ಮಾನವ ಚಿರಂಜೀವಿ (ಆದಿ 1:27). ಆದರೆ ಆದಿಯಲ್ಲಿಯೇ ನಯವಂಚಕ ಸೈತಾನನ ಕೌಟಿಲ್ಯಕ್ಕೆ ಮರುಳಾದ ಮಾನವ ತನ್ನ ಸೃಷ್ಟಿ ಪ್ರಭುವಿನ ಅನಂತ ಪ್ರೀತಿ-ವಾತ್ಸಲ್ಯವನ್ನು ಕ್ಷಣಾರ್ಧದಲ್ಲಿ ಮರೆತು ಸೃಷ್ಟಿದತ್ತವಾಗಿ ಬಂದಿದ್ದ ತನ್ನ ಅಮರತ್ವವನ್ನು ಕಳೆದುಕೊಳ್ಳುವ ವiಹಾ ಪಾಪಕ್ಕೆ ದಾಸನಾದ (ಆದಿ 3:6-7). ಆ ಪಾಪ ಅವನಿಗೆ ತುಂಬಲಾರದ ನಷ್ಟವನ್ನುಂಟುಮಾಡಿ ಶಾರೀರಿಕವಾಗಿ ಮಾತ್ರವಲ್ಲ ಆಧ್ಯಾತ್ಮಿಕವಾಗಿಯೂ ಸಾವನ್ನು ತಂದಿತು (ಆದಿ 4:22-24). ಈ ಕಾರಣ ಮಾನವ ತನ್ನ ಅಮರತ್ವವನ್ನು ಕಳೆದುಕೊಂಡು ತನ್ನ ಸೃಷ್ಟಿ ಪ್ರಭುವಿನಿಂದ ದೂರವಾಗಿ, ತನಗಿದ್ದ ಅದ್ಭುತ ಸ್ವಾತಂತ್ರ್ಯವನ್ನೂ ಕಳೆದುಕೊಂಡ ಹಾಗೂ ಸಾವಿಗೆ ದಾಸನಾಗಿ ಸೈತಾನನ ಗುಲಾಮನಾದ. ನಯವಂಚಕ ಸೈತಾನ ಗೆದ್ದೆನೆಂದು ಬೀಗಿ ಮಾನವನ ಮೇಲೆ ಸವಾರಿ ಮಾಡಲು ಪ್ರಾರಂಭಿಸಿದ. ಆದರೆ ಸಾವಿಗೆ ಸೋಲಾಯಿತು! ಮಾನವಕುಲದ ಏಕೈಕ ರಕ್ಷಕ ಪ್ರಭು ಯೇಸುಕ್ರಿಸ್ತನ ಶಿಲುಬೆಯ ಘೋರ ಸಾವು, ಮಾನವನ ಸಾವನ್ನು ಸಂಪೂರ್ಣವಾಗಿ ಅಂತ್ಯಗೊಳಿಸಿತು. ಇದನ್ನೇ ಸಂತ ಪೌಲ "ಸಾವಿಗೆ ಸೋಲಾಯಿತು, ಜಯವು ಸಂಪೂರ್ಣವಾಯಿತು. ಎಲೈ ಸಾವೇ, ನಿನ್ನ ಜಯವೆಲ್ಲಿ? ಎಲೈ ಸಾವೇ, ನಿನ್ನ ವಿಷದ ಕೊಂಡಿಯೆಲ್ಲಿ? (1ನೇ ಕೊರಿಂಥಿ 15:55) ಎನ್ನುವ ಪವಿತ್ರ ಗ್ರಂಥದ ವಾಕ್ಯ ನೆರವೇರಿತು ಎಂದು ಉದ್ಘೋಷ ಮಾಡುತ್ತಾನೆ.
ಮಾನವನನ್ನು ದೇವರು ಅಪಾರವಾಗಿ ಪ್ರೀತಿಸಿದರು. ಅವರ ಪ್ರೀತಿಗೆ ಕೊನೆಮೊದಲಿರಲಿಲ್ಲ. ಈ ಕಾರಣ ಅವರು ಕಠೋರವಾದ ಕಳ್ಳಕಾಕರಿಗೂ, ಧರ್ಮಭ್ರಷ್ಟರಿಗೂ, ದಂಗೆಕೋರರಿಗೂ ಸೀಮಿತವಾಗಿದ್ದ ಭಯಂಕರವಾದ ಶಿಲುಬೆಯ ಮರಣಕ್ಕೆ ತಲೆಬಾಗುತ್ತಾರೆ. ಆ ಘೋರವಾದ ಶಿಲುಬೆಯನ್ನೇರಿದ ಪ್ರಭು ಯೇಸುಕ್ರಿಸ್ತ ಓ ಮನುಜ ಭಯಪಡಬೇಡ ನಿನಗೆ ಸಾವು ಅಂತ್ಯವಲ್ಲ ಅದು ಮತ್ತೊಂದು ಅಂತ್ಯವಿಲ್ಲದ ಶಾಶ್ವತ ಬದುಕಿಗೆ ನಾಂದಿ ಎಂಬ ಪರಮ ಸತ್ಯಸಂದೇಶವನ್ನು ಸಾರಿ ಹೇಳಿದರು. "ನನ್ನನ್ನು ಭೂಮಿಯಿಂದ ಮೇಲೇರಿಸಿದಾಗ, ನಾನು ಎಲ್ಲರನ್ನೂ ನನ್ನೆಡೆಗೆ ಸೆಳೆದುಕೊಳ್ಳುತ್ತೇನೆ" (ಯೊವಾನ್ನ 12:32) ಎಂಬ ಪ್ರಭುವಿನ ವಾಕ್ಯವು ನೆರವೇರಿತು. ಮಾನವನನ್ನು ಸರ್ವ ಬಂಧನಗಳಿಂದ ಬಿಡುಗಡೆ ಮಾಡಲೆಂದೇ ಪ್ರಭು ಯೇಸುಕ್ರಿಸ್ತ ಘೋರ ಶಿಲುಬೆಯನ್ನೇರಿದ. ಆದರೆ "ನಾನೇ ಜೀವ, ನಾನೇ ಮಾರ್ಗ, ನಾನೇ ಸತ್ಯ" (ಯೊವಾನ್ನ 14:6) ಎಂದು ಸಾರಿ ಹೇಳಿದ ಪ್ರಭುಕ್ರಿಸ್ತನನ್ನು ಸಾವು ಬಂಧಿಸಿಡಲು ಸಾಧ್ಯವಾಗಲಿಲ್ಲ. ಜೀವದೊಡೆಯನನ್ನು ಬಂಧಿಸಿಡಲು ಯಾರಿಂದ ತಾನೆ ಸಾಧ್ಯ!
ಪ್ರಭು ಯೇಸುಕ್ರಿಸ್ತ "ನರಪುತ್ರನು ಕಠಿಣವಾದ ಯಾತನೆಯನ್ನು ಅನುಭವಿಸಬೇಕಾಗಿದೆ. ಸಭಾ ಪ್ರಮುಖರಿಂದಲೂ ಮುಖ್ಯ ಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಆತನು ತಿರಸ್ಕøತನಾಗಿ ಕೊಲ್ಲಲ್ಪಡುವನು. ಆದರೆ ಮೂರನೇ ದಿನ ಆತನು ಪುನರುತ್ಥಾನ ಹೊಂದುವನು" (ಲೂಕ 9:22) ಎಂದು ತಾವು ಹೇಳಿದ್ದಂತೆ ಶಿಲುಬೆಯ ಘೋರ ಮರಣವನ್ನು ಜಯಿಸಿ ಮೂರನೆಯ ದಿನ ಪ್ರಭು ಉತ್ಥಾನರಾದರು! ಸತ್ತವರಲ್ಲಿ ಪ್ರಥಮವಾಗಿ ಪುನರುತ್ಥಾನರಾದವರೆಂದರೆ ಪ್ರಭು ಯೇಸುಕ್ರಿಸ್ತ. ಈ ಮೂಲಕ ಮಾನವ ಕುಲಕ್ಕೆ ಭರವಸೆಯ ಚಿಲುಮೆಯಾದರು. "ಒಬ್ಬ ಮನುಷ್ಯನಿಂದ ಸಾವು ಸಂಭವಿಸಿದಂತೆ ಒಬ್ಬ ಮನುಷ್ಯನಿಂದಲೇ ಸತ್ತವರಿಗೆ ಪುನರುತ್ಥಾನವು ಪರಿಣಮಿಸಿತು" (1ನೇ ಕೊರಿಂಥಿ 15:21) ಎನ್ನುತ್ತಾರೆ ಸಂತ ಪೌಲ. ಪ್ರಭುವಿನ ಪುನರುತ್ಥಾನ ವಿಶ್ವದಲ್ಲಿ ಹೊಸ ಸಂಚಲನವನ್ನುಂಟುಮಾಡಿ ನವ ಅಧ್ಯಾಯವನ್ನು ಸೃಷ್ಟಿಸಿತು ಹಾಗೂ ಉಲ್ಲಾಸದ ಕಿಚ್ಚನ್ನು ಹಚ್ಚಿತು. ಆದರೆ ಇದನ್ನು ಗ್ರಹಿಸಿದವರು ಕೆಲವರು ಮಾತ್ರವೇ. ಹಲವರು ಇಂದಿಗೂ ಸಹ ಇದನ್ನು ತಿರಸ್ಕರಿಸಲು ಪ್ರಯತ್ನಪಡುತ್ತಲೇ ಇದ್ದಾರೆ. ಆದರೆ ಸತ್ಯವನ್ನು ಮರೆಮಾಚಲು ಯಾರಿಂದಾದಿತು?ಪ್ರಭು ಯೇಸುಕ್ರಿಸ್ತನ ಆಗಮನ ಅಂದಿನ ನೊಂದು ಬೆಂದ ಸಮಾಜಕ್ಕೆ ಹೊಸ ಬೆಳಕನ್ನು ಚೆಲ್ಲಿತು. ಅವರ ಬೋಧನೆಗಳು ನವ ಸಂಚಲನವನ್ನುಂಟು ಮಾಡಿದವು. ದೀನ ಹಾಗೂ ಬಡ ಜನತೆಯ ಬದುಕು ಸಾಂತ್ವನವನ್ನು ಕಂಡುಕೊಂಡಿತು. ಶುಭಸಂದೇಶವನ್ನು ಅಂಗೀಕರಿಸಿದ ಜನತೆಯ ಜೀವನದಲ್ಲಿ ಬದಲಾಣೆ ಕಂಡುಬಂದಿತು. ಆದರೆ ಇದು ಸಮಾಜದ ಉನ್ನತ ವರ್ಗಕ್ಕೆ ನುಂಗಲಾರದ ತುತ್ತಾಯಿತು. ಪ್ರಭು ಕ್ರಿಸ್ತನ ಬೋಧನೆಗಳು ಉನ್ನತ ವರ್ಗದ ತಪ್ಪುಗಳನ್ನು ಗುರುತಿಸಿ ಅವುಗಳಿಂದ ಹೊರಬರುವಂತೆ ಎಚ್ಚರಿಕೆ ನೀಡಿತು. ನ್ಯಾಯ ನೀತಿಯನ್ನು ಮರುಸ್ಥಾಪಿಸುವಂತೆ ಕರೆನೀಡಿತು. ಧಾರ್ಮಿಕ ಆಚರಣೆಗಳ ನೈಜ ಅರ್ಥವನ್ನು ತಿಳಿದು ಆಚರಿಸಿ ಪುನೀತರಾಗುವಂತೆ ಉಪದೇಶ ಮಾಡಲಾಯಿತು. ಶತ್ರುಗಳನ್ನೂ ಸಹ ಪ್ರೀತಿಸುವಂತೆ ಬೋಧಿಸಲಾಯಿತು. ಆದರೆ ಉನ್ನತವರ್ಗ ಇದಕ್ಕೆ ಸೊಪ್ಪು ಹಾಕಲಿಲ್ಲ. ಅವರು ತಮ್ಮ ಸ್ವಾರ್ಥದ "ಅಹಂ" ಬಿಡುವ ಬದಲಾಗಿ ಪ್ರಭು ಕ್ರಿಸ್ತನನ್ನೇ ಹತ್ತಿಕ್ಕಲು ಕುಟಿಲ ತಂತ್ರೋಪಾಯಗಳನ್ನು ಹೆಣೆಯುತ್ತಿದ್ದರು ಹಾಗೂ ಇದರ ಪ್ರಯತ್ನ ನಿರಂತರವಾಗಿ ಸಾಗುತ್ತಿತ್ತು. ಆದರೆ ಇದಾವುದೂ ಜೀವದೊಡೆಯ ಪ್ರಭು ಕ್ರಿಸ್ತ್ತನನ್ನು ಧೃತಿಗೆಡಿಸಲಿಲ್ಲ. ಯಾಕೆಂದರೆ ಪ್ರಭು ಕ್ರಿಸ್ತ ಮಾನವ ಕುಲಕ್ಕೆ ತಮ್ಮನ್ನೇ ಸಂಪೂರ್ಣವಾಗಿ ಸಮರ್ಪಿಸಿಕೊಂಡು ಮಾನವನಿಗೆ ಹೊಸ ಜೀವವನ್ನಿತ್ತು ದೈವ ಸಾಮ್ರಾಜ್ಯದ ಪ್ರಜೆಯನ್ನಾಗಿ ಮಾಡಲು ಬಂದವರಾಗಿದ್ದರು. ಅವರ ರಾಜ್ಯ ಈ ಲೋಕದ್ದಾಗಿರಲಿಲ್ಲ. ಸ್ವರ್ಗ ಅವರ ರಾಜ್ಯವಾಗಿತ್ತು.
ಈ ಕಾರಣ ಅವರು ನಿರ್ಭಯವಾಗಿ ತಮ್ಮ ಸೇವಾಕಾರ್ಯದಲ್ಲಿ ನಿರತರಾಗಿದ್ದರು. ಆದರೆ ಧಾರ್ಮಿಕ ಮುಖಂಡರುಗಳಿಗೂ ಹಾಗೂ ಸಮಾಜದ ಉನ್ನತ ವರ್ಗಕ್ಕೂ ಪ್ರಭು ಕ್ರಿಸ್ತನ ಸತ್ಯ ಬೋಧನೆ ಕಿರಿಕಿರಿಯನ್ನುಂಟುಮಾಡಿತು. ಅವರ ಆತ್ಮಸಾಕ್ಷಿ ಅವರನ್ನು ತಿವಿಯತೊಡಗಿತು. ಪ್ರಭು ಕ್ರಿಸ್ತ ಅವರಿಗೆ ನುಂಗಲಾಗದ ತುತ್ತಾದ. ಇಲ್ಲಸಲ್ಲದ ಪೊಳ್ಳು ಆಪಾದನೆಗಳನ್ನು ಪ್ರಭು ಕ್ರಿಸ್ತನ ಮೇಲೆ ಹೊರಿಸಿ ಅವರನ್ನು ಶಿಲುಬೆಗೇರಿಸುವಂತೆ ಮಾಡಲು ಮುಗ್ದ ಜನರ ತಲೆ ಕೆಡಿಸಲಾಯಿತು. ಮುಗ್ದ ಜನರು ನಯವಂಚಕರ ಮಾತಿಗೆ ಮರುಳಾಗಿ ಪ್ರಭು ಕ್ರಿಸ್ತನನ್ನು ಶಿಲುಬೆಗೇರಿಸಲು ಸಮ್ಮತಿಸಿ, ಪಿಲಾತನ ಮುಂದೆ "ಶಿಲುಬೆಗೇರಿಸಿ, ಶಿಲುಬೆಗೇರಿಸಿ” ಎಂದು ಅವರು ಇನ್ನೂ ಹೆಚ್ಚಾಗಿ ಆರ್ಭಟಿಸಿದರು. (ಮತ್ತಾಯ 27:23). ಪ್ರಭು ಕ್ರಿಸ್ತ ಮಾನವ ಕುಲದ ರಕ್ಷಣೆಗಾಗಿ ಶಿಲುಬೆಯನ್ನು ಪ್ರೀತಿಯಿಂದ ಅಪ್ಪಿಕೊಂಡು ದೈವ ಸಂಕಲ್ಪವನ್ನು ನೆರವೇರಿಸಿದರು. ಹೀಗೆ ಸೈತಾನನ ರಾಜ್ಯಕ್ಕೆ ಅಂತ್ಯವಾಡಿ ಅಳಿಯದ ದೈವ ಸಾಮ್ರಾಜ್ಯಕ್ಕೆ ನಾಂದಿಯಾಡಿದರು. ಪ್ರಭು ಕ್ರಿಸ್ತ ಮರಣವನ್ನು ಜಯಿಸಿ ಪುನರುತ್ಥಾನರಾದರು. ಪ್ರಭುವಿನ ಸಮಾಧಿ ಬರಿದಾಯಿತು. ಅದನ್ನು ನೋಡಲು ಬಂದಿದ್ದ ಮಹಿಳೆಯರಿಗೆ ದೂತನು "ಶಿಲುಬೆಗೇರಿಸಿದ ಯೇಸುವನ್ನು ನೀವು ಹುಡುಕುತ್ತಿದ್ದೀರೆಂದು ನಾನು ಬಲ್ಲೆ. ಅವರು ಇಲ್ಲಿಲ್ಲ; ಅವರೇ ಹೇಳಿದಂತೆ ಪುನರುತ್ಥಾನ ಹೊಂದಿದ್ದಾರೆ. ಬನ್ನಿ ಅವರನ್ನಿಟ್ಟಿದ್ದ ಸ್ಥಳವನ್ನು ನೋಡಿ. ಈಗ ಬೇಗನೆ ಹೋಗಿ, ಅವರ ಶಿಷ್ಯರಿಗೆ, ಸತ್ತಿದ್ದವರು ಪುನರುತ್ಥಾನ ಹೊಂದಿದ್ದಾರೆ; ಅವರು ನಿಮಗಿಂತ ಮುಂಚಿತವಾಗಿ ಗಲೀಲೆಯಕ್ಕೆ ಹೋಗುವರು; ಅಲ್ಲೇ ಅವರನ್ನು ಕಾಣುವಿರಿ' ಎಂದು ತಿಳಿಸಿರಿ" (ಮತ್ತಾಯ28:5-7; ಮಾರ್ಕ 16:5-7; ಲೂಕ 24:5-7; ಯೊವಾನ್ನ 20:1-10). ಎಂದರು. ಪ್ರಭು ಕ್ರಿಸ್ತ ಪುನರುತ್ಥಾನರಾದ ಸಂದೇಶ ಕಾಡ್ಗಿಚ್ಚಿನಂತೆ ಹಬ್ಬಿ ಹರಡಿತು. ಪ್ರಭು ಕ್ರಿಸ್ತರ ಪುನರುತ್ಥಾನ ಲೋಕದ ಆಶಾಪಾಶಗಳಿಂದ ತುಂಬಿಹೋಗಿದ್ದ ಪ್ರೇಷಿತರ ಆಧ್ಯಾತ್ಮಿಕ ಕಣ್ಣುಗಳನ್ನು ತೆರೆಯಿಸಿತು. ಅವರು ಭಯಮಿಶ್ರಿತ ಆನಂದದಿಂದ ತುಂಬಿಹೋದರು. ಅವರು ನಿಧಾನವಾಗಿ ಕತ್ತಲೆಯಿಂದ ಶಾಶ್ವತ ಬೆಳಕಾಗಿರುವ ಪ್ರಭು ಕ್ರಿಸ್ತನೆಡೆಗೆ ಮುಖಮಾಡಿದರು. ಅಂದಿನಿಂದ ಅವರೆಂದೂ ಪ್ರಭು ಕ್ರಿಸ್ತನಿಂದ ವಿಮುಖರಾಗಲಿಲ್ಲ.
ಪ್ರಭು ಕ್ರಿಸ್ತನ ಪುನರುತ್ಥಾನ ಬೆಳಕಿನೆಡೆಗೆ ಪಯಣಿಸಲು ಹಾಗೂ ಸತ್ಯವನ್ನು ಅಂಗೀಕರಿಸಲು ಆಹ್ವಾನ. ಪ್ರಸ್ತುತ ನಮ್ಮ ಬದುಕು ಬೆಳಕಿನಲ್ಲಿರಬಹುದು ಅಥವ ಕತ್ತಲೆಯಲ್ಲಿರಬಹುದು. ಆದರೆ ಈ ಕ್ಷಣದಿಂದ ಈ ನಮ್ಮ ಬದುಕು ಹೇಗಿರಬೇಕು ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯ ಪ್ರತಿಯೊಬ್ಬ ವ್ಯಕ್ತಿಗೆ ಬಿಟ್ಟಿದ್ದಾಗಿದೆ. ಒಬ್ಬ ವ್ಯಕ್ತಿಯು ತಾಯಿಯ ಉದರದಲ್ಲಿ ರೂಪುಗೊಳ್ಳುವ ಕ್ಷಣದಿಂದಲೇ ಮುಂದಿನ ಬದುಕಿನ ಬಗ್ಗೆ ತಿಳಿದುಕೊಳ್ಳುವ ಜ್ಞಾನವನ್ನು ಪ್ರತಿಮಾನವನಿಗೆ ದೈವದತ್ತವಾಗಿಯೇ ಕೊಡಲಾಗಿz.É ಆದರೆ ಇದು ಆಧ್ಯಾತ್ಮಿಕವಾಗಿ ಬೆಳೆದಂತೆ ಹಂತ ಹಂತವಾಗಿ ಅನಾವರಣಗೊಳ್ಳುತ್ತದೆ. ಕತ್ತಲೆ-ಬೆಳಕು, ಅಸತ್ಯ-ಸತ್ಯ, ದ್ವೇಷ-ಪ್ರೀತಿ ಇವುಗಳನ್ನು ತಿಳಿದುಕೊಳ್ಳುವ ಅರಿವಿನ ಬೊಕ್ಕಸ ತೆರೆದುಕೊಂಡಾಗ ಮಾನವ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯ ಅವನ ಮುಂದಿರುತ್ತದೆ ಆಗ ಆಯ್ಕೆ ಅವನದು.
ಬೆಳಕನ್ನು ಆಯ್ದುಕೊಂಡು ಸತ್ಯದ ಪಥದಲ್ಲಿ ಸಾಗಿ ಪ್ರೀತಿಯನ್ನು ಬೆಳೆಸಿಕೊಂಡರೆ ಅಂಥವನ ಜೀವನ ಪ್ರಭು ಕ್ರಿಸ್ತನನ್ನು ಧರಿಸಿಕೊಂಡವರಂತೆ. ಅಲ್ಲಿ ಅನ್ಯಾಯಕ್ಕೆ, ಅಧರ್ಮಕ್ಕೆ, ಅಸತ್ಯಕ್ಕೆ ಅವಕಾಶವಿರುವುದಿಲ್ಲ. ಅಲ್ಲಿ ಸತ್ಯಧರ್ಮ ನೆಲೆನಿಲ್ಲುತ್ತದೆ. ತಾರತಮ್ಯ ಕೊನೆಗೊಳ್ಳುತ್ತದೆ. ಸಾಮರಸ್ಯದ ಜೀವನ ಆರಂಭಗೊಂಡು ಪ್ರಭು ಕ್ರಿಸ್ತನ ಸಮಾನತೆಯ ಮೌಲ್ಯಗಳು ರೂಪುಗೊಳ್ಳುತ್ತವೆ. ಆಗ ಅಲ್ಲಿ ಪ್ರಭು ಕ್ರಿಸ್ತನ ಸಂದೇಶ ಸಾಕಾರಗೊಳ್ಳಲು ಆರಂಭಿಸುತ್ತದೆ. ಆಗ ಕ್ರಿಸ್ತನ ಪುನರುತ್ಥಾನ ಒಂದು ಐತಿಹಾಸಿಕ ಘಟನೆಯ ಸ್ಮರಣೆಯಾಗುವ ಬದಲು ಮಾನವನ ನಿತ್ಯದ ಬದುಕಿನ ಅವಿಭಾಜ್ಯ ಅಂಗವಾಗುತ್ತದೆ. ಆಗ ಪ್ರಭು ಕ್ರಿಸ್ತ ಪ್ರತಿ ಮಾನವರಲ್ಲಿ ನಿತ್ಯವೂ ಪುನರುತ್ಥಾನವಾಗುತ್ತಲೇ ಇರುತ್ತಾನೆ. ಇಲ್ಲದಿದ್ದಲ್ಲಿ ಪ್ರಭು ಕ್ರಿಸ್ತನ ಘೋರ ಶಿಲುಬೆಯ ಮರಣ ಮಾನವನ ಬದುಕಿನಲ್ಲಿ ನಿತ್ಯವೂ ಸಾಗುತ್ತಲಿರುತ್ತದೆ. ಸಾವು ನಮ್ಮನ್ನು ಪ್ರಭು ಕ್ರಿಸ್ತನಿಂದ ಮರೆಮಾಡಲು ಯತ್ನಿಸಿದರೆ ಅವರ ಪುನರುತ್ಥಾನ ನಮಗೆ ಹೊಸ ಜೀವವನ್ನು ನೀಡುತ್ತದೆ. ಪ್ರಭುವಿನ ಪುನರುತ್ಥಾನದ ಮುಂದೆ ಸಾವು ಗೌಣವಾಗುತ್ತದೆ. ಏಕೆಂದರೆ ಸಾವಿಗೆ ಜಯವಿಲ್ಲ ಪುನರುತ್ಥಾನಕೆ ಸಾವಿಲ್ಲ!
ಇಂದು ವಿಶ್ವದಾದ್ಯಂತ ಮಾನವರೆಲ್ಲರೂ ಕೊರೋನ ವೈರಸ್ ಭಯದಿಂದ ಬೆಚ್ಚಿಬಿದ್ದಿದ್ದಾರೆ. ಎಲ್ಲಾ ಧರ್ಮಗಳ ಆರಾಧನಾ ಮಂದಿರಗಳು ಮುಚ್ಚಿವೆ. ಜನ ಜೀವನ ಸ್ತಬ್ಧವಾಗಿದೆ. ಸೋಂಕಿತರಲ್ಲಿ ಸಾವಿನ ಭಯ ಆವರಿಸಿದೆ. ಸೈತಾನ ಅಟ್ಟಹಾಸದಿಂದ ರಣಕೇಕೆ ಹಾಕುತ್ತಿದ್ದಾನೆ. ಹಲವರು ಇದು ಮಾನವರ ಪಾಪದ ಫಲವೆಂದು ಗೊಣಗುತ್ತಿದ್ದಾರೆ. ಮುಂಜಾಗ್ರತಾ ಕ್ರಮಗಳಿಂದ ಜೀವ ಉಳಿಸಿಕೊಳ್ಳಲು ಹೆಣಗುತ್ತಿದ್ದಾರೆ. ದೇವರಲ್ಲಿನ ನಮ್ಮ ವಿಶ್ವಾಸ ಸಮುದ್ರದ ಮಧ್ಯದಲ್ಲಿ ಬಿರುಗಾಳಿಗೆ ಸಿಲುಕಿದ ಹಡಗಿನಂತೆ ಹೊಯ್ದಾಡುತ್ತಿದೆ. ಆದರೆ ಪ್ರಭುವಿನಲ್ಲಿ ಭರವಸೆವುಳ್ಳನಿಗೆ ಇದು ತಾತ್ಕಾಲಿಕ ಮಾತ್ರ! ನಮ್ಮ ಪೂರ್ವಜರಾದ ಪಿತಾಮಹ ನೋವ, ಅಬ್ರಹಾಮ, ಮೋಶೆ, ಇವರೊಡನೆ ನಮ್ಮ ದೇವರು ಒಡಂಬಡಿಕೆಯನ್ನು (ನೋವ, ಆದಿ 6:18; 8:20-9:17; ಅಬ್ರಹಾಮ, ಆದಿ 12:1-3; 15:18; 17:7 ಮೋಶೆ, ಯಾತ್ರಾ 19:4-6; 20:2) ಮಾಡಿಕೊಂಡ ಪ್ರಕಾರ ನಾವು ಅವರ ಮಕ್ಕಳಾಗಿದ್ದೇವೆ. ಅವರು ನಮ್ಮ ದೇವರಾಗಿದ್ದಾರೆ. ಈ ಕಾರಣ ನಮ್ಮನ್ನು ನಿರಂತರವಾಗಿ ಎಲ್ಲಾ ಬಾಧೆಗಳಿಂದಲೂ ಬಿಡಿಸಿ ಕಾದು ರಕ್ಷಿಸಲು ಅವರು ತಮ್ಮ ಒಬ್ಬರೇ ಮಗನನ್ನು ಕಳುಹಿಸಿದ್ದಾರೆ. ಅವರೇ ನಮ್ಮ ರಕ್ಷಕ ಪ್ರಭು ಯೇಸುಕ್ರಿಸ್ತ. ಅವರು ನಮಗಾಗಿ ಶಿಲುಬೆ ಹೊತ್ತು ಪ್ರಾಣ ತೆತ್ತು ನಮಗೆಲ್ಲ ಹೊಸ ಜೀವ ನೀಡಲು ಪುನರುತ್ಥಾನರಾಗಿ ಸದಾ ನಮ್ಮೊಡನಿರುವಾಗ ಭಯವೇಕೆ! ಮನೆಯಲ್ಲೇ ಇದ್ದು ಎಲ್ಲರೂ ಒಟ್ಟಾಗಿ ವಿಶ್ವಾಸದಿಂದ ಸರ್ವ ರೋಗ ನಿವಾರಣೆಗಾಗಿ ಪ್ರಾರ್ಥಿಸೋಣ, ದೇವರವಾಕ್ಯವನ್ನು ಧ್ಯಾನಿಸೋಣ, ಪ್ರಭುವಿನ ಪುನರುತ್ಥಾನದ ಪ್ರಸನ್ನತೆಯನ್ನು ನಾವಿದ್ದಲ್ಲೇ ಅನುಭವಿಸಿ ಸರ್ವರಿಗೂ ಒಳಿತಾಗಲೆಂದು ಹಾರೈಸಿ ಪುನೀತರಾಗೋಣ.
**********
No comments:
Post a Comment