Tuesday, 10 November 2020

ಕಣ್ಣು ಹನಿಗೂಡಿತು...


ನೋಡಿದ್ದು ಒಂದು ಅದ್ಭುತವಾದ ಕಿರುಚಿತ್ರ. ಕೆಲವೇ ನಿಮಿಷಗಳೇ ಜೀವನದ ಅತೀ ಮುಖ್ಯ ಮೌಲ್ಯವಾದ ಅನುಭೂತಿಯ ಬಗ್ಗೆ ತಿಳಿ ಹೇಳುವ ಚಿತ್ರವಿದು. ಬರಹಗಾರರಾದ ಪುರುಷೋತ್ತಮರವರ ಯುಟೂಬ್ ಚಾನೆಲ್‌ನ್ನು ಕಣ್ಣಾಯಿಸುವಾಗ ಕಣ್ಣು ಹನಿಗೂಡಿತು ಎಂಬ ತಲೆಬರಹದೊಂದಿಗೆ ಕಂಡಂತಹ ಚಿತ್ರವಿದು. 

ಒಬ್ಬ ವಿದ್ಯಾರ್ಥಿಯು ಶಾಲೆಗೆ ತಡವಾಗಿ ಬರುವ ದೃಶ್ಯದಿಂದ ಆರಂಭವಾಗುತ್ತದೆ ಈ ಚಿತ್ರ. ಶಾಲೆಗೆ ತಡವಾಗಿ ಬಂದ ವಿದ್ಯಾರ್ಥಿ ಬಾಗಿಲನ್ನು ತಟ್ಟಿ, ಶಿಕ್ಷಕರ ಅಪ್ಪಣೆ ಪಡೆದು ತರಗತಿಯ ಒಳಗೆ ಹೋಗಿ ಟೀಚರ್ ಮುಂದೆ ನಿಲ್ಲುತ್ತಾನೆ. ಟೀಚರ್,  ಕುಪಿತನಾಗಿ ಕಾರಣಕ್ಕೆ ಕಾಯದೆ, ಕೈಯನ್ನು ಮುಂದು ಮಾಡಲು ವಿದ್ಯಾರ್ಥಿಗೆ ಹೇಳಿ, ಸ್ಕೇಲ್‌ನಿಂದ ಹೊಡೆದು ತರಗತಿಯಲ್ಲಿ ಕೂರಲು ಅನುಮತಿಸುತ್ತಾನೆ. ಪೆಟ್ಟನ್ನು ತಿಂದ ವಿದ್ಯಾರ್ಥಿ ಅತೀವ ನೋವಿನಿಂದ ತನಗೆ ಮೀಸಲಿಟ್ಟ ಸ್ಥಳಕ್ಕೆ ಹೋಗಿ ಕುಳಿತುಕೊಳ್ಳುತ್ತಾನೆ. ಹೀಗೆ ಇದು ಪ್ರತಿದಿನದ ದೃಶ್ಯವಾಗಿ ಚಿತ್ರ ಮುಂದುವರೆಯುತ್ತದೆ. 

ಒಂದು ದಿನ ಟೀಚರ್ ತನ್ನ ಸೈಕಲ್ ತುಳಿಯುತ್ತಾ ಶಾಲೆಗೆ ಬರುವಾಗ, ಪ್ರತಿದಿನ ಶಾಲೆಗೆ ತಡವಾಗಿ ಬರುವ ವಿದ್ಯಾರ್ಥಿಯನ್ನು ಕಾಣುತ್ತಾನೆ. ಅವನು ಕಾಣುವ ದೃಶ್ಯದಿಂದ ದಂಗಾಗುತ್ತಾನೆ. ಪಾಪಪ್ರಜ್ಞೆ ಅವನಲ್ಲಿ ತುಂಬಿ ತುಳುಕುವಷ್ಟು ಅವನು ತಳಮಳಗೊಳ್ಳುತ್ತಾನೆ. ಹೌದು, ಶಾಲೆಗೆ ತಡವಾಗಿ ಬರುತ್ತಿದ್ದ ಹುಡುಗ ಕಾಲಿಲ್ಲದ ಇನ್ನೊಬ್ಬ ವಿದ್ಯಾರ್ಥಿಯನ್ನು ವೀಲ್‌ಚೈರ್‌ನಲ್ಲಿ ಕೂರಿಸಿಕೊಂಡು ನೂಕುತ್ತಾ ಅವನನ್ನು ಅವನ ಶಾಲೆಗೆ ಮುಟ್ಟಿಸಿ ಶಾಲೆಗೆ ತಡವಾಯಿತ್ತೆಂದು ಓಡುವ ದೃಶ್ಯ. ಈ ದೃಶ್ಯವನ್ನು ಕಂಡ ಶಿಕ್ಷಕ ಭಾರವಾದ ಹೃದಯದಿಂದ ಶಾಲೆಯ ಕಡೆ ಸೈಕಲ್ ಅನ್ನು ನೂಕ್ಕುತ್ತಾ ನಡೆಯುತ್ತಾನೆ. 

ವಿದ್ಯಾರ್ಥಿ ಯಥಾಪ್ರಕಾರ ತರಗತಿಗೆ ತಡವಾಗಿ ಬಂದು ಬಾಗಿಲನ್ನು ತಟ್ಟಿ ಟೀಚರ್ರವರ ಅನುಮತಿ ಪಡೆದು ತರಗತಿ ಒಳಗೆ ಬಂದು ಶಿಕ್ಷಕನ ಮುಂದೆ ನಿಂತು ಶಿಕ್ಷೆಗಾಗಿ ತನ್ನ ಕೈಯನ್ನು ಮುಂದೆ ಮಾಡುತ್ತಾನೆ. ಶಿಕ್ಷಕ ನೋವಿನಿಂದ ವಿದ್ಯಾರ್ಥಿಯ ಮುಂದೆ ಮಂಡಿಯೂರಿ, ತನ್ನ ಕೈಯಲ್ಲಿದ್ದ ಸ್ಕೇಲ್‌ನ್ನು ವಿದ್ಯಾರ್ಥಿಗೆ ನೀಡಿ, ಅವನ ಕೈ ಮುತ್ತಿಕ್ಕಿ ಕೊನೆಗೆ ಅಳುತ್ತಾ ವಿದ್ಯಾರ್ಥಿಯನ್ನು ತಬ್ಬಿಕೊಳ್ಳುತ್ತಾನೆ. ಇದು ಕಿರುಚಿತ್ರದ ಕಥೆ. ಈ ಚಿತ್ರವನ್ನು ವೀಕ್ಷಿಸಿದ ಅನೇಕರು ಈ ರೀತಿಯಾಗಿ ಕಮೆಂಟ್ ಮಾಡಿದ್ದಾರೆ:

ನಿಜ ಬಿಳಿಮಲೆ, ಕಣ್ಣು ಹನಿಗೂಡಿತು. ಬೇಸಾಯದ ದಿನಗಳಲ್ಲಿ ಬೆಳಗ್ಗೆ ಎದ್ದು ಗದ್ದೆ ಉತ್ತು ಶಾಲೆಗೆ ಹೋದಾಗ ತಡವಾದದ್ದಕ್ಕೆ ಹಲವು ಬಾರಿ ಪೆಟ್ಟು ತಿಂದದ್ದು ನೆನಪಿಗೆ ಬಂತು. ಯಾಕೆ ತಡ ಅಂತ ಕೇಳದೆ ಮೇಷ್ಟ್ರು ಹೊಡೆದದ್ದು, ಕಾರಣ ಹೇಳಲು ಆಗದೆ ಇದ್ದದ್ದು ಇತ್ಯಾದಿ.. ಆದರೆ ನಿಮ್ಮ ವೀಡಿಯೋ ದೃಶ್ಯ ಅತೀವ ನೋವು ಉಂಟುಮಾಡುವಂಥದ್ದು.. ಉಳುವಾಗ ಎತ್ತುಗಳಿಗೆ ಹೊಡೆದದ್ದಕ್ಕೆ ಶಾಲೆಯಲ್ಲಿ ಪೆಟ್ಟು ತಿನ್ನಬೇಕು ಎಂಬ ಲೆಕ್ಕಾಚಾರ ನನ್ನದಾಗಿತ್ತು!!

ಒಮ್ಮೆ ನಗರದ ಶಾಲೆಯೊಂದರಲ್ಲಿ ಕನ್ನಡ ಅಧ್ಯಾಪಕನಾಗುವ ಅವಕಾಶ ದೊರೆಯಿತು. ಹುಡುಗನೊಬ್ಬ ಉಳಿದವರಿಗೆ ದಿನಾ ತರಗತಿಯಲ್ಲಿ ಪಾಠದ ಸಂದರ್ಭದಲ್ಲಿ ತೊಂದರೆ ಕೊಡುತ್ತಿದ್ದ. ನೋಡಿ ನೋಡಿ ತಾಳ್ಮೆ ಹಾರಿ ಹೋಗಿ ಅವನಿಗೆ ಸ್ಕೇಲಲ್ಲಿ ನಾಲ್ಕು ಪೆಟ್ಟು ಕೊಟ್ಟೆ. ಹುಡುಗ ಈಗ ಹೇಗಿದ್ದಾನೋ. ಆದರೆ ಅವನನ್ನು ಹೊಡೆದ ನೋವು ಇಂದೂ ನನ್ನ ಕಾಡುತ್ತಿದೆ. ಈ ಚಿತ್ರ ನೋಡಿ ಕಣ್ಣುಗಳಲ್ಲಿ ನೀರು ತುಂಬಿತು. ನಿಜಕ್ಕೂ ಮಕ್ಕಳೆಂದರೆ ದೇವರ ಸಮಾನ ಎಂದು ಹಿರಿಯರು ಹೇಳುವುದು ಇದಕ್ಕೆ ಇರಬೇಕು.

ಇದು ಪ್ರತಿಯೊಬ್ಬ ಶಿಕ್ಷಕನೂ ನೋಡಲೇ ಬೇಕಾದ ವಿಡಿಯೋ. ನಾನೂ ಶಿಕ್ಷಕಿಯಾಗಿದ್ದಾಗ ಹೀಗೆ ಏನಾದ್ರು ಮಾಡಿರಬಹುದೇ....

ಸನ್ನಿವೇಶವನ್ನು Empathy ಯಿಂದ ನೋಡಬೇಕೆನ್ನುವುದರ ಅದ್ಭುತ ದೃಶ್ಯ ಇದು..ಸಮಸ್ಯೆಯನ್ನು ಇನ್ನೊಬ್ಬರ ದೃಷ್ಟಿಕೋನದಿಂದ ಅವಲೋಕನ ಮಾಡುವುದೇ ಎಂಪಥಿ..

ನಾನಿದನ್ನು ಎರಡನೆ ಸಲ ನೋಡಿದ್ದು. ಆದರೂ ಕಣ್ಣೀರು ಇಳಿಯಿತು.

ಈ ಮೊದಲೊಮ್ಮೆ ನೋಡಿದ್ದೆ. ಶಿಕ್ಷಕರ ಮನಸ್ಸನ್ನು ಎಚ್ಚರಿಸುವ ವೀಡಿಯೋ.

ನೀವು ಈ ಚಿತ್ರವನ್ನು ನೋಡಿ ಕಮೆಂಟ್ ಮಾಡಲು ಮರೆಯಬೇಡಿ. («rAiÉÆÃ °APï - https://www.facebook.com/purushothama.bilimale.9 vid os/10158633565744034)

 ಮಕ್ಕಳ ದಿನಾಚರಣೆಯ ಶುಭಾಶಯಗಳು

ಆನಂದ್


 

ಒಂದು ಆತ್ಮಹತ್ಯೆ ಪ್ರಕರಣದ ಸುತ್ತ... ಫ್ರಾನ್ಸಿಸ್. ಎಂ. ಎನ್


    ಕೊರೊನಾ ವೈರಾಣು ತರುವ ಕಾಯಿಲೆ ಕೋವಿಡ್ ೧೯ ಜ್ವರವು ಸಾಂಕ್ರಾಮಿಕವಾಗಿ ಹರಡುತ್ತಿದ್ದು ನಮ್ಮ ಜೀವನದ ಕ್ರಮವನ್ನೇ ಬದಲಿಸಿದೆ. ಅದರ ಹಿನ್ನೆಲೆಯಲ್ಲಿ ನಮ್ಮ ಸುತ್ತಲಿನ ಜಗತ್ತು ಸಕಲ ಆಯಾಮಗಳಲ್ಲೂ ಕುಸಿಯತೊಡಗಿದೆ. 

  ಸರ್ಕಾರಗಳ ಚುಕ್ಕಾಣಿ ಹಿಡಿದವರಿಗೆ ನಿರಂಕುಷ ಅಧಿಕಾರ ನಡೆಸುತ್ತಾ ಅಧಿಕಾರದ ಗದ್ದುಗೆಗಳ ಮೇಲೆ ನಿರಂತರವಾಗಿ ಕೂರುವ ಕೆಟ್ಟ ಕನಸು ಕಾಡತೊಡಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಬೇಕಾಗಿದ್ದ ನ್ಯಾಯಾಲಯಗಳು ಅಂಥ ಮೌಲ್ಯಗಳನ್ನು ಪ್ರತಿಪಾದಿಸುವವರ ಬಾಯಿ ಮುಚ್ಚಿಸಲು ಮುಂದಾಗುತ್ತಿವೆ. ನಮ್ಮ ನಾಡಿನ ಆರ್ಥಿಕ ಸ್ಥಿತಿ ಮತ್ತಷ್ಟು ಅಧೋಗತಿಯತ್ತ ಸಾಗತೊಡಗಿದೆ. ಸಾಮಾಜಿಕ ಆರೋಗ್ಯ ವ್ಯವಸ್ಥೆ ಹದಗೆಟ್ಟಿದೆ.

  ಆತ್ಮಹತ್ಯೆಗೆ ಕಾರಣ ಮತ್ತು ತಡೆಗಟ್ಟುವ ವಿಧಾನಗಳ ಅರಿವು ಮೂಡಿಸುವ ಉದ್ದೇಶದಿಂದ, ಸೆಪ್ಟೆಂಬರ ೧೦ರಂದು ಜಗತ್ತಿನಾದ್ಯಂತ `ವಿಶ್ವ ಆತ್ಮಹತ್ಯೆ ವಿರೋಧಿ ದಿನ ಆಚರಿಸಲಾಗುತ್ತಿದೆ. ಆತ್ಮಹತ್ಯೆ ಆರೋಗ್ಯಕ್ಕೆ ಸಂಬಂಧಿಸಿದ್ದು, ಅದಕ್ಕೆ ಶಿಕ್ಷೆಯಲ್ಲ, ಚಿಕಿತ್ಸೆ ಎಂಬುದನ್ನು ಕಂಡುಕೊಂಡ ಭಾರತದ ಪ್ರಜ್ಞಾವಂತ ಸಮಾಜದ ಒತ್ತಾಸೆಗೆ ಅನುಗುಣವಾಗಿ, ನಮ್ಮ ಸರ್ಕಾರ ೨೦೧೭ರಲ್ಲಿ ಈ ಸಂಬಂಧದ ಕಾನೂನಿಗೆ ಹಲವು ತಿದ್ದುಪಡಿಗಳನ್ನು ತಂದಿದೆ. ಆತ್ಮಹತ್ಯೆಯಿಂದ ಸತ್ತವರಿಗೆ ಅಂತ್ಯಕ್ರಿಯೆಯನ್ನು ನಿರ್ಬಂಧಿಸುತ್ತಿದ್ದ ಕಥೋಲಿಕ ಧರ್ಮಸಭೆ ೧೯೮೩ರಲ್ಲೇ ಆ ನಿಷೇಧವನ್ನು ರದ್ದು ಪಡಿಸಿದ್ದನ್ನು ಕಂಡಿದ್ದೇವೆ.

  ಆದರೆ, ನೂರು ಇಲ್ಲವೇ ಸಾವಿರದಳಗೊಂದು ಎನ್ನಬಹುದಾದ ಏಕಃಶ್ಚಿತ ಅತ್ಮಹತ್ಯೆಯಂಥ ಪ್ರಕರಣವೊಂದು ಭಯಂಕರ ಚರ್ಚಾವಸ್ತುವಾಗಿದ್ದುದು ನಮ್ಮ ಸಮಾಜ ಸಾಗುತ್ತಿರುವ ದಿಕ್ಕಿನ ದಿಕ್ಸೂಚಿಯಂತಿದೆ. ಪ್ರಕರಣ ರಾಜ್ಯ ರಾಜ್ಯಗಳ ನಡುವಿನ ಪೊಲೀಸ ಘರ್ಷಣೆಯ ರೂಪತಾಳಿದ್ದುದು ನಮ್ಮ ಸಾಮಾಜಿಕ, ಆಡಳಿತ ವ್ಯವಸ್ಥೆಯ ಕುಸಿತದ ಲಕ್ಷಣವಾಗಿ ಕಾಣತೊಡಗಿರುವುದು ನಮ್ಮ ಕಾಲದ ದುರಂತ.

 ಹಿಂದಿ ಚಿತ್ರರಂಗದ ಉದಯೋನ್ಮುಖ ನಟ ಸುಶಾಂತ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದಿನಕ್ಕೊಂದು ಸ್ವರೂಪ ಪಡೆಯುತ್ತ ಸದ್ಯದ ಬಿಹಾರ ಚುನಾವಣೆಯೊಂದಿಗೆ ತಳುಕುಹಾಕಿಕೊಂಡಿತ್ತು. ಮೃತನೊಂದಿಗೆ ಪ್ರೀತಿಯ ಒಡನಾಟ ಹೊಂದಿದ್ದ ಮಗದೊಬ್ಬ ನಟಿಯನ್ನು, ನಮ್ಮ ನಿಮ್ಮಂತೆ ಒಬ್ಬ ಮನುಷ್ಯಳಲ್ಲ ಮಾಟಗಾತಿಯಂತೆ ಕಾಣಲಾಗುತ್ತಿದೆ! ಅದು ಆತ್ಮಹತ್ಯೆಯಲ್ಲ ಕೊಲೆ ಎಂದು ದೂರುವ ಕೆಲವರು, ತನಿಖಾ ಸಂಸ್ಥೆಗಳು ತನಿಖೆಯಿಂದ ಸತ್ಯವನ್ನು ಕಂಡುಕೊಳ್ಳುವ ಮೊದಲೇ, ಅವಳಿಗೆ ಕೊಲೆಗಾತಿ ಎಂಬ ಪಟ್ಟಕಟ್ಟಲು ಹಿಂದೇಟು ಹಾಕಲಿಲ್ಲ.

 ಪುರುಷ ಸಮಾಜ ತನ್ನೆಲ್ಲ ಅವಲಕ್ಷಣಗಳನ್ನು ಎಗ್ಗಿಲ್ಲದೇ ಪ್ರದರ್ಶನ ಮಾಡುವುದಕ್ಕೆ ಮುಂದಾಗುತ್ತಿದೆ. ನಟನ ತಂದೆ ಮಗನನ್ನು ಕಳೆದುಕೊಂಡ ಕಿಚ್ಚಿಗೆ ಹೊಡೆದಾಡುತ್ತಿದ್ದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎರಡೂ ದುಃಖತಪ್ತ ಕುಟುಂಬಗಳಿಗೆ ಸಾಂತ್ವನ ಹೇಳಬೇಕಾಗಿತ್ತು, ಆದರೆ ಅವು ಸುಟ್ಟ ಮನೆಯಲ್ಲಿ ಗಳ ಎಳೆಯುವವರಂತೆ, ಬಿಹಾರ ಚುನಾವಣೆಯ ಮೇಲೆ ಕಣ್ಣಿಟ್ಟು ಪ್ರಕರಣವನ್ನು ತಮಗೇ ಬೇಕಾದಂತೆ ಬಳಸಿಕೊಳ್ಳಲು ಮುಂದಾಗಿದ್ದು ನಮ್ಮ ಕಣ್ಣೆದುರಿಗೆ ಇದೆ. 

 ಅವುಗಳ ನಡೆ, ಸಂವಿಧಾನಕ್ಕೆ ಅವಮಾನಕರವಾದ ಸಂಗತಿ ಎಂಬುದು ಅವುಗಳಿಗೆ ಅರ್ಥವಾಗುತ್ತಿಲ್ಲ. ಇದರೊಂದಿಗೆ ಪುರುಷ ಪ್ರೇಮಿ ಜಾಲತಾಣಿಗರು, ಸಾಮಾಜಿಕ ಜಾಲತಾಣಗಳಲ್ಲಿ ಆ ಯುವತಿಯ ತೇಜೊವಧೆಗೆ ಮುಂದಾಗಿದ್ದಾರೆ. ದೂರದರ್ಶನದ ಮಾಧ್ಯಮಗಳು ತಮ್ಮ ಮೂಗಿನ ನೇರಕ್ಕೆ ಪ್ರಕರಣದ ನ್ಯಾಯ ವಿಚಾರಣೆ ನಡೆಸಿದ್ದವು, ನಡೆಸುತ್ತಿವೆ. 

  ಸುಶಾಂತ ಸಿಂಗ್ ರಾಜಪುತ್ ಸಾವಿನ ಪ್ರಕರಣ ವರದಿಯಾಗುತ್ತಿದ್ದಂತೆಯೇ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಮಹಾರಾಷ್ಟ್ರ ಸರ್ಕಾರ, ಮುಂಬೈ ಪೋಲಿಸರ ವಿರುದ್ಧ ಅವಹೇಳನಕಾರಿ ಲೇಖನಗಳು, ಅಪಪ್ರಚಾರದ ಚರ್ಚೆಗಳು ಆರಂಭವಾಗಿದ್ದವು, ಮೊದಮೊದಲು ಸಾವಿರಗಟ್ಟಲೇ ಇದ್ದ ಈ ಜಾಲತಾಣ ಖಾತೆಗಳ ಸಂಖ್ಯೆ ಈಗ ಲಕ್ಷಲಕ್ಷಗಳ ಗಡಿ ದಾಟಿವೆ ಎಂದು ಮುಂಬೈ ಪೋಲಿಸರು ತಿಳಿಸಿದ್ದಾರೆ. 

  ಈ ಖಾತೆಗಳು ಅನಾಮಿಕವಾಗಿದ್ದು, ಅದಕ್ಕೆ ಪೂರಕವಾಗಿ ಬಳಸಲಾಗುವ ಹೆಸರಾಂತ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆಗಳನ್ನು ತೆರೆದು ಮಸಿಬಳಿಯುವ ಕೆಲಸ ಮಾಡಲಾಗುತ್ತಿದೆ. ಅವಹೇಳನಕಾರಿ ಹೇಳಿಕೆಗಳನ್ನು ಅಧಿಕ ಸಂಖ್ಯೆಗಳಲ್ಲಿ ಪುನಃ ಪುನಃ ರವಾನಿಸಲಾಗಿದ್ದು ಸಂಶಯಾಸ್ಪದವಾಗಿ ಕಾಣುತ್ತಿದೆ. ಅವುಗಳ ಸತ್ಯಾಸತ್ಯತೆಯ ಬಗೆಗೆ ಸೈಬರ್ ತನಿಖೆ ಆರಂಭವಾಗುತ್ತಿದ್ದಂತೆ ಹಲವಾರು ಖಾತೆಗಳು ಮಾಯವಾಗುತ್ತಿವೆ ಇಲ್ಲವೇ ನಿಷ್ಕ್ರಿಯಗೊಳ್ಳುತ್ತಿವೆ. ಬಹುತೇಕ ಖಾತೆಗಳು ಚೈನಾ, ಪನಾಮಾ, ನೇಪಾಳ ಮೊದಲಾದ ದೇಶಗಳಲ್ಲಿ ಕುಳಿತವರಿಂದ ಕಾರ್ಯಾಚರಣೆಗೊಳ್ಳುತ್ತಿವೆ ಎನ್ನಲಾಗುತ್ತದೆ.

 ಕೆಲವರಂತೂ ತಮ್ಮ ಜಾಲತಾಣಗಳ ಖಾತೆಗಳಲ್ಲಿ ಅವಳಿಗೆ ಅತ್ಯಾಚಾರದ ಬೆದರಿಕೆಯನ್ನೂ ಒಡ್ಡಿದ್ದಾರೆ! ಅವರು ರಿಹಾ ಚಕ್ರವರ್ತಿಗೆ ಬಂಗಾಳದ ಮಾಟಗಾತಿ ಎಂಬ ಪಟ್ಟವನ್ನು ಕಟ್ಟಿಬಿಟ್ಟಿದ್ದಾರೆ. ಆತ್ಮಹತ್ಯೆ ಪ್ರಕರಣ ಮಹಾರಾಷ್ಟ್ರದ ಮುಂಬೈ ನಗರದಲ್ಲಿ ನಡೆದಿದ್ದರೆ, ಬಿಹಾರ ರಾಜ್ಯದ ಮೂಲದ ಸುಶಾಂತನ ತಂದೆ ಅಲ್ಲಿನ ಪಟ್ನಾದಲ್ಲಿ ರಿಹಾ ಚಕ್ರವರ್ತಿಯ ವಿರುದ್ಧ ಅಲ್ಲಿನ ಪೋಲಿಸರಲ್ಲಿ ದೂರು ದಾಖಲಿಸಿದ್ದಾರೆ. ರಿಹಾ ಚಕ್ರವರ್ತಿ, ಸುಶಾಂತನಿಂದ ೧೫ ಕೋಟಿ ಪಡೆದು ವಂಚಿಸಿದ್ದಾಳೆ. ಅದರಿಂದಲೇ ತನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಅವರ ಆರೋಪ.

 ರಿಹಾ ಚಕ್ರವರ್ತಿ ಮತ್ತು ಸುಶಾಂತ ಸಿಂಗ್ ರಜಪೂತ್ ಪ್ರಣಯದ ಪಕ್ಷಿಗಳು. ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಈ ಪ್ರೇಮಿಗಳ ಜೋಡಿಗೆ ಏನಾಯಿತೋ ಗೊತ್ತಿಲ್ಲ. ಪ್ರಿಯತಮ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಿಯತಮೆ ಉಳಿದುಕೊಂಡಿದ್ದಾಳೆ. ಪ್ರಿಯತಮೆಗೆ ಮಾನಸಿಕ ಬೆಂಬಲ ಅಗತ್ಯ. ವಿಚಾರಣೆ ನ್ಯಾಯಾಲಯದಲ್ಲಿ ಇದ್ದೇ ಇರುತ್ತದೆ. ತನಿಖೆಗೆ ಪೊಲೀಸರಿದ್ದಾರೆ. ಆದರೆ ಯಾರಿಗೂ ತಾಳ್ಮೆ ಎಂಬುದಿಲ್ಲ. ರಾಜ್ಯ ರಾಜ್ಯಗಳ ನಡುವಿನ ಪೊಲೀಸರ ತನಿಖೆಯ ಬಗೆಗೆ ಅನುಮಾನದ ಹುತ್ತಗಳನ್ನು ಎಬ್ಬಿಸಲಾಗುತ್ತಿದೆ. ಈ ಪ್ರಕರಣಕ್ಕೆ ಹಲವಾರು ಆಯಾಮಗಳು ಸೇರಿಕೊಂಡಿವೆ. ಈಗ ಈ ಪ್ರಕರಣವನ್ನು ಕುರಿತು ಸಿಬಿಐ (ಕೇಂದ್ರೀಯ ತನಿಖಾ ದಳ), ಎನ್ ಸಿ ಬಿ (ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯುರೊ- ಮಾದಕ ವಸ್ತು ನಿಯಂತ್ರಣ ಸಂಸ್ಥೆ) ಮತ್ತು ಎನ್ಫೋರ್ಸಮೆಂಟ್ ಡೈರೆಕ್ಟರೇಟ್ (ಆರ್ಥಿಕ ಅಪರಾಧಗಳ ತನಿಖೆಯ)- ಜಾರಿ ನಿರ್ದೇಶನಾಲಯ- ಮೊದಲಾದ ತನಿಖಾ ಸಂಸ್ಥೆಗಳು ತನಿಖೆಯನ್ನು ಕೈಗೊಂಡಿವೆ. ಒಟ್ಟಾರೆಯಾಗಿ ಚಿತ್ರರಂಗದ ಮೇಲೆ ತನಿಖಾ ಸಂಸ್ಥೆಗಳು ಮುಗಿಬಿದ್ದಂತಾಗಿದೆ.

  ಆತ್ಮಹತ್ಯೆಗೆ ಹಲವಾರು ಆಯಾಮಗಳಿರುತ್ತವೆ. ಪ್ರೇಮಿಗಳಿಬ್ಬರಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ಉಳಿದವರೇ ಆ ಆತ್ಮಹತ್ಯೆಗೆ ಕಾರಣವೆನ್ನುವುದು ಅವಸರದ ತೀರ್ಮಾನ. ಪ್ರಿಯತಮನ ಸಾವಿಗೆ ಪ್ರಿಯತಮೆ ಕಾರಣವಾಗಿರಬಹುದು, ಕಾರಣವಾಗಿರಲಿಕ್ಕೂ ಇಲ್ಲ. ಕಾರಣ ಪತ್ತೆ ಮಾಡಬೇಕಾದುದು ತನಿಖಾ ಸಂಸ್ಥೆಗಳ ಕೆಲಸ. ಅವಕ್ಕೂ ಅಡ್ಡಗಾಲು ಹಾಕಲಾಗುತ್ತಿದೆ.

 ನೂರಾರು ಕೋಟಿ ವ್ಯವಹಾರದ ಮುಂಬೈಯಲ್ಲಿ ನೆಲೆಸಿರುವ ಹಿಂದಿ ಸಿನಿಮಾ ರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವುದು ಸುಲಭದ ಕೆಲಸವಲ್ಲ. ಅನಧಿಕೃತವಾಗಿ ಹಿಂದಿ ಚಿತ್ರರಂಗವನ್ನು ಆಳುತ್ತಿರುವ ಪಟ್ಟಭದ್ರ ಹಿತಾಸಕ್ತಿಯ ಘಟಾನುಘಟಿ ನಟನಟಿಯರ, ನಿರ್ಮಾಪಕರ ನಡುವೆ ಪ್ರತಿಭೆಯೊಂದನ್ನೆ ನಚ್ಚಿಕೊಂಡು ಮೇಲೇರುವವರ ಕಾಲೆಳೆಯುವವರ ಸಂಖ್ಯೆ ಕಡಿಮೆ ಇರುವುದಿಲ್ಲ, ಅಲ್ಲಿನ ಮಾನಸಿಕ ಒತ್ತಡದಲ್ಲಿ ಬದುಕುವುದೇ ಹೆಚ್ಚಾಗಿರುತ್ತದೆ ಎಂಬುದು ಅಲ್ಲಿನ ಸ್ಥಿತಿಯನ್ನು ಹತ್ತಿರದಿಂದ ಕಂಡವರ ಬಿಚ್ಚುನುಡಿ.

  ಬಿಹಾರ ರಾಜ್ಯದಲ್ಲಿನ ಪರಿಸ್ಥಿತಿ ತೀರಾ ಗಂಭೀರವಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದ ಹಾವಳಿಯಿಂದ ಆರ್ಥಿಕ ಸ್ಥಿತಿ ಹದಗೆಟ್ಟಿದೆ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಅವ್ಯವಸ್ಥೆ ಕಣ್ಣಿಗೆ ರಾಚುವಂತೆ ಕಾಣತೊಡಗಿದೆ. ಚಿಕಿತ್ಸೆ ಸಿಗದೇ ಜನ ಸಾವಿನ ಬಾಗಿಲು ತಟ್ಟುತ್ತಿದ್ದಾರೆ. ಇದರೊಂದಿಗೆ ಮುಂಗಾರು ಹಿಂಗಾರಿನ ಮಳೆ ಆರ್ಭಟದಲ್ಲಿ ಬಿಹಾರ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ.

  ತನ್ನ ಮೈ ಮೇಲಿನ ತುರಿಕೆಗಳನ್ನು ಸರಿಯಾಗಿ ತುರಿಸಿಕೊಳ್ಳಲಾಗದ ಬಿಹಾರ ಸರ್ಕಾರ, ತನ್ನ ಕರ್ತವ್ಯಗಳನ್ನು ಮರೆತು, ಈ ಪ್ರಕರಣದಲ್ಲಿ ತಲೆ ತೂರಿಸಿತ್ತು. ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಅಲ್ಲಿನ ಹಾಲಿ ಸರ್ಕಾರ, ಕೋವಿಡ್ ೧೯ ರೋಗ ನಿಯಂತ್ರಣದಲ್ಲಿನ ತನ್ನ ಸೋಲನ್ನು, ಪ್ರವಾಹದ ಪರಿಸ್ಥಿತಿಯನ್ನು ಸುಧಾರಿಸಲಾಗದ ತನ್ನ ವೈಫಲ್ಯವನ್ನು ಮುಚ್ಚಿಡಲು ಜನರ ಗಮನವನ್ನು ಭಾವನಾತ್ಮವಾಗಿ ಈ ಪ್ರಕರಣದತ್ತ ತಿರುಗಿಸಲು ಮುಂದಾಗಿದ್ದು ಒಂದು ದೊಡ್ಡ ದುರಂತವೇ ಸರಿ.

 ನಮ್ಮ ಕಾಲದ ಕೋವಿಡ್ ೧೯ ಜ್ವರ ಎಲ್ಲರನ್ನೂ ಮನೆಯೊಳಗೆ ಬಂದಿಯನ್ನಾಗಿ ಮಾಡಿದೆ. ಇಂಥ ಸಮಯದಲ್ಲಿ ಸಾಮಾಜಿಕ ಸಂಪರ್ಕದ ಜಾಲತಾಣಗಳು ಜನರ ಭಾವನೆಗಳ ಅಭಿವ್ಯಕ್ತಿಗೆ ವೇದಿಕೆ ಒದಗಿಸಿಕೊಡುತ್ತಿರುವುದು ನಮ್ಮ ಕಾಲದ ಒಂದು ದೊಡ್ಡ ಅವಕಾಶ. ಪರಸ್ಪರರನ್ನು ಒಂದಡೆ ಸೇರಲು ಅನುವು ಮಾಡಿಕೊಡುವ ಈ ವಿದ್ಯಮಾನ, ನಮ್ಮ ಸುಖ ದುಃಖಗಳನ್ನು ಹಂಚಿಕೊಳ್ಳುವ ವೇದಿಕೆಯೂ ಹೌದು.

 ಕಳೆದ ಏಪ್ರಿಲ್ ತಿಂಗಳಲ್ಲಿ ಅದೇ ಮುಂಬೈಯಲ್ಲಿ ಇರುವ ಬಾಲಿವುಡ್ ನ ಪ್ರಖ್ಯಾತ ಹಾಗೂ ಪ್ರತಿಭಾವಂತ ನಟ ಇರ್ಫಾನ್ ಖಾನ್ ಕ್ಯಾನ್ಸರ್ ಕಾಯಿಲೆ ಉಲ್ಬಣಿಸಿ ತೀರಿಕೊಂಡಾಗ, ಅವನ ಅಭಿಮಾನಿಗಳು ಜಾಲತಾಣಗಳಲ್ಲಿ ತಮ್ಮ ಪ್ರೀತಿ, ಅಭಿಮಾನ ನೋವುಗಳನ್ನು ಹಂಚಿಕೊಂಡಿದ್ದರು. ಸುಶಾಂತ ಆತ್ಮಹತ್ಯೆಯ ಸಂದರ್ಭದಲ್ಲೂ ಹೀಗೆಯೇ ನಡೆಯಬೇಕಿತ್ತು. ಆದರೆ ಹಾಗೆ ನಡೆಯಲಿಲ್ಲ.

 ಹಿಂದಿ ಚಿತ್ರರಂಗ ಕಂಡ ಒಬ್ಬ ಪ್ರತಿಭವಂತ ನಟ ಇರ್ಫಾನ್ ಖಾನ್ ನಂತೆಯೇ, ಉದಯೋನ್ಮುಖ ನಟನಾಗಿದ್ದ ಸುಶಾಂತ ಸಿಂಗ್ ರಜಪೂತ್ ಹಿಂದಿ ಚಿತ್ರರಂಗಕ್ಕೆ ಬಂದಿದ್ದ ಹೊರಗಿನವ. ಅವರಿಬ್ಬರಿಗೂ ಯಾವ ಜಾತಿ, ಧರ್ಮ, ಶ್ರೀಮಂತಿಕೆಯ ಬೆಂಬಲವಿರಲಿಲ್ಲ. ಖ್ಯಾತ ನಟರ ಕುಟುಂಬದ ನೆಂಟಸ್ತಿಕೆಯೂ ಇರಲಿಲ್ಲ. ಅವರ ಕೈ ಹಿಡಿದು ನಡೆಸುತ್ತಿದ್ದುದು ಅವರಲ್ಲಿನ ನಟನಾ ಕೌಶಲ್ಯ. 

 ಪುರುಷ ಪ್ರಧಾನ ಚಿಂತನೆಯ ಮೂಸೆಯಲ್ಲಿ ಮುಳಿಗೇಳುವ ನಮ್ಮ ಭಾರತೀಯ ಸಮಾಜದಿಂದ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ? ಹಿಂದೆಯೂ, ಭಾರತದ ಖ್ಯಾತ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ, ಆಟದಲ್ಲಿ ಏನಾದರೂ ಎಡವಟ್ಟು ಮಾಡಿಕೊಂಡರೆ, ಅದಕ್ಕೆ ಕಾರಣ ಅವನ ಹೆಂಡತಿ ನಟಿ ಅನುಷ್ಕಾ ಶರ್ಮಾ ಎಂದು ಅಭಿಮಾನಿ ದೇವರುಗಳು ದೂರುತ್ತಿದ್ದರು.

 ಅದೇ ಬಗೆಯಲ್ಲಿ ಪಾಕಿಸ್ತಾನದ ಕ್ರಿಕೆಟ್ ಆಟಗಾರ ಸೋಹಿಬ್ ಮಲ್ಲಿಕ್ ಕ್ರಿಕೆಟ್ ಪಂದ್ಯದಲ್ಲಿ ಎಡವಟ್ಟು ಮಾಡಿಕೊಂಡಾಗಲೂ ನಮ್ಮ ನಾಡಿನ ಹೈದರಾಬಾದ ಮೂಲದ ಮಲ್ಲಿಕ್ ಹೆಂಡತಿ ಅಂತರ್ರಾಷ್ಡ್ರೀಯ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಆ ಎಡವಟ್ಟುಗಳಿಗೆ ಕಾರಣ ಎಂಬ ಆರೋಪ ಹೊರಬೇಕಾಗಿ ಬರುತ್ತಿತ್ತು.

  ಆರ್ಥಿಕ ಹಿಂಜರಿತದಿಂದ ದೇಶ ಜರ್ಜಿಜರಿತಗೊಂಡಿದೆ. ಕೋವಿಡ್ -೧೯ ಕಾಯಿಲೆ ಹರಡುವ ಭಯದಲ್ಲಿ ಆರ್ಥಿಕ ಚಟುವಟಿಕೆಗಳು ಕುಂಠಿತಗೊಂಡಿವೆ. ಮಾರುಕಟ್ಟೆಗಳನ್ನು ಮುಚ್ಚಲಾಗಿದೆ. ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿಲ್ಲ. ಯುವಜನತೆಯಲ್ಲಿ ಅನಿಶ್ಚಿತತೆ ಮನೆ ಮಾಡಿದೆ. ಕೋವಿಡ್ ಕಾಯಿಲೆಯಿಂದ ಆಸ್ಪತ್ರೆ ಸೇರಿವವರಲ್ಲಿ ಭಯ ಬಿತ್ತುವ ಮಾಧ್ಯಮಗಳಿಂದ ಅವರನ್ನು ಕಾಪಾಡಬೇಕಿದೆ. ಇಂದು ಕೈಯಲ್ಲಿರುವ ಉದ್ಯೋಗ ನಾಳೆ ಇರುವುದೋ ಇಲ್ಲವೋ ಎಂಬ ಆತಂಕ ಖಾಸಗಿ ನೌಕರದಾರರಿಗೆ ಕಾಡುತ್ತಿದೆ. ಅವರ ನೆರವಿಗೆ ಧಾವಿಸಬೇಕಾಗಿದ್ದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು, ಕಾರ್ಮಿಕರ ಹಿತ ರಕ್ಷಿಸದೇ ಉದ್ಯಮಪತಿಗಳ ರಕ್ಷಣೆಗೆ ನಿಂತು ಹಲವಾರು ಕಾರ್ಮಿಕ ವಿರೋಧಿ ಕಾನೂನುಗಳನ್ನು ರಾಜಾರೋಷವಾಗಿ ಜಾರಿ ಮಾಡುತ್ತಿದೆ.

  ತಾವು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಬಾರದೇ ರೈತರು ಕಂಗಾಲಾಗಿದ್ದಾರೆ. ಮಳೆಯು ತಂದೊಡ್ಡುತ್ತಿರುವ ಪ್ರವಾಹದಂಥ ಅನಾಹುತಗಳಿಂದ ಜನ ಹೈರಾಣಾಗುತ್ತಿದ್ದಾರೆ. ಸೌಹಾರ್ದತೆಯಿಂದ ಬಾಳುತ್ತಿದ್ದ ಜನಸಮುದಾಯಗಳಲ್ಲಿ ಜಾತಿ, ಧರ್ಮ, ತಿನ್ನೋ ಆಹಾರದ ಆಧಾರದ ಅಡಿಯಲ್ಲಿ ವಿಷದ ಬೀಜ ಬಿತ್ತಲಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಜನತೆಗೆ ಬೇಕಾದುದು ಮುರಿದ ಮನಸ್ಸುಗಳನ್ನು ಕಟ್ಟುವ ಕೆಲಸ, ಜನ ಸಮುದಾಯದ ಮಾನಸಿಕ ಅಸ್ವಸ್ಥತೆಯನ್ನು ಕಾಪಿಡುವ ಕೆಲಸ ಸಾಗಬೇಕಾಗಿದೆ.

 ಕೋವಿಡ್ ೧೯ ತಂದ ಅನಿಶ್ಚತತೆಯಲ್ಲಿ ಬಳಲುತ್ತಿರುವ ನಮ್ಮ ನಾಡಿನಲ್ಲಿ ಕಳೆದ ಹತ್ತು ತಿಂಗಳಲ್ಲಿ ಐನೂರಕ್ಕೂ ಅಧಿಕ ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಾಕ್ ಡೌನ ನಂಥ ಪರಿಸ್ಥಿತಿ ಮತ್ತು ನಂತರದ ಅನಿಶ್ಚಿತತೆಯೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. 

 ಸುಮಾರು ೧೫ರಿಂದ ೩೯ರ ವಯೋಮಾನದವರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವರ ಸಂಖ್ಯೆಯೇ ಹೆಚ್ಚು, ಇದು ಸಹಜ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಕಳೆದ ೨೦೧೬ರಲ್ಲಿ ಒಂದೇ ವರ್ಷದಲ್ಲಿ ೨,೩೦,೩೧೪ ಆತ್ಮಹತ್ಯೆಯ ಪ್ರಕರಣಗಳು ವರದಿಯಾಗಿದ್ದವು.

 ಹಿಂದೊಮ್ಮೆ ಬ್ರೆಕ್ಕಿಂಗ್ ಸುದ್ದಿ ಎಂದು ದೂರದರ್ಶನ ಮಾಧ್ಯಮಗಳಲ್ಲಿ ಗಮನ ಸೆಳೆಯುತ್ತಿದ್ದ, ಸುದ್ದಿ ಬಿತ್ತರಿಸುವ ದೈನಂದಿನ ಪತ್ರಿಕೆಗಳ ಮುಖಪುಟಗಳಲ್ಲಿ ರಾರಾಜಿಸುತ್ತಿದ್ದ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಈಗ ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ದಿನವೂ ಸಾಯುವವರಿಗೆ ಅಳುವವರಾರು ಎಂಬಂತಾಗಿದೆ, ಇಂದಿನ ಮಾಧ್ಯಮಗಳ ಸ್ಥಿತಿ. ಸರಾಸರಿ ನಾವು ದಿನವೊಂದಕ್ಕೆ ೨೮ ವಿದ್ಯಾರ್ಥಿಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಪೋಷಕರ, ಪ್ರಾಧ್ಯಾಪಕರ, ಸಹಪಾಠಿಗಳ ಕಿರುಕುಳ, ಮನಸ್ಸಿಗೆ ತಾಗದ ಓದು- ಮೊದಲಾದ ಕಾರಣಗಳಿಂದ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಮುಂದಾಗುತ್ತಾರೆ. 

 ವೈದ್ಯಕೀಯ, ಎಂಜಿನಿಯರಿಂಗ ಓದುವ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಆಗಾಗ ಮಾಧ್ಯಮದ ಗಮನ ಸೆಳೆಯುವುದನ್ನು ಬಿಟ್ಟರೆ, ಉಳಿದ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಯಾರ ಗಮನಕ್ಕೂ ಬರುವುದಿಲ್ಲ. ಆತ್ಮಹತ್ಯೆಗೆ ಈ ಮೊದಲೇ ಪ್ರಸ್ತಾಪಿಸಿದ ಕಾರಣಗಳ ಜೊತೆಗೆ, ಕೋವಿಡ್ ೧೯- ಕಾಯಿಲೆಯ ಹಿನ್ನೆಲೆಯಲ್ಲಿ ಜಾರಿಗೆ ಬಂದಿರುವ ಆನ್ ಲೈನ್ ಮಾಧ್ಯಮದ ಶಿಕ್ಷಣ ಪದ್ಧತಿಯೂ, ಅದಕ್ಕೆ ಪೂರಕವಾಗಿರುವ ಇಂಟರ್ ನೆಟ್ ಸೌಲಭ್ಯ ವಂಚಿತ, ಲ್ಯಾಪಟ್ ಟಾಪ್, ಸ್ಮಾರ್ಟ ಮೊಬೈಲ್ ಫೋನ್ ಗಳ ಅಲಭ್ಯತೆ ವಿದ್ಯಾರ್ಥಿಗಳನ್ನು ಆತ್ಮಹತ್ಯೆಯತ್ತ ದೂಡುತ್ತಿರುವುದನ್ನು ಅಲ್ಲಗಳೆಯಲಾಗದು.

 ಈ ಮಧ್ಯೆ ಸರ್ಕಾರಗಳು ವಿಜ್ಞಾನದ ಬಗೆಗೆ ಆಸಕ್ತಿ ತೋರದೇ, ಧರ್ಮದ ಕಡೆಗೆ ಹೆಚ್ಚಿನ ಒತ್ತು ನೀಡುತ್ತಿವೆ. ಅವುಗಳ ಆದ್ಯತೆ ಸಾಮಾಜಿಕ ಉನ್ನತಿಗಿಂತ ಧರ್ಮದ ಹೆಚ್ಚುಗಾರಿಕೆ ಮುನ್ನೆಲೆಗೆ ಬರತೊಡಗಿದೆ. ಜನರು ಎದುರಿಸುತ್ತಿರುವ ಹತ್ತುಹಲವು ಸಮಸ್ಯೆಗಳನ್ನು ಪರಿಹರಿಸುವತ್ತ ಗಮನವಹಿಸಬೇಕಾದ ನಮ್ಮ ಕರ್ನಾಟಕ ಸರ್ಕಾರ ಮದುವೆ, ಮತಾಂತರದ ಸುತ್ತ ಚಿಂತಿಸುತ್ತಾ ಉತ್ತರಪ್ರದೇಶ, ಹರಿಯಾಣಾ ಮಾದರಿಯಲ್ಲಿ ಲವ್ ಜಿಹಾದ್ ತಡೆ ಕಾನೂನು ರಚಿಸಲು ಚಿಂತನೆ ನಡೆಸುತ್ತಿದೆಯಂತೆ. ವಾಹಿನಿಯೊಂದರಲ್ಲಿ ಅಮಿತಾಬ್ ಬಚ್ಚನ್ ಸಾಮಾನ್ಯಜ್ಞಾನದ ತಿಳಿವಳಿಕೆಯ ಅರಿವಿಗಾಗಿ ಕೇಳಲಾದ ಪ್ರಶ್ನೆಗೆ ಆಕ್ಷೇಪಿಸಿರುವ ಬಿಜೆಪಿ ಸಂಸದರೊಬ್ಬರು, ಅದು ಐತಿಹಾಸಿಕ ಸತ್ಯ ಎಂಬುದು ಗೊತ್ತಿದ್ದರೂ, `ಅದು ಕೋಮುಗಳ ನಡುವೆ ದ್ವೇಷದ ಭಾವನೆ ಮೂಡಿಸುತ್ತದೆ ಎಂದು ಆಪಾದಿಸಿ ನ್ಯಾಯಾಲಯದ ಬಾಗಿಲು ತಟ್ಟುತ್ತಿದ್ದಾರೆ.

 ಸೂಕ್ಷ್ಮತೆಯನ್ನೇ ಕಳೆದುಕೊಂಡ ಸಮಾಜದಲ್ಲಿ, ಸುಶಾಂತ ಸಾವಿನ ಸುದ್ದಿಯ ಹಿಂದೆಯೇ ಅವನ ಶವದ ಚಿತ್ರಗಳು ವಾಟ್ಸ್ ಆಪ್ ಗುಂಪುಗಳಲ್ಲಿ ಹರಿದಾಡತೊಡಗಿದ್ದವು. ಇದು ನಮ್ಮ ಸಾಮಾಜಿಕ ಸ್ವಾಸ್ಥ್ಯದ ದಿವಾಳಿತನವನ್ನು ಜಗಜ್ಜಾಹೀರು ಮಾಡಿಸಿತ್ತು. ಸಮಾಜ ನಿರ್ಲಜ್ಜತನದಿಂದ ಇದು ನನಗೆ ಸಂಬಂಧಿಸಿದ ಸಂಗತಿಯಲ್ಲ ಎಂದುಕೊಂಡು ನಿದ್ರೆಗೆ ಜಾರತೊಡಗಿದೆ.

 ನಮ್ಮ ಸಮಾಜಿಕ ಸ್ವಾಸ್ಥ್ಯ ಸುಧಾರಿಸಲಾರದಷ್ಟು ಮತ್ತಷ್ಟು ಹದಗೆಡುವ ಮೊದಲೇ. ನಾವು ಎಚ್ಚೆತ್ತುಕೊಳ್ಳಬೇಕಾಗಿದೆ. ತಪ್ಪುಗಳನ್ನು, ಸಮಸ್ಯೆಗಳನ್ನು ಮೊದಲು ಗುರುತಿಸಿ ಅವಕ್ಕೆ ತಕ್ಕುದಾದ ಪರಿಹಾರಗಳನ್ನು ಸಾಮುದಾಯಿಕವಾಗಿಯೇ ಕಂಡುಕೊಳ್ಳಬೇಕಾಗಿದೆ.

------------------

ಫ್ರಾನ್ಸಿಸ್. ಎಂ. ಎನ್

ಬೆಂಗಳೂರು

------------------


ಬಿಲ್ಹಾ ಮತ್ತು ಜಿಲ್ಫಾ - ದೀಪ್ತಿ ಫ್ರಾನ್ಸಿಸ್ಕಾ, ಯಡವನಹಳ್ಳಿ

ಯಾಕೋಬನನ್ನು ಮದುವೆಯಾದ ಸಮಯದಲ್ಲಿ ರಖೇಲ ಮತ್ತು ಲೇಯಳಿಗೆ ತಮ್ಮ ತಂದೆಯಾದ ಲಬಾನನಿಂದ ಕೊಡಲ್ಪಟ್ಟಿದ್ದ ದಾಸಿಯರು ಬಿಲ್ಹಾ ಮತ್ತು ಜಿಲ್ಫಾ. ಬಿಲ್ಹಾ ರಖೇಲಳ ದಾಸಿಯಾಗಿದ್ದಳು. ಜಿಲ್ಫಾ ಲೇಯಳ ದಾಸಿಯಾಗಿದ್ದಳು.


ಯಾಕೋಬನು ಲೇಯಳನ್ನೋ ಇನ್ಯಾವುದೋ ಹೆಣ್ಣನ್ನೊ ಪ್ರೀತಿಸುವುದಕ್ಕಿಂತ ಹೆಚ್ಚಾಗಿ ರಖೇಲಳನ್ನು ಪ್ರೀತಿಸಿದ್ದು ನಮಗೆಲ್ಲ ಗೊತ್ತೇ ಇದೆ. ಆದರೆ ಆರಂಭದಲ್ಲಿ ಅನೇಕ ವರ್ಷಗಳು ರಖೇಲಳಿಗೆ ಮಕ್ಕಳಾಗದಿದ್ದಾಗ ತನ್ನ ದಾಸಿ ಬಿಲ್ಹಾಳನ್ನು ಯಾಕೋಬನಿಗೆ ಮೂರನೇ ಮಡದಿಯಾಗಿ ಒಪ್ಪಿಸಿ ಅವಳೊಂದಿಗೆ ಮಲಗಲು ಹೇಳಿದಳು. ಹಾಗೆ ಮಾಡುವುದರಿಂದ ಅವಳು ಮಕ್ಕಳನ್ನು ಪಡೆಯಬಹುದೆಂಬುದು ಅವಳ ಉದ್ದೇಶವಾಗಿತ್ತು. ಬಿಲ್ಹಾಳ ಕುರಿತು ಆದಿಕಾಂಡದಲ್ಲಿ ಹಲವು ಬಾರಿ ಉಲ್ಲೇಖವಿದೆ (ಆದಿ ೨೯:೨೯; ೩೦:೩,೪,೫,೭; ೩೫:೨೨,೨೫; ೩೭:೨;೪೬:೨೫). ಅದೇರೀತಿ ೧ಪೂರ್ವಕಾಲದ ಇತಿಹಾಸದಲ್ಲೂ ಉಲ್ಲೇಖವಿದೆ (೧ಪೂರ್ವ ೪:೨೯; ೭:೧೩). ಈ ಉಲ್ಲೇಖಗಳ ಪ್ರಕಾರ ಬಿಲ್ಹಾಳು ದಾನ್ ಮತ್ತು ನೆಫ್ತಾಲಿ ಎಂಬ ಇಬ್ಬರು ಗಂಡು ಮಕ್ಕಳಿಗೆ ಜನ್ಮವಿತ್ತಳು. ಅವರಿಬ್ಬರು ಎರಡು ದೊಡ್ಡ ಇಸ್ರಾಯೇಲಿನ ಗೋತ್ರಗಳನ್ನು ಬೆಳೆಸಿದರು. ಲೇಯಳ ಹಿರಿಯ ಮಗನಾದ ರೂಬೇನನು ಬಿಲ್ಹಾಳೊಂದಿಗೆ ಅನುಚಿತ ಸಂಬಂಧವನ್ನು ಹೊಂದಿದ್ದನೆಂದು ಸಹ ಬೈಬಲ್ ಹೇಳುತ್ತದೆ(ಆದಿ ೩೫:೨೨). ಆದ್ದರಿಂದಲೇ ಸಾಯುವ ಸಂದರ್ಭದಲ್ಲಿ ಯಾಕೋಬನು ಮಕ್ಕಳೆಲ್ಲರನ್ನೂ ಕರೆದು ಆಶೀರ್ವಾದ ನೀಡುವಾಗ ರೂಬೇನನಿಗೆ ಹೀಗೆನ್ನುತ್ತಾನೆ ಹತ್ತಿದೆ, ಹೊಲೆ ಮಾಡಿದೆ ತಂದೆಯ ಹಾಸಿಗೆಯನು ಪ್ರಮುಖ ಸ್ಥಾನದಲ್ಲಿರೆ ನನ್ನ ಮಂಚವನ್ನೇರಿದೆ ನೀನು' ಇದರಿಂದ ಅವನು ಹಿರಿಯ ಮಗನೆಂಬ ಪ್ರಮುಖ ಸ್ಥಾನವನ್ನು ಕಳೆದುಕೊಳ್ಳುತ್ತಾನೆ.

ಕೆಲವು ವರ್ಷಗಳ ನಂತರ ರಖೇಲಳು ತಾಯಿಯಾಗಿ ಮಕ್ಕಳನ್ನು ಹೆರುವ ವೇಳೆ, ಲೇಯಳಿಗೆ ಮಕ್ಕಳಾಗುವುದು ನಿಂತು ಹೋದಾಗ ಅವಳು ತನ್ನ ದಾಸಿಯಾದ ಜಿಲ್ಫಾಳನ್ನು ಯಾಕೋಬನಿಗೆ ನಾಲ್ಕನೇ ಮಡದಿಯಾಗಿ ಒಪ್ಪಿಸಿ ಅವಳೊಂದಿಗೆ ಮಲಗಲು ಹೇಳಿದಳು. ಬಿಲ್ಹಾಳಂತೆ ಜಿಲ್ಫಾಳು ಸಹ ಗಾದ್ ಮತ್ತು ಆಶೇರ್ ಎಂಬ ಎರಡು ಗಂಡು ಮಕ್ಕಳನ್ನು ಹೆತ್ತಳು. ಅವರೂ ಇಸ್ರಾಯೇಲಿನ ಎರಡು ಗೋತ್ರಗಳನ್ನು ದೊಡ್ಡದಾಗಿ ಬೆಳೆಸಿದರು. ಬಿಲ್ಹಾಳ ಕುರಿತು ಉಲ್ಲೇಖ ಆದಿಕಾಂಡದಲ್ಲಿದೆ (ಆದಿ ೨೯:೨೪; ೩೦:೯,೧೦; ೩೫:೨೬; ೩೭:೨; ೪೬:೧೮).

ಈ ಇಬ್ಬರು ದಾಸಿಯರು ಬೈಬಲಿನಲ್ಲಿ ಪ್ರಮುಖಪಾತ್ರವೇನು ವಹಿಸಿಲ್ಲವಾದರೂ ದೇವ ಜನರ ರಾಷ್ಟ್ರವನ್ನು ಅಸ್ತಿತ್ವಕ್ಕೆ ತರುವಲ್ಲಿ ಖಂಡಿತವಾಗಿಯೂ ಪ್ರಮುಖ ಪಾತ್ರವಹಿಸಿದ್ದಾರೆ. ಯಾಕೋಬನು ತನ್ನ ಸಂತತಿಯವರನೆಲ್ಲಾ ಕರೆದುಕೊಂಡು ತಾಯಿನಾಡಿಗೆ ಮರಳುವಾಗ, ಏಸಾವನು ಏನಾದರೂ ಮಾಡಿಬಿಡಬಹುದೆಂಬ ಭಯದಿಂದ ಈ ದಾಸಿಯರು ಹಾಗೂ ಅವರ ಮಕ್ಕಳನ್ನು ಮುಂದೆ ಬಿಡಲಾಗಿತ್ತು. ಕಾರಣ ಅವರ ಗಣನೆ ಅಷ್ಟೇನೂ ಪ್ರಮುಖವಾಗಿರಲಿಲ್ಲ. ತಮ್ಮ ತ್ಯಾಗದ   ಪಾತ್ರದಿಂದ ಬಿಲ್ಹಾ ಮತ್ತು ಜಿಲ್ಫಾ ಇಬ್ಬರೂ ಇಸ್ರಾಯೇಲಿನ ಹನ್ನೆರಡು ಕುಲಗಳ ಗೋತ್ರಗಳಲ್ಲಿ ಮೂರನೇ ಒಂದು ಭಾಗಕ್ಕೆ ತಾಯಂದಿರಾಗಿದ್ದಾರೆ.

ದೇವರು ಅಬ್ರಹಾಮನಿಗೆ ಅವನ ವಂಶವನ್ನು ಆಕಾಶದಲ್ಲಿನ ನಕ್ಷತ್ರಗಳಂತೆಯೂ ಸಮುದ್ರ ದಡದ ಮರಳಿನಂತೆಯೂ ಹೆಚ್ಚಿಸುವನೆಂದು ವಾಗ್ದಾನ ಮಾಡಿದಾಗ, ಕುತಂತ್ರಿ ತಾಯಿಯನ್ನು(ರೆಬೆಕ್ಕಾ),ವಿಷಮ ಸೋದರರನ್ನು(ಯಾಕೋಬ ಮತ್ತು ಏಸಾವ), ಕುಶಲ ಮೋಸಗಾರನನ್ನು(ಲಬಾನ), ಪ್ರತಿಸ್ಪರ್ಧಿ ಸೋದರಿಯರನ್ನು(ಲೇಯ ಮತ್ತು ರಖೇಲ) ಮತ್ತು ಈ ಇಬ್ಬರು ದಾಸಿಯರನ್ನು ಬಳಸಿಕೊಳ್ಳುತ್ತಾರೆ ಎಂದು ಯಾರಿಗೆ ಗೊತ್ತಿತ್ತು?

ಬಿಲ್ಹಾ ಮತ್ತು ಜಿಲ್ಫಾ, ಇಬ್ಬರೂ ತಮ್ಮ ಮಕ್ಕಳಿಗೆ ಜನ್ಮ ನೀಡಿದಾಗ, ಆ ಮಕ್ಕಳ ಮೇಲೆ ಇವರಿಗೆ ಸಂಪೂರ್ಣ ಹಕ್ಕಿರಲಿಲ್ಲ. ಅವರ ಮಕ್ಕಳನ್ನು ಹೆಸರಿಸುವ ಅವಕಾಶವೂ ಸಹ ಇರಲಿಲ್ಲ. ಆ ಮಕ್ಕಳ ಹಕ್ಕುಬಾಧ್ಯತೆ ರಖೇಲ ಮತ್ತು ಲೇಯಳಿಗೆ ಮೀಸಲಾಗಿತ್ತು. ಬಿಲ್ಹಾ ಮತ್ತು ಜಿಲ್ಫಾರಿಗೆ ತಮ್ಮ ಮಕ್ಕಳನ್ನು (ಹಾಗೂ ಗಂಡನನ್ನು) ಹಂಚಿಕೊಳ್ಳುವುದು ಕಷ್ಟವೆನಿಸಿರಬಹುದು. ಆದರೆ ಅವರು ಸ್ವ-ಇಚ್ಛೆಯಿಂದ ತ್ಯಾಗಮಾಡಿದರು. ತಮ್ಮ ಪುತ್ರರ ಮೇಲಿನ ಪ್ರೀತಿಯಿಂದ, ರಖೇಲ ಮತ್ತು ಲೇಯಳ   ಮೇಲಿನ ಪ್ರೀತಿಯಿಂದ, ಒಳ್ಳೆಯ ಕುಟುಂಬದ ಮೇಲಿನ ಪ್ರೀತಿಯಿಂದ ತ್ಯಾಗಮಾಡಿದರು.

ಆ ಸಮಯದಲ್ಲಿ ಬಿಲ್ಹಾ ಮತ್ತು ಜಿಲ್ಫಾರಿಗೆ, ದೇವರ ಮಹಾ ಕಥೆಯಲ್ಲಿ ಅವರು ವಹಿಸುತ್ತಿದ್ದ ಪಾತ್ರದ ಅರಿವೇ ಇರಲಿಲ್ಲ. ಅದೇ ರೀತಿ, ದೇವರು ತಮ್ಮ ಕಥೆಯಲ್ಲಿ ನಮ್ಮ ತ್ಯಾಗ, ಸಮಸ್ಯೆಯ ಸಂದರ್ಭಗಳನ್ನು ಹೇಗೆ ಬಳಸಿಕೊಳ್ಳುತ್ತಾರೆಂಬ ಅರಿವು ನಮಗಿಲ್ಲದಿರಬಹುದು. ಆದರೆ ನಾವು ಪ್ರತಿಯೊಬ್ಬರೂ ವಿಶಿಷ್ಟ ಪಾತ್ರ ವಹಿಸುತ್ತಿದ್ದೇವೆ. ಮುಂದೊಂದು ದಿನ ಅದೆಲ್ಲವನ್ನೂ ನಾವು ಸ್ಪಷ್ಟವಾಗಿ ಕಾಣುತ್ತೇವೆ.

---------------------------

ದೀಪ್ತಿ ಫ್ರಾನ್ಸಿಸ್ಕಾ, ಯಡವನಹಳ್ಳಿ

----------------------



ದನಿ ರೂಪಕ - ಡಿಯಾರ್ ಪೋಪ್ ಫ್ರಾನ್ಸಿಸ್

ಜಗತ್ತಿನಾದ್ಯಂತ ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಪೋಪ್‌ರವರ ಉತ್ತರ...


ನಿಮಗೇನಾದರೂ ಪೋಪ್ ಫ್ರಾನ್ಸಿಸ್‌ರವರಿಗೆ ಪ್ರಶ್ನೆ ಕೇಳುವ ಅವಕಾಶ ಸಿಕ್ಕರೆ ಯಾವ ಪ್ರಶ್ನೆಗಳನ್ನು ಕೇಳುತ್ತೀರಿ?

ವಯಸ್ಕರಂತೆ ಮಕ್ಕಳಲ್ಲೂ ಅನೇಕ ಪ್ರಶ್ನೆಗಳಿವೆ, ಸಮಸ್ಯೆಗಳಿವೆ. ಆದರೆ ಇಂತಹ ಪ್ರಶ್ನೆಗಳನ್ನು ಕೇಳಲು ಅವರಿಗಿರುವ ಅವಕಾಶಗಳು ಕಡಿಮೆ, ಡಿಯರ್ ಫ್ರಾನ್ಸಿಸ್ ಎಂಬ ಪುಸ್ತಕದಲ್ಲಿ ಪೋಪ್ ಫ್ರಾನ್ಸಿಸ್‌ರವರು ಮಕ್ಕಳಿಗೆ ಪ್ರಶ್ನೆಗಳನ್ನು ಕೇಳಲು ಅವಕಾಶ ಕೊಟ್ಟಿದಲ್ಲದೆ, ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿತ್ತಾ, ಮಕ್ಕಳಲ್ಲಿರುವ ಆಧ್ಯಾತ್ಮಿಕ ಆಳವನ್ನು ಕಂಡು ಸಂಭ್ರಮಿಸುತ್ತಾರೆ. ಹೌದು, ಕೆಲವೊಂದು ಪ್ರಶ್ನೆಗಳು ತಮಾಶೆಯಿಂದ ಕೂಡಿವೆಯಾದರೂ, ಇನ್ನೂ ಕೆಲವು ಗಂಭೀರವಾದಂತಹವುಗಳು, ಮತ್ತೂ ಕೆಲವು ನಮ್ಮ ಹೃದಯಗಳನ್ನು ಕಲುಕುವಂಥವು. ಆದರೆ ಎಲ್ಲ ಪ್ರಶ್ನೆಗಳು ಮಕ್ಕಳಿಂz ಕೇಳಲ್ಪಟ್ಟ ಪ್ರಶ್ನೆಗಳೇ; ಅವು ದೇವರ ಅನುಪಮ ಪ್ರೀತಿಗೆ ಅರ್ಹರಾಗಿರುವ ಮುಗ್ಧ ಮಕ್ಕಳ ಪ್ರಶ್ನೆಗಳು.


ಜೊವೊ (Joāo)  

ವಯಸ್ಸು - ೧೦, ಪೊರ್ಚುಗಲ್

ಡಿಯರ್ ಪೋಪ್ ಫ್ರಾನ್ಸಿಸ್ ನಿಮ್ಮನ್ನು ನಾನು ಸೈಂಟ್ ಪೀಟರ್   ಸ್ಕ್ವೇರ್‌ನಲ್ಲಿಕಂಡಾಗ ನೀವು ನನ್ನನ್ನು ಗಮನಿಸಿ ನೋಡಿದನ್ನು ತಿಳಿದು ತುಂಬಾ ಸಂತೋಷವಾಯಿತ್ತು. ನಿಮ್ಮ ಸುತ್ತಮುತ್ತಲಿರುವ ಮಕ್ಕಳನ್ನು ಕಂಡಾಗ ನಿಮಗೇನಿಸುತ್ತದೆ? ನೀವು ನನ್ನನ್ನು ಗಮನಿಸಿ ನೋಡಿದಕ್ಕೆ ನಿನಗೆ ಧನ್ಯವಾದಗಳು.

ಪೋಪ್ ಫ್ರಾನ್ಸಿಸ್: ಪ್ರೀತಿಯಜೊ॒ವೊ

ನೀವು ಮಕ್ಕಳನ್ನು ಕಂಡಾಗ ನಿಮಗೆ ಏನೇನಿಸುತ್ತದೆ ಎಂಬ ಪ್ರಶ್ನೆಯನ್ನು ನೀನು ಕೇಳಿರುವೆ. ಹೌದು ನಾನು ಅನೇಕ ಮಕ್ಕಳನ್ನು ನೋಡುತ್ತಿರುತ್ತೇನೆ. ನಾನು ಅವರನ್ನು ಕಂಡು ಅವರಿಗೆ ಕಿರುನಗೆ ಬೀರುತ್ತೇನೆ. ಅವರನ್ನು ತಬ್ಬಿಕೊಳ್ಳುತ್ತೇನೆ ಮತ್ತು ಕಾರಿನಿಂದ ಅವರಿಗೆ ಚುಂಬನದ ಸನ್ನೆ ಮಾಡಿ ಮುದ್ದಿಸುತ್ತೇನೆ. ನೀನು ನಿನ್ನ ಕೈಯಾರೆ ಬಿಡಿಸಿ ನನಗೆ ಕಳಿಸಿರುವ ಚಿತ್ರದಲ್ಲಿ ನಾನು ಕಾರನ್ನು ಚಾನೆ ಮಾಡುವಂತಿದ್ದರೂ, ನನ್ನ ಕೈಗಳು ಯಾವಾಗಲೂ ಫ಼್ರೀ ಇರುವ ಕಾರಣ ಇವೆಲ್ಲಾ ಮಾಡಲು ನನಗೆ ಸಾಧ್ಯ.

ಮಕ್ಕಳನ್ನು ಕಂಡಾಗ ನಾನು ಸಂತೋಷಗೊಳ್ಳುತ್ತೇನೆ. ಅವರಿಗಾಗಿ ನನ್ನ ಮನಸ್ಸು ಪ್ರೀತಿಯಿಂದ ತುಂಬಿಕೊಳ್ಳುತ್ತದೆ. ಮುಖ್ಯವಾಗಿ ನಿನ್ನಂತಹ ಮಕ್ಕಳನ್ನು ಕಂಡಾಗ ನನ್ನ ಹೃದಯದಲ್ಲಿ ಭರವಸೆ ಹುಟ್ಟಿಕೊಳ್ಳುತ್ತದೆ. ಏಕೆಂದರೆ ನನಗೆ ಮಕ್ಕಳನ್ನು ಕಾಣುವುದೆಂದರೆ ಭವಿಷ್ಯವನ್ನು ಕಾಣುವಂತದ್ದು. ಹೌದು ಭರವಸೆ ನನ್ನಲ್ಲಿ ತುಂಬಿಕೊಳ್ಳುತ್ತದೆ ಏಕೆಂದರೆ ಪ್ರತಿಯೊಂದು ಮಗುವು ಮುಂದಿನ ಭವಿಷ್ಯದ ಮಾನವಕುಲಕ್ಕೆ ನಮ್ಮ ಭರವಸೆ.

ಎಮಿಲ್ ವಯಸ್ಸು ೯, ಡೊಮಿನಿಕಾನ್ ರಿಪಬ್ಲಿಕ್

ಪ್ರೀತಿಯ ಪೋಪ್ ಫ್ರಾನ್ಸಿಸ್, ಸತ್ತ ನಮ್ಮ ಸಂಬಂಧಿಕರು ಸ್ವರ್ಗದಿಂದ ನಮ್ಮನ್ನು ನೋಡಬಹುದಾ?

ಪೋಪ್ ಫ್ರಾನ್ಸಿಸ್: ಹೌದು, ಇದರ ಬಗ್ಗೆ ನಿನಗೆ ಖಚಿತತೆ ಇರಲಿ. ನೀನು ಸ್ವರ್ಗದಲ್ಲಿರುವ ನಿನ್ನ ಸಂಬಂಧಿಕರ ಬಗ್ಗೆ ಯೋಚಿಸುತ್ತಿರುವೆ. ನೀನು ಅವರನ್ನು ಕಾಣಲಾಗುತ್ತಿಲ್ಲ, ಆದರೆ ದೇವರ ಅನುಮತಿಯ ಮೇರೆಗೆ ಅವರು ನಿನ್ನನ್ನು ಸ್ವರ್ಗದಿಂದ ನೋಡಬಹುದು. ಕನಿಷ್ಠಪಕ್ಷ, ನಿನ್ನ ಬದುಕಿನ ಕೆಲವೊಂದು ಕ್ಷಣಗಳಲ್ಲಿ ನಿನ್ನನ್ನು ಅವರು ನೋಡುತ್ತಿರುತ್ತಾರೆ. ನಿನಗೆ ಗೊತ್ತಾ? ಅವರು ನಮ್ಮಿಂದ ದೂರವಿಲ್ಲ. ಅವರು ನಮಗಾಗಿ ಪ್ರಾರ್ಥಿಸುತ್ತಾರೆ ಮತ್ತು ಪ್ರೀತಿಯಿಂದ ನಮ್ಮನ್ನು ಆರೈಕೆ ಮಾಡುತ್ತಾರೆ. ಇದು ಮುಖ್ಯವಾದ ವಿಷಯ. 

ನಿನ್ನ ಸತ್ತ ಸಂಬಂಧಿಕರನ್ನು ಈ ರೀತಿಯಾಗಿ ನೀನು ಕಲ್ಪಿಸಿಕೊಳ್ಳಬಹುದು; ಸ್ವರ್ಗದಿಂದ ನಿನ್ನನ್ನು ನೋಡುತ್ತಾ ನಗುತ್ತಿದ್ದಾರೆ, ನಿನ್ನ ಸುತ್ತಾ ಹಾರಡುವಂತೆ ನೀನು ನಿನ್ನ ಚಿತ್ರದಲ್ಲಿ ಚಿತ್ರಿಸಿರುವೆ, ಆದರೆ ಅವರು ನಿನ್ನ ಪಕ್ಕದಲ್ಲೆ ಹಾರಾಡುತ್ತಿರುತ್ತಾರೆ. ಅವರ ಪ್ರೀತಿಯ ಆರೈಕೆಯೊಂದಿಗೆ ನಿನ್ನ ಜೊತೆಗೂಡಿ ಸದಾಕಾಲ ನಿನ್ನೊಂದಿಗೆ ನಡೆಯುತ್ತಿರುತ್ತಾರೆ.

-----

ಅನು

-----


ಉಪದೇಶಿ ಅಜ್ಜ ಬನ್ನಪ್ಪ

ನಮ್ಮೂರಿನ ಸಂತ ಜೋಸೆಫರ ಗುಡಿಯ ಉಪದೇಶಿ ಅಜ್ಜ ಬನ್ನಪ್ಪಗೆ, ಆ ಹೆಸರು ಹೇಗೆ ಬಂದಿತು? ಅನ್ನುವುದು ನನಗೆ ಬಹುದಿನಗಳ ಕಾಲ ಯಕ್ಷಪ್ರಶ್ನೆಯಂತೆ ಕಾಡತೊಡಗಿತ್ತು. 

  ಒಂದು ದಿನ, ನಾಡ ಹಬ್ಬ ದಸರಾ ಹಬ್ಬದ ದಿನ ವಿಷ್ಣು ಘೋರ್ಪಡೆ ಅವರ ಮನೆಗೆ ಹೋದಾಗ, ಅಲ್ಲಿ ಅವರ ಮನೆಯ ಪಡಸಾಲೆಯಲ್ಲಿ ಮಾಡಿದ್ದ ಕಿಲ್ಲೆಯ ಅಂದರೆ ಕೋಟೆಯ ಪ್ರತಿಕೃತಿಯಲ್ಲಿ, ಗೋದಿಯ ಹುಲ್ಲನ್ನು ಬೆಳೆಸಲಾಗಿತ್ತು. 

  ಹಾಗೆಯೇ ಇನ್ನೊಂದು ಅಗಲವಾದ  ಮುಚ್ಚಿದ ಬುಟ್ಟಿಯಲ್ಲಿಯೂ ಗೋದಿ ಹುಲ್ಲನ್ನು ಬೆಳೆಸಲಾಗಿತ್ತು. ಹಳದಿ ಹಸಿರು ಮಿಶ್ರಣದ ಬಣ್ಣದ ಗೋದಿ ಹುಲ್ಲಿನ ಎಸಳುಗಳು, ಸಂಜೆ ಸೂರ್‍ಯನ ಹಳದಿ ಬಣ್ಣದ ಕಿರಣಗಳೂ ಅವುಗಳ ಮೇಲೆ ಬಿದ್ದಾಗ, ಅವು ಬಂಗಾರದ ಎಸಳುಗಳಂತೆ ಮಿರಿಮಿರಿ ಮಿನುಗುತ್ತಿದ್ದವು. ಅವನ್ನು ಅವರು, ಬನ್ನಿ ಬಂಗಾರ ಎಂದು ಕರೆಯುತ್ತಾರೆ. 

  ದಸರೆಯನ್ನು ಬನ್ನಿ ಹಬ್ಬವೆಂದು ಕರೆದು, ಹಬ್ಬದ ಕೊನೆಯ ದಿನ ಸಂಜೆ ಆ ಹುಲ್ಲನ್ನು ಒಬ್ಬರಿಗೊಬ್ಬರು ಹಂಚಿಕೊಂಡು, `ಬಂಗಾರ ತಗೊಂಡು, ಬಂಗಾರದಂಗಿರೂಣ ಅಂತ ಹೇಳುತ್ತಿದ್ದರು. ಹಿಂದೆ, ಪಾಂಡವರು ಹನ್ನೆರಡು ವರ್ಷದ ವನವಾಸ, ದೇಶಾಂತರ ವಾಸದ ಕೊನೆಯ ಒಂದು ವರ್ಷದಲ್ಲಿ, ತಮ್ಮ ಗುರುತು ಮರೆಮಾಚಿ ಬದುಕಲು ಅನುವಾಗುವಂತೆ. ತಮ್ಮ ತಮ್ಮ ಆಯುಧಗಳನ್ನು ಬನ್ನಿ ಗಿಡದಲ್ಲಿ ಇರಿಸಿದ್ದರಂತೆ. ಅದು ಪಾಂಡವರಿಗೆ ಶುಭದಾಯಕವಾಗಿತ್ತು. 

 ತಮ್ಮ ಹನ್ನೆರಡು ವರ್ಷಗಳ ವನವಾಸದ, ನಂತರದ ಒಂದು ವರ್ಷದ ಅಜ್ಞಾತ ವಾಸ ತೀರಿದ ಬಳಿಕ ಆ ಗಿಡದ ಹತ್ತಿರ ಬಂದು, ಅದಕ್ಕೆ ಪೂಜಿಸಿ, ಆಶೀರ್ವಾದ ಕೋರಿಕೊಂಡು, ತಮ್ಮ ಆಯುಧಗಳನ್ನು ವಾಪಾಸು ಪಡೆಯುತ್ತಾರೆ. ನಂತರ ನಡೆದ ಕುರುಕ್ಷೇತ್ರ ಯುದ್ಧದಲ್ಲಿ, ಅವರು ಕೌರವರನ್ನು ಸೋಲಿಸುತ್ತಾರೆ. ಹೀಗಾಗಿ ಯುದ್ಧಕ್ಕೆ ಹೊರಡುವವರು ವಿಜಯಿಗಳಾಗಲು ಬಯಸುವವರು, ಬನ್ನಿ ಗಿಡಕ್ಕೆ ಪ್ರಾರ್ಥಿಸುವುದು, ಅದರ ಆಶೀರ್ವಾದ ಕೋರುವುದು ಸಂಪ್ರದಾಯವಾಗಿದೆ. 

  ಬನ್ನಿ ಗಿಡದ ಎಲೆಗಳಿಗೆ ದಸರಾ ಹಬ್ಬದ ದಿನ ಬಂಗಾರವಾಗುವ ಭಾಗ್ಯ. ಶಮಿ ಎಂದೂ ಕರೆಯಲಾಗುವ ಬನ್ನಿ ಗಿಡದ ಎಲೆಯ ಜೊತೆಜೊತೆಗೆ, ಈ ಗೋದಿ ಹುಲ್ಲನ್ನು ಬನ್ನಿ ಎಂದು, ಬಂಗಾರವೆಂದು ಬಗೆದು, ಒಬ್ಬರಿಗೊಬ್ಬರಿಗೆ ಶುಭವನ್ನು ಕೋರಿ ಪರಸ್ಪರ ವಿನಿಮಯ ಮಾಡಿಕೊಳ್ಳುವ ಪದ್ಧತಿ ಅನಾದಿ ಕಾಲದಿಂದಲೂ       ರೂಢಿಯಲ್ಲಿದೆಯಂತೆ. 

 ನಮ್ಮ ಉಪದೇಶಿ ಬನ್ನಪ್ಪನ ಹೆಸರಿಗೂ ಇದೇ ಮೂಲ ಇದ್ದಿರಬಹುದಾ? ಹಾಂ, ಹೊಳೆಯಿತು. ನಾವು ಹಳೆ ಮೈಸೂರಿನ ಕ್ರೈಸ್ತರು, ಯೇಸುಸ್ವಾಮಿ ಕುಟುಂಬ ತಮ್ಮನ್ನು ಬೆನ್ನಟ್ಟಿ ಬಂದ ದುಷ್ಟ ಹೆರೋದ ಅರಸನ ಸೈನಿಕರಿಂದ ತಪ್ಪಿಸಿಕೊಳ್ಳಲು, ಎದೆಯುದ್ದ ಬೆಳೆದುನಿಂತಿದ್ದ ಬೆಳೆಯ ಹೊಲದಲ್ಲಿ ಮರೆಯಾದುದನ್ನು ಸ್ಮರಿಸಿ ಇಂಥ ಬಗೆಯ ಹುಲ್ಲುಗಳನ್ನು ಬೆಳೆಸುತ್ತೇವೆ, 

  ನಮ್ಮ ಹಳ್ಳಿಗಳಲ್ಲೆಲ್ಲಾ ಕ್ರಿಸ್ಮಸ್ ಮೊದಲು, ರಾಗಿ ಹುಲ್ಲು, ಗೋದಿ ಹುಲ್ಲು, ಜೋಳದ ಹುಲ್ಲು ಬೆಳೆದು ಮನೆಯ ಗೋದಲಿ ಕಟ್ಟುವುದು ಮತ್ತು ಹೆಚುವರಿ ತಟ್ಟೆಗಳಲ್ಲಿ ಬೆಳಿಸಿದ್ದ ಹುಲ್ಲನ್ನು ಊರ ಗುಡಿಯ ದೊಡ್ಡ ಗೋದಲಿಗಾಗಿ ತಲುಪಿಸುವುದು ನೆನಪಾಯಿತು. ಆ ಹುಲ್ಲನ್ನು ಬನ್ನಿ ಎನ್ನುವುದು. ನಮ್ಮ ನಮ್ಮ ಮನೆಗಳಿಂದ ಗುಡಿಗೆ ಆ ಬನ್ನಿ ಹುಲ್ಲನ್ನು ಹೊತ್ತು ಸಾಗಿಸುತ್ತಿದ್ದವ ಬನ್ನಪ್ಪ ಆಗಿದ್ದಾನೆ!

  ಈ ಬನ್ನಪ್ಪನ ಕತೆಯೂ ರೋಚಕವಾಗಿದೆ. ಹಾಗೇ ನೋಡಿದರೆ ಅವನು ನಮ್ಮೂರವನೇ ಅಲ್ಲ. ಈ ಊರಿನ ಬೀಗನೂ ಅಲ್ಲ, ದೂರದ ನೆಂಟನೂ ಅಲ್ಲ. ತುಂಬಾ ವರ್ಷಗಳ ಹಿಂದೆ, ಹಬ್ಬಹರಿದಿನಗಳಂದು ನಮ್ಮೂರಿಗೆ ಬಂದು, ಅಂದ ಚಂದದ ಬಣ್ಣದ ಬಳೆಗಳನ್ನು ಹೊತ್ತು ಮಾರುವ ಬಳೆಗಾರರು, ಅವನನ್ನು ತಂದು ನಮ್ಮ ಗುಡಿಯ ಸ್ವಾಮಿಯ ಮಡಿಲಿಗೆ ಒಪ್ಪಿಸಿದ್ದರಂತೆ. ಅವನು, ಆಗ ಒಂದೋ ಅಥವಾ ಎರಡು ವರ್ಷದ ಮಗು.

  ಅವರಿಗೆ ಆ ಮಗು ಊರ ಹೊರಗಡೆ ಪಾಳು ಬಿದ್ದಿರುವ ಆಂಜನೇಯ ದೇವಸ್ಥಾನದ ಹತ್ತಿರದ ಹಾಳು ಬಾವಿಯಲ್ಲಿ ಸಿಕ್ಕಿತ್ತಂತೆ. ಬಳಕೆ ಇಲ್ಲದೇ ಬತ್ತಿದ್ದ ಬಾವಿಯ ಸುತ್ತಲಿನ ಕಲ್ಲುಗಳು ಬಾವಿಯೊಳಗೆ ಉರುಳಿ ಬಿದ್ದಿದ್ದವು. ಮಣ್ಣು ಕುಸಿದು ಬಾವಿ ಬಹುತೇಕ ಮುಚ್ಚಿಯೇ ಹೋಗಿತ್ತು. ಗಿಡಗಂಟಿಗಳು ಒತ್ತಾಗಿ ಬೆಳೆದು ನಿಂತಿದ್ದವು. ಅಂಥದರಲ್ಲಿ ಯಾರೋ ಆ ಕೂಸನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಬಿಸಾಕಿದ್ದರಂತೆ. ಬಳೆಗಾರರು ಅಲ್ಲೇ ಕಲ್ಲಿನ ಮೇಲೆ ಕುಳಿತು ದಣಿವಾರಿಸಿಕೊಳ್ಳುವಾಗ, ಕ್ಷೀಣವಾಗಿ ಮಗುವೊಂದು ಅಳುವ ಸ್ವರ ಕೇಳಿಸಿತಂತೆ. ಗಿಡಗಂಟಿಗಳನ್ನು ಸವರಿ ನೋಡಿದಾಗ, ಅವರಿಗೆ ಆ ಮಗು ಕಾಣಿಸಿತ್ತು.

   ಎತ್ತರದ ಆಳು, ಸ್ವಾಮಿ ದೊಡ್ಡ ಚಿನ್ನಪ್ಪ ಅವರು, ಆಗ ನಮ್ಮೂರಿನ ಸಂತ ಜೋಸೆಫರ ಗುಡಿಯ ಪಾಲನಾ ಗುರುಗಳಾಗಿದ್ದರು. ಅವರು ಆ ಮಗುವಿಗೆ ಜೋಸೆಫ್ ಎಂದು ನಾಮಕರಣ ಮಾಡಿದ್ದರು. ನಮ್ಮಜ್ಜ ನಮ್ಮಜ್ಜಿ ಅವನಿಗೆ ಜ್ಞಾನಸ್ನಾನದ ತಂದೆತಾಯಿ ಆಗಿದ್ದರಂತೆ. 

  ಗುರುಗಳ ನೆರಳಾಗಿ ಅವರ ಗರಡಿಯಲ್ಲಿ ಬೆಳೆದಿದ್ದ ಆತ, ತನ್ನ ಹೆಸರಿನ ಬಗ್ಗೆ, ತನ್ನ ಅದೃಷ್ಟದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ. ಆದಿ ತಂದೆ ಅಬ್ರಹಾಮನ ಮರಿಮೊಮ್ಮಗನ ಹೆಸರು ಜೋಸೆಫ್. ಅವನನ್ನು ಅವನ ಅಣ್ಣಂದಿರು ಮೋಸ ಮಾಡಿ ಬಾವಿಗೆ ತಳ್ಳಿರುತ್ತಾರೆ. ದೇವರ ದಯೆ, ಅವನನ್ನು ಬಾವಿಯಿಂದ ಹೊರಗೆಳೆದ ವ್ಯಾಪಾರಿಗಳ ತಂಡ ಅವನನ್ನು ಇಜಿಪ್ತ ದೇಶಕ್ಕೆ ಕೊಂಡೊಯ್ದಿರುತ್ತಾರೆ. ಅಲ್ಲಿ ಅವನ ಅದೃಷ್ಟ, ಅಲ್ಲಿ ಅವನು ಅರಸ ಫೆರೋನ ಆಡಳಿತದಲ್ಲಿ ಸಚಿವನಾಗುತ್ತಾನೆ. ಆದರೆ, ನನ್ನದು ಇನ್ನೊಂದು ಬಗೆಯ ಅದೃಷ್ಟ. ಬಳೆಗಾರ ವ್ಯಾಪಾರಿಗಳ ಕೈ ಸೇರಿದ ನಾನು, ಈ ಊರಿನ ಸಂತ ಜೋಸೆಫರ ಗುಡಿಯ ಮಡಿಲಿನ ಮಗುವಾಗಿ ಬೆಳೆದೆ, ಈ ಊರವರ ಪ್ರೀತಿಯ ದೆಸೆಯಿಂದ ಬನ್ನಪ್ಪನಾದೆ ಎಂದು ಅವನು ಆಗಾಗ ಹೇಳಿಕೊಂಡಿದ್ದಿದೆ.

  ಸ್ವಾಮಿಗಳ ಕೃಪಾಶ್ರಯದಲ್ಲಿ ಬೆಳೆದಿದ್ದ ಅವನು, ಅಕ್ಷರ ಕಲಿಕೆಗೆ ಯಾವ ಶಾಲೆಯ ಬಾಗಿಲನ್ನು ತಟ್ಟಿರಲಿಲ್ಲ. ಆದರೆ, ಬಲ್ಲಿದ ಸ್ವಾಮಿಗಳ ಒಡನಾಟದಲ್ಲಿ ಬೆಳೆದ ಆತನಿಗೆ, ಕನ್ನಡವೂ ಸೇರಿದಂತೆ ಕೆಲವು ವಿದೇಶಿ ಭಾಷೆಗಳ ಅಲ್ಪಸ್ವಲ್ಪ ಪರಿಚಯವೂ ಇತ್ತು. ಲ್ಯಾಟಿನ್ ಅಂದರೆ ಲತೀನ್ ಭಾಷೆಯ ಪದಗಳು ಅವನ ಬಾಯಿ ತುದಿಯಲ್ಲಿಯೇ ನಲಿದಾಡುತ್ತಿದ್ದವು. ಫ್ರೆಂಚ್ ರಾಗದ ಕನ್ನಡ ಹಾಡುಗಳನ್ನು ಅವನು ಭಕ್ತಿಯಿಂದ ಹಾಡುತ್ತಿದ್ದರೆ, ಕೇಳುಗರ ಮನಸ್ಸಿಗೆ ಅದೊಂಥರ ಮುದ ಸಿಗುವುದಿತ್ತು. ವರ್ಷದ ಯಾವುದೇ ತಿಂಗಳಿರಲಿ ಅವನ ಬಾಯಲ್ಲಿ ಸದಾ ಕ್ರಿಸ್ಮಸ್ ಹಬ್ಬದ ಸಂದರ್ಭದ ಹಾಡುಗಳೇ ನಲಿಯುತ್ತಿದ್ದವು.

  ಒಮ್ಮೆ ಅವನು ಬಾಲಕನಿದ್ದಾಗ ಮಾಡಿದ ಭಾಷಾ ಕಿತಾಪತಿ ಊರವರಿಗೆ ಫಜೀತಿ ತಂದಿಟ್ಟಿತ್ತು. ಸಿಮೋನಪ್ಪರ ಮನೆಯ ಕೊಟ್ಟಿಗೆಯಲ್ಲಿ ನೂರಾರು ಹಸುಗಳು, ದನಕರುಗಳು ಇದ್ದವು. ಅವರು ಊರ ಪಕ್ಕದ ಹೊಲದಲ್ಲಿ ಬಣಿವೆಗೆ ಬೆರಣಿ ತಟ್ಟಿ ತಟ್ಟಿ ಬೆರಣಿ ಒಣಗಿಸುತ್ತಿದ್ದರು. ಆ ಬೆರಣಿಗಳು ಕೆಲವರ ಒಲೆಗೆ ಇಂಧನವಾಗಿ ಬಳಕೆಯಾಗುತ್ತಿದ್ದವು. ಚಳಿಗಾಲ ಅದೇ ಆಗ ಆರಂಭವಾಗಿತ್ತು. ಒಂದು ದಿನ ಯಾರೋ ದನ ಕಾಯಲು ಹೊರಟವರೊಬ್ಬರು ಸೇದಿ ಎಸೆದಿದ್ದ ಮೋಟು ಬೀಡಿ, ಬೆರಣಿಯ ರಾಶಿಗೆ ಬಿದ್ದಾಗ, ಅಲ್ಲಿ ಬೆಂಕಿ ಹೊತ್ತಿಕೊಂಡಿತ್ತು. 

  ಅದು ನಿಧಾನವಾಗಿ ಹೊತ್ತಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಲ್ಲಿಗೆ ಹೋಗಿದ್ದ ಬಾಲಕ ಬನ್ನಪ್ಪ, ಅದನ್ನು ಕಂಡು ಸಿಮೋನಪ್ಪರ ಮನೆಗೆ ಹೋಗಿ, `ನಿಮ್ಮ ಬಾನಿಗೆ ಬೆಂಕಿ ಬಿದ್ದಿದೆ ಎಂದಾಗ ಮನೆಯಲ್ಲಿದ್ದವರು ಕಕ್ಕಾಬಿಕ್ಕಿಯಾಗಿದ್ದರು. 

  ಬಾನು ಅಂದರೆ ಆಕಾಶ. ಸಿಮೋನಪ್ಪನ ಆಕಾಶ ಬೇರೆ, ಬನ್ನಪ್ಪ ಆಕಾಶ ಬೇರೆ ಇರುತ್ತದಾ ಬೆಂಕಿ ಬೀಳಲು? ಎಲ್ಲೋ ಬೆಂಕಿ? ಎಂದು ಬೆದರಿಸಿದಾಗ, ಅವನಿಂದ ಬಂದ ಉತ್ತರ, `ನಿಮ್ಮ ಬಾನಿಗೆ ಬೆಂಕಿ ಬಿದ್ದಿದೆ ಎಂಬುದು ಅವರನ್ನು ಮತ್ತಷ್ಟು ಗೊಂದಲದಲ್ಲಿ ಬೀಳಿಸಿತ್ತು. ಮತ್ತೊಮ್ಮೆ ಕೇಳಿದಾಗ, `ನಿಮ್ಮ ಹೊಲದಲ್ಲಿನ ಬಾನಿಗೆ ಬೆಂಕಿ ಬಿದ್ದಿದೆ ಎಂಬ ಮಾತು, ಮನೆಯಲ್ಲಿದ್ದವರು ಅವರ ಹೊಲಕ್ಕೆ ದೌಡಾಯಿಸುವಂತೆ ಮಾಡಿತ್ತು. ಹೋಗಿ ನೋಡಿದರೆ, ಬೆರಣಿಯ ರಾಶಿಗೆ ಬೆಂಕಿ ಬಿದ್ದಿತ್ತು. ತಕ್ಕಣ ಎಲ್ಲರೂ ಬಾವಿಯಿಂದ ನೀರನ್ನು ಸೆಳೆದು ಸೆಳೆದು ಹಾಕಿ, ಬೆಂಕಿಯನ್ನು ಆರಿಸಿದ್ದರು.

  ಇನ್ನೊಂದು ಪ್ರಸಂಗದಲ್ಲಿ ಪರಮ ಪೂಜ್ಯರಾದ ಮೇತ್ರಾಣಿಯವರನ್ನೇ ಬೀಳಿಸಿದ್ದನಂತೆ ಈ ನಮ್ಮ ಉಪದೇಶಿ ಅಜ್ಜ ಬನ್ನಪ್ಪ. ಇದು ನಡೆದದ್ದು, ಅವನು ಬಾಲಕನಾಗಿದ್ದಾಗ ಅಂತೆ. ನೆರೆಹೊರೆಯ ಊರುಗಳಲ್ಲಿ ಮಠದ ಸ್ವಾಮಿಗಳು ಬಂದಾಗ, ಊರಿನ ಮುಖ್ಯ ಬೀದಿಗಳಲ್ಲಿ ಅವರ ಪುರಪ್ರವೇಶವೆಂದು ಅವರನ್ನು ಅಡ್ಡಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಮೆರವಣಿಗೆ ನಡೆಸಲಾಗುತ್ತಿತ್ತು. ಪೂಜ್ಯ ಸ್ವಾಮಿಗಳು ಕುಳಿತಿದ್ದ ಅಡ್ಡಪಲ್ಲಕ್ಕಿ ಹೊತ್ತವರು, ಬೀದಿಯಲ್ಲಿ ಸಾಗುವಾಗ ಅಲ್ಲಿನ ಮನೆಗಳವರು ಅಡ್ಡಪಲಕ್ಕಿಯವರು ನಡೆಯುವ ಮುಂಚೆ ನೀರು ಸುರಿದು ಬೀದಿಯನ್ನು ಮಡಿ ಮಾಡುತ್ತಿದ್ದರು. 

  ಅದೇ ಮಾದರಿಯಲ್ಲಿ ಪಟ್ಟಣದಿಂದ ಮೇತ್ರಾಣಿಗಳು ಬಂದಾಗ, ನಮ್ಮ ಊರಲ್ಲೂ ಅವರ ಮೆರವಣಿಗೆಯೂ ನಡೆಯುತ್ತಿತು. ಆದರೆ, ಅದು ಅಡ್ಡಪಲಕ್ಕಿಯಂತೆ ಅಲ್ಲ.

ಮೇತ್ರಾಣಿಗಳ ಸಾರೋಟು ಊರ ಹೊರಗಡೆ ಬಂದು ನಿಲ್ಲುತ್ತಿತ್ತು. ಊರವರು, ಊರ ಪೂರ್ವದ ಪ್ರವೇಶದ ಹತ್ತಿರ ನೆಟ್ಟಿದ್ದ ಶಿಲುಬೆ ಗಡಿಕಲ್ಲಿನ ಹತ್ತಿರ, ಪಟ್ಟಣದಿಂದ ಕರೆಯಿಸಿದ್ದ ಬ್ಯಾಂಡುಬಾಜಾದೊಂದಿಗೆ ಸಿದ್ಧವಾಗಿ ನಿಂತಿರುತ್ತಿದ್ದರು. ಹದಿನೈದು ಇಪ್ಪತ್ತು ಜನ ಶಾಲಾ ಮಕ್ಕಳು, ಬೀದಿಯ ಆ ಕಡೆ ಈ ಕಡೆ ಶಿಸ್ತಿನಿಂದ ನಿಂತಿರುತ್ತಿದ್ದರು. ಬಾಜಾದೊಂದಿಗೆ ಆರಂಭವಾದ ಮೆರವಣಿಗೆಯಲ್ಲಿ ಮೇತ್ರಾಣಿಗಳ ಮುಂದೆ ಒಂದಿಬ್ಬರು ಪೀಠ ಬಾಲಕರು ಸಾಗುತ್ತಿದ್ದರೆ, ಪರಮ ಪೂಜ್ಯ ಮೇತ್ರಾಣಿಗಳು ಮೇಲೆ ವೃತ್ತಾಕಾರದಲ್ಲಿ ತಿರುಗಿದ್ದ ಮಿರಿಮಿರಿ ಮಿಂಚುವ ಹಿತ್ತಾಳೆಯ ಧರ್ಮದಂಡವನ್ನು ಹಿಡಿದುಕೊಂಡು ಬರುತ್ತಿದ್ದರು. ಊರ ಹಿರಿಯರು ಅವರನ್ನು ಹಿಂಬಾಲಿಸುತ್ತಿದ್ದರು.

  ಪಕ್ಕದ ಊರವರು ಮಠದ ಸ್ವಾಮಿಗಳು ಬಂದಾಗ ನೆಲಕ್ಕೆ ನೀರು ಹಾಕುವ ಪದ್ಧತಿ ಪಾಲಿಸಿಕೊಂಡು ಬರುತ್ತಿದ್ದರೆ, ನಮ್ಮ ಊರವರು, ಮೇತ್ರಾಣಿಗಳು ಬರುವ ಹಾದಿಯಲ್ಲಿ ಕೆಂಪು ಬಣ್ಣದ ಚಾಪೆಯನ್ನು ಹಾಸುತ್ತಿದ್ದರು. ಊದ್ದ ಹಾಸುವಷ್ಟು ಕೆಂಪು ಚಾಪೆಗಳು ಸಿಗದ ಕಾರಣ, ಇದ್ದ ಆರು ಮಾರು ಉದ್ದದ ಎರಡು ಚಾಪೆಗಳನ್ನು, ಒಂದರ ನಂತರ ಒಂದು ಇಡುವ ವ್ಯವಸ್ಥೆ ಮಾಡಲಾಗಿತ್ತು. ಈ ಲೆಕ್ಕಾಚಾರದಲ್ಲಿ ಮೊದಲ ಚಾಪೆ ಎರಡನೆಯ ಚಾಪೆಯಾಗುತ್ತಿದ್ದಂತೆ ಅದನ್ನು ತಂದು ಮತ್ತೆ ಮೊದಲನೆಯ ಚಾಪೆಯ ಲೆಕ್ಕಾಚಾರದಲ್ಲಿ ಹಾಕಲಾಗುತ್ತಿತ್ತು.

  ಗುಡಿಯ ಬಾಗಿಲ ಹತ್ತಿರ ಮೆರವಣಿಗೆ ಬಂದಿತ್ತು. ಬ್ಯಾಂಡಿನವರು ದೂರ ಮೆರವಣಿಗೆಯಿಂದ ದೂರ ಸರಿದರು. ಪೀಠ ಬಾಲಕರು ಗುಡಿಯ ಬಾಗಿಲಲ್ಲಿದ್ದರು. ಪರಮ ಪೂಜ್ಯ ಮೇತ್ರಾಣಿಗಳು ಮುಂದೆ ಕಾಲಿಡುತ್ತಿದ್ದಂತೆ ಎಡವಿ ಬಿದ್ದರು. ಅಲ್ಲಿಯೇ ಇದ್ದ ಪಾಲನಾ ಗುರು ದೊಡ್ಡ ಚಿನ್ನಪ್ಪ ಅವರು ತಟ್ಟನೇ ಅವರನ್ನು ಹಿಡಿದುಕೊಂಡರು. ಹಿಂದಿರುಗಿ ನೋಡಿದರೆ, ಗುರುಗಳ ಒಡನಾಡಿ ಅನಾಥ ಬಾಲಕ ಜೋಸೆಫ್ ಚಾಪೆ ಎತ್ತುತ್ತಿರುವುದು ಕಾಣಿಸಿತು. ಮೇತ್ರಾಣಿಗಳು ಧುಮುಗುಡುತ್ತಾ ಒಳಗೆ ಸಾಗಿದರೆ, ಸ್ವಾಮಿ ದೊಡ್ಡ ಚಿನ್ನಪ್ಪ ಅವರು ದುರುಗುಟ್ಟಿಕೊಂಡು ನೋಡುತ್ತಾ ಒಳಗೆ ನಡೆದರು. ಮೆರವಣಿಗೆಯನ್ನು ಹಿಂಬಾಲಿಸುತ್ತಿದ್ದವರಿಗೆ ಏನು ನಡೆಯಿತು? ಎಂಬುದು ಗೊತ್ತಾಗಲಿಲ್ಲ.

 ಪೂಜೆ ಸಾಂಗವಾಗಿ ನೆರವೇರಿದ ನಂತರ ಮೇತ್ರಾಣಿಗಳು ತಮ್ಮ ಸಾರೋಟು ಹತ್ತಿ ಹೊರಟೆ ಬಿಟ್ಟರು, ಪಾಲನಾ ಗುರು ದೊಡ್ಡ ಚಿನ್ನಪ್ಪ ಅವರು, ಬಾಲಕ ಜೋಸೆಫ್ ನನ್ನು ತರಾಟೆಗೆ ತೆಗೆದುಕೊಂಡರಂತೆ. ಆ ಸಮಯ ಊರ ಹಿರಿಯರೂ ಉಪಸ್ಥಿತರಿದ್ದರು. ಆದರೆ, ಜೋಸೆಫ್ ಎರಡೂ ಚಾಪೆಗಳನ್ನು ತಂದು, ಅದರಲ್ಲಿ ಒಂದು ಚಾಪೆಯ ದಾರ ಕಿತ್ತು ಬಂದಿದ್ದನ್ನು ತೋರಿಸಿ, ಪೂಜ್ಯ ಮೇತ್ರಾಣಿಗಳು ಎಡವಿ ಬಿದ್ದಿದ್ದು ಆ ದಾರದಿಂದ ತಾನು ಚಾಪೆಯನ್ನು ಎತ್ತಿದ್ದರಿಂದ ಅಲ್ಲ ಎಂದು ಸಮಜಾಯಿಷಿಕೊಟ್ಟನಂತೆ. ನಿಜ ಏನೇ ಇದ್ದರೂ, ಮೇತ್ರಾಣಿಗಳನ್ನು ಬೀಳಿಸಿದವ ಎಂಬ ಹೆಗ್ಗಳಿಕೆಯೋ, ಕಪ್ಪು ಚುಕ್ಕೆಯೋ, ಅವನ ಹೆಸರಿಗೆ ಅಂಟಿಕೊಂಡುಬಿಟ್ಟಿತ್ತು.

   ಉಪದೇಶಿ ಅಜ್ಜ ಬನ್ನಪ್ಪನ ಮದುವೆಯದ್ದು ಒಂದು ಕತೆ. ಆ ಕಾಲದಲ್ಲಿ ಒಂದೂರಿನ ಗುಡಿಗೆ ಒಬ್ಬರು ಪಾಲನಾ ಗುರುಗಳಾಗಿ ನೇಮಕಗೊಂಡರೆ, ಈಗಿನಂತೆ ಮೂರೋ, ಐದು ವರ್ಷಗಳಿಗೊಮ್ಮೆ ವರ್ಗವಾಗುವ ಪ್ರಮೇಯವೇ ಇರಲಿಲ್ಲ. ಆಗ ಊರಿಗೆ ವರ್ಗವಾಗಿ ಬಂದ ಸ್ವಾಮಿಗಳು ಹದಿನೈದು ವರ್ಷ ತಪ್ಪಿದರೆ ಇಪ್ಪತ್ತು ವರ್ಷಗಳ ಕಾಲ ಒಂದೇ ಗುಡಿಯಲ್ಲಿ ಇದ್ದು ಬಿಡುತ್ತಿದ್ದರು. ನಮ್ಮೂರ ಗುಡಿಯ ಪಾಲನಾ ಗುರು ದೊಡ್ಡ ಚಿನ್ನಪ್ಪ ಸ್ವಾಮಿಗಳು, ಹದಿನೈದು ವರ್ಷ ಅಲ್ಲ ಇಪ್ಪತ್ತೆರಡು ವರ್ಷ ನಮ್ಮುರಲ್ಲೇ ಇದ್ದರಂತೆ.

  ಸಂತ ಜೋಸೆಫರ ಗುಡಿಯ ಪಕ್ಕದ ಗುರುಮನೆಯಲ್ಲಿ ಗುರುಗಳೊಂದಿಗೆ ವಾಸವಿದ್ದರೂ, ತಂದೆ ತಾಯಿಗಳಿಲ್ಲದ ಬನ್ನಪ್ಪನನ್ನು ಊರವರು ತಮ್ಮವನೆಂದು ಬಗೆದು ಪ್ರೀತಿಸುತ್ತಿದ್ದರು. ಅವನು ಊರವರ ಮಗನೇ ಆಗಿದ್ದ. ಅವನಿಗೂ ಹರೆಯ ಬಂದಾಗ, ಅವನಿಗೊಂದು ಹೆಣ್ಣು ಕಟ್ಟಿ ಸಂಸಾರಕ್ಕೆ ತೊಡಗಿಸಬೇಕು ಎಂದುಕೊಂಡ ಸ್ವಾಮಿ ದೊಡ್ಡ ಚಿನ್ನಪ್ಪ ಅವರು, ಪಟ್ಟಣದಲ್ಲಿದ್ದ ಅನಾಥಾಶ್ರಮದಲ್ಲಿ ಬೆಳೆದಿದ್ದ ಒಂದು ಚಂದದ ಹುಡುಗಿಯನ್ನು ನೋಡಿಕೊಂಡು ಬಂದರು.

  ಊರವರ ಸಮ್ಮುಖದಲ್ಲಿ ನಡೆದ ಮದುವೆಯಲ್ಲಿ ನಮ್ಮಜ್ಜ ವರನ ಪರ ನಿಂತರೆ, ಅನಾಥಾಶ್ರಮದ ಪರವಾಗಿ ಪಟ್ಟಣದ ಕಾನ್ವೆಂಟಿನ ದೊಡ್ಡ ಅಮ್ನೋರು ಬಂದಿದ್ದರಂತೆ. ಸ್ವಾಮಿ ದೊಡ್ಡ ಚಿನ್ನಪ್ಪ ಅವರು, ಪಾಡು ಪೂಜೆಯಲ್ಲಿ ಬನ್ನಪ್ಪ ಮತ್ತು ಅನ್ನಮ್ಮಳ ಮದುವೆ ನೆರವೇರಿಸಿದರು. ಬನ್ನಪ್ಪನ ಮದುವೆಗೆ ಊರ ಜನರೆಲ್ಲಾ ಬಂದಿದ್ದರು.

   ಗಂಡ ಹೆಂಡತಿ ಬನ್ನಪ್ಪ, ಅನ್ನಮ್ಮ ಅನ್ಯೋನ್ಯವಾಗಿದ್ದರು. ಸ್ವಾಮಿ ದೊಡ್ಡ ಚಿನ್ನಪ್ಪ ಅವರು ಗುಡಿಯ ಆವರಣದಲ್ಲಿನ ತಮ್ಮ ಗುರುಮನೆಗೆ ಸ್ವಲ್ಪ ದೂರದಲ್ಲಿ ಮಣ್ಣಿನ ಗೋಡೆಯಲ್ಲಿ ಕಟ್ಟಿಸಿದ ನಾಡ ಹೆಂಚಿನ ಮನೆಯನ್ನು ಅವನಿಗೆ ಬಿಟ್ಟುಕೊಟ್ಟರು. ಸ್ವರ್ಗಕ್ಕೆ ಕಿಚ್ಚು ಹಚ್ಚುವಂತೆ ಅವನ ಸಂಸಾರ ನಡೆದಿತ್ತು. ಗಂಡ ಹೆಂಡತಿ ಇಬ್ಬರೂ ಗುಡಿ ಆವರಣವನ್ನು ಸ್ವಚ್ಛವಾಗಿಡುತ್ತಾ, ಪೂಜೆಗೆ ಒತ್ತಾಸೆಯಾಗಿ ನಿಲ್ಲತೊಡಗಿದರು. ಬನ್ನಪ್ಪ ಉಪದೇಶಿ ಕೆಲಸದ ಜೊತೆಗೆ ಊರವರ ಕೆಲಸಗಳನ್ನು ಮಾಡಲು ಮುಂದಾಗಿದ್ದ. ತುಂಬು ಗರ್ಭಿಣಿ ಅನ್ನಮ್ಮಳನ್ನು ಊರ ಜನರೇ ಆರೈಕೆ ಮಾಡುತ್ತಿದ್ದರು. ಅವಳ ದಿನಗಳು ತುಂಬಿದ್ದವು.

  ಅಂದು ಬನ್ನಪ್ಪ ನೆರೆಯ ಹಳ್ಳಿಯ ಜನರ ತೋಟದಲ್ಲಿನ ತೆಂಗಿನ ಮರಗಳನ್ನು ಇಳಿಸಲು ಹೋಗಿದ್ದ. ಎಷ್ಟೇ ಬೇಗ ಹಿಂದಿರುಗಬೇಕು ಎಂದುಕೊಂಡರೂ ಬರುವಾಗ ತುಂಬಾ ತಡವಾಗಿತ್ತು. ಆ ಊರಿನಿಂದ ಬರುವಾಗ ಸ್ಮಶಾನದ ಪಕ್ಕದ ರಸ್ತೆಯಿಂದಲೇ ಬರಬೇಕಿತ್ತು. ಆ ಸಮಾಧಿ ಜಾಗದ ಸ್ವಲ್ಪ ದೂರದಲ್ಲಿ ಹುಣುಸೆ ಮರವಿತ್ತು. 

  ಆ ಮರದಲ್ಲಿ ಹೆಣ್ಣು ಪಿಶಾಚಿ     ಇದೆಯೆಂದು ಜನ ನಂಬಿದ್ದರು. ಬನ್ನಪ್ಪ ಆ ವಿಶಾಚಿಯ ಇರುವನ್ನು ನಂಬಿದ್ದನೋ ಇಲ್ಲವೋ ಗೊತ್ತಿಲ್ಲ, ಅವನೊಂದಿಗೆ ಊರಿಗೆ ಬರುತ್ತಿದ್ದವ ಆ ಮರದ ಹತ್ತಿರ ಬರುತ್ತಿದ್ದಂತೆ, ಕೂದಲು ಕೆದರಿಕೊಂಡು ಚಳಿಜ್ವರ ಬಂದವರಂತೆ ಗಡಗಡ ನಡುಗತೊಡಗಿದ್ದ. ಅವನನ್ನು ಸಂಭಾಳಿಸಿಕೊಂಡು ಬರುವಷ್ಟರಲ್ಲಿ ಅವನಿಗೆ ಸಾಕುಸಾಕಾಯಿತು. 

  ಕೆದರಿದ ಕೂದಲಿನವನೊಂದಿಗೆ ಬಂದ ಗಂಡ ಬನ್ನಪ್ಪನನ್ನು ಕಂಡ ಅನ್ನವ್ವ ಬೆದರಿದಳು. ಬೆದರಿಕೆಯಲ್ಲಿದ್ದ ದಿನ ತುಂಬಿದ ಅವಳನ್ನು ಸಮಾಧಾನಪಡಿಸಲು ನಮ್ಮಜ್ಜಿ ಜೊತೆಗಿದ್ದರು. ಸೂಲಗಿತ್ತಿಗೆ ಹೇಳಿ ಕಳುಹಿಸಲಾಗಿತ್ತು. ಸೂಲಗಿತ್ತಿ ಸೂಸಮ್ಮ ಬಂದಳು ಎಂದರೆ, ಹೆರಿಗೆ ಸುಸೂತ್ರವಾಗಿ ನಡೆಯುತ್ತದೆ ಎಂಬುದು ಊರವರ ನಂಬಿಕೆ. ಆದರೆ, ಅನ್ನವ್ವಳ ಪಾಲಿಗೆ ಆ ನಂಬಿಕೆ ಹುಸಿಯಾಯಿತು. ಹೆರಿಗೆಯ ಸಮಯದಲ್ಲಿ ತಾಯಿ ಕೊನೆಯುಸಿರು ಎಳೆದರೆ, ಒಂದೆರಡು ಗಂಟೆಗಳಲ್ಲೇ ಹಸಿಗೂಸಿನ ಉಸಿರೂ ನಿಂತಿತು.

  ಈ ಪ್ರಸಂಗದ ನಂತರ, ಬನ್ನಪ್ಪ ಬಹಳ ಬದಲಾದನಂತೆ. ಅದುವರೆಗೂ ಅವನ ಜೀವನ ಒಂದು ಕ್ರಮದಲ್ಲಿ ಸಾಗುತ್ತಿತ್ತು. ಈಗ ಅದು ಹರಿದ ಗಾಳಿ ಪಟದಂತಾಗಿತ್ತು. ಕ್ರಿಸ್ಮಸ್ ಬಂದ ನಂತರವೇ ಆತ ಮಾಮೂಲಿ ಸ್ಥಿತಿಗೆ ಹಿಂತಿರುಗಿದ್ದನಂತೆ.

 ವರ್ಷಗಳು ಉರುಳಿದವು. ಸ್ವಾಮಿ ದೊಡ್ಡ ಚಿನ್ನಪ್ಪ ಅವರೂ ವರ್ಗವಾಗಿ ಹೊರಟುನಿಂತಾಗ, ವಿಧುರನಾಗಿದ್ದ ಬನ್ನಪ್ಪನನ್ನು `ಬನ್ನಪ್ಪಾ, ನನ್ನೊಂದಿಗೆ ಬರುತ್ತೀಯಾ? ಎಂದು ಕೇಳಿದರು. ಅವನಿಗೆ, ಸಾಕಿ ಸಲುಹಿದ ಗುರುಗಳಿಗಿಂತ, ಊರವರ ಪ್ರೀತಿಯ ಋಣಭಾರವೇ ದೊಡ್ಡದಾಗಿ ಕಾಡತೊಡಗಿತ್ತು. ಇಲ್ಲ ಎನ್ನುವಂತೆ ಅಡ್ಡ ಗೋಣು ಅಲ್ಲಾಡಿಸಿದ.

 ಹೊಸ ಗುರುಗಳು ಬಂದರು. ಎಂದಿನಂತೆ ಉಪದೇಶಿ ಕೆಲಸ ಮಾಡುತ್ತಿದ್ದರೂ, ಹೊಸ ಗುರುಗಳು ಅವನನ್ನು ಆದಷ್ಟು ದೂರವೇ ಇಡತೊಡಗಿದರು. ಎರಡು ಹೊತ್ತಿನ ಊಟಕ್ಕೆ ಆತ ಹೊರಗೆ ದುಡಿಯುವುದು ಅನಿವಾರ್ಯವಾಯಿತು. ಬೇರೆ ಬೇರೆ ಕೆಲಸಗಳು ಅವನ ಕೈ ಹಿಡಿಯುತ್ತಿದ್ದವು. ಊರ ಜನರನ್ನು ತನ್ನ ಮನೆಯವರೇ ಎಂದುಕೊಂಡಿದ್ದ ಆತ, ಎಂದಿಗೂ ದುಡ್ಡಿಗಾಗಿ ಕೆಲಸ ಮಾಡಿರಲಿಲ್ಲ. ಆತನಿಗೆ ಈಗ ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಕಷ್ಟವಾಯಿತು. ಪಟ್ಟಣ ಸೇರಿದ್ದರೆ, ಅವನ ತಿಳಿವಳಿಕೆಯ ಮಟ್ಟದ ಆಧಾರದಲ್ಲಿ ಆ ಕಾಲದಲ್ಲಿ ಒಳ್ಳೆಯ ಕೆಲಸವೇ ಸಿಗುತ್ತಿತ್ತು.

  ಊರಲ್ಲಿರುವ ಮನೆಗಳವರಿಗೆ ಉರುವಲಿಗಾಗಿ ಜಾಲಿಮರದ ಮಾವಿನ ಮರದ ಕೊಂಬೆಗಳನ್ನು, ಬೊಡ್ಡೆಗಳನ್ನು ಒಡೆದು ಸೌದೆ ಕಟ್ಟಿಗೆ ಸಿದ್ಧಮಾಡಿ ಕೊಡುವುದು ಅವನ ಹಲವಾರು ಕಾಯಕಗಳಲ್ಲಿ ಒಂದು ಕಾಯಕವಾಗಿತ್ತು. ಸಂತೆಯಲ್ಲಿ ಸಾಮಾನು ಕೊಂಡವರು, ಅವನ್ನು ಅವನ ಮೇಲೆ ಹೊರಿಸಿಕೊಂಡು ಮನೆಗೆ ಹೋಗುತ್ತಿದ್ದರು. 

 ಯಾರಾದರೂ ಇಂದು ಹೊಲಕ್ಕೆ ಬಾಪಾ, ಇಂದು ಮೆಣಸಿನ ಸಸಿ ನೆಡಬೇಕು ಎಂದರೇ ಅದಕ್ಕೂ ಸೈ ಎನ್ನುತ್ತಿದ್ದ. ಹಂತಿ ಹೊಡೆಯೋಕೆ, ರೆಂಟೆ ಹೊಡೆಯೋಕೆ ಕರೆದರೆ ಆತ ಎಂದೂ ತಪ್ಪಿಸಿಕೊಂಡವನೇ ಅಲ್ಲ. ಸುಗ್ಗಿಯ ಸಮಯದಲ್ಲಿ ಎಲ್ಲರ ಹೊಲಗದ್ದೆಗಳ ಕೆಲಸಕ್ಕೆ ಹೊರಟುಬಿಡುತ್ತಿದ್ದ. 

 ಮಾವಿನ ಹಂಗಾಮು ಆರಂಭವಾಗುವ ಮೊದಲು ಗಿಡದಿಂದ ಮಾವಿನ ಕಾಯಿ, ಹಣ್ಣುಗಳನ್ನು ಬಡಿಸುವ ಸಮಯ ಬಂದರೆ, ಎಂಥಾ ಎತ್ತರದ ಟೊಂಗೆಯೇ ಇರಲಿ ಉದ್ದ ದೋಟಿಯಿಂದ ಸರಾಗವಾಗಿ ಹಣ್ಣು ಬಿಡಿಸಿ ಬುಟ್ಟಿ ತುಂಬಿಸುತ್ತಿದ್ದ. ಆಗ, ಊರಲ್ಲಿ ಕೆಲವರು ಬೆಳೆದಿದ್ದ ಟೆಂಗಿನ ಗಿಡದಿಂದ ಕಾಯಿಗಳನ್ನು ಇಳಿಸಬೇಕಾದರೇ ವರ್ಷಕ್ಕೊಮ್ಮೆ ಮಲೆನಾಡ ಸೀಮೆ, ಘಟ್ಟದ ಕೆಳಗಿನಿಂದಲೇ ಆಳುಗಳು ಬರುವುದನ್ನು ಕಾಯಬೇಕಿತ್ತು. ಅವರೊಂದಿಗೆ ಸ್ನೇಹ ಬೆಳಸಿ, ಸರಾಗವಾಗಿ ಟೆಂಗಿನ ಗಿಡಗಳನ್ನು ಏರುವುದನ್ನೂ ಆತ ಕಲಿತುಬಿಟ್ಟಿದ್ದ.

 ಅವನಿಗೆ ಹೆಂಡಿರು ಮಕ್ಕಳು ಮನೆಮಠ ಎಂಬುದಿರಲಿಲ್ಲ. ಹಸಿವಾದಾಗ ಊರಲ್ಲಿನ ಯಾವುದಾದರು ಒಂದು ಮನೆಯ ಕಟ್ಟೆಯ ಮೇಲೆ ಹೋಗಿ ಕುಳಿತರಾಯಿತು, ಆ ಮನೆಯ ಯಜಮಾನಿ ಅವನಿಗೆ ಊಟ ಬಡಿಸುತ್ತಿದ್ದಳು.

  ಯೇಸುಸ್ವಾಮಿಯ ಹುಟ್ಟುಹಬ್ಬ ಕ್ರಿಸ್ಮಸ್ ಬಂದರೆ ಸಾಕು, ಊರ ಮಕ್ಕಳಿಗೆ ಈ ಉಪದೇಶಿ ಅಜ್ಜ ಬನ್ನಪ್ಪನೇ ನೆನಪಾಗುವುದು. ಕ್ರಿಸ್ಮಸ್ ಹಬ್ಬದ ಮುನ್ನಿನ ಹದಿನೈದು ದಿನಗಳ ಕಾಲ, ಸಂಜೆ ಊರಲ್ಲಿನ ಎಲ್ಲಾ ಕ್ರೈಸ್ತರ ಮನೆಗಳ ಮುಂದೆ, ಕ್ರಿಸ್ಮಸ್ ಸಂಭ್ರಮವನ್ನು, ಹಸುಗೂಸು ಶಿಶು ಯೇಸುವಿನ ಬರುವನ್ನು ಸಾರುವ ಹಾಡುಗಳನ್ನು ಹಾಡುವ ತಂಡದ ನೇತೃತ್ವವನ್ನು ಈ ಉಪದೇಶಿ ಬನ್ನಪ್ಪನೇ ವಹಿಸುತ್ತಿದ್ದ. 

  ಕ್ರಿಸ್ಮಸ್ ಹಬ್ಬದ ಸಂಭ್ರಮದ ಪಾಡುಪೂಜೆ, ಸಾಂಗ್ಯಗಳು ಮತ್ತು ಇತರ ಪೂಜಾವಿಧಿಗಳು ಸಾಂಗವಾಗಿ ನೆರವೇರಿದ ನಂತರ, ಕಣ್ಮರೆಯಾಗುತ್ತಿದ್ದ ಉಪದೇಶಿ ಬನ್ನಪ್ಪ, ಸಾಂತಾ ಕ್ಲಾಸ್ ತಾತನ ವೇಷ ತೊಟ್ಟು ಎಮ್ಮೆಯ ಮೇಲೆ ಪ್ರತ್ಯಕ್ಷನಾಗುತ್ತಿದ್ದ. ಗುಡಿಯ ಪಾಲನಾ ಗುರುಗಳು ಪಾಲನಾ ಸಭೆಯ ಸದಸ್ಯರ ಮಕ್ಕಳಿಗೆ ಮತ್ತು ಊರ ಮಕ್ಕಳಿಗೇ ಅಂತ ತರಿಸಿದ್ದ ಆಟಿಗೆಗಳನ್ನು ಹಂಚುತ್ತಿದ್ದ.

   ಗರಿಗಳ ಹಬ್ಬ ಬಂದರೆ, ಆ ದಿನವೂ ಎಮ್ಮೆಯ ಮೇಲೆ ಪ್ರತ್ಯಕ್ಷ ಆಗುತ್ತಿದ್ದ. ಎಮ್ಮೆಯೇ ಏಕೆ? ಜೆರುಸಲೇಮಿಗೆ     ಯೇಸುಸ್ವಾಮಿ ಕತ್ತೆಯ ಮೇಲೆ ಬಂದದ್ದಲ್ಲ ಎಂದು ಕೇಳಿದರೆ, `ನಮ್ಮೂರಲ್ಲೂ ಕತ್ತೆಗಳಿವೆ. ಆದರೆ ಕತ್ತೆಗಳಿಗೆ ಕಿಮ್ಮತ್ತಿಲ್ಲ. ಜಟಕಾದವರು ಕುದುರೆ ಇಟ್ಟುಕೊಂಡಿದ್ದಾರೆ. ಆಕಳು, ಎಮ್ಮೆಗಳಲ್ಲಿ ಎಮ್ಮೆಯೇ ಎಲ್ಲರ ಮನೆಯಲ್ಲಿರುವುದು. ಎಲ್ಲಾ ಮಕ್ಕಳಿಗೂ ಎಮ್ಮೆಗಳ ಹಾಲೇ ಮುಟ್ಟುವುದು ಎಂದು ವಾದಿಸುತ್ತಿದ್ದ.

  ನಾನು ಹೈಸ್ಕೂಲಿಗೆ ಸೇರಲೆಂದು ಊರು ಬಿಟ್ಟು ಹೊರಟಾಗ, ತನ್ನ ಇಳಿ ವಯಸ್ಸಿನಲ್ಲಿದ್ದ ಯಪದೇಶಿ ಅಜ್ಜ ಬನ್ನಪ್ಪ, ಧಾರ್ಮಿಕ ಸೋದರರ ಧಿರಿಸು ತೊಟ್ಟು ಪ್ರತ್ಯಕ್ಷನಾಗತೊಡಗಿದ್ದು ಸೋಜಿಗದ ಸಂಗತಿಯಾಗಿತ್ತು. ಎಳೆಯ ವಯಸ್ಸಿನಿಂದ ಸತತ ಇಪ್ಪತ್ತು ವರ್ಷಗಳ ಪಾದ್ರಿಗಳೊಂದಿಗಿನ, ಚರ್ಚಿನ ಒಡನಾಟ, ಅವನಲ್ಲಿ ಸಾಕಷ್ಟು ಧಾರ್ಮಿಕ, ಹಬ್ಬದಾಚರಣೆಗಳ, ಧರ್ಮಸಭೆಯ ಜ್ಞಾನ ಮೂಡಿಸಿತ್ತು. 

  ಮಾತೆ ಮರಿಯಳ ಸ್ವರೂಪದ ಬಣ್ಣ ಮಾಸಿದಾಗ, ಪೆಂಟರ್ ಪಾಲಣ್ಣ ಬಣ್ಣ ಬಳಿಯಲು ಮುಂದಾದಾಗ, ಬಳಿ ಮತ್ತು ನೀಲಿ ಬಣ್ಣವನ್ನೇ ಹಚ್ಚಬೇಕು ಎಂದು ಪಟ್ಟು ಹಿಡಿಯುತ್ತಿದ್ದ. ನೀಲಿ ಬಣ್ಣ ಅವಳನ್ನು ಆಗಸದ ರಾಣಿ- ಸ್ವರ್ಗದ ರಾಣಿಯೆಂದು ಗುರುತಿಸಿದರೆ, ಸ್ಪಟಿಕದ ಬಿಳಿ ಬಣ್ಣ ಬಿಳುಪು- ನಿಷ್ಕಳಂಕ ಮಾತೆ ಮರಿಯ ಎಂದು ಗುರುತಿಸುವುದಕ್ಕೆ ಸಹಕಾರಿ ಎಂದು ಆತ ಪ್ರತಿಪಾದಿಸುತ್ತಿದ್ದ.

  ಆಗಸ್ಟ್ ಹದಿನೈದು, ಮಾತೆ ಮರಿಯಳ ಸ್ವರ್ಗ ಸ್ವೀಕಾರದ ಹಬ್ಬದ ಜೊತೆಗೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ದಿನವೂ ಹೌದು. ಅಂದು ಮಕ್ಕಳಿಗೆ ಸಹಿ ಹಂಚುವುದರಲ್ಲಿ ತೊಡಗಿರುತ್ತಿದ್ದ. 

  ಸೆಪ್ಟೆಂಬರ್ ಎಂಟು ಮಾತೆ ಮರಿಯಳ ಹುಟ್ಟುಹಬ್ಬದ ದಿನ. ಆರೋಗ್ಯವನ್ನು ಕರುಣಿಸುವ ಮಾತೆ ಮರಿಯಳನ್ನು ಆರೋಗ್ಯಮಾತೆ ಎಂದು ಗೌರವಿಸುವ ದಿನ, ಆ ಸಮಯದಲ್ಲಿ ಉಪದೇಶಿ ಬನ್ನಪ್ಪ, ಊರಲ್ಲಿನ ಎಲ್ಲರ ಮನೆಗಳಿಗೂ ಸ್ವಾಮಿಗಳನ್ನು ಕರೆದುಕೊಂಡು ಹೋಗಿ ಮನೆಯಲ್ಲಿದ್ದ ಅಸ್ವಸ್ಥರ ಆರೋಗ್ಯ ಸುಧಾರಿಸಲೆಂದು ಪ್ರಾರ್ಥನೆ ಮಾಡುವಂತೆ ಮಾಡುತ್ತಿದ್ದ. ಅಕ್ಟೋಬರ್ ೭ ಜಪಮಾಲೆ ರಾಣಿ ಹಬ್ಬ ಬಂದಾಗ, ಊರಲ್ಲಿನ ಹಿರಿಯರಿಗೆ ಮತ್ತು ಮಕ್ಕಳಿಗೆಲ್ಲಾ ಜಪಸರಗಳನ್ನು ಹಂಚುತ್ತಿದ್ದ. ಯಾವುದಾದರೊಂದು ವರ್ಷ ಅವನಿಗೆ ಅದು ಸಾಧ್ಯವಾಗದಿದ್ದರೆ, ಮಾತೆ ಮರಿಯಳ ಪುಟಾಣಿ ಪದಕಗಳನ್ನು ತಂದು ಕೊಡುತ್ತಿದ್ದ.

  ಮುಲ್ಕಿ ಪರೀಕ್ಷೆ ಅಂದರೆ, ಇಂದಿನ ಎಸ್ ಎಸ್ ಎಲ್ ಸಿ (ಸೆಕಂಡರಿ ಸ್ಕೂಲ್ ಲಿವಿಂಗ್ ಸರ್ಟಿಫಿಕೇಟ್) ಪರೀಕ್ಷೆ ಸಂದರ್ಭದಲ್ಲಿ ಉಪದೇಶಿ ಅಜ್ಜ ಬನ್ನಪ್ಪ ತೀರಿಕೊಂಡ ಸುದ್ದಿ ಹೊತ್ತು ತಂದಿದ್ದ ನಮ್ಮಣ್ಣ. 

  ಬನ್ನಪ್ಪನಂಥ ಇನ್ನೊಬ್ಬ ಉಪದೇಶಿ ನಮ್ಮೂರಲ್ಲಿ ಇನ್ನೊಬ್ಬರು ಬರಲೇ ಇಲ್ಲ. ಅವನು ಧಾರ್ಮಿಕ ಸೋದರರ  ಧಿರಿಸು ತೊಟ್ಟು ಹೊರಟನೆಂದರೆ, ಎದುರಿಗೆ ಯಾರಿಗಾದರೂ ಬಂದರೂ ಅವರ ಕೈಗೆ, ಜಪಸರವನ್ನೋ, ಪದಕವನ್ನೋ ಇಲ್ಲವೇ ಉತ್ತರಿಕೆಯನ್ನೂ ತಪ್ಪದೇ ಕೊಡುತ್ತಿದ್ದ. ಕ್ರಿಸ್ಮಸ್ ಸಂಭ್ರಮದ ಹಾಡುಗಳು ಗುನುಗುನಿಸುತ್ತಿದ್ದ ಉಪದೇಶಿ ಬನ್ನಪ್ಪ, ಪ್ರತಿದಿನವೂ ಯೇಸುವಿನ ಜನನವನ್ನು ಸಂಭ್ರಮಿಸುವಂತೆ ಮಾಡುತ್ತಿದ್ದ. 

  ಮಕ್ಕಳಿಗೆ ಬೈಬಲ್ ಕಥನಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದ ಬನ್ನಪ್ಪನ ಕಾರಣವಾಗಿಯೇ, ನಮ್ಮೂರಿನ ಮಕ್ಕಳು ಧರ್ಮಕ್ಷೇತ್ರದ ಪ್ರಧಾನ ಕಚೇರಿಯು ನಡೆಸುತ್ತಿದ್ದ ಬೈಬಲ್ ಪ್ರಶ್ನಾವಳಿಯಲ್ಲಿ ಪ್ರಥಮ ದರ್ಜೆಯ ಅಂಕಗಳನ್ನು ಗಳಿಸುತ್ತಿದ್ದರು. ಈಗ ಅವನು ನಮ್ಮ ಜೊತೆಗೆ ಇಲ್ಲ. ಅವನ ಸ್ಥಾನವನ್ನು ತುಂಬಲು ಇನ್ನೊಬ್ಬರು ಇನ್ನೂ ಬಂದಿಲ್ಲ.

 ಇದಾಗಿ ಸುಮಾರು ಮೂವತ್ತು ವಸಂತಗಳು ಕಳೆದು ಹೋದರೂ. ಉಪದೇಶಿ ಅಜ್ಜ ಬನ್ನಪ್ಪನ ನೆನಪು ಇನ್ನೂ ಮಾಸಿಲ್ಲ. ಕ್ರಿಸ್ಮಸ್ ಬಂದರೆ ಸಾಕು, ಉಪದೇಶಿ ಅಜ್ಜ ಬನ್ನಪ್ಪನ ಚಿತ್ರ ಮನದ ಕ್ಯಾನವಾಸಿನ ಮೇಲೆ ಮೂಡಿಬಿಡುತ್ತದೆ. ಇಂದಿನ ಮಕ್ಕಳಿಗೆ, ನಮ್ಮ ಹಳ್ಳಿಯಲ್ಲಿ, ನಮ್ಮ ಕಾಲದ ಕ್ರಿಸ್ಮಸ್ ತಾತ ಎಮ್ಮೆಯ ಮೇಲೆ ಬರುತ್ತಿದ್ದ ಸಂಗತಿಯನ್ನು ಹೇಳಿದರೆ, ಅವರು ಗೊಳ್ಳೆಂದು ನಗುವುದು ಸಹಜ.

  ತಾತ್ವಿಕವಾಗಿ ವೇದಿಕೆಗಳ ಮೇಲೆ ಚರ್ಚು- ಧರ್ಮಸಭೆ ಭಾರತೀಕರಣಗೊಳ್ಳಬೇಕು, ನೆಲದ ಭಾಷೆಯಲ್ಲಿ, ಸಂಸ್ಕೃತಿಯಲ್ಲಿ ಬೇರು ಬಿಡಬೇಕು ಎಂಬ ಕೂಗು ಆಗಾಗ ಕೇಳಿಬರುತ್ತಲೇ ಇರುತ್ತದೆ. ಹಿಂದೆ ಮೂರ್‍ನಾಲ್ಕು ಶತಮಾನಗಳ ಹಿಂದೆಯೇ ತನ್ನನ್ನೇ ತಾನು ರೋಮನ್ ಬ್ರಾಹ್ಮಣ ಸನ್ಯಾಸಿ ಎಂದು ಕರೆದುಕೊಂಡಿದ್ದ ಮಿಷನರಿ ರಾಬರ್ಟ ಡಿ ನೋಬಿಲಿ, ಕಾವಿ ತೊಟ್ಟಿದ್ದರಂತೆ, ಕಮಂಡಲು ಹಿಡಿದಿದ್ದರಂತೆ! 

  ಈಗಾಗಲೇ, ಕೇರಳಿಗರ ನಾಡಹಬ್ಬ ಓಣಂ, ತಮಿಳರ ಸುಗ್ಗಿಹಬ್ಬ ಪೊಂಗಲ್- ಹಬ್ಬಗಳು ಚರ್ಚಿನ ಬಾಗಿಲಿಗೆ ಬಂದಿವೆ. ಕನ್ನಡಿಗರ ದಸರಾ, ದೀಪಾವಳಿ ಚರ್ಚಿನೊಳಗೆ ಕಾಲಿಡಲು ತುದಿಗಾಲಲ್ಲಿ ನಿಂತಿವೆ. ಹಿಮಬೀಳದ ನಮ್ಮ ಪರಿಸರದಲ್ಲಿ, ಸಾರಂಗಗಳು ಓಡಿಸುವ ಹಿಮಬಂಡಿ ಏರಿ ಸಾಂತಾಕ್ಲಾಸ್ ಬರುತ್ತಾನೆ ಎಂದುಕೊಳ್ಳುವುದು ಒಂದು ಅಭಾಸವೇ ಸರಿ, 

  ನಲವತ್ತು ವರ್ಷಗಳ ಹಿಂದೆಯೇ ನಮ್ಮೂರಿನ ಉಪದೇಶಿ ಅಜ್ಜ ಬನ್ನಪ್ಪ, ಸಾಂತಾಕ್ಲಾಸ್ ತಾತನಾಗಿ ಎಮ್ಮೆಯ ಮೇಲೆ ಕುಳಿತುಕೊಂಡು ಬಂದು ಮಕ್ಕಳಿಗೆ ಸಿಹಿ ತಿಂಡಿ, ಆಟಿಕೆ ಸಾಮಾನುಗಳನ್ನು ಒಪ್ಪಿಸುತ್ತಿದ್ದುದು, ನೆಲಮೂಲದಲ್ಲಿಯೇ ಕ್ರಿಸ್ತನನ್ನು ಕಾಣುವ ಅಮಾಯಕನೊಬ್ಬನ ಪ್ರಯತ್ನ ಎಂಬುದನ್ನು ಸುಲಭದಲ್ಲಿ ಅಲ್ಲಗಳೆಯಲಾಗದು.

--------------------------------

ಎಫ್.ಎಂ.ನಂದಗಾವ್, ಬೆಂಗಳೂರು

---------------------------------

(ಕೆಲವು ಪದಗಳ ಅರ್ಥಗಳು:  ಉಪದೇಶಿ = ಕೆಟಕಿಸ್ಟ್, ಧರ್ಮದಂಡ =  ಕ್ರೂಸರ್,  ಮೇತ್ರಾಣಿ = ಬಿಷಪ್, ಧರ್ಮಕ್ಷೇತ್ರ = ಡಯಾಸಿಸ್, ಧರ್ಮಕೇಂದ್ರ = ಪ್ಯಾರಿಷ್, ಪಾಲನಾ ಗುರು = ಪ್ಯಾರಿಷ್ ಪ್ರೀಸ್ಟ್, ಹಾಡುತಂಡ =ಕ್ವಾಯರ್, ಕ್ರಿಸ್ಮಸ್ ಹಾಡುಗಳು = ನೆಟಿವಿಟಿ ಸಾಂಗ್ಸ್, ಕ್ರಿಸ್ಮಸ್ ತಾತ = ಸಾಂತಕ್ಲಾಸ್)



ಓದಿದ ಪುಸ್ತಕಗಳಿಂದ

ಕನ್ನಡದ ಬಗ್ಗೆ ಅತ್ಯಂತ ಹೆಚ್ಚು ಕವನಗಳನ್ನು ಬರೆದವರು ಕುವೆಂಪು. ಉಳಿದವರು ನಾವೆಲ್ಲ ನೆನಪಲ್ಲಿ ಇಟ್ಟುಕೊಳ್ಳಬಹುದಾದ ಉತ್ಕೃಷ್ಟ ಕವಿತೆಗಳನ್ನು ಬರೆದಿದ್ದಾರೆ. 

ಒಂದೇ ಒಂದೇ ಒಂದೇ ಕರ್ನಾಟಕ ಒಂದೇ

ಹಿಂದೆ ಮುಂದೆ ಎಂದೆ ಕರ್ನಾಟಕ ಒಂದೇ 

ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ

ಇಲ್ಲಿಯ ಜನ ಮನ ಭಾಷೆಯು ಕನ್ನಡವದು ಒಂದೇ?

- ದ ರಾ ಬೇಂದ್ರೆ 

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ 

ಸಾಯೋತನಕ ಸಂಸಾರದಲ್ಲಿ ಗಂಡಾ ಗುಂಡಿ 

ಏರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ 

ಇರೋದ್ರೊಳಗೆ ಒಮ್ಮೆ ನೋಡು ಜೋಗಾದ್ಗುಂಡಿ 

- ಮೂಗೂರು ಮಲ್ಲಪ್ಪ

 ಎನಿತು ಇನಿದು ಈ ಕನ್ನಡ ನುಡಿಯು

ಮನವನು ತಣಿಸುವ ಮೋಹನ ಸುಧೆಯು!

ಗಾನವ ಬೆರೆಯಿಸಿ ವೀಣೆಯ ದನಿಯೊಳು

ವಾಣಿಯ ನೇವುರ ನುಡಿಸುತೆ ಕುಣಿಯಲು

ಮಾಣದೆ ಮೆರೆಯುವ ಮಂಜುಲ ರವವೋ?

ಎನಿತು ಇನಿದು ಈ ಕನ್ನಡ ನುಡಿಯು !

- ಆನಂದಕಂದ (ಬೆಟಗೇರಿ ಕೃಷ್ಣ ಶರ್ಮ)


ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ

ಬಾಯ್ ಒಲಿಸಾಕಿದ್ರೂನೆ-

ಮೂಗ್ನಲ್ ಕನ್ನಡ್ ಪದವಾಡ್ತೀನಿ !

ನನ್ ಮನಸನ್ ನೀ ಕಾಣೆ 

- ಜಿ ಪಿ ರಾಜರತ್ನಂ 

ನನ್ನ ಕನ್ನಡ ನುಡಿಯೆ ನೀನೆಷ್ಟು ಚಂದ 

ಏನು ಗೀಚಿದರು ಆಗುವುದು ಶ್ರೀಗಂಧ 

ಸಿಂಗರದ ಗಣಿ ನಿನ್ನ ಶಬ್ದ ಸಂಪತ್ತು

ಬಂಗಾರಗಿಂತಲೂ ಶ್ರೇಷ್ಠ ನುಡಿ ಮುತ್ತು 


ಬಂಗಾರವೆನ್ನುವುದು ಕನ್ನಡದ ಭಾಷೆ

ನುಡಿಯಲ್ಲಿ ಮೂಡುವುದು ನನ್ನ ಆಸೆ 

ನನ್ನ ಮಡದಿಗೆ ಕೂಡಾ ಕನ್ನಡವೆ ಚಿನ್ನ

ಕನ್ನಡದ ನುಡಿ ನನ್ನ ಜೀವಿತದ ಅನ್ನ

- ದಿನಕರ ದೇಸಾಯಿ 

ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ

ಎಲ್ಲರೂ ಎದ್ದೆದ್ದು ಓಡಿ ಬನ್ನಿ

ಕನ್ನಡದ ಗಡಿಕಾಯೆ, ಗುಡಿಕಾಯೆ, ನುಡಿಕಾಯೆ

ಕಾಯಲಾರೆನೆ ಸಾಯೆ ಓ ಬನ್ನಿ -ಬೆಂಕಿ ಬಿದ್ದಿದೆ ಮನೆಗೆ!

ಅಕ್ಕಂದಿರೆ ಅಣ್ಣಂದಿರೆ, ತಂಗಿಯರೆ ತಮ್ಮಂದಿರೆ

ಬೆಂಕಿಯನ್ನಾರಿಸಲು ಬೇಗ ಬನ್ನಿ

ಕನ್ನಡದ ಒಲವೊಂದೆ ಛಲವೊಂದೆ, ನೆಲವೊಂದೆ

ನಾಡ ನುಳಿಸುವೆನಂದರೆ ಓಡಿ ಬನ್ನಿ ಬೆಂಕಿ ಬಿದ್ದಿದೆ ಮನೆಗೆ!

- ಕಯ್ಯಾರ ಕಿಞ್ಞಣ್ಣ ರೈ 

ಹೊತ್ತಿತೋ ಹೊತ್ತಿತು ಕನ್ನಡದ ದೀಪ

ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ..

ಹೊತ್ತಿತೋ ಹೊತ್ತಿತು ಕನ್ನಡದ ದೀಪ

ಹೊತ್ತಿತೋ.. ಹೊತ್ತಿತು?ಕನ್ನಡದ ದೀಪ

ಉರಿವವರು ಬೇಕಿನ್ನು ಇದರೆಣ್ಣೆಯಾಗಿ

ಸುಡುವವರು ಬೇಕಿನ್ನು ನಿಡುಬತ್ತಿಯಾಗಿ..

ಧರಿಸುವವರು ಬೇಕಿನ್ನು ಸಿರಿಹಣತೆಯಾಗಿ

- ಸಿದ್ದಯ್ಯ ಪುರಾಣಿಕ


ಶಿಕ್ಷಣ - ಶಿವಮೂರ್ತಿ

 ಪ್ರಾಚೀನ ಕಾಲದ ಇತಿಹಾಸದಿಂದಲೂ ಇಂದಿನ ಸಮಕಾಲೀನ ಇತಿಹಾಸದವರೆಗೂ ಶಿಕ್ಷಣ ಅನ್ನೋದು ಒಂದು ಅತ್ಯಂತ ವಿಶಿಷ್ಟವಾದ ಸಂಗತಿ. ಅಂದಿನಿಂದ ಇಂದಿನವರೆಗೂ ಶಿಕ್ಷಣ ಸಾಕಷ್ಟು ಜನರಿಗೆ ಬದುಕನ್ನ ರೂಪಿಸಿಕೊಟ್ಟಿದೆ. ಅನಾಗರಿಕರನ್ನು ನಾಗರಿಕರನ್ನಾಗಿ ಮಾಡುವ ವಿಶೇಷ ಶಕ್ತಿ ಶಿಕ್ಷಣಕ್ಕಿದೆ ಅನ್ನೋದು ಹೆಮ್ಮೆಯ ವಿಚಾರವೇ ಸರಿ. ಅಂದಿನ ಸಮಾಜದಲ್ಲಿ ಗುರುಕುಲ ಪದ್ಧತಿ ಇತ್ತು. ಜರು ಗುರುವಿನ ಗುಲಾಮರಾಗಿ ಶಿಕ್ಷಣವನ್ನ ದಕ್ಕಿಸಿಕೊಳ್ಳುತ್ತಿದ್ದರು. ಆದರೆ ಇಂದಿನ ಆಧುನಿಕ ಯುಗದಲ್ಲಿ ಅದು ಮಾತಿಗೆ ನಿಲುಕದ್ದಾಗಿದೆ. ಆದರೂ ಇಂದಿಗೂ "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎಂದೂ ಸಾರಿಕೊಂಡು ಬರುತ್ತಿದ್ದೇವೆ. ಅದು ಈಗಲೂ ಸತ್ಯವೇ ಆಗಿದೆ. ಅಂದು ಶಿಕ್ಷಣ ಪಡೆಯಬೇಕಾದರೆ ಇಂತಹದ್ದೇ ವಿಷಯವನ್ನು ಆಯ್ದು ಕೊಳ್ಳಬೇಕೆಂಬ ಯಾವುದೇ ಕಟ್ಟುಪಾಡುಗಳಿರಲಿಲ್ಲ. ಅದು ಅವರವರ  ಆಸಕ್ತಿಗೆ ಬಿಟ್ಟದ್ದಾಗಿತ್ತು. ಆದರೆ ಪ್ರಸ್ತುತ ನಮ್ಮ ದೇಶದಲ್ಲಿ ಪದವಿಗೂ ಮುನ್ನ ಆಯ್ದ ವಿಷಯಗಳನ್ನೇ  ಮುಂದೆ ಉನ್ನತ ವ್ಯಾಸಂಗದಲ್ಲಿ ಆಯ್ದು ಕೊಳ್ಳಬೇಕು ಎನ್ನುವಂತಹ ನಿಯಮಗಳು ನಮ್ಮ ಶಿಕ್ಷಣ ಪದ್ಧತಿಯಲ್ಲಿದೆ. 

ಯಾವುದೇ ದೇಶವಾಗಲಿ, ಪ್ರದೇಶವಾಗಲಿ ಅಲ್ಲಿನ ಭೌಗೋಳಿಕ ವಿಚಾರಗಳು ಬದಲಾದಂತೆ ಅಲ್ಲಿನ ಸಾಮಾಜಿಕ ಸ್ಥಿತಿ ಆರ್ಥಿಕ ಸ್ಥಿತಿ ಅಂತೆಯೇ ಶೈಕ್ಷಣಿಕ ಸ್ಥಿತಿಯೂ ಕೂಡ ಬದಲಾಗುವುದರಲ್ಲಿ ಯಾರ ಅನುಮತಿಯ ಅವಶ್ಯಕತೆ ಇರುವುದಿಲ್ಲ ಅದು ತನ್ನಿಂತಾನೇ ಬೆಳೆದು ಹಬ್ಬಿ ಬಿಟ್ಟಿರುತ್ತೆ. ನಮ್ಮ ದೇಶ ಇವತ್ತು  ಜನಸಂಖ್ಯೆಯಲ್ಲಿ ಜಾಗತಿಕವಾಗಿ ೨ನೇ ಸ್ಥಾನವನ್ನ ಗಳಿಸಿಕೊಂಡಿದೆ. ನಾವು ಜನಸಂಖ್ಯೆಯು ಒಂದು ಸಂಪನ್ಮೂಲ ಎಂದು ಹೇಳಿಕೊಳ್ಳುತ್ತೇವೆ, ಅದು ನಿಜವೂ ಹೌದು. ನಮ್ಮ ದೇಶದಲ್ಲಿ ಎಲ್ಲಾ ಜಾತಿಯ ಜನರಿಗೂ ಎಲ್ಲಾ ಧರ್ಮದ ಜನರಿಗೂ ಅವರ ಬದುಕನ್ನು ಸುಸಜ್ಜಿತವಾಗಿ ರೂಪಿಸಿಕೊಳ್ಳಲು ಭಾರತದ ಸಂವಿಧಾನ ಅವಕಾಶ            ಕಲ್ಪಿಸಿಕೊಟ್ಟಿದೆ. ಅದೇ ರೀತಿ ಸರ್ವರಿಗೂ ಶಿಕ್ಷಣವನ್ನು ಪಡೆಯಲು ಸಂವಿಧಾನ ಹಕ್ಕು, ಅವಕಾಶ ನೀಡಿದೆ. ಇಷ್ಟಾದರೂ ನಮ್ಮಲ್ಲಿ ವಿಪರೀತ ಬಡತನ ವಿಪರೀತ ನಿರುದ್ಯೋಗದ ಸಮಸ್ಯೆ ಮಾತ್ರ ಅರಗಿಸಿಕೊಳ್ಳಲಾರದ ಸಂಗತಿಯಾಗಿದೆ.

ಬಡತನ ನಿರುದ್ಯೋಗದಂತಹ ರಾಷ್ಟ್ರಮಟ್ಟದ ಸಮಸ್ಯೆಗಳು ರಾಜಕೀಯವೆಂಬ ಭ್ರಷ್ಟಾಚಾರದಲ್ಲಿ ನುಲುಗಿ ಹೋಗಿವೆ. ಯಾವುದೇ ಒಂದು ದೇಶ ಅದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಯಾಗಲು ಮುಖ್ಯ ಮತ್ತು ಮೂಲಭೂತ ಕಾರಣವೆಂದರೆ ಅಲ್ಲಿನ ಗುಣಮಟ್ಟ ಶಿಕ್ಷಣದ ವ್ಯವಸ್ಥೆ. ನಮ್ಮಲ್ಲಿ ಸಾಕಷ್ಟು ಶಾಲಾ ಕಾಲೇಜುಗಳಿವೇ ಆದರೆ ಅಲ್ಲಿ ನುರಿತ ಮತ್ತು ಅನುಭವಿ ಶಿಕ್ಷಕರ ಕೊರತೆ ಹೆಚ್ಚಾಗಿದೆ. ಪ್ರಸ್ತುತ ಶಿಕ್ಷಣವು ಕೇವಲ ಅಂಕಗಳಿಗಷ್ಟೇ ಸೀಮಿತವಾಗಿದೆ. ಜ್ಞಾನದ ಹಸಿವನ್ನು ಬೆಳೆಸಬೇಕಾದ ಶಿಕ್ಷಣ ಸಂಸ್ಥೆಗಳು ಇಂದು ಕೇವಲ ಅಂಕಗಳ ಪೈಪೋಟಿಗಾಗಿ ಸೆಣಸಾಡುತ್ತಿವೆ. ಇಂತಿಷ್ಟು ಅಂಕಗಳನ್ನ ಪಡೆಯಲೇಬೇಕೆಂಬ ಭಯದ ನೆರಳಲ್ಲಿ ಬೆಳೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಪುಸ್ತಕದಲ್ಲಿರುವ ವಿಷಯಗಳು ಕೇವಲ ಕಂಠಪಾಠವಾಗಿವೆ ವಿನಃ ಅವರ ಬದುಕಿಗೆ ಆಸರೆಯಾಗುವಲ್ಲಿ ವಿಫಲವಾಗಿವೆ. ಶಿಕ್ಷಣ(ಜ್ಞಾನ) ಎಂಬುವುದು ಮನುಷ್ಯನಿಗೆ ಜೊತೆಯಾಗಬೇಕು, ಆತಂಕಕ್ಕೆ ಆಸರೆಯಾಗಬೇಕು, ಮಾನಸಿಕ ಭಯವನ್ನೂ ಹೋಗಲಾಡಿಸಬೇಕು ಅಂದಾಗ ಶಿಕ್ಷಣಕ್ಕೊಂದು ಅರ್ಥ ಸಿಕ್ಕಂತಾಗುತ್ತದೆ. ಈಗಿನ ಶಿಕ್ಷಣ ಮಾತ್ರ ಕೇವಲ ಅಂಕ ಮತ್ತು ಉದ್ಯೋಗ ಪಡೆಯಲಿಕ್ಕೆ ಮಾತ್ರ ಸೀಮಿತವಾಗಿರುವುದು ಖಂಡನೀಯ. 

ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ಏಳು ಬೀಳು ಇದ್ದೆ ಇರುತ್ತವೆ. ಅಂತಹ ಪರಿಸ್ಥಿತಿಯಲ್ಲೂ ಆತ ಎದೆಗುಂದದೆ  ತನ್ನ ಜೀವನವ ಪ್ರಾಯೋಗಿಕವಾಗಿ ಕಟ್ಟಿಕೊಳ್ಳಲು ಶಿಕ್ಷಣ ವ್ಯವಸ್ಥೆ ಮತ್ತು ಸರ್ಕಾರದ ಯೋಜನೆಗಳು ಹೊಸ ರೂಪು-ರೇಷೆಗಳನ್ನ ಜಾರಿಗೆ ತರಬೇಕಾಗಿದೆ.


ಫಿನ್ ಲ್ಯಾಂಡ್, ಜಪಾನ್, ಉತ್ತರ ಕೋರಿಯಾ, ಇಸ್ರೇಲ್, ಚೀನಾ, ಅಮೇರಿಕಾದಂತಹ ಹತ್ತು ಹಲವು ರಾಷ್ಟ್ರಗಳು ಜಗತ್ತಿನಲ್ಲಿಯೇ ಯಾವ ದೇಶಗಳು ಬಿಡುಗಡೆಗೊಳಿಸದಷ್ಟು ಹಣವನ್ನ ಶಿಕ್ಷಣಕ್ಕಾಗಿ ಮತ್ತು ಅದರ ಲಾಲನೆ ಪಾಲನೆಗಾಗಿ ದೊಡ್ಡ ಮೊತ್ತದ ಅನುದಾನವನ್ನ ಬಿಡುಗಡೆ ಗೊಳಿಸುತ್ತಾ ಅದರ ಅಭಿವೃದ್ಧಿಗಾಗಿ ಶ್ರಮಿಸುತ್ತಿವೆ. ಈ ದೇಶಗಳೆಲ್ಲ ಸರಿಸುಮಾರು ತಮ್ಮ ದೇಶದ ಒಟ್ಟು GDP ಯಲ್ಲಿ ಶೇಕಡ ೫% ಕ್ಕಿಂತ ಹೆಚ್ಚಿನ ಅನುದಾನವನ್ನು ಶಿಕ್ಷಣಕ್ಕಾಗಿ ಪ್ರತ್ಯೇಕವಾಗಿ ಮೀಸಲಿಡುತ್ತಿದ್ದಾರೆ. ಆದರೆ ನಮ್ಮ ದೇಶವು  ಇಲ್ಲಿಯವರೆಗೂ ಶಿಕ್ಷಣಕ್ಕಾಗಿ ಖರ್ಚುಮಾಡಿದ ಅನುದಾನ ಕೇವಲ GDP  ಶೇಕಡ ೩% ಕ್ಕಿಂತ ಕಡಿಮೆ ಹಣವನ್ನ ಎನ್ನುವುದು ಮಾತ್ರ ಸಹಿಸಲಾರದ ವಿಚಾರ. ೧೯೬೮ ಮತ್ತು ೧೯೮೬ರ ಕಾಲದಲ್ಲಿ ಈಗಾಗಲೇ ಶಿಕ್ಷಣದ ಬದಲಾವಣೆಗಳು ನಮ್ಮಲ್ಲಿ ನಡೆದಿವೆ. ಆದರೆ ಈಗಲೂ ಕೂಡ ಅವುಗಳ ಬದಲಾವಣೆಯೂ ನಮಗೆ ಯಾವ ರೀತಿಯಲ್ಲೂ  ಸಹಕಾರಿಯಾಗಿಲ್ಲ. ಇನ್ನೇನೂ ಭಾರತವು ಶಿಕ್ಷಣದ ಹಿತಕ್ಕಾಗಿ ೨೦೩೦ನ್ನು ಗುರಿಯನ್ನಿಟ್ಟುಕೊಂಡು 2020 New Education policyಎಂದು ಹೊಸ ಯೋಜನೆಯನ್ನು ಹಾಕಿಕೊಂಡಿದೆ. ಕೌಶಲ್ಯ ಮತ್ತು ವೃತ್ತಿ ಶಿಕ್ಷಣಕ್ಕಾಗಿ ವಿಭಿನ್ನವಾದ ವಿಚಾರಗಳನ್ನು ಕೈಗೆತ್ತಿಕೊಂಡಿರುವುದು ಖುಷಿಯ ವಿಚಾರವೇ ಸರಿ. ಆದರೆ ಅದಕ್ಕಿಂತ ಮೊದಲು ನಾವು ಗ್ರಾಮೀಣ ಮಟ್ಟದ ಶಿಕ್ಷಣದ ಕುರಿತು ಒಂದಷ್ಟು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ.

ನಮ್ಮದು ಹೆಚ್ಚಾಗಿ ಗ್ರಾಮಗಳಿಂದ ಕೂಡಿದ ದೇಶ. ನಮ್ಮ ಗ್ರಾಮಗಳ ಅಭಿವೃದ್ಧಿಯಾದಾಗಲೇ ದೇಶದ ಅಭಿವೃದ್ಧಿಯಾಗುತ್ತದೆ ಎಂದರ್ಥ. ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳ ಪೌಷ್ಟಿಕತೆ ಮತ್ತು ಆಹಾರಕ್ಕೆ ಸಂಬಂಧಪಟ್ಟಂತೆ  ಶಿಸ್ತಿನ ಯೋಜನೆಗಳನ್ನು ರೂಪಿಸತಕ್ಕದ್ದು. ಇನ್ನು ಅಲ್ಲಿ ಈಗಲೂ ನಡೆಯುತ್ತಿರುವ ಮಕ್ಕಳ ಮೇಲಿನ ಶೋಷಣೆ ದೌರ್ಜನ್ಯಗಳನ್ನು ತಡೆದು, ಬಡತನ    ಹೆಸರಿನಲ್ಲಿಯೇ ಅಲ್ಲಿನ ತಂದೆ ತಾಯಿಗಳು ಇಂದು ಏನೂ ಅರಿಯದ ಮುಗ್ಧ ಕಂದಮ್ಮಗಳನ್ನು ಕೆಲಸಕ್ಕೆ  ದೂಡುತ್ತಿದ್ದಾರೆ. ಅವರನ್ನು ಬಾಲ್ಯದಲ್ಲಿಯೇ ಶಿಕ್ಷಣ ವಂಚಿತರನ್ನಾಗಿ ಮಾಡುವಲ್ಲೂ ಪೋಷಕರು ಪ್ರೇರಣೆ ನೀಡಿದಂತಾಗಿದೆ. ಇದಕ್ಕೆ ತಕ್ಕಂತೆ ಸರಿಯಾದ ಕಾನೂನು ಕ್ರಮಗಳನ್ನು ಜಾರಿ ತಂದು ಬಾಲ್ಯ ಶಿಕ್ಷಣದಿಂದ ಪದವಿ ಶಿಕ್ಷಣದವರೆಗೂ ಶಿಕ್ಷಣವ ಪಡೆಯುವುದನ್ನು ಕಡ್ಡಾಯಗೊಳಿಸಬೇಕಾಗಿದೆ.

----------------

ಶಿವಮೂರ್ತಿ, 

ರಾಯಚೂರು

----------------



ಚಾರ್ವಾಕನೂ... ಆಟದ ಆಚಾರ್ಯರೂ॒ - ಡಾ. ದಿನೇಶ್ ನಾಯಕ್

 


ಕಳೆದ ಸಂಚಿಕೆಯಿಂದ... 

ಭಾಗ - ೨

ವಾಟ್ಸಾಪ್, ಟ್ವಿಟರ್, ಇನ್ಸ್ಟಾಗ್ರಾಮ್ ಕಾಲದಲ್ಲೂ ಹಾಜಿಯಬ್ಬರ ಅಂಗಡಿಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರ್ತಾರೆ ಅಂದರೆ ಅದೊಂದು ಸೋಜಿಗವೇ ಸರಿ. ಆಧುನಿಕತೆಯ ವಿಪರೀತ ಆಕರ್ಷಣೆ ಇರುವ ಇಂದಿನ ದಿನಗಳಲ್ಲೂ ಹಾಜಿಯಬ್ಬರ ಅಂಗಡಿ ಕಮ್ ಹೊಟೇಲ್ ಆಕರ್ಷಣೆಯ ಕೇಂದ್ರವಾಗಿ ಸೂಜಿಗಲ್ಲಿನಂತೆ ಜನರನ್ನು ತನ್ನೆಡೆಗೆ ಸೆಳೆಯಲು ಸಾಧ್ಯವಾಗಿದೆ ಅಂದರೆ ಅದಕ್ಕೆ ಅವರ ಒಳ್ಳೆಯತನವೂ ಕಾರಣವಿರಬಹುದು. ಊರ ಎಲ್ಲ ಜಾತಿ-ಧರ್ಮದ ಜನರು ಹಾಜಿಯಬ್ಬರ ಖಾಯಂ ಗಿರಾಕಿಗಳು. ವಯಸ್ಸಾದವರು, ಮಧ್ಯವಯಸ್ಸಿನವರು, ಹೆಂಗಸರಿಂದ ಹಿಡಿದು ಅಂಡ್ರ್ಯಾಯ್ಡ್ ಮೊಬೈಲಿನಲ್ಲಿ ಬಿದ್ದು ಪಬ್ಜಿ ಆಡುತ್ತಾ, ಫೇಸ್‌ಬುಕ್‌ಲ್ಲಿ ಹೊರಳಾಡುತ್ತಾ, ಜಗತ್ತನ್ನೇ ಮರೆಯುವ ಹೊಂತಕಾರಿ ಪಡ್ಡೆ ಹುಡುಗರಿಗೂ ಇಲ್ಲಿ ಏನೇನೋ ಕೆಲಸಗಳು. ಬೀಡಿ-ಸಿಗರೇಟ್ ಸೇದುವವರಿಗೆ, ದೇಸೀ ಬೀಡ ಮೆಲ್ಲುವವರಿಗಂತೂ ರಾತ್ರಿ ೧೧ ಗಂಟೆಯಾದರೂ ಮನೆಗೆ ಹೋಗಲು ನೆನಪಾಗುವುದಿಲ್ಲ.

ಕೊನೆಗೆ ಹಾಜಿಯಬ್ಬರೆ, ಅಣ್ಣೆರೆ ಎಂಕ್ ಇಲ್ಲ್ ಉಂಡ್, ಒರ್ತಿ ಬೊಡೆದಿ ಉಲ್ಲಲ್, ಜೋಕ್ಲ್ ಉಲ್ಲೆರ್, ಎನನ್ ಕೇನ್‌ನಕ್ಲು ಉಲ್ಲೆರ್ (ಅಣ್ಣಂದಿರೇ ನನಗೂ ಮನೆ ಎಂಬುದೊಂದು ಇದೆ, ಒಬ್ಬಳು ಹೆಂಡತಿ ಇದ್ದಾಳೆ, ಮಕ್ಳು ಇದ್ದಾರೆ, ನನ್ನನ್ನೂ ಕೇಳುವವರು ಇದ್ದಾರೆ) ಎನ್ನುತ್ತ ಎಲ್ಲರನ್ನು ಒತ್ತಾಯದಲ್ಲಿ ಕಳುಹಿಸಿ ಅಂಗಡಿ ಮುಚ್ಚಿದ್ದುಂಟು. ಹಾಜಿಯಬ್ಬರ ಅಂಗಡಿ ಅಂದ್ರೆ ಅದು ಬರೇ ಅಂಗಡಿ ಅಲ್ಲ. ಚಹದ ಚಟವನ್ನು ಅಂಟಿಸಿಕೊಂಡಿದ್ದ ಹಾಜಿಯಬ್ಬರಿಗೆ ಆಗಾಗ ಕುಡಿಯಲು ನೀರಿನ ಬದಲಿಗೆ ಚಹವೇ ಬೇಕು. ಹಾಗಾಗಿ ದೂರದ ಸಾಹೇಬ್ ನಗರದಿಂದ ಹೊಟ್ಟೆಪಾಡಿಗೆಂದು ದೇವಪುರಕ್ಕೆ ವಲಸೆ ಬಂದ ಶುರುವಿಗೆ ತಮ್ಮ ಚಹದ ದಾಹಕ್ಕಾಗಿ ಒಂದು ಗ್ಯಾಸ್ ಸಿಲಿಂಡರ್ ಮತ್ತು ಸ್ಟೌ ಹೊತ್ತು ತಂದಿದ್ದರು. ಹಾಜಿಯಬ್ಬರಿಗೆ ತಾವು ಚಹ ಕುಡಿಯುತ್ತಿರುವಾಗ ಯಾರಾದರೂ ಗಿರಾಕಿಗಳು ಬಂದ್ರೆ ಅವರಿಗೂ ಚಹ ಕೊಡುವಷ್ಟು ಉದಾರ ಮನಸ್ಸು. ಕ್ರಮೇಣ ಚಹದ ಅತಿಥಿಗಳು ಹೆಚ್ಚಾಗುತ್ತಾ ಹೋದ್ರು. ಕೊನೆಗೊಂದು ದಿನ ತಾನೇ ಯಾಕೆ ಇಲ್ಲೇ ಒಂದು ಸಣ್ಣ ಕ್ಯಾಂಟೀನ್ ಶುರು ಮಾಡಬಾರದು ಎಂಬ ಯೋಚನೆ ಬಂದು ಅದನ್ನೇ ಕಾರ್ಯರೂಪಕ್ಕೆ ತಂದರು. ಗಿರಾಕಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ಹಾಜಿಯಬ್ಬರು, ಅಂಗಡಿಯ ಗೋಡೆಗೊಂದು ಅಡಿಕೆ ಸೋಗೆಯ ಮಾಡು ಮಾಡಿ ಬಿದಿರಿನ ತಟ್ಟಿ ಕಟ್ಟಿ ಸಣ್ಣ ರೂಮ್ ಮಾಡಿಯೇ ಬಿಟ್ರು. ಊರ ಜನರಿಗೆ ಬಂದು ನಿಲ್ಲೋದಕ್ಕೆ, ನಿಂತು ಮಾತಾಡೋದಕ್ಕೆ ಈ ಅಂಗಡಿ ಕಮ್ ಹೊಟೇಲ್ ಒಂದು ನೆಮ್ಮದಿಯ ತಾಣವಾಗಿ ಬಿಟ್ಟಿತು. ಬಂದ ಜನ ಸುಮ್ನೆ ಇರ್ತಾರೆಯೇ..? ಮನಸ್ಸಿಗೆ ತೋಚಿದ ಹಾಗೆ ಮಾತಾಡ್ತಾರೆ. ಬಾಯಿಗೆ ಬಂದುದನ್ನು ಬಂದ ಹಾಗೆ ಹೊರಹಾಕ್ತಾರೆ. ಈ ದೇಶದಲ್ಲಿ ಎಲ್ಲಾ ಕಡೆ ನಡೆಯುವ ಹಾಗೆ ಜಗತ್ತಿನ ಕುರಿತ ಕಥೆ ಕಲಾಪಗಳು ಇಲ್ಲೂ ನಿತ್ಯ ನಡೆಯುತ್ತಲೇ ಇವೆ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಮೊನ್ನೆ ಮೊನ್ನೆಯವರೆಗಿನ ಪೌರತ್ವ ತಿದ್ದುಪಡಿ ಕಾಯ್ದೆಯವರೆಗೂ ಇವರು ಮಾತಾಡುವವರೆ. ಮಾತುಕತೆ, ಚರ್ಚೆ, ವಾದ-ವಿವಾದ, ಹರಟೆ ಮುಂದುವರಿದು ತಾರಕಕ್ಕೇರಿ ಕೆಲವೊಮ್ಮೆ ಎಲ್ಲ ಸೇರಿ ದೇಶವನ್ನು ಬದಲಾಯಿಸುವ ಮಟ್ಟಿಗೆ ಅವರ ಉತ್ಸಾಹ ಏರಿ ಹೋಗುವುದೂ ಇದೆ. ಕೊನೆಗೆ ಎಲ್ಲವೂ ಒಮ್ಮಿಂದೊಮ್ಮೆಲೆ ನಿಂತುಹೋಗಿ ಸ್ತಬ್ಧವಾಗುವುದೂ ಉಂಟು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಹಾಜಿಯಬ್ಬರು ತಾವಾಯ್ತು ತಮ್ಮ ಕೆಲಸವಾಯ್ತು ಅಂತ ತಮ್ಮ ಪಾಡಿಗೆ ತಮ್ಮ ಕಾಯಕದಲ್ಲಿ ಮುಳುಗಿರುತ್ತಿದ್ದರು.

ಕರಾವಳಿಯ ಜನರಿಗೆ ಬೆಳಗ್ಗೆ ಎದ್ದು ಕಾಫಿ ಕುಡಿಯದಿದ್ದರೂ ಪರವಾಗಿಲ್ಲ ಆದ್ರೆ ಉದಯವಾಣಿ ದಿನಪತ್ರಿಕೆಯನ್ನು ಓದದಿದ್ರೆ ಏನೋ ಕಳಕೊಂಡ ಹಾಗೆ. ಅಷ್ಟರ ಮಟ್ಟಿಗೆ ಈ ಪತ್ರಿಕೆ ಊರ ಎಲ್ಲ ಜಾತಿಧರ್ಮದವರಿಗೆ ಹುಚ್ಚು ಹಿಡಿಸಿದೆ. ಈ ಊರಿನ ಜನರಿಗೆ ಉದಯವಾಣಿ ಪತ್ರಿಕೆಯಲ್ಲಿ ಬಂದುದೆಲ್ಲವೂ ಪರಮ ಸತ್ಯ. ಹಾಜಿಯಬ್ಬರ ಅಂಗಡಿಗೆ ಬರುತ್ತಿದ್ದದ್ದು ಇದೊಂದೇ ಪತ್ರಿಕೆ. ಈ ಪತ್ರಿಕೆಯ ಖಾಯಂ ಓದುಗ ರಿಕ್ಷಾದ ಕಾಂತಣ್ಣ ಪತ್ರಿಕೆ ಓದಿ ಓದಿ ತಾನು ಈ ದೇಶ, ಸಂವಿಧಾನ ಎಲ್ಲವನ್ನೂ ಸಾಕಷ್ಟು ತಿಳಿದುಕೊಂಡಿದ್ದೇನೆ, ಈ ಅಂಗಡಿಗೆ ಬರುವವರಲ್ಲಿ ತಾನೊಬ್ಬ ಮಾತ್ರ ಉಳಿದವರಿಗಿಂತ ಹೆಚ್ಚು ವಿಚಾರವಂತ ಎಂಬ ಅಹಮಿಕೆಯಲ್ಲಿ ಮಾತಾಡುವುದನ್ನು ಕಂಡು ಅಲ್ಲೇ ಇದ್ದ ದೇವಪುರದ ದಿವಂಗತ ಗೋವಿಂದರಾಯರ ಮಗ ಚಾರ್ವಾಕ ಒಮ್ಮೆ ಮೇಲಿಂದ ಮೇಲೆ ಪ್ರಶ್ನೆ ಕೇಳಿ ಅವರನ್ನು ಕಕ್ಕಾಬಿಕ್ಕಿಗೊಳಿಸಿ ಬಾಯಿ ಮುಚ್ಚಿಸಿದ್ದ. ಚಾರ್ವಾಕನ ತಂದೆ ಗೋವಿಂದ ರಾಯರು ತಾವು ಮಾಡುತ್ತಿದ್ದ ಬಾಚಾಣಿಕೆಯ ಕೆಲಸವನ್ನು ಭಾರೀ ಶ್ರದ್ಧೆಯಿಂದ ತಮ್ಮ ಕೊನೆಯ ಉಸಿರಿನವರೆಗೂ ಮಾಡಿದವರು. ಅವರು ಮಾಡುವ ಬಾಚಾಣಿಕೆ ಕೆಲಸ ಗಾಂಧಿಯ ನೂಲುವ ಕೆಲಸಕ್ಕೆ ಸಮಾನ ಎಂಬ ಗೌರವ, ಅಭಿಮಾನ ಅವರಲ್ಲಿತ್ತು ಎಂದು ಊರ ಜನ ಹೇಳುತ್ತಿದ್ದರು. ಆಗೆಲ್ಲ ಪ್ರಾಣಿಗಳ ಕೊಂಬಿನಿಂದ ಮಾಡುವ ಬಾಚಾಣಿಕೆಗಳನ್ನೇ ತಲೆ ಬಾಚಲು ಬಳಸುತ್ತಿದ್ದರು. ಅಂಥಾ ಸಂದರ್ಭದಲ್ಲಿ ಗೋವಿಂದ ರಾಯರು ತಮ್ಮ ಬಡತನದಲ್ಲೂ ಕೊನೆಯ ಒಬ್ಬ ಮಗನಿಗಾದರೂ ಡಾಕ್ಟರ್ ಓದಿಸಿಬೇಕೆಂಬ ಆಸೆಯೋ ಅಥವಾ ಬಾಪು ಗಾಂಧಿಯ ಮೇಲೆ ಪ್ರೀತಿಯೋ ಏನೋ ತಿಳಿಯದು. ಯಾಕೋ ಮಗನಿಗೆ ಚರಕ ಎಂಬ ಹೆಸರಿಟ್ಟಿದ್ದರು. ಆದರೆ ಈ ಚರಕನ ವರ್ತನೆ ನೋಡುವವರ ಕಣ್ಣಿಗೆ ಉಳಿದ ಹುಡುಗರಿಗಿಂತ ಬೇರೆಯಾಗಿ ಕಾಣುತ್ತಿತ್ತು. ಅವನ ಮಾತು ಅನೇಕರಿಗೆ ತಲೆಗೆ ಹೋಗುತ್ತಿರಲಿಲ್ಲ. ಏನೋ ವಿಚಿತ್ರ, ವಕ್ರ ಅಂತ ಭಾವಿಸುತ್ತಿದ್ದರು. ಊರ ಜನರಿಗೆ ಚರಕ ತೀರಾ ಅಧಾರ್ಮಿಕನಾಗಿ ಕಂಡುದರಿಂದಲೋ ಅಥವಾ ಚರಕ ಹೆಸರನ್ನು ಉಚ್ಚರಿಸಲು ಕಷ್ಟವಾಗುತ್ತಿದ್ದುದರಿಂದಲೋ ಏನೋ ಅವರ ಬಾಯಲ್ಲಿ ಚರಕ ಹೋಗಿ ದೇವರನ್ನು ನಂಬದ ಚಾರ್ವಾಕ್ ಎಂದಾಯಿತು. ಅಲ್ಲಿಂದ ಹಾಜಿಯಬ್ಬರ ಅಂಗಡಿಯಲ್ಲಿ ಬಂದು ಸೇರುವವರೆಲ್ಲ ಚರಕನನ್ನು ಚಾರ್ವಾಕ ಅಂತಲೇ ಕರೆಯಲು ಶುರುಮಾಡಿ ಆ ಹೆಸರೇ ಅವನಿಗೆ ಪರ್ಮನೆಂಟ್ ಆಯಿತು.

ಜನರ ಚಪಲಕ್ಕೊಂದು ಎಡೆ ಬೇಕು, ಕುಂಡೆ ಊರಲು ಒಂದು ನೆಲೆ ಬೇಕು ಎನ್ನುವಂತೆ ಜನ ಸದಾ ಹಾಜಿಯಬ್ಬರ ಅಂಗಡಿ ಕಮ್ ಹೊಟೇಲಲ್ಲಿ ಬಂದು ಸೇರುತ್ತಿದ್ದರು. ದೇವಪುರಕ್ಕೆ ಅದೊಂದು ಪ್ರಮುಖ ಹೊಟೇಲ್ ಕಮ್ ಅಂಗಡಿ ಎನ್ನಲು ಯಾವುದೇ ಅಡ್ಡಿ ಇಲ್ಲ. ಭಾನುವಾರ ಎಂದರೆ ಶಾಮಣ್ಣನ ಮಗ ಅಭಿಷೇಕ್‌ಗೆ ಬಹಳ ಖುಷಿ. ವಾರದ ಆರು ದಿನಗಳೂ ಬೆಳಗ್ಗೆ ಬೇಗನೆ ಎದ್ದು ದೂರದ ಪಾಂಡವಪುರಕ್ಕೆ ಕೆಲಸಕ್ಕೆ ಹೋಗುವುದರಿಂದ ಅದೊಂದು ದಿನ ಅವನಿಗೆ ತಡವಾಗಿ ಏಳುವುದಕ್ಕೆ ಇರುವ ದಿನ. ರವಿವಾರ ಹೆಚ್ಚಾಗಿ ತಡವಾಗಿಯೇ ಏಳುವ ಆತ ಆ ಭಾನುವಾರ ಮಾತ್ರ ಸ್ವಲ್ಪ ಬೇಗನೆ ಎದ್ದು ಹಾಜಿಯಬ್ಬರ ಅಂಗಡಿಯಲ್ಲಿ ಎಲ್ಲರ ಅಚ್ಚುಮೆಚ್ಚಿನ ಉದಯವಾಣಿ ಪೇಪರ್ ಓದುತ್ತಾ ತನ್ನ ಗೆಳೆಯ ಚಾರ್ವಾಕನ ಬರವಿಗಾಗಿ ಕಾಯುತ್ತಿದ್ದ. ಚಾರ್ವಾಕ ಹಾಜಿಯಬ್ಬರ ಅಂಗಡಿಗೆ ಬಂದಾಗಲೆಲ್ಲಾ ಏನಾದರೂ ಸುದ್ದಿ ಹೊತ್ತು ತಂದು ಒಂದಷ್ಟು ಮಾತಾಡುವುದು ರೂಢಿ. ಸಿನೆಮಾ, ನಾಟಕ, ಯಕ್ಷಗಾನ, ಕ್ರಿಕೆಟ್, ರಾಜಕೀಯದ ಬಗ್ಗೆ ಯಾವಾಗಲೂ ಒಂದಷ್ಟು ಹೊಸ ಹೊಸ ವಿಷಯಗಳನ್ನು ಹೇಳುತ್ತಿದ್ದುದರಿಂದ ಚಾರ್ವಾಕನೆಂದರೆ ಹಾಜಿಯಬ್ಬರಿಂದ ಹಿಡಿದು ಅಂಗಡಿಯಲ್ಲಿ ಜಮಾಯಿಸುವ ಎಲ್ಲರಿಗೂ ಕುತೂಹಲ, ಕೆಲವೊಮ್ಮೆ ಮತ್ಸರವೂ. ದಿನಾ ಬೆಳಗಾದರೆ ಸಾಕು ಏನಾದರೂ ಒಂದು ವಿಷಯ ಎತ್ತಿಕೊಂಡು ಒಂದಷ್ಟು ಚರ್ಚೆ ನಡೆಸುತ್ತಿದ್ದ. ಏನೂ ಇಲ್ಲದಾಗ ಲೋಕಾಭಿರಾಮ ಮಾತಾಡುತ್ತಿದ್ದ. ಕೆಲವೊಮ್ಮೆ ಮಾತಿನ ಭರದಲ್ಲಿ ಏನಾದರೂ ಎಡವಟ್ಟು ಮಾಡಿಕೊಂಡು ತನಗೆ ತಾನೆ ಇರಿಸು ಮುರಿಸು ತಂದುಕೊಳ್ಳುತ್ತಿದ್ದ. ಆಗೆಲ್ಲ ತಾನಾಡಿದ ಮಾತುಗಳ ಬಗ್ಗೆ ತಾನೇ ವಿಮರ್ಶೆ ಮಾಡಿಕೊಳ್ಳುತ್ತಾ ಎಲ್ಲೋ ಎಡವಿದೆ ಎಂದು ಭಾವಿಸಿಕೊಂಡು ಮೂಡ್‌ಆಫ್ ಮಾಡಿಕೊಂಡು ಖಿನ್ನನಾಗುತ್ತಿದ್ದ.

ತಮ್ಮದೇ ಕಷ್ಟ ಕಾರ್ಪಣ್ಯಗಳಿಂದ ಬಸವಳಿದ ಜನರಿಗೆ ಚಾರ್ವಾಕನಲ್ಲಾಗುತ್ತಿದ್ದ ಸೂಕ್ಷ್ಮ ಬದಲಾವಣೆಗಳನ್ನು ಗಮನಿಸಲು ಸಮಯವುಂಟೆ ಅಥವಾ ವ್ಯವಧಾನವುಂಟೇ..? ಆದ್ರೆ ಇತ್ತೀಚಿನ ಕೆಲವು ದಿನಗಳಿಂದ ಚಾರ್ವಾಕ್ ಅಂಗಡಿಗೆ ಬರುತ್ತಿಲ್ಲ ಮತ್ತು ತನಗೂ ಮಾತಿಗೆ ಸಿಗದ್ದನ್ನು ಮನಸ್ಸಿಗೆ ಇಳಿಸಿಕೊಂಡ ಅಭಿ, `ಏನಾಯ್ತು ಇವನಿಗೆ? ಕಾಣ್ತಾನೆ ಇಲ್ವಲ್ಲ ಅಂತ ಯೋಚಿಸುತ್ತಾ, ಒಂದು ಫೋನ್ ಮಾಡ್ತೇನೆ ಎಂದು ಮೊಬೈಲ್ ಕೈಗೆತ್ತಿಕೊಂಡ. ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿಪ್ರದೇಶದಿಂದ ಹೊರಗಿದ್ದಾರೆ, ಸ್ವಲ್ಪ ಸಮಯದ ಬಳಿಕ ಕರೆ ಮಾಡಿ.. ಎಂಬ ಹೆಣ್ಣಿನ ಧ್ವನಿ ಕೇಳುತ್ತಿದ್ದಂತೆ ಅಭಿಷೇಕ್ ನಿರಾಶನಾದ. ಮತ್ತೆ ಗೆಳೆಯನ ಬಗ್ಗೆ ಯೋಚನಾ ಲಹರಿ ಮುಂದುವರಿಯಿತು. ಸದಾ ಚಿನಕುರುಳಿಯಂತೆ, ಎಣ್ಣೆಯಲ್ಲಿ ಹೊಟ್ಟುವ ಸಾಸಿವೆಯಂತೆ ಪಟಪಟ ಎಂದು ಹೊಟ್ಟುತ್ತಿದ್ದ ಇವನನ್ನು ನಾನು ಸರಿಯಾಗಿ ಗಮನಿಸಿಯೇ ಇಲ್ಲ ಎಂದು ಭಾವಿಸತೊಡಗಿದ ಅಭಿ, ಈಗ ಕಳೆದ ಕೆಲವು ದಿನಗಳನ್ನು ನೆನಪಿಗೆ ತಂದುಕೊಳ್ಳುತ್ತಿದ್ದಾನೆ. `ಹೌದು, ಇವನಲ್ಲಿ ಏನೋ ಒಂದು ಸಂಚಲನ ಉಂಟಾಗಿದೆ, ಇವನ ತಲೆಯಲ್ಲಿ ಏನೋ ಓಡುತ್ತಿದೆ, ಇವನೊಳಗೆ ಏನೋ ತುಂಬಿದೆ, ಎಂದು ಬಲವಾಗಿ ಅನ್ನಿಸಲು ಶುರುವಾಯಿತು. ಯಾರನ್ನೂ ಯಾವತ್ತೂ ಗಂಭೀರವಾಗಿ ಪರಿಗಣಿಸುವ ಜಾಯಮಾನದವನೇ ಅಲ್ಲದ ಈ ಅಭಿಗೆ ಯಾರ ಭಾವಪ್ರಪಂಚದ ಪರಿಚಯವಿರಲಿಲ್ಲ. ಯಾವ ಮನಸ್ಸಿನ ಒಳಗುದಿಯನ್ನು ಅರ್ಥೈಸಲು ಕಿಂಚಿತ್ ಸಾವಧಾನಿಸಿ ಗೊತ್ತಿಲ್ಲದ ಅವಸರದ ಈ ಮನುಷ್ಯ ಜೀವಿಗೆ ಈಗ ಮಾತ್ರ ಏನೋ ಅನ್ನಿಸಲು ಶುರುವಾಗಿದೆ. ಗೆಳೆಯನ ವಿಲಕ್ಷಣ ನಡವಳಿಕೆ ಕೊರೆಯಲು ಶುರುವಾಗಿ ಅದರ ತೀವ್ರತೆ ಹೆಚ್ಚುತ್ತಿದ್ದಂತೆ ಮತ್ತೆ ಮೊಬೈಲ್ ಕೈಗೆತ್ತಿಕೊಂಡು ನಂಬರ್‌ಗೆ ಕ್ಲಿಕ್ ಮಾಡಿ ಕಿವಿಗಿಡುತ್ತಿರಬೇಕಾದ್ರೆ, ದೂರದಲ್ಲಿ ಚಾರ್ವಾಕ ಗಾಡಿಯಲ್ಲಿ ಹೋಗುತ್ತಿರುವುದನ್ನು ಗಮನಿಸಿದ. `ಅರೆ ಇಂವ ಈಗೆಲ್ಲಿಗೆ ಹೊರಟಿದ್ದಾನೆ? ಎಂದು        ಯೋಚಿಸುವಾಗಲೇ ಚಾರ್ವಾಕ ದೇವಪುರದ ಮೊದಲ ತಿರುವನ್ನು ದಾಟಿ ಮುಂದೆ ಸಾಗಿಯಾಗಿತ್ತು. ಅಭಿ ನೋಡು ನೋಡುತ್ತಿದ್ದಂತೆಯೇ ಚಾರ್ವಾಕ ಮೇರೆಮಜಲ್ ಸರ್ಕಲ್‌ನಿಂದ ಮುಂದೆ ಹೋಗಿ ರಾಷ್ಟ್ರೀಯ ಹೆದ್ದಾರಿ ಸೇರಿಯಾಗಿತ್ತು. ಇನ್ನು ಇವನನ್ನು ಕೂಗಿ ಪ್ರಯೋಜನವಿಲ್ಲ ಅಂದುಕೊಂಡು ತನ್ನ ಗಾಡಿ ಹಿಡಿದು ಅವನನ್ನು ಕುತೂಹಲದಿಂದ ಹಿಂಬಾಲಿಸಿದ.

ರೈಲ್ವೆ ಟ್ರ್ಯಾಕ್ ದಾಟಿ ಮುಂದೆ ದೂರದಲ್ಲಿ ಒಂದು ಗುಡಿ. ಸುತ್ತ ಬೆಳೆದು ನಿಂತ ಎತ್ತರದ ವಿಶಾಲವಾದ ಮರಗಳ ದಟ್ಟವಾದ ನೆರಳಲ್ಲಿ ಚಾರ್ವಾಕ್‌ನ ನೀಲಿ ಬಣ್ಣದ ಗಾಡಿಯನ್ನು ಕಂಡ ಅಭಿ, ಸ್ವಲ್ಪ ದೂರದಲ್ಲಿ ತನ್ನ ಗಾಡಿಯನ್ನು ನಿಲ್ಲಿಸಿ ಮುಂದೆ ಮುಂದೆ ಬಂದ. ಎಲ್ಲರಂತೆ ದೇವಸ್ಥಾನಕ್ಕೆ ಹೋಗುವುದು, ಮೂರ್ತಿಗೆ ಕೈಮುಗಿಯುವುದು ಇವ್ಯಾವುದನ್ನು ಬಹಿರಂಗವಾಗಿ ರಾಜಾರೋಷವಾಗಿ ಎಂದೂ ಮಾಡದಿದ್ದ ಚಾರ್ವಾಕ ತನ್ನ ಹೆಸರಿಗೆ ಅನ್ವರ್ಥದಂತೆ ಎಲ್ಲರ ಕಣ್ಣಲ್ಲೂ ನಾಸ್ತಿಕನಾಗಿದ್ದ. ಆದರೆ ಈಗ ಗುಡಿ ಸೇರಿದ್ದಾನಲ್ಲ ಎಂದು ಬೆರಗಾದ ಅಭಿ, ಏನು ಮಾಡುವುದೆಂದು ಗೊಂದಲಕ್ಕೀಡಾದ. ಅನಿರ್ವಚನೀಯವಾದ ಆಧ್ಯಾತ್ಮಿಕ ಭಾವ ಹುಟ್ಟಿ ತನ್ಮಯರಾಗಬಹುದಾದ ಪ್ರಶಾಂತವಾದ ಆ ವಾತಾವರಣದಲ್ಲಿ ಮಿಂದೇಳುತ್ತಿದ್ದ ಅಭಿ, ತಾನು ಈ ಹಿಂದೆ ಎಂದೂ ಕಾಲಿಡದ ಈ ಗುಡಿಯೊಳಗೆ ನಿಧಾನಕ್ಕೆ ಹೆಜ್ಜೆ ಇಟ್ಟ. ಜಾತ್ರೆ ಮತ್ತು ವಿಶೇಷ ಕಾರ್ಯಕ್ರಮದ ಸಂದರ್ಭದಲ್ಲಿ ಬ್ರಾಹ್ಮಣೇತರರಿಗೆ ಊಟ ಹಾಕುವ, ದೇಗುಲದ ಪ್ರಾಂಗಣಕ್ಕೆ ತಾಗಿಕೊಂಡಿರುವ ಸಭಾಂಗಣದ ಮೋಟು ಗೋಡೆಯ ಮರೆಯಲ್ಲಿ ಒಂದು ಕ್ಷಣ ನಿಂತ. ಒಂದು ಬಗೆಯ ವಿಸ್ಮಯ ಮತ್ತು ಸಂಕಟದಲ್ಲಿ `ಇಂವ ಇಲ್ಲಿಗ್ಯಾಕೆ ಬಂದ? ಎಂದು ಯೋಚಿಸುತ್ತಾ ಸಭಾಂಗಣದ ಸುತ್ತಲೂ ನೋಡಿದಾಗ ಗಾಳಿಯಾಡಲು ಮತ್ತು ಬೆಳಕಿಗಾಗಿ ಹಾಕಲಾದ ಗೆದ್ದಲು ಹಿಡಿದ ಹಳೆ ಕಾಲದ ಮರದ    ಕಿಟಕಿಯೊಂದನ್ನು ಕಂಡ. ತಡ ಮಾಡದೆ ಕಿಟಕಿಯ ಬಳಿ ಸಾರಿದ ಅಭಿ, ಧೂಳು ಹಿಡಿದು ಕೆಂಪಾಗಿದ್ದ, ಪಳೆಯುಳಿಕೆಯಂತಿದ್ದ ಆ ಕಿಟಕಿಯ ಮೂಲಕ ಕತ್ತು ಬಾಗಿಸಿ ಕಣ್ಣು ಹಾಯಿಸಿದ. ತಾನು ಯಾವತ್ತೂ ಕಲ್ಪಿಸಿದ ದೃಶ್ಯವೊಂದನ್ನು ಅಲ್ಲಿ ಅಭಿ ಕಂಡ. ಕಾಣುತ್ತಿರುವುದು ವಾಸ್ತವವೇ ಅಥವಾ ಕನಸೇ ಎಂದು ತನ್ನನ್ನು ತಾನೇ ಚಿವುಟಿ ನೋಡಿದ. ತನ್ನ ಕಣ್ಣನ್ನು ತಾನೇ ನಂಬದಾದ. ತನ್ನ ಗೆಳೆಯ ಹತ್ತಾರು ಮಕ್ಕಳ ಮಧ್ಯದಲ್ಲಿ ಕಾಲುಗಳನ್ನು ಅಗಲಿಸಿ, ದೇಹವನ್ನು ಕುಗ್ಗಿಸಿ ಮಂಡಲ ಸ್ಥಿತಿಯಲ್ಲಿ ನಿಂತಿದ್ದಾನೆ. ಬಾಯಿತಾಳವನ್ನು ಹೇಳುತ್ತಿದ್ದಾನೆ. ನಿಧಾನಕ್ಕೆ ಒಂದೊಂದೇ ಹೆಜ್ಜೆಯನ್ನು ಎತ್ತಿ ಎತ್ತಿ ಇಡುತ್ತಿದ್ದಾನೆ. ತಕ್ಷಣಕ್ಕೆ ಇದು ಏನು ಎಂಬುದನ್ನು ಅರ್ಥಮಾಡಿಕೊಳ್ಳಲು ಕಷ್ಟಪಟ್ಟ ಅಭಿ, ದಂಗಾಗಿ ಅಲ್ಲಿ ಹಾಗೆ ನಿಂತು ಬಿಟ್ಟ. ಮಕ್ಕಳ ಬಾಯಿತಾಳದ ಧ್ವನಿಯೊಂದಿಗೆ ಚಾರ್ವಾಕನ ಹೆಜ್ಜೆಯ ಸದ್ದು ಕೇಳುತ್ತಲೇ ಇತ್ತು.

ಧೀಂ, ಧಿತ್ತ, ತಕಿಟ, ತಕಧಿಮಿ, ತಕ ತಕಿಟ, ತಕಿಟ ತಕಧಿಮಿ

ಧೀಂ ಕಿಟ ಕಿಟತಕ ತರಿಕಿಟ ಕಿಟತಕ

ಎಲ್ಲವನ್ನು ನೋಡುವ ತವಕದಲ್ಲಿ ಆತ ಅಲ್ಲೇ ಆ ಕಿಟಿಕಿಗೆ ಮತ್ತಷ್ಟು ಹತ್ತಿರವಾಗಿ ಒರಗಿದ. ಒರಗಿದನೆಂದರೆ ಬರೇ ಒರಗಿದ್ದಲ್ಲ. ಯೋಚನಾಮಗ್ನನಾದ. ಮೊನ್ನೆ ಮೊನ್ನೆ ಕ್ರಿಸ್‌ಮಸ್ ರಜೆಯವರೆಗೂ ಸರಿಯಾಗಿಯೇ ಇದ್ದ. ಯಾವಾಗ ಕೇಳಿದ್ರು ಓದು-ಬರಹ, ಸೆಮಿನಾರ್, ನಾಟಕ ಅದು ಇದು ಕಾರ್ಯಕ್ರಮ, ಒಂದು ಗಳಿಗೆ ಪುರ್ಸೋತು ಇಲ್ಲ ಅಂತ ಹೇಳ್ತಿದ್ದ ಇವ್ನಿಗೆ ಏನೋ ಆಗಿದೆ. ಇವನೊಳಗೆ ಯಾರೋ ಬಂದಿದ್ದಾರೆ. ಇಲ್ಲದಿದ್ರೆ ಈ ಆಟದ ಹೆಜ್ಜೆಯಲ್ಲಿ ಇವ್ನಿಗೆ ಈಗ ಒಮ್ಮಿಂದೊಮ್ಮೆಗೆ ಮನಸ್ಸಾಗಲು ಸಾಧ್ಯವೇ ಇಲ್ಲ ಎಂದುಕೊಳ್ಳುತ್ತಾ ಇವನು ಯಾವಾಗ ಹೊರಬರುತ್ತಾನೆ ಎಂದು ಕಾಯುತ್ತಾ ನಿಂತ. ಎಷ್ಟೋ ಸಮಯ ಕಳೆದ ಮೇಲೆ ಮಕ್ಕಳೆಲ್ಲ ಗುಡಿಯ ಪ್ರಾಂಗಣದಿಂದ ಹೊರಬರುತ್ತಿರುವುದನ್ನು ಕಂಡ. ಚಾರ್ವಾಕನು ದೃಢ ಕಾಯದ, ತುಂಬು ಕೂದಲಿನ, ನಡುವಯಸ್ಸಿನ ವ್ಯಕ್ತಿಯೊಬ್ಬರ ಹತ್ತಿರ ಏನೋ ಉತ್ಸಾಹದಿಂದ ಮಾತಾಡುತ್ತಾ, ನಗುತ್ತಾ ನಿಧಾನಕ್ಕೆ ಬರುತ್ತಿದ್ದ. ಇವನಿಗೆ ನಾಟ್ಯವನ್ನು ಕಲಿಸುವ ಗುರುಗಳು ಅವರಿರಬೇಕೆಂದು ಭಾವಿಸಿದ ಅಭಿ ಕೂಡಲೇ ಸಭಾಂಗಣದಿಂದ ಹೊರಬಂದು ಚಾರ್ವಾಕನ ಮುಂದೆ ಪ್ರತ್ಯಕ್ಷನಾಗಿ ದೇಶಾವರಿ ನಗೆ ಬೀರಿದ. ಚಾರ್ವಾಕನಿಗೂ ಕಸಿವಿಸಿ. ಒಮ್ಮೆ ಗಂಟಲು ಒಣಗಿದಂತಾಯಿತು. ತಾನು ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಬಂದೆನೆಂದು ಸುಳ್ಳು ಹೇಳಲು ಚಡಪಡಿಸುತ್ತಿರುವ ಅಭಿಯನ್ನು ಗಮನಿಸಿದ ಚಾರ್ವಾಕ ಮನಸ್ಸಲ್ಲೇ ಏನೋ ಹೇಳತೊಡಗಿದ.

ಅಭಿ ಸ್ವಲ್ಪಮಟ್ಟಿಗೆ ವಿಚಲಿತನಾಗಿ ಸರಿಯಾಗಿ ಏನು ಕೇಳಬೇಕೆಂದು ತೋಚದೆ, ಚಾರ್ವಾಕ ನೀನೇನು ಇಲ್ಲಿ..? ಇದೆಲ್ಲ ಏನು? ಏನಾಗಿದೆ ನಿನಗೆ? ಇತ್ತೀಚಿಗೆ ಮಾತಿಗೇ ಸಿಗುತ್ತಿಲ್ಲ? ಎಂದು ಅವಸರ ಅವಸರವಾಗಿ ಒಂದೇ ಉಸುರಿಗೆ ಕೇಳಿಯೇ ಬಿಟ್ಟ. ಚಾರ್ವಾಕ ಅಭಿಯನ್ನು ಗುಡಿಯಲ್ಲಿ ನೋಡಿದ್ದು ಅನಿರೀಕ್ಷಿತ. ಅವನ ಪ್ರಶ್ನೆಗಳು ಮಾತ್ರ ಅವನಿಗೆ ಅನಿರೀಕ್ಷಿತ ಎನಿಸಲಿಲ್ಲ. ಆದರೆ ಅದು ಅನಪೇಕ್ಷಿತವಾಗಿತ್ತು. ಏನು ಉತ್ತರ ನೀಡಬೇಕೆಂದು ಗೊತ್ತಾಗದೇ ವನದುರ್ಗೆ ಮೂರ್ತಿಯ ಕಡೆಗೆ ಮುಖ ತಿರುಗಿಸಿ ಮೌನದ ಸಾಕಾರ ಮೂರ್ತಿಯಂತೆ ನಿರ್ಲಿಪ್ತನಾಗಿ ನಿಂತುಬಿಟ್ಟ. ಅಭಿ, ಅವನು ಕಲ್ಲಾಗಿದ್ದಾನೆಯೇ ಅಥವಾ ಇದು ಕಲ್ಲು ಕರಗುವ ಸಮಯವೇ ಎಂದು ಗೊಂದಲಕ್ಕೊಳಗಾಗಿ ಮೊದಲ ಮಳೆಗೆ ಕಾಯುವ ಚಾತಕ ಪಕ್ಷಿಯಂತೆ ಅವನ ಹಿಂದೆ ಉತ್ತರಕ್ಕಾಗಿ ಕಾಯುತ್ತ ನಿಂತ. ಕೆಲವೊಮ್ಮೆ ತಾನು ಹೋಗುತ್ತಿರುವ ದಾರಿ ಮತ್ತು ಮಾಡುತ್ತಿರುವ ಕೆಲಸ ಸರಿಯೋ ತಪ್ಪೋ ಎಂದು ನಿರ್ಧಾರಕ್ಕೆ ಬರಲಾಗದೇ, ಇವುಗಳ ಬಗ್ಗೆ ಹೇಳಲು ಧೈರ್ಯ ಸಾಕಾಗದೇ, ನಾಚುವ, ಅಂಜುವ ಸ್ವಭಾವದ ಚಾರ್ವಾಕ ತನ್ನನ್ನು ವಿಚಾರಿಸುತ್ತಿರುವ ಪ್ರೀತಿಯ ಗೆಳೆಯನಿಗೆ ಉತ್ತರಿಸಲಾಗದೇ ಚಡಪಡಿಸುತ್ತಿದ್ದಾನೆ. ಅಲ್ಲಿಯವರೆಗೂ ನವಚೈತನ್ಯದಲ್ಲಿ ತುಂಬಿ ತುಳುಕಾಡುತ್ತಿದ್ದ ಆತ ಈಗ ಏನು ಮಾತಾಡಲಿ? ಯಾರಲ್ಲಿ ಮಾತಾಡಲಿ?, ನನ್ನ ಬೆನ್ನು ಹತ್ತಿ ಬಂದು ಪ್ರಶ್ನಿಸುತ್ತಿರುವ ಇವನಲ್ಲೇ ಅಥವಾ ಲೋಕದ ಜನರಲ್ಲಿ ತಾನು ಕಾಯುವವಳು ಎಂದು ನಂಬಿಕೆ ಹುಟ್ಟಿಸಿ ಇಲ್ಲೇ ಕಲ್ಲಾಗಿ ನೆಲೆ ನಿಂತಿರುವ ಈ ಜಡ ಮೂರ್ತಿಯಲ್ಲೇ? ಎಂದು ಚಿಂತಿಸುತ್ತಾ ತನ್ನಲ್ಲೇ ಮಾತಾಡಲು ತೊಡಗಿದ.

ಮುಂದುವರಿಯುವುದು॒

--------------------------------

ಡಾ. ದಿನೇಶ್ ನಾಯಕ್

ಉಪನ್ಯಾಸಕರು

ಸಂತ ಅಲೋಶಿಯಸ್ ಕಾಲೇಜು, ಮಂಗಳೂರು.

----------------------------------


ಕಥಾದನಿ

 ಹೇಗೆ ನಿಲ್ಲಿಸುವುದೆಂದು ಮರೆತು ಬಿಟ್ಟಿದ್ದೆ

ಆಂಡ್ರ್ಯೂ ಕಾರ್ನೆಗಿ ಪ್ರಪಂಚದಲ್ಲಿ ಅತೀ ಶ್ರೀಮಂತರಲ್ಲಿ ಒಬ್ಬ. ಅವನನ್ನು ಒಮ್ಮೆ ಈ ರೀತಿ ಪ್ರಶ್ನಿಸಲಾಯಿತ್ತು; ನಿಮ್ಮಲ್ಲಿ ಸಾಕಷ್ಟು ಆಸ್ತಿ ಇತ್ತು, ಕನಿಷ್ಠ ನಿಮ್ಮ ಬದುಕಿನ ಕೊನೆದಿನಗಳಾದರೂ ಎಲ್ಲವನ್ನು ಬಿಟ್ಟು ನೆಮ್ಮದಿಯಿಂದ ಬಾಳಬಹುದಿತ್ತಲ್ಲ? ಹೌದು, ನಿಜ ಆದರೆ ನಾನು ಸಂಪಾದಿಸುವ ನನ್ನ ಚಟವನ್ನು ನಿಲ್ಲಿಸಲಾಗಲಿಲ್ಲ, ಹೇಗೆ ನಿಲ್ಲಿಸುವುದೆಂದು ಮರೆತು ಬಿಟ್ಟಿದ್ದೆ!

-----------

ದೇಶ ಕಟ್ಟುವ ಪುಣ್ಯಕೆಲಸವನ್ನು ಮಾಡ್ತಿದ್ದೀನಿ

ಮಟ ಮಟ ಮಧ್ಯಾಹ್ನದ ಬಿಸಿಲಿನಲ್ಲಿ ಬಿಸಿ ಬಿಸಿ ಸುಡುತ್ತಿದ್ದ ಇಟ್ಟಿಗೆಯನ್ನು ಹೊತ್ತುಕೊಂಡು ಕಾರ್ಮಿಕರು ಓಡಾದುತ್ತಿದ್ದರು. ಅಲ್ಲಿಗೆ ಬಂದ ಸನ್ಯಾಸಿಯೊಬ್ಬರು, ನೀನು ಏನು ಮಾಡ್ತಾ ಇದ್ದೀಯಾ? ಎಂದು ಕೆಲಸಗಾರನೊಬ್ಬನನ್ನು ಕೇಳಿದರು. ಅದಕ್ಕೆ ಅವನು ನೋಡಿದ್ರೆ ಗೋತ್ತಾಗಲ್ವ ಕಲ್ಲುಮಣ್ಣು ಹೋರ್ತಿದೀನಿ ಎಂದ. ಅದೇ ಪ್ರಶ್ನೆಯನ್ನು ಪಕ್ಕದಲ್ಲಿದ್ದ ಇನ್ನೊಬ್ಬನನ್ನು ಸನ್ಯಾಸಿ ಕೇಳಿದ. ಅದಕ್ಕೆ ಅವನು ನಾನು ಕೂಲಿಗಾಗಿ ನನ್ನ ಸಂಸಾರಕ್ಕೆ ಆಹಾರವನ್ನು ಸಂಪಾದಿಸುತ್ತಿದ್ದೀನಿ ಎಂದ. ಸನ್ಯಾಸಿ ಮತ್ತೊಬ್ಬನೊಂದಿಗೆ ನೀನು ಏನು ಮಾಡ್ತಾ ಇದ್ದೀಯಾ? ಎಂದು ಅದೇ ಪ್ರಶ್ನೆಯನ್ನು ಕೇಳಿದರು. ಅದಕ್ಕೆ ಆ ಮೂರವನೆಯವನು ನಾನು ಮಕ್ಕಳ ವಿದ್ಯಾಭ್ಯಾಸಕ್ಕೆ ಶಾಲೆಯ ಕಟ್ಟಡವನ್ನು ಕಟ್ಟುತ್ತಿದ್ದೇನೆ ಎಂದು ಉತ್ತರಿಸಿದ. ಇದೇ ಪ್ರಶ್ನೆಯನ್ನು ಕೇಳಿದ ಇನ್ನೊಬ್ಬನ ಉತ್ತರ, ದೇಶ ಕಟ್ಟುವ ಪುಣ್ಯಕೆಲಸವನ್ನು ಮಾಡ್ತಿದ್ದೀನಿ.

-------------

ನ್ಯೂರಟಿಕ್ ಮಗು

ಪುಟ್ಟ ಮೇರಿ ತನ್ನ ತಾಯಿಯೊಂದಿಗೆ ಸಮುದ್ರ ತೀರದಲ್ಲಿದ್ದಳು. ಅಮ್ಮ ನಾನು ಮರಳಿನಲ್ಲಿ ಆಡಬಹುದೇ? ಪುಟ್ಟ ಮೇರಿ ತಾಯಿಯನ್ನು ಕೇಳಿದಳು. ಬೇಡ ಬೇಡ ನಿನ್ನ ಸ್ವಚ್ಛವಾದ ಬಟ್ಟೆ ಕೊಳೆಯಾಗುತ್ತದೆ ಎಂದು ಮಗಳನ್ನು ತಡೆದಳು. ಮತ್ತೊಮ್ಮೆ ಅಮ್ಮ ನಾನು ನೀರಿನಲ್ಲಿ ಆಟವಾಡಬಹುದೇ? ಮೇರಿ ಅಮ್ಮಳನ್ನು ಗೊಗರೆದಳು. ಬೇಡ ಮೇರಿ ನಿನ್ನ ಬಟ್ಟೆಗಳು ಒದ್ದೆಯಾಗುತ್ತದೆ ಮತ್ತು ನಿನಗೆ ಶೀತ ನೆಗಡಿ ಬರಬಹುದು ಮತ್ತೊಮ್ಮೆ ನೀರಿನಲ್ಲಿ ಆಟವಾಡಕೆಂಬ ಆಸೆಯಿಂದ ಇದ್ದ ಮೇರಿಯನ್ನು ತಾಯಿ ತಡೆದಳು. ನಾನು ಇತರ ಮಕ್ಕಳೊಂದಿಗೆ ಆಡಬಹುದೇ? ಮೇರಿ ಅಮ್ಮಳನ್ನು ವಿನಂತಿಸಿದಳು. ಬೇಡ ನೀನು ಜನಸಂದಣಿಯಲ್ಲಿ ಕಳೆದುಹೋಗುವೆ ಎಂದು ತಾಯಿ ಹೇಳಿದಳು. ಕೊನೆಗೆ ಅಮ್ಮ ನನಗೆ ಐಸ್‌ಕ್ರಿಮ್ ಕೊಡಿಸಿ ಎಂದು ಬೇಡಿಕೊಂಡಳು. ಅದಕ್ಕೆ ತಾಯಿ ಬೇಡ ಬೇಡ ಅದು ನಿನ್ನ ಗಂಟಲಿಗೆ ಒಳ್ಳೆಯದಲ್ಲ ಎಂದು ಹೇಳಿದಳು. ಮೇರಿ ಒಮ್ಮಲೇ ಜೋರಾಗಿ ಅಳಲು ಪ್ರಾರಂಭಿಸಿದಳು. ತಾಯಿ ತನ್ನ ಪಕ್ಕ ನಿಂತಿದ್ದ ತನ್ನ ಗೆಳತಿಯ ಕಡೆ ತಿರುಗಿ  ಅಬ್ಬಾ ಇಂಥ ತೆಲೆಕೆಟ್ಟ ನ್ಯೂರಟಿಕ್ ಮಗುವನ್ನು ನೀವು ಎಂದಾದರೂ ನೋಡಿದ್ದೀರಾ? ಎಂದ ಹೇಳತೊಡಗಿದಳು.

------------

 ಸಂಗ್ರಹ ಅನುವಾದ - ಇನ್ನಾ


ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು - ಡಾ. ಸಿಸ್ಟರ್ ಪ್ರೇಮ (SMMI)

 ---------------------------------------------------

ಹಿಂದಿನ ಸಂಚಿಕೆಯಲ್ಲಿ ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು ಎಂಬ ವಿಷಯದಡಿಯಲ್ಲಿ ಸಾಹಿತ್ಯ ಸಾಧಕ ಎ.ಎಂ ಜೋಸೆಫ್‌ರವರ ಬದುಕಿನ ಬಗ್ಗೆ ವಿವೇಚಿಸಿದ್ದೇವೆ. ಈ ಪ್ರಸ್ತುತ ಸಂಚಿಕೆಯಲ್ಲಿ ಮತ್ತೋರ್ವ ಸೃಜನಶೀಲ ಕನ್ನಡ ಕ್ರೈಸ್ತ ಸಾಹಿತಿ ಹಾಗು ಕಾದಂಬರಿಕಾರ ಡಾ.ನಾ.ಡಿಸೋಜರವರನ್ನು ಪರಿಚಯಿಸಿಕೊಡುವ ಪುಟ್ಟ ಪ್ರಯತ್ನ ಮಾಡಿರುತ್ತೇನೆ. 

-------------------------------------------------------

ಡಾ. ನಾ. ಡಿಸೋಜ :


ಡಾ.ನಾ.ಡಿಸೋಜ ಒಬ್ಬ ಉತ್ತಮ ಚಿಂತಕ, ಸೃಜನಶೀಲ ಸಾಹಿತಿ, ಕನ್ನಡ ಕಾದಂಬರಿ ಲೋಕದಲ್ಲಿ ತಮ್ಮನ್ನೇ ತಾವು ನಾಟಿಕೊಂಡು ಹೆಮ್ಮರವಾಗಿ ಬೆಳೆದಿರುವ ಕನ್ನಡದ ಖ್ಯಾತ ಕ್ರೈಸ್ತ ಕಾದಂಬರಿಕಾರ. ಕಾದಂಬರಿ ಕ್ರೇತ್ರಕ್ಕೆ ಸಂಬಂಧಿಸಿದಂತೆ ಡಾ.ನಾ.ಡಿಸೋಜರವರ ೪೦ ಕಾದಂಬರಿಗಳು, ೪೦೦ ಸಣ್ಣ ಕಥೆಗಳು ಹಾಗೂ ವಿಶೇಷವಾದ ಮಕ್ಕಳ ಸಾಹಿತ್ಯ, ನಾಟಕಗಳು, ಜೀವನ ಚರಿತ್ರೆಗಳು ಪ್ರಸ್ತುತ ಕನ್ನಡ ನೆಲೆಯಲ್ಲಿ ಅಧಿಕೃತ ಸ್ಥಾನವನ್ನು ಪಡೆದಿವೆ. ಈಗಾಗಲೇ ಇವರ ಬಗ್ಗೆ ೪ ಎಂ.ಫಿಲ್ ಮತ್ತು ಡಾಕ್ಟರೇಟ್ ಪ್ರಬಂಧಗಳು ಹೊರಬಂದಿವೆ. ಇಂತಹ ಸಂಪನ್ಮೂಲ ಕ್ರೈಸ್ತ ಸಾಹಿತಿಯ ಸಾಧನೆ ನಿಜವಾಗಿಯು ಶ್ಲಾಘನೀಯ. ಡಾ.ಡಿಸೋಜರಿಗೆ ಸಂಧಿರುವ ಸಾಹಿತ್ಯಿಕ ಗೌರವ ಪ್ರಶಸ್ತಿಗಳು ಹಾಗೂ ಜನಮನ್ನಣೆ ಪ್ರಸ್ತುತ ಕನ್ನಡ ಸಾಹಿತ್ಯದಲ್ಲಿ ಗಮನಾರ್ಹ. ಇವರ ಪ್ರಮುಖ ಕಾದಂಬರಿಗಳಾದ ಕಾಡಿನ ಬೆಂಕಿ ಮತ್ತು ದ್ವೀಪ ಚಲನಚಿತ್ರಗಳಾಗಿ ಮನ್ನಣೆ   ಪಡೆದಿವೆ. ಅಲ್ಲದೇ ಡಾ.ನಾ.ಡಿಸೋಜ ಒಬ್ಬ ಉತ್ತಮ ಚಿಂತಕರು ಹಾಗೂ ಕನ್ನಡ ನುಡಿಯ ಪರಿಚಾರಕರು ಮಿಗಿಲಾಗಿ ೨೦೧೪ರ ೮೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದಂತಹ ಒಬ್ಬ     ಧಿಮಂತ ಕ್ರೈಸ್ತ ಸಾಹಿತಿಯೂ ಹೌದು.

ಬದುಕು: ಇವರು ನಿಸರ್ಗದ ಮಡಿಲಾದ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ೬.೬.೧೯೩೭ರಂದು ಜನಿಸಿದರು. ತಂದೆ ಎಫ್. ಪಿ. ಡಿಸೋಜ, ತಾಯಿ ರೋಪಿನ್ ಡಿಸೋಜ. ಮಲೆನಾಡಿನ ಮಂದಾರದಲ್ಲಿ ಅರಳಿದ ಇವರ ಪ್ರಾಥಮಿಕ ಶಿಕ್ಷಣ ಸಾಗರ ಎಂಬ ಊರಿನ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಪ್ರಾರಂಭವಾಯಿತು. ಪ್ರಕೃತಿಯ ಪ್ರಭಾವ ಎಳೆಯ ಮನಸ್ಸಿನ ಮೇಲೆ ತುಂಬಾ ಪರಿಣಾಮವನ್ನುಂಟು ಮಾಡಿತು. ಜೊತೆಗೆ ತಂದೆ-ತಾಯಿಯ ಪ್ರೀತಿ, ಒಡಹುಟ್ಟಿದವರ ಒಡನಾಟ ಇವರ ಮನೋಲ್ಲಾಸಕ್ಕೆ ಕಾರಣವಾಯಿತು. ಅವರ ತಾಯಿ ಹೇಳುತ್ತಿದ್ದ ಜನಪದ ಕಥೆಗಳು ಮತ್ತು ಗೀತೆಗಳ ರಸದೂಟ ಮತ್ತು  ಮನೆಯಲ್ಲಿನ ಸಾಹಿತ್ಯಿಕ ವಾತಾವರಣ ಶ್ರೀಯುತರು ಬಹು ಎತ್ತರಕ್ಕೆ ಸಾಹಿತಿಯಾಗಿ ಬೆಳೆಯಲು ಪ್ರೇರಣೆಯಾಯಿತು ಎಂದರೆ ತಪ್ಪಾಗಲಾರದು.

ಡಾ. ನಾ.ಡಿಸೋಜ ಅವರ ತಾಯಿ ರೋಪಿನರವರು ಬಹಳಷ್ಟು ಜನಪದ ಕಥೆಗಳನ್ನು ಸ್ವಾರಸ್ಯವಾಗಿ, ಸಂಭಾಷಣಾ ಶೈಲಿಯಲ್ಲಿ ಆಯಾ ಪಾತ್ರಗಳು ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದರಂತೆ. ರಾಜ ರಾಣಿಯರ ಮತ್ತು ಸಂತರ ಕಥೆಗಳನ್ನು ಹೇಳಿಕೊಡುತ್ತಿದ್ದರಂತೆ. ಅಂಥ ಕಥೆಗಳಲ್ಲಿ ನೀಲಕಂಠರಾಯನ ಕಥೆ ನಾ.ಡಿಸೋಜರ ಮನಸ್ಸಿಗೆ ತುಂಬಾ ಹಿಡಿಸಿದ್ದಾಗಿ ಹೇಳುತ್ತಾರೆ. ಶಾಲಾ ಮಾಸ್ತರರಾಗಿದ್ದ ಇವರ ತಂದೆಯವರು ಕೂಡ ಸಾಹಿತ್ಯಾಭಿಮಾನಿ. ಇವರು ಮಕ್ಕಳಿಗೆ ಕಲಿಸಲೆಂದು ತಾವು ಬರೆದುಕೊಂಡಿದ್ದ ಕನ್ನಡ ಗೀತೆಗಳ ಪುಸ್ತಕದಲ್ಲಿ ನಾ.ಡಿಸೋಜರವರು ಓದಿದ ಪ್ರಥಮ ಕೃತಿ ದೋಣಿ ಸಾಗಲಿ ಅಷ್ಟೇ ಅಲ್ಲದೇ ಇತರೆ ಹಾಡುಗಳು ಐದನೇ ವಯಸ್ಸಿಗೇನೆ ನಾ.ಡಿಸೋಜರಿಗೆ ಬಾಯಿಪಾಠವಾಗಿದ್ದವು. ಶ್ರೀಯುತರ ತಂದೆ ಫಿಲಿಪ್ ಡಿಸೋಜರವರು ತಮ್ಮ ಉತ್ತಮ ಕೈ ಬರಹ ಹಾಗೂ ಸಾಹಿತ್ಯ ರಚನೆಗಾಗಿ ಮೈಸೂರು ಮಹಾರಾಜರಿಂದ ಪದಕ ಪಡೆದಿದ್ದರು ಎಂದ ಮೇಲೆ ಡಾ.ನಾ.ಡಿಸೋಜ ಅವರ ಸಾಹಿತ್ಯಿಕ ಪರಿಸರವೇನೆಂದು ವಿವರಿಸಿ ಹೇಳಬೇಕಾಗಿಲ್ಲ. 

ಡಾ.ನಾ.ಡಿಸೋಜರ ಮನೆಯಲ್ಲಿ ಜಾನಪದ ವಾತಾವರಣ ಎದ್ದು ಕಾಣುತ್ತಿಂತೆ. ಶಾಲೆಯಲ್ಲಿ ಅಂದಿನ ಪ್ರಸಿದ್ಧ ಕವಿಗಳಾಗಿದ್ದ ದಾರಬೇಂದ್ರೆ, ಕುವೆಂಪುರವರ ಪದ್ಯಗಳ ಬಾಯಿಪಾಠ ಶ್ರೀಯುತರ ಒಡಲಾಳದಲ್ಲಿ ಗೂಡುಕಟ್ಟಿದ್ದವು. ಸಾಗರದ ಪ್ರೌಢಶಾಲೆಯ ಕನ್ನಡ ಉಪಾಧ್ಯಾಯರು ಕನ್ನಡ ಸಾಹಿತ್ಯಾಭಿರುಚಿಯನ್ನು ಡಾ.ನಾ.ಡಿಸೋಜರ ಎದೆಯಲ್ಲಿ ಒತ್ತಿದರೂ, ಬೆಳೆಯಲಾಗದೆ, ಬರೆಯಲಾಗದೆ ತಮಗೆ ತಾವೇ ಅನೇಕ ಪ್ರಶ್ನೆಯನ್ನು ಹಾಕಿಕೊಳ್ಳುತ್ತಾ ಏಕೆ ಬರೆಯಬೇಕು? ಹೇಗೆ ಬರೆಯಬೇಕು? ಯಾರಿಗೆ ಬರೆಯಬೇಕು? ಈ ಪ್ರಶ್ನೆಗಳೇ ನನ್ನನ್ನು ಲೇಖಕರನ್ನಾಗಿ ಮಾಡಿದವು ಎಂದು ಶ್ರೀಯುತರು ತಾವೆ ಸ್ವತಃ ಅಭಿಪ್ರಾಯಪಟ್ಟಿರುತ್ತಾರೆ. ಚಿಕ್ಕ   ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಡಾ.ನಾ.ಡಿಸೋಜರ ಕುಟುಂಬವನ್ನು ಸಾಕಿದವರು ಇವರ ತಾಯಿ. ಓದು ಬರಹ ಸಾಕಷ್ಟು ಇಲ್ಲದಿದ್ದರೂ ಮನೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದ ಒಬ್ಬ ಧೀರ ಮಹಿಳೆ. ಮಕ್ಕಳ ಬಾಯಲ್ಲಿ ಒಂದು ಕೆಟ್ಟ ಶಬ್ದ ಬಂದರೂ ಬಾಯಿಗೆ ಮೆಣಸಿನ ಕಾಯಿ ಇಡುತ್ತಿದ್ದ ಶಿಸ್ತಿನ ತಾಯಿ, ನೆರೆಹೊರೆಯವರೊಂದಿಗೆ  ಅಭಿಮಾನದಿಂದ ಬದುಕಬೇಕು ಅನ್ನುವುದನ್ನು ಇವರಿಗೆ ಕಲಿಸಿದ, ಇವರ ಮೇಲೆ ಅಪರಿಮಿತವಾದ ಪ್ರೀತಿ ಇರಿಸಿದ, ಕೆಟ್ಟ ಚಟಗಳು ಇತ್ಯಾದಿ ದುರಭ್ಯಾಸಗಳು ಇವರ ಬಳಿ ಸುಳಿಯದ ಹಾಗೆ ಕಾಪಾಡಿದವರು ಇವರ ತಾಯಿ. ಅಂದು ಮನೆಯಲ್ಲಿ ಬಡತನವಿತ್ತು ಆದರೆ ಅದರ ಜೊತೆಗೆ ಹೇಗೆ ಹೊಂದಿಕೊಂಡು ಹೋಗಬೇಕು ಅನ್ನವುದನ್ನು ಇವರಿಗೆಲ್ಲಾ ಕಲಿಸಿದವರೇ ಇವರ ತಾಯಿ.

ಡಾ.ನಾ.ಡಿಸೊಜ ಅವರ ತಂದೆ ಒಳ್ಳೆಯ ಕತೆಗಾರರು. ಇವರ ಅಮ್ಮ ಕೂಡ ಮದುವೆಯ ಹಾಡುಗಳು, ಒಗಟುಗಳು ಮತ್ತು ಗಾದೆ ಹೇಳುವುದರಲ್ಲಿ ತುಂಬ ಪರಿಣಿತರು. ಇವರ ಒಂದೊಂದು ಕತೆ ಆರು ಏಳು ದಿನ ಮುಂದುವರೆಯುತಿತ್ತು. ತಂದೆ ತಾಯಿಯರಿಬ್ಬರ ಕಥಾ ಜೀವದ್ರವ್ಯ ಡಿಸೋಜ ಅವರಿಗೆ ಹೇರಳವಾಗಿಯೇ ದಕ್ಕಿದೆ. ತಾಯಿ ಹೇಳಿದ ಕತೆಯನ್ನು ಮೀನುಗಾರ ದೊರೆ ಎಂಬ ಪುಸ್ತಕ ರೂಪದಲ್ಲಿ ಹೊರತಂದರು. ಹೀಗೆ ನಾ. ಡಿಸೋಜರವರ ಬಾಲ್ಯದಿಂದಲೂ ಮನೆಯಲ್ಲಿ ಒಂದು ರೀತಿಯ ಸಾಹಿತ್ಯಿಕ, ಸಾಂಸ್ಕೃತಿಕ ವಾತಾವರಣವೇ ಇತ್ತು. ಡಾ.ನಾ.ಡಿಸೋಜ ಇದನ್ನೆಲ್ಲಾ ರೂಢಿಸಿಕೊಂಡಿದ್ದು ಬಹು ವಿಶೇಷ. ಇವರ ತಂದೆಗೆ ಮಕ್ಕಳ ಕವಿತೆಗಳೆಂದರೆ ಬಹು ಇಷ್ಟ. ಮಕ್ಕಳಿಗಾಗಿ ಅನೇಕ ಕವಿತೆಗಳನ್ನು ಬರೆದಿದ್ದಾರೆ. ನಾ. ಡಿಸೋಜರವರು ತನ್ನ ಅಕ್ಕ ಮತ್ತು ಅಣ್ಣ ಪುಸ್ತಕ ಭಂಡಾರದಿಂದ ತಂದ ಕಾದಂಬರಿಗಳನ್ನು ತಾಯಿಗೆ ಓದಿ ಹೇಳಬೇಕಾಗಿತ್ತು. ಇದು ಇವರ ತಾಯಿಯ ಬೇಸರ ನೀಗುವುದರ ಜೊತೆಗೆ ಇವರ ಸಾಹಿತ್ಯಭಿರುಚಿಯನ್ನು ಹೆಚ್ಚಿಸಿತು. ಇವರು ಅಮ್ಮನಿಗಾಗಿ ನಿಸರ್ಗ, ಕಣ್ಣೀರು, ಇಜ್ಜೋಡು, ಸಂಧ್ಯಾರಾಗ ಮೊದಲಾದ ಕಾದಂಬರಿಗಳನ್ನು ಓದಿ ಹೇಳುತ್ತಿದ್ದ ನೆನಪನ್ನು ಶ್ರೀಯುತರು ಈಗಲೂ ಹೇಳುತ್ತಿರುತ್ತಾರೆ. ಕೆಲ ಸಂದರ್ಭದಲ್ಲಿ ನಾ.ಡಿಸೋಜ ಮತ್ತು ಇವರ ಅಮ್ಮ ಕಥಾ ಪ್ರವಾಹದ ಜೊತೆಯಲ್ಲಿ ತೇಲಿಹೋಗಿ ಒಟ್ಟಿಗೇನೆ ಕಂಬನಿ ಮಿಡಿಯುತ್ತಿದ್ದುದೂ ಉಂಟು. ಡಾ. ನಾ.ಡಿಸೋಜ ಅವರ ಇಂದಿನ ಸಾಹಿತ್ಯ ಪ್ರೇಮಕ್ಕೆ ಇದೂ ಕೂಡ ಬಹು ದೊಡ್ಡ ಪ್ರೇರಣೆಯಾಗಿತ್ತು ಎಂದರೆ ತಪ್ಪೇನಿಲ್ಲ.

ಕ್ರಿ.ಶ. ೧೯೬೯ರಲ್ಲಿ ನಾ. ಡಿಸೋಜರವರು ಫಿಲೋಮಿನರ ಕೈ ಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಗೆ ಶೋಭ, ನರೇಶ್, ನವೀನ್ ಮತ್ತು ಸಂತೋಷ್ ಎಂಬ ಮೂವರು ಮಕ್ಕಳಿದ್ದು ಇವರು ಒಳ್ಳೆ ರೀತಿಯಲ್ಲಿ ಕುಟುಂಬವನ್ನು ಕಟ್ಟಿಕೊಂಡು ಸುಖ ಸಂತೋಷದಲ್ಲಿದ್ದಾರೆ. ಹೀಗೆ ಡಿಸೋಜರ ಮಕ್ಕಳೆಲ್ಲಾ ತಮ್ಮ ತಮ್ಮ ವೃತ್ತಿ ಕ್ಷೇತ್ರಗಳಲ್ಲಿ ಒಳ್ಳೆಯ ಹೆಸರುಗಳನ್ನು ಸಂಪಾದಿಸಿಕೊಂಡು ತೃಪ್ತಿಯಲ್ಲಿರುವುದು ಸಂತಸದ ಸಂಗತಿ. ನಾ. ಡಿಸೋಜರವರು ಸಂಪೂರ್ಣವಾಗಿ ತಮ್ಮನ್ನು ತಾವು ಸಾಹಿತ್ಯಿಕ ಚಟುವಟಿಕೆಗಳಲ್ಲಿ, ಸಾರ್ವಜನಿಕ ಬದುಕು ಮತ್ತು ಅದರಲ್ಲಿನ ಹೋರಾಟಗಳೊಡನೆ ತೊಡಗಿಸಿಕೊಳ್ಳಲು ಸಾಧ್ಯವಾಗಿರುವುದು ಶ್ರೀಮತಿ ಫಿಲೋಮಿನಾ ಡಿಸೋಜ ಅವರಿಂದ. ಇದಕ್ಕೊಂದು ಪ್ರತ್ಯೇಕವಾದ ಮನಸ್ಥಿತಿಯೇ ಬೇಕು. ಕುಟುಂಬ ನಿರ್ವಹಣೆಯ ಸಂಗಡ ಗಂಡನ ಪ್ರವೃತ್ತಿಯ ಎಲ್ಲಾ ಕಾರ್ಯ ಚಟುವಟಿಕೆಗಳ ಪರಿಜ್ಞಾನ ಮತ್ತು ಬೆಂಬಲ ಇರಬೇಕಾಗುತ್ತದೆ. ಇಲ್ಲಿ ಶ್ರೀಮತಿ ಫಿಲೋಮಿನಾ ಅವರದು ಎತ್ತಿದ ಕೈ. ಸಾಗರದವರೆ ಆದ ಇವರು ಡಿಸೋಜರನ್ನು ಕಾಣಲು ಬರುವ ಎಲ್ಲರನ್ನು ಪ್ರೀತಿಯಿಂದ ಸತ್ಕರಿಸುವಲ್ಲಿ ಮುಂದು. ನೆರೆಹೊರೆಯವರ ಕುಟುಂಬಗಳಲ್ಲಿನ ಕಷ್ಟ ಸುಖಗಳಿಗೆ ಸ್ಪಂದಿಸುವ ಇವರು ಡಾ.ನಾ.ಡಿಸೋಜರು ಸಾಧಿಸಿರುವ ಸಾಧನೆ, ಪಡೆದಿರುವ ಹೆಸರು, ಗೌರವ ಸನ್ಮಾನ, ಪ್ರಶಸ್ತಿಗಳ ಹಿಂದೆ ನಿಂತಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಡಾ. ನಾ.ಡಿಸೋಜರ ಬದುಕು ಮತು  ಬರಹಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ಕೃತಿಗಳನ್ನು ಓದುವಾಗ ಗಮನಿಸಿರುತ್ತೇನೆ.

ಡಾ.ನಾ.ಡಿಸೋಜರವರ ಸಾಹಿತ್ಯಿಕ ಕೊಡುಗೆಗಳು


ಕಾದಂಬರಿಗಳು:ಕ್ರಿ.ಶ ೧೯೬೪ರಲ್ಲಿ ಬಂಜೆ ಬೆಂಕಿ ಎಂಬ ಚೊಚ್ಚಲ ಕಾದಂಬರಿಯಿಂದ ನಾ.ಡಿಸೋಜರವರು ಕನ್ನಡ ಕಾದಂಬರಿ ಕ್ಷೇತ್ರಕ್ಕೆ ಕಾಲೂರಿ ಅನೇಕ ಕಾದಂಬರಿಗಳನ್ನು ಬರೆದು ಪ್ರಕಟಿಸಿದ್ದಾರೆ. ಇವರ ಹಲವು ಕಾದಂಬರಿಗಳು, ಕಥೆಗಳು ಈಗಾಗಲೇ ತಮಿಳು, ಹಿಂದಿ, ತೆಲುಗು, ಇಂಗ್ಲೀಷ್, ಕೊಂಕಣಿ ಭಾಷೆಗಳಿಗೆ ಅನುವಾದವಾಗಿವೆ. ಶ್ರೀಯುತರು ತಮ್ಮ ಬಿಡುವಿನ ವೇಳೆಯನ್ನು ವ್ಯರ್ಥವಾಗಲು ಬಿಡದೆ ಸಾಹಿತ್ಯ ರಚನೆಯಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡು ವಸ್ತು ನಿಷ್ಠವಾದ ಕೃತಿ-ಕಾದಂಬರಿಗಳನ್ನು ರಚಿಸಿರುವುದು ಪ್ರಶಂಸನೀಯ. 

ಉದಾಹರಣೆಗೆ ಬಂಜೆ ಬೆಂಕಿ, ಮಂಜಿನ ಕಾನು, ಈ ನೆಲ ಈ ಜಲ, ಅಜ್ಞಾತ, ಕೆಂಪು ತ್ರಿಕೋನ, ನೆಲೆ, ಮಾನವ, ತಿರುಗೋಡಿನ ರೈತ ಮಕ್ಕಳು, ಇಕ್ಕೇರಿಯಲ್ಲಿ ಕ್ರಾಂತಿ, ಶಿವನಡಂಗುರ, ದ್ವೀಪ, ಜೀವಕಳೆ, ಪ್ರಜ್ಞಾಬಲಿ, ವಿಷವರ್ತುಲ, ಮುಳುಗಡೆ, ಕಾಡಿನ ಬೆಂಕಿ, ಪ್ರೀತಿಯೊಂದೆ ಸಾಲದೆ, ದುರ್ಗವೆಂಬ ವ್ಯೂಹ, ರಾಗ ವಿರಾಗ, ವಿಷಾನಿಲ, ಸೇತುವೆ, ಒಂದು ಜಲಪಾತದ ಸುತ್ತ, ಗಾಂಧಿ ಬಂದರು, ಶೃಂಗೇರಿಯಲ್ಲಿ ಶಾಂತಿ, ಒಡ್ಡು, ಒಡಲು ಕಾಯುವುದಿಲ್ಲ, ನೀರು, ತಿರುವು, ಚಿನ್ನದ ಮೊಟ್ಟೆ, ಕೊಳಗ, ಇಂಜಿನಿಯರ್ ಆತ್ಮಕತೆ, ಇಗರ್ಜಿ ಸುತ್ತಲಿನ ಹತ್ತು ಮನೆಗಳು, ಕೈತಾನ ಗಾಂಧಿಯ ಸ್ವಾತಂತ್ರ್ಯ ಹೋರಾಟ, ಸುಣ್ಣಬಳಿದ ಸಮಾಧಿಗಳು, ಹರಿವ ನದಿ, ಆಸರೆ ಮತ್ತು ಮುಖವಾಡದವರು. ಹೀಗೆ ಹತ್ತಾರು ಕಾದಂಬರಿಗಳನ್ನು ರಚಿಸಿರುವುದರೊಂದಿಗೆ ಸಣ್ಣ ಕಥಾ ಸಂಕಲನ, ನಾಟಕಗಳು, ಮಕ್ಕಳ ನಾಟಕಗಳು, ಬಾನುಲಿ ನಾಟಕಗಳು, ಮಕ್ಕಳ ಪುಸ್ತಕಗಳು ಮತ್ತು ಜೀವನ ಚರಿತ್ರೆಗಳಿಗೆ ಸಂಬಂಧಿಸಿದಂತೆ ಹಲವಾರು ಕೃತಿಗಳನ್ನು ಕನ್ನಡ ಓದುಗರಿಗೆ ನೀಡಿ ಸೈ ಎನಿಸಿಕೊಂಡಿದ್ದಾರೆ. ಇವರು ರಚಿಸಿರುವ ಸಾಹಿತ್ಯ ಕುರಿತು ಅದರ ಉದ್ದ, ಅಗಲ, ಆಳ ಎತ್ತರವನ್ನು ಒಮ್ಮೆಲೆ ಅಳತೆ ಮಾಡುವುದು ಅಷ್ಟು ಸುಲಭವಲ್ಲ ಹಾಗೆಯೇ ಅಷ್ಟು ಸಾಧ್ಯವೂ ಅಲ್ಲ. ಸುಮಾರು ೪೦ ಕಾದಂಬರಿಗಳು, ೪೦೦ ಸಣ್ಣ ಕಥೆಗಳು, ಸಾಕಷ್ಟು ಮಕ್ಕಳ ಕೃತಿಗಳು, ಹತ್ತು ನಾಟಕಗಳು, ಒಂದೆರಡು ಜಾನಪದ ಸಂಗ್ರಹಗಳು ಮತ್ತು ಸಾವಿರಾರು ಬಿಡಿ ಲೇಖನಗಳಲ್ಲಿ ಹರಿದು ಬಂದಿರುವ ಇವರ ಪ್ರಮುಖ ದನಿಗಳನ್ನು ಎತ್ತಿ ತೋರಿಸುವುದು ಸಾಧ್ಯವಿಲ್ಲ. ಇವರು ಬರೆದಿರುವ ಕಾದಂಬರಿಗಳನ್ನು ಎರಡು ರೀತಿಯಲ್ಲಿ ಕಾಣಬಹುದು.

೧. ಪರಿಸರ ಸಂಬಂಧಿ ಕಾದಂಬರಿಗಳು: ಡಾ.ನಾಡಿಸೋಜರ ಹೆಚ್ಚಿನ ಕತೆ ಕಾದಂಬರಿಗಳಲ್ಲಿ ನಮಗೆ ನೇರವಾಗಿ ಗೊತ್ತಾಗದ ರೀತಿಯಲ್ಲಿ ಪರಿಸರ ಒಂದು ಪಾತ್ರವಾಗಿ ಮೂಡಿ ಬರುತ್ತದೆ. ಕಾಡಿನ ಪಾತ್ರ, ಭೂಮಿಯ ಪಾತ್ರ ಮತ್ತು ನೀರಿನ ಪಾತ್ರ ಇದ್ದೆ ಇರುತ್ತದೆ. ಖಿhe oಟಜ mಚಿಟಿ ಚಿಟಿಜ ಣhe seಚಿ ಕಾದಂಬರಿಯಲ್ಲಿ ಇಡೀ ಸಮುದ್ರವೇ ಒಂದು ಪಾತ್ರವೇ ಸರಿ.  ಶಿವರಾಮ ಕಾರಂತರ ಒಂದೆರಡು ಕಾದಂಬರಿಯಲ್ಲಿ ಸಮುದ್ರ ಸಹ ಒಂದು ಪಾತ್ರ. ಡಾ.ನಾ.ಡಿಸೋಜರ ಕತೆ ಕಾದಂಬರಿಗಳು ಸಹ ಇದೇ ಧಾಟಿಯವು. ಮುಳುಗಡೆ, ಒಂದು ಜಲಪಾತದ ಸುತ್ತ, ದ್ವೀಪ, ನೀರು, ಕುಂಜಾಲು ಕಣಿವೆಯ ಕೆಂಪು ಹೂವು, ಒಡ್ಡು - ಡಾ.ನಾ.ಡಿಸೋಜರ ಈ ಕಾದಂಬರಿಗಳು ತಮ್ಮದೆ ಆದ ಕತೆಯ ಹೂರಣವನ್ನು ಹೊತ್ತಿದ್ದರೂ ಜೊತೆಗೆ ಪರಿಸರದ ಆಶಯವನ್ನು ಕೂಡ ಹೊಂದಿವೆ.

೨.ಐತಿಹಾಸಿಕ ಕಾದಂಬರಿಗಳು: ಸಾರ್ವಜನಿಕವಾಗಿ ಇತಿಹಾಸ ಇಂದು ಅತ್ಯಂತ ಹೆಚ್ಚು ವಿವಾದಾತ್ಮಕ ವಿಚಾರವಾಗಿ ಪರಿಣಮಿಸಿದೆ. ಇತಿಹಾಸದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುವ, ದ್ವೇಷಿಸುವ, ಅವರಲ್ಲಿ ಅಪನಂಬಿಕೆಗಳನ್ನು ಬಿತ್ತುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಮಚಿತ್ತದಿಂದ ಬರೆಯುವ ಇತಿಹಾಸಗಳ ಅಗತ್ಯ ಎಂದಿಗಿಂತ ಇಂದು ಇದೆ. ಹಾಗೆಯೇ ಇತಿಹಾಸವನ್ನು ಆಧರಿಸಿ ಬರೆಯುವ ಸಾಹಿತ್ಯ ಕೃತಿಗಳೂ ಕೂಡ ಜೀವಸತ್ವದಿಂದ ಕೂಡಿರಬೇಕು. ಸೃಜನಶೀಲತೆಯ ಹೆಸರಿನಲ್ಲಿ ಇತಿಹಾಸದ ಅಂಶಗಳ ಅಂದಗೆಡಿಸಬಾರದು. ಹೀಗಾಗಿ ಐತಿಹಾಸಿಕ ಕತೆ, ಕಾದಂಬರಿ ಮತ್ತು ನಾಟಕಗಳನ್ನು ರಚನೆ ಮಾಡುವ ಜವಾಬ್ದಾರಿ ಬಹು ವಿಶೇಷವಾದುದು. ಕನ್ನಡ ಪರಂಪರೆಯಲ್ಲಿ ಈ ರೀತಿಯ ಬರವಣಿಗೆಯಲ್ಲಿ ಅನೇಕರು ಗೆದ್ದಿದ್ದಾರೆ. ಕೆಲವು ಕಾದಂಬರಿಗಳು ವಿರೋಧಗಳನ್ನು ಎದುರಿಸಿದ್ದು ಉಂಟು. ಐತಿಹಾಸಿಕ ಅಂಶಗಳನ್ನು ತನಗೆ ಬೇಕಾದ ಹಾಗೆ ತಿರುಚದೆ ಸಾಹಿತ್ಯಿಕ ಕೃತಿಗಳನ್ನು ರಚನೆ ಮಾಡಿರುವ ಲೇಖಕರಲ್ಲಿ ಡಾ.ನಾ.ಡಿಸೋಜ ಮುಖ್ಯರಾಗುತ್ತಾರೆ. ಇವರು ತಾನು ಹುಟ್ಟಿ ಬೆಳೆದಿರುವ ಪ್ರದೇಶದ ನೆಲ, ಜಲ ಮತ್ತು ಜನರ ಕತೆಗಳನ್ನು ಬರೆದ ಹಾಗೆ ರಾಜ ಮಹಾರಾಜರ ಕತೆಗಳನ್ನು ಬರೆದಿದ್ದಾರೆ. ಸಾಗರ ಎಂಬ ಊರಿನ ಸುತ್ತ ಮುತ್ತಲಿರುವ ಕೆಳದಿ-ಇಕ್ಕೇರಿಗಳು, ಗೇರಸೊಪ್ಪ, ಆನಂದಪುರ, ಭಟ್ಕಳ, ಬನವಾಸಿ ಇವೆಲ್ಲಾ ಒಂದು ಕಾಲದಲ್ಲಿ ಐತಿಹಾಸಿಕ ಹಿನ್ನಲೆಯ ರಾಜ್ಯಗಳು. ಕೆಳದಿ ರಾಜರು ಆಳಿದ ಸಾಮ್ರಾಜ್ಯವಿದು. ವಿದೇಶಿ ಪ್ರವಾಸಿಗರಂತೂ ಈ ಸಾಮ್ರಾಜ್ಯವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಡಾ. ನಾ. ಡಿಸೋಜರು ಮಲೆನಾಡಿನವರೇ ಆಗಿದ್ದು ಇಲ್ಲಿ ಆಳಿರುವ ರಾಜ ಮಹಾರಾಜರ, ಜನರ ಜೀವನ ಶೈಲಿ ಮತ್ತು ಸಾಹಿತ್ಯ ಇವರನ್ನು ಬಹಳವಾಗಿ ಕಾಡಿದೆ. ಹೀಗಾಗಿ ಇವರು ಕೆಲವು ಐತಿಹಾಸಿಕ ಕಾದಂಬರಿಗಳನ್ನು ರಚಿಸಿದ್ದಾರೆ. ಅವುಗಳೆಂದರೆ, ಶೃಂಗೇರಿಯಲ್ಲಿ ಶಾಂತಿ, ಇಕ್ಕೇರಿಯಲ್ಲಿ ಕ್ರಾಂತಿ ಮತ್ತು ರಾಗವಿರಾಗ. ಹೀಗೆ ಕನ್ನಡದಲ್ಲಿ ಐತಿಹಾಸಿಕ ಕಾದಂಬರಿಗಳಿಗೆ ತನ್ನದೇ ಆದ ಇತಿಹಾಸವಿದೆ. ಎಷ್ಟೋ ಕಾದಂಬರಿಕಾರರು ಇತಿಹಾಸದ ಸತ್ಯಗಳನ್ನು ತಿರುಚಿ ಬರೆದರೆ ಡಾ.ನಾ.ಡಿಸೋಜರವರು ಬಹಳ ಜವಾಬ್ದಾರಿಯಿಂದ ಐತಿಹಾಸಿಕ ಕಾದಂಬರಿಗಳನ್ನು ಹೊರ ತಂದಿದ್ದಾರೆ. 

ಮಕ್ಕಳ ಸಾಹಿತ್ಯ ಮತ್ತು ಬಿಡಿ ಲೇಖನಗಳು

ಡಾ.ನಾ.ಡಿಸೋಜರವರು ಹಲವಾರು ಕಾದಂಬರಿಗಳನ್ನು ನೀಡುವುದರ ಜೊತೆಗೆ ಮಕ್ಕಳ ಸಾಹಿತ್ಯ ಹಾಗು ಕೆಲವು ಬಿಡಿ ಲೇಖನಗಳೆಡೆಗೂ ತಮ್ಮ ಲೇಖನಿಯನ್ನು ಹರಿಸಿರುವುದು ಸಂತಸದ ವಿಷಯವಾಗಿದೆ. 

 ಮಕ್ಕಳ ಸಾಹಿತ್ಯ: ಅಂದು ಮತ್ತು ಇಂದು ಮಕ್ಕಳ ಸಾಹಿತ್ಯ ಬಹಳ ಮುಖ್ಯವಾದದ್ದು ಎಂದು ಎಲ್ಲರೂ ಒಪ್ಪಿಕೊಂಡರೂ ಅದರ ಬಗ್ಗೆ ಕೃಷಿ ಮಾಡಿರುವ ಮತ್ತು ಮಾಡುತ್ತಿರುವ ಸಾಹಿತಿಗಳು ಕೇವಲ ಬೆರಳಣಿಕೆಯಷ್ಟು ಮಂದಿ ಮಾತ್ರ. ಮಕ್ಕಳ ಸಾಹಿತಿಗಳೆಂದರೆ ಅಷ್ಟಕಷ್ಟೆ. ಎಂದಿಗಿಂತಲೂ ಇವತ್ತು ಮಕ್ಕಳ ಸಾಹಿತ್ಯದ ಪ್ರಾಮುಖ್ಯತೆ ಹೆಚ್ಚುತ್ತಿದೆ. ಅಗತ್ಯವೋ ಅನಗತ್ಯವೋ ಮಕ್ಕಳು ಟಿ.ವಿ ಮುಂದೆ ಬಹಳ ಸಮಯವನ್ನು ಕಳೆಯುತ್ತಿರುತ್ತಾರೆ. ಮಕ್ಕಳಿಗೆ ಏನು ಬೇಕು ಎಂಬುವುದರ ಬಗ್ಗೆ ಕೂಡ ಅವರಿಗೆ ಸರಿಯಾದ ಕಲ್ಪನೆ ಇರುವುದಿಲ್ಲ. ಈ ಬಗ್ಗೆ ಶಿಕ್ಷಣ ತಜ್ಞರು, ಕವಿ, ಸಾಹಿತಿಗಳು, ರಂಗಕರ್ಮಿಗಳು ತೀವ್ರವಾಗಿ ಯೋಚಿಸುವ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳ ಸಾಹಿತ್ಯವೆಂದರೆ ಒಂದು ರೀತಿಯ ಅನಾದಾರ ನಮ್ಮಲ್ಲಿ ಇದೆ. ನಮ್ಮ ಹಿರಿಯ ಕವಿಗಳಾದ ಪಂಜೆಮಂಗೇಶರಾಯರು, ಶಿವರಾಮಕಾರಂತರು ಮತ್ತು ರಾಜರತ್ನಂ- ಇವರೆಲ್ಲರೂ ಮಕ್ಕಳ ಸಾಹಿತ್ಯಕ್ಕೆ ತುಂಬ ಕೆಲಸ ಮಾಡಿದ್ದಾರೆ. ಇವರಾರಿಗೂ ಮಕ್ಕಳ ಸಾಹಿತ್ಯ ಬಗ್ಗೆ ಕೀಳರಿಮೆ ಇರಲಿಲ್ಲ. ಮಹಾಕಾವ್ಯಗಳಿಗೆ ಮತ್ತು  ಮಹಾ ಕಾದಂಬರಿಗಳಿಗೆ ಕೊಟ್ಟ ಸ್ಥಾನಮಾನವನ್ನು ಶಿಶು ಸಾಹಿತ್ಯಕ್ಕೂ ಕೊಟ್ಟಿದ್ದರು ಅಲ್ಲದೆ ಕತೆ ಕಾದಂಬರಿಗಳನ್ನು ಬರೆಯುವ ಆಸಕ್ತಿಯಲ್ಲಿಯೇ, ಮಕ್ಕಳಿಗೋಸ್ಕರವೆಂದೇ ಕತೆ, ಕಾದಂಬರಿ, ಮಿನಿ ಕಾದಂಬರಿ ಮತ್ತು ನಾಟಕಗಳನ್ನು ಬರೆಯುತ್ತಿದ್ದರು ಅಲ್ಲದೆ ಅವರು ಬರೆದ ಮಕ್ಕಳ ಪುಸ್ತಕಗಳು ಒಂದಕ್ಕಿಂತ ಹೆಚ್ಚು ಮುದ್ರಣಗಳನ್ನು ಕಂಡಿವೆ ಮತ್ತು  ಕಾಣುತ್ತಿವೆ ಎಂಬುದು ಸಹ ಬಹುಮುಖ್ಯ.

ಡಾ. ನಾ. ಡಿಸೋಜರವರ ಮಕ್ಕಳ ಕಾದಂಬರಿ ಮುಳುಗಡೆಯ ಊರಿಗೆ ಬಂದವರು ಎಂಬ ಕಥೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕಾರ (ರೂ.೫೦,೦೦೦/-ಬಹುಮಾನ ಸಮೇತ) ಬಂದಿರುವುದು ಕನ್ನಡ ನಾಡು ನುಡಿಗೆ ಸಂದ ಗೌರವ. ಡಾ.ನಾ.ಡಿಸೋಜರವರು ಕನ್ನಡದ ಹಿರಿಯ ಕತೆಗಾರರು, ಕಾದಂಬರಿಗಾರರು ಆಗಿದ್ದರೂ ಮಕ್ಕಳ ಸಾಹಿತ್ಯಕ್ಕೆ ಅವರು ನೀಡಿರುವ ಕೊಡುಗೆ ಬಹು ಅನನ್ಯ. ಮಕ್ಕಳ ಮನಸನ್ನು ತಟ್ಟುವ, ತೆರೆಯುವ, ಅರಳಿಸುವ ಶಕ್ತಿ ಅವರ ಬರವಣಿಗೆಯಲ್ಲಿದೆ, ಒಂದು ರೀತಿಯಲ್ಲಿ ಮಕ್ಕಳ ಸಾಹಿತ್ಯವು ಎಲ್ಲ ಸಾಹಿತಿಗಳ ಮನೆಯ ಹಿತ್ತಲಲ್ಲಿ ಬೆಳೆಯಬಹುದಾದ ಹೀರೇಕಾಯಿ ಅಲ್ಲವೆನ್ನುವುದು ಸಹ ಸತ್ಯ. ಇದಕ್ಕೆ ಬರಹಗಾರನಿಗೆ ಪ್ರತ್ಯೇಕವಾದ ಒಂದು ಮಾನಸಿಕ ಸ್ಥಿತಿಯೇ ಬೇಕು. ಮಕ್ಕಳ ಮನಸ್ಸನ್ನು ಅರಿಯುವ ಶಕ್ತಿ ಬೇಕು. ಜೊತೆಗೆ ಮಕ್ಕಳ ಅಗತ್ಯತೆಗಳ ಪೂರ್ಣ ಅರಿವು ಇರಬೇಕು. ಡಾ.ನಾ. ಡಿಸೋಜರಿಗೆ ಆ ಶಕ್ತಿ, ಆ ಮನಸ್ಸು ಇದ್ದುದ್ದರಿಂದಲೇ ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ ಸಾಕ್ಷಿಯಾಗಿದೆ. ಒಬ್ಬ ಬರಹಗಾರ ಇದ್ದಕ್ಕಿದ್ದಂತೆ ಒಂದು ವೈಚಾರಿಕ ಕೃತಿಯನ್ನು ರಚಿಸಬಹುದು ಆದರೆ ಒಂದು ಮಕ್ಕಳ ಕೃತಿಯನ್ನು ರಚಿಸುವುದು ತಿಳಿದಷ್ಟು ಸುಲಭವಲ್ಲ. ಮನಸ್ಸಿನೊಳಗೊಂದು ಮಕ್ಕಳ ಬಗ್ಗೆ ಪ್ರೀತಿಯ ಕಳಕಳಿ ಮತ್ತು ಕಾಳಜಿಗಳು ಬೇಕು. ಡಾ.ನಾ.ಡಿಸೋಜಾರ ಶಕ್ತಿ ಇದ್ದದ್ದೇ ಇಲ್ಲಿ. ಮುಳುಗಡೆ ಕಾದಂಬರಿ ಬಂದಾಗ ಮುಳುಗಡೆ ಎನ್ನುವ ಶಬ್ದ ಅನಾವರಣಗೊಂಡ ರೀತಿಯೇ ಬಹು ಅನೀರಿಕ್ಷಿತ ಹಾಗು ಅಷ್ಟೇ ನೂರಾರು ಅರ್ಥ ಛಾಯೆಗಳು ಹೊರಬಂದವು. ಇವರಿಗೆ ಇಷ್ಟರಿಂದಲೇ ತೃಪ್ತಿಯಾಗಲಿಲ್ಲ. ಈ ಭೂಮಿಯ ಮೇಲಿನ ನೀರಿನ ಸವಾರಿಯ ಅಪಾಯ ಮತ್ತು ದುರಂತಗಳನ್ನು ಮಕ್ಕಳಿಗೂ ತಿಳಿಸಬೇಕೆನ್ನುವ ಕಾತುರ ಮತ್ತು ಕಾಳಜಿಯೇ ಮುಳುಗಡೆಯ ಊರಿಗೆ ಬಂದವರು ಕಾದಂಬರಿಯ ವಿಶೇಷ. ಗಾಢವಾದ ಸಮಸ್ಯೆಯೊಂದು ಚಿಕ್ಕ ಮಕ್ಕಳ ಮನಸ್ಸಿಗೂ ನಾಟಬೇಕು, ಪರಿಸರದ ವೈಪರಿತ್ಯಗಳು, ಮನುಷ್ಯ ತನ್ನ ಸುಖಕ್ಕಾಗಿ ಪ್ರಕೃತಿಯನ್ನು ದುರುಪಯೋಗ ಪಡಿಸುತ್ತಿರುವ ಕಲ್ಪನೆ, ಇವೆಲ್ಲಾ ಈಗಿನಿಂದಲೇ ಮಕ್ಕಳ ಮನಸ್ಸಿನಲ್ಲಿ ಮೂಡಬೇಕು, ಮೂಡಿಸಬೇಕು ಎನ್ನುವ ಇವರ ಕಾಳಜಿ ಬಹು ಅರ್ಥಪೂರ್ಣ. ಇವರು ಬರೆದಿರುವ ಮಕ್ಕಳ ಸಾಹಿತ್ಯವೆಂದರೆ ಮುಳುಗಡೆ, ನೇತ್ರಾಣಿ ಗುಡ್ಡಕ್ಕೆ ಯಾತ್ರೆ, ಹಕ್ಕಿಗೊಂದು ಗೂಡು ಕೊಡಿ ಜೊತೆಗೆ ಮಕ್ಕಳ ನಾಟಕಗಳು ಮತ್ತು ಮಕ್ಕಳ ಕವಿತೆಗಳು ಇನ್ನೂ ಮುಂತಾದವುಗಳು. 

ಬಿಡಿ ಲೇಖನಗಳು: ಡಾ. ನಾ. ಡಿಸೋಜರವರು ಸುಮಾರು ೩೦೦೦ ಲೇಖನಗಳನ್ನು ಬರೆದಿದ್ದಾರೆ ಎನ್ನುವುದೇ ಬಹು ವಿಶೇಷ. ಬರವಣಿಗೆ ಪ್ರಾರಂಭಿಸಿದ್ದೇ ಪದ್ಯ ಮತ್ತು ಲೇಖನಗಳಿಂದ. ಬಹುಬೇಗ ಪದ್ಯಗಳನ್ನು ಕೈ ಬಿಟ್ಟು ಗದ್ಯಕ್ಕೆ ಒಗ್ಗಿಕೊಂಡರು. ಸಾಮಾನ್ಯವಾಗಿ ಹತ್ತಾರು ಪತ್ರಿಕೆಗಳಲ್ಲಿ ಡಾ.ನಾ.ಡಿಸೋಜರ ನಾಲ್ಕು ಲೇಖನಗಳಾದರೂ ಇದ್ದ ಕಾಲವಿತ್ತು. ಈಗ ಲೇಖನಗಳ ಪ್ರಮಾಣ ಕಡಿಮೆಯಾಗಿದೆ. ಅಂದು ಪತ್ರಿಕಾ ಸಂಪಾದಕರುಗಳಿಗೆ ಇವರ ಲೇಖನಗಳೆಂದರೆ ತುಂಬ ಅಚ್ಚುಮೆಚ್ಚು. ಡಾ.ನಾ.ಡಿಸೋಜರ ಲೇಖನಗಳ ಹರಿವು ವಿಶಾಲವೂ ವೈವಿಧ್ಯಮಯವೂ ಆಗಿದೆ. ಗುಬ್ಬಚ್ಚಿಗಳು ಗೂಡು ಕಟ್ಟುವದರಿಂದ ಹಿಡಿದು ಒಬ್ಬ ಇಂಜಿನಿಯರ್ ಸೇತುವೆ ಕಟ್ಟುವುದರವರೆಗಿನ ವಿಸ್ತಾರ ಈ ಲೇಖನಗಳಿಗಿವೆ. ಇವರ ಲೇಖನಗಳ ವೈಖರಿಗಳೇ ಹೀಗೆ ಕರ್ನಾಟಕದ ಪ್ರಾಚೀನ ಕ್ರೈಸ್ತರು ಹಾಗು ಹಕ್ಕಿಪಿಕ್ಕಿ ಜನಾಂಗಗಳಿಂದ ಹಿಡಿದು ಮುರುಡೇಶ್ವರ, ಕುಮಟಾ ಹೊನ್ನಾವರದ ಮೀನುಗಾರರವರೆಗೂ ಬರೆದಿದ್ದಾರೆ. ಇವರ ಲೇಖನಗಳಲ್ಲಿ ಕತೆಗಾರನ ಸ್ಪರ್ಶ ಇರುತ್ತದೆ. ಕತೆಗಾರನು ಬರೆಯುವ ಲೇಖನಗಳಿಗೂ, ಲೇಖನಗಳನ್ನು ಬರೆಯುವ ಕತೆಗಾರನಿಗೂ ವ್ಯತ್ಯಾಸ ಇದ್ದೇ ಇದೆ. ಡಿಸೋಜರವರು ಮೊದಲನೇ ವರ್ಗಕ್ಕೆ ಸೇರಿದವರು. ಹೀಗಾಗಿ, ಅವರ ಲೇಖನಗಳಿಗೆ ಪತ್ರಿಕೆಗಳಲ್ಲಿ ಹೆಚ್ಚಿನ ಪ್ರಾಧಾನ್ಯತೆ ಇತ್ತು.  ಸುಧಾ, ತರಂಗ, ಪ್ರಜಾವಾಣಿ, ಕನ್ನಡಪ್ರಭಾ, ಸಂಯುಕ್ತ ಕರ್ನಾಟಕ ಮುಂತಾದ ಪತ್ರಿಕೆಗಳಿಗೆ ಹೆಚ್ಚು ಬೇಡಿಕೆ ಇರಿಸಿಕೊಂಡಿದ್ದರು. ಇವರ ಲೇಖನಗಳನ್ನು ಬಯಸುತ್ತಿದ್ದ ಪತ್ರಿಕೆಗಳಿಗೆ ವೈವಿಧ್ಯಮಯವಾಗಿ ಬೇರೆ ಬೇರೆ ಹೆಸರುಗಳಲ್ಲಿ ಇವರು ಲೇಖನಗಳನ್ನು ಬರೆಯುತ್ತಿದ್ದರು. ಇವರ ವಿಷಯಧಾರಿತ ಲೇಖನಗಳನ್ನು ಕೆಲವು ವರ್ಗಗಳನ್ನಾಗಿ ವಿಂಗಡಿಸಬಹುದು. ಜಾನಪದ ಸಂಬಂಧ ಲೇಖನಗಳು, ಜನಾಂಗಿಕ ಅಧ್ಯಯನ ಲೇಖನಗಳು, ಪರಿಸರ ಲೇಖನಗಳು, ಪರಿಚಯ ಲೇಖನಗಳು ಮತ್ತು ವೈಚಾರಿಕ ಲೇಖನಗಳು.

ಕಾದಂಬರಿ ಕ್ರೇತ್ರಕ್ಕೆ ಸಂಬಂಧಿಸಿದಂತೆ ಡಾ. ನಾ. ಡಿಸೋಜ ಅವರ ೪೦ ಕಾದಂಬರಿಗಳು, ೪೦೦ ಸಣ್ಣ ಕಥೆಗಳು ಹಾಗೂ ವಿಶೇಷವಾದ ಮಕ್ಕಳ ಸಾಹಿತ್ಯ, ನಾಟಕಗಳು, ಜೀವನ ಚರಿತ್ರೆಗಳು ಪ್ರಸ್ತುತ ಕನ್ನಡ ನೆಲೆಯಲ್ಲಿ ಅಧಿಕೃತ ಸ್ಥಾನವನ್ನು ಪಡೆದಿವೆ. ಈಗಾಗಲೇ ಇವರ ಬಗ್ಗೆ ೪ ಎಂ. ಫಿಲ್ ಮತ್ತು ಡಾಕ್ಟರೇಟ್ ಪ್ರಬಂಧಗಳು ಹೊರಬಂದಿವೆ. ಇಂತಹ ಸಂಪನ್ಮೂಲ ಕ್ರೈಸ್ತ ಸಾಹಿತಿಯ ಸಾಧನೆ ನಿಜವಾಗಿಯು ಶ್ಲಾಘನೀಯ. ಡಿಸೋಜರಿಗೆ ಸಂಧಿರುವ ಸಾಹಿತ್ಯಿಕ ಗೌರವ ಪ್ರಶಸ್ತಿಗಳು ಹಾಗೂ ಜನಮನ್ನಣೆ ಪ್ರಸ್ತುತ ಕನ್ನಡ ಸಾಹಿತ್ಯದಲ್ಲಿ ಗಮನಾರ್ಹ. ಇವರ ಪ್ರಮುಖ ಕಾದಂಬರಿಗಳಾದ ಕಾಡಿನ ಬೆಂಕಿ ಮತ್ತು ದ್ವೀಪ ಚಲನಚಿತ್ರಗಳಾಗಿ ಮನ್ನಣೆ ಪಡೆದಿವೆ. ಅಲ್ಲದೇ ಡಾ. ನಾ. ಡಿಸೋಜ ಒಬ್ಬ ಉತ್ತಮ ಚಿಂತಕರು ಹಾಗೂ ಕನ್ನಡ ನುಡಿಯ ಪರಿಚಾರಕರು ಮಿಗಿಲಾಗಿ ಕ್ರಿ.ಶ.೨೦೧೪ರ ೮೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದಂತಹ ಒಬ್ಬ ಧೀಮಂತ ಕ್ರೈಸ್ತ ಸಾಹಿತಿಯೂ ಹೌದು. ಹೀಗೆ ಕನ್ನಡ ಸಾಹಿತ್ಯವನ್ನು ಬೆಳೆಸಲು ಶ್ರಮಿಸಿದ ಹಾಗು ಶ್ರಮಿಸುತ್ತಿರುವ ಶ್ರೀಯುತರಿಗೆ ಸದಾ ದೇವರು ಆರೋಗ್ಯವನ್ನು ನೀಡಲಿ ಎಂದು ಹಾರೈಸುವ. 

-----------------------------

ಡಾ. ಸಿಸ್ಟರ್ ಪ್ರೇಮ (SಒಒI)

ಪ್ರಾಂಶುಪಾಲರು, ತೆರೇಸಾ ಕಾಲೇಜ್, ಬೆಂಗಳೂರು

-----------------------------



ದ್ವಿಪದಿಗಳು - ಬಸೂ

ರಸ್ತೆಯಲ್ಲಿ ತಗ್ಗಿತೋ ನಾನೇ ಬಿದ್ದೆನೋ ಯಾರು ನೂಕಿದರೋ ಗೊತ್ತಿಲ್ಲ

ಯಾರ ವಿಚಾರಿಸಲಿ ಎಲ್ಲ ನನ್ನಂಥವರೇ ನಿನಗೊಂದು ನೆಪಬೇಕಿತ್ತು ಹೊರೆ ಹೊರಿಸಲು

--------------

ಆ ಕ್ಷಣ ನನ್ನೊಳಗೂ ಲೋಕ ಬದಲಿಸುವ ಓಟ ಆರಂಭಿಸಬೇಕೆನಿಸಿತು

ಹಿಂದಿನಿಂದ ಬಂದವ ನನ್ನ ಬದಲಿಸುವ ರಿಲೇ ಕೋಲು ಕೈಗಿತ್ತು ಓಡು ಎಂದನು

---------

ಬೆಳಕಿದ್ದಾಗ ಈ ಲೋಕ ನನ್ನನಷ್ಟೇ ಅಲ್ಲ, ನನ್ನ ನೆರೆಳನೂ ಗುರಿತಿಸಿತು

ಕತ್ತಲಾಯ್ತು ನೋಡಿ, ನನ್ನ ನೆರಳನ್ನಲ್ಲ ನನ್ನನ್ನೂ ಗುರುತಿಸದೆ ನಡೆದುಹೋಂಯಿತ್ತು

----------

ಗೆಳೆಯಾ ಹಣತೆ ಹಚ್ಚಿಡು

ಕತ್ತಲಾಗಿದೆಯೆಂದು ಗೊತ್ತಾಗಲಿ

-----------

ಮಳೆ ರಭಸಕ್ಕೆ ಭೂಮಿ ಬೆದರಲಿಲ್ಲ

ಬೆರಗು ತೋರಿತು

-----------------

- ಬಸೂ

ಚಿಂತಕರು, ಕವಿ,

ಲಡಾಯಿ  ಪ್ರಕಾಶನ ಮುಖ್ಯಸ್ಥರು 


ದಮನಿತರಿಗೆ ಶಿಕ್ಷಣಕ್ರಮ ಹೇಗಿರಬೇಕು?: ಪಾಲೊ ಫ್ರೇರಿಯ ಪೆಡಗಾಜಿ ಆಫ್ ದಿ ಅಪ್ರೆಸ್ಡ್ - ಯೊಗೇಶ್ ಮಾಸ್ಟರ್



ಶಿಕ್ಷಣದ ಮೂಲಕವೇ ವ್ಯಕ್ತಿಯು ತಾರ್ಕಿಕವಾಗಿ, ಬೌದ್ಧಿಕವಾಗಿ ತನ್ನ ಬಿಡುಗಡೆಯ ದಾರಿಯನ್ನು ತುಳಿಯಬೇಕಾಗಿರುವ ಅಗತ್ಯತೆಯನ್ನು ಫ್ರೇರಿ ಈ ಪುಸ್ತಕದಲ್ಲಿ ಒತ್ತಿ ಹೇಳುತ್ತಾರೆ.

ಯಾವ ಶಿಕ್ಷಣ ವ್ಯವಸ್ಥೆಯು ವ್ಯಕ್ತಿಗಳನ್ನು ಪೋಷಿಸುವ ಬದಲು ಶೋಷಿಸುತ್ತದೆಯೋ, ಪ್ರೇರೇಪಿಸುವ ಬದಲು ಪಳಗಿಸುತ್ತದೆಯೋ, ಸಶಕ್ತಗೊಳಿಸುವ ಬದಲು ದುರ್ಬಲಗೊಳಿಸುತ್ತದೆಯೋ ಆಗ ಯಾವುದೋ ಒಂದು ವರ್ಗದ ಹಿತಾಸಕ್ತಿ ಮಾತ್ರ ಸಮಾಜದಲ್ಲಿ ಶಿಕ್ಷಣದ ಮೇಲೆ ತನ್ನ ಅಧಿಪತ್ಯವನ್ನು ಸಾಧಿಸುತ್ತಿದೆ ಎಂದು ತಿಳಿಯಬೇಕು.

ಕಾರ್ಲ್ ಮಾರ್ಕ್ಸ್ ಒಂದೆಡೆ ದಾಖಲಿಸುವಂತೆ ಆಳುವ ವರ್ಗದ ವಿಚಾರಗಳು ಆಳುವ ವಿಚಾರಗಳ ಸಮಯವನ್ನೇ ಸದಾ ಜೀವಂತವಾಗಿರಿಸಲು ಯತ್ನಿಸುತ್ತದೆ. ಅಂದರೆ, ಸಮಾಜವನ್ನು ಆಳುವ ಶಕ್ತಿಯಾಗಿರುವಂತ ವರ್ಗವು ತನ್ನದೇ ಬೌದ್ಧಿಕತೆಯನ್ನು ಜ್ಞಾನವನ್ನಾಗಿ ಮುಂದಿಡುತ್ತದೆ ಎನ್ನುತ್ತಾರೆ.

ಆಳುವ ವ್ಯವಸ್ಥೆಯು ತನಗೆ ಅನುಕೂಲಕರವಾದ ವಿಚಾರಗಳನ್ನೇ ಶಿಕ್ಷಣದ ಮುಖವಾಡದಲ್ಲಿ ಶಾಲೆಗಳಲ್ಲಿ ತರಬೇತಿ ನೀಡುವುದು. ಶಾಲೆಯಲ್ಲಿ ಕಲಿಕೆ ಎಂಬುದು ರಾಜಕೀಯ ವ್ಯವಸ್ಥೆಯ ಉದ್ದೇಶಪೂರ್ವಕವಾದ ಸಾಮಾಜಿಕ ತರಬೇತಿಯಾಗಿರುತ್ತದೆ. ರಾಜಕೀಯ ವ್ಯವಸ್ಥೆಯ ಸೂತ್ರವನ್ನು ಹಿಡಿದಿರುವ ವರ್ಗವು ತನಗೆ ಅನುಕೂಲಕರವಾದಂತಹ ಸಾಂಸ್ಕೃತಿಕ ಮತ್ತು ಸಾಮಾಜಿಕ ಉತ್ಪನ್ನಗಳನ್ನು ತಯಾರಿಸುವಂತಹ ಕಾರ್ಖಾನೆ ಈ ಶಾಲೆಗಳಾಗುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ವ್ಯಕ್ತಿಗಳಿಗೆ ಶಿಕ್ಷಣ ನೀಡುವ ಮೂಲಕ ಅವರ ಮನಸ್ಸು ಮತ್ತು ವರ್ತನೆಗಳನ್ನು ಪಳಗಿಸುತ್ತಾ ಇಡೀ ಸಮಾಜವನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳುವುದು. ಹೀಗೆ ವ್ಯಕ್ತಿಗಳ ಮೂಲಕ ಇಡೀ ಸಮಾಜವನ್ನು ಕೊಲ್ಲುವ ಯಂತ್ರವಾಗುವ ಈ ಶಿಕ್ಷಣವ್ಯವಸ್ಥೆಯು ಸಮಸಮಾಜದ ವಿರುದ್ಧವಾಗಿ ಪಿತೂರಿಯನ್ನು ಹೂಡುತ್ತದೆ.

ಫ್ರೇರಿ ಇಂತಹ ಪಿತೂರಿಯನ್ನು ಗಮನದಲ್ಲಿಟ್ಟುಕೊಂಡು Pedagogy of the Oppressed ಕೃತಿ ರಚನೆ ಮಾಡುತ್ತಾರೆ. ಅದರಲ್ಲಿ ಮುಕ್ತವಾದ ಮತ್ತು ಪ್ರಾಮಾಣಿಕವಾದ ಸಂವಾದ ನಡೆಸಲು ಸಾಧ್ಯತೆಯ ಶಿಕ್ಷಣವನ್ನು ಬಯಸುತ್ತಾರೆ. ಒತ್ತಡಕ್ಕೊಳಗಾಗಿ ದಮನಿತರಾಗುವ ಬದಲು ವ್ಯಕ್ತಿ, ಸಮುದಾಯಗಳು ಮತ್ತು ಸಮಾಜವು ಸ್ವಾತಂತ್ರ್ಯವನ್ನು ಪಡೆಯುವ ಗುರಿಯನ್ನು ಈ ಪರ್ಯಾಯ ಬೋಧನಾಕ್ರಮ ಅಥವಾ ಶಿಕ್ಷಣ ವ್ಯವಸ್ಥೆಯಲ್ಲಿ ಮುಂದಿಡುತ್ತಾರೆ.


ಕೃತಿಯು ಬೌದ್ಧಿಕವಾಗಿ ಕ್ರಾಂತಿಕಾರಕ ವಿಷಯಗಳನ್ನು ಒಳಗೊಂಡಿದೆ ಎನ್ನುವುದಕ್ಕಿಂತ, ೧೯೬೦ರಲ್ಲಿ ದಕ್ಷಿಣ ಅಮೆರಿಕೆಯ ವಯಸ್ಕ ರೈತರಿಗೆ ಫ್ರೇರಿ ತಾವೇ ಪಾಠ ಮಾಡುವ ಅನುಭವದಲ್ಲಿ ಕಂಡುಕೊಂಡ ವಿಷಯಗಳಿವು. ಸಮಸ್ಯೆ ಮತ್ತು ಪರಿಹಾರಗಳನ್ನು ಕೃತಿಯಲ್ಲಿ ತರ್ಕಿಸುತ್ತಾರೆ.

ಕಾರ್ಲ್ ಮಾರ್ಕ್ಸ್ ಅವರ ಸಮಾಜವಾದ ಮತ್ತು    ಬೈಬಲ್ಲಿನಲ್ಲಿರುವ ಬಿಡುಗಡೆಯ ಪ್ರಧಾನವಾದ ತಾತ್ವಿಕ ಅಂಶಗಳು ಹದವಾಗಿ ಬೆರೆಯುತ್ತಾ ತನ್ನ ವಿಚಾರಗಳನ್ನು ಸಂವಾದಿಸುತ್ತದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ದಮನಿತರು ಅವರ ದೇಶ, ಧರ್ಮ, ಸಂಸ್ಕೃತಿಗಳನ್ನು ಮೀರಿ ಬರಿಯ ಶೋಷಿತ ಜೀವಿಗಳಷ್ಟೇ ಆಗಿರುತ್ತಾರೆ. ಅವರನ್ನು ಆ ಭೌಗೋಳಿಕ ಪ್ರದೇಶದಲ್ಲಿ ದಮನಿಸಲು ಜನಾಂಗವನ್ನೋ, ವರ್ಣವನ್ನೋ, ವರ್ಗವನ್ನೋ, ಧರ್ಮವನ್ನೋ, ಸಂಸ್ಕೃತಿಯನ್ನೋ, ಜಾತಿಯನ್ನೋ ಕಾರಣವಾಗಿಸಿಕೊಳ್ಳಬಹುದು. ಆದರೆ, ಪರಿಣಾಮ ಮಾತ್ರ ಶೋಷಿತರ ನೋವು, ಸ್ವಾತಂತ್ರ್ಯಹರಣ, ಅಸಮಾನತೆಯ ಕಾರಣದ ಸಂಘರ್ಷ. ಹಾಗಾಗಿ ಯಾವುದೇ ದೇಶದಲ್ಲಿ ನಡೆಯುವ ದಮನಿತರ ಪರವಾದ ಹೋರಾಟಗಳು, ಸಿದ್ಧಾಂತಗಳು, ಪ್ರೇರಣೆಗಳು ಮತ್ತಿನ್ನಾವುದೇ ಜಗತ್ತಿನ ಮೂಲೆಗೆ ಅನ್ವಯವಾಗಬಹುದು. ಕಮ್ಯುನಿಸ್ಟರ ಸಿದ್ಧಾಂತಗಳು, ಫ್ರೆಂಚರ ಕ್ರಾಂತಿ, ಅಮೆರಿಕೆಯ ವರ್ಣಭೇದ ನೀತಿಯ ವಿರುದ್ಧದ ಹೋರಾಟ ನಮ್ಮ ಭಾರತಕ್ಕೆ ಹೊಂದುವುದಿಲ್ಲ ಎನ್ನಲಾಗದು. ಯಾವುದೇ ಜೀವಪರವಾಗಿರುವ ಮತ್ತು ಸಮಾಜಮುಖಿಯಾಗಿರುವ ಹೋರಾಟಗಳು ಮತ್ತು    ಸಿದ್ಧಾಂತಗಳು ಪ್ರೇರಣೆಗಳನ್ನು ನೀಡಲು ಸಾಧ್ಯ. ಪರಿಕರಗಳು, ಸಂಗತಿಗಳು ಮತ್ತು ಸನ್ನಿವೇಶಗಳಷ್ಟೇ ಬೇರೆ ಇರುತ್ತವೆ. ಆದರೆ ಆಶಯ ಜೀವಪರವಾದ ಮತ್ತು ಸಮಸಮಾಜಕ್ಕೆ ಮಿಡಿಯುವಂತದ್ದೇ ಆಗಿರುತ್ತದೆ.

ಫ್ರೇರಿ ಬಹಳ ನಾಜೂಕಾಗಿ ವಿಜ್ಞಾನದ ಸಂಸ್ಕೃತಿ ಮತ್ತು ಬಿಡುಗಡೆಯ ಭೀತಿಯನ್ನು ಮುನ್ನೆಲೆಗೆ ತರುತ್ತಾ ದಮನಿತರು ಎಂದರೆ ಯಾರು? ಅವರಿಗೆ ತಾವು ದಮನಿತರು ಎಂದು ಏಕೆ ತಿಳಿಯುವುದಿಲ್ಲ ಅಥವಾ ತಿಳಿದರೂ ಇದೇ ನಮ್ಮ ಹಣೆಬರಹ ಎಂಬಂತೆ ಯಥಾಸ್ಥಿತಿಯನ್ನು ಒಪ್ಪಿಕೊಂಡು ಏಕೆ ಮೂಲೆಗೆ ಸೇರುತ್ತಾರೆ ಎಂಬುದನ್ನು ವಿವರಿಸುತ್ತಾರೆ. ತಾರ್ಕಿಕ ಸಾಮರ್ಥ್ಯ ಮತ್ತು ಸಂವಾದಶೀಲ ಶಿಕ್ಷಣವು ಮುಕ್ತತೆಯನ್ನು ತರಬೇತುಗೊಳಿಸುವ ಸಾಧನವಾಗಿದೆ ಎಂದು ಬಲವಾಗಿ ಸಮರ್ಥಿಸುತ್ತಾರೆ. ತಾರ್ಕಿಕ ಸಾಮರ್ಥ್ಯದಿಂದ ಶೂನ್ಯವಾಗಿರುವ ಶಿಕ್ಷಣವನ್ನು ಪಡೆಯುವುದರಿಂದ ಬರಿಯ ಧಾರ್ಮಿಕ ಮೌಢ್ಯವನ್ನಷ್ಟೇ ಅಲ್ಲದೇ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ    ವಿಷಯಗಳಲ್ಲಿಯೂ ವ್ಯಕ್ತಿಗಳು ಮತ್ತು ಸಮುದಾಯಗಳು ಮೂಢರಾಗುತ್ತಾರೆ. ಹೇರಿದ್ದನ್ನು ಹೊರುತ್ತಾರೆ. ಹಾಗಾಗಿ ಜನರಲ್ಲಿ ಜಾಗೃತಿಯನ್ನು ಉಂಟುಮಾಡುವುದು ಚಿಂತಕರ ಕೆಲಸ,   ಬುದ್ಧಿಜೀವಿಗಳ ಜವಾಬ್ದಾರಿ.

ಬುದ್ಧಿಜೀವಿ ಎಂದರೆ, ಒಂದು ವಿಷಯವನ್ನು ಏಕಪ್ರಕಾರವಾಗಿ ಪ್ರಸ್ತುತಪಡಿಸುವ ಅಥವಾ ಸಾಂಪ್ರದಾಯಿಕ ಮಂಡನೆಯ ಆಯಾಮಗಳ ಹೊರತಾಗಿ ಇತರ ಆಯಾಮಗಳಿಂದ ತಾರ್ಕಿಕವಾಗಿ ಯೋಚಿಸಬಲ್ಲವನು. ಹೊರಿಸಿದ್ದನ್ನು ಹೊತ್ತು ಸಾಗುವ ಬದಲಿಗೆ ಕಾರಣ, ಪರಿಣಾಮ, ಇತಿಹಾಸ ಮತ್ತು ದೂರದೃಷ್ಟಿಗಳೆಲ್ಲದರ ಮೂಸೆಯಲ್ಲಿ ಸಂಗತಿಯನ್ನು ಬೇಯಿಸುವವನು. ಬುದ್ಧಿಜೀವಿಯ ಗುರುತರವಾದ ಈ ಜವಾಬ್ದಾರಿಯನ್ನು ಅವನು ನಿಭಾಯಿಸಲು ಯಥಾಸ್ಥಿತಿವಾದಿಗಳು ಮತ್ತು ಸಂಪ್ರದಾಯಸ್ಥರು ಬಿಡುವುದಿಲ್ಲ. ಏಕೆಂದರೆ ಅವರ ವರ್ಗಾಸಕ್ತಿ, ವರ್ಣಾಸಕ್ತಿ, ಜನಾಂಗೀಯಾಸಕ್ತಿಗಳ ಪಿತೂರಿಗಳು ಬಯಲಾಗುತ್ತವೆ. ಬುದ್ಧಿಜೀವಿಗಳನ್ನು ಅವಹೇಳನ ಮಾಡುವ ಮೂಲಕ ವಿಷ ಕಾರುತ್ತಾರೆಯೇ ಹೊರತು ತಾರ್ಕಿಕವಾಗಿ ವಾದಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ತಾರ್ಕಿಕವಾಗಿ ಎದುರಿಸಲಾಗದಾಗ ಸೈದ್ಧಾಂತಿಕವಾಗಿ ಸೋಲುತ್ತೇವೆಂಬ ಭಯವೇ ಅವರನ್ನು ಕ್ರೋಧಾವಿಷ್ಟರನ್ನಾಗಿ ಮಾಡುವುದು. ಹೀಗಾಗಿ ಶಿಕ್ಷಣದ ಮೂಲಕವೇ ವ್ಯಕ್ತಿಯು ತಾರ್ಕಿಕವಾಗಿ, ಬೌದ್ಧಿಕವಾಗಿ ತನ್ನ ಬಿಡುಗಡೆಯ ದಾರಿಯನ್ನು ತುಳಿಯಬೇಕಾಗಿರುವ ಅಗತ್ಯತೆಯನ್ನು ಫ್ರೇರಿ ಒತ್ತಿ ಹೇಳುತ್ತಾರೆ.

ಇದು ಆದಾಗ ಮಾಡೋಣ ಎಂಬಂತಹ ವಿಷಯವಲ್ಲ. ಅತಿ ತುರ್ತಾದ ಅಗತ್ಯವೆಂದು ಫ್ರೇರಿ ಒತ್ತಾಯಿಸುತ್ತಾರೆ. ಏಕೆಂದರೆ, ಶಿಕ್ಷಣ ವ್ಯವಸ್ಥೆಯು ತನ್ನ ಪಠ್ಯಕ್ರಮದಲ್ಲಿ, ಬೋಧನಾ ಕ್ರಮದಲ್ಲಿ ಮಾಡುವಂತಹ ಹಡಾಹುಡಿಗಳನ್ನು ಈಗ ಅದರಿಂದ ಶಿಕ್ಷಣ ಪಡೆದು ಹೋದ ವಿದ್ಯಾರ್ಥಿಗಳಲ್ಲಿ ಸರಿಪಡಿಸಲು ಸಾಧ್ಯವಾಗುವುದಿಲ್ಲ. ಅವರೆಲ್ಲಾ ಸಮಾಜದಲ್ಲಿ ವಯಸ್ಕ ಪ್ರಜೆಗಳಾಗಿ ಬಹುಬೇಗ ರೂಪುಗೊಳ್ಳುತ್ತಾರೆ.

ಹಾಗಾದರೆ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಿಸಬಹುದಾದ ತುರ್ತಿನ ಕ್ರಮಗಳೇನು ಎಂಬುದನ್ನೂ ಅವರು ಚರ್ಚಿಸುತ್ತಾರೆ. ಏಕಮುಖಿ ಶಿಕ್ಷಣವನ್ನು ರೂಢಿಸಿಕೊಂಡಿರುವ ಶಿಕ್ಷಕ ತನ್ನ ಬೋಧನಾ ಕ್ರಮದಲ್ಲಿ ಮಾಡಿಕೊಳ್ಳಬೇಕಾದ ಮಾರ್ಪಾಡುಗಳೇನು ಎಂಬುದನ್ನೂ ಕೂಡಾ ಫ್ರೇರಿ ಸೂಚಿಸುತ್ತಾರೆ.

ಮನುಷ್ಯನ ಆರ್ಥಿಕ ಸಬಲೀಕರಣಕ್ಕೆ ತಡೆಯಾಗಿರುವುದೇನು? ಅದನ್ನು ದಾಟಿ ಮಾಡಬೇಕಾಗಿರುವುದೇನು ಎಂದು ವಿವರವಾಗಿ ನೋಡಬೇಕೆಂದರೆ ದಮನಿತರಿಗಾಗಿ ಶಿಕ್ಷಣಕ್ರಮವನ್ನು ಹೇಗೆ ರೂಪಿಸಿಕೊಳ್ಳಬೇಕೆಂಬುದನ್ನು ಓದಬೇಕು. ಇದರಿಂದ ಈಗ ಹೊಸ ಶಿಕ್ಷಣನೀತಿಯನ್ನು ಹೊಂದಿರುವ ಭಾರತದ ಸದ್ಯದ ಪರಿಸ್ಥಿತಿಗೆ ಸಿಗುವುದು ನಕಾಶೆಯಲ್ಲ. ಆದರೆ ಪ್ರೇರಣೆ. ಮತ್ತೊಂದು ಆಯಾಮದಿಂದ ವಿಚಾರ ಮಾಡಲು ಪ್ರಚೋದನೆ.

----------------------------

ಯೊಗೇಶ್ ಮಾಸ್ಟರ್

ಚಿಂತಕರು, ಬಹರಗಾರರು, ಬೆಂಗಳೂರು

--------------------------------------------




ಮೆಲನಿಯಾಳ ಪ್ರತಿಮೆಯೂ, ಸ್ವಾಮಿಯ ಮಹಿಮೆಯು - ಎಫ್.ಎಂ.ಎನ್



 ಕಳೆದ ೨೦೧೯ರ ಸಾಲಿನ ಜುಲೈ ತಿಂಗಳ ಮೊದಲನೇ ವಾರದಲಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪತ್ನಿ, ಅಮೆರಿಕದ ಮೊದಲ ಮಹಿಳೆ ಮೆಲನಿಯಾ ಟ್ರಂಪ್ ಅವಳ ಹುಟ್ಡೂರು ಸ್ಲೊವೆನಿಯಾದಲಿ, ನದಿಯ ಪಕ್ಕದ ಬಂಡೆಯೊಂದರ ಮೇಲೆ ಮರದ ಕಾಂಡವೊಂದರಲ್ಲಿ ಕಡೆದ ೯ ಅಡಿ ಎತ್ತರದ ಅವಳ ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು.

 ಎರ್ರಾಬಿರ್ರಿ ಕರಗಸದಿಂದ ಕತ್ತರಿಸಿದ ಈ ಕಾಷ್ಠದ ಕೃತಿಯಲ್ಲಿ, ಅವಳ ಬಟ್ಟೆಗೆ ನೀಲಿ ಬಣ್ಣ ಬಳಿಯಲಾಗಿದೆ. ಅವಳು ಎಡಗೈಯನ್ನು ಆಶೀರ್ವದಿಸುವಂತೆ ಎತ್ತಿ ಹಿಡಿದಿದ್ದಾಳೆ. ಅಲ್ಲಿ ಸಾಸು, ವೈನು ಮತ್ತು ಕೇಕ್ ಗಳನ್ನು ಅವಳ ಹೆಸರಿನಲ್ಲಿ ಸವಿಯಲಾಗುತ್ತದೆ. ಆ ಜಾಗ ಪ್ರವಾಸಿ ತಾಣವಾಗಿದೆ. ಈ ಕಲಾಕೃತಿ ಹಲವಾರು ವಿವಾದಗಳಿಗೆ ಕಾರಣವಾದದ್ದು ಉಂಟು.

ವಿವಾದಗಳ ಕಾರಣ, ದುಷ್ಕರ್ಮಿಗಳು ಪ್ರತಿಮೆಯ ಕೊರಳಿಗೆ ಟಯರ್ ಇರಿಸಿ ಬೆಂಕಿ ಹಚಿದ್ದರು. ಆದಾದ ಮೇಲೆ ಮುಖ ಸುಟ್ಟ ಕಾಷ್ಠದ ಪ್ರತಿಮೆಯನ್ನು ತೆರವುಗೊಳಿಸಲಾಗಿದೆ. ಅದೇ ಜಾಗದಲ್ಲಿ ಈಗ ಕಂಚಿನ ಪ್ರತಿಮೆಯೊಂದನ್ನು ಪ್ರತಿಷ್ಠಾಪಿಸಲಾಗಿದೆ.

  ಮಾಟವಾಗಿಲ್ಲದ ಆ ಕಾಷ್ಠದ ಕೃತಿಯನ್ನು ಸ್ಪೇನ್ ನ ಬೋರ್ಜ ಎಂಬ ಊರಲ್ಲಿನ ಚರ್ಚಿನಲ್ಲಿದ್ದ ಮಾಸಿದ ಮುಳ್ಳಿನ ಕಿರೀಟ ತೊಟ್ಟ ಪ್ರಭು ಯೇಸುಸ್ವಾಮಿಯ ನೀರಿನ ಬಣ್ಣದ ಎದೆಮಟ್ಟದ ಅಂದಗೆಟ್ಟ ಚಿತ್ರಕ್ಕೆ ಹೋಲಿಸಲಾಗುತ್ತಿದೆ. ಆ ಅಂದಗೆಟ್ಟ ಚಿತ್ರವು ಆ ಊರಿನ ಚಹರೆಯನ್ನೇ ಬದಲಿಸಿದ್ದು ಮತ್ತೊಂದು ಆಸಕ್ತಿದಾಯಕ ಕತೆ.

   ನಿಮ್ಮ ತಪ್ಪೇ ಅದ್ಭುತ, ಅದುವೆ `ನನ್ನ ಮಹಿಮೆ: 


 ಅಪರಿಚಿತ ಹಳ್ಳಿಯೊಂದರ ಚರ್ಚಿನಲ್ಲಿದ್ದ ಮುಳ್ಳಿನ ಕಿರೀಟ ತೊಟ್ಟ ಯೇಸುಸ್ವಾಮಿಯ ಎದೆಮಟ್ಟದ ಚಿತ್ರವನ್ನು ೨೦೧೨ರಲ್ಲಿ ಸರಿಪಡಿಸಲು ಮುಂದಾದ ೮೨ರ ಹರೆಯದ ವಿಧವೆ, ಹವ್ಯಾಸಿ ಚಿತ್ರಕಲಾವಿದೆ, ಅದರ ಅಂದವನ್ನು ಕೆಡಿಸಿಬಿಟ್ಟಿದ್ದಾಳೆ.

 ಮಾಸಿದ ಚಿತ್ರವನ್ನು ಸರಿಪಡಿಸಲು ಮಾಡಿದ ಪ್ರಯತ್ನ ಪ್ರಭು ಯೇಸುಸ್ವಾಮಿಯ ಚಿತ್ರವು ಅಂದಗೆಡುವಂತೆ ಮಾಡಿತು. ವಿಧವೆಯನ್ನು, ಅವಳು ಅಂದಗೆಡಿಸಿದ ಚಿತ್ರವನ್ನು ಜನ ಅಪಹಾಸ್ಯ ಮಾಡುವಂತಾಯಿತು. ಇಂದಿನ ಟ್ವಿಟರ್ ಮತ್ತು ಫೇಸ್ಬುಕ್ ಸಾಮಾಜಿಕ ಮಾಧ್ಯಮಗಳಲ್ಲಿ ಅದು ಕುಖ್ಯಾತಿಯನ್ನು ಪಡೆಯಿತು. ವಿಡಂಬನೆಯ ಮಹಾಪೂರವೇ ಹರಿದು ಬಂದಿತು.

 ಆದರೆ, ಈ ವಿಡಂಬನೆ ಮತ್ತು ಅಪಹಾಸ್ಯ ಆ ಅಪರಿಚಿತ ಹಳ್ಳಿಗೆ ಸಾಕಷ್ಟು ಪ್ರಸಿದ್ಧಿ ತಂದುಕೊಟ್ಟಿತು. ಆ ಘಟನೆಯ ಎರಡು ವರ್ಷಗಳ ನಂತರ ಆ ಹಳ್ಳಿಯ ಚಿಕ್ಕ ಚರ್ಚಿನಲ್ಲಿನ ಆ ಅಂದಗೆಟ್ಟ ಯೇಸುಸ್ವಾಮಿಯ ಚಿತ್ರ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. 

  `ನನ್ನ ಕೆಲಸ ಮಹಿಮಾಭರಿತ ಆಗಿರುತ್ತದೆ, ನಿಮ್ಮ ದೊಡ್ಡ ತಪ್ಪೇ ನನ್ನ ಅದ್ಭುತವನ್ನು ಸಾರುವ ಸಾಧನ ಎಂದು ದೇವರು ಸಾರುತ್ತಾನೆ ಎನ್ನುವಂತೆ ಪ್ರತಿವರ್ಷವೂ ಲಕ್ಷಾಂತರ  ಪ್ರವಾಸಿಗರು ಈ ಅಂದಗೆಟ್ಟ ಚಿತ್ರವನ್ನು ಮತ್ತು ಸುತ್ತಲಿನ ರಮಣೀಯ ನಿಸರ್ಗದ ಅಂದವನ್ನು ಸವಿಯಲು ಬರುತ್ತಿದ್ದಾರೆ. ಸ್ಥಳೀಯ ವಸ್ತು ಸಂಗ್ರಾಹಲಯಕ್ಕೆ ಶುಕ್ರದೆಸೆ ಪ್ರಾಪ್ತವಾಗಿದೆ

 ಸದಾ ಮಲಗಿದ್ದಂತೆಯೇ ಇರುತ್ತಿದ್ದ ಊರಿನಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರತೊಡಗಿವೆ. ಪ್ರವಾಸೋದ್ಯಮ ಲಗ್ಗೆ ಇಟ್ಟಿದೆ. ಹೊಟೇಲುಗಳು, ಲಾಜಿಂಗುಗಳು ಆರಂಭವಾಗಿವೆ. ಸ್ಥಳೀಯ ವೈನ್ ಉತ್ಪನ್ನಗಳ ಮೇಲೆ ಅಂದಗೆಟ್ಟ ಚಿತ್ರವನ್ನು ಬಳಸಲು ಪೈಪೋಟಿ ಆರಂಭವಾಗಿದೆ!

----------------

ಎಫ್.ಎಂ.ಎನ್

----------------


`ಕೃಷ್ಣನಿಂದ ದೇವರಾದ `ಟ್ರಂಪ್ ಮಹಾಶಯ - ಫ್ರಾನ್ಸಿಸ್ ನಂದಗಾವ

 


ಧರ್ಮ ಅಫೀಮು ಇದ್ದಂತೆ ಎಂಬ ಮಾತಿದೆ. ಅದೇನೇ ಇರಲಿ, ಭಾರತೀಯರಿಗೆ ತಮ್ಮ ಕಣ್ಣೆದುರಲ್ಲಿಯೇ ಇರುವ, ತಾವು ಮೆಚ್ಚುವ ತಮ್ಮ ನಾಯಕ, ನಾಯಕಿಯರಲ್ಲಿ ದೇವರನ್ನು ಕಂಡು, ಅವರನ್ನು ದೇವರೆಂದು ಆರಾಧಿಸುವ ಪರಿಪಾಠ ಹೊಸದೇನಲ್ಲ.

  ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಮಂದಿರವೊಂದು ತೆಲಂಗಾಣದಲ್ಲಿ ಇದ್ದುದನ್ನು, ಹೈದರಾಬಾದಿನಲ್ಲಿ ವಿಸಾ ಕೊಡಿಸುತ್ತದೆ ಎಂದು ನಂಬಲಾಗುವ ದೇವಸ್ಥಾನವೊಂದು ಮತ್ತು ಖ್ಯಾತ ನಟ ಅಮಿತಾಬ್ ಬಚ್ಚನ್ ಅವರ ದೇವಾಲಯವೊಂದು ಕೋಲ್ಕತ್ತಾದಲ್ಲಿ ಇರುವುದನ್ನು ನೋಡಿದ್ದೇವೆ. 

 ಈಗ ನಮಗೆ ಇನ್ನೊಂದು ಅಚ್ಚರಿ ಕಾದಿದೆ. ಈಗ ಒಬ್ಬ ಅಂತರ್ ರಾಷ್ಟ್ರೀಯ ಖ್ಯಾತ ವ್ಯಕ್ತಿಯ ಮಂದಿರವೊಂದನ್ನು ನಮ್ಮ ದೇಶದಲ್ಲಿ ಕಟ್ಟಲಾಗಿದೆ. ಹೈದರಾಬಾದಿನಿಂದ ೧೧೦ ಕಿ ಮೀ ದೂರದಲ್ಲಿರುವ ಒಂದು ಊರಿನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಂದಿರ ಅಸ್ತಿತ್ವದಲ್ಲಿ ಬಂದಿದೆ. ತೆಲಂಗಾಣದ ಜನಗಾವ ಜಿಲ್ಲೆಯ ಬಚ್ಚನ್‌ಪೇಟ್ ಹೋಬಳಿಯ ಕೊಣ್ಣೆ ಗ್ರಾಮದಲ್ಲಿ ಈ ಮಂದಿರವನ್ನು ಕಟ್ಟಲಾಗಿದೆ.

 ಟ್ರಂಪ್ ಅವರ ಭಕ್ತನಾಗಿರುವ ಬುಸ್ಸಾ ಕೃಷ್ಣ ಎಂಬುವವರು ಈ ಡೊನಾಲ್ಡ್ ಟ್ರಂಪ್ ಅವರ ಮಂದಿರವನ್ನು ನಿರ್ಮಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಇದರ ನಿರ್ಮಾಣವಾಗಿದೆ.

 ಕಳೆದ ೨೦೧೯ರ ಸಾಲಿನ ಫೆಬ್ರುವರಿ ತಿಂಗಳ ೨೪ ರಂದು ಟ್ರಂಪ್ ಅವರ ಭಾರತದ ಭೇಟಿಯ ಸಂದರ್ಭದಲ್ಲಿ ತಮ್ಮ ಜೀವಂತ ದೇವರನ್ನು ಕಾಣುವ ಕನಸು ಕಂಡಿದ್ದರು. ಅಹiದಾಬಾದಿಗೆ ಹೋಗಿ ಟ್ರಂಪ್ ಅವರನ್ನು ಕಾಣುವುದಕ್ಕಾಗಿ ೮೦ ಸಾವಿರ ಖರ್ಚು ಮಾಡಿದ್ದರು.

  ಕನಸಿನಲ್ಲಿ ದರ್ಶನಕೊಟ್ಟ ಟ್ರಂಪ್ : 

 ಕೃಷ್ಣ ಅವರು ಡೊನಾಲ್ಡ್ ಟ್ರಂಪ್ ಅವರ ಭಕ್ತರಾಗುವುದಕ್ಕೆ ಒಂದು ಕಾರಣವೂ ಇದೆ. ಒಂದು ಬಾರಿ ನಸುಕಿನಲ್ಲಿ ಅವರಿಗೆ ಡೊನಾಲ್ಡ್ ಟ್ರಂಪ್ ಅವರು ಕಾಣಿಸಿಕೊಂಡು ದರ್ಶನ ಕೊಟ್ಟರಂತೆ. ನಸುಕಿನಲ್ಲಿ ಕಂಡ ಕನಸಿಗೆ ವಿಶೇಷ ಮನ್ನಣೆ ಇದೆ ಮತ್ತು ನಸುಕಿನಲ್ಲಿ ಕಂಡ ಕನಸು ನಿಜವಾಗುವುದು ಎಂಬುದು ನಾವು ಭಾರತೀಯರು ನಂಬಿಕೊಂಡು ಬಂದಿರುವ ಸಂಪ್ರದಾಯ. ಅದಕ್ಕೆ ಹೊರತಾಗದ ಕೃಷ್ಣ ಅವರು, ಡೊನಾಲ್ಡ್ ಡ್ರಂಪ್ ಅವರು ಕನಸಿನಲ್ಲಿ ಕಂಡ      ದಿನದಿಂದ, ಅವರ ಭಕ್ತರಾಗಿಬಿಟ್ಟರು!

 ಕನಸಿನಲ್ಲಿ ದೇವರಂತೆ ದರ್ಶನ ಕೊಟ್ಟ ಡೊನಾಲ್ಡ್ ಟ್ರಂಪ್ ದೇವರಿಗೆ ಒಂದು ಮಂದಿರ ಕಟ್ಟುವ ನಿರ್ಧಾರ ಕೈಗೊಂಡ ಕೃಷ್ಣ ಸುಮಾರು ಎರಡು ಲಕ್ಷ ರೂಪಾಯಿ ಖರ್ಚುಮಾಡಿ, ಡೊನಾಲ್ಡ್ ಟ್ರಂಪ್ ಅವರ ವಿಗ್ರಹವನ್ನು ಮಾಡಿಸಿ ಅದಕ್ಕೊಂದು ದೇವಸ್ಥಾನವನ್ನೂ ಕಟ್ಟಿಸಿಬಿಟ್ಟಿದ್ದರು. ಮನೆಯ ಪಕ್ಕದ ಜಾಗದಲ್ಲಿ ಕಟ್ಟೆ ಕಟ್ಟಿ ಅದರ ಮೇಲೆ ಟ್ರಂಪ್ ಅವರ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದರು. ಹಿಂದೆ ಎರಡು ಕಬ್ಬಿಣದ ಕಂಬಗಳ ನೆಟ್ಟು, ಅವು ಮುಂದೆ ಚಾಚಿದ ಕಂಬಿಗಳ ಮೇಲೆ ತಗಡನ್ನು ಕೂಡಿಸಿ, ವಿಗ್ರಹಕ್ಕೆ ನೆರಳು ಕಲ್ಪಿಸಿದ್ದರು.

 ಆ ದೇವಸ್ಥಾನದಲ್ಲಿ ಇರುವ ಡೊನಾಲ್ಡ್ ಟ್ರಂಪ್ ಅವರ ೬ ಅಡಿ ಎತ್ತರದ ವಿಗ್ರಹಕ್ಕೆ ಪ್ರತಿದಿನವೂ ಪೂಜೆ ಸಲ್ಲಿಸುತ್ತಾ ಬಂದಿದ್ದರು. ಆ ವಿಗ್ರಹಕ್ಕೆ ದಿನವೂ ಅಭಿಷೇಕಿಸುತ್ತಿದ್ದರು. ಒಟ್ಡು ಹದಿನೈದು ಜನ    ಶಿಲ್ಪಿಗಳು ಒಂದು ತಿಂಗಳು ಶ್ರಮಿಸಿ ಈ ವಿಗ್ರಹವನ್ನು ನಿರ್ಮಿಸಿಕೊಟ್ಟಿದ್ದಾರೆ. ಈ ವಿಗ್ರಹದಲ್ಲಿ ಟ್ರಂಪ್ ಅವರು ನೀಲಿ ಬಣ್ಣದ ಸೂಟು ತೊಟ್ಟಿದ್ದಾರೆ. ಕೊರಳಲ್ಲಿ ಕೆಂಪು ಬಣ್ಣದ ಕೊರಳಪಟ್ಟಿ (ಟೈ) ಇದೆ. ವಿಗ್ರಹದ ಬಲ ಗೈ ಉದ್ದಕ್ಕೆ ಚಾಚಿ ಗೆಲುವಿನ ಸೂಚಕವಾಗಿ ಮುಷ್ಟಿಕಟ್ಟಿ ಹೆಬ್ಬೆರಳನ್ನು ಎತ್ತಿ ತೋರಿಸಲಾಗಿದೆ. ಟ್ರಂಪ್ ಅವರ್ ಮೈ ಬಣ್ಣ ಗುಲಾಬಿ ಬಣ್ಣದಲ್ಲಿದೆ. ಹಣೆಗೆ ಉದ್ದಕ್ಕೆ ಸಿಂಧೂರ ಬಳೆಯಲಾಗುತ್ತದೆ.

  ಓದು ಬರಹ ತಲೆಗೆ ಹತ್ತದೇ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಕೃಷ್ಣ, ಸಣ್ಣಪುಟ್ಟ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು ಅವರು ಸಾಕಷ್ಟು ಪ್ರಪಂಚ ಜ್ಞಾನ ಪಡೆದಿದ್ದರು. ಟ್ರಂಪ್ ಮಂದಿರಕ್ಕಾಗಿ ಇದುವರೆಗೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು. 

  ಕೃಷ್ಣ ಅವರ ಪಾಲಿನ ಕಾಲಜ್ಞಾನಿ ಟ್ರಂಪ್ :

  ಕೃಷ್ಣ ಅವರ ಪಾಲಿಗೆ ಡೊನಾಲ್ಡ ಟ್ರಂಪ್ ಅವರು ದೇವರ ಅಪರಾವತಾರವಲ್ಲ, ಬೇಡಿಕೊಂಡದ್ದನ್ನು ಕರುಣಿಸುವ ಸಾಕ್ಷಾತ್ ದೇವರು. ಹೀಗಾಗಿಯೇ ಆತ ತಾನು ನಂಬಿದ ದೇವರ ಹೆಸರಿನಲ್ಲಿ ಮಂದಿರ ಕಟ್ಟಿಸಿದ್ದರು.

 ಕನಸಿನಲ್ಲಿ ಕಾಣಿಸಿಕೊಳ್ಳುವ ಡೊನಾಲ್ಡ್ ಟ್ರಂಪ್ ದೇವರು, ಕೃಷ್ಣನ ಪಾಲಿಗೆ ಕಾಲಜ್ಞಾನಿಯೂ ಆಗಿದ್ದನು. ಕನಸಿನಲ್ಲಿ ಕಾಣಿಸಿಕೊಂಡ ಡೊನಾಲ್ಡ್ ಟ್ರಂಪ್ ದೇವರು, ೨೦೧೯ರ ಸಾಲಿನ ಭಾರತ ಪಾಕಿಸ್ತಾನ್ ಗಳ ನಡುವೆ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತದ ತಂಡ ಜಯಗಳಿಸುತ್ತದೆ ಕೃಷ್ಣನಿಗೆ ತಿಳಿಸಿದ್ದರಂತೆ. ಅದರಂತೆಯೇ, ಭಾರತೀಯ ತಂಡ ಕ್ರಿಕೆಟ್ ಪಂದ್ಯದಲ್ಲಿ ಜಯಗಳಿಸಿದಾಗ, ಕೃಷ್ಣನಿಗೆ ಟ್ರಂಪ್ ದೇವರಲ್ಲಿ ಮತ್ತಷ್ಟು ವಿಶ್ವಾಸ ಮೂಡಿತಂತೆ.

  ಇದು ನನ್ನ ವಿಶ್ವಾಸ, ನಾನು ಪೂಜಿಸುವೆ :

 ಮೊದಮೊದಲು ಟ್ರಂಪ್ ಮಹಾಶಯರ ಗುಡಿ ಕಟ್ಟಿದಾಗ ಊರವರು ಕಟುವಾದ ಟೀಕೆಗಳನ್ನು ಮಾಡಿದರಂತೆ. ಮನೆಯವರು, ಊರಲ್ಲಿ ತಲೆ ಎತ್ತಲಾಗದಂತೆ ಮಾಡಿದೆ, ಸಮಾಜಕ್ಕೆ ಕಳಂಕ ಎಂದು ಹಿಯಾಳಿಸಿದರಂತೆ. ಕೆಲವರು ಅವನು ಮಾಡುವುದನ್ನು ಕಂಡು ಮೋಜು ಮಾಡಿದರಂತೆ. ಮತ್ತೆ ಕೆಲವರು ಅವನ ನಡೆಯನ್ನು ಲಘುವಾಗಿ ಕಂಡರಂತೆ. 

  ತನ್ನನ್ನು ನಿಂದಿಸುತ್ತಿದ್ದವರಿಗೆ `ನೀವು ರಾಮ, ಕೃಷ್ಣ, ಶಿವ ಮುಂತಾದ ದೇವರನ್ನು ಪೂಜಿಸುವ ಹಾಗೆಯೇ ನಾನು ಟ್ರಂಪ್ ನನ್ನು ಪೂಜಿಸುತ್ತಿರುವೆ. ಇದು ನನ್ನ ನಂಬಿಕೆ, ನಾನು ಪೂಜಿಸುವೆ ಎಂದು ವಾದಿಸುತ್ತಿದ್ದ ಕೃಷ್ಣ  ಅವರು ತಮ್ಮ ಮನೆಯ ಗೋಡೆಗಳ ಮೇಲೆ ಎಲ್ಲಾ ಕಡೆಗಳಲ್ಲೂ ಟ್ರಂಪ್ ಹೆಸರನ್ನು ಬರೆಯಿಸಿದ್ದರು.

  ನಿಧಾನವಾಗಿ ಊರವರು ಮನಸ್ಸು ಬದಲಿಸಿ ಅವರೊಂದಿಗೆ ಸಹಕರಿಸಲು ಆರಂಭಿಸಿದ್ದರಂತೆ. ಜಗತ್ತಿನಲ್ಲಿ ಟ್ರಂಪ್ ಹೆಸರಿನಲ್ಲಿ ಇರುವ ಒಂದೇ ಒಂದು ದೇವಸ್ಥಾನ ಎಂಬುದು ಊರವರಿಗೆ ಮನದಟ್ಟಾಗಿದೆ. ಆಗ, ಹೆಮ್ಮೆ ಅವರಲ್ಲಿ ಮೂಡಿತಂತೆ.

 ಪ್ರತಿದಿನವೂ ಡೊನಾಲ್ಡ್ ಟ್ರಂಪ್ ವಿಗ್ರಹದ ಮುಖಕ್ಕೆ ಅರಿಷಣ ಬಳಿದು, ಹಣೆಗೆ ತಿಲಕವಿಟ್ಟು ಆರತಿ ಮಾಡುವ ಪೂಜಾಕ್ರಮವನ್ನು ಕೃಷ್ಣನ ಕುಟುಂಬದ ಸದಸ್ಯರು ಆರಂಭಿಸಿದ್ದಾರೆ. ಕೃಷ್ಣ ತನ್ನ ದೇವರಾದ ಡೊನಾಲ್ಡ್ ಟ್ರಂಪ್ ಅವರ ಚಿತ್ರವನ್ನು ಸದಾ ತನ್ನ ಬಳಿಯಲ್ಲಿ ಇರಿಸಿಕೊಂಡಿರುತ್ತಿದ್ದರು. ಕೃಷ್ಣ ಹೊರಗಡೆ ಹೋದಾಗ, ತೊಡುವ ಟಿ ಷರ್ಟ ಮೇಲೆ ಟ್ರಂಪ್ ಮಹಾಶಯನ ಚಿತ್ರವು ಇದ್ದೇ ಇರುತ್ತಿತ್ತು.

  ಪ್ರತಿವರ್ಷ ಜೂನ್ ೧೪ ಟ್ರಂಪ್ ಮಹಾಶಯನ ಜನ್ಮ ದಿನದಂದು ವಿಶೇಷ ಪೂಜೆ ಮಾಡುತ್ತಿದ್ದ ಅವರು, ಅಂದು ಊರವರಿಗೆ ಅನ್ನಸಂತರ್ಪಣೆ ಮಾಡುತ್ತಿದ್ದರು. ಜೊತೆಗೆ ಹಣ್ಣುಹಂಪಲುಗಳನ್ನು, ಸಿಹಿ ಮಿಠಾಯಿಯನ್ನು ಹಂಚುತ್ತಿದ್ದರು.

  ಅಂತರ್ ರಾಷ್ಟ್ರೀಯ ಸುದ್ದಿಯಾದ `ಟ್ರಂಪ್ ಕೃಷ್ಣನ ಸಾವು :

  ಪ್ರತಿದಿನವೂ ಟ್ರಂಪ್ ಮಹಾಶಯನನ್ನು ಪೂಜೆ ಮಾಡುತ್ತಿದ್ದ. ಈ ಕೃಷ್ಣ ಅವರನ್ನು ಊರ ಜನರು `ಟ್ರಂಪ್ ಕೃಷ್ಣ ಎಂದೇ ಗುರುತಿಸುತ್ತಿದ್ದರು.

  ಡೊನಾಲ್ಡ್ ಟ್ರಂಪ್ ಅವರು, ಕೋವಿಡ್ ೧೯ ಕಾಯಿಲೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ, ಟ್ರಂಪ್ ನನ್ನು ದೇವರೆಂದು ಬಗೆದು ಆರಾಧಿಸುತ್ತಿದ್ದ ಕೃಷ್ಣ ಅವರಿಗೆ ಬರಸಿಡಿಲು ಬಡಿದಂತಾಗಿತ್ತು. ತುಂಬಾ ಬೇಸರ ಮಾಡಿಕೊಂಡ ಕೃಷ, ನೊಂದುಕೊಂಡು ಊಟ ತಿಂಡಿ ಬಿಟ್ಟುಬಿಟ್ಟರು. ಚಿಂತೆಯಿಂದ ನಿದ್ರೆ ಮಾಡುತ್ತಿರಲಿಲ್ಲ. ಹಗಲು ರಾತ್ರಿ ಅದೇ ಚಿಂತೆಯಲ್ಲಿ ಮುಳುಗಿರುತ್ತಿದ್ದರು. ಮಾನಸಿಕವಾಗಿ ಕುಸಿದುಹೋಗಿದ್ದರು.

  ಹೆರಿಗೆಯ ಸಂದರ್ಭದಲ್ಲಿ ಹೆಂಡತಿ ತೀರಿಕೊಂಡಿದ್ದಳು. ಈಚೆಗೆ ಅವರು ಮೇಡಕ ಜಿಲ್ಲೆಯ ತೂಪ್ರನ್ ಎಂಬ ಹಳ್ಳಿಗೆ ಹೋಗಿದ್ದರು. ಅಲ್ಲಿ ಅವರ ತಾಯಿಯ ಕಡೆಯ ಸಂಬಂಧಿ ಅಜ್ಜಿಯ ಮನೆಯಲ್ಲಿ ತಂಗಿದ್ದರು.                                                                  ನಿತ್ರಾಣಗೊಂಡಿದ್ದ ಅವರು, ಅಕ್ಟೋಬರ್ ೧೧ರಂದು ಮನೆಯಲ್ಲಿಯೇ ಕುಸಿದುಬಿದ್ದು ತೀರಿಕೊಂಡರೆಂದು ಅವನ ಕುಟುಂಬದವರು ಹೇಳುತ್ತಾರೆ.

 ಟ್ರಂಪ್ ಭಕ್ತ ಕೃಷ್ಣ ತಮ್ಮ ೩೮ ನೇ ವಯಸ್ಸಿನಲ್ಲಿ ಅಕ್ಟೋಬರ್ ೧೧ ತೀರಿಕೊಂಡರೆ, ಅದು ಅಕ್ಟೋಬರ್ ೧೪ರಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲೂ ಸುದ್ದಿಯಾಯಿತು. ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದ ಅವರ ಸಾವು ದೊಡ್ಡ ಸುದ್ದಿಯಾಗುವ ಯಾವ ಸಾಧ್ಯತೆಗಳೇ ಇರಲಿಲ್ಲ. ಅವರು ಡೊನಾಲ್ಡ್ ಟ್ರಂಪ್ ಹೆಸರಿನಲ್ಲಿ ಗುಡಿ ಕಟ್ಟಿಸಿ, ಡೊನಾಲ್ಡ್ ಟ್ರಂಪ್ ಅವರನ್ನು ದೇವರೆಂದು ಆರಾಧಿಸುತ್ತಿದ್ದರು ಎಂಬ ಏಕೈಕ ಕಾರಣದಿಂದ ಅವರ ಸಾವು ಸುದ್ದಿಯಾಯಿತು, ಅದೂ ವಿಶ್ವ ಮಾನ್ಯತೆ ಪಡೆದಿರುವ ಪತ್ರಿಕೆಗಳಲ್ಲಿ.

 ಪ್ರಸಕ್ತ ೨೦೨೦ರ ಸಾಲಿನ ಅಮೆರಿಕದ ಆದ್ಯಕ್ಷೀಯ ಚುನಾವಣೆಯಲ್ಲಿ `ಡೊನಾಲ್ಡ್ ಟ್ರಂಪ್ ಗೆದ್ದು ಚೀನಾವನ್ನು ಹೆಡಮುರಿ ಕಟ್ಟಬೇಕು ಎಂಬುವುದು ಅವರ ಹೆಬ್ಬಯಕೆ ಆಗಿತ್ತು. ಡೊನಾಲ್ಡ್ ಟ್ರಂಪ್ ಅವರನ್ನು, ಅವರು ಇರುವ ವೈಟ್ ಹೌಸ್ ನಲ್ಲಿ ಕಾಣಬೇಕೆಂಬ ಅವರ ಬಯಕೆ ಈಡೇರಲೇ ಇಲ್ಲ.

  ವಿಶ್ವದ ಇತರೆಡೆಯ ಟ್ರಂಪ್ ವಿಗ್ರಹಗಳು: 

 ಕಳೆದ ೨೦೧೬ರಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಸ್ಕಾಟ್ ಲಬೈಡೊ ಎಂಬ ಕಲಾವಿದ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸಿ ಸ್ಟಟೆನ್ ನಡುಗಡ್ಡೆಯಲ್ಲಿ ಭಾರಿ ಗಾತ್ರದ ಇಂಗ್ಲಿಷ್ ಟಿ ಅಕ್ಷರವನ್ನು ರಚಿಸಿದ್ದ. 

 ಅದೇ ಬಗೆಯಲ್ಲಿ ಸ್ಲೊವಿನಿಯದ ಹಳ್ಳಿಯಲ್ಲಿ ಅಮೆರಿಕದ ಲಿಬರ್ಟಿ ವಿಗ್ರಹದ ಮಾದರಿಯಲ್ಲಿ ವಿಚಿತ್ರ ಬಗೆಯಲ್ಲಿ ಕಟ್ಟಿಗೆ, ಹಲಗೆಗಳಿಂದ ಟ್ರಂಪ್ ಪ್ರತಿಕೃತಿಯನ್ನು ರಚಿಸಲಾಗಿತ್ತು. 

 ವಿವಾದಿತ ನಾಯಕ ಡೊನಾಲ್ಡ್ ಟ್ರಂಪ್ ಅವರ ಈ ವಿಗ್ರಹಗಳ ಕುರಿತು ಆಕ್ಷೇಪಗಳು ಬಂದ ಕಾರಣ, ನಂತರ ಮುಂದೊಂದು ದಿನ ಅವರೆಡೂ ಕಲಾಕೃತಿಗಳನ್ನು ಬೆಂಕಿ ಹಚ್ಚಿ ನಾಶಪಡಿಸಲಾಯಿತು. ಆದರೆ, ಕಲಾವಿದ ಲಬೈಡೋ, ಲಿಬರ್ಟಿ ವಿಗ್ರಹದ ಮಾದರಿಯ ವಿನೂತನ ಬಗೆಯ ಟ್ರಂಪ್ ಪ್ರತಿಕೃತಿಯ ಕಾಷ್ಠಕೃತಿಯನ್ನು ಮತ್ತೆ ದೊಡ್ಡ ಪ್ರಮಾಣದಲ್ಲಿ ಕಡೆದು ನಿಲ್ಲಿಸಿದ್ದಾನೆ.

-----------------------------------

ಫ್ರಾನ್ಸಿಸ್ ನಂದಗಾವ

ಹಿರಿಯ ಪತ್ರಕರ್ತ, ಸಾಹಿತಿ, ಬೆಂಗಳೂರು

------------------------------------



ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...