ಡಾ. ಸಿಸ್ಟರ್ ಪ್ರೇಮ (ಎಸ್.ಎಮ್.ಎಮ್.ಐ)
————————————-
ಹಿಂದಿನ ಸಂಚಿಕೆಯಲ್ಲಿ ‘ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು’ ಎಂಬ ವಿಷಯದಡಿಯಲ್ಲಿ ಸ್ವಾತಂತ್ರ್ಯೋತ್ತರದ ಪ್ರಮುಖ ಕನ್ನಡ ಕ್ರೈಸ್ತ ಸಾಹಿತಿಯಾದ ರೆವರೆಂಡ್ ಫಾದರ್ ಐ. ಅಂತಪ್ಪನವರ ಬದುಕು ಹಾಗು ಬರವಣಿಗೆಯ ಬಗ್ಗೆ ವಿವೇಚಿಸಿದ್ದೇನೆ. ಈ ಪ್ರಸ್ತುತ ಸಂಚಿಕೆಯಲ್ಲಿ ಅವರ ಸೇವೆಯ ವಿಸ್ತಾರದ ಮುಂದುವರಿದ ಭಾಗವನ್ನು ಸಾದರಪಡಿಸುವ ಪುಟ್ಟ ಪ್ರಯತ್ನ ಮಾಡಿರುತ್ತೇನೆ.
ಉ) ವಿದೇಶದಿಂದ ಸ್ವಂತ ನಾಡಿಗೆ :
ರೋಮ್ ದೇಶದ ಗ್ರೆಗೋರಿಯನ್ ಯೂನಿವರ್ಸಿಟಿಯಲ್ಲಿ ಸಂಶೋಧನೆ ಮಾಡಿ ತಾಯ್ನಾಡಿಗೆ ಮರಳಿದ ಫಾದರ್ ಅಂತಪ್ಪನವರನ್ನು ಸಂತಸದಿಂದ ಸ್ವಾಗತಿಸಲಾಯಿತು. ಸಂತ ರಾಯಪ್ಪರ ಗುರುಮಠದ ಪ್ರೊಫೆಸರಾಗಿ ಸೇವೆ ಸಲ್ಲಿಸಲು ಆಹ್ವಾನ ಬಂದಿತಾದರೂ ಆ ಹುದ್ದೆಗೆ ಹೋಗದೆ ಸಂತ ಫ್ರಾನ್ಸಿಸ್ ಜೇವಿಯರ್ ಪ್ರಧಾನಾಲಯದ ಸಹಾಯಕ ಗುರುವಾಗಿ 7.2.1961ರಲ್ಲಿ ನೇಮಿತರಾದರು. ಅಲ್ಲಿ ಅವರು ಪೂಜೆ ಹೇಳುವುದು, ಪಾಪನಿವೇದನೆ ಕೇಳುವುದು, ದೈವ ವಾಕ್ಯ ಬೋಧಿಸುವುದು ಮತ್ತು ಮಕ್ಕಳಿಗೆ ಜ್ಞಾನೋಪದೇಶ ಹೇಳಿಕೊಡುವುದು ಮನೆಗಳನ್ನು ಸಂಧಿಸುವುದು ಮುಂತಾದ ಕೆಲಸಗಳನ್ನು ನಿರ್ವಹಿಸುತ್ತಿದ್ದರು ಎಂಬುದಾಗಿ ಅವರನ್ನು ಸಂದರ್ಶಿಸಿದಾಗ ದೊರೆತ ಮಾಹಿತಿಯಾಗಿದೆ.
ದಿನಾಂಕ 12.5.1961ರಂದು ಬಿಷಪ್ ಪೋತಕಮೂರಿ ಅವರು ಫಾದರ್ ಅಂತಪ್ಪರನ್ನು ಧರ್ಮಕ್ಷೇತ್ರದ ನೋಟರಿ ಮತ್ತು ಕುಲಪತಿಯನ್ನಾಗಿ ನೇಮಿಸಿದರು. ಫಾದರ್ ಅಂತಪ್ಪನವರು ಅವರಿಗೆ ವಹಿಸಿದ್ದ ಯಾವುದೇ ಜವಬ್ದಾರಿಯನ್ನು ನಿರ್ವಂಚನೆಯಿಂದ ಚಾಚೂ ತಪ್ಪದೇ ಪೂರೈಸುವ ಆತ್ಮವಿಶ್ವಾಸ ಹೊಂದಿದ್ದರೆಂಬುದನ್ನು ಅವರ ಮಾತಿನಿಂದಲೇ ವ್ಯಕ್ತವಾದಾಗ ತುಂಬ ಆನಂದವಾಯಿತು. ಅವರು ಬೆಂಗಳೂರು ಧರ್ಮಕ್ಷೇತ್ರದ ಅತ್ಯುತ್ತಮ ಸ್ಥಾನಗಳಲ್ಲೇ ಗುರುಸೇವೆ ಸಲ್ಲಿಸುತ್ತಾ ಬಂದರು. 1976ರಂದು ಸಂತ ಅಲೋಶಿಯಸ್ ಶಾಲೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವಾಗಲೇ ಮಹಾ ಧರ್ಮಕ್ಷೇತ್ರದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾಗಿ ನೇಮಕಗೊಂಡು ಮಹಾಧರ್ಮಕ್ಷೇತ್ರದ ಶಿಕ್ಷಣ ಮಂಡಳಿಗೆ ನಿಯಮಗಳನ್ನು ರೂಪಿಸಿದರು. ಧರ್ಮಕ್ಷೇತ್ರದ ಶಿಕ್ಷಣ ಸಂಸ್ಥೆಗಳಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದರು. ಬೆಂಗಳೂರು ಧರ್ಮಕ್ಷೇತ್ರದ ಮರಿಯಾಪುರ, ತಂಬುಚೆಟ್ಟಿಪಾಳ್ಯ, ಶಿಲ್ವೆಪುರ, ಹಾರೋಬೆಲೆ, ಮತ್ತು ಬೇಗೂರುಗಳಲ್ಲಿ ಪ್ರೌಢಶಾಲೆಗಳನ್ನು ಪ್ರಾರಂಭಿಸಿದರು.
ಕ್ರಿ.ಶ. 1986ರಲ್ಲಿ ಹಲಸೂರಿನ ಲೂರ್ದು ಶಾಲೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುವುದರೊಂದಿಗೆ ಶಾಲಾ ಸೇವೆಯಿಂದ ನಿವೃತ್ತರಾಗಿ ಬೆಂಗಳೂರು ಧರ್ಮಕ್ಷೇತ್ರದ ಸೆಂಟ್ ಪ್ಯಾಟ್ರಿಕ್ ಚರ್ಚ್, ಇಂದಿರಾನಗರದ ಪುನರುತ್ಥಾನ ದೇವಾಲಯ ಮುಂತಾದ ಪ್ರತಿಷ್ಠಿತ ಚರ್ಚ್‍ಗಳಲ್ಲಿ ಸೇವೆಯನ್ನು ಮುಂದುವರಿಸಿದರು. ಜಯನಗರದ ಕ್ರಿಸ್ತ ಪ್ರಭಾಲಯ ಮತ್ತು ಜರಗನ ಹಳ್ಳಿಯಲ್ಲಿ ಕ್ರಿಸ್ತ ಕರುಣಾಲಯ ದೇವಾಲಯವನ್ನು ನಿರ್ಮಿಸಿದ ಇವರು ಈ ಆಲಯದಲ್ಲಿ ತಮ್ಮ ಗುರುಜೀವನ ಸೇವಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.
ಊ) ಉಲ್ಲಾಸಪ್ಪ ಸಂಸ್ಥೆ :
ಸ್ವತಃ ಹಳ್ಳಿಯಿಂದ ಬಂದ ಫಾದರ್ ಅಂತಪ್ಪನವರು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸ, ಅದರಲ್ಲೂ ಹಳ್ಳಿಗಾಡಿನ ಮಕ್ಕಳ ವಿದ್ಯಾಭ್ಯಾಸದಲ್ಲಿ ಬಹಳ ಮುತುವರ್ಜಿ ವಹಿಸುತ್ತಿದ್ದರು. ಸಂತ ಅಲೋಶಿಯಸ್ ಪಾಠ ಶಾಲೆಯ ಆವರಣದಲ್ಲಿ ಹಳ್ಳಿ ಮಕ್ಕಳಿಗಾಗಿ ಒಂದು ಬೋರ್ಡಿಂಗ್ ಇತ್ತು. ಅದರ ಬೆಳವಣಿಗೆಗಾಗಿ ಹೆಚ್ಚು ಆಸಕ್ತಿ ವಹಿಸಿ ಹಳ್ಳಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದುಡಿದರು. ಈ ಬೋರ್ಡಿಂಗ್‍ನಲ್ಲಿ ಓದಿದವರು ಜೀವನದಲ್ಲಿ ಉನ್ನತ ಮಟ್ಟದಲ್ಲಿರುವ ಮತ್ತು ಗುರುಗಳಾಗಿರುವ ಸಾಕಷ್ಟು ನಿದರ್ಶನಗಳಿವೆ. ದುರದೃಷ್ಟವಶತ್ ಈ ಬೋರ್ಡಿಂಗನ್ನು ಈಗಿನ ಆಡಳಿತಗಾರರು ಮುಚ್ಚಿಬಿಟ್ಟಿದ್ದಾರೆ. ಸಂತ ಪ್ಯಾಟ್ರಿಕ್ ಧರ್ಮಕೇಂದ್ರದಲ್ಲಿದ್ದಾಗ ಪ್ರೌಢ ಶಾಲೆಯ ಮಕ್ಕಳಿಗೆಂದೇ ಒಂದು ಬೋರ್ಡಿಂಗನ್ನು ತೆರೆಯಲು ಪ್ರಯಾಸಪಟ್ಟರು; ಏಕೆಂದರೆ ಈಗ ಖಾಲಿ ಆಗಿರುವ ಬೋರ್ಡಿಂಗ್ ಪ್ರಾಥಮಿಕ ಶಾಲೆಯ ಮಕ್ಕಳಿಗೆಂದೇ ಮೀಸಲಾಗಿ ಇಟ್ಟಿದೆ. ಈ ಪ್ರಯತ್ನವು ಫಲಕಾರಿಯಾಗಿಲ್ಲ. ಅಂದಿನ ಮಹಾ ಧರ್ಮಾಧ್ಯಕ್ಷರು ಇದಕ್ಕೆ ಒಪ್ಪಲಿಲ್ಲ; ಇರುವ ಬೋರ್ಡಿಂಗ್‍ಗಳನ್ನು ಮುಚ್ಚುವಂತೆ ಒತ್ತಾಯಿಸುತ್ತಿದ್ದರು.
ಫಾದರ್ ಅಂತಪ್ಪನವರು 1975ನೇ ಇಸವಿಯಲ್ಲಿ ಉಲ್ಲಾಸಪ್ಪ ಸೊಸೈಟಿಯನ್ನು ಸ್ಥಾಪಿಸಿ ಬೆಳೆಸಿದರು. ಈ ಸಂಸ್ಥೆಯಿಂದ ಹಳ್ಳಿಗಳ ಸಾವಿರಾರು ಬಡ ಮಕ್ಕಳು ಪ್ರಮುಖವಾಗಿ ಕ್ರೈಸ್ತರು ತಮ್ಮ ವಿದ್ಯಾಭ್ಯಾಸವನ್ನು ಪಡೆದಿದ್ದಾರೆ. ತಮ್ಮ ದುಡಿಮೆಯ ಹಣವನ್ನು ಕಳುಹಿಸಿ ಈ ಸಂಸ್ಥೆಯನ್ನು ಪೊರೆದ ಗೆಟ್ರುಡ್ ಮತ್ತು ದಿವಂಗತ ಐರೀನ್ ಎಂಬ ಇಬ್ಬರು ವಿದೇಶೀ ಮಹಿಳೆಯರನ್ನು ಕೃತಜ್ಞತಾ ಪೂರ್ವಕವಾಗಿ ಸ್ಮರಿಸಬೇಕು. ಅಂತಪ್ಪನವರು ಈ ಸಂಸ್ಥೆಯ ಅಧ್ಯಕ್ಷರಾಗಿ ಕ್ರಿ.ಶ. 1975ನೇ ಇಸವಿಯಿಂದ 2005ರ ವರೆಗೆ ದುಡಿದರು. ಬೆಂಗಳೂರಿನ ಬೇಗೂರು, ದೊರೆಸಾನಿಪಾಳ್ಯ, ಸೋಮನಹಳ್ಳಿ, ಕೋಲಾರದ ಚಿಂತಾಮಣಿ, ಮರಿಯನ್‍ಪೇಟೆ, ಸೊಸೆಪಾಳ್ಯ, ಹಾಸನದ ಬೋರ್ಡಿಂಗ್, ಜೋಸೆಫ್‍ನಗರ, ತುಮಕೂರಿನ ಕುಣಿಗಲ್ ಹಾಗೂ ಮೈಸೂರಿನ ದೀನಾಶ್ರಮಕ್ಕೂ ಈ ಸಂಸ್ಥೆಯಿಂದ ಆರ್ಥಿಕ ನೆರವನ್ನು ನೀಡಲಾಗುತ್ತಿದೆ. ಇದಲ್ಲದೆ ಈ ಸಂಸ್ಥೆಯಿಂದಲೇ ಬೆಂಗಳೂರಿನ ವೀರನಪಾಳ್ಯದಲ್ಲಿ ಒಂದು ಬೋರ್ಡಿಂಗ್ ನಡೆಸಲಾಗುತ್ತಿತ್ತು. ಕ್ರಿ.ಶ. 1997ನೇ ಇಸವಿಯಲ್ಲಿ ಸ್ಥಾಪಿತವಾದ ಈ ಬೋರ್ಡಿಂಗ್ ವರ್ಷಕ್ಕೆ ಸರಾಸರಿ 15 ಬಡ ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಊಟ ಮತ್ತು ವಸತಿಯನ್ನು ನೀಡಲಾಗುತ್ತಿದೆ.
ಋ) ಫಾದರ್ ಅಂತಪ್ಪರ ಪ್ರೇರಕ ಶಕ್ತಿ :
ಪ್ರತಿಯೊಬ್ಬ ವ್ಯಕ್ತಿ ಭವಿಷ್ಯದ ಬಗ್ಗೆ ಕನಸು ಕಾಣುವುದು ಸಹಜ. ಆ ಕನಸನ್ನು ನನಸು ಮಾಡಲು ಸತತ ಪ್ರಯತ್ನ ಮತ್ತು ಸಾಧಿಸುವ ಛಲ ಇರಬೇಕು. ಜೊತೆಗೆ, ಹಿರಿಯರ, ಅಧಿಕಾರಿ ವರ್ಗದವರ, ಸ್ನೇಹಿತರ ಪ್ರೋತ್ಸಾಹ, ಬೆಂಬಲ, ಶಿಫಾರಸ್ಸು, ಸಹಾಯ ಮತ್ತು ಸಹಕಾರವೂ ಇರಬೇಕು. ಜೀವನದಲ್ಲಿ ದಾರ್ಶನಿಕ ವ್ಯಕ್ತಿಗಳ ಆದರ್ಶ ಹಿಡಿದು ಕನಸು ಕಾಣುವವರು ಖಂಡಿತ ಯಶಸ್ಸಿನ ಮೆಟ್ಟಿಲೇರುವುದು ದಿಟ್ಟ ಪ್ರಯತ್ನ ಮತ್ತು ಚಲದಿಂದ. ಇಂತಹ ಕನಸು ಕಂಡವರು ಫಾದರ್ ಅಂತಪ್ಪನವರು. ಅವರಿಗೆ ಆದರ್ಶ ವ್ಯಕ್ತಿಗಳು ಮತ್ತು ಮಾರ್ಗದರ್ಶಕರಿದ್ದರು, ಅವರಿಗೆ ಪ್ರೋತ್ಸಾಹ, ಬೆಂಬಲ ಮತ್ತು ಸಹಾಯ ಹಾಗೂ ಸಹಕಾರ ನೀಡುವವರಿದ್ದರು. ಅವರಲ್ಲಿ ಪ್ರಯತ್ನಿಸುವ ಮತ್ತು ಯಶಸ್ಸು ಗಳಿಸುವ ಛಲವಿತ್ತು. ಜೊತೆಗೆ ಪ್ರತಿಭೆ ಮತ್ತು ಪ್ರೌಢಿಮೆ ಇತ್ತು. ಅಂತಹ ದಾರ್ಶನಿಕರು, ಮಾರ್ಗದರ್ಶಕರು, ಪ್ರೇರಕರು, ಆದರ್ಶ ವ್ಯಕ್ತಿಗಳು ಸದಾ ಫಾದರ್ ಅಂತಪ್ಪರ ನೆನಪಿನಲ್ಲಿ ಉಳಿದಿದ್ದಾರೆ.
ತಮ್ಮ ತಂದೆಯ ಜೀವನ ಶೈಲಿ ಮತ್ತು ದೈವ ಶ್ರದ್ಧೆ ಬಾಲಕ ಅಂತಪ್ಪರಿಗೆ ಪ್ರೇರಣೆಯಾಗಿತ್ತು. ಫಾದರ್ ಅಂತಪ್ಪನವರ ತಂದೆ ಉಪದೇಶಿ ಇನ್ನಾಸಪ್ಪನವರ ದೈವಭಕ್ತಿ, ದೈವವಿಶ್ವಾಸ ಅಂತಪ್ಪನವರಿಗೆ ಪ್ರೇರಣೆ ನೀಡಿದವು. ಉಪದೇಶಿಯಾಗಿದ್ದ ಇನ್ನಾಸಪ್ಪರನ್ನು ಅವರ ಸಮಕಾಲಿನವರಾದ ಸಿಪಾಯಿ ಜೋಸೆಫ್‍ರವರು ಪೂಜಾರಯ್ಯ ಎಂದು ಕರೆಯುತ್ತಿದ್ದರÀಂತೆ. ಧರ್ಮಕೇಂದ್ರದಲ್ಲಿ ಎಲ್ಲಾ ಧಾರ್ಮಿಕ ಆಚರಣೆಗಳಲ್ಲಿ ಉಪದೇಶಿಗಳ ಪಾತ್ರ ಬಹುಮುಖ್ಯ. ಅನೇಕ ಕಡೆಗಳಲ್ಲಿ ಧರ್ಮಗುರುಗಳಿಲ್ಲದ ಸಂದರ್ಭದಲ್ಲಿ ಉಪದೇಶಿಗಳು ಗುರುಗಳ ಜವಾಬ್ದಾರಿಯನ್ನು ಹೊರುವಂತಹವರು. ಹಿಂದಿನ ಜೆಸ್ವಿಟ್ ಮಿಶನರಿಗಳ ಕಾಲದಿಂದಲೂ ಉಪದೇಶಿಗಳು ಕ್ರಿಸ್ತ ಸುವಾರ್ತಾ ಪ್ರಚಾರ ಕಾರ್ಯದಲ್ಲಿ ನಿಜವಾದ ಗುರುಗಳ ಹಾಗೆ ಶ್ರಮಿಸಿದ್ದಾರೆ. ಇಂತಹ ಪಾತ್ರವನ್ನು ಫಾದರ್ ಅಂತಪ್ಪರ ತಂದೆ ಇನ್ನಾಸಪ್ಪ ವಹಿಸಿದ್ದಾರೆ. ಜೊತೆಗೆ ಹಾರೋಬೆಲೆ ಗ್ರಾಮದಲ್ಲಿ ಪ್ರದರ್ಶನವಾಗುವ ಮಹಿಮೆ ನಾಟಕದಲ್ಲಿ ಯೇಸುಕ್ರಿಸ್ತರ ಪಾತ್ರವನ್ನು ಸತತ ಇಪ್ಪತ್ತೈದು ವರ್ಷಗಳಿಗಿಂತಲೂ ಹೆಚ್ಚು ಕಾಲ ಬಹು ಸೊಗಸಾಗಿ ನಟಿಸಿದ್ದರು.
ಫಾದರ್ ಅಂತಪ್ಪನವರಿಗೆ ಪ್ರೇರಣೆ ನೀಡಿದ ಮತ್ತೊಬ್ಬರು ಫಾದರ್ ಶೆಂಬ್ರಿ. ಹಾರೋಬೆಲೆ ಧರ್ಮಕೇಂದ್ರದ ಗುರುವಾಗಿದ್ದ ಅವರ ಆದರ್ಶ ಜೀವನ, ಬಡಬಗ್ಗರ, ದೀನ-ದಲಿತರ ಮೇಲೆ ಅವರಿಗಿದ್ದ ಅಪಾರ ಕಾಳಜಿ, ಅವರ ಉದಾರ ಮನೋಭಾವ, ಬಾಲಕ ಅಂತಪ್ಪರಿಗೆ ಪ್ರೇರಣೆ ನೀಡಿತು. ಧರ್ಮಕೇಂದ್ರದ ಗುರುವಾಗಿ ಬಂದ ಫಾದರ್ ಆಲ್ಬರ್ಟ್ ಮಸ್ಕೆರನಾಸ್ ಅವರ ವಿಶ್ವಾಸಮಯ ಜೀವನ ಮತ್ತು ಸರಳ ಜೀವನ ವಿಧಾನ ಇವರಿಗೆ ಆದರ್ಶವಾಯಿತು. ಶ್ರೀಮತಿ ರಾಜಮ್ಮ ಫಾದರ್ ಅಂತಪ್ಪನವರಿಗೆ ರಾಜವ್ವ ಎಂದೇ ಚಿರಪರಿಚಿತ, ಇವರು ಅಂತಪ್ಪರ ಪ್ರೀತಿಯ ಆಂಟಿ. ಬಾಲಕ ಅಂತಪ್ಪಗೆ ಬೈಬಲ್ ಹಾಗೂ ಸಂತ ಭಕ್ತರ ಕಥೆಗಳನ್ನು ಹೇಳಿ ಅವರಲ್ಲಿ ದೈವಕರೆಯ ಬೀಜವನ್ನು ಬಿತ್ತಿದ್ದವರು. ಹೀಗೆ ಇವರೆಲ್ಲರನ್ನು ಫಾದರ್ ಅಂತಪ್ಪ ಈಗಲೂ ಪ್ರೀತಿಯಿಂದ ಸ್ಮರಿಸಿಕೊಳ್ಳುತ್ತಾರೆ.
ಎ) ಪ್ರಶಸ್ತಿ ಪುರಸ್ಕಾರಗಳು :
ಕರ್ನಾಟಕ ರಾಜ್ಯ ಸರ್ಕಾರವು ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದಂತಹ ಪ್ರತಿಭಾವಂತರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸುತ್ತದೆ. ಹಾಗೆಯೇ ಕ್ರಿ.ಶ. 2001ರ ಸಾಲಿನಲ್ಲಿ ಫಾದರ್ ಅಂತಪ್ಪನವರ ಕನ್ನಡ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಪ್ರಶಸ್ತಿಯನ್ನು ಪಡೆದ ಕನ್ನಡದ ಏಕೈಕ ಗುರುವನ್ನು ಸನ್ಮಾನಿಸಲು ಹಲವು ಸಂಘ ಸಂಸ್ಥೆಗಳು ಮುಂದಾದವು. ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘ ಪ್ರಪ್ರಥಮವಾಗಿ ತನ್ನ ಹೆಮ್ಮೆಯ ಪುತ್ರನನ್ನು ಸನ್ಮಾನಿಸಲು ಮುಂದಾಯಿತು. ಈ ಸಮಾರಂಭ ಆಗಿನ ಸಹಕಾರ ಸಚಿವರಾಗಿದ್ದ ಶ್ರೀ ಡಿ. ಕೆ ಶಿವಕುಮಾರ್ ಅವರಿಂದ ಉದ್ಘಾಟನೆಗೊಂಡಿತು. ಕನ್ನಡದ ಗಣ್ಯ ಸಾಹಿತಿಗಳಾದ ಶ್ರೀ ಎಲ್. ಎಸ್ ಶೇಷಗಿರಿರಾವ್, ಶ್ರೀ ಬರಗೂರು ರಾಮಚಂದ್ರಪ್ಪ, ಪ್ರೊ. ಚಂದ್ರಶೇಖರ ಪಾಟೀ¯ ಅವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು. ಇವರನ್ನು ಪ್ರಶಂಸಿಸಿ ಅಥಿತಿಗಳು ನುಡಿದ ಮಾತುಗಳು ಈ ಕೆಳಗಿನಂತಿವೆ.
ಒಂದೇ ವಾಕ್ಯದಲ್ಲಿ ಹೇಳುವುದಾದರೆ ಅಂತಪ್ಪ ಅವರು ಒಬ್ಬ ವ್ಯಕ್ತಿ ಮಾತ್ರವಲ್ಲ, ಒಂದು ಶಕ್ತಿ ಎಂದು ವರ್ಣಿಸಿದರೆ ಅತಿಶಯೋಕ್ತಿಯಾಗಲಾರದು ಮತ್ತು ತಪ್ಪಾಗಲಾರದು. ಹಾಗೆಯೇ, ಕನ್ನಡ ಕಥೋಲಿಕ ಕ್ರೈಸ್ತರಿಗೆ ಸೀಮೀತಗೊಳಿಸಿ, ಅಂತಪ್ಪ ಎಂದರೆ ಕನ್ನಡ, ಕನ್ನಡ ಎಂದರೆ ಅಂತಪ್ಪ ಎಂದು ಹೇಳಿದರೂ ಸರಿಯೇ. ಶ್ರೀ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಕನ್ನಡಕ್ಕೆ ಆಸ್ತಿಯಾದಂತೆ ಕನ್ನಡ ಕಥೋಲಿಕ ಕ್ರೈಸ್ತರಿಗೆ ಫಾದರ್ ಅಂತಪ್ಪ ಆಸ್ತಿಯಾಗಿದ್ದಾರೆ. ಕನ್ನಡ ಮತ್ತು ಕನ್ನಡಿಗರು ಫಾದರ್ ಅಂತಪ್ಪನವರಿಗೆ ಅನಘ್ರ್ಯ ನಿಧಿ ಇದ್ದಂತೆ. ಇವರೊಬ್ಬ ಸ್ವಾಭಿಮಾನಿ ಕನ್ನಡಿಗ. ತಮ್ಮ ನಡತೆಯಲ್ಲಿ ಕಾರ್ಯ ಸಾಧನೆಯಲ್ಲಿ ಅದನ್ನು ತೋರಿಸಿದ್ದಾರೆ. ಕನ್ನಡ ಕಥೋಲಿಕ ಕ್ರೈಸ್ತರಿಗೆ ಕನ್ನಡ ಬೈಬಲ್ ಎಂದಾಗ ಫಾ. ಅಂತಪ್ಪ ನೆನಪಿಗೆ ಬರುತ್ತಾರೆ. ಕನ್ನಡ ಕಥೋಲಿಕರಿಗಿದ್ದ ಬಹು ದೊಡ್ಡ ಕೊರತೆಯನ್ನು ಅವರು ನೀಗಿಸಿದ್ದಾರೆ. ಸ್ವಾಮಿ ಅಂತಪ್ಪನವರು ಎಂದೂ ಅಧಿಕಾರಕ್ಕಾಗಿ, ಅಂತಸ್ತಿಗಾಗಿ, ಪ್ರಶಸ್ತಿಗಾಗಿ, ಪುರಸ್ಕಾರಗಳಿಗಾಗಿ ಹಾತೊರೆದವರಲ್ಲ, ಅದರ ಬೆನ್ನು ಬಿದ್ದವರಲ್ಲ. ಪ್ರಶಸ್ತಿಗಳು ತಾವಾಗಿಯೆ ಇವರನ್ನು ಹುಡುಕಿಕೊಂಡು ಬಂದಿವೆ. ಇವರ ಪ್ರಾಮಾಣಿಕ ನಿಷ್ಠೆ, ಶ್ರದ್ಧೆ, ಬದ್ಧತೆ, ಸೇವಾ ಮನೋಭಾವ, ಸಹನೆ, ಶ್ರಮಿಕ ಜೀವನ ಶೈಲಿ, ನೇರ ನಿಷ್ಠೂರ ಮಾತು, ಶುದ್ಧಹಸ್ತ ಇವುಗಳನ್ನು ಗುರುತಿಸಿ ಇವರನ್ನು ಪುರಸ್ಕರಿಸುವ, ಇವರಿಗೆ ಉನ್ನತ ಸ್ಥಾನಕೊಡುವ ಧರ್ಮಾಧಿಕಾರಿಯನ್ನಾಗಿ ನೇಮಿಸುವ ಗೋಜಿಗೆ ಚರ್ಚ್‍ನ ಯಾವ ಉನ್ನತೋನ್ನತ ಅಧಿಕಾರಿವರ್ಗ ಹೋಗಲಿಲ್ಲ ಎಂಬುದು ನಿಜವಾಗಿಯೂ ದುಃಖಕರ ವಿಷಯವೆಂಬುದನ್ನು ನೆನಪಿಸುತ್ತಾ ಅತಿಥಿಗಳಾಡಿದ ಮಾತು ಇಂದಿಗೂ ಚಿರಸ್ಥಾಯಿ ಎಂಬುದನ್ನು ಮರೆಯುವಂತಿಲ್ಲ.
ಮುಂದಿನ ಸಂಚಿಕೆಯಲ್ಲಿ ರೆವರೆಂಡ್ ಫಾದರ್ ಐ. ಅಂತಪ್ಪನವರ ಸಾಹಿತ್ಯಿಕ ಸೇವಾ ವಿಚಾರಗಳ ಬಗ್ಗೆ ತಿಳಿಸಲಾಗುವುದು.
**********
No comments:
Post a Comment