Saturday, 4 April 2020

ವಿಶ್ವ ನಗೆದಿನ

--------------------
ಎಲ್.ಚಿನ್ನಪ್ಪ, ಬೆಂಗಳೂರು

ವಿಶ್ವವು ಏಪ್ರಿಲ್ 1 ರಂದು ನಗೆ    ದಿನವನ್ನಾಗಿ ಆಚರಿಸುತ್ತದೆ. ಅದೇ ದಿನವನ್ನು ವಿಶ್ವ ಮೂರ್ಖರ     ದಿನವೆಂದೂ ಕರೆಯುತ್ತಾರೆ. ಅಂದು ಎಲ್ಲರೂ ದುಃಖವನ್ನು ಮರೆತು ನಗು ನಗುತ್ತಾ ಇರಬೇಕೆಂಬುದೇ ಮತ್ತು ಅಂದು ಸ್ನೇಹಿತರನ್ನು ತಮಾಷೆ ಮಾಡುವ ಸಲುವಾಗಿ ಏನಾದರೊಂದು ಸುಳ್ಳು ಹೇಳಿ ಅವರನ್ನು ಮೂರ್ಖರನ್ನಾಗಿಸುವುದೇ ಆ ದಿನದ ವಿಶೇಷ. ನಮ್ಮ  ಶಾಲಾ ದಿನಗಳಲ್ಲಿ ಸ್ನೇಹಿತರನ್ನು ಮೂರ್ಖರನ್ನಾಗಿಸುವಂತ ನಾನಾ ಸನ್ನಿವೇಶಗಳನ್ನು ಸೃಷ್ಟಿಮಾಡುತ್ತಿದ್ದೆವು. ಅದರಿಂದ ಅಂದು ಮಜಾ ಪಡೆಯುವುದೇ ನಮ್ಮ ಉದ್ದೇಶವಾಗಿತ್ತು. ಈಗ ಆ ಪ್ರವೃತ್ತಿ ಬದಲಾಗಿದೆ. ಈ ನಗುವಿನ ಪಯಣ ಹುಟ್ಟಿನೊಂದಿಗೆ ಆರಂಭವಾಗುತ್ತದೆ. ಚಕ್ರದಂತೆ ವೇಗವಾಗಿ ತಿರುಗುತ್ತಿರುವ ಕಾಲ, ಬದುಕಿನ ಕುರಿತಾದ ಅತಿಯಾದ ನಿರೀಕ್ಷೆ, ತಮ್ಮ ಸಾಮಥ್ರ್ಯದ ಮೇಲೆ ಅತಿಯಾದ ವಿಶ್ವಾಸ, ದಾವಂತದಲ್ಲಿ ಎಡವಿದಾಗ, ಪ್ರೀತಿಸಿದ ಜೀವ ಕೈಕೊಟ್ಟಾಗ, ಅಂದುಕೊಂಡ ಕೆಲಸ ಹುಸಿಯಾದಾಗ, ಅಗಸನಿಗೂ ನೋವುಂಟು, ಅರಸನಿಗೂ ನೋವುಂಟು. ನಗುವಿನ ಮೂಲ ಉದ್ದೇಶವೇ, ಎಲ್ಲಾ ನೋವನ್ನು ಮರೆತು ನಗುವುದು. ನಗು ಮನಸ್ಸಿನ ನೋವನ್ನು ಮರೆಸಿ ಆರೋಗ್ಯದ ಲಕ್ಷಣವನ್ನು ಸೂಚಿಸುತ್ತದೆ. ನಗುವು ನಮ್ಮ ಮುಖದ ಮೌಲ್ಯ ಹೆಚ್ಚಿಸಿದರೆ, ಪ್ರೀತಿ ನಮ್ಮ ಹೃದಯದ ಮೌಲ್ಯ ಹೆಚ್ಚಿಸುತ್ತದೆ. ಆದರೆ, ನಗು ಎಂಥಹ ಕಷ್ಟವನ್ನಾದರೂ ಪರಿಹರಿಸುತ್ತದೆ, ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಒಂದು ನಗು ಮುಖ ಸಾವಿರ ಕೇಡುಗಳನ್ನು ದೂರ ಮಾಡಬಲ್ಲದು. ಜೀವನವು ದುಃಖದಿಂದ ಕಷ್ಟ ಕೋಟಲೆಗಳಿಂದ ತುಂಬಿದ್ದರೂ ಪರಿಮಳದಂತೆ ಪಸರಿಸುವ ನಗು ಮನಸ್ಸಿನ ಒತ್ತಡ ಕಡಿಮೆಗೊಳಿಸುವುದರ ಜೊತೆಗೆ ಅದು ಪ್ರಪುಲ್ಲವಾಗುವಂತೆ ಮಾಡುತ್ತದೆ. ನಗು ಯಾವಾಗಲೂ ಮರೆಯಲಾಗದ ಮುತ್ತಿನಂತಹ ನೆನಪು. ಅದು ಎಲ್ಲರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೋಪವನ್ನು ಮರೆಸುತ್ತದೆ, ದುಃಖವನ್ನು ಶಮನಗೊಳಿಸುತ್ತದೆ, ಸಾವನ್ನು ಮುಂದೂಡುತ್ತದೆ. ಪ್ರತಿಯೊಬ್ಬರು ಜೀವನದಲ್ಲಿ ನಗು ನಗುತ್ತಾ ಸುಖವಾಗಿ ಇರಬೇಕೆಂದೇ ಬಯಸುತ್ತಾರೆ. ನಮಗೆ ಸಂದಾಯವಾದ ಪ್ರಶಸ್ತಿಗಳಿಗಿಂತ ಹೆಚ್ಚು ತೃಪ್ತಿಯನ್ನು ಕೊಡುವುದೇ ನಗು. ಅದು ನಮ್ಮ ಆತ್ಮವನ್ನು ಸ್ವಚ್ಛವಾಗಿಡುತ್ತದೆ, ಇತರರನ್ನು ನಮ್ಮ ಕಡೆಗೆ ಸೆಳೆಯುತ್ತದೆ. ಮನಸ್ಸಿನ ಭಾರವನ್ನು ಇಳಿಸಿ, ಜವಾಬ್ದಾರಿಯನ್ನು ಸರಾಗವಾಗಿ ನಿರ್ವಹಿಸುವಂತೆ ಮಾಡುತ್ತದೆ.. ಒಂದು ವಿಧದಲ್ಲಿ ನಗು, ಪ್ರಾರ್ಥನೆಗಿಂತಲೂ ಹೆಚ್ಚು ಪರಿಣಾವi.ಕಾರಿ. ಪ್ರಾರ್ಥನೆ ನಮ್ಮ ಅಂತರಂಗವನ್ನು ಶುದ್ಧಪಡಿಸಿದರೆ ನಗು ನಮ್ಮ ದೇಹಕ್ಕೆ ಮನಸ್ಸಿಗೆ ಹೊಸ ಚೈತನ್ಯ ತಂದುಕೊಡುವುದು. ಹಸನ್ಮುಖಿ ಸದಾ ಸುಖಿ ಎಂದು ಹೇಳುವುದುಂಟು. ನಗುಮೊಗವಿದ್ದರೆ ಎಲ್ಲಾ ಕೆಲಸಗಳೂ ಸಲೀಸು. ಕಷ್ಟದ ಕೆಲಸವೂ ಹಗುರವಾಗಿ ಬಿಡುತ್ತದೆ. ದುಃಖ ದುಗುಡ ದುಮ್ಮಾನಗಳನ್ನು ನಗು ದೂರ ಮಾಡುತ್ತದೆ. ಮನದ ನೋವು ಮರೆಸಲು ಕೆಲವೊಮ್ಮೆ ನಗುವಿನ ಮುಖವಾಡ ತೊಡಬೇಕಾಗುತ್ತದೆ. ನಮ್ಮ ಸಂಬಂಧವನ್ನು ಬೇರೆಯವರೊಂದಿಗೆ ಕುದುರಿಸುವ ಈ ನಗು ಮುಖವೇ ಸಾಮರಸ್ಯದ ಜೀವಾಳ. ಅಂತಹ ಅದ್ಭುತ ಹಾಗು ಮಾಂತ್ರಿಕ ಶಕ್ತಿ ನಗುವಿಗೆ ಇದೆ.
  ‘ನಗು ನಗುತ್ತಾ ಬಾಳು ನೂರು ವರುಷ’ ಎಂದು ಹಿರಿಯರು ಮಕ್ಕಳನ್ನು ಹರಸುವುದುಂಟು. ಮಕ್ಕಳ ಬದುಕು ಸದಾ ನಗು ನಗುತ್ತಾ ಇರಲಿ ಎಂಬುದೇ ಹಿರಿಯರ ಆಶಯ. ನಗು ಎನ್ನುವುದು ಮನಸ್ಸಿನ ಭಾವಾವೇಶದ ಭಾವನೆಗಳಿಗೆ ಹಿಡಿದ ಕನ್ನಡಿ. ಅದು ನಮ್ಮ ಅಂತರಂಗದ ಭಾವನೆಗಳನ್ನು ಮುಚ್ಚು ಮೊರೆಯಿಲ್ಲದೆ ಅನಾವರಣಗೊಳಿಸುತ್ತದೆ. ನಗುವಿಗೆ ಕಾಯಿಲೆಯನ್ನು ಗುಣಪಡಿಸುವಂತಹÀ ಶಕ್ತಿಯೂ ಇದೆ. ‘ಐಚಿughಣeಡಿ is ಣhe besಣ meಜiಛಿiಟಿe’ ಎಂದು ವೈದ್ಯರು ಹೇಳುವುದುಂಟು. ನಗು ರೋಗಿಗಳಿಗೊಂದು ವರದಾನವೂ ಹೌದು. ರೋಗಿಗಳು ಒಂದು ಕ್ಷಣ ನೋವನ್ನು ಮರೆತು ಮನತುಂಬಿ ನಕ್ಕರೆ ನಿಜಕ್ಕೂ ಅವರ ಅರ್ಧದಷ್ಟು ಕಾಯಿಲೆ ಗುಣವಾದಂತೆ. ಕೆಲವರ ಜೀವನದಲ್ಲಿ ನಗುವೇ ಇರುವುದಿಲ್ಲ, ನೋವೇ ಎಲ್ಲಾ ಎಂಬಂತೆ ಕಣ್ಣೀರಿಡುತ್ತಾರೆ. ಆದರೆ       ಬುದ್ಧಿವಂತರು ಇನ್ನೊಬ್ಬರನ್ನು ನಗಿಸುವುದರ ಮೂಲಕ ತಮ್ಮ ನೋವನ್ನು ಮರೆಯುತ್ತಾರೆ. ಒಬ್ಬರನ್ನು ಅಳಿಸುವುದಕ್ಕಿಂತ ನಗಿಸುವುದು ತುಂಬ ಕಷ್ಟ. ತಮ್ಮ ನೋವು ಕಡಲಿನಷ್ಟಿದ್ದರೂ ಇನ್ನೊಬ್ಬರನ್ನು ನಗಿಸಿ ತಾವೂ ನಗುವುದು ತುಂಬಾ ಕಷ್ಟ. ನೋವಿನಲ್ಲೂ ನಗೆ ಎಂಬ ಸಿದ್ದಾಂತ ನಗೆ ಕೂಟದ ಮುಖ್ಯ ಉದ್ದೇಶವೇ ಆಗಿದೆ. 
  1970ರ ದಶಕದಲ್ಲಿ ತೆರೆಕಂಡ ಹಿಂದಿ ಚಲನಚಿತ್ರವೊಂದು ನೆನಪಿಗೆ ಬರುತ್ತದೆ. ಚಲನ ಚಿತ್ರದ ಹೆಸರು ‘ಮೇರಾ ನಾಂ ಜೋಕರ್’. ಅದರಲ್ಲಿ ರಾಜ್‍ಕಪೂರ್‍ನದು ಜೋಕರ್ ಪಾತ್ರ. ಪ್ರೇಕ್ಷಕರನ್ನು ನಗಿಸುವುದೇ ಅವನ ಕೆಲಸ. ಆ ಚಲನಚಿತ್ರದ ಸರ್ಕಸ್ ಸೀನ್‍ನಲ್ಲಿ ರಾಜ್‍ಕಪೂರ್ ಜೋಕರ್ ವೇಷ ತೊಟ್ಟು ಬಂದನೆಂದರೆ, ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತೆ ಬಿದ್ದು ಬಿದ್ದು ನಗುತ್ತಿದ್ದರು. ಅಂತಹ ಹಾಸ್ಯದ ಹೊನಲು ಉಕ್ಕಿಸುವ ಪಾತ್ರ ರಾಜ್‍ಕಪೂರನದ.ು ಆ ಚಲನಚಿತ್ರದಲ್ಲಿ. ಅವನಿಲ್ಲದಿದ್ದರೆ, ಸರ್ಕಸ್ ಕಳೆಗಟ್ಟುತ್ತಿರಲಿಲ್ಲ. ಒಂದು ದಿನ ಅವನ ತಾಯಿ ತೀರಿಕೊಳ್ಳುತ್ತಾಳೆ. ಆದರೆ ಅಂದೂ ಕೂಡ ದುಃಖವನ್ನು ಮರೆತು ಜನರನ್ನು ನಗಿಸುವುದೇ ಅವನಿಗೆ ಅನಿವಾರ್ಯವಾಗಿತ್ತು. ಒಬ್ಬ ವಿದೂಷಕನ ಜೀವನದಲ್ಲಿಯೂ ಎಷ್ಟೊಂದು ನೋವು ದುಃಖಗಳಿರುತ್ತವೆ ಎಂಬುದು ಇದರ ಅರ್ಥ. ತಾನು ದುಃಖದಲ್ಲಿದ್ದು ಇತರನ್ನು ನಗಿಸುವುದು ತುಂಬಾ ಕಷ್ಟ. ಜಗತ್ಪ್ರಸಿದ್ಧ ನಗೆ ನಟ ಚಾರ್ಲಿ ಚಾಪ್ಲಿನ್ ಯಾರಿಗೆ ಗೊತ್ತಿಲ್ಲ? ಮೂಕ ಚಿತ್ರಗಳ ಮೂಲಕ ಅವನ ಹಾಸ್ಯಾಭಿನಯವು ಜಗತ್ತಿನಾದ್ಯಂತ ಉತ್ತುಂಗಕ್ಕೇರಿತ್ತು. ವರ್ಷಗಳು ಕಳೆದಂತೆ ತಂತ್ರಜ್ಞಾನ ಆವಿಷ್ಕಾರಗೊಂಡು ಮಾತನಾಡುವ ಚಲನ ಚಿತ್ರಗಳು ಬರತೊಡಗಿದವು. ಆದರೂ ಆತ ತನ್ನ ಮೂಕಾಭಿನಯದ ಮೂಲಕವೇ ತನ್ನ ಚಿತ್ರಗಳಿಗೆ ಜೀವ ತುಂಬಿ ಜನರನ್ನು ರಂಜಿಸುತ್ತಿದ್ದ. ನಗುವಿಗೆ ಮಾತೇ ಮುಖ್ಯವಲ್ಲ, ಆಂಗಿಕ ಅಭಿನಯದಲ್ಲೂ ಜನರನ್ನು ಹೇಗೆ ನಗಿಸಬೇಕೆಂಬುದು ಅವನು ಸಿದ್ಧಿಸಿಕೊಂಡಿದ್ದ ಅಸಾಧಾರಣ ಹಾಸ್ಯ ಪ್ರತಿಭೆ. ಆತನ ಮೂರು ಭಾವನಾತ್ಮಕ ಸಂವೇದನೆಗಳು ಹೀಗಿವೆ. (1) ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ, ಸಮಸ್ಯೆಗಳೂ ಕೂಡ. (2) ನಾನು ಮಳೆಯಲ್ಲೇ ತೋಯುತ್ತ ನಡೆಯಲು ಪ್ರಯತ್ನಿಸುತ್ತೇನೆ, ಯಾಕೆಂದರೆ ನನ್ನ ಕಣ್ಣೀರನ್ನು ಯಾರೂ ನೋಡಲಾರರು. (3) ಜೀವನದಲ್ಲಿ ಅತ್ಯಂತ ವ್ಯರ್ಥವಾಗಿ ಕಳೆದ ದಿನವೆಂದರೆ, ಆ ದಿನ ನಗದೇ ಇದ್ದುದು.
  ಪ್ರತಿಯೊಬ್ಬರ ಜೀವನದಲ್ಲೂ ನೋವು ನಲಿವುಗಳು, ಕಷ್ಟ ದುಃಖಗಳು ಇದ್ದೇ ಇರುತ್ತವೆ. ಅವು ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಜೀವನದಲ್ಲಿ ನೋವು, ದುಃಖವನ್ನು ಯಾವ ರೀತಿ ಎದುರಿಸುತ್ತೇವೆ ಎಂಬುದು ಮುಖ್ಯ. ನೋವಾಗಲಿ, ನಲಿವಾಗಲಿ, ಸುಖವಾಗಲಿ, ದುಃಖವಾಗಲಿ ಎಲ್ಲವನ್ನು ಸಮಚಿತ್ತದಿಂದ ಎದುರಿಸುವುದನ್ನು ಕಲಿತರೆ, ಅಲ್ಲಿಗೆ ಜೀವನದ ಗುರಿಯನ್ನು ಮುಟ್ಟಿದಂತೆಯೇ, ನೋವನ್ನು ಮೆಟ್ಟಿದಂತೆಯೇ. ಆದಾಗ್ಯೂ ಕೆಲವರಲ್ಲಿನ ಮನಸ್ಸು ನೋವು ತುಂಬಿದ ಕನ್ನಡಿಯಂತೆ. ಅವರಲ್ಲಿ ನಗುವಾಗಲಿ, ನಗುವಿನ ಭಾವನೆಗಳಾಗಲಿ ಕಾಣಿಸದು. ಸದಾ ನೋವೇ ತುಂಬಿದ ಬದುಕು ಅವರದು. ಇನ್ನೂ ಕೆಲವರು ನಗುತ್ತಿರುವುದನ್ನು ನೋಡಿ, ಅವರಿಗೆÀ ಏನೂ ಕಡಿಮೆಯಿಲ್ಲ, ಅದಕ್ಕೆ ಅವರು ನಗುತ್ತಿರುತ್ತಾರೆ ಎಂದುಕೊಳ್ಳುತ್ತಾರೆ. ಆದರೆ ನಗುವಿನ ಹಿಂದೆ ಅಡಗಿರುವ ದುಃಖ ಅವರಿಗೆ ಗೊತ್ತಾಗುವುದಿಲ್ಲ. 
  ‘ನಗಲು ಬಾರದವನು ವ್ಯಾಪಾರ ಮಾಡಲು   ಯೋಗ್ಯನಲ್ಲ’ ಎಂಬುದು ಚೀನಾ ದೇಶದ ಒಂದು ಜನಪ್ರಿಯ ಗಾದೆ. ಇಟಲಿಯ ಮಿಲಾನ್ ನಗರದಲ್ಲಿ ಮತ್ತೊಂದು ವಿಚಿತ್ರ ಕಾನೂನು ಇದೆ. ಎಲ್ಲರೂ ಸದಾ ನಗುಮುಖವನ್ನೇ ಹೊಂದಿರಬೇಕೆಂಬ ನಿಯಮ. ಆದರೆ ಸಾವು ಹಾಗು ಆಸ್ಪತ್ರೆಗೆ ದಾಖಲಾದಂತಹ ಸಮಯದಲ್ಲಿ ಅದಕ್ಕೆ ಕಾನೂನು ವಿನಾಯಿತಿ ಇದೆ. 
  ಮನದುಂಬಿ ನಕ್ಕು ಬಿಡಿ ! ಹಾಗೆ ಒಮ್ಮೆ ಸುಮ್ಮನೆ ನಕ್ಕು ಬಿಡಿ ! ನಗುವಿಗೇಕೆ ಬಡತನ, ಜಿಪುಣತನ ! 
ನಗುವುದನ್ನು ಕಲಿಯಿರಿ !
ನಗಿಸುವುದನ್ನು ಕಲಿಯಿರಿ !
ಆದರೆ ಹೃದಯ ಒಡೆಯುವುದನ್ನು 
ಕಲಿಯಬೇಡಿ, ಕಲಿಸಬೇಡಿ

ನಗುವು ಸಹಜ ಧರ್ಮ
ನಗಿಸುವುದು ಪರಧರ್ಮ
ನಗುವವರ ನಗಿಸುತಲಿ 
ನಗುವುದೇ ನಿಜಧರ್ಮ. 

**********

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...