Saturday, 10 August 2019

ದನಿ ಆಗಸ್ಟ್ 2019



ದನಿ ರೂಪಕ


(ಶೀರ್ಷಿಕೆಯ ಮೇಲೆ ಕ್ಲಿಕ್ ಮಾಡಿ)



Wednesday, 7 August 2019

ಮೌನದ ದನಿ


ದೇವರ ಹೆಸರ
ಹೇಳಲು ಒತ್ತಾಯಿಸಿ ನನ್ನ
ಹೊಡೆಯುವೆ ನೀನು ಕ್ರೂರದಿ
ಹೌದು, ಧರ್ಮಕ್ಕೆ ರಾಜಕೀಯ
ಸೊಂಕು ಬಡಿದಿರುವಾಗ
ದೇವರು ಎಂಬುವರು
ಯಾರು ಎಂದು ನಿನಗೆ
ತಿಳಿಹೇಳುವರಾರು?
————
ದ್ವೇಷದವಿರುದ್ಧ
ನಾ ಬರೆದ ಪತ್ರಕ್ಕೆ
ಪತ್ರ ಬರೆದು ನನ್ನ ವಿರೋಧಿಸಿದೆಯಲ್ಲ
ದ್ವೇಷವನ್ನು ದ್ವೇಷದಿಂದ
ಗೆಲ್ಲುವ ಸಿದ್ಧಾಂತ
ನಿನ್ನದಾದರೆ
ದ್ವೇಷವನ್ನು ದ್ವೇಷದಿಂದ ಗೆದ್ದು ತೋರಿಸು
——————
ರಾಜಕೀಯ ಆಟಕ್ಕೆ
ನಿಮ್ಮ ಆಧಿಕಾರದ ದುರಾಸೆಗೆ
ಬಲಿಯಾಗುವುದು ನೀವಲ್ಲ
ನಿಮ್ಮ ಕೈಗಳಿಗೆ ಆಟದ ಗೊಂಬೆಗಳಾಗಿರುವ
ನಾವುಗಳು
—————-
ಬೇವಿನ ಸೊಪ್ಪಿನಿಂದ
ಕಹಿ ಬಿಟ್ಟು
ಸಿಹಿ ಕೇಳುವುದು
ದುಷ್ಟ ಸರ್ಕಾರದಿಂದ
ಧರ್ಮ ಬಯಸಿದಂತೆ.

ಜೀವಸೆಲೆ

ಕೊನೇ ಮಾತು

ಪ್ರೀತಿಯ ಅನುಗೆ,
ನಿನ್ನ 25 ಸಂವತ್ಸರಗಳ ಸಾತ್ವಿಕ ಬದುಕಿಗೆ ಅಭಿನಂದನಾ ಮಾತುಗಳು...
 ಸೇವೆಯ 25 ಸಂವತ್ಸರಗಳನ್ನು ಕೂಡಿಸಿಕೊಂಡು 26ನೇಯ ವರ್ಷವನ್ನು ಅಪ್ಪಿಕೊಳ್ಳುತ್ತಿದೆ ನಿಮ್ಮ ಸೇವಾ ಬದುಕು. ಇಂತಹ ಶ್ರೇಷ್ಟ ಬದುಕಿನಲ್ಲಿ ಕೂಡಿಸಿಕೊಂಡಿದಕ್ಕಿಂತ ಕಳೆದುಕೊಂಡಿದ್ದೆ ಹೆಚ್ಚು. ಹುಟ್ಟಿದ ಮನೆ ಊರು, ತನ್ನೊಂದಿಗೆ ಬೆರೆತು ಆಡಿ ಬೆಳೆದಗೆಳೆಯ ಗೆಳೆತಿಯರು, ತಂದೆತಾಯಿ, ಅಕ್ಕ ತಂಗಿ ತಮ್ಮಂದಿರು ಕೂನೆಗೆ ತನ್ನ ಸ್ವತಂತ್ರ ಬದುಕನ್ನೇ ಇನ್ನೊಬ್ಬರ ಸುಖಕ್ಕಾಗಿ ಬಿಟ್ಟುಕೊಟ್ಟ ಹೆಗ್ಗಳಿಕೆ ನಿಮ್ಮದು. ಇಲ್ಲಿ ಯಾರ ಒತ್ತಾಯವಿರಲಿಲ್ಲ. ಯಾರನ್ನು ಮೆಚ್ಚುಗೆ ಪಡಿಸುವ ದಾವಂತ/ಇರಾದೆ ನಿಮಗಿರಲಿಲ್ಲ. ಅದು ನಿಮ್ಮ ಸ್ವಂತ ನಿರ್ಧಾರದ ಫಲವಾಗಿತ್ತು. ನಿಮ್ಮ ಆ ಒಂದು ನಿರ್ಧಾರದಿಂದ ನಿಮ್ಮ ಇಡಿ ಬದುಕೇ ಒಂದು ವ್ಯವಕಲನವಾದರೂ, ಕಳೆದುಕೊಂಡಿದ್ದನು ಲೆಕ್ಕ ಮಾಡಲಿಲ್ಲ; ಆದರ ಬಗ್ಗೆ ಮತ್ತೊಬ್ಬರಿಗೆ ಪಟ್ಟಿ ಒಪ್ಪಿಸಲಿಲ್ಲ, ಬಿಟ್ಟುಕೊಟ್ಟೆ ಎಂದು ವ್ಯಥೆಪಡಲಿಲ್ಲ. ಎಲ್ಲದರಿಂದ ಮುಕ್ತವಾಗಿದ್ದೂ ನೆಮ್ಮದಿಯಾಗಿರಬಲ್ಲೆ ಎಂಬದನ್ನು ನೀವು ಬದ್ಕಿ ತೋರಿಸಿಕೊಟ್ಟಿದ್ದೀರಿ. ಆದ್ದರಿಂದ ನಿಮ್ಮಲ್ಲಿ ನಾಳಿನ ಕಳವಳವಿಲ್ಲ. ನಾಳಿನ ತವಕಗಳನ್ನು ಮೀರಿದ ನಿರಾಳ ಬದುಕು ನಿಮ್ಮದಾಗಿತ್ತು.
ನಿಮ್ಮ ಸಾತ್ವಿಕ ಬದುಕಿನ 25 ವರ್ಷಗಳ ನಡೆ ಹೊರಕಣ್ಣಿಗೆ ಕಾಣುವಂತೆ ಸುಗಮ ದಾರಿಯಲ್ಲಿ ನಡೆದಂಥದಲ್ಲ. ಬದುಕು ಗುಲಾಬಿ ಹಾಸಿಗೆ ಆಗಿರಲಿಲ್ಲ ಎಂಬುವುದು ನಿಮ್ಮ ಒಡನಾಡಿಗಳಿಗೆ ತಿಳಿಯದ ವಾಸ್ತವವೆನ್ನಲ್ಲ. ನಿಮ್ಮನು ಎಷ್ಟೊ ಜನರು ತಪ್ಪಾಗಿ ತಿಳಿದುಕೊಂಡರು; ಎಷ್ಟೂ ಜನರು ನಿಮ್ಮ ಜೊತೆಗೆ ಮನಸ್ತಾಪ ಮಾಡಿಕೊಂಡರು, ನಿಮ್ಮ ಬಗ್ಗೆ ಹೊಟ್ಟೆಕಿಚ್ಚು ಪಟ್ಟರು, ನಿಮಗೆ ಕಿರುಕುಳಗಳ ನೀಡಿ ಹಿಂಸಿಸಿದರು. ಕಷ್ಟದ ಕಾಲದಲ್ಲಿ ನಿಮ್ಮ ಬಳಿ ಇರಬೇಕಾದವರು ನಿಮ್ಮನ್ನು ತೊರೆದರು! ಜತೆಗೆ ಯಾವುದೋ ಒಂದು ಕಾಯಿಲೆವೆಂಬ ಭೂತ ನಿಮ್ಮನ್ನು ಹಿಂಸಿಸಿ, ಹಿಂಡಿ ನಿಮ್ಮ ಕನಸ್ಸುಗಳನ್ನೆಲ್ಲಾ ಸುಟ್ಟು ತಿಂದು ತೇಗಿ, ನಿಮ್ಮನ್ನು ಒಂದೇ ಮನೆಯ ಕೋಣೆಯಲ್ಲಿ ಕೂಡಿ ಹಾಕುವುದಿರಲ್ಲಿ ಸೇವೆ ಮಾಡಲು ಬಂದ ನಿಮಗೇ ಮತ್ತೊಬ್ಬರು ಸೇವೆ ಮಾಡಬೇಕಾದ ಅನಿವಾರ್ಯವತೆಯನ್ನು ಸೃಷ್ಟಿಸಿದ; ನಡೆಯಲು ಒಂದು ಉರುಗೋಲಿನ ಅವಶ್ಯಕತೆಯನ್ನು ತಂದು ಒಡ್ಡಿದಲ್ಲದೆ ಹತ್ತಾರು ಆಸ್ಪತ್ರೆಗಳಿಗೆ ಸುತ್ತಾಡಿಸಿ ಬದುಕನ್ನು ನರಕವಾಗಿಸಿದ.
ಇಂತಹ ಸಂಕಟಕರ ಸಮಯದಲ್ಲಿ ಸಾಂತ್ವನಕ್ಕೆ ಬದುಕು ಮತ್ತೊಂದು ಜೀವವನ್ನು ಬಯಸುತ್ತದೆ. ನಿಶಕ್ತ ಬಳ್ಳಿ ನಿಂತುಕೊಳ್ಳಲು ಮರದ ಆಸರೆ ಬೇಡುವಂತೆ. ಅದು ಮಾನವನು ತನ್ನ ಅಸಹಾಯಕತೆಯಲ್ಲಿ ಬೇಡುವ ಪ್ರವೃತಿಯೂ ಹೌದು. ಆದರೆ ನಿಮಗೆ ಆಗಾಗಲಿಲ್ಲ. ನಿಮ್ಮ ಸಾಂತ್ವನವಾಗಬೇಕಿದ್ದ ಸಮುದಾಯದಲ್ಲಿ ನಿಮ್ಮನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ನಿಮ್ಮನ್ನು ತೆಗಳಿದವರು; ನಿಮಗೆ ಉರುಗೋಲು ಆಗುವುದಕ್ಕಿಂತ ನಿಮ್ಮ ಕಾಲು ಎಳೆದವರೇ ಹೆಚ್ಚು. ಅದಕ್ಕಿಂತ ಹೆಚ್ಚಾಗಿ, ನಿಮ್ಮ ಬದುಕನ್ನು ಬೆಂಕಿಯಾಗಿಸಿ ತಮ್ಮ ಬೇಳೆಯನ್ನು ಬೇಯಿಸಿಕೊಂಡ ಸಂಖ್ಯೆಗೇನು ಕಡಿಮೆಯಿಲ್ಲ. ಈ ಕಡೆ ಮನೆಯವರಿಂದ ಕೂಡ ನಿಮಗೆ ನೆಮ್ಮದಿ ಸಿಗಲಿಲ್ಲ. ಮನೆಯ ಅನೇಕ ಆಘಾತ ಚಂಡಮಾರುತಗಳು ನಿಮ್ಮನ್ನು ಅಪ್ಪಳಿಸಿ ನಿಮ್ಮಲ್ಲಿ ತಲ್ಲಣ ಸೃಷ್ಟಿಸಿದವು. ಆದರೆ ನೀವು ದೃತಿಗೆಡಲಿಲ್ಲ, ರೋಗಿಯೆಂದು ಸುಮ್ಮನೆ ಕೂರಲಿಲ್ಲ. ಸೇವೆಯ ಕೈಬಿಡಲಿಲ್ಲ. ಆ ರೋಗಕ್ಕೆ ಸೆಡ್ಡು ಹೊಡೆದು ಸೆಟೆದು ನಿಂತ ಅಂತಃಶಕ್ತಿ ನೀವು.
ನಿಮ್ಮ ಮನೆಯ ಆರ್ಥಿಕ ಸ್ಥಿತಿ ಉತ್ತುಂಗದ ತುತ್ತತುದಿಯಲ್ಲಿದ್ದಾಗ ಮನಸ್ಸು ಮಾಡಿದರೆ ನೀವು ಇತರರಂತೆ ಶ್ರೀಮಂತಿಕೆಯ ಸುಪತಿಗೆಯಲಿ ಇರಬಹುದಾಗಿತ್ತು. ಆದರೆ ಶ್ರಿಮಂತಿಕೆ ನಿಮ್ಮನ್ನು ಆರ್ಕಷಿಸಲಿಲ್ಲ. ಆರ್ಕಷಿಸಿದ್ದರೂ ಅದರ ಸಹವಾಸಕ್ಕೆ ಹೋಗದಿರುವ ಮನಸ್ಸು ನಿಮ್ಮದಾಯ್ತು. ಆ ಶ್ರಿಮಂತಿಕೆಯ ಬಂಡವಾಳ ಆಗಲೇ ನಿಮಗೆ ತಿಳಿದುಬಿಟ್ಟಿತ್ತೆನೋ! ನಿಮ್ಮ ಬದುಕನ್ನು ಸೇವೆಯ ಕಲ್ಲಿನ ಮೇಲೆ ತೇಯುತ್ತಾ ಇತರರಿಗೆ ಸುಗಂಧವಾಗಲು ಇಷ್ಟಪಟ್ಟಿರಿ. ಕಲ್ಲು ಹೊಡೆಯುವ ಕೈಗಳಿಗೆ ಹಣ್ಣುಕೊಡಲು ನಿರ್ಧರಿಸಿದ್ದೀರಿ. ಆ ನಿರ್ಧಾರದ ಫಲದ ಬುಟ್ಟಿಯೇ ಈ 25ವರ್ಷಗಳ ಸೇವೆಯ ಸಂಭ್ರಮ.
ನೀವು ಮಾಡಿರುವ ಸೇವೆ ಅಗಣ್ಯವಾದುದು. ತಮ್ಮ ನಿಷ್ಠೆ, ಶ್ರದ್ಧೆ, ಪ್ರಮಾಣಿಕತೆ, ಸರಳತೆ, ಆಧ್ಯಾತ್ಮಿಕತೆ ಜನಪರ ಜೀವಪೂರಕ ಕಾಳಜಿಗಳಿಂದ ಸಲ್ಲಿಸಿರುವ ಸೇವೆ ಎಂಥವರನ್ನು ಬೆರಗುಗೊಳಿಸುವಂತದ್ದು. ನಮ್ಮ ಕ್ಯಾಲ್ಕುಲೇಟರ್ಗಳ ಲೆಕ್ಕಕ್ಕೆ ಸಿಗದೆ ನಮ್ಮ ಅಸಂವೇದನತ್ವವನ್ನು ಬಡಿದು ಎಚ್ಚರಿಸುವಂತದ್ದು. ನಿಮ್ಮ ಸೇವಾ ಜೀವನ ನಮ್ಮ ಹೊಸ ಹೊಸ ಪ್ರಯತ್ನಗಳಿಗೆ, ಸೇವೆಯ ಉತ್ತುಂಗದ ತುದಿಗೆ ಏರಲು ಸ್ಪೂರ್ತಿಯಾಗುತ್ತಲೇ ನಮ್ಮಗೊಂದು ಮಾದರಿ ಮತ್ತು ಬದುಕಿನ ಅಳತೆ ಗೋಲಾಗಿ ನಿಂತುಬಿಡುವಂತದು. ನಿಮ್ಮದು ಕಣ್ಣು ಕೋರೈಸುವಂತಹ ಪ್ರಚಾರ, ತೋರಿಕೆ ಬಯಸುವ ಸೇವಾ ಸಾಧನೆಗಳಲ್ಲ. ಬದಲಾಗಿ ಅವು ಅಪ್ಪಟ ನಿಸ್ವಾರ್ಥ, ದಿಟ್ಟ, ಅರ್ಪಣಾ ಮನೋಭಾವಗಳಿಂದ ತುಂಬಿದ ಸದ್ದಿಲ್ಲದ ಪ್ರಚಾರ ಬಯಸದ ಎಲೆಮರೆಯ ಸೇವೆಗಳು. ನಿಮ್ಮಂತವರಿಂದಲೋ ಏನೋ.. ತುಂಬಿದ ಕೊಡ ತುಳುಕುವುದಿಲ್ಲ " ಎಂಬಂತಹ ಗಾದೆಗಳು ಹುಟ್ಟಿಕೊಂಡಿರುವುದು! ಖಲೀಲ್‍ ಗಿಬ್ರಾನ್ ಹೇಳುವಂತೆ "ಬೇರು- ಕೀರ್ತಿಯನ್ನು ನಿರ್ಲಕ್ಷಿಸಿದ ಹೂವು" ಆ ಬೇರು-ಹೂವು ನೀವು.
ನನ್ನ ಮತ್ತು ನಿಮ್ಮ ಒಡನಾಟ ಇತ್ತಿಚೀನದಲ್ಲ. ಅದು ಹತ್ತಾರು ವರ್ಷಗಳದ್ದು ಹಾಗೂ ಗಟ್ಟಿಯಾಗಿ ಬೇರೂರಿರುವಂತದ್ದು. ಹಳೆಯದಾದಷ್ಟು ರುಚಿಸುವ ವೈನಿನಂತದ್ದು (ದ್ರಾಕ್ಷರಸದಂತಹದು). ನಿಮ್ಮ ಹುರುಪು, ಕೌಶಲ್ಯ, ಬಹುಮುಖ ಪ್ರತಿಭೆ, ಪಾದರಸದಂತಹ ಲವಲವಿಕೆ, ಕಲ್ಲಿನ ಮೇಲೆ ಗುದ್ದಿ ನೀರು ಬರಿಸುವಂತಹ ಆತ್ಮವಿಶ್ವಾಸ, ನಗುತ್ತಾ ನಗಿಸುತ್ತಲೇ ವಿಜಯ ಸಾಧಿಸುವಂತಹ ಬುದ್ಧಿವಂತಿಕೆ, ಎಲ್ಲಕ್ಕೂ ಮೀರಿ ಜಟಿಲ ಮನಸ್ಸನ್ನು ತಿಳಿಗೊಳಿಸುವ ನಿಮ್ಮ ಹಾಸ್ಯಪ್ರಜ್ಞೆ ನನ್ನನ್ನು ಮೂಕವಿಸ್ಮಿತನಾಗಿಸಿ ನಿಮ್ಮ ಅಭಿಮಾನಿಯಾಗಿಸಿಬಿಟ್ಟಿದೆ. ಅನುಕರಿಸಲು ಒಂದು ಉತ್ತಮ ಮನುಷ್ಯನನ್ನು ನಿಮ್ಮ ಮೂಲಕ ನನಗೆ ಕೊಟ್ಟಿದೆ ಎಂದರೆ ಅತಿಶಯೋಕ್ತಿಯಾಗಲಾರದು. ನೀವು ಸಹಾನುಭೂತಿಯುಳ್ಳ ಪ್ರೀತಿಪೂರಿತವಾದ ಹೃದಯದ ಮನುಷ್ಯ. ಯಾವುದೇ ಕೆಲಸವನ್ನು ಕೈಗೊಂಡರೂ ಮನಸ್ಸು, ಹೃದಯ ಸ್ವರ್ವಸ್ವವನ್ನು ಆ ಕೆಲಸಕ್ಕೆ ತೊಡಗಿಸಿಬಿಡುವ ಯೋಗಿ ನೀವು. ಹೃದಯ ದೃಢವಾಗಿದ್ದರೆ ಸಂತೆಯಲ್ಲಿ ಆನೆಯನ್ನು ಕೂಡ ಎದುರಿಸಬಲ್ಲೇ ಎನ್ನುವ ಆತ್ಮಶಕ್ತಿ ನಿಮ್ಮದು. ನಿಮ್ಮಲ್ಲಿರುವ ಅಪ್ಪನ ವ್ಯವಹಾರಿಕ, ಲೆಕ್ಕಚಾರಗಳ ಜ್ಞಾನ, ಅಮ್ಮನ ಭಾವಣಿಕೆ ಹೌದು ಅವು ಅಪ್ಪ ಅಮ್ಮ ನಿಮ್ಮಲ್ಲಿ ಹಾಸುಹೊಕ್ಕಿದ್ದಾರೆ ಎಂಬ ಭಾವನೆ ನಮಗೆ ಮೂಡಿಸದೇ ಇರುವುದಿಲ್ಲ.
ಈ ಒಂದು ಸಂತೋಷದ ಗಳಿಗೆಯಲ್ಲಿ ನಿಮ್ಮ ಮನ ಧನ್ಯತೆಯಿಂದ ಭಗವಂತನ ಸ್ತುತಿಗೈಯುವಾಗ, ನಿಮ್ಮ ಪ್ರಮಾಣಿಕತೆಗೆ, ಉದಾರತೆಗೆ ಹಾಗೂ ನಿಮ್ಮ ಸೇವಾ ಕಾರ್ಯಗಳಿಗೆ ನಿಮ್ಮನ್ನು ವಂದಿಸುತ್ತೇನೆ. ನಿಮ್ಮ ಆಯಸ್ಸು ಹೆಚ್ಚಲಿ. ಬದುಕುಸಂತೋಷದಿಂದ ಕೂಡಿರಲಿ. ನಿಮ್ಮ ಕನಸ್ಸುಗಳಿಗೆ ಬಣ್ಣ ಬರಲಿ. ನಿಮ್ಮ ಸೇವಾ ಬದುಕು ನಮ್ಮ ಜನರ ಬದುಕಿಗೆ ಸಂತೋಷ ಮತ್ತು ಸಂತೃಪ್ತಿಗಳನ್ನು ಯಥೇಚ್ಛವಾಗಿ ತುಂಬಿ ತರಲಿ ಎಂದು ಹಾರೈಸುತ್ತೇನೆ. ಕೊನೆಗೆ, ನಿಮ್ಮ ಉದಾರತೆ ಮತ್ತು ಸೇವೆಯತೀವ್ರತೆಯ ಮನಸ್ಸಿನ ಶರವೇಗದ ಜತೆಗೆ ಹೆಜ್ಜೆ ಹಾಕಲು ನಿಮ್ಮ ಅಶಕ್ತ ಕಾಲುಗಳು ಸೋತಾಗ ನಿಮ್ಮ ಮುಖದಲ್ಲಿ ಹುಟ್ಟುವಭಾವನೆಗಳನ್ನು ಗಮನಿಸಿದಾಗೆಲ್ಲಾ ನನಗೆ ಜಾನ್ ಮಿಲ್ಟನ್ ಬರೆದ On His blindness ಎಂಬ ಕವಿತೆ ನೆನಪಿಗೆ ಬರುತ್ತದೆ. ತನ್ನೊಳಗಿನ ಸಾತ್ವಿಕ ಸಂಘರ್ಷಕ್ಕೆ ಮಾತಿನ ರೂಪಕೊಟ್ಟ ಕವಿತೆ ಅದು. ಕವಿ ತನ್ನ ಬದುಕಿನ ನಡು ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಳ್ಳುತ್ತಾನೆ. ತನಗೆ ಆಕಸ್ಮಿಕವಾಗಿ ಅಂಟಿಕೊಳ್ಳುವ ಕುರುಡುತನ ಬಗ್ಗೆ ಪರಿತಪಿಸುವ ಭಾವನಾತ್ಮಕ ಚಿತ್ರಣವೇ ಈ ಕವಿತೆ. ಆದರೆ ಕವಿತೆ ಪರಿತಾಪದಲ್ಲಿ ಕೊನೆಗೊಳ್ಳುವುದಿಲ್ಲ. ಅಷ್ಟಕ್ಕೆ ಮುಗಿದಿದ್ದರೆ ಕವಿತೆಯಲ್ಲಿ ಅಂತಹ ವಿಶೇಷತೆ ಇರುತ್ತಿರಲಿಲ್ಲ. ವಿಶೇಷತೆ ಇರುವುದೇ ಕವಿತೆಯ ಕೊನೆಯ ಸಾಲುಗಳಲ್ಲಿ. ಅವನ ಪರಿತಾಪದಲ್ಲಿ "ತಾಳ್ಮೆ" ಮಾತನಾಡಿ ಅವನ ಬಿರುಗಾಳಿಯ ಮನವನ್ನು ಶಾಂತಪಡಿಸುತ್ತದೆ. ತನ್ನ ಕುರುಡತನದಿಂದಾಗಿ ನಾನು ದೇವರಿಗೆ ಸೇವೆ ಮಾಡಲಾಗುತ್ತಿಲ್ಲ ಎಂಬ ವ್ಯಥೆಯಿಂದ ಕಂಗೆಟ್ಟ ಕವಿಗೆ, " ಮಾನವನಿಂದ ಸೇವೆ ಮಾಡಿಸಿಕೊಳ್ಳುವ ದಾರಿದ್ರ್ಯತೆ ಭಗವಂತನಿಗಿಲ್ಲ. ಅವನ ಸೇವೆಗಂತಲೇ ಅಗಣಿತ ದೇವದೂತರಿದ್ದಾರೆ. ನಿನಗೆ ಕೊಟ್ಟಿರುವ ಕಠಿಣವಲ್ಲದ ನೊಗವನ್ನು ಶಪಿಸದೆ, ಯಾರನ್ನು ದೂರದೆ ಸಮಚಿತ್ತದಿಂದ ನಿಷ್ಠೆಯಿಂದ ಹೊತ್ತು ನಡಿ ಅದೇ ನೀನು ದೇವರಿಗೆ ಮಾಡುವ ದೊಡ್ಡ ಸೇವೆ" ಎಂದು ಅವನ ತಾಳ್ಮೆ ಸ್ವಷ್ಟಪಡಿಸುತ್ತದೆ. (God doth not need
Either man’s work or his own gifts, who best
Bear his milde yoak, they serve him best ).
ಭಗವಂತನಿಗಾಗಿ ಕೇವಲ ನಿಂತು ಕಾಯುವವರು ಕೂಡ ಭಗವಂತನ ಸೇವೆಮಾಡುವವರೇ (They also serve who only stand and waite ) ಎಂಬ ಸಾಲಿನೊಂದಿಗೆ ಕವಿತೆ ಕೊನೆಗೊಳ್ಳುತ್ತದೆ.
ನಿಮ್ಮ ಅನಾರೋಗ್ಯದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ದೇವರು ಕೊಟ್ಟ ಈ ಅನಾರೋಗ್ಯದ ಶಿಲುಬೆಯನ್ನು ಸಮಚಿತ್ತದಿಂದ ಹೊತ್ತು ನಡೆಯುವುದೇ ದೇವರಿಗೆ ನೀವು ಮಾಡುವ ದೊಡ್ಡ ಸೇವೆ. ನಿಮಗೆ ಒಳ್ಳೆಯದಾಗಲಿ, ಧನ್ಯವಾದಗಳು.

ಇಂತಿ ನಿಮ್ಮ
ಆನಂದ್

ಕಥಾದನಿ


- ಇನ್ನಾ

ಟಿಕೇಟ್ ಕಳೆದುಕೊಂಡ ಮುಲ್ಲಾನಸ್ರುದ್ದೀನ್! ಒಮ್ಮೆ ಮುಲ್ಲಾನಸ್ರುದ್ದೀನ, ರೈಲುಪ್ರಯಾಣ ಮಾಡುತ್ತಿದ್ದ. ತನ್ನ ಕಂಪಾರ್ಟಮೆಂಟ್ ಟಿಕೇಟ್ ಕಲೆಕ್ಟರ್ ಬರುತ್ತಿರುವುದನ್ನ ದೂರದಿಂದ ಗಮನಿಸಿದ ಮುಲ್ಲಾ, ಸಹ ಪ್ರಯಾಣಿಕರ ಜೇಬುಗಳಲ್ಲಿ,ಚೀಲಗಳಲ್ಲಿ ತನ್ನ ಟಿಕೇಟ್‍ನ್ನು ಹುಡುಕತೊಡಗಿದ.
ಮುಲ್ಲಾನ ಈ ವರ್ತನೆಯನ್ನು ನೋಡಿ ಆಶ್ಚರ್ಯಚಕಿತನಾದ ಸಹ ಪ್ರಯಾಣಿಕನೊಬ್ಬ ಪ್ರಶ್ನೆಮಾಡಿದ.
“ಹಿರಿಯರೆ ನಿಮ್ಮ ಟಿಕೇಟು ನಿಮ್ಮ ಜೇಬು ಅಥವಾ ನಿಮ್ಮ ಚೀಲದಲ್ಲಿರಬೇಕಲ್ಲವೆ? ನೀವು ಅಲ್ಲಿ ಬಿಟ್ಟು ಬೇರೆಲ್ಲ ಕಡೆ ಹುಡುಕುತ್ತಿದ್ದೀರಲ್ಲ"
“ಹೌದು ನಾನು ಅಲ್ಲಿ ಹುಡುಕಬಹುದಿತ್ತು ಆದರೆ ಟಿಕೇಟು ಅಲ್ಲಿ ಸಿಗದಿದ್ದರೆ ನನ್ನ ಎಲ್ಲ ಭರವಸೆಯೂ ನಾಶವಾಗಿಬಿಡುತ್ತದಲ್ಲ"ಮುಲ್ಲಾ ಉತ್ತರಿಸಿದ.
———————

"That’s fine, but while you’re making a contribution I’m making a real commitment!”

ಕೋಳಿ ಮತ್ತು ಹಂದಿ ರೈತನೊಂದಿಗೆ ಜೀವಿಸುತ್ತಿದ್ದವು. ಅವರೆಡಕ್ಕೂ ರೈತನೆಂದರೆ ಪಂಚಪ್ರಾಣ. ಏಕೆಂದರೆ ರೈತನು ಅವುಗಳನ್ನು ತುಂಬ ಪ್ರೀತಿಸುತ್ತಿದ್ದ ಮತ್ತು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಒಂದು ದಿನ ಕೋಳಿಯು ಹಂದಿಯ ಬಳಿಗೆ ಬಂದು "ರೈತನು ನಮ್ಮನ್ನು ಎಷ್ಟೂ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ ಅಲ್ವಾ; ಅವನಿಗೆ ನಾವೆಂದ್ರೆ ಪಂಚಪ್ರಾಣ, ಅವನಿಗೆ ನಾವೇನಾದರೂ ಕೊಡಬೇಕು" ಎಂದು ಹೇಳಿತ್ತು. ಹಂದಿ ಪ್ರತ್ಯತ್ತರವಾಗಿ "ಹೌದೌದು, ರೈತ ನಮ್ಮನ್ನು ಪ್ರೀತಿಯಿಂದ ಆರೈಕೆ ಮಾಡುತ್ತಾನೆ, ನೀನು ಹೇಳಿದ ಹಾಗೆ, ಅವನ ಪ್ರೀತಿಗೆ ಪ್ರತಿಯಾಗಿ ನಾವು ಎನಾದರೂ ಕೊಡಲೇಬೇಕು ,, ಆದರೆ ಏನು ಕೊಡುವುದು?" ಎಂದು ಹಂದಿಯು ಕೋಳಿಯನ್ನು ಕೇಳಿತ್ತು.
ಕೋಳಿಯು ಸ್ವಲ್ಪ ಹೊತ್ತು ಯೋಚಿಸಿ. ನಮ್ಮ ಯಜಮಾನಿಗೆ ಬೆಳಗಿನ ಉಪಹಾರವೆಂದರೆ ತುಂಬಾ ಇಷ್ಟ. ಅದನ್ನು ತುಂಬಾ ಆನಂದಿಸುತ್ತಾನೆ. ಅದಕ್ಕಾಗಿ ನಾನು ನನ್ನ ಕೆಲವು ಮೊಟ್ಟೆಗಳನ್ನು ಕೊಡುತ್ತೇನೆ. ಆದರೆ ಮೊಟ್ಟೆಗಳಿಂತ ಹ್ಯಾಮ್ (ಹಂದಿ ಮಾಂಸದಿಂದ ತಯಾರಿಸಿದ ಪದಾರ್ಥ) ಅಂದ್ರೆ ರೈತನಿಂದ ತುಂಬಾ ಇಷ್ಟ.ಅದಕ್ಕಾಗಿ ನೀನು ರೈತನಿಗೆ ಹ್ಯಾಮ್ ಕೊಡು ಎಂದು ಹೇಳುತ್ತಿದಂತೆ, ಹಂದಿ ಯೋಚಿಸಿ ಹೇಳಿತಂತೆ ""that’s fine, but while you’re making a contribution I’m making a real commitment!”
———————————-

ಅವಳು ನನ್ನನ್ನು ಗುರುತಿಸದೆ ಇರಬಹುದು. ಆದರೆ ನಾನು ಅವಳನ್ನು ಗುರುತಿಸುತ್ತೀನಲ್ಲ
ಅರುಳುಮರಳು ಕಾಯಿಲೆ ಅಂತಿಮ ಹಂತದಲ್ಲಿರುವ ತನ್ನ ಹೆಂಡತಿಯನ್ನು ಸಮರ್ಪಕವಾಗಿ ನೋಡಿಕೊಳ್ಳಲು ಸಾಧ್ಯವಿಲ್ಲ ಎಂದು ಗಂಡನಿಗೆ ತಿಳಿದಿತ್ತು. ಆದರೂ ಅವನು ಅವಳಿಗೆ ಬೇಕಾದಂತಹ ಎಲ್ಲಾ ರೀತಿಯ ಸೌಲಭ್ಯಗಳ ಏರ್ಪಾಡು ಮಾಡಿದ್ದ ಮತ್ತು ಪ್ರತಿದಿನ ಅವಳನ್ನು ಸರಿಯಾಗಿ ಮಧ್ಯಾಹ್ನ ಊಟದ ಸಮಯದಲ್ಲಿ ಭೇಟಿ ಮಾಡುತ್ತಿದ್ದ.
ಒಂದು ದಿನ ಅವನಿಗೆ ರಸ್ತೆಯಲ್ಲಿ ಸಣ್ಣ ಅಪಘಾತವಾಗಿ ಆಸ್ಪತ್ರೆಗೆ ಸೇರಿಸಲಾಯಿತ್ತು. ಪ್ರಜ್ಞೆ ಬಂದು ತುರ್ತುಕೋಣೆಯಲ್ಲಿರುವ ವಾಸ್ತವ ಅವನಿಗೆ ತಿಳಿಯಿತ್ತು. ಮಧ್ಯಾಹ್ನ ಊಟದ ಸಮಯ ಸಮೀಪಿಸುತ್ತಿದ್ದಂತೆ ಅವನಲ್ಲಿ ಚಡಪಡಿಕೆ ಪ್ರಾರಂಭವಾಯಿತ್ತು, ಅವನ ತೋಳ ಗಾಯಕ್ಕೆ ಹೊಲಿಗೆ ಹಾಕಲು ದಾದಿಯೊಬ್ಬರು ಬಂದಾಗ, "ನಾನು ಹೊರಡಬೇಕು," ಅವನು ಜೋರಾಗಿ ಹೇಳಿದ. "ನಿಮ್ಮ ಗಾಯಗಳಿಗೆ ಇನ್ನೂ ಜೌಷದಿ ಹಾಕಬೇಕು.treatment ಇನ್ನೂ ಮುಗಿದಿಲ್ಲ" ಎಂದು ಅವಳು ಅವನಿಗೆ ಹೇಳಿದಳು. "ಆದರೆ ನಾನು ಮಧ್ಯಾಹ್ನ ನನ್ನ ಹೆಂಡತಿಯನ್ನು ಭೇಟಿ ಮಾಡಬೇಕು" ಎಂದು ಅವನು ಹೇಳಿದ. "ಸರಿ" ಎಂದ ಅವಳು ನಿಧಾನವಾಗಿ ಅವನಿಗೆ, "ಕ್ಷಮಿಸಿ, ಇಂದು ಸ್ವಲ್ಪ ತಡವಾಗಬಹುದು."ಎಂದು ಹೇಳಿದಳು.
ಆ ವ್ಯಕ್ತಿ ತನ್ನ ಹೆಂಡತಿಗಿರುವ ಕಾಯಿಲೆ ಕಥೆಯನ್ನು ದಾದಿಗೆ ಸವಿಸ್ತಾರವಾಗಿ ಹೇಳಿದ. ಜತೆಗೆ ಅವನು ಪ್ರತಿ ಮಧ್ಯಾಹ್ನ ಹೆಂಡತಿಯನ್ನು ಕಾಣಲು ಹೋದಾಗ, "ಅವಳು ನನ್ನನ್ನು ಗುರುತೇ ಹಚ್ಚುವುದಿಲ್ಲ, ನಾನು ಯಾರೆಂದು ಸಹ ಅವಳಿಗೆ ತಿಳಿಯುವುದಿಲ್ಲ" ಎಂದು ಹೇಳುತ್ತಾನೆ. ಅದಕ್ಕೆ ಪ್ರತ್ಯುತ್ತರವಾಗಿ, "ನೀವು ಯಾರೆಂದು ಗುರುತಿಸಲಾಗದ ಹೆಂಡತಿಯ ಬಗ್ಗೆ ಏಕೆ ಅಷ್ಟೂ ತಲೆ ಕೆಡಿಸಿಕೊಳ್ಳುತ್ತೀರಾ. ಇವತ್ತು ಅವಳನ್ನು ನೋಡಲು ಸ್ವಲ್ಪ ತಡ ಮಾಡಿ ಹೋದ್ರು, ಏನು ಆಗಲ್ಲ..ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ" ಎಂದು ಹೇಳುತ್ತಿದಂತೆ, "ಇಲ್ಲ ನಾನು ಹೋಗಲೇ ಬೇಕು. ಅವಳು ನನ್ನನ್ನು ಗುರಿತಿಸದೆ ಇರಬಹುದು. ಆದರೆ ನಾನು ಅವಳನ್ನು ಗುರುತ್ತಿಸುತ್ತೀನಲ್ಲ" ಎಂದು ಹಾಸಿಗೆ ಬಿಟ್ಟು ಹೊರನಡೆದನಂತೆ.



ಸಂತ ಯೊವಾನ್ನರ ಶುಭಸಂದೇಶ – 12 - -ಸಹೋ. ವಿನಯ್ ಕುಮಾರ್ , ಚಿಕ್ಕಮಗಳೂರು


------------------------------------------------------------------------------------------
ಕಳೆದ ಬಾರಿ ಎರಡು ಐತಿಹಾಸಿಕ ಸನ್ನಿವೇಶ ಸಮುದಾಯದ ಒಳ ಅಂಶಗಳು ಹೇಗೆ ಶುಭಸಂದೇಶವನ್ನು ಪ್ರೇರೇಪಿಸಿದೆ ಎಂದು ಕಂಡೆವು. ಅದರಲ್ಲಿ ಉಳಿದ ತತ್ವಗಳನ್ನು ನಾನು ಈ ಸಂಚಿಕೆಯಲ್ಲಿ ಬರೆಯುತ್ತಿದ್ದೇನೆ.
---------------------------------------------------------------------------------------------------

3. ನೊಸ್ಟಿಸಿಸಂ - ( Gnosticism)
ಜ್ಞಾನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದರು. ಕೆಟ್ಟದ್ದು ಅಥವಾ ದುಷ್ಟತೆ ಬರುವುದು ಅಜ್ಞಾನದಿಂದ ಎನ್ನುವುದು ಅವರ ಸಿದ್ಧಾಂತ.           
1) ಮುಕ್ತಿ ಅಥವಾ ರಕ್ಷಣೆ ಪ್ರಾಪ್ತಿಯಾಗುವುದು ಅಜ್ಞಾನ ತೊಲಗಿದ ನಂತರ. ಮುಕ್ತಿಯನ್ನು ನಾವು ಜ್ಞಾನದ ಮೂಲಕ ಪಡೆಯಬಹುದಾಗಿದೆ. ಅದು ಯೇಸುಕ್ರಿಸ್ತರು ತಂದ ಜ್ಞಾನದಿಂದ ಎನ್ನುವುದೇ ಇವರ ವಾದ. ಈ ವಾದದ ಪ್ರಕಾರ ಈ ಗುಟ್ಟಿನ ಅರಿವು ಇರುವುದು ಕೆಲವರಿಗೆ ಮಾತ್ರ ಮತ್ತು ಅವರು ಮಾತ್ರ ರಕ್ಷಣೆಯನ್ನು ಹೊಂದುತ್ತಾರೆ, ಅಂದರೆ ರಕ್ಷಣೆ ಆಯ್ದ ಕೆಲವರಿಗೆ ಮಾತ್ರ. ಈ ವಾದಕ್ಕೆ ಶುಭಸಂದೇಶದ ಈ ವಾಕ್ಯವನ್ನು ತಾಳೆ ಹಾಕುತ್ತಾರೆ ಯೊವಾನ್ನ 17:3 "ಏಕೈಕ ನಿಜ ದೇವರಾದ ನಿಮ್ಮನ್ನು ನೀವು ಕಳುಹಿಸಿಕೊಟ್ಟ ಯೇಸುಕ್ರಿಸ್ತನನ್ನು ಅರಿತುಕೊಳ್ಳುವುದೇ ನಿತ್ಯಜೀವ" ( ಇಲ್ಲಿ ಯೇಸುಕ್ರಿಸ್ತರನ್ನು ನಿಜ ದೇವರು ಎನ್ನುವುದು ಗುಟ್ಟಾಗಿ ಕೆಲವರಿಗೆ ಮಾತ್ರ ಜ್ಞಾನ ನೀಡಲು ಕಳುಹಿಸಿಕೊಟ್ಟಿದ್ದಾರೆ ಎಂದು ಬಿಂಬಿಸಲಾಗುತ್ತದೆ)
2) ಇವರ ಎರಡನೆಯ ತತ್ವ - ಪ್ರಪಂಚದ ಬಗ್ಗೆ ದ್ವಂದ್ವ ಅಭಿಪ್ರಾಯವನ್ನು ಹೊಂದಿರುವುದಾಗಿದೆ. ಈ ಪ್ರಪಂಚ ಒಳಿತು ಕೆಡುಕು ಎಂಬ ಎರಡು ತತ್ವದ ಮೇಲೆ ನಿರ್ಮಿತವಾಗಿದೆ. ಪ್ರಪಂಚದಲ್ಲಿ ಎಲ್ಲವೂ ಕೆಟ್ಟದ್ದು. ತನ್ನನ್ನು ತಾನು ಪ್ರಪಂಚದಿಂದ ಹೊರತಂದರೆ ಮಾತ್ರ ರಕ್ಷಣೆ ಸಾಧ್ಯ ಮತ್ತು ಅಧ್ಯಾತ್ಮದ ಮೊರೆ ಹೊಗುವುದರಿಂದ ರಕ್ಷಣೆಯನ್ನು ಪಡೆಯಬಹುದು ಎನ್ನುತ್ತದೆ ಈ ತತ್ವ.
ಈ ತತ್ವ ಅಥವಾ ವಾದವನ್ನು ಶುಭಸಂದೇಶ ಭೇದಿಸುತ್ತದೆ. ಯೊವಾನ್ನ 20:31 "ಇಲ್ಲಿ ಬರೆದಿರುವ ಉದ್ದೇಶ ಇಷ್ಟೇ. ಯೇಸು ದೇವರ ಪುತ್ರ ಹಾಗೂ ಲೋಕೋದ್ಧಾರಕ ಎಂದು ನೀವು ವಿಶ್ವಾಸಿಸಬೇಕು. ವಿಶ್ವಾಸಿಸಿ ಅವರ ಹೆಸರಿನಲ್ಲಿ ಸಜೀವವನ್ನು ಪಡೆಯಬೇಕು" ಇಲ್ಲಿ ವಿಶ್ವಾಸ ಮುಖ್ಯ, ಜ್ಞಾನವಲ್ಲ ಎಂದು ಈ ಪಾಷಂಡವಾದವನ್ನು ಯೊವಾನ್ನರ ಶುಭಸಂದೇಶ ತಳ್ಳಿಹಾಕುತ್ತದೆ.
ಯೊವಾನ್ನರ ಶುಭಸಂದೇಶದಲ್ಲಿ ಇರುವ ಕೆಲವು ಉಲ್ಲೇಖಗಳನ್ನು ಈ ಪಂಥದವರು ತಪ್ಪಾಗಿ ಗ್ರಹಿಸಿ ಅದನ್ನು ತಮ್ಮ ವಾದಕ್ಕೆ ಬಳಸಿಕೊಳ್ಳುತ್ತಿದ್ದರು. ಯೊವಾನ್ನರ ಶುಭಸಂದೇಶವು ಲೋಕವನ್ನು ಒಳ್ಳೆಯ ದೃಷ್ಟಿಯಿಂದ ಬಿಂಬಿಸಿ ಅವರಲ್ಲಿದ್ದ ಅಜ್ಞಾನವನ್ನು ಹೋಗಲಾಡಿಸಿತು. ಯೊವಾನ್ನ 3:16 "ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು". ಲೋಕದ ಸಕರಾತ್ಮಕ ವಿಷಯವನ್ನು ಇಲ್ಲಿ ತಿಳಿಸಲಾಗಿದೆ, ದೇವರು ಈ ಲೋಕವನ್ನು ಪ್ರೀತಿಸಿದರು, ಈ ಲೋಕ ಕೆಟ್ಟದ್ದಲ್ಲ ಎಂದು ಶುಭಸಂದೇಶ ಬೋಧಿಸುತ್ತದೆ.

ಪ್ರೇ. ಕಾ. 19:17ರಲ್ಲಿ ನಾವು ನೋಡುತ್ತೇವೆ, ಎಫೇಸದಲ್ಲಿ ವಾಸಿಸುತ್ತಿದ್ದ ವಿಶ್ವಾಸಿಗಳ ಬಗ್ಗೆ ಉಲ್ಲೇಖವಿದೆ. ಇವರು ಆತ್ಮರ ದೀಕ್ಷಾಸ್ನಾನದ ಬಗ್ಗೆ ತಿಳಿದಿರಲಿಲ್ಲ, ಅವರು ಬರೀ ಸ್ನಾನಿಕ ಯೊವಾನ್ನರ ದೀಕ್ಷಾಸ್ನಾನದ ಬಗ್ಗೆ ತಿಳಿದಿದ್ದರು. ಇದರಿಂದ ನಮಗೆ ತಿಳಿಯುತ್ತದೆ, ಕೆಲವರು ಸ್ನಾನಿಕ ಯೊವಾನ್ನನನ್ನು ಮೆಸ್ಸಾಯ (ಲೋಕೋದ್ಧಾರಕ) ಎಂದು ನಂಬಿದ್ದರು. ಈ ಯೊವಾನ್ನರ ಸಮುದಾಯವು ಎಫೇಸದಲ್ಲಿ ವಾಸಿಸುತ್ತಿದ್ದುದರಿಂದ ಈ ಬೋಧನೆಯನ್ನು ಅನುಸರಿಸುತ್ತಿದ್ದರು ಎನ್ನಿಸುತ್ತದೆ. ಅದಕ್ಕೆ ಶುಭಸಂದೇಶವು ಸ್ನಾನಿಕ ಯೊವಾನ್ನ ಮೆಸ್ಸಾಯ ಅಲ್ಲ ಎನ್ನುವುದರ ಬಗ್ಗೆ ತಿಳಿಸುತ್ತದೆ. ಆತನ ಸ್ಥಾನಮಾನವನ್ನು ನಿರ್ದೇಶಿಸುತ್ತದೆ. ಆತ ಮೆಸ್ಸಾಯನಲ್ಲ ಬದಲಾಗಿ ಬರೀ ಸಾಕ್ಷಿ ನೀಡುವವ ಎಂದು. ಯೊವಾನ್ನ 1:15, 20, 23, 5: 35-36 ಈ ಎಲ್ಲಾ ವಾಕ್ಯಗಳಲ್ಲಿ ಆತನು ಸಾಕ್ಷಿ ನೀಡುವುದರ ಬಗ್ಗೆ ತಿಳಿಸುತ್ತದೆ. ಬರೀ ಯೇಸುಸ್ವಾಮಿಗಾಗಿ ಹಾದಿ ಸಿದ್ಧ ಮಾಡಿದಂತಹ ವ್ಯಕ್ತಿ ಎಂದು ತೋರಿಸುತ್ತದೆ.

ಇನ್ನೊಂದು ಮುಖ್ಯ ಐತಿಹಾಸಿಕ ಸನ್ನಿವೇಶವೆಂದರೆ ಅದು ಸಮುದಾಯದ ವಿಭಜನೆ. ವಿಭಜಿಸುವ ಪ್ರವೃತ್ತಿ ಈ ಸಮುದಾಯದಲ್ಲಿ ಆಗಲೇ ಇದ್ದಿರಬೇಕು. ಅದನ್ನು ನಾವು ಯಾಜಕೀಯ ಪ್ರಾರ್ಥನೆ ಎಂದು ಕರೆಸಿಕೊಳ್ಳುವ 17ನೇ ಅಧ್ಯಾಯದಲ್ಲಿ ಕಾಣುತ್ತೇವೆ 17: 21 "ಪಿತನೆ ಇವರೆಲ್ಲ ಒಂದಾಗಿರಲಿ" ಎಂದು. ಈ ವಾಕ್ಯದಲ್ಲಿ ನಮಗೆ ತಿಳಿಯುತ್ತದೆ ಈಗಾಗಲೇ ಸಮುದಾಯದಲ್ಲಿ ವಿಭಜನೆಯಾಗಿತ್ತು ಎಂದು. ಈ ಎಲ್ಲಾ ಸನ್ನಿವೇಶಗಳು ಶುಭಸಂದೇಶವನ್ನು ಅವುಗಳದ್ದೇ ಆದ ರೀತಿಯಲ್ಲಿ ಪ್ರೇರೇಪಿಸಿವೆ.

**************

ದನಿ ರೂಪಕ - ಅನು

ನನ್ನ ಸೋಲುಗಳನ್ನು ಬರೆದಿಡು...
ಸಂತ ಪೇತ್ರನ ಬಗ್ಗೆ ಒಂದು ಕೂತುಹಲಕಾರಿ ಕಥೆಯಿದೆ.ಈ ಕಥೆಯ ಮೂಲ ಜನಪದ. ಆಗ ಪೇತ್ರನು ಧರ್ಮಸಭೆಯ ಮುಂದಾಳತ್ವವನ್ನು ವಹಿಸಿಕೊಂಡಿದ್ದ. 64AD ನಂತರ ಕ್ರೈಸ್ತರ ಮೇಲಿನ ದೌರ್ಜನ್ಯದ ಪ್ರಮಾಣದಲ್ಲಿ ಏರಿಕೆ ಕಂಡುಬಂತು. ಪ್ರತಿದಿನ ಸಾವಿರಾರು ಕ್ರೈಸ್ತರ ಸತ್ತ ದೇಹಗಳನ್ನು ಕಾಣುವುದು ಪೇತ್ರನಿಗೆ ಸರ್ವೇಸಾಮಾನ್ಯವಾಗಿಬಿಟ್ಟಿತ್ತು. ಇದನ್ನು ಪೇತ್ರನಿಂದ ಸಹಿಸಲಾಗಲಿಲ್ಲ. ಆವೇಗಯುಕ್ತ, ಹಿಂದು ಮುಂದು ನೋಡದೆ ನುಗ್ಗುವಮನುಷ್ಯ, ಹಿಂಸೆಗೆ ಹೆದರಿ ರೋಮ್‍ನಿಂದ ಪಲಾಯನ ಮಾಡಲು ನಿರ್ಧರಿಸಿ, ಕತ್ತಲಾದ ನಂತರ, ಓಡಲಾರಂಭಿಸಿ ಬೆಳಗಿನ ಜಾವದಲ್ಲಿ ರೋಮ್ ನಗರದ ಮುಖ್ಯದ್ವಾರವನ್ನು ತಲಪಿದ.
ಅವನ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿದ್ದ ಒಬ್ಬ ವ್ಯಕ್ತಿಯನ್ನು ಕಂಡ ಪೇತ್ರ ಕಳವಳಗೊಂಡ. ಆ ವ್ಯಕ್ತಿ ನಡೆಯುತ್ತಿದ್ದ ನಡೆ ಪೇತ್ರನಿಗೆ ತುಂಬ ಪರಿಚತವಾದ ನಡಿಗೆಯಂತೆ ಕಂಡುಬಂತು. ಹೌದು, ಪ್ರೇತ್ರನಿಗೆ ತಿಳಿಯಿತ್ತು ಆ ಮನುಷ್ಯ ಬೇರೆ ಯಾರು ಅಲ್ಲ, ಕ್ರಿಸ್ತನೆಂದು. ಕ್ರಿಸ್ತ ಒಂದು ದೊಡ್ಡ ಗಾತ್ರದ ಶಿಲುಬೆಯನ್ನು ಹೆಗಲೇರಿಸಿಕೊಂಡು ನಡೆಯುತ್ತಿದ್ದಾನೆ. ಆಶ್ಚರ್ಯಗೊಂಡ ಪ್ರೇತ್ರ.. ಆ ವ್ಯಕ್ತಿಯ ಬಳಿಗೆ ಹೋಗಿ "Quo vadis ಎಲ್ಲಿಗೆ ಹೋಗುತ್ತಿದ್ಯಾ?" ಎಂದು ಕೇಳಿದ. ಅದಕ್ಕೆ ಕ್ರಿಸ್ತ ನಿರ್ಭಾವಕನಾಗಿ ಉತ್ತರಿಸಿದ; "ನಾನು ರೋಮ್ ನಗರಕ್ಕೆ ಹೋಗುತ್ತಿದ್ದೇನೆ. ಅದಕ್ಕೆ ಪೇತ್ರ "ಸಾಯುವುದಕ್ಕೆ?".. "ಕೆಲವು ವರ್ಷಗಳ ಹಿಂದೆ ಅವರು ನಿನ್ನ ಕೊಲೆ ಮಾಡಲಿಲ್ಲವೇ ಪುನಃ ಶಿಲುಬೆ ಮೇಲೆ ಸಾಯಬೇಕೇ?" ಎಂದು ಕ್ರಿಸ್ತನಿಗೆ ಕೇಳಿದ ..."ನಾನು ನಿನ್ನನ್ನು ಧರ್ಮಸಭೆಯನ್ನು ನೋಡಿಕೊಳ್ಳಲು ಆರಿಸಿಕೊಂಡೆ, ಆದರೆ ನೀನು ಸಾವಿಗೆ ಹೆದರಿ ಪಲಾಯನ ಮಾಡುತ್ತಿದ್ಯಲ್ಲಾ???"
"ನನ್ನ ಪ್ರಭುವೇ ನನಗೆ ಈ ಬಗ್ಗೆ ಅರಿವಿರಲಿಲ್ಲ. ಈಗ ನಿಮ್ಮ ಶಿಲುಬೆಯನ್ನು ನನಗೆ ಕೊಡಿ. ನಿಮಗಾಗಿ ನಾನು ಸಾಯಲು ಸಿದ್ಧ" ಎಂದು ಹೇಳಿ; ಕ್ರಿಸ್ತನಿಂದ ಶಿಲುಬೆಯನ್ನು ಪಡೆದುರೋಮ್‍ನಗರಕ್ಕೆ ವಾಪಸಾದ. ಕೊನೆಗೆ ತಲೆಕೆಳಗಾಗಿ ಇರಿಸಿದ ಶಿಲುಬೆಯ ಮೇಲೆ ಪ್ರಾಣತ್ಯಾಗ ಮಾಡಿದ.
ಜನಪದರು ಏನು ಹೇಳುತ್ತಾರೆಂದು ಗೊತ್ತಾ?
ಪೇತ್ರನ ಕಣ್ಣುಗಳಿಂದ ಸುಮಾರು 30 ರಿಂದ 40 ವರ್ಷಗಳು ಕಣ್ಣೀರು ಹರಿಯುತ್ತಿತಂತೆ. ಅವನು ಬದುಕಿನ ಪೂರ್ತಿಅತ್ತು ಅತ್ತು ಕಣ್ಣುಗಳು ಸೊರಗಿ ಹೋದ್ವಂತೆ..ಈ ಕಾರಣದಿಂದಲೇ ಅವನ ಕೆನ್ನೆಯ ಮೇಲೆ ಕಣ್ಣೀರಿನ ಕಲೆ ಇರುವುದೆಂದು ಸಂಪ್ರದಾಯ ಹೇಳುತ್ತದೆ.
-----
"ಇನ್ನೊಬ್ಬರು ಇಟ್ಟಿಗೆಯನ್ನು ಎಸೆದು ನನ್ನ ಲಕ್ಷ್ಯವನ್ನು ಪಡೆದುಕೊಳ್ಳುವಷ್ಟು ವೇಗವಾಗಿರಬಾರದು ನನ್ನ ಜೀವನ"
ಯುವ ಉದ್ಯಮಿಯೊಬ್ಬ ತನ್ನ ಶ್ರಿಮಂತ ಕಾರಿನಲ್ಲಿ ವೇಗವಾಗಿ ಚಲಿಸುತ್ತಿದ್ದಂತೆ... ರಸ್ತೆಯ ಎಡಬದಿಯಿಂದ ಒಂದು ಇಟ್ಟಿಗೆ ರಭಸವಾಗಿ ಅವನ ದುಬಾರಿ ಕಾರಿಗೆ ಅಪ್ಪಳಿಸಿ ಹಾನಿಮಾಡಿತ್ತು. ಕುಪಿತನಾದ ಉದ್ಯಮಿಮ್ ಕಾರಿನಿಂದ ರಭಸವಾಗಿ ಹೊರಬಂದು.. ಇಟ್ಟಿಗೆ ಎಸೆದವನನ್ನು ಹುಡುಕಲು ಪ್ರಾರಂಭಿಸಿದ. ಅಲ್ಲೇ ಇದ್ದ ಒಬ್ಬ ಚಿಕ್ಕ ಹುಡುಗ ಇವನ ಕೈಗೆ ಸಿಕ್ಕಿಕೊಂಡನು. "ನೀನು ಯಾರು? ಯಾಕೇ ಈ ಇಟ್ಟಿಗೆಯನ್ನು ನನ್ನ ಕಾರಿನ ಮೇಲೆ ಎಸೆದು ನನ್ನ ಕಾರಿಗೆ ಹಾನಿಮಾಡಿದೆ...?" ಎಂದು ಕೋಪದಿಂದ ಆ ಚಿಕ್ಕ ಹುಡುಗನನ್ನು ಗದರಿಸುತ್ತಿದ್ದಂತೆ... ಆ ಹುಡುಗ ಭಯ ತುಂಬಿದ ದನಿಯಲ್ಲಿ "ನನ್ನನ್ನು ಕ್ಷಮಿಸಿ.. ನನಗೆ ಏನು ಮಾಡಬೇಕೆ0ದು ತೋಚಲಿಲ್ಲ.. ಅದಕ್ಕೆ ಕಾರಿಗೆ ಇಟ್ಟಿಗೆ ಎಸೆದೆ" ಮುಂದುವರಿಸಿದ.. "ನನ್ನ ಅಂಗವಿಕಲ ತಮ್ಮ ಗಾಲಿಕುರ್ಚಿ(wheel chair) ನಿಂದ ಬಿದ್ದು ಗಾಯಗೊಂಡಿದ್ದಾನೆ.. ಅವನನ್ನು ಮೇಲೆತ್ತಲು ನನಗೆ ಸಾಧ್ಯವಾಗುತ್ತಿಲ್ಲ.. ರಸ್ತೆಯಲ್ಲಿ ಹೋಗುವ ಎಲ್ಲಾ ವಾಹನಗಳಿಗೆ ಕೈ ತೋರಿಸಿ ನಿಲ್ಲಿಸಲು ಹೇಳಿದೆ... ಯಾರು ನಿಲ್ಲಿಸದ ಕಾರಣ ನಾನು ಇಟ್ಟಿಗೆ ಎಸೆಯಲು ಪ್ರಾರಂಭಿಸಿದೆ.... ದಯವಿಟ್ಟು ನನ್ನ ತಮ್ಮನನ್ನು ಮೇಲೆತ್ತಲು ನನಗೆ ಸಹಾಯ ಮಾಡಿ" ಎಂದು ಬೇಡಿಕೊಳ್ಳುತ್ತಿದ್ದಂತೆ..ಯುವ ಉದ್ಯಮಿ... ಬಿದ್ದು ಗಾಲಿಕುರ್ಚಿ (wheel chair)ಗೆ ಸಿಕ್ಕಿಕೊಂಡಿದ್ದ... ಮಗುವನ್ನು ಮೇಲೆತ್ತಿ... ತನ್ನ ಕರವಸ್ತ್ರದಿಂದ ಹುಡುಗ ಹಾಗೂ ಮಗುವಿನ ಮುಖಗಳನ್ನು ಒರೆಸಿ... ಮನೆಗೆ ಕಳುಹಿಸುತ್ತಿದ್ದಂತೆ.. ಆ ಮಕ್ಕಳು ಧನ್ಯತೆಯಿಂದ ಥ್ಯಾಂಕ್ಸ್ ಎಂದು ಹೇಳಿ ತಮ್ಮ ಮನೆಯ ಕಡೆ ಹೆಜ್ಜೆ ಹಾಕಿದರು... ಉದ್ಯಮಿ ಈ ಘಟನೆಯಿಂದ ಮೂಕವಿಸ್ಮಯನಾಗಿ... ತನ್ನ ಶ್ರಿಮಂತ ಕಾರಿನಡೆಗೆ ಹೆಜ್ಜೆ ಹಾಕಿದ. ಇಟ್ಟಿಗೆ ಬಿದ್ದು ಜಖಂ (damage) ಆಗಿದ್ದ ಕಾರಿನ ಸ್ಥಳವನ್ನು ಗಮನಿಸುತ್ತಾ ...ಇದು ಈ ಘಟನೆಯ ಸ್ಮಾರಕವಾಗಿರಲಿ...."ಇನ್ನೊಬ್ಬರು ಇಟ್ಟಿಗೆಯನ್ನು ಎಸೆದು ನನ್ನ ಲಕ್ಷ್ಯವನ್ನು ಪಡೆದುಕೊಳ್ಳುವಷ್ಟು ವೇಗವಾಗಿರಬಾರದು ನನ್ನ ಜೀವನ" ಎಂದು ನೆನಪಿಸುವ ಕುರುಹು ಇದಾಗಿರಲಿ ಎಂದು ಹಾನಿಯಾದ ಕಾರಿನ ಆ ಜಾಗವನ್ನು ರಿಪೇರಿ ಮಾಡಿಸದಿರಲು ನಿಶ್ಚಿಯಿಸಿದ.


ಈ ಉದಾತ್ತ ಕಾರ್ಯದಿಂದ ನಾವು ಭಾಗ್ಯವಂತರಾಗಿ ದೇವರ ಮಕ್ಕಳೆನಿಸಿಕೊಳ್ಳುವೆವು...

ಘಟನೆ 1
ಜನಾಂಗೀಯ ದ್ವೇಷ, ಹಗೆತನಗಳಿಂದಾಗಿ ತತ್ತರಿಸಿದ ದೇಶದಲ್ಲಿ ನಡೆದ ಘಟನೆ ಇದು. ವರ್ಣಬೇಧನೀತಿ ವಿರುದ್ಧ ಸಿಡಿದೆದ್ದು ಹೋರಾಡಿದ ಕಪ್ಪು ಜನರು ತಮ್ಮದೇ ಸರ್ಕಾರವನ್ನು ಸ್ಥಾಪಿಸಿಕೊಳ್ಳುವುದರಲ್ಲಿ ಸಫಲರಾಗುತ್ತಾರೆ. ಶತಮಾನಗಳಿಂದ ಹಗೆತನ,ಅನಾದಿಕಾಲದಿಂದ ದ್ವೇಷವನ್ನು ಸಾಧಿಸಿಕೊಂಡು ಬಂದ ಕಪ್ಪು ಮತ್ತು ಬಿಳಿ ಜನಾಂಗಳ ನಡುವೆ ಸಾಮರಸ್ಯವನ್ನು ಸಾಧಿಸಲುಶಾಂತಿಸಂಧಾನಎಂಬ ಪ್ರಕ್ರಿಯೆಯನ್ನು ಆರಂಭಿಸುತ್ತಾರೆ. ಸರ್ಕಾರ ಪ್ರಾಯೋಜಿತ ಈPeace talkನಲ್ಲಿ ಒಂದು ಘಟನೆ ನಡೆಯುತ್ತದೆ.ಅವಳು ಕಪ್ಪು ಜನಾಂಗದ ಮಹಿಳೆ. ತನ್ನ ಮಗನನ್ನು ಕೊಂದು ಸುಟ್ಟು ಭಸ್ಮಮಾಡಿದ ಬಿಳಿ ಜನಾಂಗಕ್ಕೆ ಸೇರಿದ ವ್ಯಕ್ತಿಯ ಮುಂದೆ ಮುಖಾಮುಖಿಯಾಗಿ ಕುಳಿತ್ತಿದ್ದಾಳೆ. ಮಗನನ್ನು ಜನಾಂಗೀಯ ಗಲಭೆಯಲ್ಲಿ ಕಳೆದುಕೊಂಡ ದುಃಖ ಮುಖದಲ್ಲಿ ಮಡುಗಟ್ಟಿದೆ. ಸಂಧಾನ ಸಭೆಯನ್ನು ಆಯೋಜಿಸಿದವರು ಮಹಿಳೆಯನ್ನು ಅವಳ ದೂರನ್ನು ಪ್ರಸ್ತಾಪಿಸಲು ಕೇಳಿಕೊಳ್ಳುತ್ತಾರೆ. ಆಗ ಆ ತಾಯಿ ಕಣ್ಣೀರಿಡುತ್ತಾ ತನ್ನ ಮಗನನ್ನು ದ್ವೇಷದಿಂದ ಕೊಂದವನಿಗೆ ಒಂದು ಮಾತನ್ನು ಹೇಳುತ್ತಾಳೆ"ನಾನು ನಿನ್ನನ್ನು ಎರಡು ಶರತ್ತುಗಳ ಮೇಲೆ ಕ್ಷಮಿಸುತ್ತೇನೆ;ಒಂದು ನೀನು ನನ್ನ ಮಗನನ್ನು ಸುಟ್ಟು ಹಾಕಿದ ಸ್ಥಳವನ್ನು ತೋರಿಸಬೇಕು,ಎರಡನೇಯದು ಇನ್ನು ಮುಂದೆ ನೀನು ನನ್ನ ಮಗನಾಗಿರಬೇಕು.

ಘಟನೆ 2
ಯೋಗೇಂದ್ರ ಯಾದವ್‍ರವರ ಬದುಕಿನಲ್ಲಿ ನಡೆದ ಒಂದು ಆಘಾತದ ಘಟನೆ ಇದು. ಕ್ರಿ.ಶ 1936ರ ಸಮಯ. ಈಗಿನ ಹರಿಯಾಣಾದ ಹಿಸಾರ್ ಎನ್ನುವ ಪಟ್ಟಣದಲ್ಲಿ ರಾಮ್ ಸಿಂಗ್ ಎಂಬವರು ಒಂದು ಶಾಲೆಯ ಶಿಕ್ಷಕರಾಗಿದ್ದರು. ಸ್ವಾತಂತ್ರಪೂರ್ವದ ಸಮಯ. ಅಲ್ಲಲ್ಲಿ ಕೋಮು-ಗಲಭೆಯ ದುಳ್ಳರಿ ಉರಿಯುತ್ತಿದ್ದವು. ರಾಮ್ ಸಿಂಗ್ ಅವರು ಶಿಕ್ಷಕರಾಗಿದ್ದ ಶಾಲೆಗೆ ಕೋಮು ಗಲಭೆಯನ್ನೆಬ್ಬಿಸುತ್ತ ಮುಸಲ್ಮಾನ ಗುಂಪೊಂದು ಬಂದು ಅಲ್ಲಿದ್ದ ಮಕ್ಕಳನ್ನು ತಮ್ಮ ವಶಕ್ಕೆ ನೀಡಬೇಕೆಂದು ಆದೇಶಿಸಿತು. ಮಕ್ಕಳನ್ನು ಮುಟ್ಟುವುದಕ್ಕಿಂತ ಮುಂಚೆ ಮೊದಲು ನನ್ನನ್ನು ನೋಡಿಕೊಳ್ಳಿ ಎಂದು ರಾಮ್ ಸಿಂಗ್. ತಮ್ಮ ಕರ್ತವ್ಯ ಪಾಲಿಸಲು ಮುಂದಾದಾಗ ಗಲಭೆಕೋರರು ಅವರ ಕುತ್ತಿಗೆಯನ್ನು ಕುಡಗೋಲಿನಿಂದ ಸೀಳಿಯೇ ಬಿಟ್ಟರು. ಏಳು ವರ್ಷದ ಬಾಲಕನಾದ ದೇವೇಂದ್ರ ಸಿಂಗ್,ಕೊಲೆಗೀಡಾದ ತನ್ನ ಅಪ್ಪನಾದ ಶಿಕ್ಷಕ ರಾಮ್‍ಸಿಂಗ್ ರವರಿಗಾದ ಸ್ಥಿತಿಯನ್ನು ನೋಡುತ್ತಾ ನಿಂತಿದ್ದ. ತನ್ನ ಕಣ್ಣೆದುರೇ ನಡೆದ ತಂದೆಯ ಕೊಲೆಯು ಆ ಬಾಲಕನ ಮೇಲೆ ಏನೆಲ್ಲ ಪರಿಣಾಮ ಬೀರಿತೋ ಏನೋ. ತನ್ನ ತಂದೆಯನ್ನು ತನ್ನ ಕಣ್ಣೆದುರಿಗೇ ಕೊಂದ ಮುಸಲ್ಮಾನರನ್ನು ದ್ವೇಷಿಸಲು ಅವರಿಗೆ ಸಾಕಷ್ಟು ಕಾರಣಗಳಿದ್ದವು. ಆ ಬಾಲಕ ಬೆಳೆಯುತ್ತಿರುವ ಸಮಯ ಸ್ವಾತಂತ್ರ ಸಂಗ್ರಾಮದಕಾಲವಾಗಿತ್ತು. ಗಾಂಧಿಜೀಯವರುಸತ್ಯಾಗ್ರಹಗಳಮತ್ತುಹಿಂದು-ಮುಸ್ಲಿಂ ಏಕತೆಗಾಗಿ ಜೀವ ತೇಯುತ್ತಿದ್ದಕಾಲ. ಆಗ ಎಲ್ಲೆಡೆ ಧ್ವನಿಸುತ್ತಿದ್ದ "ನಾನು ಹಿಂದೂಆಗದೆಮುಸಲ್ಮಾನನೂ ಆಗದೆಓರ್ವಮನುಷ್ಯನಾಗುವೆ"ಎನ್ನುವ ಮಾತುಗಳನ್ನು ಕೇಳಿದ ದೇವೇಂದ್ರ ಸಿಂಗ್, ತನ್ನಜೀವನದಲ್ಲಿ ದ್ವೇಷದ ಯಾವಪರಿಣಾಮವೂ ಉದ್ಭವಿಸಲುಅವಕಾಶ ನೀಡಲಿಲ್ಲ.ಕಾಲ ಸರಿದಂತೆಮುಂದೆ ಬೆಳೆದು ಅರ್ಥಶಾಸ್ತ್ರದ ಪ್ರಾಧ್ಯಪಕರಾದ ದೇವೇಂದ್ರ ಸಿಂಗ್,ತಮ್ಮ ಮಕ್ಕಳಿಗೆ ಮುಸ್ಲಿಂ ಹೆಸರನ್ನುನೀಡಲು ನಿರ್ಧರಿಸಿದರು. ತನ್ನ ತಂದೆಯನ್ನು ತನ್ನೆದುರಿಗೆ ಕೊಂದ ಸಮುದಾಯದವರ ಹೆಸರನ್ನು ನೀಡುವ ನಿರ್ಧಾರಕ್ಕೆ ಬಂದರು. ಮೊದಲ ಮಗುವಿಗೆ ನಜ್ಮಾ ಎಂದು ಹೆಸರಿಡುವಾಗ ಅವರ ಹೆಂಡತಿ"ಮಗಳಿಗೆಈ ಹೆಸರುಬೇಡ,ಮುಂದೆ ಗಂಡು ಮಗುವಾದಾಗನಿಮ್ಮ ಇಚ್ಛೆಯಂತೆಯೇ ಹೆಸರಿಡುವ,ಹೆಣ್ಣು ಮಗಳ ಮೇಲೆ ಬೇಡ,ಮುಂದೆ ಮದುವೆಗೆ ಸಮಸ್ಯೆಯಾಗುತ್ತದೆ"ಎಂದಳು. ಹಾಗಾಗಿ ಆ ಹೆಣ್ಣು ಮಗುವಿಗೆ ನೀಲ ಎಂದು ನಾಮಕರಣ ಮಾಡಲಾಯಿತು.ಆ ಬಳಿಕಗಂಡು ಮಗುವಾದಾಗ ಸಲೀಂ ಎನ್ನುವ ಹೆಸರನ್ನಿಟ್ಟರು.ರಾಜಸ್ಥಾನದ ಒಂದು ಹಳ್ಳಿಯಲ್ಲಿ ಶಾಲೆಗೆ ಹೋಗುತ್ತಿದ್ದ ಆ ಬಾಲಕನ ಶಾಲೆಯಲ್ಲಿ ಯಾವ ಮುಸಲ್ಮಾನ ಮಕ್ಕಳೂ ಇರಲಿಲ್ಲ. ಹಾಗಾಗಿ ಎಲ್ಲ ಮಕ್ಕಳಿಗೂ ಇವನ ಬಗ್ಗೆ ಕುತೂಹಲ."ನೀನ್ಯಾರು ನಿನ್ನನ್ನು ದತ್ತು ತೆಗೆದುಕೊಂಡಿದ್ದಾರಾ?ಮುಸಲ್ಮಾನರು ಹೇಗಿರುತ್ತಾರೆ?"ಎಂದೆಲ್ಲಾ ಪೀಡಿಸಲಾರಂಭಿಸಿದರು. ತಂದೆ ದೇವೇಂದ್ರ ಜಾತ್ಯತೀತತೆಯ ಬಗ್ಗೆ ಆ ಪುಟ್ಟ ಮಗು ಸಲೀಂನಿಗೆ ಏನೆಲ್ಲಾ ಹೇಳಿದರೂ ಅವನಿಗೆಅದರತಲೆಬುಡ ಅರ್ಥವಾಗಲಿಲ್ಲ. ಒಂದು ದಿನ ಮನೆಗೆ ಬಂದ ಬಾಲಕ"ಇಲ್ಲ ನನ್ನ ಹೆಸರನ್ನು ಬದಲಾಯಿಸಿ,ಇಲ್ಲವಾದರೆ ಇನ್ನು ಮುಂದೆ ನಾನು ಶಾಲೆಗೆ ಹೋಗುವುದಿಲ್ಲ'ಎಂದುಹೇಳಿದ. ಆಗ ಸಲೀಂ ಅಂತ ಇದ್ದ ಹೆಸರು ಯೋಗೇಂದ್ರ ಯಾದವ್ ಎಂದಾಯಿತು. (ಕೃಪೆwww. Naanugauri.com)

ಸಂಧಾನ /ಹೊಂದಾಣಿಕೆ ಅನಿವಾರ್ಯ
ಮೇಲಿನ ಎರಡು ಘಟನೆಗಳು ಸಹ reconciliation ಅಥವಾ ಸಂಧಾನ, ಸಾಮರಸ್ಯದ ಬಗ್ಗೆ ಕಣ್ಣಿಗೆ ಕಟ್ಟುವಂತೆ ಹೇಳುತ್ತವೆ. ಈ ದಿನಗಳಲ್ಲಿ ಸಂಧಾನದ ಕಾರ್ಯಗಳು ಹೆಚ್ಚು ಹೆಚ್ಚು ಕೈಗೊಳ್ಳಬೇಕಾದ ಅನಿವಾರ್ಯತೆ ನಮಗಿದೆ. ಜಾತಿ ಧರ್ಮ,ಭಾಷೆ,ದೇಶ ಅಧಾರಗಳ ಮೇಲೆ ಒಡೆದು ನುಚ್ಚುನೂರಾಗುತ್ತಿರುವ ನಮ್ಮ ದೇಶಕ್ಕೆ ಸಾಮರಸ್ಯ ಜೀವನ ಅವಶ್ಯವಾಗಿ ಬೇಕಾಗಿದೆ. ಉಗ್ರವಾದ ಬಲಪಡೆದುಕೊಳ್ಳುತ್ತಿದೆ,ದಲಿತರ ಮತ್ತು ಶೋಷಿತರ ಮೇಲಿನ ದೌರ್ಜನ್ಯಗಳು ಸರ್ವೆಸಾಮಾನ್ಯವಾಗಿಬಿಟ್ಟಿದೆ. ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಒಪ್ಪಿತವಾಗಿಬಿಟ್ಟಿವೆ. ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿವೆ. ಮನುಷ್ಯನ ದುರಾಸೆಯಗುಣ ಪರಿಸರವನ್ನೇ ನಂಗುತ್ತಿದೆ. ರಾಷ್ಟ್ರ ರಾಷ್ಟ್ರಗಳು ವೈರತ್ವದಿಂದ ನಾಶಗೊಳ್ಳುತ್ತಿವೆ;ಮಾನವ ಹಕ್ಕುಗಳ ಉಲ್ಲಂಘನೆಅತಿರೇಕಕ್ಕೆ ತಲಪಿವೆ. ಈ ವಿಷಮ ಪರಿಸ್ಥಿತಿಯಲ್ಲಿ ಸಂಧಾನ ಪ್ರಕ್ರಿಯೆ ಅಥವಾ reconciliation ಅಗತ್ಯವೆನಿಸಿದ ಮೌಲ್ಯವಾಗಿದೆ. ಹಗೆತನ ದ್ವೇಷಗಳ ಹುಚ್ಚಾಟಿಕೆಯಿಂದ ಮನಕುಲವನ್ನು ರಕ್ಷಿಸಲು ಸಾಧ್ಯವಿಲ್ಲ. ಹಗೆತನ, ದ್ವೇಷ, ಹಿಂಸೆ, ಯುದ್ಧ ಇವೆಲ್ಲವು ಮನುಷ್ಯನ ದೌರ್ಬಲ್ಯಗಳು; ಬುದ್ದಿ ಪ್ರೀತಿಯ ಕೊರತೆಯ ಫಲಗಳು. ಆದ್ದರಿಂದ ಪ್ರೀತಿಯ ಸಂಬಂಧಗಳು ರೂಪುಗೊಳ್ಳಬೇಕಾಗಿದೆ.

Reconciliationಅಥವಾ ಸಂಧಾನ ಎಂದರೇನು?
Reconciliation ಅಥವಾ ಸಂಧಾನ ಎಂದರೇನು?ಎಂಬ ಪ್ರಶ್ನೆ ನಮ್ಮನ್ನು ಕಾಡಬಹುದು. ಹಗೆತನ ಅಥವಾ ದ್ವೇಷ ವೈಮನಸ್ಸಿನಿಂದಾಗಿ ಕಂಗೆಟ್ಟ ಸಂಬಂಧವನ್ನು ಪ್ರೀತಿಯ ಸಂಬಂಧವಾಗಿ ಪುನರ್‍ ಸ್ಥಾಪಿಸುವುದೇ ಸಂಧಾನ ಅಥವಾ reconciliation ಎನ್ನಬಹುದು. ವ್ಯಕ್ತಿ ಅಥವಾ ಸಮುದಾಯ ಅಥವಾ ಗುಂಪಿನ ನಡುವೆ ಕೆಟ್ಟಿರುವ ಸಂಬಂಧವನ್ನು ಉತ್ತಮ ಹಾಗೂ ಪ್ರೀತಿಯದ್ಯೋತಕವಾಗಿ ಬದಲಾಯಿಸುವುದೇ reconciliationನ ಮುಖ್ಯಗುರಿ. ಈ ಪ್ರಕ್ರಿಯೆಯನ್ನು ಕ್ರಿಸ್ತ ಹೇಳಿದ ದುಂದುಗಾರ ಮಗನ ಸಾಮತಿಯಲ್ಲಿ ಕಾಣುತ್ತೇವೆ. ಹೌದು, ಒಡಕು ಹುಟ್ಟಿಸುವುದು ಅತಿ ಪ್ರಾಚೀನ ಮತ್ತು ನಿರಂತರವಾದ ವ್ಯಾಧಿ. ಈ ರೋಗವು ಎಷ್ಟೋ ಜನಾಂಗಗಳನ್ನು ನಿರ್ನಾಮ ಮಾಡಿರುವ ಶೋಚನೀಯ ಉದಾಹರಣೆಗಳು ನಮ್ಮ ಮುಂದಿವೆ. ಆದ್ದರಿಂದ ಈ ಸಂಧಾನ ಎಂಬ ಉದಾತ್ತ ಕಾರ್ಯವು ನಿರಂತರವಾಗಿ ನಡೆಯುತ್ತಿರಬೇಕು. ಆದರೆ ಇದು ಸುಲಭದ ಕೆಲಸವಲ್ಲ. ರಾಜಕೀಯವಾಗಿ ಅಧಿಕಾರವನ್ನು ಗಳಿಸುವ ಸುಲಭ ಮಾರ್ಗವೇ Divide and Rule.ಈ ಕಾರಣದಿಂದಲ್ಲೇ ಸಮಾಜವನ್ನು ವಿಭಾಗಿಸುತ್ತಲೇ ಅಧಿಕಾರವನ್ನು ಪಡೆಯುವಪ್ರವೃತ್ತಿಯು ದಟ್ಟವಾಗಿಜಗತ್ತಿನಾದ್ಯಂತಹರಡುತ್ತಿದೆ. ಇನ್ನೊಂದು ಕಡೆ,ವಿಭಜನೆಯ ಹುನ್ನಾರದಿಂದಲೇ ಲಾಭಗಳಿಸುವ capitalism ಮತ್ತು fascism ಒಟ್ಟಾಗಿ ಸೇರಿ ಸಂಧಾನ ಕಾರ್ಯವನ್ನು ಮತ್ತಷ್ಟು ಕಠಿಣಗೊಳ್ಳಿಸಿವೆ. ಆದರೂ ನಮ್ಮ ಪ್ರಯತ್ನವನ್ನು ಬಿಡಬಾರದು. ಶತ್ರುಗಳನ್ನು ಪ್ರೀತಿಯ ಮನೋಧರ್ಮದಿಂದಬಂಧಿಸಿದಾಗ ನಾವು ಶಕ್ತಿಶಾಲಿಗಳಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ.
ಸಂಧಾನ ಕಾರ್ಯ ಪರಾಕಾಷ್ಟೆ ತಲಪಿದ್ದು ಕ್ರಿಸ್ತನಲ್ಲಿ
ಸಂಧಾನದ ಅಗತ್ಯತೆಯ ಬಗ್ಗೆ ಅದರ ರೂಪುರೇಷೆಗಳ ಬಗ್ಗೆ ಬೈಬಲ್ಲಿನಲ್ಲಿ ನಾವು ಓದುತ್ತೇವೆ. ಹಳೆ ಮತ್ತು ಹೊಸ ಒಡಂಬಡಿಕೆಗಳಲ್ಲಿ ಅನೇಕ ಪ್ರವಾದಿಗಳು ಮಾಡಿದ್ದು ಈ ಸಂಧಾನ ಕಾರ್ಯವನ್ನೇ. ಆವಾಗಾವಾಗದೇವರಿಂದ ದೂರವಾಗುತ್ತಿದ್ದ ಜನರನ್ನು ಎಚ್ಚರಿಸಿ ದೇವರ ಬಳಿಗೆ ಕೆರೆದು ವಾಪಸ್ಸು ತರುತ್ತಿದಿದ್ದವರೇ ಪ್ರವಾದಿಗಳು. ಅಷ್ಟು ಮಾತ್ರವಲ್ಲ,ಸಮಾಜದಲ್ಲಿ ಬಲಹೀನರ ಮೇಲೆ ದೌರ್ಜನ್ಯ ಎಸಗುತ್ತಿದ್ದವರನ್ನು ಖಂಡಿಸಿ ಸಮ ಸಮಾಜದ ಸ್ಥಾಪನೆಗೆ ಪಣತೊಟ್ಟವರು ಪ್ರವಾದಿಗಳು. ಆದರೆ ಎಲ್ಲಾ ಪ್ರವಾದಿಗಳ ಸಂಧಾನ ಕಾರ್ಯ ಪರಾಕಾಷ್ಟೆ ತಲಪಿದ್ದು ಕ್ರಿಸ್ತನಲ್ಲಿ. ಪಾಪಿಷ್ಠರನ್ನು ಬಹಿಷ್ಕೃತಗೊಂಡವರನ್ನು ದೇವರ ಕ್ಷಮೆಗೆ ಅರ್ಹರಾಗಿಸಿ ಅವರ ಮತ್ತು ದೇವರ ಸಂಬಂಧವನ್ನು ಉತ್ತಮಪಡಿಸಿದ. ಶುದ್ಧ ಅಶುದ್ಧಗಳ ಅಧಾರಗಳ ಮೇಲೆ ಶ್ರೇಣೀಕೃತಗೊಂಡಿದ್ದ ಸಮಾಜವನ್ನು ಪ್ರೀತಿಯ ಬಂಧದಿಂದ ಸಮಗೊಳಿಸಿದ. ಅವನಲ್ಲಿ ಎಲ್ಲರೂ ಸಮನಾದರು,ಎಲ್ಲರೂ ದೇವರ ಮಕ್ಕಳೆನ್ನಿಸಿಕೊಂಡರು. ಅಷ್ಟು ಮಾತ್ರವಲ್ಲ,ಜನರ ಆಂತರಿಕ ಸಂಧಾನಕ್ಕೂ ಕೈಹಾಕಿದ ಕ್ರಿಸ್ತ ಅವರಲ್ಲಿದ್ದ ಸಂಕೋಚ,ಅವಮಾನಗಳು,ಮೂಢನಂಬಿಕೆಗಳು,ಶಾಪಪ್ರಜ್ಞೆ,ಪಾಪಪ್ರಜ್ಞೆಗಳನ್ನು ಜಾಡಿಸಿ ಹೊರಹಾಕಿ`ನಾವು ದೇವರ ಮಕ್ಕಳು'ಎಂಬ ಅರಿವು ಅವರಲ್ಲಿ ಮೂಡಿಸಿದ. ಇದಕ್ಕೆ ಉತ್ತಮ ಉದಾಹರಣೆ ಜಕ್ಕಾಯ. ದೇವರ ಮತ್ತು ಮನುಷ್ಯರ ನಡುವೆ ಮತ್ತು ಮನುಷ್ಯ ಮನುಷ್ಯರ ನಡೆವೆ ಬಿರುಕುಬಿಟ್ಟ ಸಂಬಂಧಕ್ಕೆ ಮೂಲಕಾರಣ ಪಾಪ ಎಂದು ತಿಳಿದು ಜನರ ಪಾಪಗಳನ್ನು ಹೊತ್ತು ಕಲ್ವಾರಿ ಬೆಟ್ಟದ ಏರಿ ಶಿಲುಬೆಮೇಲೆ ತನ್ನ ಪ್ರಾಣವನ್ನು ಬಲಿಕೊಡುವುದರ ಮೂಲದ ಜಗತ್ತಿನ ಶ್ರೇಷ್ಠ ಸಂಧಾನಕಾರ ಎನ್ನಿಸಿಕೊಂಡ.
ಸಂಧಾನ ಕಾರ್ಯ ನಾಲ್ಕು ರೀತಿಯದು;
ಸಂಧಾನ ಕಾರ್ಯವನ್ನುವಿಭಾಗವನ್ನಾಗಿಸಿನೋಡಿದಾಗ ಆ ಕಾರ್ಯದಲ್ಲಿ ನಾಲ್ಕುಭಾಗಗಳನ್ನು ಕಾಣಬಹುದು;ದೇವರೊಂದಿಗೆ,ಇತರರೊಂದಿಗೆ,ಪ್ರಕೃತಿಯೊಂದಿಗಿನ ಕೊನೆಗೆ ಸ್ವತಃ ತನ್ನೊಂದಿಗಿನ ಸಂಧಾನ ಕಾರ್ಯವನ್ನು ಸೂಚಿಸುತ್ತದೆ. ಈ ಎಲ್ಲಾ ಪ್ರಕ್ರಿಯೆಗಳಲ್ಲಿ ದೇವರೊಂದಿಗಿನ,ಇತರರೊಂದಿಗಿನ,ಪ್ರಕೃತಿಯೊಂದಿಗಿನ ಸಂಧಾನ ಬಹಿರಂಗ ಸಂಧಾನವಾದರೆ ಸ್ವತಃ ತನ್ನೊಂದಿಗೆ ಏರ್ಪಡುವ ಸಂಧಾನ ಅಂತರಂಗದ್ದು. ಅಂತರಂಗದ ಸಾಮರಸ್ಯ ಬಹು ಮುಖ್ಯವಾದುದು. ಮನುಷ್ಯ ಮೊದಲು ತನ್ನ ಬಳಿ ಸಂಧಾನ ಮಾಡಿಕೊಳ್ಳಬೇಕು. ತನ್ನಲ್ಲಿರುವ ವಿರೋಧಾಭಾಸಗಳನ್ನು,ಅಸಮಾನತೆಗಳನ್ನು ತೊಡೆದು ಸಾಮರಸ್ಯವನ್ನು ರೂಪಿಸಿಕೊಳ್ಳಬೇಕು. ಇದು ಇತರ ಎಲ್ಲಾ ಹೊಂದಾಣಿಕೆ ಅಥವಾ ಸಾಮರಸ್ಯ ಜೀವನಕ್ಕೆ ಬುನಾದಿ ಎಂದೇ ಹೇಳಬಹುದು.Reconciled with self leads to reconciliation with God, Society and nature. ಈ ಕಾರಣಕ್ಕಾಗಿ ತನ್ನೆಲ್ಲಾ ನ್ಯೂನತೆಗಳನ್ನು,ದೌರ್ಬಲ್ಯವನ್ನುಒಪ್ಪಿಕೊಂಡು ಅವುಗಳನ್ನು ಕಡಿಮೆಗೊಳ್ಳಿಸುವಪ್ರಾಮಾಣಿಕ ಪ್ರಯತ್ನಮಾಡಬೇಕು. ತನ್ನೆಲ್ಲಾ ಸೋಲುಗಳನ್ನು ಒಪ್ಪಿಕೊಂಡು ತನ್ನನ್ನೇ ಕ್ಷಮಿಸಿಕೊಳ್ಳಬೇಕು. ತನ್ನನ್ನು ಕ್ಷಮಿಸಿಕೊಂಡವನು ಮಾತ್ರ ಇತರರನ್ನು ಕ್ಷಮಿಸಲು ಸಾಧ್ಯ. ಇವೆಲ್ಲಕ್ಕಿಂತ ಮುಖ್ಯವಾಗಿ ತನ್ನನ್ನು ಪ್ರೀತಿಸಲು ಕಲಿಯಬೇಕು. ಸಂಕೋಚ, ಅವಮಾನಗಳು, ಮೂಢನಂಬಿಕೆಗಳು, ಶಾಪಪ್ರಜ್ಞೆ, ಪಾಪಪ್ರಜ್ಞೆಗಳನ್ನು ಜಾಡಿಸಿ ತನ್ನಿಂದ ಹೊರಹಾಕಬೇಕು. ಹೌದು ತನ್ನಲ್ಲೇ ತಾನು ಸ್ಥಾಪಿಸಿಕೊಳ್ಳುವ ಈ ಸಾಮರಸ್ಯ ಮನೋಭೂಮಿಕೆ ಅಥವಾ ಹೊಂದಾಣಿಕೆಯು ಕೊನೆಗೆ ದೇವರೊಂದಿಗಿನ ಸಂಬಂಧದಲ್ಲಿ, ಸಮಾಜ ಮತ್ತು ಪರಿಸರ ಜತೆಗಿನ ಸಂಬಂಧಗಳಲ್ಲಿ ಬಹಿರಂಗಗೊಳ್ಳುತ್ತಾ,ನಮ್ಮನ್ನು ಜಗತ್ತಿನಲ್ಲಿ ಮುಖ್ಯ ಸಂಧಾನಕಾರರನ್ನಾಗಿಸಿ ಬಿಡುತ್ತದೆ. ನಮ್ಮ ಈ ಉದಾತ್ತ ಕಾರ್ಯದಿಂದ ನಾವು ಭಾಗ್ಯವಂತರಾಗಿ ದೇವರ ಮಕ್ಕಳೆನಿಸಿಕೊಳ್ಳುವೆವು.
-------------


ಅಭಿವೃದ್ಧಿಯ ಹಾದಿಯ ತುಡಿತದಲ್ಲಿ ನಮ್ಮ ಭಾರತ!!! - -ಸಹೋ. ಜಾರ್ಜ್ ಫೆರ್ನಾಂಡಿಸ್ (ಜಾಜಿ) ಎಂ. ದಾಸಾಪುರ


ಭಾರತ ಎಂಬ ಹೆಸರು ಕೇಳಿದೊಡೆ ಹಲವಾರು ಅಂಶಗಳು ನಮ್ಮ ಕಣ್ಣಮುಂದೆ ಬರುತ್ತವೆ. ಭಾರತ ವೈವಿಧ್ಯತೆಯನ್ನು ಮೈಗೂಡಿಸಿಕೊಂಡಿರುವ ದೇಶ.ವೈವಿಧ್ಯತೆಯ ತವರೂರು, ಸಂಸ್ಕೃತಿಗಳ ಸಂಗಮ, ಹಲವು ಧರ್ಮಗಳ ಸಮಾಗಮ ಮತ್ತು ಸುಮಾರು3000 ಭಾಷೆಗಳ ಉಗಮಸ್ಥಾನ. ಹೀಗೆ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ನಮ್ಮ ಭಾರತ.
ನಮ್ಮ ದೇಶದ ಇನ್ನೊಂದು ಹೆಮ್ಮೆಯ ವಿಷಯವೇನೆಂದರೆ,ಇಡೀ ಪ್ರಪಂಚದಲ್ಲಿಯೇ ಅತೀ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ಏಕೈಕ ರಾಷ್ಟ್ರ ಈ ನಮ್ಮ ಭಾರತ. ಹೀಗೆ ಹಲವಾರು ವೈವಿಧ್ಯತೆಗಳನ್ನು ತನ್ನಒಡಲಿನಲ್ಲಿ ಇರಿಸಿಕೊಂಡಿರುವ ನಮ್ಮ ಭಾರತ ತನ್ನ ಇರುವಿಕೆಯನ್ನು ಇಡೀ ಜಗತ್ತಿಗೆ ತೋರಿಸುತ್ತಿದೆ.
ಜಗತ್ತಿನ ಅತೀ ಬಲಶಾಲಿರಾಷ್ಟ್ರಗಳಲ್ಲಿ ನಮ್ಮ ದೇಶವೂ ಒಂದು. ಪ್ರಸ್ತುತ 132ಕೋಟಿ ಜನಸಂಖ್ಯೆಯನ್ನು ಹೊಂದಿ ಅಭಿವೃದ್ಧಿಯೆಡೆಗೆ ಸಾಗುತ್ತಿದೆ. ಅಭಿವೃದ್ಧಿಯನ್ನೇ ಗುರಿಯಾಗಿಸಿ ಕೊಂಡು ಜಗತ್ತಿನ ಬಲಿಷ್ಠರಾಷ್ಟ್ರಗಳೊಂದಿಗೆ ತಾನೂ ಕೂಡ ಬಲಶಾಲಿ ಎಂಬುದನ್ನು ಸಾರಿಹೇಳುತ್ತಿದೆ.ಇತ್ತೀಚೆಗಷ್ಟೇ ಚಂದ್ರಯಾನದ ಮೂಲಕ ಸುದ್ದಿಮಾಡಿದೆ. ಹೀಗೆ ಹತ್ತು ಹಲವಾರು ಅಭಿವೃದ್ಧಿಗಳೊಂದಿಗೆ ತನ್ನ ಉತ್ತಮ ಭವಿಷ್ಯವನ್ನು ರೂಪಿಸುವತ್ತ ಹೆಜ್ಜೆ ಇಟ್ಟಿದೆ. ಹೀಗೆ ಹೆಜ್ಜೆ ಇಡುತ್ತಿರುವ ಭಾರತದೇಶಕ್ಕೆ72ರ ಹರೆಯ. ತನ್ನ 72ನೇಯ ಸ್ವಾತಂತ್ರ್ಯದಿನಾಚರಣೆಯನ್ನು ಆಚರಿಸುತ್ತಾ ತಾನೂ ಕೂಡ ಅಭಿವೃದ್ಧಿಯ ನೇತಾರ ಎಂಬುದನ್ನು ಸ್ಪಷ್ಟಪಡಿಸಿದೆ. ತಂತ್ರಜ್ಞಾನದಲ್ಲಿ ತನ್ನದೇ ಆದ ಹೊಸತನವನ್ನು ತೋರಿಸುತ್ತಿದೆ. ಕೈಗಾರಿಕಾಕ್ಷೇತ್ರದಲ್ಲಿ ತನ್ನಛಾಪನ್ನು ಮೂಡಿಸುತ್ತಿದೆ. ವಿದ್ಯಾಭ್ಯಾಸದಲ್ಲಿಯೂ ಕೂಡ ತಾನೇನೂ ಕಡಿಮೆಯಿಲ್ಲ ಎಂಬ ಸತ್ಯವನ್ನು ಸಾರುತ್ತಿದೆ.
ಮುಖ್ಯವಾಗಿ ಮಹಿಳೆಯರಿಗೂ ಕೂಡ ಮುಖ್ಯ ಭೂಮಿಕೆಗಳಲ್ಲಿ ತಮ್ಮನ್ನೇ ತೊಡಗಿಸಿಕೊಳ್ಳಲು ಅವಕಾಶವನ್ನು ನೀಡುತ್ತಿದೆ. ಹೀಗೆ ಪುರುಷ ಮತ್ತು ಮಹಿಳೆ ಇಬ್ಬರೂ ಸಮಾನರು ಎಂಬ ಅಂಶವನ್ನು ಒತ್ತಿಹೇಳುತ್ತಿದೆ.ಇದಕ್ಕೆ ಪೂರಕವೆಂಬಂತೆ ನಮ್ಮ ದೇಶದ ವಿವಿಧ ಸ್ತರಗಳಲ್ಲಿ ಮಹಿಳಾ ಕಣ್ಮಣಿಗಳನ್ನು ನಾವು ಕಾಣಬಹುದಾಗಿದೆ. ದೇಶದ ಪ್ರಪ್ರಥಮ ಹಣಕಾಸು ಸಚಿವೆಯಾಗಿ ಶ್ರೀಮತಿ ನಿರ್ಮಲಾಸೀತಾರಾಮನ್‌ ಅವರು ಸೇವೆಸಲ್ಲಿಸುವುದರ ಮೂಲಕ ಮಹಿಳೆಯರು ಇನ್ನೆಂದೂ ಅಬಲರಲ್ಲ ಬದಲಾಗಿ ಎಲ್ಲಾ ರೀತಿಯಲ್ಲೂ ಸಬಲರಾಗಿದ್ದಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಯಾವ ದೇಶದಲ್ಲಿ ಮಹಿಳೆಯರು ಕೇವಲ ಗೃಹಿಣಿಯಾಗಿದ್ದಳೋ ಇಂದು ಅದೇ ದೇಶದಲ್ಲಿ ಮಹಿಳೆಯರು ತಾವೂ ಕೂಡ ಪುರುಷರಷ್ಟೇ ಸಮಾನರು ಎಂಬ ಸತ್ಯವನ್ನು ತಮ್ಮ ಸಾಧನೆಗಳ ಮೂಲಕ ಮಾಡಿತೋರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತದ ಕ್ರೀಡಾಶಕ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅನಾವರಣಗೊಳಿಸುತ್ತಿರುವ ಹಿಮಾದಾಸ್ ಇವರು ಮೊನ್ನೆ ಮೊನ್ನೆ ತಾನೇ ಸತತವಾಗಿ ಓಟದ ಸ್ಪರ್ಧೆಯಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದ ಸಾಧನೆ ಮಾಡಿದರು. ದ್ಯುತಿಚಾಂದ್ ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಚಿನ್ನದಪದಕದ ಸಾಧನೆ ಮಾಡಿದರು. ಭಾರತಿಯ ಮಹಿಳಾ ಕ್ರಿಕೆಟ್  ತಂಡವು ಹೋದ ವರ್ಷ ನಡೆದ ವಿಶ್ವಕಪ್ ಕ್ರಿಕೆಟ್‍ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ದೇಶದ ಕೀರ್ತಿಯನ್ನು ಹೆಚ್ಚಿಸಿದರು. ಈ ಮೇಲಿನ ಉದಾಹರಣೆಗಳು ನಮ್ಮ ದೇಶವು ಮಹಿಳೆಯರಿಗೂ ಕೂಡ ಆದ್ಯತೆಯನ್ನು ಕೊಡುತ್ತದೆ ಎಂಬುವುದನ್ನು ತೋರಿಸುವಂತೆಮಾಡಿದೆ.
ಮೇಲಿನ ಅಂಶಗಳೆಲ್ಲವೂ ನಮ್ಮ ದೇಶದ ಅಭಿವೃದ್ಧಿಯ ಬಗ್ಗೆ ಬೆಳಕುಚೆಲ್ಲಿದರೆ,ಇನ್ನೂ ಅಭಿವೃದ್ಧಿ ಕಾಣದಅಂಶಗಳು ಹಲವಾರು. ಮುಖ್ಯವಾಗಿ ತನ್ನ ಒಡಲಲ್ಲಿ ಹಲವಾರು ಸಮಸ್ಯೆಗಳ ಹಾವಳಿಯನ್ನೇಇರಿ ಸಿಕೊಂಡಿದೆ. ನಮ್ಮ ದೇಶದ ರಾಜಕಾರಣಿಗಳು ಮತದಾರನನ್ನು ಮರೆತು ಕುರ್ಚಿ ಆಸೆಗಾಗಿ ಪ್ರಜಾಪ್ರಭುತ್ವವನ್ನೇ ಕೊಲೆ ಮಾಡುತ್ತಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರಗಳು ದಿನೇದಿನೇ ಹೆಚ್ಚುತ್ತಾ, ಭಾರತವು ಎಷ್ಟರ ಮಟ್ಟಿಗೆ ಮಹಿಳೆಯರಿಗೆ ರಕ್ಷಣೆಯನ್ನೀಯುತ್ತಿದೆ ಎಂಬ ಪ್ರಶ್ನೆಗೆ ಉತ್ತರವೇ ಇಲ್ಲವಾಗಿದೆ. ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ.ಬಡವರು ಬಡವರಾಗಿಯೇ ಉಳಿದು, ಶ್ರೀಮಂತರು ಶ್ರೀಮಂತರಾಗಿಯೇ ಮುಂದುವರಿಯುತ್ತಿದ್ದಾರೆ. ನಿಜವಾದ ಅನ್ನದಾತರಾದ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದನ್ನು ಬಿಟ್ಟು, ಅವರೆಲ್ಲರೂ ಅದರಲ್ಲಿಯೇ ಕೈತೊಳೆಯುವಂತೆ ಮಾಡಿದೆ. ಸಮಾಜದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳು ಭಾರತದ ಜನರು ಎಷ್ಟರ ಮಟ್ಟಿಗೆ ಬುದ್ಧಿಜೀವಿಗಳು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿವೆ. ಮಾನವ ಮಾನವನನ್ನು ಹಿಂಸೆಗೊಳಿಸಬಾರದು ಎಂಬ ಕನಿಷ್ಟ ಜ್ಞಾನವೂ ಕೂಡ ಇಲ್ಲವಾಗಿದೆ.ಇವುಗಳಿಗೆಲ್ಲಾ ಕೊನೆಯೆಂದು?
ಇಷ್ಟೆಲ್ಲಾ ಸಕರಾತ್ಮಕ ಮತ್ತು ನಕರಾತ್ಮಕ ಅಂಶಗಳು ಒಟ್ಟೊಟ್ಟಿಗೆ ನಮ್ಮ ದೇಶದಲ್ಲಿ ಕಂಡು ಬರುತ್ತಿರುವಾಗ ಭಾರತೀಯ ಪ್ರಜೆಗಳಾದ ನಾವೆಲ್ಲರೂ ನಮ್ಮ ಸಂಕುಚಿತ ಮನೋಭಾವನೆಯನ್ನು ತೊರೆದು ಸುಮನಸ್ಸುಳ್ಳವರಾಗಿ, ವಿಶಾಲ ಮನೋಭಾವನೆಯ ಮೂಲಕ ಪರಸ್ಪರ ಸಹೋದರ ಮತ್ತು ಸಹೋದರಿಯರಾಗಿ ಬಾಳಬೇಕಾಗಿದೆ. ಭ್ರಾತೃತ್ವದಲ್ಲಿ ಬಾಳುತ್ತಾ, ಮಹಿಳೆಯರನ್ನು ಗೌರವಿಸುವ ಮತ್ತು ಶಾಂತಿಯ ರಾಯಭಾರಿಗಳಾಗಿ ಬದುಕಬೇಕಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಮೂಡಿಸುವುದೇ ನಮ್ಮ ದೇಶದ ಮೂಲ ಧ್ಯೇಯವಾಗಿ ಅದು ದೇಶದೆಲ್ಲೆಡೆ ಕಂಗೊಳಿಸಬೇಕಾಗಿದೆ. ಇದನ್ನರಿತು ನಾವು ನಿಜವಾದ ಭಾರತೀಯರಾಗಿ ಬದುಕಬೇಕಾಗಿದೆ. ಇದೆಲ್ಲಾ ಸಾಧ್ಯವಾಗುವುದು ನಾವು ಮೊದಲು ಮನುಷ್ಯರೆಂಬುದನ್ನು ಅರಿತಾಗ. ಈ  ಸತ್ಯತೆಯನ್ನು ಅರಿತು ನಮ್ಮ ದೇಶದ ಒಳಿತಿಗಾಗಿ ಶ್ರಮಿಸೋಣ.
ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
********

ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು - - ಡಾ. ಸಿಸ್ಟರ್ ಪ್ರೇಮ, ಎಸ್. ಎಂ.ಎಂ.ಐ

1. ರೆವರೆಂಡ್ ಗಾಡ್ ಫ್ರೆ ವೈಗಲ್ :
ಕ್ರಿ.ಶ. 1816ರಲ್ಲಿ ಸೆಲ್ ಎಂಬ ಗ್ರಾಮದಲ್ಲಿ ಗಾಡ್ ಫ್ರೆ ವೈಗಲ್ ಜನಿಸಿದರು. ಇವರ ತಂದೆ ಪಾದ್ರಿಯಾಗಿದ್ದರು. ಗಾಡ್ ಫ್ರೆ ಬಾಲ್ಯದಲ್ಲಿಯೇ ಕ್ರೈಸ್ತ ಶಿಕ್ಷಣ ಪಡೆದರು. ಇವರು 18 ವರ್ಷದವರಾಗುವ ಮೊದಲೇ ತಂದೆ ತಾಯಿಯನ್ನು ಕಳೆದುಕೊಂಡರು. ಕ್ರಿ.ಶ. 1835ರಿಂದ ಕ್ರಿ.ಶ. 1838ರ ವರೆಗೆ ಟ್ಯೂಬಿಂಗನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. ಅಲ್ಲಿ ಅರಬ್ಬೀ ಹಾಗೂ ಸಂಸ್ಕೃತ ವಿಷಯಗಳನ್ನು ಕಲಿತರು ನಂತರ ಬಾಸೆಲ್ ಮಿಶನ್‌ನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಕ್ರಿ.ಶ. 1840ರಲ್ಲಿ ಭಾರತಕ್ಕೆ ಬಂದರು. ರೆ. ಮೊಗ್ಲಿಂಗರು ವೈಗಲರ ಆಪ್ತ ಸ್ನೇಹಿತ ಹಾಗೂ ಸಂಬಂಧಿಯಾಗಿದ್ದರು. ಮಂಗಳೂರಿಗೆ ಬಂದ ಕೆಲವೇ ತಿಂಗಳಿನಲ್ಲಿ ವೈಗಲರು ಇಂಗ್ಲಿಷ್ ಶಾಲೆಯ ಜವಬ್ದಾರಿಯನ್ನು ವಹಿಸಿಕೊಂಡರು. ಆ ಸಮಯದಲ್ಲಿ ಮಿಶನಿಗೆ ತನ್ನದೇ ಆದ ಮುದ್ರಣಾಲಯವಿಲ್ಲದ್ದು ದೊಡ್ಡ ಕೊರೆತೆಯಾಗಿತ್ತು. ಕ್ರಿ.ಶ. 1842ರಲ್ಲಿ ರೆವರೆಂಡ್ ಗಾಡ್ ಫ್ರೆ ವೈಗಲ್‌ರವರು ಮುಂಬೈಯಿಂದ ಮುದ್ರಣಯಂತ್ರವನ್ನು ದಾನವಾಗಿ ಪಡೆದು ತಂದು ದಕ್ಷಿಣ ಭಾರತದಲ್ಲಿಯೇ ಶ್ರೇಷ್ಠ ಮುದ್ರಣಾಲಯ ಎಂದು ಖ್ಯಾತಿ ಪಡೆದ ಬಾಸೆಲ್ ಮಿಷನ್ ಮುದ್ರಣಾಲಯದ ಸ್ಥಾಪನೆಗೆ ಕಾರಣರಾದರು. ರೆ.ವೈಗಲರನ್ನು ನೀಲಗಿರಿಗೆ ಕಳುಹಿಸಿದಾಗ ಅಲ್ಲಿ ಅವರು ಬಡಗ ಮಿಶನ್ ಸ್ಥಾಪಿಸಿದರು. ವೈಗಲ್ಲರಿಗೆ ಗಣಿತ, ಸಂಗೀತ ಹಾಗೂ ವೈದ್ಯಕೀಯದಲ್ಲಿ ಆಸಕ್ತಿ ಇತ್ತು.
ಲಂಡನ್ ಮಿಶನಿನ ಜಾನ್‌ಗ್ಯಾರಟ್‌ರವರು ಸಂಪಾದನೆ ಮಾಡಿದ ಭಗವದ್ಗೀತಾ ವಿಷಯದಲ್ಲಿ ಸಲಹೆ ನೀಡಿದರಲ್ಲದೆ ಹಲವು ಶ್ಲೋಕಗಳ ಅನುವಾದ ಮಾಡಿ ಟೀಕೆ, ಟಿಪ್ಪಣಿಗಳನ್ನು ಸೇರಿಸಿದರು. 'ಯಾತ್ರಿಕನ ಸಂಚಾರ' ಎಂಬುದು ರೆವರೆಂಡ್ ಗಾಡ್ ಫ್ರೆ ವೈಗಲರ ಅನುವಾದ ಕೃತಿಯಾಗಿದೆ. ಇದರಲ್ಲಿ ಬರುವ ಪದ್ಯಗಳನ್ನು ಕನ್ನಡದ ವೃತ್ತಗಳಲ್ಲಿ ಅನುವಾದಿಸಿದ್ದು ಅವು ಹೊಸಗನ್ನಡದ ಪ್ರಾರಂಭದ ಪದ್ಯಗಳೆನಿಸಿವೆ. ಇದರ ಮಹತ್ವವನ್ನು ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ರಂ. ಶ್ರೀ.ಮುಗಳಿಯವರು ತಿಳಿಸಿದ್ದಾರೆ. ರೆ. ವೈಗಲರು ಅನುವಾದ ಕಲೆಯ ವಿಶೇಷ ವರವನ್ನು ಪಡೆದಿದ್ದರೆಂದು ರೆ. ಮೊಗ್ಲಿಂಗರೂ ಹೇಳುತ್ತಾರೆ. ಬಾಸೆಲ್ ಮಿಶನ್ ಸಂಗೀತದಲ್ಲಿ ಇಪ್ಪತ್ತಮೂರು ಸಂಗೀತಗಳನ್ನು ವೈಗಲರು ರಚಿಸಿದ್ದಾರೆ.
ಕನ್ನಡ ಸಾಹಿತ್ಯ ಪರಂಪರೆಯ ಕಲ್ಪನೆ ಕನ್ನಡಿಗರಿಗಿಲ್ಲದಿರುವಾಗ ರೆ. ವೈಗಲ್ ಜರ್ಮನಿಯ ಪಂಡಿತ ಪತ್ರಿಕೆಯಾದ '‘ZDMG’ ಯಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಕುರಿತು ಲೇಖನ ಬರೆದರು. ತೌಲನಿಕ ಅಧ್ಯಯನಗಳು ನಡೆಯದಿದ್ದ ಕಾಲದಲ್ಲಿ ಸಂಸ್ಕೃತ ಭಾಷೆಯನ್ನು ದ್ರಾವಿಡ ಭಾಷೆಗಳಿಗೆ ಹೋಲಿಸಿ ಬರೆದಿರುವುದು, ಜನಪದ ಸಾಹಿತ್ಯವು ಸ್ವತಂತ್ರ ಶುದ್ಧ ಕಾವ್ಯ ಎಂದು ಹೇಳುತ್ತಾ ಯಕ್ಷಗಾನ ಪ್ರಸಂಗಗಳು ಹಾಗೂ ಜನಪದ ಹಾಡುಗಳನ್ನು ಸಾಹಿತ್ಯದ ಅಂಗವಾಗಿಯೇ ಪರಿಗಣಿಸಿದ್ದು ಅದರಲ್ಲಿಯ ವೈಶಿಷ್ಟ್ಯ ಎಂಬುದು ಗಮನಾರ್ಹವಾದುದು. ಕನ್ನಡದ ಅಮರಕೋಶ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಕೃತಿ 'ಕರ್ನಾಟಕ ಶಬ್ದಮಂಜರಿ' ಅದನ್ನು ಇಂಗ್ಲೀಷಿಗೆ ಅನುವಾದಿಸಲು ರೆವರೆಂಡ್ ಗಾಡ್ ಫ್ರೆ ವೈಗಲ್ ಕೈಗೆತ್ತಿಕೊಂಡರು. ಆದರೆ ಅದನ್ನು ಪೂರ್ತಿಗೊಳಿಸಲಿಲ್ಲ. ರೆವರೆಂಡ್ ಗಾಡ್ ಫ್ರೆ ವೈಗಲರು ಪ್ರಾರ್ಥನೆಗಳು, ದೇವರ ವಾಕ್ಯ ಬೋಧನೆಯ ಪ್ರಶ್ನೋತ್ತರ, ದೃಢೀಕರಣದ ಪ್ರಶ್ನೋತ್ತರ ಮುಂತಾದ ಕ್ರೈಸ್ತ ಧಾರ್ಮಿಕ ಪುಸ್ತಕಗಳನ್ನೂ ರಚಿಸಿದರು.
ರೆವರೆಂಡ್ ಗಾಡ್ ಫ್ರೆ ವೈಗಲರು ಕ್ರಿ.ಶ. 1848ರಲ್ಲಿ ಬೈಬಲ್ ನವೀಕರಣದ ಅಧ್ಯಕ್ಷರಾಗಿದ್ದರು. ಆ ಕೆಲಸ ಸಮರ್ಪಕವಾಗಿ ಮುಗಿದಿದ್ದರಿಂದ ಹಳೆ ಒಡಂಬಡಿಕೆಯ ಅನುವಾದ ಕಾರ್ಯವನ್ನೂ ಇವರಿಗೆ ಒಪ್ಪಿಸಲಾಯಿತು ನಂತರದ ದಿನಗಳಲ್ಲಿ ಮೇಲಿಂದ ಮೇಲೆ ಅನಾರೋಗ್ಯಕ್ಕೆ ತುತ್ತಾಗಿ ವಿಪರೀತ ಜ್ವರದಿಂದ ಬಳಲಿ ಕ್ರಿ.ಶ. 1855ರಲ್ಲಿ ತಮ್ಮ ಕೊನೆಯುಸಿರೆಳೆದರು.
2. ಜಾನ್ ಗ್ಯಾರೆಟ್ : 
ಜಾನ್ ಗ್ಯಾರೆಟ್ ಕೂಡ ಶಿಕ್ಷಣದ ಕಡೆಗೆ ಒಲವು ತೋರಿಸಿದ ವಿದೇಶಿ ವಿದ್ವಾಂಸ. ಇವರು ಮೊದಮೊದಲು ವೆಸ್ಲಿಪ್ರೆಸ್‌ನ ವ್ಯವಸ್ಥಾಪಕರಾಗಿ ಕೆಲಸ ಮಾಡಿದರು. ಇಂಗ್ಲಿಷ್ ಶಾಲೆಗಳ ಕ್ರಮಬದ್ಧ ಶ್ರೇಷ್ಠತೆಗೆ ಇವರ ಶ್ರಮ ಅಧಿಕವಾದದ್ದು. ಇದನ್ನು ತಿಳಿದ ಕಮಿಷನರ್ ಕಬ್ಬನ್‌ರವರು ಮೈಸೂರು ಸಂಸ್ಥಾನಕ್ಕೆ ಸೂಕ್ತವಾದ ಶೈಕ್ಷಣಿಕ ಯೋಜನೆಯನ್ನು ರೂಪಿಸಲು ಗ್ಯಾರೆಟ್‍ರವರನ್ನು ಕೇಳಿಕೊಂಡರು. ತನಗೆ ಕೊಟ್ಟ ಕೆಲಸವನ್ನು ನಿಷ್ಠೆಯಿಂದ ಮಾಡಿದರು ಇದರಿಂದ ಸಂಪ್ರೀತರಾದ ಕಬ್ಬನ್ ರವರು ಅವರನ್ನು ಶಿಕ್ಷಣಾಧಿಕಾರಿಯಾಗಿ ನೇಮಿಸಿದರು. ಕ್ರಿ.ಶ. 1856ರಲ್ಲಿ ಪಠ್ಯಗಳ ರಚನೆ ಮತ್ತು ಪ್ರಾಚೀನ ಕೃತಿಗಳ ಸಂಪಾದನೆಗಳೆರಡು ಗ್ಯಾರೆಟ್‌ರವರಿಂದ ನಡೆದವು.
ರೀವ್‌ನ ಇಂಗ್ಲಿಷ್-ಕನ್ನಡ ಶಬ್ಧಕೋಶವು ಶಾಲಾ ಮಕ್ಕಳಿಗೆ ಉಪಯುಕ್ತವಾದುದರಿಂದ ಅಂತ ಕೋಶವನ್ನು ಮಕ್ಕಳಿಗಾಗಿ ತಯಾರಿಸಲು ಹಲವು ವಿದೇಶಿ ವಿದ್ವಾಂಸ ಮಿಶನರಿಗಳು ಶ್ರಮಿಸಿದ್ದರು. ಅದರ ಸಾರಥ್ಯವನ್ನು ವೈಗಲ್ ವಹಿಸಿದರು. ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವಂತೆ ರೀವ್‌ನ ಕೃತಿಯ ಸಂಕ್ಷಿಪ್ತ ಆವೃತ್ತಿಯನ್ನು ಇವರೆ ರಚಿಸಿದ್ದು ಹದಿನಾರು ಸಾವಿರ ಶಬ್ಧಗಳಿಗೆ ಚುಟುಕಾಗಿ ಇಂಗ್ಲೀಷಿನ ಸಮನಾರ್ಥ ಕೊಡುವ ಈ ಕೋಶ ಉಪಯೋಗ ಮಾತ್ರವಲ್ಲ ಪ್ರಾಮಾಣ್ಯವೂ ಆಗಿದೆ.
'ಶಬ್ಧಮಣಿ ದರ್ಪಣ' ಕನ್ನಡದ ಪ್ರಮುಖ ವ್ಯಾಕರಣ ಗ್ರಂಥವಾಗಿದ್ದು ಅದರ ಉಪಯೋಗ ವಿಶೇಷವಾಗಿ ಬ್ರಿಟೀಷ್ ಅಧಿಕಾರಿಗಳಿಗೆ ಮತ್ತು ಮಿಷನರಿಗಳಿಗೆ ಬೇಕಿತ್ತು ಹಾಗಾಗಿ ಅವರು ಅದರ ಪ್ರತಿ ಮಾಡಿಕೊಂಡು ಅಭ್ಯಾಸ ಮಾಡುತ್ತಿದ್ದರು. ಇದನ್ನರಿತ ಗ್ಯಾರೆಟ್ ಕ್ರಿ.ಶ. 1868ರಲ್ಲಿ ಶಬ್ಧಮಣಿದರ್ಪಣವನ್ನು ಪ್ರಕಟಿಸಿದರು. ಇದೇ ಈ ಗ್ರಂಥದ ಪ್ರಥಮ ಆವೃತ್ತಿ ಎಂಬುದನ್ನು ಗಮನಿಸಬೇಕು.
ಇದಕ್ಕಿಂತಲೂ ಹೆಚ್ಚಿನ ಮಹತ್ವದ ಕೃತಿ ಎಂದರೆ ಈತನ ಬಹುಭಾಷಾ ಭಗವದ್ಗೀತೆ. ಕ್ರಿ.ಶ. 1846-48ರ ಅವಧಿಯಲ್ಲಿ ರಚಿತವಾದ ಈ ಕೃತಿಯ ಹೊಳಹು ಗ್ಯಾರಟ್‌ರವರದೇ. ಭಗವತ್‌ಗೀತೆಯ ಬಗ್ಗೆ ಅದುವರೆಗೆ ಇದ್ದ ಎಲ್ಲಾ ಸಾಧನಗಳನ್ನು ಬಳಸಿಕೊಂಡು ಅದನ್ನು ಅಭ್ಯಾಸ ಮಾಡುವವರಿಗೆ ಬಹು ಉಪಯೋಗಕ್ಕೆ ಬರುವಂತೆ ಒಳ್ಳೆಯ ಆವೃತ್ತಿಯನ್ನು ಹೊರತಂದುದರ ಜೊತೆಗೆ ಅದರ ಕನ್ನಡ ಅನುವಾದವನ್ನು ಅವರೆ ಸಿದ್ಧಪಡಿಸಿದರು ಮತ್ತು ಅದಷ್ಟನ್ನೇ ಪ್ರತ್ಯೇಕವಾಗಿ ಪುಸ್ತಕ ರೂಪದಲ್ಲಿ ಮರುವರ್ಷ ಪ್ರಕಟಿಸಿದರು. ತನ್ನ ಈ ಅನುವಾದವನ್ನು ತಳಹದಿಯನ್ನಾಗಿಟ್ಟುಕೊಂಡು ಇಂಗ್ಲಿಷ್-ಲ್ಯಾಟಿನ್‌ಗಳ ಅನುವಾದವನ್ನು ಅದಕ್ಕೆ ಸೇರಿಸಿದರು. ಇದಕ್ಕೆ ಮುನ್ನುಡಿ, ವಿಮರ್ಶೆಗಳನ್ನು ಸೇರಿಸಿದಲ್ಲದೆ; ವಾರನ್ ಹೇಸ್ಟಿಂಗ್ಸ್ ಮತ್ತು ಬ್ಯಾರನ್ ಹಂಬೊಲ್ಟ್ ಅವರ ಜರ್ಮನ್ ಅನುವಾದವನ್ನು ಅದಕ್ಕೆ ಸೇರಿಸಿ ಇಡೀ ಜಗತ್ತಿನಲ್ಲಿಯೇ ಒಂದು ವಿಶಿಷ್ಟ ಕೃತಿಯನ್ನಾಗಿ ಮಾಡಿದರು.
'ಕ್ಲಾಸಿಕಲ್ ಡಿಕ್ಷನರಿ ಆಫ್ ಇಂಡಿಯಾ' ಇವರ ಮತ್ತೊಂದು ಮಹತ್ವ ಪೂರ್ಣ ಕೃತಿ. ಸುಪ್ರಸಿದ್ಧವೆನಿಸಿದ ಪುರಾಣನಾಮ ಚೂಡಾಮಣಿಯ ಮಾದರಿಯಲ್ಲಿ ಈ ಹಿಂದೂ ನಾಮಕೋಶವನ್ನು ರಚಿಸಿದರು. ಅವರ ಹಳಗನ್ನಡ ಕಾವ್ಯಗಳ ಪ್ರಸಂಗ ಇಲ್ಲಿ ಹೆಚ್ಚಾಗಿ ಪ್ರಯೋಜನಕ್ಕೆ ಬಂದಿದೆ ಪೌರಾಣಿಕ ವ್ಯಕ್ತಿ, ಘಟನೆಗಳ ಪ್ರಾಥಮಿಕ ಮಾಹಿತಿಯನ್ನು ಕನ್ನಡ ಕಾವ್ಯಗಳಿಂದಲೇ ಅವರು ಆಯ್ದುಕೊಂಡಿರುವುದನ್ನು ನೋಡಿದರೆ ಸಾಕು ಅವರ ವಿದ್ವತ್ತು ತಿಳಿಯುತ್ತದೆ. 'ಬಹುಭಾಷಾ ಭಗವತ್‌ಗೀತೆ' ಮತ್ತು 'ಕ್ಲಾಸಿಕಲ್ ಡಿಕ್ಷನರಿ ಆಫ್ ಇಂಡಿಯಾ' ಕೃತಿಗಳೆರಡು ಜಾನ್ ಗ್ಯಾರೆಟ್‍ರವರಿಗೆ ಅಖಿಲ ಭಾರತ ಮನ್ನಣೆಯನ್ನು ತಂದುಕೊಟ್ಟಿವೆ.
ಜೊತೆಗೆ ಗ್ಯಾರೆಟ್ ಮೈಸೂರು ಸಂಸ್ಥಾನದ ಶಿಕ್ಷಣಾಧಿಕಾರಿಯಾಗಿ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸುವ ಸಲುವಾಗಿ ಇಂಡಿಯಾ-ಬ್ರಿಟನ್ ಕುರಿತ ಅಧಿಕೃತ ಚರಿತ್ರೆಗಳನ್ನು ಇಂಗ್ಲಿಷ್‌ನಲ್ಲಿ ರಚಿಸಿದರು. ಅವು ಕ್ರಮೇಣ ಕನ್ನಡಕ್ಕೆ ಅನುವಾದಗೊಂಡು ಹಲವಾರು ದಶಕಗಳ ಕಾಲ ಪಠ್ಯ ಪುಸ್ತಕಗಳಾಗಿದ್ದವು. ಕ್ರಿ.ಶ. 1865 ರಲ್ಲಿ ಪಂಚತಂತ್ರವನ್ನು ಇವರು ತಿಳಿಯಾದ ಗದ್ಯರೂಪದಲ್ಲಿ ಹೊರತಂದು ಪಠ್ಯವಾಗಿಸಿದರು. ಕ್ರಿ.ಶ. 1866ರಲ್ಲಿ ಬಿ. ರಾಮರಾವ್ ಬರೆದ ರೇಖಾಗಣಿತವನ್ನು ಸಂಪಾದಿಸಿ ಶಿಕ್ಷಣ ಇಲಾಖೆಯ ವತಿಯಿಂದ ಪ್ರಕಟಿಸಿದರು. ಬಾಸೆಲ್ ಮಿಷನ್ ಸಂಸ್ಥೆಯ ವುರ್ತನ 'ಪ್ರಾಕ್ಕಾವ್ಯ ಮಾಲಿಕೆ' ಎಂಬ ಕವನ ಸಂಕಲನವನ್ನು ಬೆಂಗಳೂರಿನ ಸರ್ಕಾರಿ ಅಚ್ಚು ಕೂಟದಲ್ಲಿ ಮುದ್ರಿಸಲು ನೆರವಾದರು. ಅರುಣೋದಯ ಕಾಲದ ಕನ್ನಡ ಸಾಹಿತ್ಯವಾರಿಧಿಗೆ ವಿದೇಶಿ ವಿದ್ವಾಂಸರಾಗಿ ದುಡಿದ ಹಲವರಲ್ಲಿ ಜಾನ್ ಗ್ಯಾರಟ್‌ರವರದು ಪ್ರಮುಖ ಹೆಸರು.

3. ಅಬೆ ದ್ಯುಬ್ವಾ :
ಕ್ರಿ.ಶ. 18ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಪ್ರಚಲಿತವಿದ್ದಂತಹ ಜನಪದ ಜೀವನವನ್ನು ಕುತೂಹಲಕ್ಕಾಗಿ, ತೆರೆದ ಕಣ್ಣುಗಳಿಂದ ಸಮಗ್ರವಾಗಿ ಅಧ್ಯಯನ ಮಾಡಿ ದಾಖಲಿಸಿದ ಮತ್ತೊಬ್ಬ ವಿದೇಶಿ ಕ್ರೈಸ್ತ ಸಂಶೋಧಕ ಮಹನೀಯರೆಂದರೆ ಫ್ರಾನ್ಸ್ ದೇಶದ ಪ್ಯಾರಿಸ್ ಮಿಷನ್‌ಗೆ ಸೇರಿದ ವಂದನೀಯ ಸ್ವಾಮಿ ಅಬೆದ್ಯುಬ್ವಾ. ಸುಮಾರು ಮೂವತ್ತು ವರ್ಷಗಳ ಕಾಲ ಭಾರತೀಯ ಸನ್ಯಾಸಿಯಂತೆ ತಲೆಯ ಮೇಲೆ ರುಮಾಲುಪೇಟ ಮತ್ತು ಉದ್ದನೆಯ ನಿಲುವಂಗಿ ಧರಿಸಿ, ಕೈಯಲ್ಲಿ ಉದ್ದನೆಯ ಕೋಲನ್ನು ಹಿಡಿದು ನೀಳಗಡ್ಡದ ಮುಖ ಹೊತ್ತು, ರಾಜ ಠೀವಿಯಿಂದ ಕರ್ನಾಟಕದ ಹಳೇ ಮೈಸೂರು ಪ್ರಾಂತ್ಯವನ್ನು ಸುತ್ತಾಡಿ ಕ್ರೈಸ್ತತ್ವವನ್ನು ಪ್ರಾಮಾಣಿಕವಾಗಿ ಪ್ರದರ್ಶಿಸಿ ಎಲ್ಲರಿಂದ 'ದೊಡ್ಡ ಸ್ವಾಮಿಯವರು' ಎಂದು ಹೊಗಳಿಸಿಕೊಂಡರು.
ಇವರು ಕ್ರಿ.ಶ. 1806ರಲ್ಲಿ ತಾವು ಸಂಶೋಧಿಸಿ ಸಂಗ್ರಹಿಸಿದ ಅನೇಕ ಮಾಹಿತಿಗಳನ್ನು ಕಲೆಹಾಕಿ 'ಹಿಂದೂ ಮ್ಯಾನರ್ಸ್, ಕಸ್ಟಮ್ಸ್ ಅಂಡ್ ಸೆರೆಮೊನಿಸ್' (Hindu Manners, Customs and Ceremonies) ಎಂಬ ಬೃಹತ್ ಗ್ರಂಥವನ್ನು ತಮ್ಮ ಮಾತೃಭಾಷೆಯಾದ ಫ್ರೆಂಚ್‌ನಲ್ಲಿ ರಚಿಸಿ ಪ್ರಕಟಿಸಿದರು. ಕ್ರಿ.ಶ. 1816ರಲ್ಲಿ ಅದರ ಇಂಗ್ಲಿಷ್ ಅನುವಾದ ಪ್ರಕಟಗೊಂಡಿತು. ಭಾರತೀಯ ಜಾನಪದ ಜೀವನ ಅದರಲ್ಲೂ ವಿಶೇಷವಾಗಿ ಕರ್ನಾಟಕದ ಜಾನಪದ ಜೀವನಕ್ಕೆ ಹಿಡಿದ ರನ್ನಗನ್ನಡಿಯಂತಿದೆ ಈ ಗ್ರಂಥ. ಅವರ ಬದುಕಿನ ನಡುವೆ ನಿಂತು ಅವರುಗಳ ಬದುಕಿನ ನೈಜ ಮಾಹಿತಿಗಳ ಭಂಡಾರವೇ ಈ ಗ್ರಂಥದಲ್ಲಿ ಅಡಗಿರುವುದರಿಂದ ಈ ಕೃತಿಗೆ ಸಾರ್ವಕಾಲಿಕ ಮೌಲ್ಯ ದೊರೆತಿದೆ. ಈ ಗ್ರಂಥದ ಒಂದು ಪಾಲು ಭಾರತೀಯ ಗ್ರಂಥ ಸಮುದಾಯ ಮತ್ತು ಲಿಖಿತ ದಾಖಲೆಗಳ ಆಧಾರದಿಂದ ರಚಿತವಾಗಿದ್ದು, ಮಿಕ್ಕ ಮೂರು ಪಾಲು ಇಲ್ಲಿನ ಸಮಾಜದ ಎಲ್ಲ ವರ್ಗಗಳ ಜನರೊಂದಿಗೆ ಅವರು ಬೆರೆತು ಅವರ ಬಾಯಿಯಿಂದ ನೇರವಾಗಿ ಸಂಗ್ರಹಿಸಿದ ಮಾಹಿತಿಗಳಾಗಿವೆ ಎಂದು ಅಬೆದ್ಯುಬ್ವಾ ನುಡಿದಿರುವುದು ಈ ಕೃತಿಯ ಮಹತ್ವಕ್ಕೆ ಸಾಕ್ಷೀಭೂತವಾಗಿದೆ.

*********

ಕವಿದನಿ

ಕಾಂಕ್ರಿಟ್ಟು
-ಡೇವಿಡ್ ಕುಮಾರ್. ಎ

  ಬಾಗಿಲಲಿ, ಹೊಸ್ತಿಲಲಿ
ಅಟ್ಟಿಯಲಿ, ಬೀದಿಯಲಿ
ರಸ್ತೆ, ರಹದಾರಿಯಲಿ
ಕಾಂಕ್ರಿಟ್ಟಿನ ಎಡವಟ್ಟು

ಅಂಬೆಗಾಲೂ ಅಂಗಲಾಚಿದೆ
ಮಣ್ಣಿನ ನುಣ್ಣನೆಯ ಮುತ್ತಿಗೆ
ಪಾದಗಳಿಗೂ ವಿರಹವಿದೆ
ಭೂ ಸ್ಪರ್ಶವ ನೆನೆದು

ಬರಗಾಲದ ಕಾಲುದಾರಿಯಿಲಿ
ಹಸುರಿನ ಅನುಪಸ್ಥಿತಿ,
ಕಾಂಕ್ರಿಟ್ಟಿನ ಅಂಗಳದಲಿ
ಬಿಕ್ಕಳಿಸುವುದು ರಂಗವಲ್ಲಿ !

`ಅಭಿವೃದ್ಧಿ' ಮಾಯಾ ಗಿರಣಿಯಲಿ
ಕಾಂಕ್ರಿಟ್ಟಿನ ರಾಶಿ ಹಿಟ್ಟು
ಜೀವರಾಶಿಗಳ ಸುಟ್ಟು
ಕಿವಿಯ ಮೇಲೆ ಹೂವಿಟ್ಟು !



ಸಾಂಭ್ರಮಿಕ ಪೂಜಾವಿಧಿ (ಸಾಲೆಮ್ನಿಟಿ), ಹಬ್ಬ/ ಉತ್ಸವ (ಫೀಸ್ಟ್) ಮತ್ತು ಸ್ಮರಣೆ (ಮೆಮೊರಿಯಲ್)ಗಳಲ್ಲಿನ ವ್ಯತ್ಯಾಸಗಳೇನು? - ನಂದಗಾವ್

ಕಥೋಲಿಕ ಧರ್ಮಸಭೆಯು (ಚರ್ಚು), ಮಾನವಕೋಟಿಯ ಬಿಡುಗಡೆ, ಮುಕ್ತಿಯ ರಹಸ್ಯ ಅಂದರೆ ದೈವಯೋಜನೆಯಲ್ಲಿ ಪ್ರಮುಖವಾಗಿರುವ ಯೇಸುಸ್ವಾಮಿಯ ಜೀವಿತದ ವಿವಿಧ ಘಟನಾವಳಿಗಳನ್ನು ಆಧರಿಸಿ ಹಬ್ಬಹರಿದಿನಗಳ ಪೂಜಾವಿಧಿಯ ದಿನದರ್ಶಿ(ಪೂಜಾ ಪಂಚಾಂಗ)ವನ್ನು ನಿಗದಿ(ಸಿದ್ಧ) ಮಾಡುತ್ತದೆ. 
   ಇಡೀ ವರ್ಷದ ಪೂಜಾವಿಧಿಯ ಪೂಜಾ ಪಂಚಾಂಗದಲ್ಲಿ ಯೇಸುಸ್ವಾಮಿಯ ಸಂಪೂರ್ಣ ದೈವಯೋಜನೆಯನ್ನು ಕಥೋಲಿಕ ಧರ್ಮಸಭೆಯು ಸಂಭ್ರಮ, ಸಡಗರದಿಂದ ಆಚರಿಸುತ್ತದೆ. ದೈವ ಸ್ವರೂಪಿಯಾದ ಸುತ ಯೇಸುಸ್ವಾಮಿಯ ಹುಟ್ಟಿನಿಂದ ಆತನ ಶಿಲುಬೆ ಮರಣ, ಪುನರುತ್ಥಾನ, ಸ್ವರ್ಗಾರೋಹಣ, ಪಂಚಾಶತ್ತಮ (ಪವಿತ್ರಾತ್ಮರು ಶಿಷ್ಯರ ಮೇಲೆ ಇಳಿದುಬಂದ ದಿನ), ಇನ್ನಿತರ ಹಲವಾರು ಘಟನಾವಳಿಗಳ ಸ್ಮರಣೆಯ ಆಚರಣೆಗಳು, ಧರ್ಮಸಭೆಯ ಸ್ಥಾಪನೆ ಹಾಗೂ ಅಂತಿಮ ನ್ಯಾಯನಿರ್ಣಯದ ದಿನ - ಕ್ರಿಸ್ತರಾಜರ ಎರಡನೇ ಆಗಮನದ ನಿರೀಕ್ಷೆಯ ಸಾಂಭ್ರಮಿಕ ಪೂಜಾವಿಧಿಗಳು ಪಂಚಾಂಗದಲ್ಲಿ ಅಡಕವಾಗಿರುತ್ತವೆ.
   ಬಹುಮುಖ್ಯವಾಗಿ ಪ್ರತಿಭಾನುವಾರವೂ, ಪ್ರಭು ಯೇಸುಸ್ವಾಮಿಯು ಪುನರುತ್ಥಾನರಾಗಿ ಪಾಪ ಮತ್ತು ಸಾವಿನ ಮೇಲೆ ಗೆಲುವು ಸಾಧಿಸಿದ್ದನ್ನು ಸ್ಮರಿಸಿಕೊಂಡು ಸಂಭ್ರಮಿಸಿ ಪೂಜಾವಿಧಿಗಳನ್ನು ನಡೆಸಲಾಗುತ್ತದೆ. ಮುಕ್ತಿಯ ರಹಸ್ಯ ಅಂದರೆ ದೈವ ಯೋಜನೆಯಲ್ಲಿನ, ಯೇಸುಸ್ವಾಮಿಯ ತಾಯಿ - ಮಾತೆ ಮರಿಯಳ ಪಾಲುದಾರಿಕೆಯ ವೈಶಿಷ್ಟ್ಯವನ್ನು ಗುರುತಿಸಿ, ಕಥೋಲಿಕ ಧರ್ಮಸಭೆಯು ಅವಳಿಗೆ ವಿಶೇಷ ರೀತಿಯಿಂದ ಗೌರವ ಸಲ್ಲಿಸಲು ಕಥೋಲಿಕ ಪಂಚಾಂಗದಲ್ಲಿ ಹಲವಾರು ದಿನಗಳನ್ನು ನಿಗದಿ ಪಡಿಸಿದೆ.
   ಇದಲ್ಲದೇ ಕಥೋಲಿಕ ಧರ್ಮಸಭೆಯು, ಇಹಲೋಕದಲ್ಲಿ ಸಂತರ ಕಳೆದ ಕೊನೆಯ ದಿನವನ್ನು ಅವರು ಸ್ವರ್ಗಕ್ಕೆ ಸೇರಿದ ದಿನವೆಂದು ಗುರುತಿಸಿ, ಅವರ ಸ್ಮರಣೆಯಲ್ಲಿ ಸಂಭ್ರಮಾಚರಣೆಗಾಗಿ ಹಲವಾರು ದಿನಗಳನ್ನು ಗುರುತಿಸಿದೆ. ಸಂತರುಗಳ ಸ್ಮರಣೆಯಿಂದ, ಸಂತರ ನಿಸ್ವಾರ್ಥ ಪಾವಿತ್ರ್ಯದ ಬದುಕಿನ ಕ್ಷಣಗಳಿಗೆ ವಿಶ್ವಾಸಿಕರು ತಮ್ಮನ್ನು ತಾವು ತೆರೆದುಕೊಳ್ಳುವರು ಎಂಬ ಆಶಯವನ್ನು ಧರ್ಮಸಭೆ ಹೊಂದಿದೆ. ಆಯಾ ತಿಂಗಳಲ್ಲಿ ಸಂತರ ದಿನಗಳನ್ನು ಸಾಮಾನ್ಯವಾಗಿ ಅವರು ಹುತಾತ್ಮರಾದ, ಹತ್ಯೆಗೊಂಡ (ರಕ್ತಸಾಕ್ಷಿ) ದಿನಗಳಂದೇ ನಿರ್ಧರಿಸಲಾಗಿತ್ತದೆ. ಕೆಲವೊಮ್ಮೆ ಇದಕ್ಕೆ ಅಪವಾದಗಳೂ ಉಂಟು.
  ಸಾಂಭ್ರಮಿಕ ಪೂಜಾವಿಧಿಗಳನ್ನು ಅತ್ಯಂತ ಮಹತ್ವದ ದಿನಗಳಂದು ಆಚರಿಸಲಾಗುತ್ತದೆ. ಪ್ರತಿಯೊಂದು ಸಾಂಭ್ರಮಿಕ ಪುಜಾವಿಧಿಯು ಹಬ್ಬದ ಹಿಂದಿನ ದಿನದ ಪ್ರಾರ್ಥನೆಗಳೊಂದಿಗೆ ಆರಂಭವಾಗಿತ್ತದೆ. ಹಲವಾರು ಸಾಂಭ್ರಮಿಕ ಪೂಜಾವಿಧಿಗಳು ಅವುಗಳದೇ ಆದ ಜಾಗರಣೆಯ ದಿವ್ಯಬಲಿಪೂಜೆ - ಪ್ರಭು ಭೋಜನದ ವಿಧಿಯೊಂದಿಗೆ ಸಂಪನ್ನಗೊಳ್ಳುತ್ತದೆ. ಆ ದಿನಗಳಂದು ಸ್ತೋತ್ರಗೀತೆ (ಗ್ಲೋರಿಯಾ) ಮತ್ತು ಕ್ರೈಸ್ತ ಧರ್ಮದ ವಿಶ್ವಾಸ ಪ್ರಮಾಣ (ಕ್ರೀಡ್)ಗಳನ್ನು ಪಠಿಸಲಾಗುತ್ತದೆ.
 ಭಾನುವಾರ ಮತ್ತು ಸಾಲದ ಹಬ್ಬದ ಪವಿತ್ರ ದಿನಗಳಲ್ಲಿ (ಜನವರಿ 1 - ದೇವಮಾತೆ ಮರಿಯಮ್ಮನವರ ಮಹೋತ್ಸವ - ಕ್ರಿಸ್ತ ಜಯಂತಿಯ ಅಷ್ಟಮ ದಿನ, ಈಸ್ಟರ್ ಭಾನುವಾರದ ನಲವತ್ತನೇ ದಿನ- ಸ್ವರ್ಗಾರೋಹಣದ ಗುರುವಾರ, ಆಗಸ್ಟ್ 15 - ಪೂಜ್ಯ ಕನ್ಯಾಮರಿಯಮ್ಮನವರ ಸ್ವರ್ಗಸ್ವೀಕಾರ/ ಸ್ವರ್ಗಾರೋಹಣ ಮಹೋತ್ಸವ, ನವೆಂಬರ್ 1 - ಸಕಲ ಸಂತರ ಮಹೋತ್ಸವ, ಡಿಸೆಂಬರ್ 8 - ಪರಿಶುದ್ಧ ಕನ್ಯಾಮರಿಯಮ್ಮನವರ ಅಮಲೋದ್ಭವ ಮಹೋತ್ಸವ, ಡಿಸೆಂಬರ್ 25 - ಕ್ರಿಸ್ತ ಜಯಂತಿ, ಪ್ರಭುವಿನ ಜನೋತ್ಸವದ ಹಬ್ಬ) ಸದಾಕಾಲ ಸಾಂಭ್ರಮಿಕ ಪೂಜಾವಿಧಿಗಳನ್ನು ನಡೆಸಿಕೊಡಲಾಗುತ್ತದೆ. 
 ಇವು ದೊಡ್ಡ ಹಬ್ಬಗಳ ದಿನಗಳು, ಮಹೋತ್ಸವದ ದಿನಗಳು. ಈ ಪಟ್ಟಿಯಲ್ಲಿ, ಮಾರ್ಚ 19 - ಮರಿಯಮ್ಮನವರ ಪತಿ ಸಂತ ಜೋಸೆಫ್‍ರ ಮಹೋತ್ಸವ, ಮಾರ್ಚ್ 25- ಮಂಗಳವಾರ್ತೆಯ ಮಹೋತ್ಸವ, ಪಂಚಾಶತ್ತಮ ದಿನದಿಂದ 19ನೇ ದಿನಕ್ಕೆ ಬರುವ ಯೇಸುಸ್ವಾಮಿಯ ಪವಿತ್ರ ಹೃದಯದ ಮಹೋತ್ಸವ, ಜೂನ್ 24- ಸಂತ ಸ್ನಾನಿಕ ಯೋವಾನ್ನರ ಜಯಂತಿ ಮಹೋತ್ಸವ, ಜೂನ್ 29 - ಪ್ರೇಷಿತರಾದ ಸಂತ ಪೇತ್ರ ಮತ್ತು ಪೌಲರ ಮಹೋತ್ಸವ, ಜುಲೈ 3- ಪ್ರೇಷಿತ ಸಂತ ತೋಮಾಸ್‍ರ ಮಹೋತ್ಸವ, ಡಿಸೆಂಬರ್ 3 ಭಾರತದ ಪಾಲಕ ಸಂತ ಫ್ರಾನ್ಸಿಸ್ ಕ್ಷೇವಿಯರ್‌ರ  ಮಹೋತ್ಸವಗಳು ಸೇರುತ್ತವೆ.

 ಇನ್ನು ಎರಡನೇ ಹಂತದಲ್ಲಿ ಹಬ್ಬದ ದಿನಗಳನ್ನು ಕಥೋಲಿಕ ಪಂಚಾಂಗದ ಪ್ರಕಾರ ನಿಗದಿತ ದಿನಗಳಂದೇ ಆಚರಿಸಲಾಗುವುದು. ಈ ಹಬ್ಬಗಳಿಗೆ ಹಿಂದಿನ ದಿನದ ಸಂಜೆ ಪ್ರಾರ್ಥನೆಗಳ ಅಥವಾ ಜಾಗರಣೆಯ ಪ್ರಭು ಭೋಜನದ ಜಂಜಾಟವಿರುವುದಿಲ್ಲ. ಪ್ರಭುವಿನ ಹಬ್ಬಗಳಲ್ಲಿ ಇವಕ್ಕೆ ವಿನಾಯತಿಯೂ ಉಂಟು. ಉದಾಹರಣೆಗೆ, ದೇವಾಲಯದಲ್ಲಿ ಯೇಸುಬಾಲರ ಸಮರ್ಪಣೆಯ ಹಬ್ಬದಲ್ಲಿ ಅದರದೇ ಆದ ಹಿಂದಿನ ದಿನ ಸಂಜೆಯ ಪ್ರಾರ್ಥನೆಗಳ ಸಲ್ಲಿಕೆಯಾಗುತ್ತದೆ. ಆ ದಿನಗಳಲ್ಲಿ ಸ್ತೋತ್ರಗೀತೆಗಳ ಹಾಡುಗಾರಿಕೆ ಇದ್ದರೂ ಕ್ರೈಸ್ತ ಧರ್ಮದ ವಿಶ್ವಾಸ ಪ್ರಮಾಣವನ್ನು ಪಠಿಸುವುದಿಲ್ಲ.

ಕರ್ನಾಟಕದಲ್ಲಿ ಸದ್ಯಕ್ಕೆ ಜಾರಿಯಲ್ಲಿರುವ ಪೂಜಾ ಪಂಚಾಂಗದ ಪ್ರಕಾರ, ಡಿಸೆಂಬರ್ 26- ಪ್ರಥಮ ರಕ್ತಸಾಕ್ಷಿ ಸಂತ ಸ್ತೇಫನರ ಹಬ್ಬ, ಡಿಸೆಂಬರ್ 27- ಪ್ರೇಷಿತ ಮತ್ತು ಶುಭಸಂದೇಶಕರ್ತ ಸಂತ ಯೊವಾನ್ನರ ಹಬ್ಬ, ಪ್ರೇಷಿತರಾದ ಸಂತ ಫಿಲಿಪ್ ಮತ್ತು ಸಂತ ಯಕೋಬರ ಹಬ್ಬ, ಮೇ 14- ಪ್ರೇಷಿತ ಸಂತ ಮತ್ತೀಯರ ಹಬ್ಬ, ಜೂನ್ 11- ಪ್ರೇಷಿತ ಸಂತ ಬಾರ್ನನಬರ ಹಬ್ಬ, ಜುಲೈ 25- ಪ್ರೇಷಿತ ಸಂತ ಯಕೋಬರ ಹಬ್ಬ, ಸೆಪ್ಟೆಂಬರ 31 - ಪ್ರೇಷಿತ ಮತ್ತು ಶುಭಸಂದೇಶಕರ್ತ ಸಂತ ಮತ್ತಾಯ, ಅಕ್ಟೋಬರ್ 18- ಶುಭಸಂದೇಶಕರ್ತ ಸಂತ ಲೂಕರ ಹಬ್ಬ, ಪ್ರೇಷಿತರಾದ ಸಂತ ಸಿಮೋನ್ ಮತ್ತ ಸಂತ ಯೂದರ ಹಬ್ಬ ಮತ್ತು ನವೆಂಬರ್ 30 ಸಂತ ಪ್ರೇಷಿತ ಅಂದ್ರೇಯರ ಹಬ್ಬ- ಮೊದಲಾದವು ಸಂತರ ಸ್ಮರಣೆ ಅಲ್ಲ ಸಂತರ ಹಬ್ಬಗಳು.

ಮೂರನೇ ಹಂತದಲ್ಲಿ ಸ್ಮರಣೆಗಳು ಬರುತ್ತವೆ. ಈ ಸ್ಮರಣೆಯಲ್ಲಿ ಕೆಲವು ಕಡ್ಡಾಯವಾಗಿವೆ ಮತ್ತೆ ಕೆಲವು ಐಚ್ಛಿಕವೂ ಆಗಿವೆ. ಸ್ಮರಣೆಗಳು ಒಬ್ಬ ಸಂತನ ಅಥವಾ ಸಂತರುಗಳ ಸ್ಮರಣೆಯ ದಿನಗಳಾಗಿರುತ್ತವೆ. ಸಾಲದ ಅಂದರೆ ಕಡ್ಡಾಯದ ಸಂತರ ಸ್ಮರಣೆಗಳನ್ನು ಅಗತ್ಯವಾಗಿ ಆಚರಿಸಬೇಕು. ಇನ್ನು ಐಚ್ಛಿಕ ಆಗಿರುವ ಸಂತರುಗಳ ಸ್ಮರಣೆಯನ್ನು ಆಚರಿಸದೇ ಬಿಟ್ಟರೂ ನಡೆಯುತ್ತದೆ. ಉದಾಹರಣೆಗೆ, ಜನವರಿ 31ರಂದು ಆಚರಿಸಲಾಗುವ ಧರ್ಮಗುರು ಸಂತ ಜಾನ್ ಬಾಸ್ಕೊ ಅವರ ಸ್ಮರಣೆ ಕಡ್ಡಾಯದ ಲೆಕ್ಕದಲ್ಲಿ ಬಂದರೆ, ಫೆಬ್ರವರಿ 3ರಂದು ನಿಗದಿಪಡಿಸಲಾದ ಸಂತ ಬ್ಲೇಸ್‍ರ ಸ್ಮರಣೆಯ ಆಚರಣೆ ಐಚ್ಛಿಕವಾಗಿದೆ. ವಿಶ್ವಮಾನ್ಯತೆ ಹೊಂದಿರುವ ಸಂತರ ಸ್ಮರಣೆಯ ದಿನಗಳನ್ನು ಸಾರ್ವತ್ರಿಕ ಕಥೋಲಿಕ ಪಂಚಾಂಗದಲ್ಲಿ ನಮೂದಿಸುವ ಕಥೋಲಿಕ ಧರ್ಮಸಭೆಯು ಅವನ್ನು ಸಾರ್ವತ್ರಿಕವಾಗಿ ಆಚರಿಸುವ ಬದ್ಧತೆಯನ್ನು ಪ್ರದರ್ಶಿಸುತ್ತದೆ.
ಆಯಾ ಗುಡಿಗಳು, ದೇಶಗಳು ಅಥವಾ ಧಾರ್ಮಿಕ ಸಮುದಾಯಗಳು ತಮ್ಮ ಅಗತ್ಯಗಳಿಗೆ ಪೂರಕವಾಗಿ ವಿಶೇಷ ಮನ್ನಣೆಯಿಂದ ಸಂತರ ಸ್ಮರಣೆಯನ್ನು ಹಬ್ಬವೆಂದು ಆಚರಿಸಬಹುದಾಗಿದೆ. ಉದಾಹರಣೆಗೆ, ಧರ್ಮಕ್ಷೇತ್ರದ ಪಾಲಕ ಸಂತನ ಗೌರವಾರ್ಥದ ಸ್ಮರಣೆಯನ್ನು ಹಬ್ಬವೆಂದು ಗುರುತಿಸಬಹುದು.
ಇದಲ್ಲದೇ, ಸಂತರ ಸ್ಮರಣೆಯ ಆಚರಣೆಯು ಆಯಾ ಹಂಗಾಮಿನ ಪಂಚಾಂಗವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಕಡ್ಡಾಯವೆಂದು ಗುರುತಿಸಿ ಕಡ್ಡಾಯವಾಗಿ ಆಚರಿಸಲಾಗುವ ಸಂತರ ಸ್ಮರಣೆಗಳು ತಪಸ್ಸು ಕಾಲದ ಸಂದರ್ಭದಲ್ಲಿ ಬಂದಾಗ, ಅವನ್ನು ಐಚ್ಛಿಕ ಸ್ಮರಣೆಯ ದಿನಗಳೆಂದು ಪರಿಗಣಿಸಲಾಗುತ್ತದೆ. 
ಧರ್ಮಸಭೆಯ ಹಕ್ಕಿನ ದಿನಗಳ ಸಂದರ್ಭದಲ್ಲಿ (ತಪಸ್ಸು ಕಾಲ ಮತ್ತು ಡಿಸೆಂಬರ್ 17ರಿಂದ 31ರ ವರಗೆ). ಪ್ರಭು ಭೋಜನದ ಮೊದಲಿನ ಪ್ರಾರ್ಥನೆಗಳ ಬದಲು ಸಂತರ ಪ್ರಾರ್ಥನೆಗಳನ್ನು ಪಠಿಸಬಹುದು. ಡಿಸೆಂಬರ್ ಮುಂಚಿನ ಆಗಮನ ಕಾಲದ, ಕ್ರಿಸ್ಮಸ್ ಹಂಗಾಮು, ಈಸ್ಟರ್ ಹಂಗಾಮು ಮತ್ತು ಸಾಮಾನ್ಯ ಕಾಲದಲ್ಲಿ ಭಾನುವಾರ ಹೊರತುಪಡಿಸಿದ ದಿನಗಳಲ್ಲಿ ಸಂತರ ನಾಮದಲ್ಲಿ, ಶುಭಸಂದೇಶ ಸಾರುವುದಕ್ಕಾಗಿ ಹಾಗೂ ವಿಶೇಷ ಉದ್ದೇಶಗಳಿಗಾಗಿ ಯಾಜಕರು ಪ್ರಭು ಭೋಜನದ ಆಚರಣೆಯನ್ನು ಕೈಗೊಳ್ಳಬಹುದು. ಶನಿವಾರಗಳಂದು, ಅಂದು ಕಡ್ಡಾಯದ ಸಂತರುಗಳ ಸ್ಮರಣೆ ಇಲ್ಲದಿದ್ದ ಸಂದರ್ಭದಲ್ಲಿ ಯಾಜಕರು ಆಶೀರ್ವದಿತ ತಾಯಿ ಮರಿಯಳ ಪ್ರಭು ಭೋಜನ ಆಚರಿಸಬಹುದಾಗಿದೆ.

*****

ಸಾಲ - - ಫಾ ಮೆಲ್ವಿನ್ ಪಿಂಟೊ ಯೇ.ಸ

ಬೀರನ ಅಪ್ಪನಂತೆ ತನ್ನ ಅಪ್ಪನೂ ಆತ್ಮಹತ್ಯೆ ಮಾಡಬಹುದೆಂದು ಶಿವು ಕನಸಿನಲ್ಲಿಯೂ ಎನಿಸಿರಲಿಲ್ಲ. ಬೀರನ ಅಪ್ಪ ಅದೇನೋ ಮೂರು ಲಕ್ಷ ಸಾಲ ಮಾಡಿದ್ದರಂತೆ. ಬೀರ ಹೇಳುತ್ತಿದ್ದ, ಬಡ್ಡಿಯೇ ತಿಂಗಳಿಗೆ ನಾಲ್ಕು-ಐದು ಸಾವಿರ ಆಗುತ್ತಿತ್ತು ಅಂತ. ಮೇಲಾಗಿ ಬೀರನ ಅಪ್ಪ ತುಂಬಾ ಕುಡಿಯುತ್ತಿದ್ದ. ದಿನಾ ಸಂಜೆ ಕುಡಿದು ಬಂದು ಬೀರನ ತಾಯಿ ಜೊತೆ ಜಗಳವಾಡುತ್ತಿದ್ದರಂತೆ. ಹೀಗೆ ಒಂದು ದಿನ ಸಾರಾಯಿಯ ಬದಲು ವಿಷ ಕುಡಿದು ಆತ ಆತ್ಮಹತ್ಯೆ ಮಾಡಿದ್ದ.
ಆದರೆ ತನ್ನ ಅಪ್ಪನೂ ಹಾಗೆಯೇ ಆತ್ಮಹತ್ಯೆ ಮಾಡಿಕೊಳ್ಳಬಹುದೆಂದು ಶಿವು ಯೋಚಿಸಿರಲೇ ಇಲ್ಲ. ಆತನ ಅಪ್ಪನೂ ಸಾಹುಕಾರನಿಂದ ಒಂದೂವರೆ ಲಕ್ಷ ಸಾಲ ತಗೊಂಡಿದ್ದಾನೆ ಅಂತ ಅಮ್ಮ ಹೇಳುತ್ತಿದ್ದಳು.
ಮಾಡಿದ ಸಾಲ ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಹೋಗುವುದನ್ನು ಕಂಡು ಶಿವುಗೆ ನಿಜಕ್ಕೂ ತುಂಬಾ ಬೇಸರವಾಗುತ್ತಿತ್ತು. ಬೀರನ ಅಪ್ಪ, ಶಂಕರನ ಮಾವ, ದುರ್ಗಿಯ ಚಿಕ್ಕಪ್ಪ, ಶಿವಲಿಂಗಿಯ ಅಪ್ಪ ಹೀಗೆ ಆತ್ಮಹತ್ಯೆ ಮಾಡಿದವರ ಸಂಖ್ಯೆ ಬೆಳೆಯುತ್ತಲೇ ಇತ್ತು. ಆ ಸಂಖ್ಯೆಗೆ ಇಂದು ತನ್ನ ಅಪ್ಪನ ಸಂಖ್ಯೆ ಕೂಡ ಸೇರಬಹುದು ಅಂತ ಶಿವುಗೆ ಖಂಡಿತ ಅನಿಸಿರಲಿಲ್ಲ.
ಅವನ ಚಿಕ್ಕ ಗುಡಿಸಲಿನಂತಿದ್ದ ಮನೆಯಲ್ಲಿ ಒಂದು ಮಧ್ಯದ ಕೋಣೆ, ಇನ್ನೊಂದು ಅಡುಗೆ ಕೋಣೆ. ಮಧ್ಯದ ಕೋಣೆಯಲ್ಲಿ ನಡುವೆ ಚಾಪೆಯ ಮೇಲೆ ಅಪ್ಪನ ನಿರ್ಜೀವ ಶರೀರವನ್ನು ಇಡಲಾಗಿತ್ತು. ಮೂಗಿನ ಎರಡೂ ಹೊಳ್ಳೆಗಳಿಗೂ ಹತ್ತಿಯನ್ನು ತುರುಕಲಾಗಿತ್ತು. ಸತ್ತವರ ಮೂಗಿಗೆ ಹತ್ತಿಯನ್ನು ಯಾಕಾದರೂ ತುರುಕುತ್ತಾರೆ ಎಂಬುದು ಶಿವುಗೆ ಅರ್ಥವಾಗುತ್ತಿರಲಿಲ್ಲ. ಕೆಲವು ದಿನಗಳ ಹಿಂದೆ ಬೀರನ ಅಪ್ಪನ ಮೂಗಿಗೂ ಇದೇ ರೀತಿ ಹತ್ತಿ ಇಟ್ಟಿದ್ದರು.
ಅಪ್ಪನ ಮುಖ ಮಾತ್ರ ವಿಕಾರವಾಗಿ ಕಾಣುತ್ತಿತ್ತು. ತಗಡಿನ ಡಬ್ಬಿಯಲ್ಲಿನ ವಿಷಪೂರಿತ ಮದ್ದಿನ ಪರಿಣಾಮ ಇರಬೇಕು. ತಲೆಯ ಮೇಲೆ ಹೊಲಿಗೆ ಹಾಕಿದ ಗಾಯ – ಪೋಲಿಸರು ಪೋಸ್ಟ್ ಮಾರ್ಟಮ್ ಅಂತ ಏನೋ ಮಾಡಿದ್ದರು. ಅಪ್ಪನ ಕಣ್ಣು ಒಂದಿಷ್ಟು ತೆರೆದೇ ಇದ್ದವು. ಹೊರಗಿನಿಂದ ಬೀಳುವ ಬೆಳಕು ಕಣ್ಣು ರೆಪ್ಪೆಯ ಒಳಗೆ ಬಿದ್ದು ಕಣ್ಣುಗಳು ಹೊಳೆಯುತ್ತಿದ್ದವು. ಯಾಕೋ ಅಪ್ಪ ಸತ್ತಿದ್ದಾನೆ ಎಂದು ನಂಬುವುದು ಶಿವುಗೆ ಕಷ್ಟವಾಯಿತು.
ಅಮ್ಮ ಬೆಳಿಗ್ಗೆಯಿಂದ ಒಂದೇ ಸಮನೆ ರೋಧಿಸುತ್ತಿದ್ದಳು. ಪಕ್ಕದ ಮನೆಯ ವಸಂತಿಯಕ್ಕ ಆಕೆಗೆ ಸಮಾಧಾನ ಪಡಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದರು. ಅತ್ತು ಅತ್ತು ಅಮ್ಮನ ಕಣ್ಣುಗಳಿಂದ ಕಣ್ಣೀರು ಬತ್ತಿ ಹೋಗುವುದು ಕೂಡ ಶಿವುಗೆ ಗೋಚರಿಸದೆ ಇರಲಿಲ್ಲ.
ತಾನು ಈ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎಂಬುದೇ ಶಿವುಗೆ ತಿಳಿಯಲಿಲ್ಲ. ಯಾಕೋ ಕಣ್ಣಂಚುಗಳಿಂದ ಕಣ್ಣೀರು ಬರುತ್ತಿರಲಿಲ್ಲ. ಹಾಗೆ ನೋಡಿದರೆ ತಾನು ಹಠಮಾರಿ ಎಂದು ಅಮ್ಮ ಆಗಾಗ್ಗೆ ಹೇಳುತ್ತಿದ್ದಳು. ದಿನಂಪ್ರತಿ ಎಂಬಂತೆ ಲೆಕ್ಕ ಎನೂ ಅರ್ಥವಾಗದೆ, ಕೊಟ್ಟ ಮನೆಕೆಲಸ ಮಾಡದೆ ನಳಿನಿ ಟೀಚರ್ ಹೊಡೆತಗಳು ಮೈಮೇಲೆಲ್ಲ ಜಡಿ ಮಳೆಯಂತೆ ಬೀಳುತ್ತಿದ್ದವು. ಆದರೂ ಕಣ್ಣಿನಿಂದ ನೀರು ಬರುತ್ತಿರಲಿಲ್ಲ. ಆಗಾಗ ಬೆಳಗ್ಗಿನ ನಾಸ್ಟ ತಪ್ಪಿದ್ದಿದೆ, ಆದರೆ ನಳಿನಿ ಟೀಚರ್ ಕೊಡುವ ನಾಗಬೆತ್ತದ ಪೆಟ್ಟು ತಪ್ಪುತ್ತಿರಲಿಲ್ಲ. ಆದರೂ ಕಣ್ಣಾಲಿಗಳು ತೇವಗೊಳ್ಳುತ್ತಿರಲಿಲ್ಲ. ಮನಸ್ಸನ್ನು ಬೇಕಂತಲೇ ಕಠಿಣಗೊಳಿಸುವುದಿತ್ತು.
ಇವತ್ತು ಕೂಡ ತನ್ನ ಅಪ್ಪ ಹೀಗೆ ಕೊಠಡಿಯಲ್ಲಿ ಮಧ್ಯೆ ಜೀವವಿಲ್ಲದೆ ಅಡ್ಡಡ್ಡ ಮಲಗಿದರೂ, ತಾನು ಅಳಬೇಕು ಅಂತ ಅನಿಸಿದರೂ, ಶಿವುಗೆ ಕಣ್ಣೀರು ಬರುತ್ತಿರಲಿಲ್ಲ.
“ನೀನು ದೊಡ್ಡವನಾಗಿ ನನ್ನ ಹಾಗೆ ರೈತನಾಗುವುದು ಬೇಡ ಶಿವು. ರೈತ ಅನ್ನದಾತ ಅಂತ ಹೇಳುತ್ತಾರೆ. ಆದರೆ ಈ ದಿನಗಳಲ್ಲಿ ಅನ್ನದಾತನಿಗೇ ಅನ್ನದ ಗತಿ ಇಲ್ಲ. ನೀನು ರೈತನಾಗುವುದು ಬೇಡ," ಅಪ್ಪ ಹಲವಾರು ದಿನಗಳ ಹಿಂದೆ ಹೇಳಿದ ಮಾತು!
ದೊಡ್ಡವನಾದ ಮೇಲೆ ತಾನು ಏನಾಗಬೇಕೆಂದು ನಿರ್ಧಾರ ಮಾಡುವುದು ಶಿವುಗೆ ಕಷ್ಟದ ಕೆಲಸವಾಗಿತ್ತು. ಎಂಕ್ಟ ತಾನು ಮುಂದೆ ಮಿನಿಸ್ಟರ್ ಆಗುತ್ತೇನೆ ಅಂತ ಹೇಳುತ್ತಿದ್ದ. ಮಿನಿಸ್ಟರ್ ಆದರೆ ಕಾರು ಸಿಗುತ್ತದೆ, ಊರೆಲ್ಲಾ ಸುತ್ತಾಡಬಹುದು ಎಂಬುದು ಆತನ ಯೋಚನೆ. ಬೀರ ಅವನ ಅಪ್ಪ ಸಾಯುವ ಮುಂಚೆ ತಾನು ಪೋಲಿಸ್ ಇನ್ಸ್‍ಪೆಕ್ಟರ್ ಆಗುತ್ತೇನೆ ಎನ್ನುತ್ತಿದ್ದ. ಕೆಲವೊಮ್ಮೆ ಆತ ತಾನು ಪೋಲಿಸ್ ಇನ್ಸ್‍ಪೆಕ್ಟರ್ ಎಂಬಂತೆ, ಇಲ್ಲದ ಮೀಸೆ ತಿರಿಗಿಸುತ್ತಾ ತನ್ನ ಗಲ್ಲ ನೇವರಿಸುವುದು ನೋಡಲು ಮಜಾ ಅನಿಸುತ್ತಿತ್ತು.
ಕೆಲವೊಮ್ಮೆ ಶಿವು ಯೋಚಿಸಿದ್ದಿದೆ, ತಾನು ದೊಡ್ಡವನಾದ ಮೇಲೆ ಲಾರಿ ಮಾಲಿಕನಾಗಬೇಕು. ಚೈತ್ರಳ ಅಪ್ಪನಿಗೆ ಮೂರು ಲಾರಿಗಳಿದ್ದವು. ಅವರ ಮನೆ ಕೂಡ ಸಾಧಾರಣ ಸಮಾಜ ಕ್ಲಾಸಿನಲ್ಲಿ ವೆಂಕಪ್ಪ ಮಾಸ್ತರ್ ವರ್ಣಿಸಿದ ವಿಜಯನಗರ ಅರಮನೆಯಂತೆ ಕಾಣುತ್ತಿತ್ತು. ಲಾರಿ ಮಾಲಿಕನಾದರೆ ಖಂಡಿತ ಶ್ರೀಮಂತ ಆಗಬಹುದು, ಹೀಗೆ ಶಿವು ಯೋಚಿಸುತ್ತಿದ್ದ.
ಆದರೆ ಇಂದು ಮಾತ್ರ ಅಪ್ಪನ ಅಕಾಲ ಸಾವಿನಿಂದಾಗಿ ತನ್ನ ನಿರ್ಧಾರ ಬದಲಾಗುವ ಹಾಗೆ ಕಾಣುತ್ತಿತ್ತು ಅವನಿಗೆ.
ಅಪ್ಪನ ನೆನಪುಗಳು ಯಾಕೋ ಮೇಲೇರಿ ಬಂದವು. ಇನ್ನೂ ಶಾಲೆಗೆ ಸೇರುವ ಹಿಂದಿನ ದಿನಗಳ ನೆನಪುಗಳು ಕೂಡ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದ್ದವು. ಆಗ ಮನೆ ಪರಿಸ್ಥಿತಿ ಎಷ್ಟೊಂದು ಚೆನ್ನಾಗಿತ್ತು! ಅಪ್ಪ ಮತ್ತು ಅಮ್ಮ ಎಷ್ಟೊಂದು ಪ್ರೀತಿಯಿಂದ ಇದ್ದರು! ಹಟ್ಟಿಯಲ್ಲಿ ಎರಡು ಎತ್ತುಗಳು, ಎರಡು ಹಾಲು ಕರೆಯುವ ದನ, ಅವುಗಳ ಕರುಗಳು. ಮುಂಜಾನೆ ಶಿವುಗೆ ಹಾಲು ತಪ್ಪುತ್ತಿರಲಿಲ್ಲ. ಅಪ್ಪ ಬೆಳಿಗ್ಗೆ ಎತ್ತುಗಳನ್ನು ಉಳುಮೆಗೆ ಕಟ್ಟಿಕೊಂಡು ಹೋಗುವಾಗ ತನ್ನನ್ನು ಕೂಡ ಕರೆದುಕೊಂಡು ಹೋಗುತ್ತಿದ್ದ. ಉಳುವಾಗ ತನ್ನನ್ನು ಆತನ ಹೆಗಲ ಮೇಲೆ ಕೂರಿಸುತ್ತಿದ್ದ. ಆತ ಉಳುವಾಗ ಯಾವ್ಯಾವುದೋ ಹಾಡು ಹಾಡುತ್ತಿದ್ದಂತೆ ತಾನು ಚಪ್ಪಾಳೆ ತಟ್ಟುವುದಿತ್ತು.
ಆಗಾಗ ಅಪ್ಪ ಶಿವುಗೆ ಪೇಟೆಗೆ ಕರೆದುಕೊಂಡು ಹೋಗುವುದು ಕೂಡ ಇತ್ತು. ರಾಮಣ್ಣನ ಹೋಟೆಲ್ನಲ್ಲಿ ಕುಳಿತುಕೊಂಡು ಗೋಳಿಬಜೆ, ಪೂರಿ ತೆಗೆಸಿ ಕೊಟ್ಟಿದ್ದುಂಟು. ಮರಳಿ ಬರುವಾಗ ಹೆಗಲ ಮೇಲೆ ಕೂರಿಸಿ ತರಕಾರಿ, ಮೀನು ತರುವುದಿತ್ತು.
ಇದೆಲ್ಲ ಯಾವಾಗ ಬದಲಾಗುತ್ತಾ ಬಂತು ಶಿವುಗೆ ತಿಳಿಯಲಿಲ್ಲ. ತಾನು ಮೂರನೆ ಕ್ಲಾಸಿನಲ್ಲಿ ಇದ್ದಾಗ ಅಮ್ಮನ ವಿರೋಧದ ನಡುವೆಯೂ ಅಪ್ಪ ಇದ್ದ ಎರಡೂ ದನಗಳನ್ನು ಮಾರಿಬಿಟ್ಟ. ಅದಾದ ನಂತರ ತನಗೆ ಸಿಗುತ್ತಿದ್ದ ಬೆಳಗ್ಗಿನ ಹಾಲು ನಿಂತು ಹೋಯಿತು. ವಸಂತಿ ಅಕ್ಕನ ಮನೆಯಿಂದ ತರುತ್ತಿದ್ದ ಅರ್ಧ ಲೋಟ ಹಾಲಿನಿಂದ ಮಾಡಿದ ಕಪ್ಪು ಚಹಾದಿಂದ ಬೆಳಗ್ಗಿನ ಉಪಹಾರ ಮುಗಿಯುತ್ತಿತ್ತು.
ನಾಲ್ಕನೆ ಕ್ಲಾಸಿನಲ್ಲಿ ಇದ್ದಾಗ, ಅಂದರೆ ಹೋದ ವರ್ಷ, ಅಪ್ಪ ಹಟ್ಟಿಯಲ್ಲಿ ಇದ್ದ ಕರುಗಳನ್ನೂ ಮಾರಿಬಿಟ್ಟ. ಸರಾಯಿ ಕುಡಿಯದ ಅಪ್ಪ ಈಗೀಗ ದಿನಾ ಸಂಜೆ ಸರಾಯಿ ಕುಡಿದು ಬರುವುದನ್ನು ಶಿವು ಗಮನಿಸಿದ್ದ. ಅಮ್ಮ ಮಾತ್ರ ದಿನಾ ರಾತ್ರಿ ಅಪ್ಪನ ಜೊತೆ ಜಗಳವಾಡಿ ರಾತ್ರಿ ಕಣ್ಣೀರು ಹಾಕುತ್ತಿದ್ದಳು. ಅಪ್ಪ ಬೇಸಾಯಕ್ಕಾಗಿ ಸಾಹುಕಾರನಿಂದ ಒಂದೂವರೆ ಲಕ್ಷ ಸಾಲ ತೆಗೆದಿದ್ದಾಗಿಯೂ, ಅದರ ತಿಂಗಳ ಬಡ್ಡಿಯೇ ಎರಡು-ಮೂರು ಸಾವಿರ ಆಗುವುದಾಗಿಯೂ, ಇದನ್ನು ತೀರಿಸಲಾಗದೆ ಅಪ್ಪ ಸೋಲುತ್ತಿರುವುದಾಗಿಯೂ ಹೇಳುತ್ತಿದ್ದಳು.
ಊರಲ್ಲಿ ಸಾಲ ಮಾಡದೆ ಬೇಸಾಯ ಮಾಡಿದವರಾದರೂ ಯಾರು? ಬೀರನ ಅಪ್ಪ ಮತ್ತು ಎಂಕ್ಟನ ಅಪ್ಪ ಕೂಡ ಸಾಲ ಮಾಡಿದ್ದರು. ಹೊಸ ರೀತಿಯ ಭತ್ತದ ಬೀಜಗಳು ಊರಲ್ಲಿ ಬಂದು ಅದರಲ್ಲಿ ಹೆಚ್ಚು ಆದಾಯ ಇದೆ ಎಂಬ ಸುದ್ದಿ ಊರೆಲ್ಲ ಹರಡುತ್ತಿದ್ದಂತೆ ರೈತರು ಸಾಲ ಮಾಡಿ ಆ ಬೀಜಗಳನ್ನು ಖರೀದಿಸಿದ್ದರು. ಆದರೆ ಫಸಲು ಮಾತ್ರ ಅಪೇಕ್ಷಿಸಿದಷ್ಟು ಬಂದಿರಲಿಲ್ಲ. ಸಾಲದ್ದಕ್ಕೆ ಭತ್ತಕ್ಕೆ ಕೀಟಗಳ ಹಾವಳಿಯಾಗಿ ಕೀಟನಾಶಕ ತರಲು ಮತ್ತೆ ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗಿತ್ತು.
ತಗಡಿನ ಡಬ್ಬಿಯ ಕಪ್ಪು ಕೀಟನಾಶಕ!
ಭತ್ತಕ್ಕೆ ಹರಡಿದ ಕೀಟದ ಹಾವಳಿ ತಡೆಯಲು ಅಪ್ಪ ಪಟ್ಟಣಕ್ಕೆ ಹೋಗಿ ಕೊಂಡು ತಂದ ಔಷಧ. ಕಳೆದ ದಿನಗಳಲ್ಲಿ ಜಯಣ್ಣನ ಮನೆಗೆ ಹೋಗಿ ಸ್ಪ್ರೇ ಪಂಪು ತಂದು ಅದನ್ನು ಬೆನ್ನಿಗೆ ನೇತುಹಾಕಿ, ಮುಖಕ್ಕೆ ಬಟ್ಟೆ ಕಟ್ಟಿ ತಗಡಿನ ಡಬ್ಬಿಯಲ್ಲಿನ ಆ ಕೀಟ ನಾಶಕವನ್ನು ಸೀಮೆ ಎಣ್ಣೆ ಜೊತೆ ಬೆರೆಸಿ ಸಿಂಪಡಿಸುವುದನ್ನು ಶಿವು ನೋಡಿದ್ದ. ಅದರ ಘಾಟು ವಾಸನೆ ವಾಕರಿಕೆ ತರುವಂತಿತ್ತು. ಅದೇ ಮದ್ದನ್ನು ಕುಡಿದು ಅವನ ಅಪ್ಪ ನಿನ್ನೆ ಆತ್ಮಹತ್ಯೆ ಮಾಡಿದ್ದ.....
"ಈ ದರಿದ್ರ ಬೇಸಾಯದಿಂದಾಗಿ, ಬಿತ್ತನೆಯಿಂದಾಗಿ ಇನ್ನೆಷ್ಟು ಜೀವಗಳು ಹೋಗುವುದಿದೆಯೋ?" ಅಂಗಳದಲ್ಲಿ ನೆರೆಮನೆಯ ಪುರುಷರೆಲ್ಲ ಸೇರಿ ಮಾತಾಡುವುದು ಶಿವುಗೆ ಕೇಳಿಸಿತು.
ಒಂದೂವರೆ ಲಕ್ಷ ರೂಪಾಯಿ! ಸಾಹುಕಾರನಿಂದ ತೆಗೆದುಕೊಂಡ ಸಾಲ. ಅಪ್ಪ ಅದನ್ನು ತೀರಿಸುತ್ತಿದ್ದನಾದರೂ ಹೇಗೆ? ತಿಂಗಳ ಬಡ್ಡಿ ತೀರಿಸಲಿಕ್ಕೆಂದು ಆತ ಮನೆಯಲ್ಲಿ ಮಾರಲು ಸಾಧ್ಯವಾದನ್ನೆಲ್ಲ ಮಾರಿ ಆಗಿತ್ತು – ದನ, ಕರು, ಮನೆಯ ಮುಂದಿದ್ದ ಹಲಸಿನ ಮರ, ಅಮ್ಮನ ಕೊರಳಲ್ಲಿದ್ದ ನೂಲಿನಂತ ಚೈಯ್ನು, ಕಿವಿಯ ಬೆಂಡೋಲೆ, ತಾಮ್ರದ ಪಾತ್ರೆಗಳು... ಯೋಚಿಸುವಾಗ ಶಿವುಗೆ ನಿಜಕ್ಕೂ ಸಂಕಟವಾಗುತ್ತಿತ್ತು. ಆದರೆ ಅವನಿಗೆ ಹೆಚ್ಚು ಸಂಕಟಕ್ಕೆ ಈಡು ಮಾಡಿದ ಸಂಗತಿಯೆಂದರೆ ಅವನಿಗೆ ಅಮ್ಮ ದಿನಾ ಹಾಲು ಸುರಿದು ಕೊಡುತ್ತಿದ್ದ ಬೆಳ್ಳಿಯ ಲೋಟವನ್ನು ಕೂಡ ಅಪ್ಪ ಮಾರಿದ್ದ. ಅಮ್ಮನ ಮದುವೆಯ ಸಂದರ್ಭದಲ್ಲಿ ಆಕೆಯ ಅಪ್ಪ ನೀಡಿದ ಲೋಟವಾಗಿತ್ತಂತೆ ಅದು. ಅದರಲ್ಲಿ ಹಾಲು ಕುಡಿದರೆ ಹೆಚ್ಚು ಬುದ್ಧಿವಂತರಾಗುತ್ತಾರೆ ಎಂದು ಅಜ್ಜ ಹೇಳುತ್ತಿದ್ದನಂತೆ. ಅದಕ್ಕಾಗಿಯೇ ಅಮ್ಮ ಪ್ರತಿ ದಿನ ಅದರಲ್ಲೇ ಹಾಲು ಸುರಿದು ಕೊಡುತ್ತಿದ್ದಳು. ಆದರೆ ಅಪ್ಪ ಅದನ್ನೂ ಮಾರಿದ್ದ. ಅದರ ನಂತರ ಬೆಳ್ಳಿ ಲೋಟವೂ ಇಲ್ಲ, ಹಾಲೂ ಇಲ್ಲ.
ಅವನ ಪ್ರೀತಿಯ ಕರು ಲಕ್ಷ್ಮಿಯನ್ನು ದಲ್ಲಾಳಿ ಎಳೆದುಕೊಂಡು ಹೋದಾಗ ತನ್ನ ಹೃದಯವನ್ನೇ ಯಾರೋ ಕಿತ್ತು ಎಳೆದುಕೊಂಡು ಹೋಗುವಂತೆ ಭಾಸವಾಗಿತ್ತು ಶಿವುಗೆ. ಅವನು ಅಮ್ಮನ ಸೆರಗಲ್ಲಿ ಅವಿತುಕೊಂಡು ಅತ್ತಿದ್ದ. ಓಡಿ ಕರುವನ್ನು ಹಿಂದಕ್ಕೆ ಎಳೆದು ತರುವ ಮನಸ್ಸಾಯಿತಾದರೂ ಧೈರ್ಯವಾಗಲಿಲ್ಲ. ಮೂರು ದಿನ ಅವನಿಗೆ ಊಟ ಕೂಡ ರುಚಿಸಿರಲಿಲ್ಲ.
ದುರಹಂಕಾರಿ, ಮೋಸಗಾರ ಸಾಹುಕಾರನಿಂದ ಸಾಲ ಪಡೆದು ಸೋತು ಹೋಗಿದ್ದ ಅಪ್ಪ. ತಿಂಗ ತಿಂಗಳಿಗೆ ಬಡ್ಡಿ ಕಟ್ಟಿಯೇ ಆತ ಸುಸ್ತಾಗುತ್ತಿದ್ದ. ಅಪ್ಪನ ಕಷ್ಟಗಳನ್ನು ನೋಡಿ ಶಿವು ತನ್ನ ಕಷ್ಟಗಳನ್ನು ಮರೆತು ತನ್ನನ್ನೇ ತಾನು ಸಮಾಧಾನ ಪಡಿಸುತ್ತಿದ್ದ.
ನಿಜಕ್ಕೂ ಘೋರ ವಂಶಸ್ಥನಿರಬೇಕು ಸಾಹುಕಾರ. ಅವನ ಹೆಸರೇ ಅದನ್ನು ಸೂಚಿಸುತ್ತಿತ್ತು: ಸುಖಾನಂದ್. ಹೆಸರಿಗೆ ತಕ್ಕಂತೆ ಸದಾ ಸುಖಿ ಆತ. ಆತನನ್ನು ನೋಡುವಾಗಲೇ ಮೈಯಲ್ಲಿ ನಡುಕ ಹುಟ್ಟುತ್ತಿತ್ತು. ದೊಡ್ಡ ದೊಡ್ಡ ಕಣ್ಣುಗಳು, ತುಟಿ ಮೇಲೆ ಪೊದೆ ಮೀಸೆ - ವೀರಪ್ಪನ್ ತರಾ. ಉದ್ದನೆಯ ವ್ಯಕ್ತಿ. ನಡೆಯುವಾಗ ಸಣ್ಣಗೆ ಭೂಕಂಪ ಆದಂತ ಅನುಭವ ಆಗುತ್ತಿತ್ತು.
ಊರಲ್ಲಿ ಹೆಚ್ಚಾಗಿ ಎಲ್ಲಾ ರೈತರು ಸಾಹುಕಾರನಿಂದ ಸಾಲ ಮಾಡಿದ್ದರು ಮತ್ತು ಅದನ್ನು ತೀರಿಸಲಾಗದೆ ಒದ್ದಾಡುತ್ತಿದ್ದರು. ತಿಂಗ ತಿಂಗಳಿಗೆ ಬಡ್ಡಿ ಕಟ್ಟಿಯೇ ಅವರೆಲ್ಲ ಸೋತು ಹೋಗುವುದು ಶಿವುಗೆ ತನ್ನ ಸಹಪಾಠಿಗಳ ಮೂಲಕ ತಿಳಿಯುತ್ತಿತ್ತು.
ಬೀರನ ಅಪ್ಪ ಆತ್ಮಹತ್ಯೆ ಮಾಡಿದ ಮೇಲೆ ಬೀರ ಶಾಲೆಯೇ ಬಿಟ್ಟು ಬಿಟ್ಟ. ಈಗ ಆತ ತನ್ನ ತಾಯಿ ಜೊತೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾನೆ ಎಂದು ಅವನ ಪಕ್ಕದ ಮನೆಯ ಶಾರದಾ ಹೇಳುತ್ತಿದ್ದಳು. ಶಿವಲಿಂಗಿಯ ಅಪ್ಪನ ಆತ್ಮಹತ್ಯೆಯ ನಂತರ ಶಿವಲಿಂಗಿಯ ಕುಟುಂಬವೇ ಊರು ಬಿಟ್ಟು ಬೇರೆಲ್ಲೋ ಗುಳೇ ಹೋಯಿತು.
ಕೆಲವೇ ತಿಂಗಳ ಹಿಂದೆ ಊರಲ್ಲಿ ಎಷ್ಟೊಂದು ಸಂತೋಷ, ಸಂಭ್ರಮವಿತ್ತು! ಮಕ್ಕಳದೇ ರಾಜ್ಯ. ಸಂಜೆ ಶಾಲೆ ಮುಗಿದ ತಕ್ಷಣ ಎಲ್ಲಾ ಮಕ್ಕಳು ವಸಂತಿಯಕ್ಕನ ಬಾಕಿಮಾರು ಹೊಲದಲ್ಲಿ ಸೇರುವುದಿತ್ತು. ಆಲದ ಮರದ ಬೇರುಗಳನ್ನು ಹಿಡಿದು ಜೋಕಾಲಿ ಆಡುವುದಿತ್ತು. ಮರಗಳಲ್ಲಿ ಹಕ್ಕಿಗಳು ಹೇಗೋ, ಭೂಮಿ ಮೇಲೆ ಮಕ್ಕಳು!
ಆದರೆ ಕಳೆದ ಒಂದೆರಡು ತಿಂಗಳುಗಳಲ್ಲಿ ಎಲ್ಲವೂ ಬದಲಾಗಿ ಹೋಯಿತಲ್ಲ? ಯಾರೋ ಧರೋಡೆಕೋರರು ಬಂದು ಊರಿನ ಸಂತೋಷವನ್ನೆಲ್ಲಾ ದಿನಬೆಳಗ್ಗೆಯೇ ದೋಚಿಕೊಂಡು ಹೋಗಿದ್ದಾರೋ ಎಂಬಂತಾಗಿತ್ತು ಪರಿಸ್ಥಿತಿ. ಈಗೀಗ ಮರಗಳ ಮೇಲೆ ಹಕ್ಕಿಗಳೂ ಮಾಯವಾಗಿದ್ದವು, ಅಥವಾ ಹಾಗೆ ಆತನಿಗೆ ಅನಿಸುತ್ತಿತ್ತು...
ಸುಮಾರು ಮಧ್ಯಾಹ್ನದ ಸಮಯವಾಗುತ್ತಾ ಬಂತು. ಅಮ್ಮ ಇನ್ನೂ ಆಳುತ್ತಲೇ ಇದ್ದಳು. ಬೆಳಿಗ್ಗೆಯಿಂದ ಏನೂ ತಿನ್ನದೆ ಆಕೆ ಜೀವ ಇಲ್ಲದಂತಾಗಿದ್ದಳು. ವಸಂತಿಯಕ್ಕ ಬೆಳಿಗ್ಗೆ ಗಂಜಿ ಮಾಡಿ ತಂದಿದ್ದರು. ಆದರೆ ಅಮ್ಮ ಉಂಡಿರಲಿಲ್ಲ. ವಸಂತಿಯಕ್ಕ ಒತ್ತಾಯ ಮಾಡಿ ಶಿವುಗೆ ಸ್ವಲ್ಪ ಉಣಿಸಿದ್ದರು. ಯಾಕೋ ಇಡೀ ವಾತಾವರಣ ಭೀಕರವಾಗಿ ಕಾಣುತ್ತಿತ್ತು ಶಿವುಗೆ.
ನಿನ್ನೆ ಸಂಜೆಯಿಂದ ಇಲ್ಲಿ ತನಕ ನಡೆದ ಘಟನೆಗಳು ಶಿವು ಕಣ್ಣ ಮುಂದೆ ಹಾದು ಹೋದ ಹಾಗೆ ಅವನು ಇನ್ನಷ್ಟು ವಿಚಲಿತನಾದ. ನಿನ್ನೆ ರಾತ್ರಿ ಊಟದ ಮುಂಚೆ ಅಪ್ಪ ಅಮ್ಮನ ಮಧ್ಯೆ ದೊಡ್ಡ ಜಗಳವಾಗಿತ್ತು. ಅಪ್ಪ ನಿನ್ನೆ ಕೂಡ ಕುಡಿದು ಬಂದಿದ್ದ. ಊಟದ ಬಟ್ಟಲಲ್ಲಿ ಅನ್ನ ಮತ್ತು ತಿಳಿ ಸಾರು ಹಾಗೂ ಒಣ ಮೀನು ನೋಡಿ ಅಪ್ಪನಿಗೆ ಎಲ್ಲಿಲ್ಲದ ಕೋಪ.
"ನಿಯತ್ತಿನಿಂದ ಒಂದು ಒಳ್ಳೆ ಊಟ ಹಾಕಲೂ ಆಗೋದಿಲ್ಲ ನಿನಗೆ ಮೂರು ಕಾಸಿನವಳೇ" ಅಪ್ಪ ಗದರಿದ್ದ.
“ಇನ್ನೇನು ಕುರಿ ಮಾಂಸ ಮಾಡಿ ಹಾಕಲೇ? ಮನೆಯಲ್ಲಿ ಏನು ತಂದು ಹಾಕಿದ್ದಿ ಅಂತ ಒಳ್ಳೆ ಊಟ ಕೇಳ್ತೀಯಾ?" ಅಮ್ಮ ತಿರುಗೇಟು ನೀಡಿದ್ದಳು.
“ಮನೆಯಲ್ಲಿ ಏನೂ ಇಲ್ಲದ್ದಕ್ಕೇನು ನೀನು ದಿನೇ ದಿನೇ ಗುಂಡಗಾಗುತ್ತ ಇದ್ದೀಯಾ? ಆರಾಮಾಗಿದ್ದೀಯಾ ನೀನು. ನಿನಗೆಲ್ಲಿಯ ಚಿಂತೆ?" ಅಪ್ಪನ ಸ್ವರ ಏರುತ್ತಿತ್ತು.
“ಹೌದು, ನೀನು ಸಾಲ ಮಾಡಿ ಇಡೀ ಕುಟುಂಬಾನೇ ಸರ್ವನಾಶ ಮಾಡಿದಿ. ಇದ್ದದ್ದೆಲ್ಲ ತಿಂದು ಮುಗಿಸಿದಿ. ನಿನ್ನ ಆ ಮಗನನ್ನು ನೋಡು, ಚರ್ಮ ಎಲುಬು ಬಿಟ್ರೆ ಏನಿಲ್ಲ ಅವನ ದೇಹದಲ್ಲಿ," ಶಿವುವನ್ನು ತೋರಿಸಿ ಅಮ್ಮ ಹೇಳಿದ್ದಳು.
“ಏನು? ನಾನು ಸರ್ವನಾಶ ಮಾಡಿದ್ನಾ? ಆ ಸಾಹುಕಾರನಲ್ಲಿ ಸಾಲ ಮಾಡಿ ನಿನಗೆ ಅವನ ಜೊತೆ ಮಲಗಲು ದಾರಿ ಮಾಡಿ ಕೊಟ್ಟೆ ನಾನು ರಂಡೆ. ನನಗೇನು ಗೊತ್ತಿಲ್ಲ ಅಂತ ತಿಳಿದಿದ್ದೀಯಾ?"
ರಂಡೆ ಎಂಬ ಮಾತು ಕೇಳಿ ಅಮ್ಮ ಒಂದು ಕ್ಷಣ ಬಾಯಿ ಬಾರದಂತಾದಳು. ಆದರೂ ಸಾವರಿಸಿಕೊಂಡ ಆಕೆಯ ಸ್ವರ ಮತ್ತಷ್ಟು ಏರಿತು.
“ನೀನು ನನ್ನ ಗಂಡನಾ? ಮಣ್ಣು ತಿಂದು ಹೋಗುತ್ತೀ ನೋಡು ಈ ರೀತಿ ಮಾತಾಡಿದ್ರೆ. ನಾಲಗೆ ಹೇಗೂ ತಿರುಗುತ್ತೆ ಅಂತ ಏನೇನೋ ಮಾತಾಡ್ತಾ ಹೋಗ್ಬೇಡ, ಬಿದ್ದು ಹೋದೀತು. ಮಗನ ಮುಂದೆ ಈ ರೀತಿ ಮಾತಾಡ್ತಿ ಅಲ್ಲ, ನಾಚಿಕೆ ಆಗೋದಿಲ್ವಾ ನಿನಗೆ?" ಅಮ್ಮ ನಿಜಕ್ಕೂ ಬೊಬ್ಬಿಡುತ್ತಿದ್ದಳು.
“ಇದ್ದದ್ದನ್ನೇ ಮಾತಾಡ್ತಿದ್ದೀನೇ ಲಜ್ಜೆಗೆಟ್ಟವಳೆ. ಹೋಗು, ಹೋಗು, ಎಲ್ಲಿ ತನಕ ಅವನ ಜೊತೆ ಮಜಾ ಮಾಡ್ತೀಯಾ? ನಾನಿರುವ ತನಕವಷ್ಟೇ? ಯಾರಿಗೊತ್ತು, ನಾನು ಸತ್ತ ನಂತರ ಕಾಯಾಮ್ ಆಗಿ ನೀನು ಅವನ ಜೊತೆ ಹೋಗಲು ಸುಲಭವಾದೀತು."
ಮಾತಿಗೆ ಮಾತು ಏರುತ್ತಾ ಜಗಳ ಹೆಚ್ಚುತ್ತಾ ಹೋಯಿತು. ಅಪ್ಪ ಊಟ ಮಾಡಲಿಲ್ಲ. ತೂರಾಡುತ್ತಾ ಎದ್ದು ಕೋಪದಿಂದಲೇ ಹೊರಗೆ ಹೋದ.
“ಮಣ್ಣು ತಿನ್ನು ಹೋಗು; ನಿನ್ನ ಹೊಟ್ಟೆಗೆ ಕಲ್ಲು ಬೀಳ," ಅಮ್ಮನ ಕೋಪ ಕಡಿಮೆ ಆಗಿರಲಿಲ್ಲ.
ಶಿವುಗೆ ಮಾತ್ರ ಇದೆಲ್ಲ ಅರ್ಥವೇ ಆಗುತ್ತಿರಲಿಲ್ಲ. ಅಪ್ಪ ಯಾಕೆ ಇಷ್ಟು ಒಳ್ಳೆಯ ಅಮ್ಮನನ್ನು ಪೀಡಿಸುತ್ತಾನೆ? ಸಾಲ ಮಾಡಿ ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು ಅವನು ತಾನೆ? ಆತನಿಗೆ ಯಾಕೆ ದುರಾಸೆ ಹುಟ್ಟಿತು? ಈಗ ಅವನ ದೆಸೆಯಿಂದಾಗಿ, ಆ ಸಾಲದಿಂದಾಗಿ ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲದಂತಾಯಿತು.
ಅದಾದ ನಂತರ ಅಮ್ಮ ಶಿವುಗೆ ಊಟ ಬಡಿಸಿದಳು. ಅದೇ ಅನ್ನ, ತಿಳಿ ಸಾರು ಮತ್ತು ಒಣ ಮೀನು. ಒಳ್ಳೆ ಊಟ ಮಾಡಿ ಎಷ್ಟು ದಿನಗಳಾದವೋ!
ನಂತರ ಆತ ಮಲಗಲು ಹೋಗಿದ್ದ. ಮಧ್ಯ ರಾತ್ರಿ ಯಾರೋ ಕಿರುಚಿದಂತಾಯಿತು. ಆತ ಎದ್ದ. ಅಪ್ಪ ಮನೆ ಮುಂದಿರುವ ಮಾವಿನ ಮರದ ಬುಡದಲ್ಲಿ ಬಿದ್ದಿದ್ದ. ಅಮ್ಮ ಚೀರುತ್ತಿದ್ದಳು. ತಗಡಿನ ಡಬ್ಬಿಯಲ್ಲಿನ ಕಪ್ಪು ಮದ್ದನ್ನು ಆತ ಕುಡಿದಿದ್ದ. ಶಿವು ತಕ್ಷಣ ಹೋಗಿ ವಸಂತಿಯಕ್ಕ ಮತ್ತು ಇತರರನ್ನು ಕರೆದುಕೊಂಡು ಬಂದ. ಅವಸರದಿಂದ ಎಲ್ಲರೂ ಸೇರಿ ಅಪ್ಪನನ್ನು ಆಸ್ಪತ್ರೆಗೆ ಸೇರಿಸಿದರಾದರೂ ಉಪಯೋಗವಿರಲಿಲ್ಲ. ಅಪ್ಪ ಸಾಕಷ್ಟು ಮದ್ದು ಕುಡಿದಿದ್ದನಾದ್ದರಿಂದ ಅವನನ್ನು ಬದುಕಿಸುವುದು ಸಾಧ್ಯವಾಗಲಿಲ್ಲ.
ಪೋಲಿಸರು ಬಂದರು. ಅಪ್ಪನ ಶವವನ್ನು ಕೊಂಡು ಹೋದರು. ನಂತರ ಅಪ್ಪನ ಶವವನ್ನು ಬಿಡಿಸಿ ತರುವುದು ಕೂಡ ಒಂದು ಕಷ್ಟದ ಕೆಲಸವೇ ಆಯಿತು. ಜಯಣ್ಣ ಪೋಲಿಸರಿಗೆ ಲಂಚ ಕೊಡಬೇಕಾಗಿ ಬಂತು ಎಂಬುದು ಶಿವುಗೆ ನಂತರ ತಿಳಿಯಿತು. ಹೀಗೆ ಅಪ್ಪನ ಶವ ಮನೆಗೆ ತರುವಾಗ ಬೆಳಿಗ್ಗೆಯ ಹತ್ತು ಘಂಟೆ...
ಶಿವು ಹೀಗೆಲ್ಲ ಯೋಚಿಸುತ್ತಿರುವಾಗಲೇ ದೇವಸ್ಥಾನದ ಪೂಜಾರಿ ಬಂದ. ಹಲವಾರು ರೀತಿಯ ಮಂತ್ರಗಳನ್ನು ಪಠಿಸುತ್ತಾ ಆತ ಅಪ್ಪನ ನಿರ್ಜೀವ ಶರೀರಕ್ಕೆ ಅದೇನೋ ಲೇಪನ ಮಾಡುವುದನ್ನು ಶಿವು ನೋಡಿದ – ಬಹುಶಃ ಗಂಧದ ಲೇಪನವಿರಬೇಕು, ಅದರ ಪರಿಮಳ ಕೋಣೆಯಲ್ಲೆಲ್ಲಾ ಹರಡಿತು. ಪೂಜಾರಿ ಮಂತ್ರ ಪಠಿಸುತ್ತಿದ್ದಂತೆ ಅಮ್ಮನ ರೋಧನ ಕೂಡ ಹೆಚ್ಚುತ್ತಾ ಹೋಯಿತು. ವಸಂತಿಯಕ್ಕ ಅಮ್ಮನನ್ನು ಇನ್ನೂ ಘಟ್ಟಿಯಾಗಿ ಹಿಡಿದು ಕೂತಿದ್ದರು.
“ಹೋಗೋ ಮಗಾ, ಮೈಯ ಬಟ್ಟೆ ತೆಗೆದು ಯಾವುದಾದರೂ ಬಿಳಿ ಬಟ್ಟೆ ಒದ್ದೆ ಮಾಡಿ ಮೈ ಮೇಲೆ ಹಾಕು. ಚಿತೆಗೆ ಕೊಳ್ಳಿ ಇಡ್ಬೇಕು ನೀನು," ವಸಂತಿಯಕ್ಕ ಹೇಳಿದರು.
ಅಲ್ಲೇ ಹಗ್ಗದ ಮೇಲೆ ನೇತಾಡುತ್ತಿದ್ದ ಬಿಳಿ ಬಟ್ಟೆಯನ್ನು ತೆಗೆದುಕೊಂಡು ಶಿವು ಹೊರಗೆ ಬಂದ. ಅಂಗಳದಲ್ಲಿ ಪಕ್ಕದ ಮನೆಯವರೆಲ್ಲ ಸೇರಿದ್ದರು. ಅವನ ಸಹಪಾಠಿಗಳಾದ ಎಂಕ್ಟ, ಬೀರ, ದುರ್ಗಿ, ಶಂಕರನ ಜೊತೆಗೆ ಇನ್ನೂ ಹಲವರಿದ್ದರು. ಅವರೆಲ್ಲ ಅವನ ಕಡೆ ಕನಿಕರದ ದೃಷ್ಟಿ ಬೀರಿದಾಗ ಶಿವುನ ಜೀವ ಇರುವೆಯಷ್ಟಾಯಿತು. ಹೆಚ್ಚು ಹೊತ್ತು ಅವರನ್ನು ನೋಡಿ ಇರಲಾಗದೆ ಶಿವು ಬಟ್ಟೆಯನ್ನು ಮಾವಿನ ಮರದ ಕೆಳಗೆ ಇದ್ದ ಬಚ್ಚಲಿನಲ್ಲಿ ತೋಯಿಸಿದ. ಮೈ ಮೇಲೆ ಹಾಕಿದಾಗ ಮೈಯಲ್ಲೆಲ್ಲಾ ಥಂಡಿ ಹರಡಿ, ಜೀವ ಒಂದು ಘಳಿಗೆ ನಡುಗಿತು.
ಅಷ್ಟಾಗಲೇ ಅಪ್ಪನ ಕಳೇಬರವನ್ನು ಹೊಲದ ಕಡೆಗೆ ಕೊಂಡೊಯ್ಯುವ ತಯಾರಿ ಪ್ರಾರಂಭವಾಯಿತು. ಪೂಜಾರಿ ಶಿವುಗೆ ಕೆಂಡಗಳಿಂದ ತುಂಬಿದ ಸಣ್ಣ ಮಡಕೆಯನ್ನು ಕೊಟ್ಟರು. ನಾಲ್ಕು ಪುರುಷರು ಕಳೇಬರದ ಚಟ್ಟವನ್ನು ಎತ್ತಿದರು. ಆಗ ಆಯಿತು ಅಮ್ಮನ ಮುಗಿಲು ಮುಟ್ಟುವ ಆಕ್ರಂಧನ. ನಿನ್ನೆವರೆಗೆಲ್ಲ ಅಪ್ಪನನ್ನು ಹಿಗ್ಗಾಮುಗ್ಗಾ ಬೈಯುತ್ತಿದ್ದ ಅಮ್ಮ ನಿಜಕ್ಕೂ ಸಂಕಟ ಪಡುತ್ತಿದ್ದಾಳೆಯೇ? ಶಿವುಗೆ ಇದೆಲ್ಲ ಅರ್ಥವಾಗುತ್ತಿರಲಿಲ್ಲ. ಅವನ ಕಣ್ಣುಗಳಿಂದ ಬೇಕೆಂದರೂ ಒಂದು ತೊಟ್ಟು ಕಣ್ಣೀರು ಬಂದಿರಲಿಲ್ಲ.
ಕೂಕ್ರ ಮತ್ತು ಅವನ ಸಂಗಡಿಗರ ಡೋಲಿನ ನಾದದೊಂದಿಗೆ ಮೆರವಣಿಗೆ ಅಟ್ಟಣಿಕೆ ದಾಟಿ ಮುಂದೆ ಮುಂದೆ ಸಾಗಿತು. ಬಾಕಿಮಾರು ಗದ್ದೆಯ ಮಗ್ಗುಲಿನ ಸಣ್ಣ ಗದ್ದೆಯಲ್ಲಿ ಚಿತೆ ಏರಿಸಲಾಗಿತ್ತು. ಸಣ್ಣವನಿದ್ದಾಗ ಅದೇ ಗದ್ದೆಯಲ್ಲಿ ಅಪ್ಪನ ಹೆಗಲ ಮೇಲೆ ಕೂತು ಅಪ್ಪ ಹಾಡುತ್ತಾ ಉಳುತ್ತಿದ್ದಂತೆ ತಾನು ಹಾಡಿ ಚಪ್ಪಾಳೆ ತಟ್ಟಿದ ನೆನಪುಗಳು ಗಕ್ಕನೆ ಬಂದು ನಿಂತವು. ಅದ್ಯಾಕೋ ಹೊಟ್ಟೆಯಲ್ಲಿ ಒಂದು ರೀತಿಯ ಸಂಕಟದ ಅನುಭವ ಆಯಿತು ಶಿವುಗೆ.
ಅಪ್ಪನ ಕಳೇಬರವನ್ನು ಚಿತೆಯ ಮೇಲೆ ಇಡಲಾಯಿತು. ಮೆರವಣಿಗೆ ಈಗ ಚಿತೆಯ ಸುತ್ತ ಬಂದು ಸೇರಿತು. ಪೂಜಾರಿ ಮತ್ತೆ ಮಂತ್ರ ಶುರು ಮಾಡಿದರು. ಆತ ನೀರು ತುಂಬಿದ ಕೊಡವನ್ನು ಶಿವು ಹೆಗಲಿಗೆ ಎತ್ತಿ ಕೊಟ್ಟರು. ಅದಕ್ಕೆ ಸಣ್ಣ ತೂತು ಮಾಡಲಾಗಿ ನೀರು ಹನಿ ಹನಿಯಾಗಿ ನೆಲಕ್ಕೆ ಬೀಳುತ್ತಿತ್ತು. ಶಿವು ಚಿತೆಯ ಸುತ್ತ ಭಾರವಾದ ಹೆಜ್ಜೆ ಹಾಕತೊಡಗಿದ.
ಒಮ್ಮೆಲೆ ಶಿವು ಕಣ್ಣು ಸಾಹುಕಾರನ ಮೇಲೆ ಬಿತ್ತು – ಸುಖಾನಂದ್. ಆತ ಕೂಡ ಬಂದಿದ್ದ ಅಪ್ಪನನ್ನು ಬೀಳ್ಕೊಡಲು. "ಮುಠ್ಠಾಳ ನಿನ್ನಿಂದಲೇ ನನ್ನ ಅಪ್ಪ ಆತ್ಮಹತ್ಯೆ ಮಾಡಿದ," ಯೋಚಿಸತೊಡಗಿದ ಶಿವು.
ಚಿತೆಯ ಸುತ್ತ ಮೂರು ಸುತ್ತು ತೆಗೆದಂತೆ ಉರಿಯುತ್ತಿದ್ದ ಕೊಳ್ಳಿಯನ್ನು ಪೂಜಾರಿ ಶಿವು ಕೈಗೆ ನೀಡಿದ. ಓಡಿ ಹೋಗಿ ಕೊಳ್ಳಿಯನ್ನು ಆ ಕರುಣೆಯಿಲ್ಲದ ಸಾಹುಕಾರನ ಹೊಟ್ಟೆಗೆ ತೂರಿಸುವ ಪ್ರಬಲ ಹಂಬಲವಾಯಿತು ಆತನಿಗೆ.
ಆಗಲೇ ಶಿವುಗೆ ಅದೇನೋ ನೆನಪಾಯಿತು.
ಸುಮಾರು ಎರಡು ತಿಂಗಳ ಹಿಂದೆ ನಡೆದ ಘಟನೆ!
ಆ ಸಂಜೆ ಶಾಲೆಯಿಂದ ಮನೆಗೆ ಬಂದಾಗ ಮನೆಯಲ್ಲಿ ಯಾರೋ ಗಟ್ಟಿ ಸ್ವರದಿಂದ ಮಾತಾಡುತ್ತಿದ್ದರು. ಇಣುಕಿ ನೋಡಿದಾಗ ಇದೇ ಸಾಹುಕಾರ ಅಮ್ಮನಿಗೆ ಗದರಿಸುವುದನ್ನು ಆತ ನೋಡಿದ್ದ. ಅಪ್ಪ ಮನೆಯಲ್ಲಿ ಇರಲಿಲ್ಲ.
"ಒಂದೂವರೆ ಲಕ್ಷ...ಒಂದೂವರೆ ಲಕ್ಷ ಸಾಲ ಮಾಡಿದ್ದಾನೆ ನಿನ್ನ ಗಂಡ. ಬದುಕಿರುವಾಗ ಅದನ್ನು ತೀರಿಸಲು ಸಾಧ್ಯವಾಗ್ಲಿಲ್ಲ ಅವನಿಗೆ. ನನಗೇನು ಹಣ ಆಕಾಶದಿಂದ ಬೀಳುತ್ತಾ? ಮೂರು ವರ್ಷಗಳಾಗುತ್ತಾ ಬಂತು, ಇನ್ನೂ ತೀರಿಸಿಲ್ಲ ಸಾಲ. ಕಳೆದ ಮೂರು ತಿಂಗಳಿಂದ ಬಡ್ಡಿ ಕೂಡ ಕಟ್ಟಿಲ್ಲ. ಇದು ಈ ರೀತಿ ಮುಂದುವರಿಯುವುದು ಸಾಧ್ಯವಿಲ್ಲ," ಸಾಹುಕಾರ ಬೊಬ್ಬಿಡುತ್ತಿದ್ದ.
ಮರೆಯಲ್ಲಿ ನಿಂತು ಕೇಳುತ್ತಿದ್ದ ಶಿವು ಎದೆ ವಿಪರೀತವಾಗಿ ಬಡಿಯುತ್ತಿತ್ತು.
"ಧ..ಧನಿ.. ದಯ ಮಾಡಿ ಸ್ವಲ್ಪ ಉಪಕಾರ ಮಾಡಿ. ಆತ ನಿಜಕ್ಕೂ ಕಷ್ಟದಲ್ಲಿದ್ದಾರೆ. ಬೆಳೆ ಚೆನ್ನಾಗಿ ಆಗಿಲ್ಲ. ಆದರೂ ಹೇಗಾದರೂ ಸಾಲ ತೀರಿಸುತ್ತಾರೆ. ಸ್ವಲ್ಪ ಕಾಲಾವಕಾಶ ಕೊಡಿ.." ಅಮ್ಮ ರೋಧಿಸುತ್ತಿದ್ದಳು.
"ಕಾಲಾವಕಾಶ? ಇನ್ನೆಷ್ಟು ಕಾಲಾವಕಾಶ ಕೊಡಲಿ, ಹಾಂ? ಸಾಲ ಮಾಡುವಾಗ ನಿನ್ನ ಗಂಡನಿಗೆ ತುಂಬಾ ಸುಲಭವಾಗಿತ್ತು. ಈಗ ಮೂಗಿನವರೆಗೆ ಬಂದಾಗ ಎಲ್ಲಾ ಕಟ್ಟು ಕಥೆಗಳು ತನ್ನಿಂತಾನೆ ಬರುತ್ತವೆ ನಿಮ್ಗೆ.."
"ಹಾಗಲ್ಲ ಧನಿ..."
"ಮತ್ತು ಇನ್ನೇಗೆ? ಸೆಗಣಿಯಲ್ಲಿರೋ ಹುಳ ಆಕಾಶದಲ್ಲಿ ಹಾರುವ ಪ್ರಯತ್ನ ಮಾಡಿದ್ರೆ ಈ ರೀತಿನೇ ಆಗೋದು!"
ಕೆಲವು ಹೊತ್ತು ಅಲ್ಲಿ ಮೌನ ಆವರಿಸಿತು. ಅಮ್ಮ ಮಾತಾಡಲಿಲ್ಲ. ನಂತರ ಸಾಹುಕಾರನೇ ಹೇಳಿದ:
"ಒಂದು ಉಪಾಯ ಹೇಳ್ತೇನೆ ತಗೋ. ಹೇಗೂ ನಿನ್ನ ಗಂಡ ಬಡ್ಡಿ ಕಟ್ತಾ ಇಲ್ಲ. ನನಗೂ ಸದ್ಯ ಮನೆಗೆಲಸಕ್ಕೆ ಒಬ್ಬ ಆಳು ಬೇಕು. ನನ್ನ ಹೆಂಡ್ತಿ ಕೂಡ ಆಕೆಯ ಅಮ್ಮನ ಆರೈಕೆ ಮಾಡೋದಿಕ್ಕೆ ತವರಿಗೆ ಹೋಗಿದ್ದಾಳೆ. ಆದ್ದರಿಂದ ನಾಳೆಯಿಂದ ನೀನು ನನ್ನ ಮನೆ ಕೆಲಸಕ್ಕೆ ಬಾ. ನಿನ್ನ ಗಂಡನಾದವನಿಗೆ ನಾನೇ ಹೇಳುತ್ತೇನೆ..."
ಈ ರೀತಿ ಹೆದರಿಸುತ್ತಾ ಸಾಹುಕಾರ ಮೆಟ್ಟಲಿಳಿದು ಹೋಗಿದ್ದ. ಆತ ನಡೆದಾಗ ಸಣ್ಣಗೆ ಭೂಕಂಪ ಆದ ಅನುಭವ!
ಶಿವು ಆ ದಿನ ಮನೆ ಒಳಗೆ ಹೋದಾಗ ಅಮ್ಮ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.
"ಚಿತೆಗೆ ಬೆಂಕಿ ಇಡೋ ಮಗಾ.." ಪೂಜಾರಿ ಎಚ್ಚರಿಸಿದಾಗ ಶಿವು ಸ್ಥಿಮಿತಕ್ಕೆ ಬಂದ. ಉರಿಯುವ ಕೊಳ್ಳಿಯನ್ನು ಚಿತೆಗೆ ಇಟ್ಟಾಗ ಅದು 'ಬಗ್' ಅಂತ ಉರಿಯಿತು. ಆ ಚಿತೆಯಲ್ಲಿ ಅಪ್ಪನ ಹೆಣ ಮೆಲ್ಲ ಮೆಲ್ಲನೆ ಉರಿಯತೊಡಗಿತು, ಜೊತೆಗೆ ತನ್ನ ಎಲ್ಲಾ ಕನಸುಗಳೂ ಉರಿಯುವಂತೆ ಭಾಸವಾಯಿತು ಶಿವುಗೆ.
ಚಿತೆಯ ಮಧ್ಯದಿಂದ ಸಾಹುಕಾರ ಸುಖಾನಂದ ಬೋಳೆ ಕಣ್ಣು ಬಿಡುತ್ತಾ, ತಲೆ ಮೇಲಿದ್ದ ಕೊಂಬುಗಳನ್ನು ತಿರುಗಿಸುತ್ತಾ ಅಟ್ಟಹಾಸಗೈಯುತ್ತಾ ಬ್ರಹ್ಮರಕ್ಕಸನ ರೀತಿ ಕುಣಿಯುವಂತೆ ತೋರಿತು. ಸಣ್ಣಗೆ ಭೂಕಂಪ ಆಗುವುದು ಮಾತ್ರ ತಪ್ಪಲಿಲ್ಲ!

***********

ಸ್ಮರಣೆಯಿಂದ `ಹಬ್ಬ'ಕ್ಕೆ ಭಾಜನಳಾದ ಮಗ್ದಲಿನ ಮರಿಯ - -ಫ್ರಾನ್ಸಿಸ್ ನಂದಗಾಂವ

ದೇವಪುತ್ರರಾದ ಯೇಸುಕ್ರಿಸ್ತರೇ, ಸಂತ ಮರಿಯ ಮಗ್ದಲೇನಮ್ಮನವರನ್ನು ಸೈತಾನನ ಹಿಡಿತದಿಂದ ಬಿಡಿಸಿ, ಅವರನ್ನು ಪಾಪ ಜೀವನದಿಂದ ವಿಮುಕ್ತಗೊಳಿಸಿದಿರಿ. ಅವರು, ನಿಮ್ಮ ಪ್ರೀತಿ ಮತ್ತು ದಯೆಗೆ ಪಾತ್ರರಾಗಿ ನಿಮ್ಮನ್ನು ಹಿಂಬಾಲಿಸಲು ನಿರ್ಧರಿಸಿದರು. ಆ ಸಂತರು ನಿಮ್ಮ ಯಾತನೆ ಮತ್ತು ಸೇವೆಯಲ್ಲಿ ಪಾಲ್ಗೊಂಡು, ನಿಮ್ಮ ಪುನರುತ್ಥಾನದ ಸಂದೇಶವನ್ನು ನಿಮ್ಮ ಶಿಷ್ಯರಿಗೆ ಆಸಕ್ತಿಯಿಂದ ತಿಳಿಯಪಡಿಸಿದರು. ನಾವು ಸಹ, ನಿಮ್ಮ ಕೃಪೆಯಿಂದ ದುಷ್ಟ ಶಕ್ತಿಯಿಂದ ಬಿಡುಗಡೆ ಹೊಂದಿ, ನಿಮಗೆ ಸತತ ಸೇವೆ ಮಾಡಲು ಮತ್ತು ಪ್ರಭು ಯೇಸುಕ್ರಿಸ್ತರ ಶುಭಸಂದೇಶಕ್ಕೆ ಸಾಕ್ಷಿಯಾಗಿ ಬಾಳಲು ವರವ ನೀಡಿರಿ. ಆಮೆನ್.
    ಇದು ಸಂತ ಮರಿಯ ಮಗ್ದಲೇನಮ್ಮಳ ಕುರಿತ ಪ್ರಾರ್ಥನೆ. ಅವಳನ್ನು ಮಗ್ದಲಿನ ಮರಿಯ ಎಂದೂ ಸಂಬೋಧಿಸಲಾಗುತ್ತದೆ. ಕಥೋಲಿಕ ಧರ್ಮಸಭೆಯ ಪಂಚಾಂಗದ ಪ್ರಕಾರ, ಪ್ರತಿವರ್ಷ ಜುಲೈ 22 ರಂದು ಸಂತ ಮರಿಯ ಮಗ್ದಲೇನಮ್ಮಳ ಸ್ಮರಣೆ ಮಾಡಲಾಗುತ್ತದೆ. ಕುಟುಂಬದ ದೊಡ್ಡ ಜಪದ ಪುಸ್ತಕದಲ್ಲಿನ ಕಥೋಲಿಕ ಧರ್ಮಸಭೆಯ ಪಂಚಾಂಗದಂತೆ, ಜುಲೈ ತಿಂಗಳಲ್ಲಿ ಹದಿನೈದು ಸಂತರುಗಳ ಸ್ಮರಣೆಯ ದಿನಗಳಿವೆ. ಅದೇ ಬಗೆಯಲ್ಲಿ, ಪ್ರೇಷಿತ ಸಂತ ಯಾಕೋಬ ಮತ್ತು ಕಾರ್ಮೆಲ್ ಮಾತೆಯರ ಹಬ್ಬಗಳನ್ನು ಆಚರಿಸಿದರೆ, ಪ್ರೇಷಿತ ಸಂತ ತೋಮಾಸರ ದಿನವನ್ನು ಮಹೋತ್ಸವವೆಂದು ಆಚರಿಸಲಾಗುತ್ತದೆ. ಕಥೋಲಿಕ ಕ್ರೈಸ್ತರ ಪಂಚಾಂಗದಲ್ಲಿ ಕಂಡುಬರುವ ವಾರ್ಷಿಕ, ತಿಂಗಳ ಸಂತರ ಪಟ್ಟಿಗಳು ಆಯಾ ಪ್ರಾಂತ್ಯ, ದೇಶ, ಭಾಷೆ, ಇತಿಹಾಸ, ಸಂಪ್ರದಾಯ ಮುಂತಾದವುಗಳ ಹಿನ್ನೆಲೆಯಲ್ಲಿ ಸಿದ್ಧವಾಗಿರುತ್ತದೆ.
    ನೂರಾರು ಸಂಖ್ಯೆಯ ಸಂತರುಗಳ ಪೈಕಿ ನಮ್ಮ ದೇಶದಲ್ಲಿ ವಿವಿಧೆಡೆ ವಿವಿಧ ಸಂತರ ಹೆಸರುಗಳಲ್ಲಿ ಗುಡಿಗಳನ್ನು ಕಟ್ಟಲಾಗಿದೆ. ವಿವಿಧ ಧರ್ಮಕೇಂದ್ರಗಳು ಮತ್ತು ಧರ್ಮಕ್ಷೇತ್ರ(ಪ್ರಾಂತ್ಯ)ಗಳಿಗೆ, ಅವರವರದೇ ಆದ ಪಾಲಕ ಸಂತರಿರುತ್ತಾರೆ. ಚರ್ಚುಗಳಲ್ಲಿ ಸಾಮಾನ್ಯವಾಗಿ ಕೆಲವು ಐತಿಹಾಸಿಕ ಕಾರಣಗಳಿಂದ, ಅಲ್ಲಿ ನಡೆಯುವ ವಿದ್ಯಮಾನಗಳಿಂದ, ಪವಾಡಗಳಿಂದ, ಬಗೆಬಗೆಯ ಸೌಭಾಗ್ಯಗಳ ಆಶೀರ್ವಾದದಿಂದ, ಅವುಗಳ ಕಲಾವಂತಿಕೆಯಿಂದ ಪ್ರಸಿದ್ಧಿ ಪಡೆದಿರುತ್ತವೆ. ಹಿಂದೊಮ್ಮೆ ಕರ್ನಾಟಕದ ಮೈಸೂರು ಅರಸರ ಆಡಳಿತಕ್ಕೆ, ವಿಜಯನಗರ ಅರಸರ ಆಧಿಪತ್ಯಕ್ಕೆ ಒಳಗಾಗಿದ್ದ, ಸದ್ಯಕ್ಕೆ ಈಗ ತಮಿಳುನಾಡಿನಲ್ಲಿರುವ ಪುಟ್ಟ ಊರೊಂದರಲ್ಲಿನ ಸಂತ ಮರಿಯ ಮಗ್ದಲೇನಮ್ಮಳ ಹೆಸರಿನ ಚರ್ಚು, ಅದರ ಗುಡಿ ಹಬ್ಬದ ಸಂದರ್ಭದಲ್ಲಿ ದೆವ್ವ ಬಿಡಿಸುವ ಕಾಯಕಕ್ಕೆ ಪ್ರಸಿದ್ಧಿ ಪಡೆದಿದೆ.
 ಮತಿಯಾಂಪಟ್ಟಿಯ ಚರ್ಚಿನ ವಾರ್ಷಿಕೋತ್ಸವ:
   ಕಳೆದ ತಿಂಗಳ ಅಂದರೆ, 2019ರ ಸಾಲಿನ ಜುಲೈ 22ರಂದು, ಕರ್ನಾಟಕದ ನೆರೆಯ ತಮಿಳುನಾಡಿನ ನಾಮಕಲ್ ಜಿಲ್ಲೆಯ ರಾಸಿಪುರಂ ತಾಲ್ಲೂಕು, ಮಾಮುಂಡಿ ಅಂಚೆಯ ಮತಿಯಾಂಪಟ್ಟಿ ಗ್ರಾಮದಲ್ಲಿರುವ ಅಲ್ಲಿನ ಖ್ಯಾತ ಸಂತ ಮರಿಯ ಮಗ್ದಲೇನಮ್ಮಳ ಹೆಸರಿನ ಚರ್ಚಿನ ವಾರ್ಷಿಕೋತ್ಸವ ಸಂಭ್ರಮದಿಂದ ನಡೆಯಿತು. ಪೂರ್ವ ನಿರ್ಧರಿತ ಕಾರ್ಯಕ್ರಮದಂತೆ ಬೆಂಗಳೂರಿನಲ್ಲಿರುವ ಬೆಂಗಳೂರು ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಡಾ. ಪೀಟರ್ ಮಚಾದೊ ಅವರು ವಾರ್ಷಿಕೋತ್ಸವದ 10 ಗಂಟೆಯ ಆಡಂಬರದ ಪಾಡುಪೂಜೆಯನ್ನು ನಡೆಸಿಕೊಡಬೇಕಿತ್ತು. ಕಾರಣಾಂತರಗಳಿಂದ ಅವರು ಅದರಲ್ಲಿ ಭಾಗವಹಿಸಲಿಲ್ಲ.
   ಸಂತ ಮಗ್ದಲೇನಮ್ಮಳ ಹೆಸರಿನ ಚರ್ಚಿನ ವಾರ್ಷಿಕೋತ್ಸವ ಎನ್ನುವುದು ಶಿಷ್ಟ ಪದ. ಆದರೆ, ಕ್ರೈಸ್ತ ಜನಪದರ ಬಾಯಲ್ಲಿ ಇದು ಸಂತ ಮಗ್ದಲೇನಮ್ಮಳ ಗುಡಿಯ `ಗುಡಿ ಹಬ್ಬ'. ಜಾತ್ರೆ - ಪರಿಷೆಗಳ ಸಕಲ ಲಕ್ಷಣಗಳನ್ನು ಮೈಗೂಡಿಸಿಕೊಂಡಿರುವ ಈ ಸಂತ ಮಗ್ದಲೇನಮ್ಮಳ `ಗುಡಿ ಹಬ್ಬವು', ಜನಪದರ ಬಾಯಲ್ಲಿ ಸಂತ ಮಗ್ದಲೇನಮ್ಮಳ `ಗುಡಿ ಹಬ್ಬದ ಜಾತ್ರೆ'. 
   ಈ ಸಂತ ಮಗ್ದಲೇನಮ್ಮಳ ಹೆಸರಿನ ಚರ್ಚು ತಮಿಳುನಾಡಿನಲ್ಲಿದ್ದರೂ, ಅದಕ್ಕೆ ಬೆಂಗಳೂರು, ರಾಮನಗರ, ಮೈಸೂರು ಮತ್ತು ಮಂಡ್ಯ, ಚಾಮರಾಜನಗರದ ಹಾಗೂ ಇನ್ನೂ ದೂರದ ಹಾಸನ ಜಿಲ್ಲೆಗಳಲ್ಲಿರುವ ಕಥೋಲಿಕ ಕ್ರೈಸ್ತರ ಒಕ್ಕಲಿನ ಊರುಗಳ ಕ್ರೈಸ್ತ ವಿಶ್ವಾಸಿಗಳು ತಪ್ಪದೇ ಈ ಮಗ್ದಲೇನಮ್ಮಳ ಗುಡಿ ಹಬ್ಬದ ಜಾತ್ರೆಗಳಲ್ಲಿ ಭಾಗವಹಿಸಿ ಪಾವನರಾಗುತ್ತಾರೆ, ದೈವಕೃಪೆಯ ಅನುಭವ ಅವರದಾಗಿರುತ್ತದೆ. ಅವರಿಗೆ ಅದೊಂದು ಪಾವನ ಭೂಮಿ, ಪುಣ್ಯಕ್ಷೇತ್ರ. 
   ಬೆಂಗಳೂರಿನ ಚಾಮರಾಜಪೇಟೆಯ ಕಥೋಲಿಕ ಕ್ರೈಸ್ತರ ಜಾಗೃತಿ ಬಳಗವು, ಪ್ರತಿವರ್ಷವೂ ಮತಿಯಾಂಪಟ್ಟಿಯ ಸಂತ ಮರಿಯ ಮಗ್ದಲೇನಮ್ಮಳ ಜಾತ್ರೆಗೆ ತಪ್ಪದೇ ಭಕ್ತರನ್ನು ಬಸ್ಸುಗಳಲ್ಲಿ ಕರೆದುಕೊಂಡು ಹೋಗುವ ಕಾಯಕವನ್ನು ನೇಮದಂತೆ ಪಾಲಿಸಿಕೊಂಡು ಬರುತ್ತಿರುವ ಪರಿ ಬೆರಗು ಮೂಡಿಸುವಂಥದ್ದು. ಭಕ್ತಾದಿಗಳ ಪಾಲಿಗೆ ಮರಿಯಾಂಪಟ್ಟಿಯ ಸಂತ ಮರಿಯ ಮಗ್ದಲೇನಮ್ಮಳ ಗುಡಿಯು ಒಂದು ಪ್ರಮುಖ ಪುಣ್ಯಕ್ಷೇತ್ರವಷ್ಟೇ ಅಲ್ಲ ಅದ್ಭುತ ಪವಾಡಗಳ ತಾಣವೂ ಆಗಿದೆ. ಧ್ವಜಾರೋಹಣದೊಂದಿಗೆ ಆರಂಭವಾಗುವ ಒಂಬತ್ತು ದಿನಗಳ ಜಾತ್ರೆಯ ಸಂದರ್ಭದಲ್ಲಿ ಹಗಲು ರಾತ್ರಿ ಭಕ್ತಾದಿಗಳ ದಂಡೇ ಅಲ್ಲಿ ಸೇರಿರುತ್ತದೆ. ಗುಡಿಯ ಮುಂದಿನ ಬಯಲೇ ಅವರಿಗೆ ಮನೆ, ಅರಮನೆಯಾಗಿರುತ್ತದೆ. ರಾತ್ರಿಯಿಡೀ ತಮಿಳುನಾಡಿನ ವಿವಿಧೆಡೆಯಿಂದ ಭಕ್ತಜನ ಬರುವುದು ಹೋಗುವುದು ನಡದೇ ಇರುತ್ತದೆ. ಚರ್ಚ್ ಆಡಳಿತ‌ವು ಕಾಣಿಕೆಗಳನ್ನು ಪಡೆಯಲು ತೋರುವಷ್ಟು ಉತ್ಸುಕತೆಯ ಮಾದರಿಯಲ್ಲೇ, ಭಕ್ತಾದಿಗಳಿಗೆ ಸೌಲಭ್ಯ ಕಲ್ಪಿಸುವಲ್ಲಿ ಮತ್ತು ಸುತ್ತಮುತ್ತಲ ಪರಿಸರದ ನೈರ್ಮಲ್ಯ ಕಾಪಾಡುವ ಕಡೆಗೂ ಆಸ್ಥೆಯಿಂದ ಕಾರ್ಯತತ್ಪರವಾಗಿರುತ್ತದೆ.
   ತಮಿಳುನಾಡು ಮತ್ತು ಕರ್ನಾಟಕದ ಕ್ರೈಸ್ತ ಜನಪದರು, ಯೇಸುಸ್ವಾಮಿಯಿಂದ ತನ್ನಲ್ಲಿ ಸೇರಿಕೊಂಡಿದ್ದ ಏಳು ದೆವ್ವಗಳನ್ನು ಬಿಡಿಸಿಕೊಂಡ, ಸಂತ ಪದವಿಯನ್ನು ಹೊಂದಿರುವ ಸಂತ ಮಗ್ದಲಿನ ಮರಿಯಳನ್ನು ದೆವ್ವ ಬಿಡಿಸುವ ದೈವವೆಂದು ನಂಬಿದ್ದಾರೆ. ಮಕ್ಕಳಿಲ್ಲದವರಿಗೆ ಮಕ್ಕಳನ್ನು ದಯಪಾಲಿಸುವ, ಹುಟ್ಟಿದ ಮಕ್ಕಳನ್ನು ಆಶೀರ್ವದಿಸುವ ಮಹಿಮಾಭರಿತ ಸಂತಳೆಂದು ವಿಶ್ವಾಸಿಸುತ್ತಾರೆ. ಒಂಬತ್ತು ದಿನಗಳ ಪ್ರಾರ್ಥನೆಗಳ ನಂತರ ಕೊನೆಯ ದಿನ ನಡೆಯುವ ಸಂತ ಮಗ್ದಲಿನ ಮರಿಯಳ ಹಾಗೂ ವಿವಿಧ ಸಂತರುಗಳ ತೇರುಗಳ ಮೆರವಣಿಗೆಯನ್ನು ಕಣ್ತುಂಬಿಕೊಂಡು ಪಾವನರಾಗುತ್ತಾರೆ. 
 ಪ್ರಥಮ ಶುಭಸಂದೇಶಕಾರ್ತಿಗೆ ಹಬ್ಬದ ಸಂಭ್ರಮ:
   ಕಥೊಲಿಕ ಧರ್ಮಸಭೆಯು ಪ್ರತಿ ವರ್ಷ ಜುಲೈ 22ರಂದು ಸಂತ ಮರಿಯ ಮಗ್ದಲೇನಮ್ಮಳ ಸ್ಮರಣೆಯ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದೆ. ಸಂತ ಮರಿಯ ಮಗ್ದಲೇನಮ್ಮಳು ಯೇಸುಸ್ವಾಮಿಯ ಪುನರುತ್ಥಾನರಾದ ಸಂಗತಿಗೆ ಮೊತ್ತಮೊದಲ ಸಾಕ್ಷಿಯಾಗಿದ್ದವಳು, ಹೀಗಾಗಿ ಅವಳು ಮೊತ್ತಮೊದಲ ಶುಭಸಂದೇಶಕಾರ್ತಿಯೂ ಹೌದು. 
   ಆಕೆಯನ್ನು ಅಪೋಸ್ತಲರ ಅಪೋಸ್ತಲಳು (ಪ್ರೇಷಿತರ ಪ್ರೇಷಿತೆ) ಎಂದು ಕಥೋಲಿಕ ಧರ್ಮಸಭೆ ಗುರುತಿಸುತ್ತದೆ. ಈಗ ಅವಳ ವಾರ್ಷಿಕ ಉತ್ಸವವನ್ನು ಸ್ಮರಣೆಯಿಂದ ಹಬ್ಬದ ಮೇಲ್ದರ್ಜೆಗೆ ಏರಿಸಲಾಗಿದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಇದುವರೆಗೂ ಜುಲೈ 22ರಂದು ಸ್ಮರಣೆಯ ಸೌಭಾಗ್ಯವನ್ನು ಪಡೆದಿದ್ದ ಸಂತ ಮರಿಯ ಮಗ್ದಲೇನಮ್ಮಗಳಿಗೆ ಕಳೆದ 2016ನೇ ಸಾಲಿನಿಂದ ಹಬ್ಬದ ಸ್ಥಾನಮಾನ ದಕ್ಕಿದೆ. ಈ ಸಂಬಂಧ ಇಂದಿನ ಪಾಪುಸ್ವಾಮಿಗಳಾದ (ರೋಮಿನಲ್ಲಿರುವ ಕಥೋಲಿಕ ಧರ್ಮಸಭೆಯ ಸರ್ವೋಚ್ಚಗುರು, ಜಗದ್ಗುರು ಪೋಪರು) 2016ರ ಸಾಲಿನಲ್ಲಿಯೇ ಅವಳ ಕೇವಲ ಸ್ಮರಣೆಯ ದಿನವನ್ನು ಅಧಿಸೂಚನೆ ಹೊರಡಿಸುವ ಮೂಲಕ ಹಬ್ಬದ ದಿನವೆಂದು ಮೇಲ್ದರ್ಜೆಗೆ ಏರಿಸಿ ಆದೇಶಿಸಿದ್ದಾರೆ. 
   ಅಧಿಸೂಚನೆಯ ಕಾರಣವಾಗಿ, ಸಂತ ಮರಿಯ ಮಗ್ದಲೇನಮ್ಮಳನ್ನು ಯೇಸುಸ್ವಾಮಿಯ ತಾಯಿ ಆಶೀರ್ವದಿತ ಕನ್ಯಾಮರಿಯಮ್ಮಳ ನಂತರ, ವಾರ್ಷಿಕ ಹಬ್ಬದ ಸೌಭಾಗ್ಯವನ್ನು ಪಡೆದ ಏಕೈಕ ಮಹಿಳೆ ಎಂದು ಗುರುತಿಸುವಂತಾಗಿದೆ. ಕಥೋಲಿಕ ಧರ್ಮಸಭೆಯು, ಧರ್ಮಸಭೆಯಲ್ಲಿನ ಅವರ ಮಹತ್ವದ ಪಾತ್ರದ ಹಿನ್ನೆಲೆಯಲ್ಲಿ ಪ್ರೇಷಿತರಿಗೆ (ಯೇಸುವಿನ ನೇರ ಹನ್ನೆರಡು ಜನ ಶಿಷ್ಯರು), ಶುಭಸಂದೇಶಕರ್ತರು ಮತ್ತು ವಿಶೇಷವಾಗಿ ಕೆಲವೇ ಕೆಲವು ಜನ ಮಹಿಮಾನ್ವಿತ ಸಂತರಿಗೆ ಮೀಸಲಾಗಿರುವ ಹಬ್ಬದ ಸ್ಥಾನಮಾನವನ್ನು ಕೊಡಮಾಡಿದೆ. 
   ಕಥೋಲಿಕ ಧರ್ಮಸಭೆಯ ಪಂಚಾಂಗದ ಪ್ರಕಾರ, ಮೊದಲ ಹಂತದ ಗೌರವದ ಸಾಲಿನಲ್ಲಿರುವವರಿಗೆ ಮಾತ್ರ ಸಾಂಭ್ರಮಿಕ ಪೂಜಾವಿಧಿಯ ಅರ್ಹತೆ ಇರುತ್ತದೆ. ನಂತರದಲ್ಲಿ ಇರುವವರಿಗೆ ಹಬ್ಬದ ಸ್ಥಾನಮಾನ ಲಭಿಸುತ್ತದೆ. ಇದರೊಂದಿಗೆ ಕೊನೆಯಲ್ಲಿ ಸ್ಮರಣೆಯ ಪಟ್ಟಿಯು ಇರುತ್ತದೆ. ಬಹುತೇಕ ಸಂತರು ಈ ಸ್ಮರಣೆಯ ಪಟ್ಟಿಯಲ್ಲಿಯೇ ಇದ್ದಾರೆ. ಅದರಲ್ಲೂ ಕೆಲವು ಸಂತರ ಸ್ಮರಣೆಯನ್ನು ಐಚ್ಛಿಕ ಎಂದೂ ಕಥೋಲಿಕ ಧರ್ಮಸಭೆ ಗುರುತಿಸಿದೆ.
   ಈ ಅಧಿಸೂಚನೆಯ ದೆಸೆಯಿಂದ ಇಂದಿನ ಪಾಪು ಸ್ವಾಮಿಗಳು ಸಂತ ಮರಿಯ ಮಗ್ದಲೇನಮ್ಮಳಿಗೆ ಅಧಿಕೃತವಾಗಿ ಹೆಚ್ಚಿನ ಮಹತ್ವವನ್ನು ಗೌರವಯುತ ಸ್ಥಾನವನ್ನು ನೀಡಿದ್ದಾರೆ. ತನ್ಮೂಲಕ ತಾವು ಧರ್ಮಸಭೆಯಲ್ಲಿ ಮಹಿಳೆಯರ ಪರ, ಅವರಿಗೂ ಧರ್ಮಸಭೆಯಲ್ಲಿ ಸೂಕ್ತ ಸ್ಥಾನಮಾನ ಒದಗಿಸುವುದು ತಮ್ಮ ಆಸ್ಥೆಯ ನಿಲುವು ಎಂದು ಪ್ರತಿಪಾದಿಸಿದ್ದಾರೆ. 
   ಲೆಕ್ಸ್ ಒರಂಡಿ ಲೆಕ್ಸ್ ಕ್ರೆಡೆಂಡಿ- ನಮ್ಮ ಪೂಜೆಯು, ನಮ್ಮದೇ ನಂಬುಗೆಯ ಪ್ರತಿರೂಪ. ಇದು ರೋಮನ್ ಕಥೋಲಿಕ ಪಂಥದ ಅಧಿಕೃತ ದೇವ ಭಾಷೆ/ಧರ್ಮ ಭಾಷೆ - ಲತೀನ್ ಭಾಷೆಯಲ್ಲಿರುವ ಕಥೋಲಿಕ ಕ್ರೈಸ್ತರು ನಂಬುವ ಧಾರ್ಮಿಕ ಮೂಲತತ್ವ. ಕಥೋಲಿಕ ಧಾರ್ಮಿಕ ಸಂಪ್ರದಾಯದ ಈ ಮೂಲ ತತ್ವದ ಪ್ರಕಾರ, ನಮ್ಮ ನಂಬುಗೆಯ ಪ್ರತಿರೂಪ ನಮ್ಮ ಪೂಜಾವಿಧಿಗಳಲ್ಲಿ ಪ್ರತಿಫಲಿಸಬೇಕು. ಈ ಬೆಳವಣಿಗೆ ಅದೇ ಪಥದ್ದು ಎಂದು ಗುರುತಿಸಲಾಗುತ್ತಿದೆ. 
ಶುಭಸಂದೇಶಗಳಲ್ಲಿ ಮಗ್ದಲಿನ ಮರಿಯ:
   ಯೇಸುಸ್ವಾಮಿಯ ಜೀವನ ಚರಿತ್ರೆ ಮತ್ತು ಬೋಧನೆಗಳ ಗುಚ್ಛವಾಗಿರುವ ನಾಲ್ಕು ಶುಭಸಂದೇಶಗಳಲ್ಲಿ, ಪ್ರಸ್ತಾಪಿಸಲಾದ ಮಹಿಳೆಯರಲ್ಲಿ ಗಲಿಲೇಯ ಸರೋವರದ ದಡದ ಗ್ರಾಮ ಮಗ್ದಲಿನದ ಮರಿಯಳ ಹೆಸರು ಬಹು ಮುಖ್ಯವಾದುದಾಗಿದೆ. ಏಕೆಂದರೆ, ಯೇಸುಸ್ವಾಮಿಯೊಂದಿಗೆ ಹೆಜ್ಜೆಯಿಟ್ಟ, ಶಿಲುಬೆಗೇರಿದ ಸಂದರ್ಭದಲ್ಲಿ ಉಪಸ್ಥಿತಳಿದ್ದ ಹಾಗೂ ಪುನರುತ್ಥಾನರಾದ ಸಂದರ್ಭದಲ್ಲಿ ಸಮಾಧಿಯ ಹತ್ತಿರ ಎಲ್ಲರಿಗಿಂತಲೂ ಮೊದಲು ಯೇಸುಸ್ವಾಮಿಯ ದರ್ಶನದ ಭಾಗ್ಯ ಪಡೆದ ಮಹಿಳೆ ಎಂಬ ಹೆಗ್ಗಳಿಕೆ ಅವಳದು,
   ಯೇಸುವಿನ ತಾಯಿ ಮರಿಯಳಲ್ಲದೇ, ಮಗ್ದಲೇನ ಮರಿಯ, ಮಾರ್ತಾ, ಲಾಜರಸ್ ಅವರ ಸಹೋದರಿ ಬೆಥಾನಿಯದ ಮರಿಯ, ಜೇಮ್ಸ್ ಮತ್ತು ಜೋಸೆಫರ ತಾಯಿ ಮರಿಯ, ಯಕೋಬನ ತಾಯಿ ಮರಿಯ ಮತ್ತು ಕೊಪಸನ ಹೆಂಡತಿ ಮರಿಯ- ಅವರುಗಳಿದ್ದಾರೆ. ಇದಲ್ಲದೇ, ಇನ್ನಿಬ್ಬರು ಮಹಿಳೆಯರೂ ಶುಭಸಂದೇಶಗಳಲ್ಲಿ ಪ್ರಮುಖವಾಗಿ ಕಾಣಸಿಗುತ್ತಾರೆ. ಮೊದಲಿಗಳು ಯೇಸುಸ್ವಾಮಿಗೆ ಬಾವಿಯಿಂದ ನೀರು ಸೆಳೆದುಕೊಟ್ಟ ಸಮಾರಿತ ಮಹಿಳೆ. ಮತ್ತು ಮತ್ತೊಬ್ಬಳು ಧರ್ಮಶಾಸ್ತ್ರದಲ್ಲಿ ತಿಳಿಸಿರುವಂತೆ ನ್ಯಾಯಸಮ್ಮತ ಶಿಕ್ಷೆಗಾಗಿ ಆಗ್ರಹಿಸಿ ಯೇಸುಸ್ವಾಮಿಯ ಮುಂದೆ ಫರಿಸಾಯರು ತಂದು ನಿಲ್ಲಿಸಿದ ವೇಶ್ಯೆ.
  ಲೂಕನ ಶುಭಸಂದೇಶದಲ್ಲಿ (8ನೇ ಅಧ್ಯಾಯ 1 - 3ನೇ ಚರಣಗಳು) ಮಗ್ದಲೇನಿನ ಮರಿಯಳ ಪ್ರಸ್ತಾಪವಿದೆ. 
  `ತರುವಾಯ ಯೇಸುಸ್ವಾಮಿ ದೇವರ ಸಾಮ್ರಾಜ್ಯದ ಶುಭಸಂದೇಶವನ್ನು ಸಾರುತ್ತಾ ಪಟ್ಟಣಗಳಲ್ಲೂ, ಹಳ್ಳಿಗಳಲ್ಲೂ ಸಂಚಾರ ಮಾಡಿದರು. ಹನ್ನೆರಡು ಮಂದಿ ಶಿಷ್ಯರೂ ಅವರೊಡನೆ ಇದ್ದರು. ದೆವ್ವಗಳ ಕಾಟದಿಂದಲೂ ರೋಗರುಜಿನಗಳಿಂದಲೂ ಬಿಡುಗಡೆ ಹೊಂದಿದ್ದ ಕೆಲವು ಮಹಿಳೆಯರೂ ಅವರ ಜೊತೆಯಲ್ಲಿದ್ದರು. ಅವರಾರೆಂದರೆ, ಮಗ್ದಲದ ಮರಿಯಳು, ಹೆರೋದನ ಅರಮನೆಯ ಮೇಲ್ವಿಚಾರಕನಾಗಿದ್ದ ಕೂಜನ ಪತ್ನಿ ಯೊವಾನ್ನಳು, ಅಲ್ಲದೇ ಸುಸಾನ್ನಳು, ಮತ್ತಿತರ ಅನೇಕರು. ಇವರು ತಮ್ಮ ಆಸ್ತಿಪಾಸ್ತಿಯನ್ನು ವೆಚ್ಚಮಾಡಿ ಯೇಸುವಿಗೂ ಅವರ ಶಿಷ್ಯರಿಗೂ ಉಪಚಾರ ಮಾಡುತ್ತಿದ್ದರು.' ನಂತರ, ಯೇಸುಸ್ವಾಮಿ ಶಿಲುಬೆಗೇರಿಸಿದ ನಂತರದ ವಿವರಗಳಲ್ಲೂ ಅದೇ ಲೂಕನ ಶುಭಸಂದೇಶದಲ್ಲಿ (24ನೇ ಅಧ್ಯಾಯ 13 ರಿಂದ 24ರವರೆಗಿನ ಚರಣಗಳಲ್ಲಿ) ಮಹಿಳೆಯರ ಪ್ರಸ್ತಾಪವಿದೆ. ಆದರೆ, ಅವರನ್ನು ಹೆಸರಿಸಿಲ್ಲ.
  ಯೋವಾನ್ನನ ಶುಭಸಂದೇಶದಲ್ಲಿ (20ನೇ ಅಧ್ಯಾಯ 12ರಿಂದ 18ರವರೆಗಿನ ಚರಣಗಳು), ಯೇಸುಸ್ವಾಮಿ ಮಗ್ದಲಿನ ಮರಿಯಳಿಗೆ ದರ್ಶನಕೊಟ್ಟು, ತನ್ನ ಇರುವಿಕೆಯನ್ನು ಶಿಷ್ಯರಿಗೆ ತಿಳಿಸಲು ಹೇಳುತ್ತಾರೆ. ಮತ್ತಾಯನ ಶುಭಸಂದೇಶದಲ್ಲಿ (16ನೇ ಅಧ್ಯಾಯ 9 ರಿಂದ 11ರವರೆಗಿನ ಚರಣಗಳು) ಮಗ್ದಲಿನ ಮರಿಯಳಿಗೆ ದರ್ಶನಕೊಟ್ಟ ಪ್ರಸಂಗದ ವಿವರಣೆ ಇದೆ. `ಭಾನುವಾರ ಮುಂಜಾನೆ ಪುನರುತ್ಥಾನ ಹೊಂದಿದ ಯೇಸುಸ್ವಾಮಿ, ಮೊತ್ತಮೊದಲು ಮಗ್ದಲದ ಮರಿಯಳಿಗೆ ಕಾಣಿಸಿಕೊಂಡರು. ಅವರು ಏಳು ದೆವ್ವಗಳನ್ನು ಹೊರಗಟ್ಟಿದ್ದು ಈಕೆಯಿಂದಲೇ. ಈಕೆ ಹೋಗಿ ತಾನು ಕಂಡದ್ದನ್ನು ಯೇಸುವಿನ ಸಂಗಡಿಗರಿಗೆ ತಿಳಿಸಿದಳು. ಅವರಾದರೋ ಇನ್ನೂ ಶೋಕಭರಿತರಾಗಿ ಅಳುತ್ತಾ ಇದ್ದರು. ಆದರೆ, ಯೇಸು ಜೀವಂತರಾಗಿದ್ದಾರೆ ಮತ್ತು ಆಕೆಗೆ ಕಾಣಿಸಿಕೊಂಡಿದ್ದಾರೆ ಎಂಬ ವಾರ್ತೆಯನ್ನು ಕೇಳಿದಾಗ ಅವರು ಅದನ್ನು ನಂಬಲಿಲ್ಲ.' 
  ಮತ್ತಾಯನ ಶುಭಸಂದೇಶದಲ್ಲೂ, [`ಭಾನುವಾರ ಬೆಳಗಾಗಲು ಬಂದಿತ್ತು. ಮಗ್ದಲದ ಮರಿಯಳು ಮತ್ತು ಆ ಇನ್ನೊಬ್ಬ ಮರಿಯಳು ಸಮಾಧಿಯನ್ನು ನೋಡಲು ಬಂದರು.... ತಟ್ಟನೇ ಯೇಸುವೇ ಅವರನ್ನು ಎದುರುಗೊಂಡು, `ನಿಮಗೆ ಶುಭವಾಗಲಿ' ಎಂದರು. ಆ ಮಹಿಳೆಯರು ಹತ್ತಿರಕ್ಕೆ ಬಂದು ಅವರ ಪಾದಕ್ಕೆರಗಿ ಪೂಜಿಸಿದರು' (28ನೇ ಅಧ್ಯಾಯ 1ರಿಂದ 10ರವರೆಗಿನ ಚರಣಗಳು)] ಸಮಾಧಿಯ ಹತ್ತಿರ ನಡೆದ ಘಟನಾವಳಿಗಳ ವಿವರಣೆ ಇದೆ.
ತಲೆಯ ಮೇಲೆ ತೈಲವನ್ನು ಸುರಿದಳು: 
   `ಅಂದು ಯೇಸು ಬೆಥಾನಿಯದಲ್ಲಿ ಕುಷ್ಟರೋಗಿ ಸಿಮೋನನ ಮನೆಯಲ್ಲಿದ್ದರು. ಆಗ ಮಹಿಳೆಯೊಬ್ಬಳು ಅಮೃತಶಿಲೆಯ ಭರಣಿಯ ತುಂಬ ಅತ್ಯಮೂಲ್ಯವಾದ ಸುಗಂಧ ತೈಲವನ್ನು ತೆಗೆದುಕೊಂಡು ಅಲ್ಲಿಗೆ ಬಂದಳು. ಊಟಕ್ಕೆ ಕುಳಿತಿದ್ದ ಯೇಸುವಿನ ತಲೆಯ ಮೇಲೆ ಆ ತೈಲವನ್ನು ಸುರಿದಳು. ಇದನ್ನು ಕಂಡ ಶಿಷ್ಯರು ಸಿಟ್ಟಿಗೆದ್ದರು.``ಏಕೆ ಇಷ್ಟೊಂದು ವ್ಯರ್ಥ? ಈ ತೈಲವನ್ನು ಅಧಿಕ ಬೆಲೆಗೆ ಮಾರಿ, ಬಂದ ಹಣವನ್ನು ಬಡವರಿಗೆ ಕೊಡಬಹುದಿತ್ತಲ್ಲ'', ಎಂದರು. ಇದನ್ನು ಅರಿತುಕೊಂಡ ಯೇಸು ಶಿಷ್ಯರಿಗೆ, ``ಈ ಮಹಿಳೆಗೇಕೆ ಕಿರುಕುಳ ಕೊಡುತ್ತೀರಿ? ಈಕೆ ನನಗೊಂದು ಸತ್ಕಾರ್ಯ ಮಾಡಿದ್ದಾಳೆ. ಬಡಬಗ್ಗರು ನಿಮ್ಮ ಸಂಗಡ ಯಾವಾಗಲೂ ಇರುತ್ತಾರೆ. ಆದರೆ, ನಾನು ನಿಮ್ಮ ಸಂಗಡ ಯಾವಾಗಲೂ ಇರುವುದಿಲ್ಲ. ಈಕೆ ಈ ತೈಲವನ್ನು ನನ್ನ ಮೇಲೆ ಸುರಿದು ನನ್ನ ಶವಸಂಸ್ಕಾರಕ್ಕೆ ಸಿದ್ಧಮಾಡಿದ್ದಾಳೆ. ಜಗತ್ತಿನಾದ್ಯಂತ, ಎಲ್ಲೆಲ್ಲಿ ನನ್ನ ಶುಭಸಂದೇಶ ಪ್ರಕಟವಾಗುವುದೋ ಅಲ್ಲೆಲ್ಲಾ ಈ ಸತ್ಕಾರ್ಯವನ್ನು ಈಕೆಯ ಸವಿನೆನಪಿಗಾಗಿ ಸಾರಲಾಗುವುದು, ಇದು ನಿಶ್ಚಯ'' ಎಂದರು.' (ಮತ್ತಾಯನ ಶುಭಸಂದೇಶ 26ನೇ ಅಧ್ಯಾಯ 6ನೇ ಚರಣದಿಂದ 13ನೇ ಚರಣದವರೆಗೆ)
   ಮಾರ್ಕನ ಶುಭಸಂದೇಶದ 14ನೇ ಅಧ್ಯಾಯ 3ರಿಂದ 9ರವರೆಗಿನ ಚರಣಗಳಲ್ಲಿ ಇದೇ ಮಾಹಿತಿಯ ಮತ್ತಷ್ಟು ವಿವರಗಳಿವೆ. ಆ ಮಹಿಳೆಯು ಭರಣಿಯನ್ನು ಒಡೆದು ಯೇಸುವಿನ ತಲೆಯ ಮೇಲೆ ಅತ್ಯಮೂಲ್ಯವಾದ ಜಟಮಾಂಸಿ ಸುಗಂಧವನ್ನು ಸುರಿಯುತ್ತಾಳೆ. ಯೊವಾನ್ನನ ಶುಭಸಂದೇಶದ 12ನೇ ಅಧ್ಯಾಯ 1ರಿಂದ 8ನೇ ಚರಣದವರೆಗಿನ ಮಾಹಿತಿಯಲ್ಲಿ ಸುಗಂಧ ತೈಲವನ್ನು ಅತ್ಯಂತ ಬೆಲೆಮಾಳುವ ಅಚ್ಚ ಜಟಮಾಂಸಿ ಸುಗಂಧ ಎಂದು ಗುರುತಿಸಲಾಗಿದೆ. ಇಲ್ಲಿ ಆ ಮಹಿಳೆ, ಅರ್ಧ ಲೀಟರಿನಷ್ಟಿದ್ದ ಆ ತೈಲವನ್ನು ತಲೆಯ ಮೇಲೆ ಸುರಿಯದೇ, `ಯೇಸುವಿನ ಪಾದಗಳಿಗೆ ಹಚ್ಚಿ, ತನ್ನ ತಲೆಗೂದಲಿನಿಂದ ಆ ಪಾದಗಳನ್ನು ಒರೆಸಿದಳು. ತೈಲದ ಸುವಾಸನೆ ಮನೆಯಲ್ಲೆಲ್ಲಾ ಹರಡಿತು.' ಎಂದು ತಿಳಿಸಲಾಗಿದೆ. ಜೊತೆಗೆ ಯೊವಾನ್ನನು ಆ ಮಹಿಳೆಯನ್ನು ಮರಿಯಳು ಎಂದು ದಾಖಲಿಸಿದ್ದಾನೆ. ಲೂಕನ ಶುಭಸಂದೇಶದಲ್ಲಿ ಬೆಥಾನಿಯದಲ್ಲಿನ ಸಿಮೋನನ್ನು ಫರಿಸಾಯ ಎಂದು ಗುರುತಿಸಿದ್ದರೆ, ಮತ್ತಾಯನ ಶುಭಸಂದೇಶದಲ್ಲಿ ಅವನನ್ನು ಕುಷ್ಟರೋಗಿ ಸಿಮೋನ ಎಂದು ಹೆಸರಿಸಲಾಗಿದೆ.
  ಈ ಸುಗಂಧವನ್ನು ತಂದ ಮಹಿಳೆಯನ್ನು ನಂತರದಲ್ಲಿ ಮಗ್ದಲಿನ ಮರಿಯ ಎಂದು ಗುರುತಿಸಲಾಗುತ್ತದೆ. ಈ ಬೆಳವಣಿಗೆಗೆ ಪಾಪುಸ್ವಾಮಿ ಮೊದಲನೇ ಜಾಗರೂಕಪ್ಪ (ಗ್ರೆಗೋರಿ) ಕಾರಣರು ಎಂದು ಹೇಳಲಾಗುತ್ತದೆ. ಪ್ಲೇಗ್ ಮಾರಿಯಿಂದ ಬಸವಳಿದ್ದ ಸಂದರ್ಭದಲ್ಲಿ ಪಾಪುಸ್ವಾಮಿ ಪಟ್ಟಕ್ಕೆ ಏರಿದ್ದ ಅವರಿಗೆ, ಮಗ್ದಲಿನ ಮರಿಯಳು, ಆಧ್ಯಾತ್ಮಿಕ ಪ್ಲೇಗ್ ಮಾರಿಯನ್ನು ದೂರಿಕರಿಸುವ ಪಶ್ಚಾತ್ತಾಪದ ಪ್ರತಿಮೆಯಾಗಿ ಕಂಡಳು. ಯೇಸು ಅವಳಿಂದ ಬಿಡಿಸಿದ ದೆವ್ವಗಳನ್ನು ಅವಳಲ್ಲಿದ್ದ ಏಳು ದುರ್ಗುಣಗಳು ಎಂದು ವ್ಯಾಖ್ಯಾನಿಸಿದರಂತೆ. ಜಗದ್ರಕ್ಷಕನ ಚರಣಗಳನ್ನು ಚುಂಬಿಸಿ ಪಾಪಮುಕ್ತಳಾದ ಅವಳು ಪುನೀತಳು ಎಂದು ಅವರು ಸಾರಿದರಂತೆ.
ಶುಭಸಂದೇಶಗಳು ಸಾಕ್ಷಾತ್ ವರದಿಗಳಲ್ಲ:
   ಈಗ ನಮಗೆ ಚಿರಪರಿಚಿತದಲ್ಲಿರುವ ನಾಲ್ಕು ಶುಭಸಂದೇಶಗಳನ್ನು, ಯೇಸುಸ್ವಾಮಿಯ ಮರಣಾನಂತರದ ಕ್ರಿಸ್ತ ಶಕ 35-85ರ ನಂತರದಲ್ಲಿ, ವಿವಿಧೆಡೆ ಹರಿದುಹಂಚಿಹೋಗಿದ್ದ ಹಿಂಬಾಲಕರಲ್ಲಿ ಯೇಸುಸ್ವಾಮಿಯನ್ನು ಕಣ್ಣಾರೆ ಕಂಡವರ, ಅವರ ಬಗ್ಗೆ ಕೇಳಿಸಿಕೊಂಡವರು ಒದಗಿಸಿದ ಮಾಹಿತಿಗಳನ್ನು ಆಧರಿಸಿ ರಚಿಸಲಾಗಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. ಒಂದೇ ಮಾದರಿಯಲ್ಲಿರುವ ಮಾರ್ಕ, ಮತ್ತಾಯ ಮತ್ತು ಲೂಕರ ಶುಭಸಂದೇಶಗಳನ್ನು ಕ್ರಿಸ್ತ ಶಕ 65ರಿಂದ 85ರ ನಡುವೆ ರಚಿಸಿರಬೇಕು ಎನ್ನಲಾಗುತ್ತದೆ. ಕ್ರಿಸ್ತ ಶಕ 90-95ರಲ್ಲಿ ರಚನೆಯಾದ ಯೊವಾನ್ನನ ಶುಭಸಂದೇಶ ಉಳಿದವುಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ. ಇವೆಲ್ಲವೂ ಸಾಕ್ಷಾತ್ ಚರಿತ್ರೆಗಳಲ್ಲ, ನೆನಪಿನ ಬುತ್ತಿಗಳನ್ನು ಬಿಚ್ಚಿ ಆ ಕಾಲದ, ದೈವಶಾಸ್ತ್ರದ ಆಶಯಗಳ ಅಗತ್ಯಕ್ಕೆ ತಕ್ಕಂತೆ ಭಟ್ಟಿ ಇಳಿಸಿ ಸೋಸಿ ತೆಗೆದ ಸಾರಗಳ ಗುಚ್ಛಗಳು ಎಂಬುದು ತಜ್ಞರ ಅಭಿಪ್ರಾಯ.
   ಮರಿಯ ಹೆಸರಿನ ಹಲವಾರು ವ್ಯಕ್ತಿಗಳಿಂದಾದ ಗೊಂದಲ ಹೆಸರಿಲ್ಲದ ಜಾರಿದ ಮಹಿಳೆಯರೊಂದಿಗೆ ಮಗ್ದಲಿನ ಮರಿಯಳನ್ನು ಸಮೀಕರಿಸಲಾಗಿದೆ ಎನ್ನಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮಗ್ದಲಿನ ಮರಿಯಳನ್ನು ಯೇಸುಸ್ವಾಮಿಯ ಕೃಪೆಯಿಂದ ಉದ್ಧಾರಗೊಂಡ ವೇಶ್ಯೆ ಎಂದು ಗುರುತಿಸಿದ ಕಥೋಲಿಕ ಧರ್ಮಸಭೆಯ ಪಂಡಿತರು ಅವಳನ್ನು ಪಾಪಗಳಿಗಾಗಿ ಪಶ್ವಾತ್ತಾಪಪಟ್ಟು ಮುಕ್ತಿಪಥದತ್ತ ಸಾಗಿದವಳು ಎಂದು ಬಣ್ಣಿಸಿದ್ದಾರೆ. ಅದರಂತೆಯೇ ಹತ್ತಾರು ಚಿತ್ರಗಳಲ್ಲಿ ಅವಳನ್ನು ಅದೇ ಬಗೆಯಲ್ಲಿ ಚಿತ್ರಿಸಲಾಗಿದೆ. ಸೈತಾನನ ಪ್ರಲೋಭನೆಗೆ ಮೊದಲು ಒಳಗಾದವಳು ಮಹಿಳೆ. ಮಹಿಳೆ ಲೈಂಗಿಕತೆಗೆ, ಪಾಪ ಕೃತ್ಯಗಳಿಗೆ ಕಾರಣಳು ಎಂಬುದನ್ನು ಗಟ್ಟಿಗೊಳಿಸಲು ಕ್ರೈಸ್ತ ಧರ್ಮಸಭೆ ಮಗ್ದಲಿನ ಮರಿಯಳನ್ನು ಸಮರ್ಥವಾಗಿ ಬಳಸಿಕೊಂಡಿತು ಎಂದು ಹೇಳಲಾಗುತ್ತದೆ.
   ಪುನರುತ್ಥಾನಗೊಂಡ ಯೇಸು ಮರಿಯಳನ್ನು ಹೆಸರು ಹಿಡಿದು ಕರೆಯುವುದು ಮತ್ತು ಅವಳಿಗೆ `ನನ್ನನ್ನು ಹಿಡಿದಿಟ್ಟುಕೊಂಡಿರಬೇಡ' ಎಂದು ಹೇಳುವುದು (ಯೊವಾನ್ನನ ಶುಭಸಂದೇಶ 20ನೇ ಅಧ್ಯಾಯ 16ಮತ್ತು 17ನೇ ಚರಣಗಳು) - ಹತ್ತಾರು ಬಗೆಯ ವ್ಯಾಖ್ಯಾನಗಳಿಗೆ ಕಾರಣವಾದದ್ದಂತೂ ನಿಜ.

 ಪುರುಷ ಪ್ರಧಾನ ನಿಲುವಿಗೆ ವಾಲಿದ ಧರ್ಮಸಭೆ:
  ಇತಿಹಾಸಕಾರರು ಹೇಳುವಂತೆ, ಒಂದನೇ ಶತಮಾನದಲ್ಲಿದ್ದ ಯೇಸುಕ್ರಿಸ್ತನ ಬೋಧನೆಗಳ ಪ್ರಭಾವಕ್ಕೆ ಒಳಗಾದ ಜನರಲ್ಲಿ ಬಹತೇಕರು ಅನಕ್ಷರಸ್ಥರಾಗಿದ್ದರು. ವಿವಿಧ ಸಂಪ್ರದಾಯಗಳ ಹಿನ್ನೆಲೆ ಹೊಂದಿದ್ದ ಆ ಜನರು ಯೇಸುಸ್ವಾಮಿ ಶುಭಸಂದೇಶಗಳನ್ನು ಮೌಖಿಕವಾಗಿ ಪ್ರಚುರಗೊಳಿಸುವಾಗ ಕೆಲವಷ್ಟು ವ್ಯತ್ಯಾಸಗಳು ಗೊಂದಲಗಳು ಆಗಿರಲೂಬಹುದು. 
  ಆದಿಯಲ್ಲಿ ಭೂಮಧ್ಯ ಸಮುದ್ರದ ತೀರಗಳಲ್ಲಿ ವಿವಿಧ ಜನಸಮುದಾಯಗಳಲ್ಲಿ ಕ್ರೈಸ್ತ ಮತ ಬೇರೂರಿದ ಸಂದರ್ಭದಲ್ಲಿ ಪ್ರತಿಯೊಂದು ಸಮುದಾಯವೂ ವಿಶ್ವಾಸ ಮತ್ತು ಆಚರಣೆಗಳಲ್ಲಿ ಪ್ರತ್ಯೇಕತೆ ರೂಢಿಸಿಕೊಂಡಿದ್ದವು. ಬಾಯಿ ಮಾತಿನ ಹೇಳಿಕೆಗಳು, ಮೌಖಿಕ ಸಂಪ್ರದಾಯಗಳನ್ನು ಬರಹದ ಭಟ್ಟಿಗೆ ಇಳಿಸಿದಾಗ, ವಿವಿದ ಸಮುದಾಯಗಳಲ್ಲಿ ಅವರದೇ ಆದ ಬಗೆಬಗೆಯ ಶುಭಸಂದೇಶದ ಹೊತ್ತಿಗೆಗಳು ಅಸ್ತಿತ್ವದಲ್ಲಿದ್ದವು. ನಾಲ್ಕನೇ ಶತಮಾನದ ಹೊತ್ತಿಗೆ ಇಂದು ನಮಗೆ ತಿಳಿದಿರುವ ಸಾರ್ವತ್ರಿಕ ಬಳಕೆಯಲ್ಲಿರುವ ದೇವರ ವಾಕ್ಯ - ಹಳೆಯ ಮತ್ತು ಹೊಸ ಒಡಂಬಡಿಕೆಗಳ ಶ್ರೀಗ್ರಂಥ ಸತ್ಯವೇದ (ಪವಿತ್ರ ಬೈಬಲ್) ರೂಪತಾಳಿತು ಎನ್ನಲಾಗುತ್ತದೆ. ಹಳೆಯ ಒಡಂಬಡಿಕೆಯು ಯೆಹೂದ್ಯರ ಹಿನ್ನಲೆಯನ್ನು ಹೊಂದಿದ್ದರೆ, ಹೊಸ ಒಡಂಬಡಿಕೆಯು ಯೇಸುಕ್ರಿಸ್ತ ಮತ್ತು ನಂತರದ ಪ್ರೇಷಿತರ ಕಾರ್ಯವನ್ನೊಳಗೊಂಡಿದೆ.
  ಅಂದಿನ ಕ್ರೈಸ್ತ ಧರ್ಮಸಭೆಯು, ತನ್ನ ನಂಬುಗೆ ವಿಶ್ವಾಸಗಳಿಗೆ ಪೂರಕವಾದ ಆಯ್ದ ಹೊತ್ತಿಗೆಗಳಿಗೆ ಅಧಿಕೃತ ಮಾನ್ಯತೆ ನೀಡಿ, ಉಳಿದವುಗಳನ್ನು ಅನಧಿಕೃತ ಎಂದು ಸಾರಿತು. ಅವುಗಳನ್ನು ನಾಶಪಡಿಸುವಲ್ಲಿ ಆಸಕ್ತಿ ತಳೆಯಿತು. ಆ ಸಮಯದಲ್ಲಿ ನಾಶಗೊಂಡ ಹಲವಾರು ಹೊತ್ತಿಗೆಗಳಲ್ಲಿ ಮರಿಯಳ ಶುಭಸಂದೇಶವೂ ಒಂದು. ಮಗ್ದಲಿನ ಮರಿಯಳನ್ನು ಪ್ರಮುಖ ಶುಭಸಂದೇಶಕಾರ್ತಿ ಎಂದು ಗುರುತಿಸಲಾಗಿತ್ತು. ಐದನೇ ಶತಮಾನದ ನಂತರ, ಒಂದನೇ ಶತಮಾನದಲ್ಲಿದ್ದ ಕ್ರೈಸ್ತ ಮತಕ್ಕೆ ಬಲವಾದ ಭದ್ರ ಬುನಾದಿ ಹಾಕಿದ ಪೌಲನು ಪ್ರತಿಪಾದಿಸುವ ಕ್ರೈಸ್ತ ಮತದ ಪ್ರಮುಖ ಲಕ್ಷಣಗಳಲ್ಲಿ ಒಂದಾದ ದೇವರ ಮುಂದೆ ಎಲ್ಲರೂ ಸಮಾನರು ಎಂಬ ತತ್ವ ಕ್ರಮೇಣ ಹಿಂದೆ ಸರಿದು ಕಥೋಲಿಕ ಧರ್ಮಸಭೆ ಪುರುಷ ಪ್ರಧಾನ್ಯ ನಿಲುವಿನತ್ತ ಹೊರಳಿಕೊಂಡಿತು ಎಂದು ಇತಿಹಾಸಕಾರರು ಪ್ರತಿಪಾದಿಸುತ್ತಾರೆ. 
  ಯೇಸು ಆರಿಸಿಕೊಂಡ ಎಲ್ಲಾ ಹನ್ನೆರಡು ಜನ ಶಿಷ್ಯರು ಪುರುಷರು ಎಂಬುದರತ್ತ ಬೆರಳು ಮಾಡುವ ಕಥೋಲಿಕ ಧರ್ಮಸಭೆ, ಶತಶತಮಾನಗಳಿಂದ ಅದನ್ನೇ ಆಧಾರವಾಗಿ ಇಟ್ಟುಕೊಂಡು ಮಹಿಳೆಯರಿಗೆ ಯಾಜಕ ದೀಕ್ಷೆ ಕೊಡಲು ಹಿಂದೇಟು ಹಾಕುತ್ತಾ ಬಂದಿದೆ ಎಂಬುದು ಮಹಿಳಾ ಹಕ್ಕು ಪ್ರತಿಪಾದಕರ ಆರೋಪ. ಈಚೆಗೆ, ಇಟಲಿಯ ರೋಮ್‍ನ ವ್ಯಾಟಿಕನ್‍ನಲ್ಲಿ ಪ್ರಧಾನಪೀಠ ಹೊಂದಿರುವ ಕಥೋಲಿಕರ ಪರಮೋಚ್ಚ ಗುರು, ಜಗದ್ಗುರು ಪಾಪುಸ್ವಾಮಿ ಫ್ರಾನ್ಸಿಸ್ ಅವರು ಬ್ರೆಜಿಲ್ ಪತ್ರಕರ್ತೆ ಕ್ರಿಶ್ಚಿಯನ್ ಮುರ್ರೆ ಅವರನ್ನು ತಮ್ಮ ವಕ್ತಾರರಲ್ಲಿ ಒಬ್ಬರನ್ನಾಗಿ ನೇಮಕ ಮಾಡಿರುವುದು, ವ್ಯಾಟಿಕನ್ ಮಹಿಳೆಯರಿಗೆ ಎರಡನೇ ದರ್ಜೆಯ ಸ್ಥಾನಮಾನ ನೀಡುತ್ತಿದೆ ಎಂಬ ದೂರನ್ನು ಅಲ್ಲಗಳೆಯುವ ಹಾದಿಯ ಒಂದು ಹೆಜ್ಜೆ ಎಂದು ಹೇಳಲಾಗುತ್ತಿದೆ.
******

ಪುಸ್ತಕ ಸಂಸ್ಕೃತಿ - ಸಿ ಮರಿಜೋಸೆಫ್

ಕಣ್ದಿಟ್ಟಿ ಹರಿದತ್ತ ಗ್ರಂಥ ಗಿರಿಪಂಕ್ತಿಗಳು ನಿಂತು ಬೆರಗೀಯುತಿವೆ ಪುಸ್ತಕಾಲಯದಲ್ಲಿ ... ಎಂಬ ಕವಿವಾಣಿಯು ಗ್ರಂಥಾಲಯದ ಕಪಾಟುಗಳಲ್ಲಿ ವಿಜೃಂಭಿಸುವ ಪುಸ್ತಕಗಳ ಪರ್ವತಸಾಲು ಹೇಗೆ ಅಚ್ಚರಿ ಮೂಡಿಸುತ್ತವೆ ಎಂದು ಬಣ್ಣಿಸುತ್ತದೆ. ನಿಜವಾಗಿಯೂ ಪುಸ್ತಕಗಳೇ ನಮ್ಮ ಒಳ್ಳೆಯ ಗೆಳೆಯರು. ಏಕತಾನದ ಬದುಕಿನಲ್ಲಿ ನಕ್ಷತ್ರಗಳನ್ನು ಮಿನುಗಿಸಿ ಯಾವುದೋ ಅಪ್ರತಿಮ ಲೋಕಕ್ಕೆ ನಮ್ಮನ್ನು ಕರೆದೊಯ್ದು ಮನವನ್ನು ಪ್ರಫುಲ್ಲಗೊಳಿಸುವ ಹಾಗೂ ತನ್ಮೂಲಕ ಜ್ಞಾನಾರ್ಜನೆಗೆ ಮತ್ತು ಮನೋವಿಕಾಸಕ್ಕೆ ಇಂಬಾಗುವ ಪರಿ ಪುಸ್ತಕಗಳಿಂದಲ್ಲದೆ ಇನ್ನೇತರಿಂದ ಸಾಧ್ಯ!
ಪುಸ್ತಕಪ್ರೇಮವು ಪ್ರಾಚೀನ ಕಾಲದಲ್ಲೂ ಇತ್ತು ಎಂಬುದಕ್ಕೆ ಹಲವು ಉದಾಹರಣೆಗಳಿವೆ. ಕ್ರಿಸ್ತಪೂರ್ವ 320ರಲ್ಲಿ ಎರಡನೇ ಟಾಲೆಮಿ ಎಂಬ ಅರಸನು ಈಜಿಪ್ಟ್ ದೇಶದ ಅಲೆಕ್ಸಾಂಡ್ರಿಯಾ (ಈಗಿನ ಕೈರೋ ಪಟ್ಟಣ) ದಲ್ಲಿ ದೇಶವಿದೇಶಗಳ ಹೊತ್ತು ತಂದಿದ್ದ ಎಲ್ಲ ಗ್ರಂಥಗಳನ್ನು ಶೇಖರಿಸಲು ಒಂದು ಬೃಹತ್ ಗ್ರಂಥಾಲಯವನ್ನು ಕಟ್ಟಿಸಿದ್ದನೆಂದು ಇತಿಹಾಸ ಹೇಳುತ್ತದೆ. ಜಗತ್ತಿನ ಇತಿಹಾಸದಲ್ಲಿ ಇದೇ ಮೊತ್ತಮೊದಲ ಪುಸ್ತಕಾಲಯ. ದೇಶೀ ವಿದ್ವಾಂಸರಿಗೂ ಪ್ರವಾಸಿ ಜ್ಞಾನದಾಹಿಗಳಿಗೂ ಆ ಪುಸ್ತಕದ ಮನೆ ವಿಶಿಷ್ಟವಾಗಿ ನೆರವಾಗುತ್ತಿತ್ತು. ಆದರೆ ರೋಮನ್ ಸೈನಿಕರು ಕ್ರಿಸ್ತಪೂರ್ವ 48ರಲ್ಲಿ ಅಲೆಕ್ಸಾಂಡ್ರಿಯಾದ ಮೇಲೆ ಧಾಳಿ ಮಾಡಿದಾಗ ಆ ಪುಸ್ತಕಾಲಯಕ್ಕೆ ಬೆಂಕಿ ಬಿದ್ದು ಅಲ್ಲಿದ್ದ ಅಮೂಲ್ಯ ಗ್ರಂಥಗಳೆಲ್ಲವೂ ಬೂದಿಯಾಗಿ ಬಿಡುತ್ತವೆ. 
ಆಗಿದ್ದು ಆಗಿಹೋಯಿತು, ತಮ್ಮಲ್ಲಿ ಇಂಥಿಂಥಾ ದೇಶಗಳ ಬೆಲೆಕಟ್ಟಲಾಗದ ಇಂಥಿಂಥಾ ಪುಸ್ತಕಗಳಿದ್ದವು ಎಂದು ಹೇಳಿಕೊಳ್ಳಲಿಕ್ಕಾದರೂ ಇರಲೆಂದು ಅಲ್ಲಿನ ವಿಬುಧರು ಗ್ರಂಥಗಳ ಬೂದಿಯನ್ನು ಕದಡದೇ ಅವುಗಳ ಮುಖಪುಟದ ಮೇಲೆ ಕಂಡುಬರುವ ಒಂದೊಂದು ನುಡಿಯ ಒಂದೊಂದು ಅಕ್ಷರವನ್ನು ಯಥಾವತ್ತಾಗಿ ಬರೆದುಕೊಂಡು ಅವನ್ನೆಲ್ಲ ದೊಡ್ಡದೊಂದು ಕಲ್ಲಿನ ಫಲಕದಲ್ಲಿ ಕೆತ್ತಿಸಿ ಆ ಗ್ರಂಥಾಲಯದ ಆವರಣದಲ್ಲಿ ಸ್ಥಾಪಿಸುತ್ತಾರೆ. ಈಜಿಪ್ಟಿನ ರಾಜಧಾನಿ ಕೈರೋ ನಗರಕ್ಕೆ ಹೋದವರು ಆ ಶಿಲಾಫಲಕವನ್ನು ನೋಡಬಹುದು, ವಿಶೇಷವೆಂದರೆ ಆ ಫಲಕದಲ್ಲಿ ಹಳಗನ್ನಡದ ಅಕ್ಷರವೂ ಇದೆ ಎಂಬುದು ನಮ್ಮ ಹೆಮ್ಮೆ.
ಇನ್ನು ನಮ್ಮ ದೇಶದ ಸಂದರ್ಭಕ್ಕೆ ಬಂದರೆ ಹರಪ್ಪ ಉತ್ಖನನದಲ್ಲಿ ಕೆಲ ಅಕ್ಷರವಿನ್ಯಾಸಗಳು ಕಂಡುಬಂದರೂ ಪದೇ ಪದೇ ಆಕ್ರಮಣಕಾರರ ದುಂಡಾವರ್ತಿಯಿಂದ ಬೇಸತ್ತ ಸಿಂಧೂ ಬಯಲಿನ ಶಾಂತಿಪ್ರಿಯ ನಾಗರಿಕರು ಅಲ್ಲಿಂದ ವಲಸೆ ಹೋದ ಮೇಲೆ ಅವರ ಅಕ್ಷರ ಸಂಪತ್ತು ಏನಾಯಿತೆಂದು ತಿಳಿಯಲು ಅಸಾಧ್ಯವಾಗಿದೆ. ಬದಲಾದ ಅಂದಿನ ಕಾಲಘಟ್ಟದಲ್ಲಿ ಪುಸ್ತಕಗಳನ್ನು ಬರೆದಿಡುವ ಪದ್ದತಿ ಇರಲಿಲ್ಲವಾದ್ದರಿಂದ ಮಹತ್ತಾದುದೆಂದು ಹೇಳಿಕೊಳ್ಳುವ ವೇದಗಳು ಸಹ ಕಂಠಪಾಠದ ಮೂಲಕವೇ ಮುಂದಿನ ಪೀಳಿಗೆಗೆ ರವಾನೆಯಾಗುತ್ತಾ ಬಂದವೆಂದು ತಿಳಿದುಬರುತ್ತದೆ. 
ತಿಳಿದು ಬಂದ ಇತಿಹಾಸದ ಪ್ರಕಾರ ನಮ್ಮಲ್ಲಿ ಬರವಣಿಗೆ ಶುರುವಾಗುವುದೇ ಪ್ರಾಕೃತ ಎಂಬ ಆಡುಭಾಷೆಯಿಂದ. ಅದೇ ಮುಂದೆ ಶಿಷ್ಟರೂಪ ತಳೆದು ಸಂಸ್ಕೃತ ಭಾಷೆಗೆ ನಾಂದಿಯಾಗುತ್ತದೆ. ವಿಪರ್ಯಾಸವೆಂದರೆ ಸಂಸ್ಕೃತಕ್ಕೆ ತನ್ನದೇ ಆದ ಲಿಪಿ ಇಲ್ಲ. ಮತ್ತೊಂದು ಲಿಪಿಯನ್ನು ಎರವಲು ಪಡೆದ ಆ ಭಾಷೆ ಅನುಪಮವಾದ ಕಾವ್ಯಗಳನ್ನು ಹೆತ್ತಿತು ಎಂದರೆ ಅಚ್ಚರಿ ಎನಿಸಿದರೂ ಸತ್ಯ! 
ಇಡೀ ಇಂಡಿಯಾ ದೇಶಕ್ಕೇ ಅನ್ವಯವಾಗುವಂತ ಲಿಪಿಯನ್ನು ಜಾರಿಗೊಳಿಸಿದ ಕೀರ್ತಿ ಅಶೋಕನಿಗೆ ಸಲ್ಲುತ್ತದೆ. ದೇಶದ ವಿವಿಧೆಡೆಯ ಕವಿಗಳು ತಮ್ಮಲ್ಲಿ ಸ್ಥಳೀಯವಾಗಿ ದೊರೆಯುವ ತಾಳೆಗರಿ, ಬೂರ್ಜ್ವಪತ್ರಗಳ ಜೈವಿಕ ವಿನ್ಯಾಸಕ್ಕೆ ಅಳವಡುವಂತೆ ಅಶೋಕ ಲಿಪಿಯನ್ನು ರೂಪಾಂತರಿಸಿಕೊಂಡು ತಮ್ಮದೇ ಆದ ಭಾಷಾ ಲಿಪಿಯನ್ನು ರೂಢಿಗತ ಮಾಡಿಕೊಂಡರೆಂಬುದು ವೇದ್ಯ. ಭೂರ್ಜ್ವಪತ್ರದಲ್ಲಿ ಮೇಲಿನಿಂದ ಕೆಳಗೆ ಗೀಟು ಹಾಕುವ ರೀತಿಯಲ್ಲಿ ಅಕ್ಷರ ಬರೆದರೆ ತಾಳೆಗರಿಗಳ ಮೇಲೆ ದುಂಡಾಗಿ ಬರೆಯುವುದರ ಮೂಲಕ ಅಕ್ಷರ ಟಂಕಿಸಲಾಗುತ್ತದೆ. ಹೀಗೆ ಗೀಟಕ್ಷರ ಮತ್ತು ದುಂಡಕ್ಷರಗಳ ವ್ಯತ್ಯಾಸವನ್ನು ಅರ್ಥ ಮಾಡಿಕೊಂಡರೆ ಎರಡೂ ಶೈಲಿಗಳ ನಡುವಿನ ಸಮಾನತೆಯನ್ನು ಅರ್ಥ ಮಾಡಿಕೊಳ್ಳಬಹುದು. ಉದಾಹರಣೆಗೆ ಉತ್ತರ ಇಂಡಿಯಾದಲ್ಲಿ ಬರೆಯಲಾಗುವ 'ಕ' ಅಕ್ಷರಕ್ಕೂ ದಕ್ಷಿಣ ಇಂಡಿಯಾದ ಭಾಷೆಗಳಲ್ಲಿ ಬರೆಯಲಾಗುವ 'ಕ' ಅಕ್ಷರಕ್ಕೂ ಹೋಲಿಕೆಯಿರುವುದನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯಬಹುದು. 
ಆಮೇಲೆ ನಮ್ಮ ದೇಶದಲ್ಲಿ ನಡೆದ ಅಕ್ಷರಕ್ರಾಂತಿ ಹಾಗೂ ಅದರ ಮುಂದುವರಿಕೆಯಾಗಿ ನಡೆದ ಗ್ರಂಥಾಲಯ ಚಳವಳಿಗೆ ಸೋಪಾನ ಒದಗಿಸಿದವರು ಬೌದ್ಧ ಅನುಯಾಯಿಗಳು. ಅವರು ವಿವಿಧ ವಿಷಯಗಳ ಅಪಾರ ಜ್ಞಾನಭಂಡಾರವನ್ನ ಸಾವಿರಾರು ಹಸ್ತಪ್ರತಿಗಳಲ್ಲಿ ಪಡಿಮೂಡಿಸಿ ತಕ್ಷಶಿಲಾ, ನಳಂದ, ನಾಗಾರ್ಜುನ ಮುಂತಾದ ವಿಶ್ವವಿದ್ಯಾಲಯಗಳಲ್ಲಿ ಜತನದಿಂದ ಸಂಗ್ರಹಿಸಿ ಆ ಗ್ರಂಥ ದೇಗುಲಗಳ ಮೂಲಕ ಸರ್ವರಲ್ಲೂ ಜ್ಞಾನದೀವಿಗೆ ಬೆಳಗುತ್ತಿದ್ದರೆಂದು ಇತಿಹಾಸ ಅರುಹುತ್ತದೆ. 
ದುರದೃಷ್ಟವೆಂದರೆ ಪುಸ್ತಕಸಂಸ್ಕೃತಿಯನ್ನು ದ್ವೇಷಿಸುತ್ತಿದ್ದ ಪಾಷಂಡವಾದಿಗಳು ಬೌದ್ಧರ ಮಾರಣಹೋಮ ನಡೆಸಿ ವಿಶ್ವವಿದ್ಯಾಲಯಗಳನ್ನು ನೆಲಸಮಗೊಳಿಸಿ ಅಮೂಲ್ಯ ಆಕರಗ್ರಂಥಗಳನ್ನು ಸುಟ್ಟು ಬೂದಿ ಮಾಡಿದರೆಂದೂ ಇತಿಹಾಸ ಹೇಳುತ್ತದೆ. ದುಷ್ಕರ್ಮಿಗಳೊಂದಿಗೆ ಸೆಣಸಿ ಉಳಿದ ಕೆಲವೇ ಬೌದ್ಧರು ಕೈಗೆ ಸಿಕ್ಕ ಗ್ರಂಥಗಳನ್ನು ಬಾಚಿಕೊಂಡು ಅಜಂತಾ, ಚಂದವಳ್ಳಿ, ಬನವಾಸಿ ಮುಂತಾದ ದುರ್ಗಮ ಗುಹ್ವರಗಳಲ್ಲಿ ಆಶ್ರಯ ಪಡೆದು ಇಂಡಿಯಾದ ಅಕ್ಷರಕ್ರಾಂತಿಯನ್ನು ಜೀವಂತವಾಗಿರಿಸಿದರು ಎಂಬುದು ಸ್ವಲ್ಪ ಸಮಾಧಾನಕರ ಸಂಗತಿ. 
ಕನ್ನಡ ನಾಡಿನಲ್ಲಿ ಬಹು ಹಿಂದಿನಿಂದಲೂ ಬೌದ್ಧ ವಿಹಾರಗಳಲ್ಲಿ ಪುರಾತನ ಹಸ್ತಪ್ರತಿಗಳನ್ನು ಸಂಗ್ರಹಿಸಿ ಓದುಗರ ಜ್ಞಾನತೃಷೆಯನ್ನು ನೀಗಿಸಲಾಗುತ್ತಿತ್ತು. ರಾಜರೂ ಧನಿಕರೂ ವಿಹಾರಗಳನ್ನು ಸ್ಥಾಪಿಸಿ ಅವಕ್ಕೆ ದತ್ತಿ ಕೊಡುವ ಸಂಪ್ರದಾಯವೂ ಬೆಳೆದುಬಂದಿತ್ತು. ಕ್ರಿಸ್ತಶಕ ಮೂರನೇ ಶತಮಾನದ ಬನವಾಸಿಯ ಒಂದು ಶಾಸನದಲ್ಲಿ ರಾಜಕುಮಾರಿಯೊಬ್ಬಳು ಬೌದ್ಧ ವಿಹಾರ ನಿರ್ಮಿಸಿದ ಉಲ್ಲೇಖವಿದೆ. ಎರಡನೆಯ ಪುಲಕೇಶಿಯ ಆಳ್ವಿಕೆಯ ಹೊತ್ತಿಗೆ ಇಂತಹ ವಿಹಾರಗಳ ಸಂಖ್ಯೆ ನೂರಕ್ಕೆ ಏರಿತ್ತು.
ಮುಂದೆ ಎಂಟನೇ ಶತಮಾನದ ವೇಳೆಗೆ ಪ್ರತಿಗಾಮಿ ಸಂಸ್ಕೃತಿಯು ಬೌದ್ಧರ ಈ ವಿಚಾರಪ್ರದ ಆಂದೋಲನವನ್ನು ಹೊಸಕಿ ಹಾಕಿಬಿಟ್ಟಿತು. ಆದರೆ ಕನ್ನಡದ ಸುದೈವವೋ ಎಂಬಂತೆ ಬೌದ್ಧರ ಪುಸ್ತಕಪ್ರೀತಿಯನ್ನು ಜೈನರು ವಹಿಸಿಕೊಂಡರು. ಜೈನಯುಗದ ಕಾಲದಲ್ಲೇ ರತ್ನತ್ರಯರು ಕಾವ್ಯಕೃಷಿ ಮಾಡಿದರು. ಅಂದಿನ ಕಾಲದ ಅತ್ತಿಮಬ್ಬೆ ಎಂಬ ಮಹಾಸ್ತ್ರೀ ಗ್ರಂಥದಾನದ ಹೆಸರಲ್ಲಿ ನೂರಾರು ಬರಹಗಾರರಿಗೆ ಊಟ ಹಾಕಿ ಅನೇಕ ಗ್ರಂಥಗಳನ್ನು ಪ್ರತಿ ಮಾಡಿಸಿದಳು ಎಂಬುದು ಗ್ರಂಥೇತಿಹಾಸದ ಒಂದು ಪ್ರಸಿದ್ಧ ಉಲ್ಲೇಖವಾಗಿದೆ.
ಜೈನ ಕವಿಗಳು ಮಹಾಭಾರತ ಕಾವ್ಯಕ್ಕೆ ಜೈನಸಂಸ್ಕೃತಿಯ ವೇಷಗಳನ್ನು ಹಾಕಿ ಮೆರೆಸಿ ಅದನ್ನು ಜನಪ್ರಿಯಗೊಳಿಸಿದರು. ಆದರೂ ವೈದಿಕ ಪರಂಪರೆಯ ಬಗೆಗಿನ ಅಸಹನೆ ಕನ್ನಡಿಗರ ಮನದಲ್ಲಿ ಮುಲುಗುಡುತ್ತಲೇ ಇತ್ತು. ಈ ವೈದಿಕ ಯಾಜಮಾನ್ಯವನ್ನು ಧಿಕ್ಕರಿಸಿದ ಶರಣ ಚಳವಳಿಯು ಸಾಹಿತ್ಯವು ಕನ್ನಡದ ಆಡುಭಾಷೆಯಲ್ಲಿ ಎಲ್ಲೆಡೆ ಪ್ರವರ್ಧಿಸಿತು. ಅಕ್ಕಮಹಾದೇವಿ, ಅಲ್ಲಮಪ್ರಭು, ಬಸವಣ್ಣ, ಆಯ್ದಕ್ಕಿ ಮಾರಯ್ಯ, ನುಲಿಯ ಚಂದಯ್ಯಗಳು ಸುಲಭ ಸರಳ ವಚನಗಳ ಮೂಲಕ ಜನಮನ ಗೆದ್ದರು, ಸಮಸಮಾಜದ ಪರಿಕಲ್ಪನೆಯನ್ನು ಹುಟ್ಟುಹಾಕಿದರು.
ಮನುಸ್ಮೃತಿಯನ್ನು ಅಲ್ಲಗಳೆದ ಶರಣರ ವಿರುದ್ಧ ರಾಜರನ್ನು ಎತ್ತಿಕಟ್ಟಿದ ಒಂದು ವರ್ಗ ಶರಣರನ್ನು ಅಟ್ಟಾಡಿಸಿ ಮಾರಣಹೋಮಗೈದು ಅವರ ಮಠಗಳಿಗೂ ಪುಸ್ತಕಭಂಡಾರಗಳಿಗೂ ಧಾಳಿಯಿಟ್ಟು ಸರ್ವನಾಶ ಮಾಡಿತು. ಅಂದು ಮೂರುಸಾವಿರ ಶರಣರು ಆಶ್ರಯ ಪಡೆದ ಸುರಕ್ಷಿತ ತಾಣವೇ ಮೂರುಸಾವಿರ ಮಠ. ಹೀಗೆ ದಕ್ಷಿಣ ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳಗಳಿಗೆ ಓಡಿಹೋದ ಶರಣರೇ ಗವಿ ಗುಹ್ವರಗಳಂಥ ಸುರಕ್ಷಿತ ತಾಣಗಳಲ್ಲಿ ಬೃಹನ್ಮಠ, ಗವಿಮಠ, ಗೂಳೂರು ಮಠ, ಗುಮ್ಮಳಾಪುರಮಠ, ಯಡಿಯೂರು ಮಠ ಮುಂತಾದ ಮಠಗಳನ್ನು ಸ್ಥಾಪಿಸಿ ಶತಮಾನಗಳ ಕಾಲ ಸದ್ದಿಲ್ಲದೆ ಸರ್ವರಿಗೂ ವಿದ್ಯಾದಾನ ಮಾಡುವ ಕಾಯಕ ವಹಿಸಿಕೊಂಡರೆಂಬುದು ಕನ್ನಡ ನಾಡಿನ ಶೈಕ್ಷಣಿಕ ಕ್ಷೇತ್ರದಲ್ಲಿ ಒಂದು ಹೆಮ್ಮೆಯ ದಾಖಲೆಯಾಗಿದೆ.
ಹದಿನಾಲ್ಕನೇ ಶತಮಾನದಿಂದ ಹದಿನೆಂಟನೇ ಶತಮಾನವದರೆಗೆ ಕನ್ನಡನಾಡಿನಲ್ಲಿ ಸದ್ದು ಮಾಡಿದ್ದು ಯುದ್ದಗಳು ಜಗಳಗಳು ಪಿತೂರಿಗಳು ಹಾಗೂ ರಾಜಕೀಯ ವಿಪ್ಲವಗಳು. ಈ ನಡುವೆ ಕುಮಾರವ್ಯಾಸ, ಲಕ್ಮೀಶ ಮತ್ತು ಕೀರ್ತನಕಾರರು ಬಂದು ಹೋಗಿರುವರಾದರೂ ಇವರೆಲ್ಲರ ಸಾಹಿತ್ಯವು ಅಶಾಂತಿಯಲ್ಲಿ ಕಂಗೆಟ್ಟಿದ್ದ ಜನರಿಗೆ ಒಂದು ಹೊತ್ತಿನ ಮುಕ್ತಿಮಾರ್ಗಕ್ಕೆ ಆಸರೆಯಾದವೇ ವಿನಃ ಪೀಳಿಗೆಗಳ ಶಿಕ್ಷಣಕ್ಕೆ ನೀರುಣಿಸಲಿಲ್ಲ ಎಂಬುದೇ ಇತಿಹಾಸದ ವ್ಯಂಗ್ಯ. 
ಅದಾಗಿ ಮುನ್ನೂರು ವರ್ಷಗಳ ನಂತರ ಮೈಸೂರರಸರ ಕಾಲಕ್ಕೆ ಕನ್ನಡದ ಪುಸ್ತಕಲೋಕ ಮತ್ತೆ ಚಿಗುರೊಡೆಯಿತು. ಅದೇ ವೇಳೆಗೆ ಕನ್ನಡನಾಡಿಗೆ ಆಗಮಿಸಿದ ಕ್ರೈಸ್ತ ಧರ್ಮಪ್ರಚಾರಕರು ತಮ್ಮ ಕ್ಷೇತ್ರಕಾರ್ಯಕ್ಕಾಗಿ ಸ್ಥಳೀಯ ಭಾಷೆ ಕನ್ನಡವನ್ನು ಕಲಿಯಬೇಕಾದ ಸಂದರ್ಭದಲ್ಲಿ ಕನ್ನಡದ ಕಾವ್ಯಪರಂಪರೆಯನ್ನು ಕಂಡು ಬೆರಗಾದರು. ಆ ಕಾವ್ಯ ಮತ್ತು ಸಾಹಿತ್ಯಗಳಾವುವೂ ಸಮಾಜದ ಎಲ್ಲ ವರ್ಗವನ್ನೂ ತಲಪುತ್ತಿಲ್ಲ ಎಂಬುದನ್ನೂ ಅವರು ಮನಗಂಡರು. 
ಅಂದು ದೇಶವ್ಯಾಪಿಯಾಗಿದ್ದ ಇಂಗ್ಲಿಷ್ ದೊರೆಗಳ ಆಡಳಿತವು ಸಾರ್ವತ್ರಿಕ ಶಿಕ್ಷಣಕ್ಕೆ ಒತ್ತು ನೀಡಿತ್ತು. ಬ್ರಿಟಿಷ್ ಸರಕಾರವು ಜಾತ್ಯತೀತವಾಗಿದ್ದು ಮಿಷನರಿ ಕೆಲಸಕ್ಕೆ ಬೆಂಬಲ ನೀಡಲಿಲ್ಲವಾದರೂ ಸಾರ್ವತ್ರಿಕ ಶಿಕ್ಷಣಕ್ಕೆ ಪಠ್ಯಪುಸ್ತಕಗಳನ್ನು ರೂಪಿಸಲು ಮಿಷನರಿಗಳ ನೆರವು ಪಡೆಯಿತೆಂಬುದು ಗಮನಾರ್ಹ. ಸ್ವತಃ ವಿದ್ವಾಂಸರಾಗಿದ್ದ ಮಿಷನರಿಗಳು ಬ್ರಿಟಿಷ್ ಸರ್ಕಾರದ ಕೋರಿಕೆಯ ಮೇರೆಗೆ ಶಾಲೆಗಳಿಗಾಗಿ ಭೂಗೋಳಶಾಸ್ತ್ರ, ಸಮಾಜಶಾಸ್ತ್ರ, ದೇಶವಿದೇಶಗಳ ಚರಿತ್ರೆ, ಸಾಮಾನ್ಯ ವಿಜ್ಞಾನ, ಗಣಿತ ಮುಂತಾದ ವಿಷಯಗಳನ್ನು ರೂಪಿಸಿ ಅದರ ಜೊತೆಗೆ ಕನ್ನಡ ಕಾವ್ಯಗಳ ರಸಸಾರವನ್ನು ಸಂಗ್ರಹಿಸಿ ಮಕ್ಕಳಿಗೆ ಕಾವ್ಯಬೋಧೆಯನ್ನೂ ಮಾಡಿದರು. 
ಹೀಗೆ ದೇವರ ಗೂಡುಗಳಲ್ಲಿ, ಮಠದ ಅಟ್ಟಣಿಗೆಗಳಲ್ಲಿ ಬಟ್ಟೆ ಕಟ್ಟಿ ಇಡಲಾಗಿದ್ದ ಪ್ರಾಚೀನ ತಾಳೆಗರಿಗಳೂ, ಕಾವ್ಯಹೊತ್ತಿಗೆಗಳೂ ಹೊರಬಂದು ಮುದ್ರಣಯಂತ್ರಗಳ ಮೂಲಕ ಅಚ್ಚು ಹಾಕಲ್ಪಟ್ಟು ಸರ್ವಜನರಿಗೂ ತಲಪುವಂತಾದವು. ಶಬ್ದಮಣಿದರ್ಪಣ, ಛಂದೋಂಬುಧಿ, ಪಂಪಭಾರತ, ವಚನಸಾಹಿತ್ಯ, ದಾಸಸಾಹಿತ್ಯ, ಕುಮಾರವ್ಯಾಸ ಭಾರತ, ಜೈಮಿನಿಭಾರತಗಳೆಲ್ಲ ಜನಸಾಮಾನ್ಯರ ಕೈಗೆ ಸಿಗುವಂತಾದವು. 
ಮಿಷನರಿಗಳು ಸುದ್ದಿಪತ್ರಿಕೆಗಳನ್ನೂ ನಡೆಸಿದರು. ನಾಡಿನೆಲ್ಲೆಡೆ ಸಂಚರಿಸಿ ಹಾದಿಬೀದಿಗಳಲ್ಲಿ ಗುಡಿಗೋಪುರಗಳಲ್ಲಿ ಕಂಡುಬಂದ ಶಿಲಾಶಾಸನಗಳನ್ನು ಓದಿ ಅಭ್ಯಸಿಸಿ ಅವುಗಳನ್ನೂ ಪುಸ್ತಕರೂಪಕ್ಕೆ ತಂದು ತುಲನೆ ಮಾಡಿದರಲ್ಲದೆ ನಾಡಿನ ಇತಿಹಾಸವನ್ನೂ ಬರೆದು ಕನ್ನಡಿಗರಲ್ಲಿ ಅಖಂಡ ಕರ್ನಾಟಕತ್ವದ ಪರಿಕಲ್ಪನೆಯನ್ನು ಪಡಿಮೂಡಿಸಿದರು. 
ಮುದ್ರಣಕ್ರಾಂತಿಯಿಂದಾಗಿ ಇಂದು ನಾವು ಕನ್ನಡದಲ್ಲಿ ನಮ್ಮ ಸಾಹಿತ್ಯವನ್ನಷ್ಟೇ ಅಲ್ಲದೆ ಜಗತ್ತಿನ ವಿವಿಧ ಭಾಷೆಗಳ ಪ್ರಮುಖ ಪುಸ್ತಕಗಳನ್ನು ನಮ್ಮ ಭಾಷೆಯಲ್ಲೇ ಓದುತ್ತಿದ್ದೇವೆ. ವಿಶ್ವಕೋಶಗಳ ಮೂಲಕ ಅಪಾರ ಜ್ಞಾನವನ್ನು ಪಡೆಯುತ್ತಿದ್ದೇವೆ. ಮಿನ್ಬಲದ ಹೊಸ ಹೊಸ ಆವಿಷ್ಕಾರಗಳಿಂದಾಗಿ ನಾವಿಂದು ಜಗತ್ತಿನ ಎಲ್ಲ ಪುಸ್ತಕಗಳನ್ನೂ ಅಂಗೈ ಮೇಲಿನ ಸಾಧನಗಳಲ್ಲಿ ಓದಬಹುದಾಗಿದೆ.
ಆದರೂ ನಗರಜೀವಿಗಳು ಯಾಂತ್ರಿಕ ಜೀವನದ ಜಂಜಾಟದಲ್ಲಿ ಓದುವ ಪ್ರಕ್ರಿಯೆಗೇ ಸಮಯ ನೀಡುತ್ತಿಲ್ಲ. ಓದುವ ಎಲ್ಲ ಆಕರಗಳೂ ಸುಲಭವಾಗಿ ಸಿಗುತ್ತಿವೆಯಾದರೂ ಓದಲು ನಾವು ಮಾನಸಿಕವಾಗಿ ಸಿದ್ಧರಾಗಿಲ್ಲ. ಓದುಗರ ಸಂಖ್ಯೆ ಕ್ರಮೇಣ ಕ್ಷಯಿಸುತ್ತಿದೆ. ಕುವೆಂಪು, ಜಿಎಸ್ ಶಿವರುದ್ರಪ್ಪ, ಗೋವಿಂದಪೈ, ಪೂರ್ಣಚಂದ್ರ ತೇಜಸ್ವಿ, ನಿರಂಜನ, ಹಂಪ ನಾಗರಾಜಯ್ಯ, ಎಂ ಎಂ ಕಲಬುರ್ಗಿ, ನಾ ಡಿಸೋಜ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಎಸ್ ಎಲ್ ಭೈರಪ್ಪ ಮುಂತಾದವರ ಪುಸ್ತಕಗಳನ್ನು ನಾವು ಓದಲೇಬೇಕು. ಮದುವೆ ಗೃಹಪ್ರವೇಶ ಮುಂತಾದ ಸಂದರ್ಭಗಳಲ್ಲಿ ಪುಸ್ತಕಗಳನ್ನೇ ಉಡುಗೊರೆಯಾಗಿ ನೀಡಬೇಕು. ಪುಸ್ತಕಗಳನ್ನು ಪರಸ್ಪರ ಹಂಚಿಕೊಳ್ಳಬೇಕು. ಓದಿದ ಒಳ್ಳೆಯ ಪುಸ್ತಕಗಳ ಬಗ್ಗೆ ಇತರರಲ್ಲಿ ಮಾತಾಡಬೇಕು. 
ಈ ಒಂದು ನಿಟ್ಟಿನಲ್ಲಿ ನಮ್ಮ ಧರ್ಮಪ್ರಾಂತ್ಯಗಳೂ ಧರ್ಮಕೇಂದ್ರಗಳೂ ಶಿಕ್ಷಣಸಂಸ್ಥೆಗಳೂ ಗಂಭೀರ ಕ್ರಮ ಕೈಗೊಂಡು ನಮ್ಮ ಧರ್ಮದ ಎಲ್ಲ ಆಕರಗ್ರಂಥಗಳನ್ನೂ ಸಂಗ್ರಹಿಸಿ ಸಂಮೃದ್ಧ ಗ್ರಂಥಾಲಯಗಳನ್ನು ತೆರೆಯಲು ಮನಸ್ಸು ಮಾಡಬೇಕಾಗಿದೆ. ಅದರಲ್ಲಿ ನಾಡಿನ ಅಂದಿನ ಇಂದಿನ ಕ್ರೈಸ್ತ ಕವಿಗಳ ಸಾಹಿತಿಗಳ ಜ್ಞಾನಿಗಳ, ವಿವಿಧ ವಸ್ತುವಿಶೇಷಗಳ, ವಿವಿಧ ಶಿಸ್ತುಗಳ, ಎಲ್ಲ ವಯೋಮಾನದವರಿಗೂ ತಲಪಬಲ್ಲ ವಿವಿಧ ಆಸಕ್ತಿಗಳ ಪುಸ್ತಕಗಳನ್ನು ಸಂಗ್ರಹಿಸಬೇಕಿದೆ. ಪ್ರತಿಯೊಬ್ಬರೂ ಪುಸ್ತಕ ಸಂಸ್ಕೃತಿಯ ಮಹತ್ವವನ್ನು ಪೋಷಿಸುತ್ತಾ ಪ್ರತಿವರ್ಷವೂ ಪುಸ್ತಕ ಖರೀದಿಗೆಂದು ಒಂದಷ್ಟು ಹಣವನ್ನು ವಿನಿಯೋಗಿಬೇಕಿದೆ. 
ಕನ್ನಡ ಕ್ರೈಸ್ತರ ಖ್ಯಾತ ಇತಿಹಾಸಕಾರ ಹಾಗೂ ಕನ್ನಡದ ಪವಿತ್ರ ಬೈಬಲಿನ ಅನುವಾದದ ಮುಖ್ಯ ನೇತಾರ ಫಾದರ್ ಐ ಅಂತಪ್ಪನವರು ತಮ್ಮ ಸಂಶೋಧನಾ ಕಾರ್ಯದ ವೇಳೆ ಸಂಗ್ರಹಿಸಿದ ಅನುಪಮವೂ ಅಮೂಲ್ಯವೂ ಆದ ಪುಸ್ತಕಗಳ ರಾಶಿಯನ್ನು ಮುಂದಿನ ಪೀಳಿಗೆಗಾಗಿ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಅವೇ ನಮ್ಮ ಮೊದಲ ಗ್ರಂಥಾಲಯದ ಜೀವದ್ರವ್ಯವಾಗಲಿ ಎಂದು ಹಾರೈಸುತ್ತೇನೆ. ಅದೇ ಮಾದರಿಯನ್ನು ಅನುಸರಿಸಿ ನಮ್ಮ ಧಾರ್ಮಿಕ ವರಿಷ್ಠರೂ ಇತರ ದಾನಿಗಳೂ ಸುಸಜ್ಜಿತ ಸಂವೃದ್ಧ ಪುಸ್ತಕಾಲಯಗಳನ್ನು ರಚಿಸುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಒಂದು ಮಹಾಕೊಡುಗೆಯನ್ನು ಬಿಟ್ಟುಹೋಗಲಿ ಎಂದು ಆಶಿಸೋಣ. 
ನಮ್ಮ ಗುರುಮಠಗಳಲ್ಲಿ ಕನ್ಯಾಮಠಗಳಲ್ಲಿ ಪುಸ್ತಕಭಂಡಾರಗಳು ಇವೆಯಾದರೂ ಅಲ್ಲಿನ ಕನ್ನಡ ಪುಸ್ತಕಗಳ ಸಂಖ್ಯೆ ನಗಣ್ಯವೆನಿಸಬಹುದಾದಷ್ಟು ಕಡಿಮೆ ಅಲ್ಲದೆ ಅವುಗಳನ್ನು ತೀರಾ ಕೆಳಹಂತದಲ್ಲಿಟ್ಟು ಓದುಗರಿಗೆ ಸುಲಭವಾಗಿ ಕಾಣದಂತೆ ಮಾಡಿದ್ದಾರೆ. ಶಾಲೆಗಳಲ್ಲಿನ ಪುಸ್ತಕ ಭಂಡಾರಗಳು ಅದಿಕಾರಿಗಳಿಗೆ ಲೆಕ್ಕ ತೋರಿಸುವುದಕ್ಕಷ್ಟೇ ಇವೆ ಹೊರತು ವಿದ್ಯಾರ್ಥಿಗಳಿಗೆ ಸದಾ ಬೀಗ ಹಾಕಿರುತ್ತವೆ. ಇವಕ್ಕೆಲ್ಲ ಇತಿಶ್ರೀ ಹಾಡಿ ವಿದ್ಯಾರ್ಥಿ ದೆಸೆಯಲ್ಲಿಯೇ ಓದುವ ಆಸಕ್ತಿಯನ್ನು ಬೆಳೆಸಬೇಕಾದುದೇ ಸನ್ಮಾರ್ಗ.
ನಮ್ಮ ಬೆಂಗಳೂರು ಮಹಾಧರ್ಮಪ್ರಾಂತ್ಯದ ಪಾಲನಾ ಭವನದಲ್ಲಿ ಕುಟುಂಬ ಆಯೋಗ, ಜನಸಾಮಾನ್ಯ ಆಯೋಗ, ಶಿಕ್ಷಣ ಆಯೋಗ, ಕಾರ್ಮಿಕ ಆಯೋಗ, ಬೈಬಲ್ ಆಯೋಗ, ಧರ್ಮೋಪದೇಶ ಆಯೋಗ ಮುಂತಾದ ಹಲವಾರು ಆಯೋಗಗಳು ಕಾರ್ಯನಿರ್ವಹಿಸುತ್ತಾ ಜನಸಾಮಾನ್ಯರ ಪಾಲುಗೊಳ್ಳುವಿಕೆಗೆ ಇಂಬಾಗಿವೆ. ಅವುಗಳ ಜೊತೆಗೆ "ಕನ್ನಡ ಸಾಹಿತ್ಯ-ಸಂಸ್ಕೃತಿ ಆಯೋಗ" ವನ್ನೂ ರಚಿಸಿ, ಸ್ಥಳೀಯ ಕನ್ನಡಿಗರ ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ಉದ್ದೀಪಿಸಿ, ಪುಸ್ತಕಸಂಸ್ಕೃತಿ, ಸಮೂಹಗಾನ, ಯಕ್ಷಗಾನ ಬಯಲಾಟ, ನಾಟಕ, ಕೋಲಾಟ, ಸಂಗೀತಸ್ಪರ್ಧೆ, ನಾಟ್ಯ, ಚಿತ್ರಕಲೆಗಳ ಮೂಲಕ ಪ್ರಭು ಯೇಸುಕ್ರಿಸ್ತರ ಸಂದೇಶವನ್ನು ವಿಸ್ತೃತವಾಗಿ ಸಾರುವಂತಾಗಲಿ.
*********

ಆಂತರಿಕ ಬದುಕು

ಆಂತರಿಕ ಬದುಕು

- ಫಾ. ಪಿ ವಿಜಯ ಕುಮಾರ್, ಬಳ್ಳಾರಿ

ದುರಸ್ತಿ ಮತ್ತು ನವೀಕರಣ ಒಂದು ನಿರಂತರ ಪ್ರಕ್ರಿಯೆ. ಈ ಪ್ರಕ್ರಿಯೆಗೆ ಅಂತ್ಯವೇ ಇಲ್ಲ! ಇದು ಸ್ಥಗಿತಗೊಂಡರೆ ಹೊಸತನವೇ ಇರುವುದಿಲ್ಲವೆಂದರೆ ಆಶ್ಚರ್ಯವೇನಿಲ್ಲ. ಆದರೆ ಮಾನವರ ಹೊರ ಜಗತ್ತು ದುರಸ್ತಿಯಾದರೆ ಅಥವ ನವೀಕರಣಗೊಂಡರೆ ಸಾಲದು. ಮಾನವರ ಆಂತರಿಕ ಬದುಕು ದುರಸ್ತಿಗೊಳ್ಳಬೇಕು ಹಾಗೂ ನವೀಕರಣಗೊಳ್ಳಬೇಕು. ಈ ಪ್ರಕ್ರಿಯೆ ನಿರಂತರವಾಗಿ ಸಾಗಬೇಕು, ಸ್ಥಗಿತಗೊಳ್ಳಲೇಬಾರದು. 
ನಮ್ಮ ಈ ಭವ್ಯ ಭೂಮಿ ಬಿಡುವಿಲ್ಲದೇ ಸುತ್ತುತ್ತಲೇ ಇದೆ, ಅದು ಎಂದೂ ವಿಶ್ರಾಂತಿ ಪಡೆಯುವುದಿಲ್ಲ. ಅದು ಒಂದು ಕ್ಷಣ ನಿಂತರೆ ಏನಾಗಬಹುದೆಂದು ಊಹಿಸಲು ಸಾಧ್ಯವಿಲ್ಲ. ಒಂದು ವೇಳೆ ಅದು ಕ್ಷಣಕಾಲ ನಿಂತರೂ ಜೀವ ಜಗತ್ತು ತಲ್ಲಣಗೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಹಾಗೆಯೇ ನಮ್ಮ ಬದುಕಿನ ದುರಸ್ತಿ ಮತ್ತು ನವೀಕರಣಪ್ರಕ್ರಿಯೆ ಸ್ವಲ್ಪವಿರಾಮ ಪಡೆದರೂ ಜೀವನ ಸ್ಥಿಮಿತತೆಯನ್ನು ಕಳೆದುಕೊಂಡು ವಿನಾಶದೆಡೆ ಮುಖಮಾಡಬಹುದು.
ಇಂದು ನಮ್ಮ ಮಾನವ ಬದುಕು ಹಸನಾಗಬೇಕಾದರೆ ಅದರ ದುರಸ್ತಿ ಮತ್ತು ನವೀಕರಣ ಕಾರ್ಯ ತ್ವರಿತಗತಿಯಲ್ಲಿ ಸಾಗಬೇಕು. ಇಂದು ಸಮಾಜದಲ್ಲಿ ಇಂತಹ ಕಾರ್ಯ ಸಕಾರಾತ್ಮಕವಾಗಿ ನಡೆಯುತ್ತಿಲ್ಲವೆಂದು ಹೇಳಲು ಬಹಳ ದುಃಖವಾಗುತ್ತದೆ. ಮಾನವರು ಇಂದು ತಮ್ಮ ಸ್ವಾರ್ಥ ಸಾಧನೆಗಾಗಿ ಏನು ಮಾಡಲೂ ಸಿದ್ದರಾಗಿದ್ದಾರೆ. ತಮ್ಮತನವನ್ನು ಮರೆತು ಸ್ವಾರ್ಥದ ಮಡುವಿನಲ್ಲಿ ಮುಳುಗಿ ಕತ್ತಲೆಯೇ ಬೆಳಕೆಂಬ ಗುಂಗಿನಲ್ಲಿದ್ದಾರೆ. ಕಪ್ಪೇಬಿಳುಪೆಂದು ವಾದಿಸುತ್ತ ತಾವೇ ಜ್ಞಾನಿಗಳೆಂಬ ಭ್ರಮೆಯಲ್ಲಿ ತೇಲುತ್ತಿದ್ದಾರೆ. ಇಂತಹವರ ಬದುಕು ದುರಸ್ತಿಗೊಂಡು ಹಸನಾಗದಿದ್ದಲ್ಲಿ ನವೀಕರಣವಾಗುವುದಾರೂ ಹೇಗೆ?
ಇಂದು ಮಾನವನ ಆತ್ಮಸಾಕ್ಷಿ ಸತ್ತು ಹೋಗಿದೆ. ಅಂತರಾತ್ಮದಲ್ಲಿ ಸತ್ಯದ ಬೆಳಕು ನಂದಿಹೋಗುತ್ತಿದೆ. ಮಾನವ ದಾರಿತಪ್ಪಿ ಪರಿತಪಿಸುತ್ತಿದ್ದಾನೆ. ಕತ್ತಲೆಯ (ಪಾಪದ) ಕೂಪದಲ್ಲಿ ಮುಳುಗಿಹೋಗುತ್ತಿದ್ದಾನೆ. ಅನ್ಯಾಯ, ಅಧರ್ಮ, ಅಕ್ರಮ ಕಾರ್ಯಗಳಲ್ಲಿ ಮಗ್ನನಾಗಿದ್ದಾನೆ. ವಾಮ ಮಾರ್ಗವೇ ಸರಿಯಾದ ಮಾರ್ಗವೆಂಬ ಭ್ರಮೆಯಲ್ಲಿದ್ದಾನೆ. ಒಬ್ಬರನ್ನು ಮಟ್ಟಹಾಕಿ ತಾನು ಮೇಲೆ ಬರುವುದೇ ಸರಿಯಾದ ಕ್ರಮವೆಂದು ಪರಿಗಣಿಸುತ್ತಿದ್ದಾನೆ. ಹೀಗೇ ಮುಂದುವರಿದರೆ ಮಾನವನ ಬದುಕೇ ದುಸ್ಥರವಾಗಿ ಮಾನವತೆ ಮರೆತು ಅಸುರನಾಗುವುದರಲ್ಲಿ ಸಂದೇಹವೇ ಇಲ್ಲ.
ದೇವರು ಮಾನವರನ್ನು ಒಂದು ಉತ್ತಮ ಬದುಕಿಗೆ ರೂಪಿಸಿದ್ದಾರೆಯೇ ಹೊರತು ಸ್ವಾರ್ಥದ ಬದುಕಿಗಲ್ಲ. ನಿಸ್ವಾರ್ಥ ಬದುಕು ಸದಾ ಸಮಾಜ ಮುಖಿಯಾಗಿರುತ್ತದೆ. ಪರಸ್ನೇಹದಿಂದ ಕೂಡಿರುತ್ತದೆ. ಪರಹಿತವನ್ನು ಬಯಸುತ್ತದೆ.
ಅದನ್ನೇ ಸಂತ ಪೌಲನು "ಸ್ವಾರ್ಥ ಸಾಧನೆಗಾಗಲಿ, ಡಂಭಾಚಾರಕ್ಕಾಗಲಿ ಏನನ್ನೂ ಮಾಡಬೇಡಿ. ಪರಸ್ಪರ ನಮ್ರತೆಯಿಂದ ನಡೆದುಕೊಳ್ಳಿ; ಇತರರು ನಿಮಗಿಂತಲೂ ಶ್ರೇಷ್ಠರೆಂದು ಪರಿಗಣಿಸಿರಿ. ಸ್ವಹಿತವನ್ನೇ ಗಮನಿಸದೆ ಪರರ ಹಿತವನ್ನೂ ಬಯಸಿರಿ. ಕ್ರಿಸ್ತ ಯೇಸುವಿನಲ್ಲಿರುವ ಮನೋಭಾವ ನಿಮ್ಮಲ್ಲೂ ನೆಲೆಸಿರಲಿ" (ಫಿಲಿಪ್ಪಿಯರಿಗೆ:3-5). ಎನ್ನುತ್ತಾನೆ. ಹಾಗೆಯೇ ರೋಮನರಿಗೆ ಬರೆಯುತ್ತ "ನಿಮ್ಮ ಪ್ರೀತಿ ನಿಷ್ಕಪಟವಾಗಿರಲಿ. ಕೆಟ್ಟದನ್ನು ದ್ವೇಷಿಸಿರಿ, ಸೋದರ ಭಾವನೆಯಿಂದ ಒಬ್ಬರನ್ನೊಬ್ಬರು ಹೃತ್ಪೂರ್ವಕವಾಗಿ ಪ್ರೀತಿಸಿರಿ, ಗೌರವ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ" (ರೋಮನರಿಗೆ:9-10) ಎನ್ನುತ್ತಾನೆ.
ಸ್ವಾರ್ಥ ಬಿಟ್ಟು ನಿಸ್ವಾರ್ಥಿಯಾಗಿ, ದ್ವೇಷ ಬಿಟ್ಟು ಪ್ರೀತಿಯಲ್ಲಿ ನೆಲೆ ನಿಲ್ಲಬೇಕಾದರೆ ಮಾನವರಾದ ನಾವು ಕ್ರಿಸ್ತಾಂಬರರಾಗಬೇಕು. ನಮ್ಮ ಸ್ವಂತ ಶಕ್ತಿಯಿಂದ ನಮ್ಮನ್ನು ನಾವು ಸರಿಪಡಿಸಿಕೊಳ್ಳಲು ಸಾಧ್ಯವಿಲ್ಲ. ಪವಿತ್ರಾತ್ಮರ ಶಕ್ತಿ, ಕ್ರಿಸ್ತರ ಪ್ರಸನ್ನತೆ ಹಾಗೂ ತಂದೆಯ ಅನುಗ್ರಹ ನಮಗೆ ಬೇಕೇ ಬೇಕು. ಅವರ ಪ್ರಸನ್ನತೆಯಿಂದ ನಮ್ಮಲ್ಲಿ ದೈವೀಕ ಜ್ಞಾನ ವೃದ್ಧಿಯಾಗಿ ಸ್ವಾರ್ಥಾಲೋಚನೆಗಳು ನಿಧಾನವಾಗಿ ದಮನಗೊಳ್ಳಲಾರಂಭಿಸುತ್ತವೆ. ಅಲ್ಲಿ ನಿಸ್ವಾರ್ಥ ಚಿಗುರಲಾರಂಭಿಸುತ್ತದೆ. 
ಅದನ್ನು ಮಾನವರು ನಿರಂತರವಾಗಿ ಹಾಗೂ ಜೋಪಾನವಾಗಿ ಪೋಷಿಸಿ ಬೆಳೆಯಲು ಅನುವು ಮಾಡಿಕೊಟ್ಟಲ್ಲಿ ಪರಸ್ನೇಹ ಹಾಗೂ ಪರಪ್ರೀತಿಯ ಕಾರಂಜಿಗಳು ಚಿಮ್ಮಲು ಪ್ರಾರಂಭಿಸುತ್ತವೆ. ಇದು ಸ್ಥಿರವಾಗಿ ಸಾಗಬೇಕಾದರೆ ಮಾನವರು ಕ್ರಿಸ್ತನಲ್ಲಿ ಸ್ಥಿರವಾಗಿ ನೆಲೆ ನಿಲ್ಲಬೇಕು. ಇದನ್ನೇ ಯೊವಾನ್ನನು "ನೀವು ನನ್ನಲ್ಲಿ ನೆಲೆಗೊಂಡಿರಿ, ಆಗ ನಾನು ನಿಮ್ಮಲ್ಲಿ ನೆಲೆಗೊಂಡಿರುವೆನು. ಕವಲು ಮೂಲಬಳ್ಳಿಯಲ್ಲಿ ಒಂದಾಗಿ ನೆಲೆಸದಿದ್ದರೆ ತನ್ನಷ್ಟಕ್ಕೆ ತಾನೇ ಫಲ ಕೊಡಲಾಗದು" (ಯೊವಾನ್ನ 15:4) ಎಂದು ಪ್ರಭುವಿನ ಪ್ರಸನ್ನತೆಯ ಮಹತ್ವವನ್ನು ವಿವರಿಸಿದ್ದಾನೆ. ನಮ್ಮ ಆಂತರಿಕ ಬದುಕಿನ ದುರಸ್ತಿ ಹಾಗೂ ನವೀಕರಣಕ್ಕೆ ತ್ರೈಏಕನ ಅನುಗ್ರಹ ಬೇಕೇ ಬೇಕು. ಆಗ ಆಧ್ಯಾತ್ಮಿಕ ಬೆಳವಣಿಗೆ ಸಕಾರಾತ್ಮಕವಾಗಿ ಪ್ರಗತಿಯಾಗಿ ಮಾನವ ಪಾವನನಾಗುತ್ತಾನೆ. ಸ್ವಾರ್ಥ ಕಳಚಿ ನಿಸ್ವಾರ್ಥ ಬದುಕು ಆರಂಭವಾಗುತ್ತದೆ.
*********

ಓದಿದ ಪುಸ್ತಕಗಳಿಂದ...

ಕವಿಯೊಬ್ಬನ ನೆನಪು.
ರೀಟಾ: ಕಿರಿಯ ಲೇಖಕರಿಗೆ ಏನಾದರೂ ಹಿತವಚನ ನೀಡುವಿರಾ?
ನೆರೂಡ: ಮುಖ್ಯ ಹಿತವಚನ, ಅವರು ರಾಜಕೀಯ ಪದ್ಯಗಳನ್ನು ಬರೆಯಲು ಯತ್ನಿಸಕೂಡದು, ತಮಗೆ ತೋಚಿದಂತೆ ಬರೆಯಬೇಕು. ರಾಜಕೀಯ ಕಾವ್ಯ ಪ್ರೇಮ ಕಾವ್ಯದಷ್ಟೇ ಗಾಢವೂ, ತೀವ್ರವೂ ಆದದ್ದು. ಆದರೆ ಅದನ್ನು ಪ್ರಯತ್ನಪೂರ್ವಕವಾಗಿ ಬರೆಯಲು ಆಗುವುದಿಲ್ಲ. ಬೇರೆ ಕಾವ್ಯ ಬರೆದು ಅನುಭವಿಸಿದ ಮೇಲೆ ರಾಜಕೀಯವನ್ನು ಗ್ರಹಿಸುವ ಶಕ್ತಿ ಬಂದಾಗ ಮಾತ್ರ ಅವರು ರಾಜಕೀಯ ಪದ್ಯ ಬರೆಯಬಹುದು. ರಾಜಕೀಯ ಕಾವ್ಯ ಬರೆಯುವಾತ ಕಾವ್ಯಕ್ಕೆ ದ್ರೋಹ ಬಗೆದ ಬಗ್ಗೆ, ರಾಜಕೀಯಕ್ಕೆ ದ್ರೋಹ ಬಗೆದ ಬಗ್ಗೆ ಕಟು ಟೀಕೆಗೆ ಒಳಗಾಗಲು ಸಿದ್ಧನಿರಬೇಕು.
ರೀಟಾ: ನೀವು ನಿಮ್ಮ ದೇಶ ಮತ್ತು ನೊಬೆಲ್ ಬಹುಮಾನ – ಇವೆರಡರಲ್ಲಿ ಒಂದನ್ನು ಆರಿಸಿಕೊಳ್ಳಬೇಕಾಗಿ ಬಂದರೆ ಯಾವುದನ್ನು ಆರಿಸಿಕೊಳ್ಳುತ್ತೀರಿ?
ನೆರೂಡ: ಆ ಬಗೆಯ ಹುಸಿ ಆಯ್ಕೆ ಎದುರಾಗಲಾರದು.
ರೀಟಾ: ಅವೆರಡನ್ನು ಒಂದು ಮೇಜಿನ ಮೇಲಿಟ್ಟು ಆರಿಸಿಕೋ ಎಂದು ಹೇಳಿದರೆನ್ನಿ..
ನೆರೂಡ: ಬೇರೆ ಮೇಜಿಗೆ ಹೋಗಿ ಕೂರುತ್ತೇನೆ.
ಟೀಕೆ ಟಿಪ್ಪಣಿ – ಪಿ ಲಂಕೇಶ್ - ಪುಟ – 142- 43

ಇಲ್ಲಿ ಯಾವನೂ ದ್ವೀಪವಲ್ಲ
ಆ ಓಲಗದ ಸದ್ದು ಯಾವ ನೋವನ್ನು, ಯಾರ ಸಾವನ್ನು, ಎಷ್ಟು ಹೃದಯಗಳ ಆಕ್ರಂದನವನ್ನು ಸೂಚಿಸುತ್ತಿದೆ? ಅದೇ ದುಃಖದ ಓಲಗ ಎಷ್ಟ ಜನರ ಸಂತೋಷವನ್ನು, ಸಾವಿನ ಬಗ್ಗೆ ಅಟ್ಟಹಾಸವನ್ನು, ರೋಷದ ಅಂತಿಮವನ್ನು, ಸೇಡಿನ ಪ್ರತಿಫಲನವನ್ನು ಮಂಡಿಸುತ್ತಿದೆ?
ಆ ಓಲಗದ ಸದ್ದು ಯಾವ ಮಾಯವಾದ ಕ್ರಿಯಶೀಲತೆಯನ್ನು ಕೊನೆಗೊಂಡ ಕನಸನ್ನು ಸೂಚಿಸುತ್ತಿದೆ?
ನನಗೂ ಅದಕ್ಕೂ ಸಂಬಂಧವಿಲ್ಲ ಎಂದು ಹೇಳಲು ನನ್ನ ಮನಸ್ಸು ತವಕಿಸುತ್ತಿದೆ. ನಾನು ಬಲ್ಲ. ಪ್ರೀತಿಸಿದ, ದ್ವೇಷಿಸಿದ ಯಾರೂ ಮರಣ ಹೊಂದಿಲ್ಲ ; ನನ್ನನ್ನು ದುಃಖಕ್ಕೆ ಈಡುಮಾಡಿಲ್ಲ. ಎಲ್ಲೋ ಸ್ಫುರಿಸುತ್ತಿರುವ ಈ ನೋವಿನ ಓಲಗದ ಸದ್ದು ನನ್ನನ್ನೇಕೆ ಕಾಡಿಸಬೇಕು?
For Whom the bell tolls? ಎಂದು ಕೇಳುವ ಕ್ರಶ್ಚಿಯನ್ ಕವಿ ಡನ್ ನೆನಪಾಗುತ್ತಿದ್ದಾನೆ. ಮರಣದ ಸೂಚಕವಾಗಿ ಕ್ರಿಶ್ಚಿಯನ್ ದೇವಾಲದಲ್ಲಿ ಗಂಟೆ ನಿನದಿಸುತ್ತದೆ; ಯಾವನೋ ಒಬ್ಬ ವ್ಯಕ್ತಿ ಮರಣ ಹೊಂದಿ ಮಣ್ಣಾಗುತ್ತಿದ್ದಾನೆ. ಆತನ ಬಗೆ ವ್ಯಾಕುಲಗೊಳ್ಳಲು, ಅಪರಿಚಿತ ವ್ಯಕ್ತಿ ಸಾವಿನ ಬಗ್ಗೆ ದುಗುಡಗೊಳ್ಳಲು ನಿರಾರಿಸುತ್ತಿರುವ ಮನಸ್ಸಿನ ಆಳಕ್ಕೆ ಹೋಗಿ ನೋಡಿದರೆ ಅಲ್ಲಿ ಕವಿಯ ಆತ್ಮಕ್ಕಾದ ನಷ್ಟದ ಅರಿವಾಗುತ್ತದೆ. ಯಾವನೇ ಒಬ್ಬ ವ್ಯಕ್ತಿ ನಷ್ಟ, ಆನ್ಯಾಯ, ಸಾವಿಗೆ ಈಡಾದರೂ ಬದುಕಿರುವವರ ಜೀವನ ಸಂಕುಚಿತಗೊಳ್ಳುತ್ತದೆ. No man is an island ಎಂದು ತನ್ನ ಪದ್ಯವನ್ನು ಶುರುಮಾಡುವ ಕವಿ ಈ ಜಗತ್ತಿನ ಎಲ್ಲರ ಬದುಕು ತಳಕು ಹಾಕಿಕೊಂಡಿರುವುದನ್ನು, ಪರಸ್ಪರ ಸಂಬಂಧ ಹೊದಿರುವುದನ್ನು ಸೂಚಿಸುತ್ತಾನೆ.
ಟೀಕೆ ಟಿಪ್ಪಣಿ 1 - ಪಿ ಲಂಕೇಶ್ ಪುಟ 162


ಓ ಸತ್ಯ ಸ್ವರೂಪಿಯಾದ ದೇವರೆ!
ನಿರಂತರ ಒಲವಿನಲ್ಲಿ
ನನ್ನನ್ನು ನಿನ್ನಲ್ಲಿ ಒಂದುಗೂಡಿಸು
ಹಲವು ವಿಷಯಗಳನ್ನೋದಿ ಕೇಳಿ
ಅನ್ಯಮನಸ್ಕನಾಗಿಹೆ ನಾನು
ನನಗೆ ಅನಿಸುವುದೆಲ್ಲವೂ
ಹಂಬಲಿಸುವುದೆಲ್ಲವೂ
ನಿನ್ನಲ್ಲಿಯೇ ಇದೆ.
ಬೋಧಕರೆಲ್ಲರೂ ಮೌನವಾಗಿರಲಿ
ಸೃಷ್ಟಿಸಲಾದ ಸಮಸ್ತ ವಸ್ತುಗಳೆಲ್ಲವೂ
ನಿನ್ನ ಸಮ್ಮುಖದಲ್ಲಿ ಸುಮ್ಮನಿರಲಿ.
ನೀನೊಬ್ಬನೇ ನನ್ನೊಡನೆ ಮಾತನಾಡು

ನಿನ್ನಂತೆ ನಾನಾಗಲು
(Thomas A Kempis: The imitation of Christ ಗ್ರಂಥದ ಭಾಗವೊಂದರ ಭಾವಾನುವಾದ) -
ಪ್ರಶಾಂತ್  ವಲೆರಿಯನ್ ಮಾಡ್ತ. ಪುಟ - 4

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...