- ಎಫ್. ನಂದಗಾವ್
ಪುರೋಹಿತಶಾಯಿ ವರ್ಗದವರ ಪುಸಲಾವಣೆಗೊಳಗಾಗಿ ಉದ್ರಿಕ್ತರಾಗಿದ್ದ ಯಹೂದಿ ಜನರ ಆಗ್ರಹಕ್ಕೆ ಮಣಿದು, ರೋಮನ್ ಪ್ರಾಂತಾಧಿಕಾರಿ ಪೊನ್ಸಿಸ್ ಪಿಲಾತ ಕೈಗೊಂಡ ನಿರ್ಧಾರದಂತೆ ದೇವಸುತ ಶಿಲುಬೆ ಮರಣದ ಶಿಕ್ಷೆಗೆ ಗುರಿಯಾದ ಯೇಸುಸ್ವಾಮಿ, ಪಿಲಾತನ ಅರಮನೆಯ ಅಂಗಳದ ನ್ಯಾಯಾಲಯದಿಂದ ಜೆರುಸಲೇಮ್ ಪಟ್ಟಣದ ಬೀದಿಗಳಲ್ಲಿ ಹಾಯ್ದು ಕಪಾಲ ಬೆಟ್ಟದವರಗೆ ಶಿಲುಬೆ ಹೊತ್ತು ಸಾಗಿದ ಹಾದಿ, ಶಿಲುಬೆ ಮರಣ ಮತ್ತು ನಂತರದ ಭೂಸ್ಥಾಪನೆ(ಸಮಾಧಿ)ವರೆಗಿನ ಘಟನಾವಳಿಗಳನ್ನು `ಶಿಲುಬೆ ಹಾದಿ' ಎಂದು ಗುರುತಿಸಲಾಗುತ್ತದೆ.
ಆ ಹಾದಿಯಲ್ಲಿನ ಹದಿನಾಲ್ಕು ಸ್ಥಳಗಳನ್ನು ಗುರುತಿಸಿ ಆಯಾ ಘಟನಾವಳಿಗಳನ್ನು ಸ್ಮರಿಸುತ್ತಾ, ಧ್ಯಾನಿಸುವ, ಪ್ರಾರ್ಥಿಸುವ ಪ್ರಕ್ರಿಯೆಯನ್ನು `ಶಿಲುಬೆ ಹಾದಿ' ಎಂದು ಕೆಥೋಲಿಕ ಧರ್ಮಸಭೆ ಮಾನ್ಯಮಾಡಿದೆ.
ಈ `ಶಿಲುಬೆ ಹಾದಿ'ಯನ್ನು `ವಿಯಾ ಡೋಲೊರೋಸಾ', `ವಿಯಾ ಕ್ರೂಸಿಸ್' ಮತ್ತು `ಹದಿನಾಲ್ಕು ಶಿಲುಬೆಯ ಸ್ಥಳಗಳು' ಎಂದೂ ಕರೆಯಲಾಗುತ್ತದೆ. ಲ್ಯಾಟಿನ್ ನಲ್ಲಿ `ವಿಯಾ ಡೋಲೋರೋಸಾ' ಎಂದರೆ `ನೋವಿನ ಹಾದಿ'. ಅದರಂತೆ `ವಿಯಾ ಕ್ರೂಸಿಸ್' ಎಂದರೆ `ಶಿಲುಬೆಯ ಹಾದಿ'.
ಈ ಸ್ಥಳಗಳನ್ನು- ಚಿತ್ರಗಳು, ಭಿತ್ತಿಚಿತ್ರಗಳು, ಉಬ್ಬುಚಿತ್ರಗಳು ( ಕಟ್ಟಿಗೆಯ, ಪ್ಲಾಸ್ಟರ್ ಆಫ್ ಪ್ಯಾರಿಸ್, ಲೋಹದ) ಕೆಲವೊಮ್ಮೆ ನೈಜ ಗಾತ್ರದ ಮಾನವಾಕಾರದ ಪ್ರತಿಕೃತಿಗಳ ಮೂಲಕವೂ ಪ್ರತಿನಿಧಿಸಲಾಗುತ್ತದೆ. ಒಂದರಿಂದ ಹದಿನಾಲ್ಕರ ವರೆಗಿನ ಸಂಖ್ಯೆಗಳನ್ನು ಗುರುತಿಸುವ ಕಲ್ಲಿನ ಶಿಲುಬೆಗಳ `ಶಿಲುಬೆ ಹಾದಿ' ಕೆಲವು ಕ್ರೈಸ್ತ ಗ್ರಾಮಗಳಲ್ಲಿ ಮತ್ತು ಕ್ರೈಸ್ತರು ಹೆಚ್ಚಾಗಿರುವ ಬಡಾವಣೆಗಳಲ್ಲಿ ಕಾಣಬಹುದು.
ಶಿಲುಬೆ ಹಾದಿಯ ಹದಿನಾಲ್ಕು ಸ್ಥಳಗಳು:
ಶಿಲುಬೆ ಹಾದಿಯ ಹದಿನಾಲ್ಕು ಸ್ಥಳಗಳನ್ನು ಕ್ರಮವಾಗಿ ಕೆಳಕಂಡಂತೆ ಗುರುತಿಸಲಾಗಿದೆ.
೧) ಪ್ರಭು ಯೇಸುಸ್ವಾಮಿಯನ್ನು ಶಿಲುಬೆ ಮರಣದ ಶಿಕ್ಷೆಗೆ ಗುರುಪಡಿಸಲಾಗುವುದು.
೨) ಪ್ರಭು ಯೇಸುಸ್ವಾಮಿಯು ಶಿಲುಬೆಯನ್ನು ಹೊತ್ತುಕೊಳ್ಳುವರು.
೩) ಶಿಲುಬೆಯ ಭಾರ ಹೊರಲಾರದೆ ಪ್ರಭು ಯೇಸುಸ್ವಾಮಿಯು ಮೊದಲನೆಯ ಬಾರಿ ಮುಕ್ಕಡೆಯಾಗಿ ಬೀಳುವರು.
೪) ಪ್ರಭು ಯೇಸುಸ್ವಾಮಿ ಪೂಜ್ಯ ಮಾತೆಮರಿಯಳನ್ನು ಎದುರುಗೊಳ್ಳುವರು.
೫) ಭಾರವಾದ ಶಿಲುಬೆಯನ್ನು ಹೊತ್ತು ಸಾಗಿಸಲು ಪ್ರಭು ಯೇಸುಸ್ವಾಮಿ ಸಿರೇನ್ಯದ ಸಿಮೋನನ ಸಹಾಯ ಪಡೆಯುವರು.
೬) ಜೆರುಸಲೇಮಿನ ಮಹಿಳೆಯರಲ್ಲೊಬಳಾದ ವೆರೋನಿಕ ಎಂಬುವವಳು ಬಿಳಿಯ ಬಟ್ಟೆಯಿಂದ ಪ್ರಭು ಯೇಸುಸ್ವಾಮಿಯ ಮುಖವನ್ನು ವರೆಸುವಳು.
೭) ಪ್ರಭು ಯೇಸುಸ್ವಾಮಿಯು ಎರಡನೇ ಸಾರಿ ಮೊಕ್ಕಡೆಯಾಗಿ ಬೀಳುವರು.
೮) ಪ್ರಭು ಯೇಸುಸ್ವಾಮಿಯು ತನ್ನನ್ನು ಹಿಂಬಾಲಿಸಿ ಬರುತ್ತಿದ್ದ ಜೆರುಸಲೇಮಿನ ಮಹಿಳೆಯರಿಗೆ ಸಮಾಧಾನ ಮಾಡುವರು.
೯) ಪ್ರಭು ಯೇಸುಸ್ವಾಮಿಯು ಮೂರನೇ ಬಾರಿ ಮೊಕ್ಕಡೆಯಾಗಿ ಬೀಳುವರು.
೧೦) ಈ ಮೊದಲೇ ಸೂಚನೆಯಾದಂತೆ ಸೈನಿಕರು ಪ್ರಭು ಯೇಸುಸ್ವಾಮಿಯ ಬಟ್ಟೆಗಳನ್ನೂ ಸುಲಿದು ಹಂಚಿಕೊಳ್ಳುವರು.
೧೧) ಸೈನಿಕರು ಪ್ರಭು ಯೇಸುಸ್ವಾಮಿಯನ್ನು ಶಿಲುಬೆಮರಕ್ಕೆ ಕಟ್ಟಿ ಮೊಳೆ ಜಡಿಯುವರು.
೧೨) ಪ್ರಭು ಯೇಸುಸ್ವಾಮಿಯು ಶಿಲುಬೆಯ ಮೇಲೆ ಮರಣಿಸುವುದು.
೧೩) ಪ್ರಭು ಯೇಸುಸ್ವಾಮಿಯ ಪಾರ್ಥಿವ ಶರೀರವನ್ನು ಶಿಲುಬೆಯಿಂದ ಇಳಿಸಿ ತಾಯಿ ಮಾತೆ ಮರಿಯಳ ಮಡಿಲಲ್ಲಿರಿಸುವುದು. ಮತ್ತು
೧೪) ಪ್ರಭು ಯೇಸುಸ್ವಾಮಿಯ ಪಾರ್ಥಿವ ಶರೀರವನ್ನು ಗುಹೆಯೊಂದರಲ್ಲಿ ಭೂಸ್ಥಾಪನೆ ಮಾಡುವುದು.
ಪಾಸ್ಖ ಹಾಗೂ ಹಳೆಯ ಮತ್ತು ಹೊಸ ಒಡಂಬಡಿಕೆ:
ಪ್ರಭು ಯೇಸುಸ್ವಾಮಿ ಶುಕ್ರವಾರದಂದು ಶಿಲುಬೆ ಮೇಲೆ ಮರಣಿಸಿದ್ದು ಮತ್ತು ಮಾರನೇಯ ದಿನ ಭಾನುವಾರ ಸಮಾಧಿಯಿಂದ ಪುನರುತ್ಥಾನವಾದದ್ದನ್ನು ಆದಿ ಕ್ರೈಸ್ತರು - ಕ್ರಿಸ್ತನ ಅನುಯಾಯಿಗಳು, ಯೆಹೂದಿಗಳು ಆ ಸಮಯದಲ್ಲಿ ಆಚರಿಸುತ್ತಿದ್ದ ಹಳೆಯ ಒಡಂಬಡಿಕೆಯ ಕಾಲದ ಪಾಸ್ಖ ಹಬ್ಬಕ್ಕೆ(ಪಾಸ್ ಓವರ್- ಪ್ರವಾದಿ ಮೋಸೆಸ್ ನ ನಿಮಿತ್ಯದಿಂದ ಇಜಿಪ್ತಿನಿಂದ ಯೆಹೂದಿಗಳಿಗೆ ಪ್ರಾಪ್ತವಾದ ವಿಮೋಚನೆಯ ಸಾಂಪ್ರದಾಯಿಕ ಹಬ್ಬ) ಸಮೀಕರಿಸಿದರು.
ಯೆಹೂದಿಗಳಿಗೆ ಪಾಸ್ಖ ವಿಮೋಚನೆಯ ಹಬ್ಬವಾದರೆ, ಆದಿ ಕ್ರೈಸ್ತರಿಗೆ ದೇವಸುತ ಪ್ರಭು ಯೇಸುಸ್ವಾಮಿಯ ಪುನರುತ್ಥಾನವನ್ನು ಸ್ಮರಿಸುವ `ಈಸ್ಟರ್ ಹಬ್ಬ' ರಕ್ಷಣೆಯ ಹಬ್ಬವಾಯಿತು.
ಮೊದಮೊದಲು ಈಸ್ಟರ್ ಹಬ್ಬದ ಆಚರಣೆಯ ದಿನದ ಬಗ್ಗೆ ಗೊಂದಲಗಳಿದ್ದರೂ, ಕ್ರಿ.ಶ ೩೨೫ರಲ್ಲಿ ಸೈಸಿಯಾದಲ್ಲಿ ನಡೆದ ಪ್ರಥಮ ಧಾರ್ಮಿಕ ಮಹಾಸಮ್ಮೇಳನದಲ್ಲಿ, ಚಳಿಗಾಲದ ನಂತರ ನಿಸರ್ಗವು ಮತ್ತೆ ಹೊಸ ನವೋಲ್ಲಾಸ ಪಡೆಯುವ ಸಸ್ಯ ಸಮೃದ್ಧಿಯ ವಸಂತಕಾಲದ ಹುಣ್ಣಿಮೆಯ ಮೊದಲ ರವಿವಾರವನ್ನು `ಈಸ್ಟರ್ ಹಬ್ಬ'ವನ್ನು ಆಚರಿಸಲು ನಿರ್ಧರಿಸಲಾಯಿತೆಂದು ಹೇಳಲಾಗುತ್ತದೆ. (`ಈಸ್ಟರ್' ಎಂಬುದು ವಸಂತ ಋತುವಿನ ದೇವತೆಯ ಹೆಸರು. ಆದಿ ಕ್ರೈಸ್ತರು ತಮ್ಮ ಪೂರ್ವಾಶ್ರಮದ ದೈವಾರಾಧನೆಯನ್ನು ಪ್ರಭು ಯೇಸುಸ್ವಾಮಿಯ ಪುನರುತ್ಥಾನಕ್ಕೆ ಸಂವಾದಿಯಾಗಿ ಕಂಡುಕೊಂಡರು ಎನ್ನಲಾಗುತ್ತದೆ.)
ದೇಹ ದಂಡನೆಯ ತಪಸ್ಸು ಕಾಲ:
ಸಾಮಾನ್ಯವಾಗಿ ಫೆಬ್ರುವರಿ ಮಾರ್ಚ ತಿಂಗಳಲ್ಲಿ ಬರುವ ಈಸ್ಟರ್ ಹಬ್ಬಕ್ಕೆ ಮೊದಲು ೪೦ ದಿನಗಳ ಕಾಲದ ಅವಧಿಯನ್ನು (ಭಾನವಾರ ಲೆಕ್ಕಕ್ಕೆ ಸೇರುವುದಿಲ್ಲ) ಕೆಥೋಲಿಕ ಕ್ರೈಸ್ತರು `ತಪಸ್ಸುಕಾಲ'ವೆಂದು ಕರೆಯುತ್ತಾರೆ. `ತಪಸ್ಸು ಕಾಲಕ್ಕೆ' ಆಂಗ್ಲ ಪದ ಲೆಂಟ್. ಲೆಂಟ್ ಎಂದರೆ ವಸಂತ ಎಂಬ ಅರ್ಥವಿದೆ. ಪ್ರಭುಯೇಸು ಕ್ರಿಸ್ತರು ತಮ್ಮ ಬಹಿರಂಗ ಜೀವನವನ್ನು ಆರಂಭಿಸುವ ಮುನ್ನ ೪೦ ದಿನಗಳ ಕಾಲ ಜಪ, ಧ್ಯಾನ ಮತ್ತು ದೇಹದಂಡನೆಯ ಉಪವಾಸದಲ್ಲಿ ಕಾಲಕಳೆದರೆಂದು ಹೊಸ ಒಡಂಬಡಿಕೆಯ, ಜೇಸುನಾಥರ ಜೀವನ ಕಥನ ಸಾರುವ `ಸುವಾರ್ತೆ'ಗಳಲ್ಲಿ ಪ್ರಸ್ತಾಪಿಸಲಾಗಿದೆ. ಇದು ತಪಸ್ಸು ಕಾಲದ ಆಚರಣೆಯ ಹಿನ್ನಲೆ.
ಈ ಅವಧಿಯಲ್ಲಿ ಈ ಹಿಂದೆ ಉಪವಾಸವಿರುವುದರ ಜೊತೆಗೆ ಸಂಪ್ರದಾಯ ಶರಣರು ಕಪ್ಪುಬಟ್ಟೆ ಧರಿಸುತ್ತಿದ್ದರು, ಕೆಲವರು ಕೂದಲನ್ನು ಹಾಗೆ ಬಿಟ್ಟುಕೊಂಡಿರುತ್ತಿದ್ದರು. ಮತ್ತೆ ಕೆಲವರು ಮಾಂಸಾಹಾರಕ್ಕೆ ತಾತ್ಕಾಲಿಕ ವಿರಾಮ ಹೇಳುತ್ತಿದ್ದರು.
ಬೂದಿ (ವಿಭೂತಿ-ಹಿಂದಿನ ವರ್ಷ 'ಗರಿಗಳ ಹಬ್ಬ'ದಂದು ಪಾದ್ರಿಗಳು ಆಶಿರ್ವದಿಸಿ ಕೊಟ್ಟಿದ್ದ ಗರಿಗಳನ್ನು ಭಕ್ತರು ಹಿಂದಿರುಗಿಸಿದ ನಂತರ ಅವುಗಳನ್ನು ಸುಟ್ಟು ಸಿದ್ಧಪಡಿಸಿದ ಬೂದಿಯನ್ನು ಅಂದು `ಮಣ್ಣಂದ ಕಾಯ, ಮಣ್ಣಿಗೆ ಸೇರುವೆ' ಎನ್ನತ್ತಾ ಅದನ್ನು ಹಣೆಗೆ ಹಚ್ಚಲಾಗುತ್ತದೆ.) ಬುಧವಾರದಂದು (ಆಶ್ ವೆನ್ಸಡೆ) ಆರಂಭವಾಗುವ `ತಪಸ್ಸು ಕಾಲ'ದಲ್ಲಿ ಬರುವ ಶುಕ್ರವಾರಗಳಲ್ಲಿ ವ್ಯಯಕ್ತಿಕವಾಗಿ, ಕೌಟುಂಬಿಕ ನೆಲೆಗಳಲ್ಲಿ ಹಾಗು ಚರ್ಚುಗಳಲ್ಲಿ ಸಾಮೂಹಿಕವಾಗಿ `ಶಿಲುಬೆ ಹಾದಿ'ಯನ್ನು ನಡೆಸಲಾಗುತ್ತದೆ.
`ಶುಭಶುಕ್ರವಾರ'ದ ಹಿಂದಿನ ಭಾನುವಾರ `ಗರಿಗಳ ಹಬ್ಬ', ಅದು ಪ್ರಭುಯೇಸುಸ್ವಾಮಿ ಜೆರುಸಲೇಮಿಗೆ ಪ್ರವೇಶಿಸಿದ ಸಂಭ್ರಮವನ್ನು ಕೊಂಡಾಡುವ ಹಬ್ಬ. ಅಂದು ಜೆರುಸಲೇಮಿನ ಜನರು ಗರಿಗಳನ್ನು ಹಿಡಿದು ಪ್ರಭುಯೇಸುಸ್ವಾಮಿಗೆ ಸ್ವಾಗತ ಕೋರಿದ್ದರಂತೆ.
ಕೊನೆಯ ಭೋಜನ'ದ `ಪವಿತ್ರ ವಾರ':
`ಶುಭ ಶುಕ್ರವಾರ'ವಿರುವ ವಾರವನ್ನು `ಪವಿತ್ರವಾರ'ವೆಂದು ಗುರುತಿಸಲಾಗುತ್ತದೆ.
ಆ ವಾರದ `ಪವಿತ್ರ ಗುರುವಾರ'ದಂದು ವಿಶೇಷ ಆರಾಧನೆಗಳ ಜೊತೆಗೆ `ಕೊನೆಯ ಭೋಜನ'ದ ಮೊದಲು ಪ್ರಭು ಯೇಸುಕ್ರಿಸ್ತರು ತಮ್ಮ ಶಿಷ್ಯರ ಪಾದ ತೊಳೆದು ದೈನ್ಯತೆಯ ಪಾಠ ಹೇಳಿದಂತೆ ಘಟನೆಯ ಪುನರಾವರ್ತನೆ ಎಂಬಂತೆ, ಚರ್ಚಿನಲ್ಲಿ ಪಾದ್ರಿಗಳು ಸಾಂಕೇತಿಕವಾಗಿ ೧೨ ಜನ ಭಕ್ತರ ಪಾದ ತೊಳೆಯುವ ಸಾಂಗ್ಯ ನಡೆಸಿಕೊಡುತ್ತಾರೆ.
`ಶುಭಶುಕ್ರವಾರ'ದಂದು ಸಂಪ್ರದಾಯಸ್ತರ ಮನೆಗಳಲ್ಲಿ ಸಾವಿನ ಸೂತಕದ ಲಕ್ಷಣಗಳನ್ನು ಕಾಣಬಹುದು. ಅಂದು ಚರ್ಚಿನಲ್ಲಿ ವಿಶೇಷ ಪ್ರಾರ್ಥನೆಗಳು ನಡೆದರೆ, ಮನೆಗಳಲ್ಲೂ ಅದು ಪ್ರತಿಫಲಿಸುತ್ತಿರುತ್ತದೆ. ಮಾರನೇಯ ದಿನ ಶನಿವಾರ ಜಾಗರಣೆ, ಅದೇ ದಿನ ಸರಿರಾತ್ರಿ ಈಸ್ಟರ್ ಹಬ್ಬದ ದೊಡ್ಡ ಪಾಡುಪೂಜೆ ನಡೆಯುತ್ತದೆ. ಅಗ್ನಿ, ಧೂಪ ತೀರ್ಥಗಳನ್ನು ಪವಿತ್ರೀಕರಿಸಲಾಗುತ್ತದೆ. ದೊಡ್ಡ ಮೇಣದ ಬತ್ತಿಯನ್ನು ಹಚ್ಚಿ, ಅದರ ಮೇಲೆ ಶಿಲುಬೆ ಆಕಾರವನ್ನು ಹೋಲುವಂತೆ ಧೂಪದ ಉಂಡೆಗಳನ್ನು ನೆಟ್ಟು ಆದಿ ಅಂತ್ಯದ ಸ್ಮರಣೆ ಮಾಡಲಾಗುತ್ತದೆ. ಆ ದೊಡ್ಡ `ಪವಿತ್ರ ಮೇಣದ ಬತ್ತಿ' ಪ್ರಭು ಯೇಸುಕ್ರಿಸ್ತರ ಪುನರುತ್ಥಾನದ ಸಂಕೇತವಾಗಿರುತ್ತದೆ. ಪ್ರಭು ಯೇಸುಸ್ವಾಮಿ ಪುನರುತ್ಥಾನರಾದ `ಈಸ್ಟರ್' ಹಬ್ಬ ಸಂಪನ್ನವಾಗುತ್ತದೆ.
ಪವಿತ್ರ ಕ್ಷೇತ್ರದ ಯಾತ್ರೆಯ ಪ್ರತೀಕ:
ಪ್ರಭು ಯೇಸುಕ್ರಿಸ್ತರು ಬಾಳಿ ಬದುಕಿದ, ಪ್ರಬೋಧನೆ ಮಾಡಿದ, ಪವಾಡಗಳನ್ನು ಗೈದ ಸ್ಥಳಗಳಿರುವ ಪವಿತ್ರ ಭೂಮಿ ಜೆರುಸಲೇಮಿಗೆ ಪ್ರತಿಯೊಬ್ಬ ಕ್ರೈಸ್ತನಿಗೆ ಭೇಟಿಕೊಡುವುದು ಅಸಾಧ್ಯವಾದ ಮಾತು. ಈ ನಿಟ್ಟಿನಲ್ಲಿ 'ಶಿಲುಬೆ ಹಾದಿ' ಆಚರಣೆಯು, ಕ್ರೈಸ್ತರ ಪವಿತ್ರ ಭೂಮಿ `ಜೆರುಸಲೇಮಿನ ತೀರ್ಥಯಾತ್ರೆ'ಯ ಪುಟ್ಟ ಪ್ರತೀಕ ಎಂದು ಹೇಳಲಾಗುತ್ತದೆ. ಈ ಆಚರಣೆಯಲ್ಲಿ ಭಾಗವಹಿಸುವವರಿಗೆ `ಪವಿತ್ರ ಭೂಮಿ ಜೆರುಸಲೇಮಿ'ಗೆ ಭೇಟಿಕೊಟ್ಟ ಧನ್ಯತೆಯ ಭಾವ ಮೂಡುತ್ತದೆ ಎಂಬ ಕಾರಣವೇ ಈ ಆಚರಣೆಯ ಆರಂಭಕ್ಕೆ ನಾಂದಿಯಾಯಿತು ಎನ್ನಲಾಗುತ್ತಿದೆ.
ಪವಿತ್ರ ಭೂಮಿ 'ಜೆರುಸಲೇಮ ಯಾತ್ರೆ'ಯ ಸಂದರ್ಭದಲ್ಲಿ ಶಿಲುಬೆ ಹೊತ್ತು ಸಾಗಿದ ದಾರಿಯಲ್ಲಿ ಭಕ್ತರು ಸಾಗಿ ಧನ್ಯತೆಯನ್ನು ಅನುಭವಿಸುತ್ತಿದ್ದರು.
ಮೂರು, ನಾಲ್ಕನೇ ಶತಮಾನಗಳಲ್ಲಿ ದೂರದ ಪವಿತ್ರ ಭೂಮಿಗೆ ಹೋಗಲಾಗದ ಭಕ್ತರಿಗೆ ಅನುಕೂಲವಾಗಲಿ ಎಂದು ಕೆಲವು ದೇಶಗಳಲ್ಲಿನ ಸನ್ಯಾಸಿ ಮಠಗಳಲ್ಲಿ ಜೆರುಸಲೇಮಿನ ಪವಿತ್ರ ಕ್ಷೇತ್ರಗಳ ಪ್ರತಿಕೃತಿಗಳ ನಿರ್ಮಾಣ ಕಾರ್ಯ ನಡೆದವು. ಪ್ರಯಾಣದ ಪ್ರಯಾಸವನ್ನು ಅನುಭವಿಸಿ ಪವಿತ್ರ ಭೂಮಿಗೆ ಭೇಟಿ ಕೊಟ್ಟವರು ಮಾಡುತ್ತಿದ್ದ ಪ್ರಭುಯೇಸುಸ್ವಾಮಿ ಶಿಲುಬೆ ಹೊತ್ತು ಸಾಗಿದ ಹಾದಿಯ ಬಣ್ಣನೆ, ಅವರವರ ಧನ್ಯತೆಯ ಭಾವ ಆಯಾ ಊರುಗಳಲ್ಲಿ ಅನುರಣಿಸಿದಾಗ, ಆಯಾ ಊರಲ್ಲಿನ ಭಕ್ತರಲ್ಲಿ ಪವಿತ್ರ ಭೂಮಿಯ ಭೇಟಿಯ ತವಕ ಬೆಚ್ಚುತ್ತಿತ್ತು. ಈ ಬೆಳವಣಿಗೆಗಳೇ ಕ್ರಮೇಣ ಶಿಲುಬೆ ಹಾದಿಯ ಸ್ಥಳಗಳ ಚಿತ್ರಣಗಳು ಹದಿನೇಳನೇ ಶತಮಾನದ ಉತ್ತರಾರ್ಧದ ಹೊತ್ತಿಗೆ ಚರ್ಚ ಅಂಗಳಕ್ಕೆ ಬರುವಂತೆ ಪ್ರೆರೇಪಿಸಿರಬೇಕು ಎಂದು ಇತಿಹಾಸಕಾರರು ಪ್ರತಿಪಾದಿಸುತ್ತಾರೆ.
ಮಾತೆ ಮರಿಯಳ `ನೋವಿನ ಹಾದಿ':
ಹದಿನೈದನೇ ಶತಮಾನದಲ್ಲಿ ಪೂರ್ಣ ಪ್ರಮಾಣದ `ಶಿಲುಬೆ ಹಾದಿ'ಯ ಪರಿಕಲ್ಪನೆ ಅಸ್ತಿತ್ವಕ್ಕೆ ಬಂದಿತ್ತು ಎನ್ನಲಾಗುತ್ತದೆ. ಮಾತೆ ಮರಿಯಳು ಕೆಲವು ಸಮಯ ಅದೇ ಹಾದಿಯಲ್ಲಿ ಸಾಗಿದ್ದಳು ಎಂಬ ಕಾರಣಕ್ಕೆ `ವಿಯಾ ಡೋಲೋರೋಸಾ' (ನೋವಿನ ಹಾದಿ) ಎಂಬ ಹೆಸರು ಪ್ರಾಪ್ತಿಯಾಯಿತಂತೆ. ಈ ಪದಪುಂಜ ೧೬ನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದಿತಂತೆ.
`ಶಿಲುಬೆ ಹಾದಿ'ಯಲ್ಲಿ ಇಂದು `ಹದಿನಾಲ್ಕು ಸ್ಥಳ'ಗಳಿವೆ. ಮೊದಮೊದಲು `ಶಿಲುಬೆ ಹಾದಿ'ಗೆ ಇಷ್ಟೇ ಸ್ಥಳಗಳು ಎಂಬುದು ಇರಲಿಲ್ಲ. ಪವಿತ್ರ ಭೂಮಿಗೆ ಭೇಟಿ ಕೊಟ್ಟ ಭಕ್ತರು ತಮ್ಮ ಅನುಕೂಲಕ್ಕೆ ತಕ್ಕಂತೆ ೬, ೧೯, ೨೫, ೩೧, ೩೭ ಎಂದು ಶಿಲುಬೆ ಹಾದಿಯ ಸ್ಥಳಗಳನ್ನು ಗುರುತಿಸುತ್ತಿದ್ದರು. ಹದಿನಾರನೇ ಶತಮಾನದ ಕೊನೆಯಲ್ಲಿ ಪ್ರಕಟಗೊಂಡ ಪುಸ್ತಕವೊಂದರಲ್ಲಿ ಇಂದು ಬಳಕೆಯಲ್ಲಿರುವ ಮೊದಲ ೧೨ ಸ್ಥಳಗಳನ್ನು ಗುರುತಿಸಲಾಗಿದೆ. ನಂತರ ಧರ್ಮ ಸಭೆ `ಶಿಲುಬೆ ಹಾದಿ'ಯ ಸ್ಥಳಗಳನ್ನು ೧೪ಕ್ಕೆ ನಿಗದಿ ಪಡಿಸಿದೆ.
ಆಚರಣೆಯು ಫ್ರಾನ್ಸಿಸ್ಕನ್ ಸಭೆಯ ಕೊಡುಗೆ:
ಕೆಲವು ಸಮಯ ಜೆರುಸಲೇಮ್ ಪಟ್ಟಣ ಮಹಮ್ಮದೀಯರ ವಶದಲ್ಲಿದ್ದ ಕಾರಣ `ಶಿಲುಬೆ ಹಾದಿ'ಯ ಯುರೋಪಿನ ವಿವಿಧ ದೇಶಗಳಲ್ಲಿ ಹುಟ್ಟಿಕೊಂಡು ಇಂದಿನ ಸ್ವರೂಪ ಪಡೆದಿರಬೇಕು ಇದಕ್ಕೆ ಫ್ರಾನ್ಸಿಸ್ಕ್ನ್ ಸಭೆಯ ಪಾದ್ರಿಗಳ ಕೊಡುಗೆ ಅಪಾರ ಎಂದು ಕೆಥೋಲಿಕ ವಿಶ್ವಕೋಶವು ದಾಖಲಿಸಿದೆ,
ಹದಿನೇಳನೇ ಶತಮಾನದಲ್ಲಿದ್ದ ಆಳಿದವರಾದ ಹನ್ನೊಂದನೇ ನಿಷ್ಕಳಂಕಪ್ಪ (೧೬೮೬) ಮತ್ತು ಹನ್ನೆರಡನೇ ನಿಷ್ಕಳಂಕಪ್ಪ (೧೬೯೪) (ಇನೊಸೆಂಟ್) ಮತ್ತು ಹದಿನೆಂಟನೇ ಶತಮಾನದಲ್ಲಿದ್ದ ಆಳಿದವರಾದ ಹದಿಮೂರನೇ ಆಶಿರ್ವಾದಪ್ಪ (೧೭೨೬) ಪಾಪುಸ್ವಾಮಿಗಳು ಅದಕ್ಕೊಂದು ಅಧಿಕೃತ ಮುದ್ರೆಯೊತ್ತಿದರು.
`ಮುಂದೆ ೧೭೩೧ರಲ್ಲಿ ಆಳಿದವರಾದ ಹನ್ನೆರಡನೇ ಶಾಂತಪ್ಪ ಪಾಪುಸ್ವಾಮಿಗಳು ಚರ್ಚುಗಳಲ್ಲಿ `ಶಿಲುಬೆ ಹಾದಿ' ಪಟಗಳನ್ನು ಅಭಿಷೇಕಿಸಲು ಅನುಮತಿ ನೀಡಿದ್ದರು' ಎಂದು ಕೆಥೋಲಿಕ ವಿಶ್ವಕೋಶದಲ್ಲಿ ಪ್ರಸ್ತಾಪಿಸಲಾಗಿದೆ.
-------------------------
-------------------------
No comments:
Post a Comment