Tuesday, 7 April 2020

ಯೇಸು ಕ್ರಿಸ್ತರ ಪೂಜ್ಯಪಾಡುಗಳ ಪವಿತ್ರ ನಾಟಕ



ಕರ್ನಾಟಕ ಜನಪದಲೋಕದ ಪರಿಧಿಯಲ್ಲಿ ಅತ್ಯಂತ ವೈವಿಧ್ಯತೆಗೆ ವಿಶೇಷತೆಗೆ ಹೆಸರಾಗಿರುವ ಬಯಲಾಟ ನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಯಥೇಚ್ಛವಾಗಿ ಕಂಡುಬರುವ ಒಂದು ಸೃಜನಾತ್ಮಕ ನಾಟಕದ ಕಲೆ. ಕನ್ನಡ ಸಂಸ್ಕೃತಿ ಪೌರಾಣಿಕತೆ ಹಾಗೂ ಗ್ರಾಮೀಣ ಜನರ ಮನರಂಜನೆಗಳಾದ ಕೋಲಾಟ, ತಮಟೆ, ರಂಗಪೂಜೆ ಇತ್ಯಾದಿಗಳನ್ನೆಲ್ಲಾ ಒಗ್ಗರಿಸಿಕೊಂಡು ಸುಮಾರು ಏಳು/ಎಂಟು ಗಂಟೆಗಳ ಸಮಯ ನಿರಂತರವಾಗಿ ಆಡುವ ನಾಟಕವು ದೊಡ್ಡಾಟ ಎಂತಲೂ ಆಡುಭಾಷೆಯಲ್ಲಿ ಕರೆಸಿಕೊಳ್ಳುತ್ತದೆ. ಇಂತಹುದೇ ಪರಿಯಲ್ಲಿ ಪ್ರದರ್ಶನಗೊಳ್ಳುತ್ತಿರುವ ಕ್ರಿಸ್ತರ ಪೂಜ್ಯ ಪಾಡುಗಳ ನಾಟಕವು ಈ ದೊಡ್ಡಾಟದ ಒಂದು ಎಳೆ. ಈ ಕಾರಣಕ್ಕಾಗಿಯೇ ಪಾಸ್ಖ ಹಬ್ಬದ ಆಚರಣೆಯ ದಿನಗಳು ಹಾರೋಬಲೆಯಲ್ಲಿ ದೊಡ್ಡಬ್ಬ (ದೊಡ್ಡ ಹಬ್ಬ) ಎಂದೇ ಹೆಚ್ಚು ಜನಪ್ರಿಯ. ಯೇಸು ಕ್ರಿಸ್ತರ ಪೂಜ್ಯಪಾಡುಗಳ ಪವಿತ್ರ ನಾಟಕವನ್ನು 'ಮಹಿಮೆ' ಎಂದು ಸಹ ಊರಿನ ಜನರು ಕರೆಯುತ್ತಾರೆ. ರಂಗಪೂಜೆ ಆರಂಭದಲ್ಲಿ ಸ್ತುತ್ಯಾರ್ಪಣೆ, ಗುರುನಮನ, ಸಂಭಾಷಣಾ ವಾಕ್‌ಶೈಲಿ, ನಗಾರಿಕುಣಿತ, ತಮಟೆಸದ್ದು, ಪಾತ್ರಧಾರಿಗಳ ವೇಷಭೂಷಣಗಳು ದೊಡ್ಡಾಟವೆಂದೆ ಕರೆಸಿಕೊಳ್ಳುವ ಬಯಲಾಟಕ್ಕೆ (ದೊಡ್ಡಾಟ) ತಾಳೆಯಾಗಿರುವುದು ಯೇಸುಕ್ರಿಸ್ತರ ಪೂಜ್ಯಪಾಡುಗಳ ಪವಿತ್ರ ನಾಟಕದಲ್ಲಿ (ಮಹಿಮೆ) ಕಂಡುಬರುವ ಪ್ರಮುಖ ಅಂಶಗಳು. 
ಮಹಿಮೆ ನಾಟಕ ಪ್ರಾರಂಭವಾಗುವುದೇ ರಂಗಪೂಜೆಯಿಂದ, ನಿರ್ದೇಶಕರು (ಬಯಲಾಟದಲ್ಲಿ ಭಗವತರೆಂದು ಕರೆಯಲಾಗುತ್ತದೆ) ರಂಗ ಮಂಟಪದ ಮೇಲೆ ಇರಿಸುವ ಕ್ರಿಸ್ತನ ಭಾವಚಿತ್ರಕ್ಕೆ ಆರತಿ ಬೆಳಗಿಸಿ ಸ್ತುತಿ ಹಾಡಿನಿಂದ ಯೇಸುವನ್ನು ನಮಿಸಿ ಅನುಗ್ರಹ ಬೇಡಿದ ನಂತರ, ವಿಚಾರಣೆ ಗುರುಗಳ ಹಾಗೂ ನಿರ್ದೇಶಕರ ಪಾದಗಳಿಗೆ ಪಾತ್ರಧಾರಿಗಳು, ನಿರ್ವಹಣಾ ಸದಸ್ಯರೆಲ್ಲರೂ ನಮಿಸಿ ಅಶೀರ್ವಾದ ಪಡೆಯುವುದು ಇಂದಿಗೂ ಇರುವ ಪ್ರಧಾನ ಸಂಪ್ರದಾಯ, ಮಹಿಮೆ ನಾಟಕದಲ್ಲೂ ಬಯಲಾಟದಲ್ಲಿರುವಂತೆ ಸಾಹಿತ್ಯ, ಸಂಗೀತ, ನೃತ್ಯಗಳು ಮುಪ್ಪರಿಸಿಕೊಂಡಿವೆ. ಅಲ್ಲದೇ ಇದೊಂದು ಚಂಪೂಕಾವ್ಯ (ಗದ್ಯ ಮತ್ತು ಪದ್ಯಗಳ ಮಿಶ್ರಣ) ದಿಂದ ಕೂಡಿದ ಒಂದು ಬೃಹತ್ ನಾಟಕವು ಹೌದು. ಇಲ್ಲಿ ಸಂಭಾಷಣೆಯಲ್ಲಿ ಹಾಡುಗಳು ಪ್ರಮುಖ ಹಾಗೂ ಸ್ವಾರಸ್ಯಕರ. ಉದಾಹರಣೆಗೆ ಒಂದು ದೃಶ್ಯದಲ್ಲಿ ಪೊಂತಿಯಸ್ ಪಿಲಾತನು ಮಂಡಳಿ ಕಾರ್ಯದರ್ಶಿಯನ್ನು ಉದ್ದೇಶಿಸಿ ``ಕಾರ್ಯದರ್ಶಿಗಳೇ ಈ ದಿನದ ಕಾರ್ಯಕ್ರಮಗಳನ್ನು ವಿವರಿಸುವಂತಾಗು'' ಎಂದು ಅಜ್ಞಾಪಿಸಿದಾಗ, ಅದಕುತ್ತರವಾಗಿ ದೊರೆಯೆ ಲಾಲಿಸಿ ನಾ ಪರಿಯ ಪೇಳ್ವೆನು ಎಂಬ ಪದ್ಯವನ್ನು ಹಾಡುವುದು ಹೀಗೆ ಹಾಡು, ಸಂಭಾಷಣೆಗಳ ಸಂಯೋಜನೆ ಸುರಸಭರಿತವಾಗಿ ಪ್ರಾಸಬದ್ಧ ಭಾಷೆಯಿಂದ ನಾಟಕೀಯ ಪ್ರಸ್ತಾವನೆಯಲ್ಲಿ ಅಡಕವಾಗಿರುವುದಲ್ಲದೆ, ಪ್ರೇಕ್ಷಕರಿಗೆ ಪಾತ್ರಗಳ ಹಾಗೂ ಅವುಗಳ ವ್ಯಕ್ತಿತ್ವದ ಸ್ವಷ್ಟ ಪರಿಚಯಕ್ಕೆ ಸಮನ್ವಯಕಾರಿಯಾಗಿವೆ.
ಈ ನಾಟಕದಲ್ಲಿ ಕೈಫಾಸು ಮತ್ತು ಮಗಳು ಜಾರಿಪೆ ನಡುವೆ ನಡೆಯುವ ಯೇಸುವಿನ ಪರ ವಿರೋಧಗಳ ಅಖಂಡ ಚರ್ಚೆ ಮನೋಜ್ಞವಾಗಿ ಪ್ರತಿಬಿಂಬಿತವಾಗಿದೆ. ಇಂತಹ ಪೌರಣಿಕತೆಯ ಎಳೆಗಳು ಅಲ್ಲಲ್ಲಿ ಕಾಣಸಿಗುತ್ತದೆ. ಬಯಲಾಟದಲ್ಲಿರುವಂತೆ ಈ ನಾಟಕದಲ್ಲೂ ಹಿಂದೆ ಹೆಣ್ಣು ಪಾತ್ರಗಳನ್ನು ಗಂಡಸರೇ ವಹಿಸುತ್ತಿದ್ದರು. ಅದರೆ ಇತ್ತೀಚಿನ ದಿನಗಳಲ್ಲಿ ಸ್ತ್ರೀಯರ ಪಾತ್ರಗಳನ್ನು ಊರಿನ ಹೆಣ್ಣುಮಕ್ಕಳೇ ನಿಭಾಯಿಸುತ್ತಿರುವುದು ಇಲ್ಲಿ ಉಲ್ಲೇಖಾರ್ಹ. ಇಲ್ಲಿ ಬಳಸಿರುವ ಹಾಡಿನ ರಾಗವು ಹೆಚ್ಚಾಗಿ ಕರ್ನಾಟಿಕ್ ಸಂಗೀತದಾಗಿವೆ. ನಾಟಕದಲ್ಲಿ ಸುಮಾರು ೨ಂಂ ರಿಂದ ೩ಂಂ ಹಾಡುಗಳಿದ್ದು ಎಲ್ಲವೂ ವಿಭಿನ್ನ ರಾಗಗಳಿಂದ ರಚಿಸಲ್ಪಟ್ಟಿವೆ. ಎಲ್ಲವೂ ಸ್ವತಃ ಪಾತ್ರದಾರಿಗಳೆ ಹಾಡುವರು. ಇದರೊಂದಿಗೆ ಹಾರ್ಮೋನಿಯಂ, ತಬಲ, ಬ್ಯಾಂಡ್‌ಸೆಟ್‌ಗಳ ಸಂಗೀತ ಸಂಯೋಜನೆ ಒಂದು ರೀತಿಯ ಅಹ್ಲಾದಕರ.
ಈ ನಾಟಕದಲ್ಲಿ ಪಿಲಾತು, ಕೈಪಾಸು, ಅನ್ನಾಸು, ಹೆರೋದರಸ, ರೋಮನ್ ಚಕ್ರವರ್ತಿ ಇನ್ನೂ ಮುಂತಾದ ಪಾತ್ರಗಳು, ಕಿರೀಟ, ಭುಜಕೀರ್ತಿ, ಎದೆಪದರ, ನಡುಪಟ್ಟಿ, ವೀರಗಾಸೆ, ಮೇಲಂಗಿ, ಕೈಕಟ್ಟು, ಮಾಗುಟ, ವಂಕಿ ಹೀಗೆ ನಮ್ಮ ನಾಡಿನ ರಾಜರುಗಳಂತೆ ಅಲಂಕೃತರಾಗಿರುತ್ತಾರೆ. ವೀರಗಾಸೆಗೆ ಕೆಂಪು, ನೀಲಿ, ಹಳದಿ ಅಥವಾ ಬಿಳಿವಸ್ತ್ರಗಳನ್ನು ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ಬಣ್ಣದ ಸೀರೆಗಳನ್ನು ಬಳಸುವುದು ಹೆಚ್ಚು. ಮೇಲಂಗಿಯನ್ನು ಧರಿಸಿ ಇಲ್ಲವೇ ಬರಿಮೈಗೆ ಎದೆಪದರ, ಹಾರಗಳನ್ನು ಧರಿಸುವುದು ರೂಢಿ. ಬೆನ್ನು ಕಾಣದಂತೆ ಭುಜದಿಂದ ಕಾಲಿನವರೆಗೆ ರೇಷ್ಮೆ ಕುಸರಿಯನ್ನು ಮುಗುಟವಾಗಿ ಇಳಿಬಿಟ್ಟಿರುತ್ತಾರೆ. ಬೆರಳಿಗೆ ಉಂಗುರ, ಕಿವಿಗೆ ಒಂಟಿ, ಕೈಯಲ್ಲಿ ಕರವಸ್ತ್ರಗಳು ಮುಂತಾದುವುಗಳು ಈ ಪಾತ್ರಗಳಲ್ಲಿ ಅಭಿವ್ಯಕ್ತಿಗಳಾಗಿರುತ್ತವೆ. ಪಾತ್ರಗಳಿಗೆ ತಕ್ಕಂತೆ ಬಿಲ್ಲು, ಭರ್ಜಿ, ಈಟಿ, ಚಾಟಿ, ಕತ್ತಿ ಕಠಾಣಿ ಮೊದಲಾದ ಆಯುಧಗಳು ಈ ನಾಟಕದಲ್ಲಿ ಬಳಕೆಯಾಗಿರುವುದು ಬಯಲಾಟ ನೆರಳಿನ ಸ್ವಷ್ಟ ಚಿತ್ರಣ.
ದೊಡ್ಡಾಟದಲ್ಲಿ ದೈತ್ಯ ಪಾತ್ರಗಳು ಇತರ ಪಾತ್ರಗಳಂತೆ ರಂಗದ ಹಿಂಭಾಗದಿಂದ ಬರದೆ, ರಂಗಕ್ಕೆ ಅಭಿಮುಖವಾಗಿ ಪ್ರೇಕ್ಷಕರ ಮಧ್ಯೆ ಹಾದು ಬರುವುದು ಸಾಮಾನ್ಯ, ಅಂತೆಯೇ ಇಲ್ಲೂ ಸಹ ಗೆತ್ಸಮನಿ ತೋಪಿನಂತಹ ಸನ್ನಿವೇಶದಲ್ಲಿ ಯೇಸುವನ್ನು ಸೆರೆಹಿಡಿಯಲು ಕೈಫಾಸ್ ಕೈ ಅಳುಗಳು ಮತ್ತು ಪಿಲಾತ ಚಕ್ರವರ್ತಿಯ ಸೈನಿಕರು ಪಂಜುಗಳನ್ನು ಹಿಡಿದುಕೊಂಡು ತಮಟೆ ಬಡಿತದೊಂದಿಗೆ ಕುಣಿಯುತ್ತಾ ಅರ್ಭಟಿಸುತ್ತಾ ವೇದಿಕೆ ಪ್ರವೇಶ ಮಾಡುವುದು ನಿಜಕ್ಕೂ ಬಯಲಾಟದ ವೈಖರಿಗೆ ಸಾಕ್ಷಿಯಾಗಿ ನಿಲ್ಲುವ ಒಂದು ಸದೃಶ್ಯವೇ ಸರಿ. ಈ ದಿನಗಳಲ್ಲಿ ರಂಗ ಸಜ್ಜಿಕೆ, ಶಬ್ದ ಬೆಳಕಿನ ಸಂಯೋಜನೆಗಳು ಆಧುನಿಕತೆಯನ್ನು ಪಡೆಯುತ್ತಿರುವುದು ಗಮನಾರ್ಹ. ಜನರ ಅಭಿರುಚಿಯಲ್ಲಿ ಆಕಾಂಕ್ಷೆಯಲ್ಲಿ ದಿನೇದಿನೆ ಆಧುನಿಕತೆಯ ಗುಂಗು ಹೆಚ್ಚುತ್ತಿರುವುದರಿಂದಲೇ ಈ ಬದಲಾವಣೆಗಳಾಯಿತು ಎನ್ನಬಹುದು. ಅದರೆ ನಾಟಕದ ಮೂಲ ಹಾವಭಾವ ಭಕ್ತಿಗೆ, ನಂಬಿಕೆಗೆ, ಮಹಿಮೆಯ ಸಮಸ್ತ ದೃಶ್ಯ ಸನ್ನಿವೇಶಗಳಿಗೆ ಕಿಂಚಿತ್ತು ಚ್ಯುತಿ ಬರದಂತೆ ಆಧುನಿಕತೆಯ ಮೆರಗನ್ನು ಪಡೆದುಕೊಂಡು ಸಾಗುತ್ತಾ ಹೋಗುತ್ತಿರುವುದು ಮೆಚ್ಚಬೇಕಾದಂತಹ ವಿಷಯ. 
ಯೆಹೂದಿ ಸಂಸ್ಕೃತಿ ಆಧಾರಿತ ಕ್ರೈಸ್ತರ ಈ ಮಹಾಕಾವ್ಯವು ಕರ್ನಾಟಕ ಕಲೆಗಳ ಶೈಲಿಯನ್ನು ಅಳವಡಿಸಿಕೊಂಡು ಸುಮಾರು ನೂರು ವರ್ಷಗಳ ಕಾಲ ಸತತ ಪ್ರದರ್ಶನ ಕಂಡು ಹೆಸರುವಾಸಿಯಾಗಿರುವುದಲ್ಲದೆ, ಇಡೀ ಕರ್ನಾಟಕ ರಾಜ್ಯದಲ್ಲೆ ಇಂತಹ ವಿಶಿಷ್ಟ ಮಾದರಿಯಲ್ಲಿ ಸತತ ಇಷ್ಟು ಪ್ರದರ್ಶನ ಕಂಡಿರುವ ಏಕೈಕ ಬೃಹತ್ ನಾಟಕ ಈ ಮಹಿಮೆ (ಯೇಸುಕ್ರಿಸ್ತರ ಪೂಜ್ಯಪಾಡುಗಳ ಹಾಗೂ ಪುನರುತ್ಥಾನ ಮಹಿಮೆ ನಾಟಕ). ಭಕ್ತಿಪ್ರಧಾನವಾದ ಈ ನಾಟಕ ಕನ್ನಡ ಕಸೂತಿಯಲ್ಲಿ ಕಲೆ ಮಣ್ಣಿನ ಸೊಗಡನ್ನು ಮೈಗೂಡಿಸಿಕೊಂಡು ಕ್ರೈಸ್ತ ಧಾರ್ಮಿಕತೆಯನ್ನು ಪವಿತ್ರಗ್ರಂಥದ ಅಧ್ಯಾತ್ಮಿಕತೆಯನ್ನು ಸುಮಾರು ನೂರುವರ್ಷಗಳಿಂದ ಬಿತ್ತರಿಸುತ್ತಿರುವುದು ಒಂದು ಅದ್ಭುತವೇ ಸರಿ. 
-------------------------------------------
- ಸಂತೋಷ್ ಇಗ್ನೇಷಿಯಸ್
--------------------------------

ಯೇಸು ಕ್ರಿಸ್ತರ ಪೂಜ್ಯಪಾಡುಗಳ ಪವಿತ್ರ ನಾಟಕದ ಚರಿತ್ರೆ 
ನಾಟಕದ ಹುಟ್ಟು ಧಾರ್ಮಿಕ ಆಚರಣೆಗಳಿಂದ ಅವಿರ್ಭವಿಸಿದ್ದು ಎಂದು ಎಲರ್ಡಿಸ್ ಎಂಬ ವಿದ್ವಾಂಸ ಅಭಿಪ್ರಾಯಪಡುತ್ತಾನೆ. ಈ ಅಭಿಪ್ರಾಯವನ್ನು ಈಚಿನ ವಿದ್ವಾಂಸರೂ ಒಪ್ಪಿಕೊಂಡಿದ್ದಾರೆ. ಪ್ರೌಢನಾಟಕದ ಕಲೆ ಧಾರ್ಮಿಕ ಹಿನ್ನೆಲೆಯಿಂದ ಹುಟ್ಟಿರಬೇಕು ಎಂಬ ವಿಚಾರದಲ್ಲಿ ಬಹುಸಂಖ್ಯಾತ ವಿದ್ವಾಂಸರಿಗೆ ಏಕಾಭಿಪ್ರಾಯವಿದೆ. ಯೇಸು ಕ್ರಿಸ್ತರ ಪೂಜ್ಯಪಾಡುಗಳ ಪವಿತ್ರ ನಾಟಕ ಚಾರಿತ್ರಿಕ ಹಿನ್ನೆಲೆಯನ್ನು ಪರೀಶೀಲಿಸಿದಾಗ, ಇದರ ಹುಟ್ಟು ಕೂಡ ಧಾರ್ಮಿಕ ಆಚರಣೆಗಳ ಹಿನ್ನೆಲೆಯಲ್ಲಿರುವುದು ಗಮನಾರ್ಹ. ಶುಭಶುಕ್ರವಾರದ ಕ್ರೈಸ್ತ ವಿಧಿಗಳ ಒಳಾರ್ಥವನ್ನು ಊರಿನ ಜನರಿಗೆ ಫಲಕಾರಿಯಾಗಿ ತಿಳಿಸಲು ವಂ. ಸ್ವಾಮಿ ಲಾಜರಸ್‌ರವರು ಕೈಗೊಂಡ ಸಾಧನವೇ ಯೇಸು ಕ್ರಿಸ್ತರ ಪೂಜ್ಯಪಾಡುಗಳ ಪವಿತ್ರ ನಾಟಕ. ಈ ನಾಟಕವು ಏಪ್ರಿಲ್ ೧೩, ೧೯೦೬ ಪವಿತ್ರ ಶುಕ್ರವಾರದಂದು ವಂ. ಸ್ವಾಮಿ ಲಾಜರಸುವರಿಂದ ಪ್ರಾರಂಭಿಸಲ್ಪಟ್ಟಿತು. ದೇವಸ್ಥಾನದ ವಠಾರದಲ್ಲಿ ಒಂದು ಚಿಕ್ಕ ಚಪ್ಪರ ಹಾಕಿ ಆರು ಜನ ಶಿಷ್ಯರಿಂದ ಯೇಸುವಿನ ಸ್ವರೂಪವನ್ನು ಶಿಲುಬೆಯಿಂದ ಇಳಿಸಿ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಜನರು ಯೇಸುವಿನ ಸ್ವರೂಪವನ್ನು ಮುತ್ತಿಟ್ಟು ಮನೆಗೆ ಹೋಗುತ್ತಿದ್ದರು. ಅಂದು ಇದು ಕೇವಲ ಒಂದು ಗಂಟೆಯ ಕಾರ್ಯಕ್ರಮವಾಗಿತ್ತು. ಇದಕ್ಕೆ ಹೊಂಗೆ ಸೊಪ್ಪಿನ ಚಪ್ಪರ ಮಂಟಪವಾಗಿಯೂ, ಪೂಜೆ ಒತ್ತಾಸೆ ಹುಡುಗರ (Altar boys) ಕೆಂಪು ಅಂಗಿ ಪಾತ್ರಧಾರಿಗಳ ಉಡುಪಾಗಿಯೂ ಸೀಮೆಎಣ್ಣೆ ಪಂಜು ಬೆಳಕಾಗಿಯೂ ಉಪಯೋಗಿಸಲ್ಪಡುತಿತ್ತು. 
೧೯೨೫ರಲ್ಲಿ ವಂ. ಲಾಜರಸ್‌ರವರು ನಿಧನರಾದ ನಂತರ ಮಹಿಮೆ ನಾಟಕದ ಪೂರ್ಣ ಜವಾಬ್ದಾರಿ ಸಿ. ಇನ್ನಾಸಪ್ಪನವರ ಹೆಗಲಿಗೆ ಬಿತ್ತು. ಮುಂದೆ ಶ್ರೀಯುತರು ನಾಟಕದ ಸಾಹಿತ್ಯವನ್ನು ಸಂಪೂರ್ಣವಾಗಿ ಪರಿಷ್ಕರಿಸಿ, ತಕ್ಕಂತ ವಚನ, ರಾಗ, ಹಾಡುಗಳನ್ನು ನಾಟಕಕ್ಕೆ ಸೇರಿಸಿ, ಇತರ ತಿದ್ದುಪಡಿಗಳೊಂದಿಗೆ ನಾಟಕವನ್ನು ಹೊಸದಾಗಿ ರಚಿಸಿ, ಸುಮಾರು ೮೦ ವರ್ಷಗಳ ಕಾಲ ಅದರ ನಿರ್ದೇಶಕರಾಗಿ ಮುನ್ನಡೆಸಿಕೊಂಡು ಬಂದರು. ಪ್ರಾರಂಭದಲ್ಲಿ ಕೇವಲ ಒಂದು ಗಂಟೆಯ ಕಾರ್ಯಕ್ರಮವಾಗಿದ್ದ ಮಹಿಮೆ/ನಾಟಕ ಇಂದು ಸುಮಾರು ಎರಡು ರಾತ್ರಿಗಳು ನಡೆಯುವ ಬಹುದೊಡ್ಡ (ಬೃಹತ್) ನಾಟಕವಾಗಿದೆ. ಇದು ಸುಮಾರು ೨೪ ದೃಶ್ಯಗಳನ್ನು ಒಳಗೊಂಡಿದೆ, ಜೊತೆಗೆ ಈ ನಾಟಕದಲ್ಲಿ ಸುಮಾರು ೬೦ಕ್ಕೂ ಹೆಚ್ಚು ಪಾತ್ರಗಳಿವೆ. ಇಷ್ಟುದೊಡ್ಡ ಪ್ರಮಾಣದಲ್ಲಿ ಪಾತ್ರಗಳಿದ್ದರೂ, ಶಿಸ್ತಿನಿಂದ ಗೊಂದಲಕ್ಕೆ ಅವಕಾಶವಿಲ್ಲದೆ ಬಹುಗಂಭೀರವಾಗಿ ಈ ನಾಟಕ ಸಾಗುತ್ತದೆ. ಈ ಗಾಂಭೀರ್ಯಕ್ಕೆ ನಾಟಕದ ಕಥಾವಸ್ತುವಿನ ಸ್ವರೂಪವೇ ಕಾರಣ. ಒರಟು ಸಂಭಾಷಣೆಗಾಗಲಿ, ಹಾಸ್ಯಕ್ಕಾಗಲಿ ಇಲ್ಲಿ ಅವಕಾಶವಿಲ್ಲ. ಊರಿನ ಜನರು ಒಂದು ಹರಕೆಯಂತೆ ಭಕ್ತಿಯಿಂದ ನಾಟಕವನ್ನು ನಡೆಸಿಕೊಂಡು ಹೋಗುತ್ತಿದ್ದು ಅವರಿಗೆ ಅದೊಂದು ಭಕ್ತಿಮಾರ್ಗವಾಗಿ ರೂಪುಗೊಂಡಿದೆ ಎಂದು ಕ್ರೈಸ್ತ ಜಾನಪದ ಸಾಹಿತಿ ಡಾ.ಬಿ.ಎಸ್. ತಲ್ವಾಡಿಯವರು ಹೇಳುತ್ತಾರೆ.
-----------------------------------





No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...