Saturday, 4 April 2020

ಪಿಯೆಟಾ ಎಂಬ ದೃಶ್ಯಕಾವ್ಯ

ಸಿ ಮರಿಜೋಸೆಫ್   

ಸುಮಾರು ಹದಿನೈದನೇ ಶತಮಾನದಲ್ಲಿ ಮಿಕೆಲಾಂಜೆಲೊ ಎಂಬ ಇಟಾಲಿಯನ್ ಶಿಲ್ಪಿಯು ರೋಮ್ ನಗರದ ಪ್ರಮುಖ ದೇವಾಲಯಗಳಲ್ಲಿ ತನ್ನದೇ ಒಂದು ವಿಶಿಷ್ಟ ಛಾಪು ಮೂಡಿಸಿದ್ದ. ರೋಮ್ ನಗರದಲ್ಲಿ ಸರ್ವವ್ಯಾಪಿಯಾಗಿದ್ದ ಅಮೃತಶಿಲೆಯಲ್ಲಿ ಹೂವರಳಿಸುವ ಕಲೆಯ ಜೊತೆಗೆ ವರ್ಣಚಿತ್ತಾರಗಳನ್ನೂ ಬಿಡಿಸುವ ಕಲೆಯಲ್ಲಿ ಪರಿಣಿತನಾಗಿದ್ದ ಮಿಕೆಲಾಂಜೆಲೋ ಬಿಡಿಸಿದ ತೈಲವರ್ಣಚಿತ್ರಗಳನ್ನು ಇಂದಿಗೂ ವ್ಯಾಟಿಕನ್ನಿನ ಸಿಸ್ಟೈನ್ ಚಾಪೆಲ್ಲಿನ ಚಾವಣಿಯಲ್ಲಿ ಕಾಣಬಹುದು.
ಅಂದು ರೋಮ್ ನಗರದಲ್ಲಿ ಕಾರ್ಡಿನಲ್ ಆಗಿದ್ದ ಫ್ರೆಂಚ್ ಸಂಜಾತ ಗುರು ಬಿಲ್ಹೇರ್ ಎಂಬುವರು ಮಿಕೇಲನೊಂದಿಗೆ ಆತ್ಮೀಯವಾಗಿ ಮಾತಾಡುತ್ತಾ ತಾವು ಜೀವಂತವಿರುವಾಗಲೇ ತಮ್ಮ ಸಮಾಧಿಗೊಂದು ಸ್ಮಾರಕಶಿಲೆಯೊಂದನ್ನು ಕೆತ್ತಲು ಕೇಳಿಕೊಳ್ಳುತ್ತಾರೆ. ಅಂದು ಯೂರೋಪಿಯನ್ ಸಮಾಜದಲ್ಲಿ ಶಿಲುಬೆಯ ಮೇಲೆ ಮೃತಿಸಿದ ಯೇಸುವಿನ ಶರೀರವನ್ನು ತನ್ನ ಮಡಿಲ ಮೇಲೆ ಮಲಗಿಸಿಕೊಂಡು ಮೌನವಾಗಿ ವ್ಯಾಕುಲ ಪಡುವ ಮೇರಿಮಾತೆಯ ಶಿಲ್ಪವು ಬಹು ಜನಪ್ರಿಯವಾಗಿತ್ತು. ತಮ್ಮ ಸಮಾಧಿಯ ಮೇಲೆ ಅಂಥದೊಂದು ಶಿಲ್ಪವಿದ್ದರೆ ಚೆನ್ನ ಎಂದು ಭಾವಿಸಿದ ಕಾರ್ಡಿನಲರು ಮಿಕೆಲಾಂಜೆಲೋಗೆ ಆ ಕೆಲಸವನ್ನು ಒಪ್ಪಿಸುತ್ತಾರೆ.
ಅಪಾರ ಧರ್ಮಭೀರುವೂ ತನ್ನ ಶಿಲ್ಪಕಲಾ ಕೆತ್ತನೆಯ ಬಗ್ಗೆ ಅಷ್ಟೇ ಪ್ರೀತಿ ಒಲವು ತಲ್ಲೀನತೆ ತಾದಾತ್ಮ್ಯತೆ ಹೊಂದಿದ್ದ ಮಿಕೆಲಾಂಜೆಲೋ ಆ ಕೆಲಸವನ್ನು ಬಹುವಿನೀತನಾಗಿ ಸ್ವೀಕರಿಸಿ ಬಲು ಸುಂದರವೂ ರಮಣೀಯವೂ ಮನಮೋಹಕವೂ ಆದ ಸ್ನಿಗ್ದ ಸೌಂದರ್ಯದ ವ್ಯಾಕುಲಮಾತೆಯ ಪ್ರತಿಮೆಯನ್ನು ಕ್ರಿಸ್ತಶಕ 1499ರಲ್ಲಿ ಅನಾವರಣಗೊಳಿಸುತ್ತಾನೆ.
ಮಿಕೆಲಾಂಂಜೆಲೊ ಇದನ್ನು ಏಕಶಿಲಾವಿಗ್ರಹ ಅನ್ತಾರಲ್ಲ ಹಾಗೆ ಅಮೃತಶಿಲೆಯ ಒಂದೇ ಬಂಡೆಯಿಂದ ಕೆತ್ತಿದ್ದಾನೆ. ನಿರ್ದಿಷ್ಟವಾಗಿ ಹೇಳುವುದಾದರೆ, ಇಟಲಿಯ ಹಾಲುಗಲ್ಲಿನ ಗಣಿಗಳಿಗೆ ಹೆಸರಾಗಿರುವ ಕರಾರಾ ಎಂಬಲ್ಲಿ ಸಿಗುವ ನೀಲಿ ಮಿಶ್ರಿತ ಬಿಳಿ ಕಲ್ಲಿನ ಹೆಬ್ಬಂಡೆಯನ್ನು ಬಳಸಿದ್ದಾನೆ.
ರೋಮ್ ಚಕ್ರಾಧಿಪತ್ಯವು ಅತ್ಯಂತ ವೈಭವದ ಸ್ಥಿತಿಯಲ್ಲಿದ್ದ ಪ್ರಾಚೀನ ಕಾಲದಿಂದಲೂ ಕರಾರಾ ಎಂಬ ಈ ಊರು ಶಿಲ್ಪಿಗಳ ನೆಚ್ಚಿನ ತವರೂರಾಗಿದೆ. ಇಂದಿಗೂ ಭಾರತದಂತಹ ಅನೇಕ ದೇಶಗಳಿಂದ ಹಾಲುಬಣ್ಣದ, ಪದ್ಮರಾಗದ, ಕರೀಕಲ್ಲಿನ, ಗುಲಾಬಿವರ್ಣದ ಕಲ್ಲುಗಣಿಗಳಿಂದ ಕರಾರಾ ಗಾತ್ರಕ್ಕೆ ಸೀಳಿದ ಬಂಡೆಗಳನ್ನು ತರಿಸಿಕೊಳ್ಳುವ ಆ ಶಿಲ್ಪಿಗಳು ಅವುಗಳಿಂದ ಸುಂದರಾತಿಸುಂದರವಾದ ಶಿಲ್ಪಕಾವ್ಯವನ್ನು ಕಂಡರಿಸುವುದರಲ್ಲಿ ತೊಡಗಿಸಿಕೊಂಡಿದ್ದಾರೆ.
ಪಿಯೆಟಾವನ್ನು ಹತ್ತಿರದಿಂದ ತದೇಕಚಿತ್ತದಿಂದ ಗಮನಿಸಿ ನೋಡಿದಾಗ ಅನಘ ಮೇರಿ ಮಾತೆಯ ಅವನತ ಮುಖದಿಂದ ಹೊಮ್ಮುವ ಭಾವನೆಗಳು ಅನೇಕ ಅಪಾರ. ವಿಶ್ವಾದ್ಯಂತದ ಕಲಾತಪಸ್ವಿಗಳು ಪಿಯೆಟಾದ ಮುಂದೆ ಗಂಟೆಗಟ್ಟಲೆ ನಿಂತು ಆ ಭಾವನೆಗಳನ್ನು ಈಂಟುತ್ತಾರೆ. ನೋವಿನ, ದುಃಖದ, ವಿಷಾದದ, ನಸುಗೋಪದ, ಆರ್ತತೆಯ, ಶೋಕ ಕರುಣ ರಸಾದ್ರ್ರತೆಯ ಎಲ್ಲ ಭಾವನೆಗಳೂ ಅಲ್ಲಿ ದೃಗ್ಗೋಚರ. ಮೇರಿ ಮಾತೆಯ ಕಂಗಳೂ, ಗಲ್ಲವೂ, ತುಟಿಗಳೂ ಒಟ್ಟಾರೆ ಮೊಗವೂ ಒಂದೊಂದು ಕೋನದಿಂದ ನೋಡಿದಾಗ ಒಂದೊಂದು ತೆರನ ಸ್ಥಾಯೀ ಸಂಚಾರೀಗಳ ಭಾವಮಿಲನವನ್ನು ಅಭಿವ್ಯಕ್ತಿಸುತ್ತವೆ. ಪಿಯೆಟಾ ಎಂಬ ಮೂರ್ತಸ್ವರೂಪದಲ್ಲಡಗಿದ ಭಾವನೆಗಳ ಆಸ್ವಾದ ಮತ್ತು ರಸಾನುಭೂತಿಯೇ ಅಪೂರ್ವ, ಅನನ್ಯ, ಅನುಪಮ, ಅಮೌಲ್ಯ, ಅನಘ್ರ್ಯ ಮತ್ತು ಅನಿರ್ವಚನೀಯ. ಆ ಶಿಲ್ಪಕಲಾವಲ್ಲರಿಯ ಅನುಕರ್ಷಕ್ಕೆ ಸೋಲದವರೇ ಇಲ್ಲ.
ಹೀಗೇ ಇರುವಲ್ಲಿ ಒಂದು ದಿನ, ಇಟಲಿಯ ಲೊಂಬಾರ್ಡಿಯಿಂದ ಒಂದಷ್ಟು ಪ್ರವಾಸಿಗರು ಪಿಯೆಟಾವನ್ನು ತದೇಕಚಿತ್ತದಿಂದ ನೋಡುತ್ತಾ ಭಲೇ ಭಲೇ ಎನ್ನುತ್ತಾ ಇದನ್ನು ಕೆತ್ತಿದ ಆ ಮಹಾನುಭಾವ ಯಾರು ಎಂದರು? ಅಲ್ಲಿದ್ದವನೊಬ್ಬ 'ಮತ್ಯಾರು, ಮಿಲಾನಿನವನೇ ಆದ ನಮ್ಮ ಗೊಬ್ಬೊ' ಎಂದ. ಅಲ್ಲೇ ನಿಂತಿದ್ದ ಮಿಕೆಲಾಂಜೆಲೋಗೆ ತುಂಬಾ ಪಿಚ್ಚೆನಿಸಿತು. ತನ್ನ ಹಲವಾರು ತಿಂಗಳುಗಳ ಶ್ರಮ ಒಂದೇ ನಿಮಿಷದಲ್ಲಿ ಕೊಚ್ಚಿಹೋದಂತಾಯಿತು. ಆ ರಾತ್ರಿಯೇ ಅವನು ಉಳಿ ಸುತ್ತಿಗೆಯೊಂದಿಗೆ ಬಂದವನೇ ಬಾಗಿಲು ಮುಚ್ಚಿ ಶಿಲ್ಪದ ಮೇಲೆ ಹತ್ತಿನಿಂತು ಮೇರಿ ಮಾತೆಯ ಎದೆಯ ಮೇಲೆ ತನ್ನ ಹೆಸರು ಕೆತ್ತಿದ. ತನ್ನ ಕೆಲಸವಾದ ಮೇಲೆ ಆಯಾಸಗೊಂಡು ಅಲ್ಲೇ ಮಲಗಿದ. ಆ ರಾತ್ರಿಯ ಕನಸುಗಳಿಂದ ಆತ ಬಹುವಾಗಿ ಕನಲಿಹೋದ. ಎದ್ದು ತನ್ನ ವಿಪರೀತ ಕೃತ್ಯಕ್ಕಾಗಿ ಪರಿತಪಿಸಿದ, ಗೋಳಾಡಿ ಅತ್ತ. ಇನ್ನೆಂದೂ ತನ್ನ ಕೃತಿಗಳಿಗೆ ತಾನು ರುಜು ಹಾಕುವುದಿಲ್ಲ ಎಂದು ಶಪಥ ಮಾಡಿದ. ಇದೆಲ್ಲವನ್ನೂ ಹದಿನಾರನೇ ಶತಮಾನದ ಕಲಾಕಾರ, ಚಿತ್ರಕಾರ, ಶಿಲ್ಪಿ, ಬರಹಗಾರ ಮತ್ತು ಇತಿಹಾಸಜ್ಞ ಜಾರ್ಜಿಯೊ ವಸಾರಿ (1511-1574) ತನ್ನ ಕೃತಿಯಲ್ಲಿ ದಾಖಲಿಸಿದ್ದಾನೆ.
ಮಿಕೆಲಾಂಜೆಲೊ ಪಿಯೆಟಾವನ್ನು ಕೆತ್ತಿದಾಗ ಅವನು 24 ವರ್ಷದ ಯುವಕ. 88 ವರ್ಷಗಳ ತುಂಬು ಜೀವನ ನಡೆಸಿದ ಆತನ ಕೃತಿಗಳು ಇಂದಿಗೂ ಅಮರವಾಗಿವೆ. ಜಗದ್ಗುರು, ಕಾರ್ಡಿನಲ್, ಬಿಷಪರು, ಗುರುಗಳು, ಕನ್ಯಾಸ್ತ್ರೀಯರು ಮಾತ್ರವಲ್ಲ ಇಡೀ ಇಟಲಿ ದೇಶದ ಪ್ರಜೆಗಳು ಪಿಯೆಟಾವನ್ನು ಪ್ರೀತಿಸಿದಂತೆಯೇ ಮಿಕೆಲಾಂಜೆಲೋನನ್ನೂ ಪ್ರೀತಿಸಿದರು. ಎರಡು ಶತಮಾನಗಳ ನಂತರ ಮಿಕೆಲಾಂಜೆಲೊನ ಕಲಾತಪಸ್ಸಿನ ಫಲವಾದ ಪಿಯೆಟಾ ಶಿಲ್ಪವನ್ನು ವ್ಯಾಟಿಕನ್ ನಗರದ ಹೃದಯಭಾಗದಲ್ಲಿನ ಪುನರುಜ್ಜೀವನ (ರಿನೈಸಾನ್ಸ್) ಕಾಲದ ಚರ್ಚಿನ ಪ್ರವೇಶದ್ವಾರದ ಬಳಿಯಿರುವ ಮೊದಲ ಚಾಪೆಲ್‍ನೊಳಗೆ ಮರುಸ್ಥಾಪನೆ ಮಾಡಿ ಅಜರಾಮರವಾಗಿಸಿದರು.
ಮಿಕೆಲಾಂಜೆಲೊವನ್ನು ಹತ್ತಿರದಿಂದ ಕಂಡು ಅವರ ಆತ್ಮಕತೆಯನ್ನು ಬರೆದ ಆಸ್ಕಾನಿಯೊ ಕೊಂದೀವಿ ಎಂಬುವರು ಒಮ್ಮೆ ಅವನೊಂದಿಗೆ ಮಾತಾಡುತ್ತಾ ಮೂವತ್ಮೂರನೇ ವಯಸ್ಸಿನಲ್ಲಿ ಸತ್ತ ಯೇಸುವಿನ ತಾಯಿಯ ವಯಸ್ಸು ಇನ್ನೂ ಹೆಚ್ಚಿರಬೇಕಲ್ಲವೇ, ಆದರೆ ಪಿಯೆಟಾ ಶಿಲ್ಪದಲ್ಲಿನ ಮೇರಿಯ ಮುಖ ಚಿಕ್ಕವಯಸ್ಸಿನ ಮಹಿಳೆಯ ಮುಖದಂತೆ ತೋರುತ್ತದಲ್ಲಾ ಎಂದು ಪ್ರಶ್ನಿಸಿದರು. ಅದಕ್ಕೆ ಮಿಕೆಲಾಂಜೆಲೊ ಹೇಳಿದ ಮಾತು ಸಾರ್ವಕಾಲಿಕ. ಅದೇನೆಂದರೆ ``ಪರಿಶುದ್ಧ ಮಹಿಳೆಯರಿಗೆ ವಯಸ್ಸೇ ಆಗುವುದಿಲ್ಲ, ಕನಿಷ್ಠ ಕಾಮುಕ ಬಯಕೆಯೂ ಇಲ್ಲದ ಕನ್ಯಾಮಾತೆ ಅತಿಶಯ ಸೌಂದರ್ಯವತಿ ಅಲ್ಲವೇ?''
ಪಿಯೆಟಾದಲ್ಲಿ ಮಿಕೆಲಾಂಜೆಲೊ ಪುನರುಜ್ಜೀವನ ಕಾಲದ ಶಾಸ್ತ್ರೀಯ ಕಲಾಬಂಧದೊಂದಿಗೆ ಸಹಜ ಸೌಂದರ್ಯವನ್ನೂ ಬೆರೆಸಿದ. ರಿನೈಸಾನ್ಸ್ ಶಿಲ್ಪಗಳಲ್ಲಿ ಕಾಣುವ ಪಿರಮಿಡ್ ಪ್ರಮೇಯ ಅಂದರೆ ಚೂಪಾದ ಶಿಖರದಿಂದ ಪ್ರಾರಂಭವಾಗಿ ವಿಸ್ತೃತ ಅಡಿಪಾಯವುಳ್ಳ ಕಲಾಪ್ರಕಾರವನ್ನು ಪಿಯೆಟಾದಲ್ಲೂ ಅಳವಡಿಸಿಕೊಂಡಿದ್ದಾನೆ. ಮೇರಿ ಮಾತೆಯ ತಲೆಯಿಂದ ಬಂದು ಪಾದದಡಿ ಹಲವಾರು ನಿರಿಗೆಗಳಲ್ಲಿ ಹರಡಿದ ನಿಲುವಂಗಿಯ ವಿಭವದಲ್ಲಿ ಅದು ಗೋಚರವಾಗುತ್ತದೆ. ಅಲ್ಲದೆ ಭೂಪರಗಳ ಒಡೆಯನೂ ನಿತ್ಯಭಾಸ್ಕರನೂ ಆದ ಯೇಸುವಿನ ಒಡಲನ್ನು ತನ್ನ ಮಡಿಲಲ್ಲಿ ತುಂಬಿಸಿಕೊಳ್ಳಬೇಕಾದ ಮರಿಯಳ ನೈಜರೂಪವನ್ನು ಮರೆಮಾಚಿದ ಮಿಕೆಲಾಂಜೆಲೊ ಪದರ ಪದರಗಳ ಅಕ್ಷಯ ನಿರಿಗೆಗಳನ್ನು ನಿರ್ಮಿಸಿ ಪ್ರತಿಮೆಯನ್ನು ಕಾವ್ಯವಾಗಿಸಿದ್ದಾನೆ.
ಹೀಗೆ ಶತಶತಮಾನಗಳಿಂದ ಕಲಾಸಕ್ತರನ್ನೂ ಧರ್ಮಭೀರುಗಳನ್ನೂ ಭೇದವಿಲ್ಲದೆ ಆಹ್ವಾನಿಸುತ್ತಿರುವ ಈ ಪಿಯೆಟಾ ಪ್ರತಿಮೆ ಇತ್ತೀಚೆಗೆ ದುಷ್ಕರ್ಮಿಯೊಬ್ಬನ ಕೆಟ್ಟದೃಷ್ಟಿಗೆ ಬಿದ್ದಿತು. 1972ರಲ್ಲಿ ಪಂಚಾಶತ್ತಮದ ದಿನ ಹಂಗೆರಿಯಿಂದ ಬಂದಿದ್ದ ಲಾಝ್ಲೊ ತಾತ್ ಎಂಬ ವಿಕ್ಷಿಪ್ತಮನದ ನಿರುದ್ಯೋಗಿಯೊಬ್ಬ ಕಟಾಂಜನವನ್ನು ಹತ್ತಿ ಪ್ರತಿಮೆಯತ್ತ ಧಾವಿಸಿ ಕೈಯಲ್ಲಿದ್ದ ಸುತ್ತಿಗೆಯಿಂದ ಮುಖಮೂತಿಯೆನ್ನದೆ ರಪರಪನೇ ಬಾರಿಸಿಬಿಟ್ಟ. ಆ ಹನ್ನೆರಡು ಏಟುಗಳಿಗೆ ಮೇರಿ ಮಾತೆಯ ಎಡಗೈ ಮುರಿಯಿತು, ಮೂಗಿನ ತುದಿ ಒಡೆಯಿತು, ಕೆನ್ನೆ ಮತ್ತು ಎಡಗಣ್ಣಿಗೆ ಹಾನಿಯಾಯಿತು. ಹೀಗೆ ಆ ಕೆಟ್ಟಗಳಿಗೆಯಲ್ಲಿ ವಿಶ್ವದಾದ್ಯಂತ ಹೆಸರುವಾಸಿಯಾಗಿದ್ದ ಪಿಯೆಟಾ ಎಂಬ ಬೆಲೆಕಟ್ಟಲಾಗದ ಸೌಂದರ್ಯಕ್ಕೆ ಭಿನ್ನವೊದಗಿತು.
ರೋಮನ್ ನ್ಯಾಯಾಲಯವು ಅವನನ್ನು ಸಮಾಜಕಂಟಕ ಎಂದು ಕರೆದು ಎರಡು ವರ್ಷಗಳ ಕಾಲ ಮಾನಸಿಕ ಚಿಕಿತ್ಸೆಗೆ ದೂಡಿ ಆನಂತರದಲ್ಲಿ ಅವನನ್ನು ಗಡೀಪಾರು ಮಾಡಿತು. ಈಗ ಭಗ್ನಗೊಂಡ ಪ್ರತಿಮೆಯನ್ನು ಸರಿಪಡಿಸುವುದೋ ಅಥವಾ ಹಾಗೇ ಬಿಡುವುದೋ ಎಂಬ ಜಿಜ್ಞಾಸೆ ಕಾಡಿತು. ನಮ್ಮ ಕಾಲದ ಹಿಂಸೆಗಳಿಗೆ ಮೂಕಸಾಕ್ಷಿಯಾದ ಪಿಯೆಟಾವನ್ನು ಹಾಗೇ ಉಳಿಸಬೇಕೆಂದರು ಕೆಲವರು. ಇನ್ನೂ ಕೆಲವರು ಅದನ್ನು ದುರಸ್ತಿಗೊಳಿಸಿ ಗಾಯದ ಗುರುತುಗಳನ್ನು ಹಾಗೇ ಬಿಡಬೇಕೆಂದರು. ಕೊನೆಗೆ ದುರಸ್ತಿಗೆ ಸಮ್ಮತಿ ಪ್ರಾಪ್ತವಾಯಿತು. ಶಿಲ್ಪಕಲಾತಜ್ಞರು ಪಿಯೆಟಾಶಿಲ್ಪದ ಎಲ್ಲ ಚೂರುಗಳನ್ನೂ ಅತಿ ಜತನದಿಂದ ಕಲೆ ಹಾಕಿದರು. ಉಗುರುಚೂರುಗಳಿಗಿಂತ ಚಿಕ್ಕದಾದ ನೂರಕ್ಕೂ ಹೆಚ್ಚು ಚೂರುಗಳನ್ನು ಸಂಗ್ರಹಿಸಿ, ಎಲ್ಲ ಚಿಕ್ಕಪುಟ್ಟ ಚೂರುಗಳನ್ನೂ ಮರುಜೋಡಿಸಿ, ಕಣ್ಣಿಗೆಕಾಣದ ಗೋಂದು ಮತ್ತು ಹಾಲುಗಲ್ಲಿನ ಪುಡಿಗಳಿಂದ ಅವನ್ನು ಪ್ರತಿಮೆಯೊಂದಿಗೆ ಬೆಸೆದರು. ಮುಂದೊಂದು ದಿನ ಯಾರೂ ಪ್ರತಿಮೆಗೆ ಹಾನಿ ಮಾಡಲಾಗದಂತೆ ಗುಂಡುನಿರೋಧಕ ಗಾಜನ್ನು ಅದರ ಮುಂದೆ ಗೋಡೆಯಂತೆ ಇಟ್ಟರು. ಈಗ ನಮ್ಮ ಕಣ್ಣೆದುರಿಗಿರುವುದು ದುರಸ್ತಿಗೊಂಡ ಪಿಯೆಟಾ. ಪ್ರತಿಮೆಯ ಯಾವಭಾಗ ಊನವಾಗಿದೆ ಎಂಬುದನ್ನು ಯಾರೂ ಕಂಡುಹಿಡಿಯಲಾಗದಂತೆ ಅತ್ಯಂತ ನಾಜೂಕಿನಿಂದ ಅದನ್ನು ಪರಿಪೂರ್ಣಗೊಳಿಸಲಾಗಿದೆ.
ಹೀಗೆ ಶತಶತಮಾನಗಳಿಂದ ಜಗತ್ತಿನ ಶಿಲ್ಪಕಲಾಭ್ಯಾಸಿಗಳ ಜ್ಞಾನತೃಷೆಯನ್ನು ನೀಗಿಸುತ್ತಾ, ಕ್ರೈಸ್ತರ ಭಕ್ತಿಯ ಭಾವನೆಗಳನ್ನು ಮೀಟುತ್ತಾ, ಅನೇಕ ಚಿತ್ರಗಳಿಗೂ ಚಲನಚಿತ್ರಗಳಿಗೂ ಪ್ರೇರಕವಾಗಿರುವ, ಕ್ರಿಸ್ತನ ಶಿಲುಬೆಯಾತನೆಗೆ ಪರಿಸಮಾಪ್ತಿಯ ಚಿರಶಾಂತಿಯನ್ನು ಪ್ರಾಪ್ತವಾಗಿಸುತ್ತಿರುವ ಹಾಲುಗಲ್ಲಿನ ಈ ಶಿಲ್ಪವಲ್ಲರಿಯು ಇಂದಿಗೂ ಅಳಿಯದ ಸ್ಮಾರಕವಾಗಿ ನಿಂತಿದೆ. ಇಂದಿಗೂ ರೋಮ್ ನಗರಕ್ಕೆ ತೆರಳುವ ಜಗತ್ತಿನ ಅಸಂಖ್ಯಾತ ಪ್ರವಾಸಿಗರು ಈ ಸ್ಮಾರಕವನ್ನು ತಪ್ಪದೇ ವೀಕ್ಷಿಸುತ್ತಾರೆ.

**********

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...