Saturday, 4 April 2020

“ನಿನ್ನೆ ಆತಂಕವಿತ್ತು, ಇವತ್ತು ಧೈರ್ಯ ಬಂದಿದೆ, ನಾಳೆ ನೆಮ್ಮದಿ ಸಿಗುತ್ತದೆ”


- ಜೋವಿ

 ಕೊರೋನ ಎಂಬ ವೈರಸ್ ಇಡೀ ಜಗತ್ತನ್ನೇ ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದೆ. ಜನರ ಕೈಕಾಲುಗಳನ್ನು ಕಟ್ಟಿ ಗೃಹಬಂಧನದಲ್ಲಿರಿಸಿದೆ. ಅಶ್ಚರ್ಯವೆಂದರೆ ಇಂತಹ ಭೀತಿಯ ಸ್ಥಿತಿಯಲ್ಲೂ ಜನರ ಸೃಜನಶೀಲತೆಗೆ ಕಡಿವಾಣ ಬೀಳದಿರುವುದು! 
‘ಮನೆಯ ಹೊರಗಡೆ ಹೋಗಬೇಡ, ಮನದ ಒಳಗೆ ಹೋಗು’, ‘ಚರ್ಚ್ ಮುಚ್ಚಿಲ್ಲ, ಮುಚ್ಚಿರುವುದು ಕೇವಲ ಚರ್ಚಿನ ಕಟ್ಟಡ ಮಾತ್ರ, ನಿಮ್ಮ ಹೃದಯವೇ ದೇವರ ಆಲಯ, ಅದು ಎಂದಿಗೂ ಮುಚ್ಚಲಾಗದು” 
‘ಸಾವಿನ ಯಾತ್ರೆಗೆ ಸಜ್ಜಾಗಿದ್ದಲ್ಲಿ ಹೊರ ಬನ್ನಿ. ಬದುಕುವ ಆಸೆ ಇದ್ದರೆ ತೆಪ್ಪಗೆ ಮನೆಯಲ್ಲಿರಿ. ಇಣುಕಿ ನೋಡಲು ಕತ್ರಿನಾ ಬಂದಿಲ್ಲ, ಬಂದಿರುವುದು ಕೊರೋನಾ’ 
‘ಬ್ಯಾಂಕಿನಲ್ಲಿರೋ ಹಣ ನೀವೇ ತೆಗೆದುಕೊಳ್ಳಬೇಕೆಂದರೆ ಮನೆಯಲ್ಲಿಯೇ ಇರಿ. ನಿಮ್ಮ ನಾಮಿನಿ ತೆಗೆದುಕೊಳ್ಳಬೇಕೆಂದರೆ ಊರೆಲ್ಲ ಸುತ್ತಾಡಿ’, 
ವೈದ್ಯರಿಗೆ, ವಿಜ್ಞಾನಿಗಳಿಗೆ ಬರಿಗೈಯ ಚಪ್ಪಾಳೆ-ಜಾಗಟೆ, ನಕಲಿ ಜ್ಯೋತಿಷಿಗಳಿಗೆ, ತಟ್ಟೆ ಕಾಸಿನ ಗಿರಾಕಿಗಳಿಗೆ ಚಿನ್ನ ಬೆಳ್ಳಿ, ಹಣದ ಮೂಟೆ’, 
ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಾನಾ ಉಲ್ಲೇಖಗಳು, ಕವಿತೆಗಳು, ಹೇಳಿಕೆಗಳು ಜನರ ಅಧ್ಯಾತ್ಮ, ಹತಾಶೆ, ಸೃಜನಶೀಲತೆಯನ್ನು ಅಭಿವ್ಯಕ್ತಿಗೊಳಿಸುತ್ತಿವೆ. 
ಹೌದು, ಯಾವಾಗಲೂ ಜನಸಂದಣಿಯಿಂದ ಕೂಡಿರುತ್ತಿದ್ದ ರಸ್ತೆಗಳು, ಮಾಲ್‍ಗಳು, ಮಾರುಕಟ್ಟೆಗಳು, ಟ್ರಾಫಿಕ್ ‘ಲಾಕ್‍ಡೌನ್’ನಿಂದಾಗಿ ಬಿಕೋ ಎನ್ನುತ್ತಿವೆ. ಒಂದು ಕಡೆ, ಮನೆಯಿಂದ ಹೊರಬರಲು ಜನರು ಹೆದರಿದರೆ, ಮನೆಯಿಲ್ಲದವರು ‘ನಮ್ಮ ಹಣೆ ಮೇಲೆ ಬರೆದಾಂಗೆ ಆಗ್ಲಿ’ ಎಂದು ದೇವರ ಮೇಲೆ ಭಾರ ಹಾಕಿ ಕೂತಿದ್ದಾರೆ. 
ಸರ್ಕಾರಗಳು ಲಾಕ್‍ಡೌನ್ ಆದೇಶವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಜನರಿಗೆ ಎಚ್ಚರಿಕೆ ಕೊಡುತ್ತಿವೆ. ಎಲ್ಲಾ ಬಗೆಯ ಅಂಗಡಿಗಳು, ವಾಣಿಜ್ಯ ಮಳಿಗೆಗಳು, ಕಚೇರಿ, ವರ್ಕ್‍ಶಾಪ್‍ಗಳು, ಬಸ್ ಮತ್ತು ಇತರ ಪ್ರಯಾಣಿಕ ವಾಹನಗಳು ಎಲ್ಲವೂ ಬಂದ್ ಆಗಿವೆ. ರಾಜ್ಯಗಳ ಗಡಿಭಾಗಗಳು ಸಹ ಬಂದ್ ಆಗಿವೆ. ಐಟಿ-ಬಿಟಿ ಉದ್ಯೋಗಿಗಳಿಗೆ ಕಡ್ಡಾಯವಾಗಿ ಮನೆಯಿಂದ ಕೆಲಸ ಮಾಡಲು ಸೂಚಿಸಲಾಗಿದೆ. ಸಾರ್ವಜನಿಕ ಹಬ್ಬಗಳು, ದೇವಸ್ಥಾನಗಳಲ್ಲಿ ಪೂಜೆ, ಚರ್ಚ್ ಮತ್ತು ಮಸೀದಿಗಳಲ್ಲಿ ಪ್ರಾರ್ಥನೆಗೆ ನಿರ್ಬಂಧ ವಿಧಿಸಲಾಗಿದೆ. ಶಾಲಾಕಾಲೇಜುಗಳು ಮುಚ್ಚಿವೆ. ಕೆಲವೊಂದು ಪರೀಕ್ಷೆಗಳನ್ನು ಮುಂದೂಡಲಾಗಿವೆ. 
ಇಂತಹ ತೊಡಕಿನ ಸಂದರ್ಭದಲ್ಲಿ ಒಂದಿಷ್ಟು ಮನುಷ್ಯನ ಒಳ್ಳೆತನವೂ ಕೂಡ ಅನಾವರಣಗೊಳ್ಳುತ್ತಿವೆ. ನಮ್ಮ ಮನೆಗಳ ಬಳಿಯಿರುವ ಮರಗಳಿಂದ ಹಕ್ಕಿಗಳ ಇಂಪಾದ ಚಿಲಿಪಿಲಿ ನಾದ ಕೇಳುತ್ತಿದೆ; ಮನೆಯೊಳಗೆ ಸೇರಿ ವಿವಿಧ ಚಟುವಟಿಕೆಗಳಲ್ಲಿ ಮಗ್ನರಾಗಿ, ನಾವೆಲ್ಲಾ ಒಟ್ಟಾಗಿ ಕಾಲ ಕಳೆಯುತ್ತಿದ್ದೇವೆ. ನಮ್ಮ ಪೂಜಾವಿಧಾನಗಳಲ್ಲಿಯೂ ಸಹ ಹೊಸ ಹೊಸ ಬಗೆಯನ್ನು ಕಂಡುಕೊಂಡು ಒಟ್ಟಾಗಿ ಪ್ರಾರ್ಥಿಸುತ್ತಿದ್ದೇವೆ. ಕೊರೋನ ಬಗೆಗಿನ ಮಾಹಿತಿಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಿದ್ದೇವೆ. ಮತೀಯ ಭಾವನೆ ನಮ್ಮಲ್ಲಿ ಕಡಿಮೆಯಾಗಿ, ನಾವೆಲ್ಲರೂ ಸಂಬಂಧಿಗಳು, ಸಮಾನರು ಒಬ್ಬರಿಗೊಬ್ಬರು ಅವಲಂಬಿತರು ಎಂಬ ಅರಿವು ನಮ್ಮಲ್ಲಿ ಮೂಡುತ್ತಿದೆ. ಬಡವ ಶ್ರೀಮಂತ ಎಂಬ ಭೇದಭಾವವು ಕಡಿಮೆಯಾಗುತ್ತಿದೆ. ಮಾನವಧರ್ಮ ಎಲ್ಲರಿಗೂ ಎಲ್ಲೆಲ್ಲೂ ಮುಖ್ಯವಾಗುತ್ತಿದೆ. ಪ್ರತಿಯೊಬ್ಬರ ಜೀವವನ್ನು ಉಳಿಸಿಕೊಳ್ಳಲು ಸಾವಿರಾರು ಜನರು ಮುಖ್ಯವಾಗಿ ಡಾಕ್ಟರ್‍ಗಳು, ನರ್ಸ್‍ಗಳು ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ. 
ಕೆಲವರು ತಮ್ಮಲ್ಲಿರುವುದನ್ನು ಇತರರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಕೆಲವರು ನಿರ್ಗತಿಕ ಕುಟುಂಬಗಳನ್ನು ದತ್ತು ತೆಗೆದುಕೊಂಡು ಅವರಿಗೆ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಕೆಲವರು ತಮ್ಮ ಮೊಬೈಲ್ ನಂಬರುಗಳನ್ನು ಹಂಚಿಕೊಂಡು, “ಯಾರಿಗಾದರೂ ಊಟದ ಸಮಸ್ಯೆ ಇದ್ದರೆ ದಯವಿಟ್ಟು ತಿಳಿಸಿ” ಎಂದು ಕೇಳಿಕೊಂಡಿದ್ದಾರೆ. ಕೆಲವರಂತೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಹೊಲ, ಮನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮೇ ತಿಂಗಳ ತನಕ ಸಂಬಳವನ್ನು ಕೊಟ್ಟು ಮನೆಗೆ ಕಳಿಸಿಕೊಟ್ಟಿದ್ದಾರೆ. 
ನಿಜವಾಗಿಯೂ ಕೊರೋನ ವೈರಸ್ ನಮ್ಮ ಅಹಂಕಾರವನ್ನು ತುಳಿದಿದೆ. ಸಂಪತ್ತು ಎಷ್ಟೇ ಇರಬಹುದು, ನಾವು ಪ್ರಸಿದ್ಧಿಯ ಉತ್ತುಂಗದಲ್ಲಿರಬಹುದು ಆದರೂ ನಾವ್ಯಾರೂ ಮನೆಬಿಟ್ಟು ಹೊರಗೆ ಹೋಗಲಾಗುತ್ತಿಲ್ಲ. ಸರ್ಕಾರ ವಿಧಿಸಿರುವ ಆದೇಶವನ್ನು ಉಲ್ಲಂಘಿಸುವಂತಿಲ್ಲ; ಸರ್ಕಾರದಿಂದ ಅಲ್ಪಸ್ಪಲ್ಪ ರಿಯಾಯಿತಿ ಸಿಕ್ಕರೂ, ಕೊರೋನಾ ವೈರಸ್‍ನಿಂದ ಮಾತ್ರ ಯಾರಿಗೂ ಯಾವ ರಿಯಾಯಿತಿಯೂ ಸಿಗುತ್ತಿಲ್ಲ. ಕೊರೋನಾ ವೈರಸ್ ಬಿಡುವಿಲ್ಲದ ನಮ್ಮ ಬದುಕಿನ ವ್ಯವಹಾರಕ್ಕೆ ತಾಳ್ಮೆಯ ಪಾಠ ಕಲಿಸುತ್ತಿದೆ. ಒಟ್ಟಾರೆ, ದಾರಿ ತಪ್ಪಿದ ನಮ್ಮನ್ನು ಸರಿದಾರಿಗೆ ತರಲು ಕೊರೋನಾ ವೈರಸ್‍ನ ಅಗತ್ಯವಿತ್ತೋ ಏನೋ! 
ಇಂತಹ ಸಂದರ್ಭದಲ್ಲೂ ಕೆಲವರು ರಾಜಕೀಯ ಮಾಡುತ್ತಿರುವುದು, ಮೌಢ್ಯವನ್ನು ಬಿತ್ತುತ್ತಿರುವುದು ಖೇದದ ವಿಷಯ. ಕೊರೋನಾ ವೈರಸ್ ನಿಯಂತ್ರಣಕ್ಕೆ ಗೋಮೂತ್ರ ಸೂಕ್ತವೆಂದು ಹೇಳಿ ಕುಡಿಸಿ, ಕುಡಿದವರು ಅಸ್ವಸ್ಥರಾಗಿ ಕೊನೆಗೆ ಕಾರ್ಯಕ್ರಮದ ಆಯೋಜಕರನ್ನು ಪೆÇಲೀಸರು ಬಂಧಿಸಿದ್ದನ್ನು ನಾವು ಕೇಳಿದ್ದೇವೆ. ಇನ್ನೊಂದು ಕಡೆ, ದುಸ್ಥಿತಿಯ ತೀವ್ರತೆಯನ್ನ್ಲು ಅರಿಯದ ಧರ್ಮಾಂಧರು, ಪರಿಸ್ಥಿತಿಗೆ ಧರ್ಮವನ್ನು ತಾಳೆ ಹಾಕಿ ತಮಾಷೆ ಮಾಡ ಹೊರಟಾಗ, ‘ಮೊದಲು ಮಾನವನಾಗು’ ಎಂದು ಬುದ್ಧಿ ಹೇಳಿಸಿಕೊಂಡಿದ್ದನ್ನು ಓದಿದ್ದೇವೆ. ಮತ್ತೊಬ್ಬರು, “ಭಾರತೀಯ ಸಂಸ್ಕೃತಿಯಲ್ಲಿ ಮಡಿಗೆ ಮಹತ್ವದಾದ ಸ್ಥಾನವಿದೆ. ಮರೆತು ಹೋದ ಮಡಿಯನ್ನು ಮರಳಿ ನೆನಪಿಸಲು ಬಂದಿದೆ ಕೊರೋನಾ, ಮಡಿಯದಿರಬೇಕೆಂದರೆ ಮಡಿಯಾಗು ಮಾನವ” ಎಂದು ಹೇಳಿ, ‘ಈ ಸ್ವಾಮಿ ಪ್ರೇಮಲತಾರನ್ನು ಮುಟ್ಟುವಾಗ, ಮಡಿ ಮರೆತು ಹೋಗಿತ್ತೇ.. ಛೀ’ ಎಂದು ಬೈಯಿಸಿಕೊಂಡಿದ್ದಾರೆ. ಇನ್ನೊಬ್ಬ ಮೂಢÀ, ‘ಒಬ್ಬ ವಿಚಾರವಾದಿ ಮತ್ತು ಕೊರೋನಾ ವೈರಸ್ ಎದುರಾದರೆ ಮೊದಲು ವಿಚಾರವಾದಿಯನ್ನು ಹೊಡೆದು ಕೊಲ್ಲಿ! ಯಾಕೆಂದರೆ ಕೊರೋನಾ ಕೈಗೆ ಸಿಗಲ್ಲ” ಎಂದು ಪೋಸ್ಟ್ ಹಾಕಿ ಜನರಿಂದ ಸಿಕ್ಕಾಪಟ್ಟೆ ಬೈಗಳ ತಿನ್ನುತ್ತಿದ್ದಾನೆ. 
ಈ ಎಲ್ಲಾ ನಕಾರಾತ್ಮಕತೆಯ ನಡುವೆ, ಜನತಾ ಕರ್ಫ್ಯೂ ದಿನ ನಡೆದ ಅವಾಂತರ ಬಗ್ಗೆ ನಮಗೆ ಗೊತ್ತೇ ಇದೆ. ಭಾನುವಾರ ಅಂದರೆ ಮಾರ್ಚ್ 22ನೇ ದಿನಾಂಕದಂದು ಯಾರೂ ಬೀದಿಗೆ ಇಳಿಯಬಾರದು, ಎಲ್ಲರೂ ಮನೆಯೊಳಗೇ ಇದ್ದು ಸಾಂಕ್ರಾಮಿಕ ಕೊರೋನ ವೈರಸ್ ಹರಡದಂತೆ ಸಹಕರಿಸಬೇಕು ಎಂದು ಹೇಳಿದ ಪ್ರಧಾನಿಯವರು, ಸಂಜೆ ಐದರ ಹೊತ್ತಿಗೆ ಎಲ್ಲರೂ ತಮ್ಮ ತಮ್ಮ ಮನೆಯ ಅಂಗಳದಲ್ಲಿ ನಿಂತು ಚಪ್ಪಾಳೆ ತಟ್ಟಿ, ಸೀಟಿ ಊದಿ ಕೊರೋನಾ ಮಾಹಾಮಾರಿಯನ್ನು ತಡೆಯಲು ಮತ್ತು ಅದಕ್ಕೆ ತುತ್ತಾದವರಿಗೆ ಚಿಕಿತ್ಸೆ ನೀಡಲು ತೊಡಗಿರುವ ಎಲ್ಲಾ ಸಿಬ್ಬಂದಿ ವರ್ಗದವರಿಗೊಂದು ನಮನ ಸಲ್ಲಿಸಬೇಕೆಂದು ಮನವಿ ಮಾಡಿದ್ದರು. 
ಆದರೆ ಆಗಿದ್ದೇನು? ನಿಗದಿತ ಸಮಯಕ್ಕೆ ಸರಿಯಾಗಿ ಜನ ಹೊರ ಬಂದು ಗುಂಪು ಸೇರಿದರು, ಚಪ್ಪಾಳೆ ತಟ್ಟಿದರು, ಶಂಖ ಊದಿದರು. ಇನ್ನೂ ಕೆಲವೆಡೆ ಜಾತ್ರೆಯ ಮೆರೆವಣಿಗೆಯೂ ಆಯಿತು. ಕೊರೋನಾ ವೈರಸ್ ವಿರುದ್ಧ ಗೆದ್ದೇಬಿಟ್ಟೆವು ಎಂದು ಹಬ್ಬದಾಚರಣೆÉ ಮಾಡಿದ ಭಕ್ತ ಸಮೂಹ ಜನತಾ ಕರ್ಫ್ಯೂವಿನ ನಿಜ ಉದ್ದೇಶವನ್ನೇ ನಾಶಮಾಡಿದರು. ಭಾನುವಾರ ಸಾಯಂಕಾಲ ಐದು ಗಂಟೆಗೆ ನವಗ್ರಹಗಳು ವಿಶಿಷ್ಠವಾದ ರೀತಿಯಲ್ಲಿ ಸಮಾಗಮಗೊಳ್ಳುತ್ತವೆ. ಆ ಕಾಲಕ್ಕೆ ಸರಿಯಾಗಿ ಚಪ್ಪಾಳೆ, ಗಂಟೆ, ಜಾಗಟೆ, ಶಂಖ ಇತ್ಯಾದಿ ಸ್ವರ ಮೊಳಗುವ ಮೂಲಕ ಉಂಟಾಗುವ ವಿಶಿಷ್ಟ ಕಂಪನದಿಂದ ಕರೋನಾ ವೈರಸ್ಸು ಸಾಯುತ್ತದೆ. ಈ ಬ್ರಹ್ಮಾಂಡ ರಹಸ್ಯ ಮೋದಿಗೆ ತಿಳಿದಿರುವ ಕಾರಣವೇ ಅವರು ಇಂತಹ ಸ್ವರಗಳನ್ನು ಸೃಷ್ಟಿಸಿ ವೈದಕೀಯ ಸಿಬ್ಬಂದಿಗೆ ಧನ್ಯವಾದ ಹೇಳಬೇಕು ಅಂತ ಕರೆ ನೀಡಿದ್ದು ಮತ್ತು ನಾವು ಆಚರಣೆ ಮಾಡಿದ್ದು ಎಂದು ತಮ್ಮ ಮೌಢ್ಯಕ್ಕೆ ಇನ್ನೂ ಏನೇನೋ ಕಾರಣಗಳನ್ನು ಕೊಟ್ಟು sಸಮರ್ಥಿಸಿಕೊಂಡರು. 
ನಮ್ಮ ಜನರ ಹುಚ್ಚಾಟ ಏನೇ ಇರಲಿ. ಆದರೆ ಇಂತಹ ಭಯಾನಕ ಕರೋನ ವೈರಸ್‍ನಿಂದ ತೀವ್ರ ಸಮಸ್ಯೆಗೆ ಸಿಕ್ಕಿ ಹಾಕಿಕೊಳ್ಳುವವರೆಂದರೆ ಬಡವರು, ಅದರಲ್ಲೂ ದಿನಗೂಲಿ ಕಾರ್ಮಿಕರು ಎಂದು ನಾವು ತಿಳಿಯಬೇಕು. ಇಡೀ ದೇಶವೇ ಸ್ತಬ್ಧವಾಗಿರುವ ಇಂತಹ ಸಂದರ್ಭದಲ್ಲಿ ಕೆಲಸವಿಲ್ಲದೆ ಅವರು ಹೇಗೆ ತಮ್ಮ ಹೊಟ್ಟೆಗಳನ್ನು ತುಂಬಿಸಿಕೊಳ್ಳುವರು? ಹೌದು ದಿನಗೂಲಿ ನೌಕರರ, ಕಾರ್ಮಿಕರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಸುವುದು ಸರ್ಕಾರದ ದೊಡ್ಡ ಜವಾಬ್ದಾರಿಯಾಗಿದೆ. ಈಗಾಗಲೇ ಕೇರಳ ಸೇರಿದಂತೆ ಹಲವಾರು ರಾಜ್ಯಗಳು ಈ ಕೆಲಸವನ್ನು ಮಾಡುತ್ತಿವೆ. ಆದರೆ ಕೇಂದ್ರ ಸರ್ಕಾರಕ್ಕೆ ಇದರ ಸ್ಪಷ್ಟತೆ ಇಲ್ಲದಂತೆ ಕಾಣುತ್ತಿದೆ. ಜತೆಗೆ, ವೈದ್ಯರಿಗೆ ಬೇಕಾಗಿರುವ ಸಕಲ ಉಪಕರಣಗಳನ್ನು ಸಹ ಒದಗಿಸಲು ಸರ್ಕಾರವು ಸರ್ವ ಪ್ರಯತ್ನ ಮಾಡಬೇಕಾಗಿದೆ. ಯುದ್ಧಕ್ಕೆ ಹೊರಡಿಸಿ, ಹೋರಾಡಲು ಅಯುಧಗಳು ಕೊಡದಿದ್ದರೆ ಹೇಗೆ? ಕೇವಲ ಲಾಕ್‍ಡೌನ್ ಆದೇಶಿಸಿದರೆ ಸಾಲದು, ಸರ್ಕಾರಗಳು ತಮ್ಮ ಸಂಪೂರ್ಣ ಜವಾಬ್ದಾರಿಯನ್ನು ಅರಿತು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ವೈರಸ್ ನಿಯಂತ್ರಣಕ್ಕೆ ಬೇಕಾದ ಸಾಧನೆಗಳನ್ನು, ಯೋಜನೆಗಳನ್ನು ಸರ್ಕಾರಗಳಿಂದ ಸ್ವಷ್ಟವಾಗಿ ಮೂಡಿಬರಬೇಕಾಗಿದೆ. ಜತೆಗೆ ಜನಸಾಮಾನ್ಯನು ಸರ್ಕಾರಗಳ ಆದೇಶಗಳನ್ನು ಪಾಲಿಸುತ್ತಾ ಬಡವರಿಗೆ ಕೈಲಾದಷ್ಟು ಸಹಾಯ ಮಾಡಬೇಕಾಗಿದೆ. ದೊಡ್ಡ ದೊಡ್ಡ ಉದ್ಯಮಿಗಳು, ನಟರು, ಕ್ರೀಡಾಪಟುಗಳು ಸಹಾಯ ಮಾಡುವುದರಲ್ಲಿ ಇನ್ನಷ್ಟು ಉದಾರಿಗಳಾಗಬೇಕಿದೆ. ದ.ರಾ ಬೇಂದ್ರೆ ಹಸಿವಿನ ಕ್ರೂರತೆಯ ಕಾರಣ ದೇವರನ್ನು ಈ ರೀತಿ ಪ್ರಶ್ನಿಸುತ್ತಾರೆ;
ದೇವರೆ ದೇವರೇ
ಎಂತಹ ಕೆಲಸ ಮಾಡಿದೆ
ಹುಟ್ಟಿಸುವಾಗ ಅನ್ನ ಒಳಗಿಟ್ಟು 
ಹಸಿವನ್ನು ಹೊರಗಿಡಬಾರದಿತ್ತೇ?
ಸ್ವಾಮಿ ವಿವೇಕಾನಂದರವರು ಬಡವರು, ಅನಕ್ಷರಸ್ಥರು ಅಜ್ಞಾನಿಗಳು, ದಮನಿತರು ನಿನ್ನ ದೇವರಾಗಲಿ ಎಂದು ಹೇಳುವ ಒಂದು ಸಂದರ್ಭವನ್ನು ನಾವು ಕೇಳಲೇಬೇಕು. ಸ್ವಾಮಿ ವಿವೇಕಾನಂದರ ಸಹವರ್ತಿಗಳಾಗಿದ್ದ ಸ್ವಾಮಿ ಅಖಂಡಾನಂದರು 1894ರ ಸುಮಾರಿನಲ್ಲಿ ಅವರು ರಾಜಸ್ಥಾನದ ಒಬ್ಬ ಶ್ರೀಮಂತ ಭಕ್ತನ ಮನೆಯಲ್ಲಿ ಉಳಿದುಕೊಂಡಿದ್ದಾಗ ಅ ಪ್ರದೇಶದ ಬಡಜನರ ದಾರುಣಸ್ಥಿತಿ ಕಂಡು ತಮ್ಮ ಗುರು ವಿವೇಕಾನಂದರಿಗೆ ಪತ್ರ ಬರೆಯುತ್ತಾರೆ. ಅದಕ್ಕೆ ಉತ್ತರ ಬರೆಯುವಾಗ ವಿವೇಕಾನಂದರು ಒಕ್ಕಣಿಸುತ್ತಾರೆ “…ಶ್ರೀಮಂತರ ಮನೆಯ ಭಕ್ಷ್ಯಗಳನ್ನು ಭುಂಜಿಸುತ್ತಾ, ರಾಮಕೃಷ್ಣ ಓ ಭಗವಂತ! ಎಂದು ಹಲುಬಿದರೆ ಏನೂ ಪ್ರಯೋಜನವಿಲ್ಲ. ಬಡವರಿಗಾಗಿ ಏನಾದರೂ ಮಾಡು ಹುಲ್ಲು ತಿಂದು ಬದುಕಿದರೂ ಸರಿ, ಪರರಿಗೆ ಒಳಿತನ್ನು ಮಾಡಬೇಕು, ಕಾವಿವಸನವು ಭೋಗಕ್ಕಾಗಿ ಅಲ್ಲ, ಅದು ಶ್ರೇಷ್ಠ ಜೀವನದ ನಾಯಕತ್ವದ ಸಂಕೇತ. ಬಡವರು, ಅನಕ್ಷರಸ್ಥರು ಅಜ್ಞಾನಿಗಳು, ದಮನಿತರು ನಿನ್ನ ದೇವರಾಗಲಿ. ಅವರಿಗೆ ಸಲ್ಲಿಸುವ ಸೇವೆಯೇ ನಿನ್ನ ಅತ್ಯುನ್ನತ ಧರ್ಮವೆಂದು ತಿಳಿ” ಎಂದು ಹೇಳಿದರಂತೆ.
ಇದನ್ನೇ ಕ್ರಿಸ್ತ; “ನನ್ನ ಸೋದರರಲ್ಲಿ ಒಬ್ಬನಿಗೆ ಅವನೆಷ್ಟೇ ಕನಿಷ್ಠನಾಗಿರಲಿ, ಅವನಿಗೆ ಹಸಿವಾದಾಗ ತಿನ್ನಲು ಊಟ, ಬಾಯಾರಿದಾಗ ಕುಡಿಯಲು ನೀರು, ಅನಾಥನಿಗೆ ತಂಗಲು ಆಶ್ರಯ ಕೊಟ್ಟರೆ ಮತ್ತು ಬಂಧಿತನನ್ನು ಸಂಧಿಸಿ ಸಾಂತ್ವನ ಹೇಳಿದರೆ ಅದನ್ನು ನನಗೇ ಮಾಡಿದಿರಿ ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ” ಎಂದು ಹೇಳುತ್ತಾನೆ.
ನಿಜವಾಗಲೂ ನಮ್ಮ ಸರ್ಕಾರಗಳು ಕೊರೋನಾ ವೈರಸ್ ಎಂಬ ಮಹಾಮಾರಿಯನ್ನು ತಡೆಗಟ್ಟಲು ಸಿದ್ಧತೆಗೊಂಡಿಲ್ಲ. ಆಸ್ಪತ್ರೆಗಳ ಅಭಾವವಿದೆ. ವೈದ್ಯಕೀಯ ಸಿಬ್ಬಂದಿಗಳ ಅಭಾವ ಕೂಡ ನಮಗೆ ಗೋಚರಿಸುತ್ತಿದೆ. ನಮ್ಮ ದೇಶದಲ್ಲಿ ಲಭ್ಯವಿರುವ ಕೊರೋನಾ ವೈರಸ್ ಟೆಸ್ಟಿಂಗ ಕಿಟ್‍ಗಳು ಎಷ್ಟು? ನಮ್ಮ ದೇಶದಲ್ಲಿರುವ ಅಸ್ಪತ್ರೆಗಳೆಷ್ಟು? ಆ ಆಸ್ಪತ್ರೆಗಳಲ್ಲಿ ಲಭ್ಯವಿರುವ ಒಟ್ಟು ಐಸಿಯು ವಾರ್ಡ್‍ಗಳೆಷ್ಟು? ಅವುಗಳಲ್ಲಿ ಲಭ್ಯವಿರುವ ವೆಂಟೆಲೇಟರ್‍ಗಳೆಷ್ಟು? ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟರೆ, ಸರ್ಕಾರಗಳು ಮಾಹಮಾರಿ ಕೊರೋನಾ ವೈರಸನ್ನು ಎದುರಿಸಲು ಸಿದ್ಧವಾಗಿಲ್ಲ ಎಂದು ತಿಳಿಯದಿರದು. ಆದ್ದರಿಂದ ನಮ್ಮನ್ನು ನಾವೇ ರಕ್ಷಿಸಿಕೊಳ್ಳಲು ಮತ್ತು ಇತರರನ್ನು ಮುಖ್ಯವಾಗಿ ಬಡವರನ್ನು ರಕ್ಷಿಸಲು ಸಿದ್ಧರಾಗೋಣ.
---------------
ಶಿಲುಬೆಹಾದಿ
ತಪಸ್ಸು ಕಾಲದಲ್ಲಿ ಯೇಸುವಿನ ಯಾತನೆ ಮತ್ತು ಮರಣವನ್ನು ಧ್ಯಾನಿಸುತ್ತೇವೆ ಮತ್ತು ನಮ್ಮ ಪಾಪಗಳಿಗೆ ಮರುಗುತ್ತಾ ದೇವರಿಗೆ ಅಭಿಮುಖರಾಗುತ್ತೇವೆ. ತಪಸ್ಸುಕಾಲದ ಅಶಯವು ಉತ್ತಮ ರೀತಿಯಲ್ಲಿ ಸಾದೃಶ್ಯಗೊಳ್ಳುವುದು ನಾವು ಭಕ್ರಿಯಿಂದ ಕೈಗೊಳ್ಳುವ ಶಿಲುಬೆಹಾದಿಯಲ್ಲಿ. ಕ್ರಿಸ್ತನ ಯಾತನೆಯ ಪ್ರತಿಯೊಂದು ಘಟನೆಯನ್ನು ಪ್ರಯಾಣದ ಮೈಲುಗಲ್ಲುಗಳಂತೆ 14 ಸ್ಥಳಗಳಾಗಿ ವಿಂಗಡಿಸಿ, ಪ್ರತಿಯೊಂದು ಸ್ಥಳಗಳಲ್ಲಿ ಒಂದೊಂದು ಘಟನೆಯನ್ನು ಪಠಿಸಿ, ಸ್ಮರಿಸಿ, ಧ್ಯಾನಿಸುತ್ತೇವೆ. ಆದರೆ ಈ ಹಾದಿಯ ಕೇಂದ್ರಬಿಂದು ಮಾತ್ರ ಕ್ರಿಸ್ತ. ಅದರಲ್ಲೂ ಕ್ರಿಸ್ತ ಅನುಭವಿಸಿದ ಯಾತನೆ ಮತ್ತು ಶಿಲುಬೆ ಮರಣವೇ ಈ ಪ್ರಯಾಣದ ಹೆಜ್ಜೆಗಳಲ್ಲಿ ಧ್ಯಾನಿಸುವ ಮುಖ್ಯವಸ್ತು. ಈ ಪ್ರಯಾಣದ ಕೇಂದ್ರಬಿಂದು ಕ್ರಿಸ್ತನಾದರೂ, ಕ್ರಿಸ್ತನ ಸುತ್ತ ಕಟ್ಟಿಕೊಳ್ಳುವ ಅನೇಕ ಪಾತ್ರಗಳಿವೆ. ಇವೆಲ್ಲವೂ ಕ್ರಿಸ್ತನ ನಿಲುವುಗಳನ್ನು ಬೆಂಬಲಿಸುವ ಅಥವಾ ನಿರಾಕರಿಸುವ ಪಾತ್ರಗಳೇ. ಅಂದರೆ ಈ ಎಲ್ಲಾ ಪಾತ್ರಗಳೂ ಕ್ರಿಸ್ತನ ನಿಲುವುಗಳನ್ನು, ದೃಷ್ಟಿಕೋನವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಸ್ಪಷ್ಟ ಪಡಿಸುವ ಸ್ಪಟಿಕಗಳೇ. 
ಶಿಲುಬೆಹಾದಿಯ ಭಕ್ತಿಯಲ್ಲಿ ಕಿಸ್ತನನ್ನು ದಿಟ್ಟಿಸುತ್ತಾ ಬೇರೆ ಪಾತ್ರಗಳನ್ನು ಸಹ ಗಮನಿಸಬೇಕಿದೆ. ಅಧಿಕಾರದ ಆಸೆಗೆ ಸತ್ಯವನ್ನು ಕೊಲೆ ಮಾಡಿದ ಪಿಲಾತನಿರಬಹುದು, ಅವಮಾನದ ಸಂಕೇತವಾಗಿದ್ದ ಶಿಲುಬೆಯೇ ಇರಬಹುದು, ಮಗನ ಯಾತನೆಯನ್ನು ಕಂಡು ಮಮ್ಮಲ ಮರುಗುವ ಪೂಜ್ಯ ತಾಯಿ ಇರಬಹುದು, ಸೈನಿಕರಿಗೆ ಹೆದರಿ ಕ್ರಿಸ್ತನಿಗೆ ಸಹಾಯ ಮಾಡಿದ ಸಿರೇನ್ಯದ ಸಿಮೋನನಿರಬಹುದು, ಸೈನಿಕರ ಕ್ರೂರತನಕ್ಕೆ ಹೆದರದೆ, ಗಾಯಗೊಂಡಿದ್ದ ಕ್ರಿಸ್ತನ ಮುಖವನ್ನು ಒರೆಸುವ ವೆರೋನಿಕಳೇ ಇರಬಹುದು, ಕ್ರಿಸ್ತನಿಗಾದ ಅನ್ಯಾಯವನ್ನು ಕಂಡು ಅಳುವ ಜೆರುಸಲೇಮಿನ ತಾಯಂದಿರಬಹುದು, ಕೊನೆಗೆ ಕ್ರಿಸ್ತನ ಕೊಲೆಸಂಚಿನ ರೂವಾರಿ ಕೈಫಾಸ್, ಅನ್ನಾಸ್ ಮತ್ತು ಫರಿಸಾಯರೇ ಇರಬಹುದು, ಇವರೆಲ್ಲರೂ ನಾವು ಅವರನ್ನು ಅಥವಾ ಅವರು ನಮ್ಮನ್ನು ಪ್ರತಿಬಿಂಬಿಸುವ ಪಾತ್ರಧಾರಿಗಳೇ. 
ಇನ್ನು ಕ್ರಿಸ್ತನ ಯಾತನೆಯ ಪ್ರಯಾಣದಲ್ಲಿ ಕಟ್ಟಿಕೊಳ್ಳುವ ಘಟನೆಗಳು ಸಹ ನಮ್ಮ ಬದುಕುಗಳಲ್ಲಿ ಘಟಿಸುವ ಘಟನೆಗಳೇ. ಅಪಮಾನ, ಶಿಕ್ಷೆ, ಅನ್ಯಾಯ, ಬೀಳುವಿಕೆ, ವಿವಸ್ತ್ರಗೊಳಿಸುವುದು, ಜಡಿಯುವುದು, ಸಾವು, ತಾಯಿಯ ಕಂಬನಿ, ಸಮಾಧಿ, ಚುಚ್ಚುಮಾತುಗಳು, ಅಂತಃಕರಣ ಹೀಗೆ ಎಲ್ಲವೂ ನಮ್ಮ ಬದುಕ ಭಾಗವೇ. ಹೌದು, ಈ ಎಲ್ಲಾ ಪಾತ್ರಗಳು, ಘಟನೆಗಳು ತೋರುವ ಲೋಕವಿವರಣೆಯನ್ನು ಆಲಿಸಬೇಕಿದೆ; ಕಿವಿಯಿಂದ ಮಾತ್ರವಲ್ಲ ಹೃದಯದಿಂದಲೂ ಸಹ. ಕೊನೆಗೆ ಈ ಪ್ರಯಾಣವು ನಮ್ಮ ಅರಿವನ್ನು ಜಾಗೃತಗೊಳಿಸಿ ಕ್ರಿಸ್ತನು ಗ್ರಹಿಸಿದ ರೀತಿಯಲ್ಲಿ ಲೋಕವನ್ನು, ನಮ್ಮ ಬದುಕನ್ನು ಗ್ರಹಿಸಲು ಅನುವು ಮಾಡಿ ಕೊಡಲೆಂದು ಪ್ರಾರ್ಥಿಸಬೇಕಿದೆ. 
ಕ್ರಿಸ್ತನ ಸಮಷ್ಟಿ ದೃಷ್ಟಿಯನ್ನು ಅನಾವರಣ ಮಾಡುವ ‘ಶಿಲುಬೆಹಾದಿ’ ವಿಧಿಯ ಆಚರಣೆಯಲ್ಲೇ ಕೊನೆಕೊಳ್ಳಬಾರದು. ಶಿಲುಬೆಹಾದಿಯ ವಿಧಿಯಲ್ಲಿ ಕ್ರಿಸ್ತನಲ್ಲಿದ್ದ ಆತ್ಮದೃಷ್ಟಿಯ ಪಠಣ ಮಾತ್ರ. ಆದರೆ ಕ್ರಿಸ್ತನ ‘ದೃಷ್ಟಿ’ ವಿಧಿ ಆಚರಣೆಗಳನ್ನು ದಾಟಿ ನಮ್ಮ ಬದುಕುಗಳನ್ನು ರೂಪಿಸಬೇಕು; ನಮ್ಮ ಬದುಕಿನ ಪ್ರತಿಯೊಂದು ನಿರ್ಣಾಯಕ ಹಾಗೂ ಇಕ್ಕಟಿನ ಸಂದರ್ಭಗಳಲ್ಲಿ ಕ್ರಿಸ್ತ ತೋರಿದ ಪ್ರತಿಕ್ರಿಯೆಗಳನ್ನು ನಮ್ಮದಾಗಿಸುತ್ತಾ ಮತ್ತೊಬ್ಬ ಕ್ರಿಸ್ತನಂತೆ ಈ ಜಗತ್ತಿನಲ್ಲಿ ನಮ್ಮನ್ನು ಬೆಳಸಬೇಕು. ಅಲ್ಲಿಗೆ ಶಿಲುಬೆಹಾದಿಯ ಪ್ರಾರ್ಥನೆ ಅರ್ಥಭರಿತ. 
ಪುನರುತ್ಥಾನÀದ ಹಬ್ಬ
ಕೊರೋನಾ ವೈರಸ್‍ನಿಂದಾಗಿ ಜಗತ್ತೇ ಸ್ತಬ್ಧವಾಗಿದೆ. ನಮ್ಮ ಈಸ್ಟರ್ ಹಬ್ಬದ ಆಚರಣೆಯೂ ‘ಆಚರಣೆಯ ಚೌಕಟ್ಟಿನಲ್ಲಿ ನಡೆಯುವುದು ಅನುಮಾನ. ಆದರೂ ನವೀನ ರೀತಿಯಲ್ಲಿ ಈ ಹಬ್ಬವನ್ನು ಆಚರಿಸಿಕೊಳ್ಳಲು ನಮಗೆ ಸಿಕ್ಕಿದಂತಹ ಅವಕಾಶವನ್ನು ಸದುಪಯೋಗಿಸಿಕೊಳ್ಳೋಣ. ಪುನರುತ್ಥಾನವೆಂಬುವುದು ನಮ್ಮ ಇಹಲೋಕದ ಯಾತ್ರೆಯ ನಂತರ ಮಹಿಮಾ ರೂಪವನ್ನು ಪಡೆದು ನಾವು ಕ್ರಿಸ್ತನಲ್ಲಿ ನಿತ್ಯಜೀವಿಸುವುದು ಅಥವಾ ಸ್ವರ್ಗೀಯ ಜೀವÀನವನ್ನು ಪಡೆದು ಬದುಕಿನ ಪರಿಪೂರ್ಣತೆಯನ್ನು ದೊರಕಿಸಿಕೊಳ್ಳುವುದು ಎಂದರ್ಥ. ಇದು ಕ್ರೈಸ್ತ ವಿಶ್ವಾಸ ಮತ್ತು ವಿಶ್ವಾಸದ ಬುನಾದಿ. ಯಾವುದೇ ಹಬ್ಬದ ಆಚರಣೆಗೆ ಮೂರು ಬಗೆಯ ಉದ್ದೇಶಗಳಿರುತ್ತವೆ: ಒಂದು ದೈಹಿಕದ್ದಾದರೆ, ಮತ್ತೊಂದು ಬೌದ್ಧಿಕ ಆಯಾಮದ್ದು. ಕೊನೆಯ ಉದ್ದೇಶ ಆಧ್ಯಾತ್ಮಿಕದ್ದು. ಹಬ್ಬಗಳು ನಮ್ಮ ಮನಸ್ಸಿಗೆ ಖುಷಿಕೊಡುತ್ತವೆ. ಹೊಸ ಹೊಸ ಬಟ್ಟೆಗಳನ್ನು ಧರಿಸಿ, ರುಚಿಕರವಾದ ಅಡಿಗೆ ಮಾಡಿ ತಿಂದು ತೇಗಿ ನಮ್ಮ ಇಂದ್ರಿಯಗಳನ್ನು ಖುಷಿಪಡಿಸುವ ಉದ್ದೇಶ ದೈಹಿಕ ಆಯಾಮದ್ದು. ಎರಡನೆಯದು ನಮ್ಮ ಬುದ್ಧಿಗೆ ಸೇರಿದ್ದು. ಹಬ್ಬದ ಹಿನ್ನಲೆ, ಅರ್ಥ, ವ್ಯಾಖ್ಯಾನಗಳನ್ನು ತಿಳಿದು ಹಬ್ಬದ ಬಗೆಗಿನ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು. ಇದರಿಂದ ಹಬ್ಬದ ಬಗ್ಗೆ ನಮ್ಮಲ್ಲಿ ಬೌದ್ಧಿಕ ಸ್ಪಷ್ಟತೆ ಕಂಡುಬರುತ್ತದೆ. ಕೊನೆಯ ಉದ್ದೇಶ ಆಧ್ಯಾತ್ಮಿಕ ಪರಿಧಿಗೆ ಸೇರಿದ್ದು. ನಮ್ಮ ಬದುಕಿನ ಮೂಲ ಉದ್ದೇಶವನ್ನು ಜಾಗೃತಗೊಳಿಸಿ, ದೇವರಿಗೆ ಮತ್ತಷ್ಟು ಹತ್ತಿರವಾಗಿಸುತ್ತಾ, ಲೋಕಕಲ್ಯಾಣಕ್ಕಾಗಿ ಜೀವಿಸಲು ಅನುವು ಮಾಡುವ ಉದ್ದೇಶ ಅಧ್ಯಾತ್ಮದ್ದು. ಪುನರುತ್ಥಾನದ ಹಬ್ಬವು ನಮ್ಮ ಮತ್ತು ಕ್ರಿಸ್ತನ ನಡುವೆ ಇರುವ ಆತ್ಮೀಯತೆಯನ್ನು ಹೆಚ್ಚಿಸಿ, ಕ್ರಿಸ್ತನ ಆದರ್ಶ ನಮ್ಮ ಮೂಲಕ ಎಲ್ಲರಿಗೂ ಸಾದೃಶ್ಯಗೊಳ್ಳಲೆಂದು ಹಾರೈಸುತ್ತೇನೆ. 
ಫಾದರ್ ಚಸರಾರವರು ಪುನರುತ್ಥಾನದ ಹಬ್ಬದ ಬಗ್ಗೆ ಬರೆಯುವಾಗ ಈ ರೀತಿ ಹೇಳುತ್ತಾರೆ; “ಪುನರುತ್ಥಾನ ಕೇವಲ ಒಂದು ಆಚರಣೆಯಷ್ಟೇ ಆಗಬಾರದು, ಕಲಿಕೆಗೆ ಆದರ್ಶವಾಗಬೇಕು. ಹೀಗೆ ಆದರ್ಶವಾದಾಗ ಪುನರುತ್ಥಾನಗೊಂಡ ಕ್ರಿಸ್ತ ನಮ್ಮೊಳಗೆ ಈ ಹೊಸ ಮುಖ, ಹೊಸ ಜೀವ, ಹೊಸ ಉತ್ಸಾಹ ತುಂಬಬಲ್ಲ. ಇದು ನಿಜವಾದ ಧರ್ಮ. ಈ ಧರ್ಮವನ್ನೇ ಕ್ರಿಸ್ತ ಸ್ಥಾಪಿಸಿದ್ದು.” ಈ ಹೇಳಿಕೆಯ ಮುನ್ನ, ಜಪಾನ್ ದೇಶದಲ್ಲಾದ ಅವಗಡಗಳನ್ನು ಪ್ರಸ್ತಾಪಿಸಿ ಒಬ್ಬ ಪತ್ರಕರ್ತ ಹೇಳಿದ ಮಾತೊಂದನ್ನು ಉಲ್ಲೇಖಿಸುತ್ತಾರೆ; “ನಿನ್ನೆ ಆತಂಕವಿತ್ತು, ಇವತ್ತು ಧೈರ್ಯ ಬಂದಿದೆ, ನಾಳೆ ನೆಮ್ಮದಿ ಸಿಗುತ್ತದೆ”. ಕೊರೋನಾ ವೈರಸ್ ತಂದೊಡ್ಡಿರುವ ಸವಾಲಿನ  ಹಿನ್ನಲೆಯಲ್ಲಿ, ನಾವೆಲ್ಲರೂ ಹತಾಶರಾಗದೆ; ನಿನ್ನೆ ಆತಂಕವಿತ್ತು, ಇವತ್ತು ಧೈರ್ಯ ಬಂದಿದೆ, ನಾಳೆ ನೆಮ್ಮದಿ ಸಿಗುತ್ತದೆ ಎಂಬ ಭರವಸೆಯೊಂದಿಗೆ ಪುನರುತ್ಥಾನದ ಹಬ್ಬವನ್ನು ಆಚರಿಸಿಕೊಳ್ಳೋಣ. ಎಲ್ಲರಿಗೂ ಪುನರುತ್ಥಾನ ಹಬ್ಬದ ಶುಭಾಶಯಗಳು !
**********


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...