲೆಂಟ್ ಕ್ಯಾರಿಯರ್ಸ್) ಎಂದು ಗುರುತಿಸಲಾಗುತ್ತದೆ. ಅಂಥವರ ಇರುವಿಕೆಯನ್ನು ಗುರುತಿಸುವುದು ಕಷ್ಟದಾಯಕ ಕೆಲಸ.
ಈ ರೋಗ ಹರಡುವ ವೈರಾಣುವಿನ ಗುಣಲಕ್ಷಣಗಳ ಆಧಾರದ ಮೇಲೆ ಕೋವಿಡ್ -19 ಹರಡುವ ಕ್ರಮವನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ ಬೆರಳೆಣಿಕೆಯ ಕೆಲವರಲ್ಲಿ ಕಾಣಿಸಿಕೊಳ್ಳುವ ಈ ರೋಗ, ಎರಡನೇ ಹಂತದಲ್ಲಿ ರೋಗ ಪೀಡಿತರ ಸಂಪರ್ಕದಲ್ಲಿ ಬಂದವರಿಗೆ ರೋಗ ಹರಡತೊಡಗುತ್ತದೆ. ಮೂರನೇ ಹಂತ ತಲುಪುವುದೆಂದರೆ, ಅದು ಇಡೀ ಸಮುದಾಯಕ್ಕೆ ಹರಡಿಕೊಳ್ಳುವುದು. ಮೊದಲ ಹಂತದ ರೋಗ ತಡೆಗಟ್ಟುವ ದಿಸೆಯಲ್ಲಿ ಪ್ರಥಮ ಹೆಜ್ಜೆಯಾಗಿ ಮನೆಯಲ್ಲಿಯೇ ಪ್ರತ್ಯೇಕವಾಸದಲ್ಲಿ (ಹೋಮ್ ಕ್ವಾರೆಂಟೈನ್) ಇರುವಂತೆ ದೇಶದ (ರಾಜ್ಯದ)ಲ್ಲಿ ಮೊದಲ ಬಾರಿ ರೋಗಪೀಡಿತರು ಎಂದು ಗುರುತಿಸಲಾದವರಿಗೆ ಸಲಹೆ ನೀಡಲಾಯಿತು.
ವಿದೇಶದಿಂದ ರಾಜ್ಯಕ್ಕೆ ಹಿಂದಿರುಗಿದವರಲ್ಲಿ ಮತ್ತು ಅವರ ಸಂಪರ್ಕದಲ್ಲಿ ಬಂದವರಲ್ಲಿ ರೋಗ ಲಕ್ಷಣಗಳು ಗೋಚರಿಸತೊಡಗುತ್ತಿದ್ದಂತೆಯೇ ರಾಜ್ಯದಲ್ಲಿ ಕೋವಿಡ್-19 ಮೊದಲ ಎರಡು ಹಂತಗಳನ್ನು ದಾಟುತ್ತಿದೆ ಎಂಬ ಅನುಮಾನಗಳು ಬಂದವು. ತಕ್ಷಣ ರೈಲು, ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಕಡಿವಾಣ ಹಾಕಲಾಯಿತು. ನಂತರದ ಹಂತದಲ್ಲಿ ವಿಮಾನ ಸಂಚಾರವನ್ನೂ ಸ್ಥಗಿತಗೊಳಿಸಲಾಯಿತು. ರಾಜ್ಯದ ಗಡಿಯನ್ನು ಮುಚ್ಚಲಾಯಿತು.
ಕರ್ನಾಟಕಕ್ಕಿಂತ ದೇಶದ ಉಳಿದ ರಾಜ್ಯಗಳಲ್ಲಿನ ಸ್ಥಿತಿಯಲ್ಲಿ ಅಂಥ ವ್ಯತ್ಯಾಸವೇನೂ ಇರಲಿಲ್ಲ. ದೇಶದಲ್ಲಿನ ಈ ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡ ಪ್ರಧಾನಿ ಮೋದಿ ಅವರು, ರೋಗ ಹರಡುವುದನ್ನು ತಡೆಯುವ ಉದ್ದೇಶದ ಕ್ರಮವಾಗಿ ಭಾನುವಾರ ಮಾರ್ಚ್ 22 ರಂದು, `ಜನತೆ ಸ್ವಯಂ ಪ್ರೇರಣೆಯಿಂದ ನಿರ್ಬಂಧಗಳನ್ನು ಹೇರಿಕೊಂಡು ಮನೆಯಲ್ಲಿಯೇ ಇರಬೇಕು’ ಎಂದು ಸೂಚಿಸಿ ಅದಕ್ಕೆ `ಜನತಾ ಕರ್ಫ್ಯೂ’ ಎಂದು ಹೆಸರಿಸಿದರು. ಅದು ಬಹುತೇಕ ಯಶಸ್ಸು ಕಂಡಿತು.
ಆದರೆ, ರೋಗ ಪೀಡಿತರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವಂತೆಯೇ, ರೋಗ ಹರಡುವುದನ್ನು ತಡೆಯುವ ಉದ್ದೇಶದಿಂದ, ಮರುದಿನವೇ ರಾಜ್ಯದ 9 ಜಿಲ್ಲೆಗಳಲ್ಲಿ, ಮಾರ್ಚ್ 31ರವರೆಗೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಬಗೆಯ ವಾಣಿಜ್ಯ, ಕಟ್ಟಡ ನಿರ್ಮಾಣ, ಕೈಗಾರಿಕೆ, ಶೈಕ್ಷಣಿಕ, ಧಾರ್ಮಿಕ (ಜಾತ್ರೆ/ಉತ್ಸವ), ಸಾಮಾಜಿಕ (ಮದುವೆ, ಮುಂಜಿವೆ) ಸಮಾವೇಶ ಮೊದಲಾದ ಚಟುವಟಿಕೆಗಳಿಗೆ ಸಮಾರಂಭಗಳಿಗೆ ಕಟ್ಟುಪಾಡುಗಳನ್ನು ವಿಧಿಸುವ ವ್ಯವಸ್ಥೆಯ `ಲಾಕ್‍ಡೌನ್’ ಜಾರಿಗೊಳಿಸಲಾಯಿತು. ದೇವಸ್ಥಾನ, ಮಸೀದಿ, ಚರ್ಚು ಮೊದಲಾದ ಧಾರ್ಮಿಕ ಕೇಂದ್ರಗಳನ್ನು ಭಕ್ತಾದಿಗಳಿಗೆ ತೆರೆಯದಂತೆ ಸೂಚಿಸಲಾಯಿತು.
ನಂತರ 24ರಂದು ಕರ್ಫ್ಯೂ ಮಾದರಿಯ ನಿರ್ಬಂಧವನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲಾಯಿತು. ಅದೇ ದಿನ ರಾತ್ರಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ರಾತ್ರಿ ಹನ್ನೆರಡು ಗಂಟೆಯಿಂದಲೇ ಏಪ್ರಿಲ್ 14ರವರೆಗೆ ಜಾರಿಗೆ ಬರುವಂತೆ 21 ದಿನಗಳ ಕಾಲ ಇಡೀ ದೇಶಕ್ಕೆ `ಲಾಕ್ ಡೌನ್’ ಘೋಷಿಸಿ ಬಿಟ್ಟರು. ತುರ್ತು ಸೇವೆಯ ಸರ್ಕಾರಿ ಕಚೇರಿಗಳ, ವೈದ್ಯಕೀಯ ಸೇವೆ, ನೈರ್ಮಲ್ಯ, ಪೊಲೀಸ್, ಸೇನೆ ಮೊದಲಾದ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಚಟುವಟಿಕೆಗಳನ್ನು ಸ್ತಬ್ಧಗೊಂಡವು, ಪ್ರಧಾನಿ ಘೋಷಣೆಯ ಮರುದಿನ ಮಾರ್ಚ್ 25 ಚಾಂದ್ರಮಾನ ಯುಗಾದಿ ಹಬ್ಬದ ಆಚರಣೆ ಇತ್ತು.
ದೇಶದಲ್ಲಿರುವ 1.37 ಬಿಲಿಯನ್ ಜನರೆಲ್ಲಾ ಮನೆಗಳಲ್ಲೇ ಇರಬೇಕಾದ ಅನಿವಾರ್ಯತೆ ಮೂಡಿತು. ಏಕಾಏಕಿ ದೇಶದಲ್ಲಿನ ಎಲ್ಲಾ ಬಗೆಯ ಚಟುವಟಿಕೆಗಳು ನಿಂತುಹೋದವು.
ಅಗತ್ಯ ವಸ್ತುಗಳಿಗಾಗಿ ಮನೆ ಬಿಟ್ಟು ಹೊರಬರುವ ಜನ, ಪರಸ್ಪರರಲ್ಲಿ ರೋಗ ಹರಡುವುದನ್ನು ತಡೆಯುವ ಉದ್ದೇಶದಿಂದ, ಅವರು ಒಂದು ಕಡೆ ಜೊತೆ ನಿಂತಿದ್ದರೂ ಒಬ್ಬೊಬ್ಬರ ನಡುವೆ ಒಂದು ಮೀಟರ್ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಯಿತು. ಅದಕ್ಕಾಗಿ ಸಾಮಾಜಿಕ ಅಂತರ (ಸೋಷಿಯಲ್ ಡಿಸ್ಟನ್ಸಿಂಗ್) ಎಂಬ ಹೊಸ ಜೋಡಿ ಪದವೂ ಬಳಕೆಗೆ ಬಂದಿತು.
ಸಂಘಟಿತ ವಲಯದ ಕಾರ್ಮಿಕರು ಮತ್ತು ನೌಕರರಿಗೆ ಮನೆಯಲ್ಲಿದ್ದರೂ ಅವರ ಸಂಬಳಕ್ಕೆ ಕುತ್ತೇನು ಬಾರದು ಎಂಬ ಭರವಸೆಯನ್ನು ಸರ್ಕಾರ ನೀಡಿತು. ಆದರೆ ಅಸಂಘಟಿತ ಕಾರ್ಮಿಕರ ಸ್ಥಿತಿ?
ರಂಗ ಚಟುವಟಿಕೆಗಳಿಗೆ ಸಂಚಕಾರ ಬಂದಿರುವುದರಿಂದ, ಗ್ರಾಮಾಂತರ ಪ್ರದೇಶಗಳಲ್ಲಿನ ಬೇಸಿಗೆಯ ಊರ ಜಾತ್ರೆಗಳ ಸಂದರ್ಭಗಳಲ್ಲಿನ ನಾಟಕಗಳಲ್ಲಿ ಭಾಗವಹಿಸಿ, ಒಂದಿಷ್ಟು ಕಾಸು ಕೂಡಿಸಿಕೊಂಡು ವರ್ಷವಿಡೀ ಹೊಟ್ಟೆ ತುಂಬಿಕೊಳ್ಳುತ್ತಿದ್ದ ಕಲಾವಿದರು ಕಂಗಾಲಾದರು.
ಮನೆ ಇದ್ದವರು ಮನೆ ಸೇರಿಕೊಂಡರು. ಆದರೆ, ಮನೆಮಠ ಇಲ್ಲದವರು ಎಲ್ಲಿಗೆ ಹೋಗಬೇಕು? ಬದುಕು ಅರಸಿ ಪಟ್ಟಣಗಳಿಗೆ ಬಂದು, ರೈಲು ಮತ್ತು ಬಸ್ ನಿಲ್ದಾಣಗಳಲ್ಲೇ ತಮ್ಮ ಇರುಳನ್ನು ಕಳೆದು, ಮರುದಿನ ಬೆಳಗಾಗುತ್ತಿದ್ದಂತೆಯೇ ಹೊಟ್ಟೆ ತುಂಬಿಕೊಳ್ಳಲು ದಿನಗೂಲಿಯನ್ನೇ ನಂಬಿದವರ ಗತಿ? ತಾತ್ಕಾಲಿಕ ಗೂಡುಗಳಲ್ಲಿದ್ದು ವಿವಿಧ ಚಿಕ್ಕಪುಟ್ಟ ಕೈಗಾರಿಕೆಗಳಲ್ಲಿ ದಿನಗೂಲಿಗಳಾಗಿ ತೊಡಗಿಸಿಕೊಂಡವರು, ನಿರ್ಮಾಣ ಹಂತದ ಕಟ್ಟಡದಲ್ಲಿ ನೆಲೆಸಿ ಅಲ್ಲಿನ ಕಟ್ಟಡ ಚಟುವಟಿಕೆಗಳಲ್ಲಿ ನಿರತರಾದ ದಿನಗೂಲಿಗಳು ಕೆಲಸ ಕಳೆದುಕೊಂಡದ್ದಲ್ಲದೇ ಸೂರನ್ನೂ ಕಳೆದುಕೊಂಡರು. ದುಡಿಮೆ ಇಲ್ಲದೆ ಹೊಟ್ಟೆಗಿಲ್ಲ. ದೇಶದಲ್ಲಿನ ಸಕಲ ಬೃಹತ್ ಪಟ್ಟಣಗಳಲ್ಲಿನ ಈ ಬಗೆಯ ದಿನಗೂಲಿಗಳಿಗೆ ಎಲ್ಲವೂ ಅಯೋಮಯ. ಕಳೆದ 2011ರ ಸಾಲಿನ ಜನಗಣತಿಯ ಪ್ರಕಾರ ಆಂತರಿಕ ವಲಸೆ ಕಾರ್ಮಿಕರ ಸಂಖ್ಯೆ 450 ಮಿಲಿಯನ್.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು, ತಮ್ಮೂರಿನತ್ತ ಮುಖ ಮಾಡಿದ ಅಸಂಘಟಿತ ಕಾರ್ಮಿಕರಾಗಿರುವ ದಿನಗೂಲಿಗಳಿಗೆ ಸಹಾಯ ಮಾಡಲು ಮುಂದಾಗಿದ್ದರೂ, ಸರ್ಕಾರಿ ಅಧಿಕಾರಿಗಳು ಕೇಳುವ- ವಿಳಾಸವಿಲ್ಲದ, ಗುರುತಿನ ಚೀಟಿಗಳಲ್ಲಿದ, ಆಧಾರ ಮೊದಲಾದ ಸೂಕ್ತ ದಾಖಲಾತಿಗಳನ್ನು ಹೊಂದಿಲ್ಲದ ಬಹುತೇಕರಿಗೆ ಅವು ದಕ್ಕುವುದು ಗಗನ ಕುಸುಮ. ಬೆಳ್ಳಿಗೆರೆಗಳಂತೆ, ಅಲ್ಲಲ್ಲಿ ಕೆಲವು ಖಾಸಗಿ ವ್ಯಕ್ತಿಗಳು, ಸಂಸ್ಥೆಗಳು ಪಟ್ಟಣಗಳಲ್ಲಿನ ನಿರ್ಗತಿಕರಿಗೆ ಊಟ ತಿಂಡಿಯ ವ್ಯವಸ್ಥೆ ಮಾಡುತ್ತಿದ್ದಾರೆ. ಸರ್ಕಾರದ ಸೂಚನೆಯ ಮೇರೆಗೆ ಈಚೆಗೆ ಪೊಲೀಸರು ಕೆಲವೆಡೆ ಈ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಆದರೆ, ಗ್ರಾಮಾಂತರ ಪ್ರದೇಶಗಳಿಂದ ಕೆಲಸ ಅರಸಿಕೊಂಡು ಬಂದ ದಿನಗೂಲಿಗಳಿಗೆ, ತಮ್ಮ ತಮ್ಮ ಹುಟ್ಟೂರು ಸೇರುವ ತವಕ. `ಯಾವುದೋ ರೋಗ ಬಂದು ಅನಾಥವಾಗಿ ಸಾಯುವುದಕ್ಕಿಂತ ಹುಟ್ಟೂರಲ್ಲಿ ಸಾಯುವುದು ಮೇಲು’ ಎಂಬ ಭಾವದಲ್ಲಿ ಅವರೆಲ್ಲಾ ಊರುಗಳತ್ತ ಮುಖಮಾಡಿದರು. ಆದರೆ, ಅವರು ಸರಳವಾಗಿ ಅವರವರ ಗಮ್ಯಸ್ಥಳಗಳನ್ನು ಸೇರುವುದು ಸರಳವಾಗಿ ಸಾಧ್ಯವಾದೀತೆ?
ಬಡ ಜನರ ಸಂಚಾರ ಸಾಧನಗಳಾದ ಸಾರ್ವಜನಿಕ ಸಾರಿಗೆ ಸಂಸ್ಥೆಗಳು ಬಸ್ಸುಗಳು ರಸ್ತೆಯ ಮೇಲಿಲ್ಲ, ಖಾಸಗಿ ಸಾರಿಗೆ ಬಸ್ಸುಗಳ ಓಡಾಟವನ್ನು ಪ್ರತಿಬಂಧಿಸಲಾಗಿದೆ. ರೈಲುಗಳು ಓಡಾಟ ನಿಲ್ಲಿಸಿವೆ. ಪಟ್ಟಣ ಪ್ರದೇಶಗಳಲ್ಲಿನ ಲಕ್ಷಾಂತರ ಜನರು ಕಾಲ್ನಡಿಗೆಯಲ್ಲೇ ಊರು ಸೇರಲು ಕಂಡ ಕಂಡ ವಾಹನಗಳನ್ನು ಹತ್ತಿ ಹೊರಟಾಗ, ಪಟ್ಟಣಗಳ ಹೊರಭಾಗದಲ್ಲಿ, ಜಿಲ್ಲೆಗಳ ಮತ್ತು ರಾಜ್ಯಗಳ ಗಡಿಯಲ್ಲಿ ನಿಯೋಜನೆಗೊಂಡ ಪೊಲೀಸರು ಮೂಕ ಪ್ರೇಕ್ಷಕರಾಗಬೇಕಾಯಿತು. ಕೇಂದ್ರ ರಾಜ್ಯ ಸರ್ಕಾರಗಳು ಅವರ ಅನುಕೂಲಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಂಡರೂ ಅವು, ಅರ್ಧ ಮುಕ್ಕಾಲು ದಾರಿ ಸವೆಸಿದ ಕಾರ್ಮಿಕರನ್ನು ತಲುಪಲಾಗಿಲ್ಲ. ಬಸವಳಿದ ಈ ಜನಕ್ಕೆ ಸಹಾಯ ಮಾಡಲು ಮುಂದಾದ ಸ್ವಯಂ ಸಂಸ್ಥೆಗಳಿಗೆ ಪೊಲೀಸರು ಅಡ್ಡಗಾಲು ಹಾಕಿದ ಪ್ರಕರಣಗಳೂ ವರದಿಯಾಗಿವೆ.
ಮಕ್ಕಳುಮರಿಗಳೊಂದಿಗೆ ಗುಂಪುಗುಂಪಾಗಿ ಸಾಗಿರುವ ಈ ಸಹಸ್ರಾರು ಸಂಖ್ಯೆಯ ದಿನಗೂಲಿ ನೌಕರರು ಪೊಲೀಸರ ಕಾಟದಿಂದ ತಪ್ಪಿಸಿಕೊಂಡು ಮುನ್ನೂರು, ನಾನೂರು ಕಿ.ಮೀ ದೂರ ನಡೆದು ಸಾಗಿ ತಮ್ಮ ತಮ್ಮ ಊರುಗಳನ್ನು ತಲುಪುತ್ತಿದ್ದಾರೆ. ಹಲವರು ದಾರಿಯ ಮಧ್ಯೆ ಜೀವ ಕಳೆದುಕೊಂಡ ಘಟನೆಗಳೂ ನಡೆದವು. ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುವ ಅತ್ಯಾಚಾರ ಪ್ರಕರಣ ದೇಶದ ಗಮನ ಸೆಳೆಯುತ್ತದೆ. ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತಿದಿನವೂ ಅಂಥ ಪ್ರಕರಣಗಳು ನಡೆದರೂ ಅವು ಸುದ್ದಿಯಾಗುವುದಿಲ್ಲ. ಅದರಂತೆಯೇ ಪಟ್ಟಣಗಳಲ್ಲಿನ ಹಸಿವಿನ ಸಾವು ಮಾಧ್ಯಮಗಳ, ಸರ್ಕಾರಗಳ ಗಮನ ಸೆಳೆಯುತ್ತವೆ, ಪಾಪ ಬಡ ಕೂಲಿಕಾರ್ಮಿಕ ದೂರ ನಡೆದು ಸುಸ್ತಾಗಿ ಸಾವಿಗೀಡಾಗುವ ಪ್ರಕರಣಗಳು ನ್ಯಾಯವಾಗಿ ತಕ್ಕಷ್ಟು ಗಮನ ಪಡೆದುಕೊಳ್ಳುವುದಿಲ್ಲ.
ಇದು ಒಂದು ಬಗೆಯಲ್ಲಿ ಕೊವಿಡ್ 19 ರೋಗವನ್ನು ತಡೆಯುವ ಉದ್ದೇಶದಿಂದ ಜಾರಿಗೆ ತಂದಿರುವ `ಸಾಮಾಜಿಕ ಅಂತರ’ ಎಂಬ ವ್ಯಾಖ್ಯೆಯನ್ನು, ಈ ಕಾರ್ಮಿಕರ ಮರಳಿ ಮನೆಗೆ ಹಿಂದಿರುಗುವ ಸಾಮೂಹಿಕ ವಲಸೆ, ಅಪಹಾಸ್ಯ ಮಾಡಿದಂತಿದೆ. ಇದೇ ಮಾದರಿಯಲ್ಲಿ ಹಿಂದಿನ ಒಂದು ಭಾನುವಾರದಂದು ಹಾಗೆಯೇ ನಡೆದಿತ್ತು. ಕೊವಿಡ್ 19 ರೋಗ ಹರಡುವುದನ್ನು ತಡೆಯವುದಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಅವರು, ಜನತೆ `ಸ್ವಯಂ ಪ್ರೇರಣೆಯಿಂದ ನಿರ್ಬಂಧಗಳನ್ನು ಹೇರಿಕೊಂಡು ಮನೆಯಲ್ಲಿಯೇ ಇರಿ’ ಎಂದು ಕರೆ ನೀಡಿ ಅದಕ್ಕೆ `ಜನತಾ ಕಫ್ರ್ಯೂ’ ಹೆಸರಿಸಿದ್ದರು. ಜೊತೆಗೆ ತಮ್ಮ ತಮ್ಮ ಮನೆಗಳಲ್ಲಿ ನಿಂತು ಅಗತ್ಯ ಸೇವೆಗಳಲ್ಲಿ ತೊಡಗಿಸಿಕೊಂಡವರಿಗೆ ಕೃತಜ್ಞತೆ ತೋರಿಸುವ ಉದ್ದೇಶದಿಂದ ಚಪ್ಪಾಳೆ ತಟ್ಟಿರಿ ಎಂದು ಹೇಳಿದ್ದರು. ಆದರೆ, ರೋಗ ಹರಡುವುದನ್ನು ತಡೆಯುವ ಉದ್ದೇಶದ ಆಶಯಕ್ಕೆ ಭಂಗ ಬರುವಂತೆ ಅಂದಿನ `ಜನತಾ ಕಫ್ರ್ಯೂ’ ಮುಗಿಯುತ್ತಿದ್ದಂತೆಯೇ ಗುಂಪು ಗುಂಪಾಗಿ ಬೀದಿಗಿಳಿದ ಜನ `ಗೋ ಕೊರೋನಾ’ ಎನ್ನುತ್ತಾ, ಜಾಗಟೆಗಳನ್ನು ಬಾರಿಸುತ್ತಾ, ಶಂಖಗಳನ್ನು ಊದುತ್ತಾ ಮೆರವಣಿಗೆ ನಡೆಸಿದ್ದರು. ಹಲವೆಡೆ ಅವರನ್ನು ನಿರ್ಬಂಧಿಸಬೇಕಿದ್ದ ಪೊಲೀಸ್ ಪಡೆಯೂ ಅವರೊಂದಿಗೆ ಸೇರಿಕೊಂಡಿತ್ತು.
ಉತ್ತರಪ್ರದೇಶ ಮೂಲದ ದಿನಗೂಲಿ ನೌಕರರು ಲಕ್ಷಾಂತರ ಸಂಖ್ಯೆಯಲ್ಲಿ ದೆಹಲಿಯಿಂದ ಗುಳೆ ಹೊರಟು ನಿಂತಾಗ, ಉತ್ತರ ಪ್ರದೇಶದ ರಾಜ್ಯ ಸರ್ಕಾರವು ಮಾರ್ಚ್ 28 ರಂದು ಅವರಿಗಾಗಿ 200 ಬಸ್ ಗಳನ್ನು ನಿಯೋಜಿಸಿದ್ದು ಯಾವುದಕ್ಕೂ ಸಾಲಲಿಲ್ಲ. ಬಸ್ ಹತ್ತುವ ಜನರ ಆರೋಗ್ಯ ತಪಾಸಣೆಗೆ ನಿಯೋಜಿಸಿದ್ದ ವೈದ್ಯರ ತಂಡಕ್ಕೆ ತಮ್ಮ ಕೆಲಸವನ್ನು ಸರಿಯಾಗಿ ಮಾಡಲಾಗಲಿಲ್ಲ. ಮಾರ್ಗಮಧ್ಯದಲ್ಲಿ ಅವರಿಗೆ ಊಟ ವಸತಿ ಕಲ್ಪಿಸುವ ಕೆಲಸವೂ ಸರಿಯಾಗಿ ಆಗಲಿಲ್ಲ. ಉತ್ತರಪ್ರದೇಶದ ಕೆಲವೆಡೆ ಪೊಲೀಸರ ದರ್ಪ ಹೆಚ್ಚಾಗಿ, ಹೆದ್ದಾರಿಗಳಲ್ಲಿ ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲೆ ತರೆಳುತ್ತಿದ್ದ ಅಮಾಯಕ ವಲಸೆ ಕಾರ್ಮಿಕರ ಮೇಲೆ ರಾಸಾಯನಿಕ ಸಿಂಪಡಿಸಿದ ಅಮಾನುಷ ಘಟನೆಗಳೂ ನಡೆದವು.
ಈ ದೇಶವ್ಯಾಪಿ ಲಾಕ್ ಡೌನ್ ನಿರ್ಧಾರಕ್ಕೆ ಪೂರ್ವ ತಯಾರಿ ಇರಲಿಲ್ಲ, ಇದು ಅವಸರದ ನಿರ್ಧಾರ ಎಂಬ ದೂರುಗಳು ಕೇಳಿಬಂದವು. `ಈ ರೋಗ ಹರಡುವುದನ್ನು ತಡೆಯಲು ಇಂಥ ಕಟ್ಟುನಿಟ್ಟಿನ ಕ್ರಮ ಅನಿವಾರ್ಯವಾಗಿತ್ತು’ ಎಂದು ಹೇಳಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ಮಾರ್ಚ್ 29ರಂದು ತಮ್ಮ `ಮನದ ಮಾತು’ ಬಾನುಲಿ ಕಾರ್ಯಕ್ರಮದಲ್ಲಿ ಅನಿರೀಕ್ಷಿತವಾಗಿ ಅನಿವಾರ್ಯವಾಗಿ ತಾವು ಹೇರಿದ `ಲಾಕ್‍ಡೌನ್’ ನಿಂದ ಕಷ್ಟಕ್ಕೆ ಸಿಲುಕಿದ ಬಡವರಲ್ಲಿ ಕ್ಷಮೆಕೋರಿದ್ದೂ ಆಯಿತು.
ಉಗ್ರರ ನಿಗ್ರಹ, ಕಾಳಧನ ಹೊಂದಿದವರನ್ನು ಹೆಡಮುರಿಗೆ ಕಟ್ಟುವ ಉದ್ದೇಶದಿಂದ ಕಳೆದ ಬಾರಿ ನೋಟು ರದ್ದತಿ ಮಾಡಿ, ಹೊಸ ನೋಟುಗಳನ್ನು ಬಿಡುಗಡೆ ಮಾಡಿದಾಗಲೂ ಬಡವರು, ಕಾರ್ಮಿಕರೇ ಬಹಳಷ್ಟು ಬವಣೆ ಅನುಭವಿಸಿದ್ದರು. ಬ್ಯಾಂಕುಗಳು ಮುಂದೆ ಸಾಲು ಸಾಲು ನಿಂತಿದ್ದವರು ಬಡವರೇ. ಸ್ಥಿತಿವಂತರಾರೂ ನೋಟು ಬದಲಾವಣೆಗೆ ಸರದಿ ಸಾಲಿನಲ್ಲಿ ನಿಲ್ಲಲಿಲ್ಲ, ಬಿಸಿಲಲ್ಲಿ ನಿಂತು ದಣಿದು, ಹಸಿವು ದಾಹದಿಂದ ಸಾಯಲಿಲ್ಲ.
ಈಗಲೂ ಹಾಗೆಯೇ ಆಗಿದೆ. ಕೊವಿಡ್ -19 ರೋಗ ಹರಡುವ ಕೊರೋನಾ ವೈರಸ್ ಗೆ ಕಡಿವಾಣ ಹಾಕುವ ಉದ್ದೇಶ ಭಾರತ ದೇಶದ 21 ದಿನಗಳ `ಲಾಕ್ ಡೌನ್’ಗೆ ಮೊಟ್ಟ ಮೊದಲ ಬಲಿಪಶುಗಳು ಪಟ್ಟಣಗಳಿಗೆ ವಲಸೆ ಬಂದು ಅಲ್ಲಿ ಬದುಕು ಕಟ್ಟಿಕೊಂಡ ದಿನಗೂಲಿ ಕಾರ್ಮಿಕರು ಎಂದರೆ ತಪ್ಪಾಗಲಿಕ್ಕಿಲ್ಲ. ಈ ಕಾರ್ಮಿಕರಿಗೆ ಯಾಕಿಂಥ ಪರಿಸ್ಥಿತಿ ಬಂದಿತು?
ಕೊರೋನಾ ವೈರಸ್ ಹರಡುವ ಭೀತಿಯಿಂದ ಜಾರಿಗೆ ಬಂದ ಎಲ್ಲಾ ಚಟುಟಿಕೆಗಳನ್ನು ನಿರ್ಬಂಧಿಸುವ `ಲಾಕ್‍ಡೌನ್’, ಪಟ್ಟಣಕ್ಕೆ ವಲಸೆ ಬಂದಿದ್ದ ದಿನಗೂಲಿ ನೌಕರರ ಉದ್ಯೋಗಗಳನ್ನು ಆಪೋಷನ ಮಾಡಿದೆ. ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ, ವಿವಿಧ ಚಿಕ್ಕಪುಟ್ಟ ಘಟಕಗಳಲ್ಲಿ, ಬೀದಿಬದಿಯ ಪುಟಾಣಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಈ ವಲಸೆ ದಿನಗೂಲಿ ಕಾರ್ಮಿಕರು, ಕೂಲಿ ಇಲ್ಲದೇ ತಮ್ಮ ತಮ್ಮನ್ನು ನಂಬಿದ ಕುಟುಂಬದ ಸದಸ್ಯರ ಹೊಟ್ಟೆ ತುಂಬಲಾರರು. ಕೂಲಿಯೇ ಇಲ್ಲದಾಗ ಪಟ್ಟಣಗಳಲ್ಲಿನ ಮನೆ ಬಾಡಿಗೆ ಕಟ್ಟುವುದೆಂತು? ಅಂದಂದಿನ ದಿನಸಿ ಪದಾರ್ಥಗಳನ್ನು ಕೊಳ್ಳುವುದೆಂತು?
ಇದಕ್ಕೆಲ್ಲಾ ಮೂಲ ಕಾರಣ ಕಳೆದ ಶತಮಾನದ 1991ರಲ್ಲಿ ದೇಶದಲ್ಲಿ ಜಾರಿಗೆ ತಂದಿದ್ದ ಹೊಸ ಆರ್ಥಿಕ ನೀತಿಯೇ ಎಂದು ಹೇಳಲಾಗುತ್ತಿದೆ. ಮುಕ್ತ ವ್ಯಾಪಾರ ವ್ಯವಹಾರ, ಖಾಸಗೀಕರಣ ಮತ್ತು ಜಾಗತೀಕರಣಗಳು ಗ್ರಾಮೀಣ ಪ್ರದೇಶದಲ್ಲಿನ ಕಾರ್ಮಿಕರು ಅಧಿಕ ಸಂಖ್ಯೆಯ ಪಟ್ಟಣಗಳಿಗೆ ವಲಸೆ ಹೋಗುವುದಕ್ಕೆ ಪುಟನೀಡುತ್ತ ಬಂದವು,
ಈ ಹೊಸ ನೀತಿಯ ನಮ್ಮ ನಗರ ಕೇಂದ್ರಿತ ಅಭಿವೃದ್ಧಿ ಮಾದರಿಯು, ಗ್ರಾಮಾಂತರ ಪ್ರದೇಶಗಳನ್ನು ನಿರ್ಲಕ್ಷಿಸುತ್ತಾ, ಸಾಮಾಜಿಕ ಸಮಾನತೆ, ಸಾಮಾಜಿಕ ನ್ಯಾಯ ಮುಂತಾದ ಮೌಲ್ಯಗಳನ್ನು ಮಣ್ಣುಪಾಲು ಮಾಡುತ್ತಾ ಬಂದಿತು. ಕ್ರಮೇಣವಾಗಿ ಅದು ಬಡವ ಮತ್ತು ಬಲ್ಲಿದರ ನಡವಿನ ಅಂತರವನ್ನು ಹೆಚ್ಚಿಸುತ್ತಾ ಸಾಗಿತು. ಅಂತಿಮವಾಗಿ ಅಪಾರ ಪ್ರಮಾಣದಲ್ಲಿ ಗ್ರಾಮಾಂತರ ಪ್ರದೇಶದ ಜನರು ಕೆಲಸ ಹುಡುಕಿಕೊಂಡು ವಲಸೆ ಹೋಗಿ ಪಟ್ಟಣಗಳನ್ನು ಸೇರುವಂತಾಯಿತು.
ಇಂದು ಆಯಾ ದೇಶಗಳ ಜನಸಂಖ್ಯೆಯ ಅರ್ಧದಷ್ಟು ಜನ ಪಟ್ಟಣಗಳಲ್ಲೇ ವಾಸಿಸುತ್ತಾರೆ ಎಂದು ಅಂದಾಜಿಸಲಾಗುತ್ತಿದೆ. ಇದೇ ಮಾದರಿ, ಆಯಾ ರಾಜ್ಯಗಳ ರಾಜಧಾನಿಗಳಿಂದ ಪ್ರಕಟಗೊಳ್ಳುವ ಪತ್ರಿಕೆಗಳ ಪ್ರಸಾರ ಸಂಖ್ಯೆಗೂ ತಾಳೆಯಾಗುತ್ತದೆ. ಪತ್ರಿಕೆಯೊಂದರ ಒಟ್ಟು ಪ್ರಸಾರ ಸಂಖ್ಯೆಯ ಅರ್ಧದಷ್ಟು ಪತ್ರಿಕೆಗಳ ವಿತರಣೆ ರಾಜಧಾನಿಯಲ್ಲಿ ನಡೆದರೆ, ಉಳಿದ ಅರ್ಧದಷ್ಟು ಪತ್ರಿಕೆಗಳು ರಾಜ್ಯಾದ್ಯಂತ ವಿತರಣೆಯಾಗುತ್ತವೆ!
ಕಳೆದ 2001ರಲ್ಲಿ ಭಾರತದಲ್ಲಿ ನಗರೀಕರಣದ ಪ್ರಮಾಣ ಶೇ 28ರಷ್ಟಿದ್ದರೆ, 2011ರ ಹೊತ್ತಿಗೆ ಅದು ಶೇ 31ರ ಪ್ರಮಾಣವನ್ನು ತಲುಪಿತ್ತು ಎಂದು ದಾಖಲೆಗಳು ಸ್ಪಷ್ಟಪಡಿಸುತ್ತವೆ. ಭಾರತದಲ್ಲಿ ಸರಾಸರಿ ಪ್ರತಿವರ್ಷ 90 ಲಕ್ಷ ಕಾರ್ಮಿಕರು ಬದುಕು ಅರಸಿ ವಿವಿಧ ರಾಜ್ಯಗಳಿಗೆ ವಲಸೆಹೋಗುತ್ತಿದ್ದಾರೆ ಎಂದು 2017ರ ಆರ್ಥಿಕ ಸಮೀಕ್ಷೆ ತಿಳಿಸಿದೆ. ಮೊದಮೊದಲು ಕಾರ್ಮಿಕ ವಲಸಿಗರು ಮುಂಬೈ, ದೆಹಲಿ, ಕೋಲ್ಕತ್ತಗಳತ್ತ ಮುಖ ಮಾಡುತ್ತಿದ್ದರೆ, ಈಚೆಗೆ ದಕ್ಷಿಣ ಭಾರತದ ಬೆಂಗಳೂರು, ಹೈದರಬಾದ ನಗರಗಳೂ ಸೇರಿದಂತೆ ವಿವಿಧೆಡೆ ಕಾರ್ಮಿಕರು ವಲಸೆಹೋಗುತ್ತಿದ್ದಾರೆ. ಬಿಹಾರ, ಉತ್ತರಪ್ರದೇಶಗಳಿಂದ ಮೊದಲ ಹಂತದಲ್ಲಿ ಕಾರ್ಮಿಕರು ವಲಸೆಹೋಗುವುದು ಆರಂಭವಾಗಿದ್ದರೆ, ನಂತರದಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್, ಉತ್ತರಾಖಂಡ, ಜಾರ್ಖಂಡ ಹಾಗೂ ಈಶಾನ್ಯ ರಾಜ್ಯಗಳಿಂದ ಕಾರ್ಮಿಕರು ವಲಸೆ ಹೋಗುತ್ತಿದ್ದಾರೆ.
ಗ್ರಾಮಾಂತರ ಪ್ರದೇಶದ ಜನರ ಪಟ್ಟಣ ವಲಸೆಯು, ಅದುವರೆಗೂ ಸಾಧಾರಣವಾದ ಸುಸ್ಥಿತಿಯಲ್ಲಿದ್ದ ನಮ್ಮ ದೇಶದ ಕೃಷಿ ಚಟುವಟಿಕೆಗಳ ಮೇಲೆ ಕೆಟ್ಟ ಪರಿಣಾಮಗಳನ್ನು ಉಂಟು ಮಾಡಿತು. ರೈತಾಪಿ ಜನರ ಮೇಲೆ ಸಾಲದ ಹೊರೆ ಹೆಚ್ಚಾಯಿತು, ಆತ್ಮಹತ್ಯೆಯಂತಹ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು. ಸಣ್ಣ ಹಿಡುವಳಿದಾರರು ಕೃಷಿ ಚಟುವಟಿಕೆಗಳನ್ನು ಕೈ ಬಿಡುವಂತಾಯಿತು. ಭೂರಹಿತ ಕಾರ್ಮಿಕರು ನಿರುದ್ಯೋಗಿಗಳಾದರು. ಅಂತಿಮವಾಗಿ, ಅಪಾರ ಸಂಖ್ಯೆಯಲ್ಲಿ ಅತಿಸಣ್ಣ, ಸಾಧಾರಣ ಹಿಡುವಳಿಯ ರೈತರು ಕೃಷಿಗೆ ಎಳ್ಳನೀರು ಬಿಟ್ಟರು. ಇವರೊಂದಿಗೆ ಕೆಲಸವಿಲ್ಲದ ಭೂರಹಿತ ಕೃಷಿ ಕಾರ್ಮಿಕರು ತಮ್ಮ ಹೊಟ್ಟೆಪಾಡಿಗಾಗಿ ಪಟ್ಟಣಗಳನ್ನು ಸೇರುವಂತಾಯಿತು. ಸ್ವಾತಂತ್ರ್ಯವು ಸಿಕ್ಕ ಆರಂಭದ ದಿನಗಳಲ್ಲಿ ಗಾಂಧೀಜಿ ಕನಸು ಕಂಡ ಗ್ರಾಮಸ್ವರಾಜ್ಯ ಮಾದರಿಗಳನ್ನು ಸೃಷ್ಟಿಸುವ ಮೂಲೋದ್ಯೋಗ ಶಿಕ್ಷಣದಂತಹ ದೇಶ ಕಟ್ಟೋಣದ ಪ್ರಯತ್ನಗಳು ಮುಗ್ಗರಿಸಿದ್ದೇ ಬಂತು. ಆದರೆ, ಮುಂದೆ ಆ ನಿಟ್ಟಿನಲ್ಲಿ ಮತ್ತೆ ಮತ್ತೆ ಪ್ರಯತ್ನಗಳು ಸಾಗಲೇ ಇಲ್ಲ.
**********
No comments:
Post a Comment